ಗುರುವಾರ, ಆಗಸ್ಟ್ 22, 2019

ಅಂಡ್ರಾಯ್ಡ್ ಹೊಸ ಆವೃತ್ತಿಯ ಹೆಸರಲ್ಲಿ ಸಿಹಿತಿಂಡಿಯ ರುಚಿಯಿಲ್ಲ!

ಇಜ್ಞಾನ ವಿಶೇಷ


ಸ್ಮಾರ್ಟ್‍ಫೋನುಗಳಲ್ಲಿ ಬಳಕೆಯಾಗುವ ಕಾರ್ಯಾಚರಣ ವ್ಯವಸ್ಥೆಗಳ (ಆಪರೇಟಿಂಗ್ ಸಿಸ್ಟಂ, ಓಎಸ್‍) ಪೈಕಿ ಬಹಳ ಜನಪ್ರಿಯವಾಗಿರುವುದು, ನಮಗೆ ಚೆನ್ನಾಗಿ ಪರಿಚಯವಿರುವುದು ಆಂಡ್ರಾಯ್ಡ್. ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಸಂಸ್ಥೆ ಗೂಗಲ್‍ನ ಉತ್ಪನ್ನ ಆಂಡ್ರಾಯ್ಡ್‌ನ ಹೊಸ ಆವೃತ್ತಿಯನ್ನು ಇದೀಗ ಅಧಿಕೃತವಾಗಿ ಘೋಷಿಸಲಾಗಿದೆ.

ಆಂಡ್ರಾಯ್ಡ್‌ನ ಹೊಸ ಆವೃತ್ತಿ ಬಿಡುಗಡೆಯಾಗುವುದು ಅಪರೂಪದ ಸಂಗತಿಯೇನಲ್ಲ. ಈ ಕಾರ್ಯಾಚರಣ ವ್ಯವಸ್ಥೆಯ ಹೊಸ ಆವೃತ್ತಿಗಳನ್ನು ನಿಯಮಿತವಾಗಿ ಹೊರತರುವ ಗೂಗಲ್ ಆ ಆವೃತ್ತಿಗಳನ್ನು ಸಿಹಿತಿಂಡಿಗಳ ಹೆಸರಿನಿಂದ ಗುರುತಿಸುತ್ತದೆ, ಮತ್ತು ಈ ಹೆಸರಿನ ಸರಣಿ ಇಂಗ್ಲಿಷಿನ ಅಕಾರಾದಿ ಕ್ರಮವನ್ನು ಅನುಸರಿಸುವಂತೆ ನೋಡಿಕೊಳ್ಳುತ್ತದೆ. ಹೀಗಾಗಿಯೇ ಪ್ರತಿಬಾರಿಯೂ ಹೊಸ ಆವೃತ್ತಿಯ ಹೆಸರು ಏನಿರಬಹುದು ಎನ್ನುವ ಅಂಶ ಸಾಕಷ್ಟು ಕುತೂಹಲಕ್ಕೆ ಕಾರಣವಾಗುತ್ತದೆ.

ಈ ಬಾರಿಯ ಕುತೂಹಲ ಈಗಷ್ಟೇ ಅಂತ್ಯವಾಗಿದ್ದು ಸದ್ಯ ಹೊರಬರಲಿರುವ ಆಂಡ್ರಾಯ್ಡ್‌ನ ಹತ್ತನೇ ಆವೃತ್ತಿಗೆ ಸಿಹಿತಿಂಡಿಯ ಹೆಸರು ಇರುವುದಿಲ್ಲ ಎಂದು ಗೂಗಲ್ ಸ್ಪಷ್ಟಪಡಿಸಿದೆ. ಅಕ್ಷರಗಳ ಸರಣಿಯಲ್ಲಿ 'ಕ್ಯೂ' ಅಕ್ಷರವನ್ನು ಬಳಸಬೇಕಿದ್ದ ಈ ಆವೃತ್ತಿಯನ್ನು 'ಆಂಡ್ರಾಯ್ಡ್ ೧೦' ಎಂದಷ್ಟೇ ಕರೆಯಲು ಅದು ತೀರ್ಮಾನಿಸಿದೆ.


ಆಂಡ್ರಾಯ್ಡ್‌ನ ಮೂರನೇ ಆವೃತ್ತಿಯಿಂದ (ಹಾಗಾಗಿ 'ಸಿ' ಅಕ್ಷರದಿಂದ) ಶುರುವಾಗಿದ್ದ ಸಿಹಿತಿಂಡಿಗಳ ಹೆಸರ ಸರಣಿ ಕಪ್‌ಕೇಕ್, ಡೋನಟ್, ಎಕ್ಲೇರ್, ಫ್ರೋಯೋ ('ಫ್ರೋಜನ್ ಯೋಗರ್ಟ್' ಎನ್ನುವುದರ ಹ್ರಸ್ವರೂಪ), ಜಿಂಜರ್‌ಬ್ರೆಡ್, ಹನಿಕೂಂಬ್, ಐಸ್‌ಕ್ರೀಮ್ ಸ್ಯಾಂಡ್‌ವಿಚ್, ಜೆಲ್ಲಿಬೀನ್, ಕಿಟ್‌ಕ್ಯಾಟ್, ಲಾಲಿಪಾಪ್, ಮಾರ್ಶ್‌ಮ್ಯಾಲೋ, ನೌಗಾಟ್‌, ಓರಿಯೋ ಹಾಗೂ ಪೈ ನಂತರ ಇದೀಗ 'ಕ್ಯೂ' ಅಕ್ಷರಕ್ಕೆ ತಲುಪಿತ್ತು. ಈ ಅಕ್ಷರದಿಂದ ಶುರುವಾಗುವ ಹೆಚ್ಚು ಪದಗಳೇ ನಮಗೆ ಗೊತ್ತಿರುವುದಿಲ್ಲ, ಹೀಗಾಗಿ ಗೂಗಲ್ ಯಾವ ಸಿಹಿತಿಂಡಿಯ ಹೆಸರನ್ನು ಹುಡುಕಿತರಬಹುದು ಎನ್ನುವ ಪ್ರಶ್ನೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಸದ್ಯ ಯಾವುದೇ ಸಿಹಿತಿಂಡಿಯ ಹೆಸರು ಇರುವುದಿಲ್ಲವೆನ್ನುವ ಘೋಷಣೆಯ ಜೊತೆಗೆ ಈ ಕುತೂಹಲ ಅಂತ್ಯವಾದಂತಾಗಿದೆ.

ಆಂಡ್ರಾಯ್ಡ್ ಕಾರ್ಯಾಚರಣ ವ್ಯವಸ್ಥೆ ವಿಶ್ವದೆಲ್ಲೆಡೆ ಬಳಕೆಯಾಗುವುದರಿಂದ ಅದರ ಆವೃತ್ತಿಗಳ ಹೆಸರು ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತಿರಬೇಕು. ಹಾಗಾಗಿ ನಾಮಕರಣದ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ ಎಂದು ಗೂಗಲ್ ಪ್ರಕಟಣೆ ತಿಳಿಸಿದೆ. ಈ ಆವೃತ್ತಿಯೊಡನೆ ಆಂಡ್ರಾಯ್ಡ್‌ ಚಿಹ್ನೆಯನ್ನೂ (ಲೋಗೋ) ಬದಲಿಸಲಾಗಿರುವುದು ವಿಶೇಷ.

[ಚಿತ್ರ: twitter.com/Android ಸೌಜನ್ಯ]

ಕಾಮೆಂಟ್‌ಗಳಿಲ್ಲ:

badge