ಸೋಮವಾರ, ಆಗಸ್ಟ್ 12, 2019

ಸೆಪ್ಟೆಂಬರ್ 5ಕ್ಕೆ ಜಿಯೋಫೈಬರ್ ಶುರು!

ಇಜ್ಞಾನ ವಾರ್ತೆ


ಬರುವ ಸೆಪ್ಟೆಂಬರ್ 5ರಂದು ರಿಲಯನ್ಸ್ ಜಿಯೋ ತನ್ನ ಕಾರ್ಯಾಚರಣೆಯ ಮೂರು ವರ್ಷಗಳನ್ನು ಪೂರೈಸಲಿದ್ದು ಅದೇ ಸಂದರ್ಭದಲ್ಲಿ ಬಹುನಿರೀಕ್ಷಿತ ಜಿಯೋಫೈಬರ್ ಸೇವೆಯನ್ನು ವಾಣಿಜ್ಯ ಆಧಾರದ ಮೇಲೆ ಪ್ರಾರಂಭಿಸಲಾಗುವುದು ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಇಂದು ಮುಂಬಯಿಯಲ್ಲಿ ನಡೆದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌‌ನ 42ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಈ ಘೋಷಣೆ ಮಾಡಿದರು.

1 Gbpsವರೆಗಿನ ವೇಗದ ಈ ಸಂಪರ್ಕಗಳನ್ನು 1600 ಊರುಗಳ 20 ಮಿಲಿಯನ್ ಮನೆ ಹಾಗೂ 15 ಮಿಲಿಯನ್ ಸಂಸ್ಥೆಗಳಿಗೆ ಒದಗಿಸಲು ಜಿಯೋ ಉದ್ದೇಶಿಸಿದೆ. 100 Mbpsನಿಂದ 1 Gbpsವರೆಗಿನ ವೇಗದ ಸಂಪರ್ಕಗಳಿಗೆ ಮಾಸಿಕ ರೂ.700ರಿಂದ ರೂ. 10,000ದವರೆಗಿನ ಶುಲ್ಕವಿರುವ ವಿವಿಧ ಪ್ಲಾನ್‌ಗಳನ್ನು ಪರಿಚಯಿಸಲಾಗುವುದು. ಹಲವು ಪ್ರೀಮಿಯಂ ಓಟಿಟಿ ಅಪ್ಲಿಕೇಶನ್‌ಗಳ ಚಂದಾದಾರತ್ವವನ್ನು ಪ್ಲಾನ್‌ಗಳ ಜೊತೆಯಲ್ಲೇ ಸೇರಿಸಲಾಗುವುದು, ಹಾಗೂ ಹೊಸ ಚಲನಚಿತ್ರಗಳನ್ನು ಮನೆಯಲ್ಲೇ ವೀಕ್ಷಿಸುವ 'ಜಿಯೋ ಫಸ್ಟ್ ಡೇ ಫಸ್ಟ್ ಶೋ' ಸೌಲಭ್ಯವನ್ನೂ ನೀಡಲಾಗುವುದು.

ಪ್ರತಿ ಜಿಯೋಫೈಬರ್ ಸಂಪರ್ಕದ ಜೊತೆಯಲ್ಲೂ ಡಿಜಿಟಲ್ ಸೆಟ್-ಟಾಪ್-ಬಾಕ್ಸ್ ಹಾಗೂ ಲ್ಯಾಂಡ್‌ಲೈನ್ ಫೋನ್ ಸಂಪರ್ಕವನ್ನು ಒದಗಿಸಲಾಗುವುದು. ಲ್ಯಾಂಡ್‌ಲೈನ್ ಫೋನ್ ಸಂಪರ್ಕ ಹಾಗೂ ಅದರಲ್ಲಿ ಮಾಡುವ ಸ್ಥಳೀಯ ಹಾಗೂ ದೇಶೀಯ ಕರೆಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಅಂತಾರಾಷ್ಟ್ರೀಯ ಕರೆಗಳ ಶುಲ್ಕದಲ್ಲೂ ಭಾರೀ ಕಡಿತವನ್ನು ಘೋಷಿಸಲಾಗಿದೆ.

ಜಿಯೋಫೈಬರ್ ಬಳಕೆದಾರರಿಗೆಂದು ಹೆಚ್ಚುವರಿ ಸೌಲಭ್ಯಗಳುಳ್ಳ 'ಜಿಯೋ ಪೋಸ್ಟ್‌ಪೇಡ್ ಪ್ಲಸ್' ಎಂಬ ಮೊಬೈಲ್ ಸೇವೆಯನ್ನೂ ಪರಿಚಯಿಸಲಾಗುತ್ತಿದ್ದು, ಎಲ್ಲ ಟ್ಯಾರಿಫ್‌‌ನ ವಿವರಗಳೂ Jio.com ಹಾಗೂ ಮೈಜಿಯೋ ಆಪ್‌ನಲ್ಲಿ ಸೆಪ್ಟೆಂಬರ್ ೫ರಿಂದ ದೊರಕಲಿವೆ. ಜಿಯೋಫೈಬರ್ ವೆಲ್‌ಕಮ್ ಆಫರ್ ಮೂಲಕ ಜಿಯೋ-ಫಾರೆವರ್ ವಾರ್ಷಿಕ ಪ್ಲಾನ್‌ಗಳ ಗ್ರಾಹಕರಿಗೆ ಎಚ್‌ಡಿ ಅಥವಾ 4K ಎಲ್‌ಇಡಿ ಟೀವಿ ಹಾಗೂ 4K ಸೆಟ್‌ ಟಾಪ್ ಬಾಕ್ಸ್ ಅನ್ನು ಉಚಿತವಾಗಿ ನೀಡುವುದಾಗಿಯೂ ಮುಖೇಶ್ ಅಂಬಾನಿ ತಿಳಿಸಿದ್ದಾರೆ. 

ಜಿಯೋಫೈಬರ್ ಸೆಟ್‌ಟಾಪ್ ಬಾಕ್ಸ್ ಮೂಲಕವೇ ಟೀವಿ ಸಂಪರ್ಕವನ್ನೂ ಪಡೆಯಬಹುದಾಗಿದ್ದು, ರಿಲಯನ್ಸ್ ಸಮೂಹದ ಭಾಗವಾಗಿರುವ ಹ್ಯಾಥ್‌ವೇ, ಡೆನ್ ಹಾಗೂ ಜಿಟಿಪಿಎಲ್ ಸಂಪರ್ಕದಲ್ಲಿರುವ ಸ್ಥಳೀಯ ಕೇಬಲ್ ಆಪರೇಟರುಗಳು ಈ ಸೇವೆ ಒದಗಿಸಲಿದ್ದಾರೆ.

ಮೊಬೈಲ್ ಬ್ರಾಡ್‌ಬ್ಯಾಂಡ್ ಸೇವೆಯಲ್ಲಿ ಅಗ್ರಗಣ್ಯವಾಗಿರುವ ಜಿಯೋ ಭಾರತದ ಅತಿದೊಡ್ಡ ಮೊಬೈಲ್ ಸೇವಾಸಂಸ್ಥೆಯಾಗಿರುವುದಷ್ಟೇ ಅಲ್ಲದೆ, ಒಂದು ದೇಶಕ್ಕೆ ಸೀಮಿತವಾದ ಅತಿದೊಡ್ಡ ಮೊಬೈಲ್ ಸಂಸ್ಥೆಗಳ ಪೈಕಿ ವಿಶ್ವದಲ್ಲೇ ಎರಡನೇ ಸ್ಥಾನ ಪಡೆದುಕೊಂಡಿದೆ. ತಂತ್ರಜ್ಞಾನದ ಜೊತೆಯಲ್ಲೇ ಬೆಳೆದಿರುವ ಜಿಯೋ ಜಾಲ ಈಗಾಗಲೇ 4G PLUS ಹಂತದಲ್ಲಿದ್ದು, ಕನಿಷ್ಟ ಹೆಚ್ಚುವರಿ ವೆಚ್ಚದೊಂದಿಗೆ ಇದನ್ನು 5Gಗೆ ಉನ್ನತೀಕರಿಸುವುದು ಸಾಧ್ಯವಾಗಲಿದೆ.

ಮೊಬೈಲ್ ಬ್ರಾಡ್‌ಬ್ಯಾಂಡ್ ಜೊತೆಯಲ್ಲಿ ಕನೆಕ್ಟಿವಿಟಿ ಆದಾಯದ ನಾಲ್ಕು ಹೊಸ ಎಂಜಿನ್‌ಗಳನ್ನು (ದೇಶವ್ಯಾಪಿ ಇಂಟರ್‌ನೆಟ್ ಆಫ್ ಥಿಂಗ್ಸ್, ಹೋಮ್ ಬ್ರಾಡ್‌ಬ್ಯಾಂಡ್, ಎಂಟರ್‌ಪ್ರೈಸ್ ಬ್ರಾಡ್‌ಬ್ಯಾಂಡ್ ಹಾಗೂ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಬ್ರಾಡ್‌ಬ್ಯಾಂಡ್) ಜಿಯೋ ಪ್ರಾರಂಭಿಸುತ್ತಿದ್ದು ಇದೇ ಹಣಕಾಸು ವರ್ಷದಲ್ಲಿ ಇವುಗಳಿಂದ ಆದಾಯವನ್ನು ನಿರೀಕ್ಷಿಸುತ್ತಿದೆ.

ಮುಂದಿನ ಎರಡು ವರ್ಷಗಳಲ್ಲಿ ನಮ್ಮ ದೇಶದಲ್ಲಿ ಸುಮಾರು ಎರಡು ಬಿಲಿಯನ್ ಸಂಪರ್ಕಿತ ಐಓಟಿ ಸಾಧನಗಳು ಇರಲಿವೆಯೆಂದು ಅಂದಾಜಿಸಲಾಗಿದ್ದು, ಆ ಪೈಕಿ ಕನಿಷ್ಟ ಒಂದು ಬಿಲಿಯನ್ ಸಾಧನಗಳನ್ನು ತನ್ನ ಐಓಟಿ ವೇದಿಕೆಗೆ ಸೇರಿಸಿಕೊಳ್ಳಲು ಜಿಯೋ ಉದ್ದೇಶಿಸಿದೆ. ಇದಕ್ಕಾಗಿ ಜಿಯೋದ ದೇಶವ್ಯಾಪಿ 4G ಜಾಲದಲ್ಲಿ ನ್ಯಾರೋಬ್ಯಾಂಡ್ ಇಂಟರ್‌ನೆಟ್ ಆಫ್ ಥಿಂಗ್ಸ್ (NBIoT) ಎಂಬ ಹೊಸ ಸೇವೆಯನ್ನು ಅಭಿವೃದ್ಧಿಪಡಿಸಲಾಗಿದೆ.

ಮುಂದಿನ ಹನ್ನೆರಡು ತಿಂಗಳುಗಳಲ್ಲಿ ಬ್ಲಾಕ್‌ಚೈನ್ ಜಾಲವೊಂದನ್ನು ದೇಶದಾದ್ಯಂತ ಸ್ಥಾಪಿಸಲಿದ್ದು, ಇದು ವಿಶ್ವದ ಅತಿದೊಡ್ಡ ಬ್ಲಾಕ್‌ಚೈನ್ ಜಾಲಗಳ ಪೈಕಿ ಒಂದಾಗಲಿದೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ. ಇದಲ್ಲದೆ ದೇಶವ್ಯಾಪಿ ಎಡ್ಜ್ ಕಂಪ್ಯೂಟಿಂಗ್ ಹಾಗೂ ಕಂಟೆಂಟ್ ವಿತರಣಾ ಜಾಲವನ್ನೂ ಜಿಯೋ ರೂಪಿಸುತ್ತಿದೆ.

ಕ್ಲೌಡ್ ಕಂಪ್ಯೂಟಿಂಗ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲೂ ಜಿಯೋ ಕಾರ್ಯನಿರತವಾಗಿದ್ದು, ಈ ನಿಟ್ಟಿನಲ್ಲಿ ಮೈಕ್ರೋಸಾಫ್ಟ್ ಸಂಸ್ಥೆಯೊಂದಿಗೆ ಮಹತ್ವದ ಒಪ್ಪಂದವೊಂದನ್ನು ಮಾಡಿಕೊಂಡಿದೆ. ಈ ಒಪ್ಪಂದದ ಅನ್ವಯ ಜಿಯೋ ಭಾರತದಾದ್ಯಂತ ಜಾಗತಿಕ ಗುಣಮಟ್ಟದ ಡೇಟಾಸೆಂಟರುಗಳನ್ನು ಸ್ಥಾಪಿಸಲಿದ್ದು, ಮೈಕ್ರೋಸಾಫ್ಟ್ ತನ್ನ ಅಜ್ಯೂರ್ ಕ್ಲೌಡ್ ವೇದಿಕೆಯನ್ನು ಜಿಯೋ ಡೇಟಾಸೆಂಟರುಗಳಿಗೆ ತರಲಿದೆ. ಈ ಪೈಕಿ ಮೊದಲ ಎರಡು ಡೇಟಾಸೆಂಟರುಗಳನ್ನು ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಸ್ಥಾಪಿಸಲಾಗುತ್ತಿದ್ದು, 2020ರ ವೇಳೆಗೆ ಅವುಗಳ ಕಾರ್ಯಾಚರಣೆ ಪ್ರಾರಂಭಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಇವುಗಳಿಂದ ದೊರಕಲಿರುವ ಸೇವೆಗಳಿಂದ ನವೋದ್ಯಮಗಳ ಜೊತೆಗೆ ಸಣ್ಣ ಹಾಗೂ ಮಧ್ಯಮಗಾತ್ರದ ಉದ್ದಿಮೆಗಳಿಗೂ ಉಪಯೋಗವಾಗಲಿದ್ದು, ಕ್ಲೌಡ್ ಹಾಗೂ ಕನೆಕ್ಟಿವಿಟಿ ಮೂಲಸೌಕರ್ಯಕ್ಕಾಗಿ ಮಾಡುತ್ತಿರುವ ವೆಚ್ಚದಲ್ಲಿ ಅವು ಗಮನಾರ್ಹ ಉಳಿತಾಯ ಸಾಧಿಸಬಹುದು ಎನ್ನಲಾಗಿದೆ.

[ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ ಹಂಚಿಕೊಂಡಿರುವ ಮಾಹಿತಿ ಆಧರಿತ ಬರಹ]

ಕಾಮೆಂಟ್‌ಗಳಿಲ್ಲ:

badge