ಗುರುವಾರ, ಮಾರ್ಚ್ 21, 2019

ಮೀಮ್ ಮ್ಯಾಜಿಕ್

ಟಿ. ಜಿ. ಶ್ರೀನಿಧಿ

ಸಮಾಜಜಾಲಗಳಲ್ಲಿ, ಅದರಲ್ಲೂ ಫೇಸ್‌ಬುಕ್‌ನಲ್ಲಿ, ಆಗಿಂದಾಗ್ಗೆ ಹೊಸ ಸಂಗತಿಗಳು ಮುನ್ನೆಲೆಗೆ ಬರುತ್ತಿರುತ್ತವೆ. ಹೊಸ ಟ್ರೆಂಡ್‌ಗಳು ಇಲ್ಲಿ ಸೃಷ್ಟಿಯಾಗುತ್ತಲೇ ಇರುತ್ತವೆ.

ಇಂತಹ ಯಾವುದೇ ಸಂಗತಿ ಸುದ್ದಿಮಾಡಿದಾಗ, ಹೊಸ ಟ್ರೆಂಡ್ ಸೃಷ್ಟಿಯಾದಾಗ ಅದನ್ನೆಲ್ಲ ಲೇವಡಿಮಾಡುವ ಚಿತ್ರಗಳೂ ಅದರ ಜೊತೆಯಲ್ಲೇ ಪ್ರಚಾರ ಪಡೆದುಕೊಳ್ಳುತ್ತವೆ. ಆಯಾ ವಿಷಯಕ್ಕೆ ಸಂಬಂಧಿಸಿದ ಒಂದು ಚಿತ್ರ, ಅದರ ಮೇಲೆ-ಕೆಳಗೆ ಒಂದೆರಡು ಸಾಲಿನ ಬರಹ ಇರುವ ಹಲವಾರು ಪೋಸ್ಟುಗಳು ಸಮಾಜಜಾಲಗಳಲ್ಲಿ ಬಹಳ ಕ್ಷಿಪ್ರವಾಗಿ ಹರಿದಾಡಲು ಶುರುಮಾಡುತ್ತವೆ. ಸುದ್ದಿಯಲ್ಲಿರುವ ಟ್ರೆಂಡ್‌ನ ಮೂಲ ಉದ್ದೇಶ ಏನಿರುತ್ತದೋ ಅದನ್ನು ತಮಾಷೆಯ ದೃಷ್ಟಿಯಿಂದ ನೋಡುವುದು ಇಂತಹ ಬಹುತೇಕ ಚಿತ್ರಗಳ ಉದ್ದೇಶ.

'ಇಂಟರ್‌ನೆಟ್ ಮೀಮ್‌'ಗಳೆಂದು ಗುರುತಿಸುವುದು ಇಂತಹ ಚಿತ್ರಗಳನ್ನೇ.

ನಿರ್ದಿಷ್ಟ ಪರಿಸರದಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಯಾವುದೇ ಆಲೋಚನೆ, ವರ್ತನೆ ಅಥವಾ ಶೈಲಿಗೆ ಇಂಗ್ಲಿಷಿನಲ್ಲಿ ಮೀಮ್ ಎಂದು ಹೆಸರು. ಅಂತರಜಾಲದ ಚಿತ್ರಗಳೂ ಹೀಗೆ ಒಬ್ಬರಿಂದ ಇನ್ನೊಬ್ಬರಿಗೆ ರವಾನೆಯಾಗುವುದರಿಂದ ಅವನ್ನೂ ಮೀಮ್ ಎಂದೇ ಕರೆಯಲಾಗಿದೆ. ಸಿನಿಮಾ, ಪ್ರಸಿದ್ಧ ವ್ಯಕ್ತಿಗಳು, ಕ್ರೀಡೆ, ಟೀವಿ ಕಾರ್ಯಕ್ರಮ, ಪ್ರಚಲಿತ ವಿದ್ಯಮಾನ - ಹೀಗೆ ಇಂಟರ್‌ನೆಟ್ ಮೀಮ್‌ಗಳ ವಿಷಯ ಏನು ಬೇಕಾದರೂ ಇರಬಹುದು. ಟೆನ್ ಇಯರ್ ಚಾಲೆಂಜಿನಲ್ಲಿ ಖಾಲಿ ಪರ್ಸಿನ ಚಿತ್ರವೂ ಕಾಣಿಸಿಕೊಂಡಿತಲ್ಲ, ಹಾಗೆ!

ಸಮಾಜಜಾಲದ ಗುಂಪುಗಳಲ್ಲಿ ಮೊದಲಿಗೆ ಕಾಣಿಸಿಕೊಂಡು ಒಬ್ಬ ಬಳಕೆದಾರನಿಂದ ಇನ್ನೊಬ್ಬರಿಗೆ, ಒಂದು ಗುಂಪಿನಿಂದ ಇನ್ನೊಂದಕ್ಕೆ ಪ್ರಸಾರವಾಗುತ್ತ ಸಾಗುವುದು ಮೀಮ್‌ಗಳ ವೈಶಿಷ್ಟ್ಯ. ಇವುಗಳಲ್ಲಿ ಬಳಕೆಯಾಗುವ ಬರಹದ ಶೈಲಿಯಲ್ಲಿ ತಿಳಿಹಾಸ್ಯದಿಂದ ಅಪಹಾಸ್ಯದವರೆಗೆ ಅನೇಕ ಛಾಯೆಗಳನ್ನು ನೋಡಬಹುದು. ನಗೆಯುಕ್ಕಿಸುವ ಮೀಮ್‌ಗಳು ಕಾಣಸಿಗುವಂತೆಯೇ ದ್ವೇಷಸಾಧನೆ ಹಾಗೂ ಇತರರ ಅವಹೇಳನವನ್ನೇ ಗುರಿಯಾಗಿಟ್ಟುಕೊಂಡ ಮೀಮ್‌ಗಳೂ ಸಿಗುತ್ತವೆ.

ಕನ್ನಡವೂ ಸೇರಿದಂತೆ ವಿಶ್ವದ ಹಲವಾರು ಭಾಷೆಗಳಲ್ಲಿ ಮೀಮ್‌ಗಳು ತಯಾರಾಗುತ್ತಿರುತ್ತವೆ. ಆಯಾ ಸಮುದಾಯಗಳಿಗೆ ಪರಿಚಿತವಾಗಿರುವ ವ್ಯಕ್ತಿವಿಶೇಷಗಳು ಅಲ್ಲಿನ ಮೀಮ್‌ಗಳಿಗೆ ವಿಷಯವಾಗುವುದನ್ನು ನಾವು ನೋಡಬಹುದು. ಕನ್ನಡದ ಮೀಮ್‌ಗಳಲ್ಲೂ ಅಷ್ಟೇ: ಚಂದನ ವಾಹಿನಿಯ ಕಾರ್ಯಕ್ರಮಗಳಿಂದ ಚಂದನವನದ ಸಿನಿಮಾಗಳವರೆಗೆ, ತಿಂಡಿತಿನಿಸುಗಳಿಂದ ಭಾಷಾ ವೈವಿಧ್ಯದವರೆಗೆ ಬೇಕಾದಷ್ಟು ವಿಷಯಗಳ ವಿಶ್ಲೇಷಣೆ ಕಾಣಸಿಗುತ್ತದೆ.

ಕನ್ನಡದ ಮೀಮ್‌ಗಳಿಗೆಂದೇ ಮೀಸಲಾದ ಹಲವು ಪುಟಗಳು ಫೇಸ್‌ಬುಕ್‌ನಲ್ಲಿವೆ. ವಿದೇಶಿ ಮೂಲದ ಛಾಯಾಚಿತ್ರಗಳಿಗೆ ಕನ್ನಡ ಪಠ್ಯ ಸೇರಿಸಿರುವ, ಕನ್ನಡದ ಸಂದರ್ಭಕ್ಕೆಂದೇ ಹೊಸದಾಗಿ ರೂಪಿಸಿರುವ ಅನೇಕ ಮೀಮ್‌ಗಳನ್ನು ನಾವು ಅಲ್ಲಿ ನೋಡಬಹುದು. ವಿವಿಧ ಶೈಕ್ಷಣಿಕ ಹಿನ್ನೆಲೆಯ, ವಿವಿಧ ಕ್ಷೇತ್ರಗಳ ಅನೇಕ ಆಸಕ್ತರು - ಬಹುಪಾಲು ಅಜ್ಞಾತರಾಗಿಯೇ ಉಳಿದು - ಈ ಮೀಮ್‌ಗಳನ್ನು ಸೃಷ್ಟಿಸುತ್ತಾರೆ. ಪ್ರಾಯೋಜಿತ ಮೀಮ್‌ಗಳನ್ನು ರಚಿಸಿ ಪ್ರಕಟಿಸುವ ಮೂಲಕ ಹಣಸಂಪಾದಿಸುತ್ತಿರುವವರೂ ಇದ್ದಾರೆ.

ಸೃಜನಶೀಲವಾಗಿ ಯೋಚಿಸುವ ಸಾಮರ್ಥ್ಯವಿದ್ದರೆ ಸಾಕು, ಮೀಮ್‌ಗಳನ್ನು ರಚಿಸುವುದು ಬಹಳ ಸುಲಭ. ಯಾವುದೇ ಚಿತ್ರಕ್ಕೆ ನಮ್ಮ ಪಠ್ಯ ಸೇರಿಸಿ ಮೀಮ್‌ಗಳನ್ನು ಸೃಷ್ಟಿಸಲು ನೆರವಾಗುವ ಹಲವು ತಂತ್ರಾಂಶಗಳು ವಿಶ್ವವ್ಯಾಪಿ ಜಾಲದಲ್ಲಿ ಉಚಿತವಾಗಿ ದೊರಕುತ್ತವೆ. ಸಾಮಾನ್ಯ ಚಿತ್ರಗಳಂತೆ ಮಾತ್ರವೇ ಅಲ್ಲದೆ ಜಿಫ್ ಅಥವಾ ವೀಡಿಯೋ ರೂಪದ ಮೀಮ್‌ಗಳನ್ನೂ ರೂಪಿಸುವುದು ಸಾಧ್ಯವಿದೆ. ಫೇಸ್‌ಬುಕ್ ಮಾತ್ರವೇ ಅಲ್ಲದೆ ವಾಟ್ಸ್‌ಆಪ್‌, ಟ್ವಿಟರ್ ಮುಂತಾದ ಮಾಧ್ಯಮಗಳ ಮೂಲಕವೂ ಮೀಮ್‌ಗಳನ್ನು ಹಂಚಬಹುದು.

ಯುವಜನರಲ್ಲಿ, ಸಹಜವಾಗಿಯೇ, ಮೀಮ್ ಕುರಿತ ಆಸಕ್ತಿ ಹೆಚ್ಚು. ಹೀಗಾಗಿ ಯುವಜನರನ್ನು ಸೆಳೆಯಲು ಬಯಸುವ ಸಂಸ್ಥೆಗಳು ಮೀಮ್‌ಗಳಿಗೆ ಹೆಚ್ಚಿನ ಮಹತ್ವ ಕೊಡುತ್ತವೆ.
ಯಾವುದೇ ಸಂಸ್ಕೃತಿಯಲ್ಲಿ ಮಾಹಿತಿ ಪ್ರಸಾರ ನಡೆಯುವ ವಿಧಾನವನ್ನು ವಿವರಿಸುವಾಗ 'ಮೀಮ್' ಹೆಸರನ್ನು ಮೊದಲಿಗೆ ಬಳಸಿದ್ದು ಬ್ರಿಟಿಷ್ ವಿಜ್ಞಾನಿ-ಲೇಖಕ ರಿಚರ್ಡ್ ಡಾಕಿನ್ಸ್, ೧೯೭೬ರಲ್ಲಿ. ಅಂತರಜಾಲದ ಆರಂಭಿಕ ದಿನಗಳಲ್ಲಿ ಇಮೇಲ್, ಯೂಸ್‌ನೆಟ್, ನ್ಯೂಸ್‌ಗ್ರೂಪ್‌ನಂತಹ ಮಾಧ್ಯಮಗಳಲ್ಲಿ ಮೀಮ್‌ಗಳನ್ನು ಹಂಚಿಕೊಳ್ಳಲಾಗುತ್ತಿತ್ತು. ಸಮಾಜಜಾಲಗಳ ಜನಪ್ರಿಯತೆಯ ಜೊತೆಗೆ ಇದೀಗ ಮೀಮ್‌ಗಳ ಜನಪ್ರಿಯತೆಯೂ ವ್ಯಾಪಕವಾಗಿ ಬೆಳೆದಿದೆ.
ಮಾರ್ಚ್ ೨೦೧೯ರ ತುಷಾರದಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge