ಬುಧವಾರ, ಮಾರ್ಚ್ 13, 2019

ಜಗವ ಬೆಸೆವ ಜಾಲಕ್ಕೆ ಮೂವತ್ತು ವರ್ಷ

ವಿಶ್ವವ್ಯಾಪಿ ಜಾಲದ ಬಗ್ಗೆ ಗೊತ್ತಿಲ್ಲದವರಿಗೂ WWW ಹೆಸರಿನ ಪರಿಚಯ ಇರುತ್ತದೆ. ಮೂಲತಃ ವಿಜ್ಞಾನಿಗಳ ಕೆಲಸ ಸುಲಭಮಾಡಲೆಂದು ಸೃಷ್ಟಿಯಾದ ಈ ವ್ಯವಸ್ಥೆ ರೂಪುಗೊಂಡಿದ್ದು ಹೇಗೆ? ವೆಬ್ ವಿಹಾರಕ್ಕೆ ಮೂವತ್ತು ವರ್ಷ ತುಂಬಿರುವ ಸಂದರ್ಭದಲ್ಲಿ ಹೀಗೊಂದು ಹಿನ್ನೋಟ...

ಟಿ. ಜಿ. ಶ್ರೀನಿಧಿ


ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವು ಹೆಸರುಗಳು ಅಪಾರ ಜನಪ್ರಿಯತೆ ಗಳಿಸಿಕೊಂಡಿರುತ್ತವೆ. ಇಂತಹ ಹೆಸರುಗಳ ಪೈಕಿ ವರ್ಲ್ಡ್‌ವೈಡ್ ವೆಬ್ ಕೂಡ ಒಂದು. ಇದನ್ನು ಕನ್ನಡದಲ್ಲಿ ವಿಶ್ವವ್ಯಾಪಿ ಜಾಲ ಎಂದು ಕರೆಯಬಹುದು. ಜಾಲತಾಣ, ಅಂದರೆ ವೆಬ್‌ಸೈಟುಗಳ ವಿಳಾಸದ ಪ್ರಾರಂಭದಲ್ಲಿ ನಾವು ನೋಡುವ WWW ಎನ್ನುವುದು ಇದೇ ಹೆಸರಿನ ಹ್ರಸ್ವರೂಪ.

ಐಟಿ ಕ್ರಾಂತಿಗೆ ಕಾರಣವಾದ ಸಂಗತಿಗಳಲ್ಲಿ ಅಂತರಜಾಲಕ್ಕೆ (ಇಂಟರ್‌ನೆಟ್) ಪ್ರಮುಖ ಸ್ಥಾನವಿದೆ. ವಿಶ್ವದ ವಿವಿಧೆಡೆಗಳಲ್ಲಿರುವ ಕಂಪ್ಯೂಟರುಗಳು, ಮೊಬೈಲ್ ಫೋನುಗಳು ಹಾಗೂ ಸಂಬಂಧಿತ ಸಾಧನಗಳನ್ನೆಲ್ಲ ಬೆಸೆಯುವ ಅಂತರಜಾಲದ ಅನುಕೂಲತೆಗಳನ್ನು ಬಳಸಿಕೊಂಡು ಆ ಸಾಧನಗಳ ನಡುವೆ ಮಾಹಿತಿಯ ವಿನಿಮಯವನ್ನು ಅತ್ಯಂತ ಸುಲಭವಾಗಿಸಿದ್ದು ವಿಶ್ವವ್ಯಾಪಿ ಜಾಲದ ಹೆಚ್ಚುಗಾರಿಕೆ. ನಾವು ದಿನನಿತ್ಯ ಬಳಸುವ ವೆಬ್‌ಸೈಟುಗಳು, ಅವುಗಳ ಮೂಲಕ ದೊರಕುವ ಮಾಹಿತಿ, ವಿಶ್ವದ ಬೇರೆಬೇರೆ ಸ್ಥಳಗಳೊಡನೆ ನಾವು ನಡೆಸುವ ಸಂವಹನ - ಇವೆಲ್ಲವೂ ಸಾಧ್ಯವಾಗುವುದು ಇದೇ ಜಾಲದಿಂದ. ಇಂದು ಇದರ ಜನಪ್ರಿಯತೆ ಯಾವ ಮಟ್ಟದಲ್ಲಿದೆ ಎಂದರೆ ಬಹುತೇಕ ಮಂದಿ ವಿಶ್ವವ್ಯಾಪಿ ಜಾಲವನ್ನೇ ಅಂತರಜಾಲ ಎಂದು ಭಾವಿಸಿದ್ದಾರೆ.

ನಿನ್ನೆ, ಮಾರ್ಚ್ ೧೨ರ ಮಂಗಳವಾರದಂದು, ವಿಶ್ವವ್ಯಾಪಿ ಜಾಲದ ಆವಿಷ್ಕಾರವಾಗಿ ಮೂವತ್ತು ವರ್ಷ ತುಂಬಿದ ಸಂದರ್ಭವನ್ನು ಸಂಭ್ರಮಿಸಲಾಯಿತು.

ಇಂತಿಂಥ ಆವಿಷ್ಕಾರಗಳಿಗೆ ಇಂತಿಂಥವರು ಕಾರಣ ಎಂದು ವಿಜ್ಞಾನ ಕ್ಷೇತ್ರದಲ್ಲಿ ಹೇಳಿದಷ್ಟು ಸುಲಭವಾಗಿ ತಂತ್ರಜ್ಞಾನ, ಅದರಲ್ಲೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೇಳಲಾಗುವುದಿಲ್ಲ. ಇಲ್ಲಿನ ಬಹುತೇಕ ವಿದ್ಯಮಾನಗಳು ಸಾಕಷ್ಟು ದೀರ್ಘ ಅವಧಿಯಲ್ಲಿ ಹಲವು ವ್ಯಕ್ತಿ-ತಂಡಗಳ ನೆರವಿನಿಂದ ವಿಕಾಸವಾಗಿರುವುದು ಇದಕ್ಕೆ ಪ್ರಮುಖ ಕಾರಣ.

ವಿಶ್ವವ್ಯಾಪಿ ಜಾಲ ಬೆಳೆದದ್ದೂ ಹೀಗೆಯೇ. ಆದರೆ ಇದರ ಕಲ್ಪನೆ ಯಾರದ್ದು ಎನ್ನುವುದನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಿರುವುದು ವಿಶೇಷ. ವಿಶ್ವವ್ಯಾಪಿ ಜಾಲದ ಸೃಷ್ಟಿಕರ್ತನೆಂದು ಗುರುತಿಸಲಾಗಿರುವ ಆ ವ್ಯಕ್ತಿಯ ಹೆಸರೇ ಟಿಮ್ ಬರ್ನರ್ಸ್-ಲೀ.

ದೇವಕಣಗಳ ಹುಡುಕಾಟದ ಸಂದರ್ಭದಲ್ಲಿ ಸ್ವಿಟ್ಸರ್ಲೆಂಡಿನ ಸರ್ನ್ ಎಂಬ ಪ್ರಯೋಗಾಲಯ ಸುದ್ದಿಯಲ್ಲಿತ್ತಲ್ಲ, ವಿಶ್ವವ್ಯಾಪಿ ಜಾಲ ಹುಟ್ಟಿದ್ದು - ಬೆಳೆದದ್ದು ಅದೇ ಸಂಸ್ಥೆಯ ಆಶ್ರಯದಲ್ಲಿ. ೧೯೮೦ರ ದಶಕದಲ್ಲಿ ಟಿಮ್ ಬರ್ನರ್ಸ್-ಲೀ ಅಲ್ಲಿನ ಉದ್ಯೋಗಿಯಾಗಿದ್ದರು.

ಈ ಪ್ರಯೋಗಾಲಯದ ವಿವಿಧ ವಿಭಾಗಗಳಲ್ಲಿ ಬೇರೆಬೇರೆ ದೇಶಗಳ ಅನೇಕ ವಿಜ್ಞಾನಿಗಳು ಕೆಲಸಮಾಡುತ್ತಿದ್ದರು. ಅತ್ಯಂತ ಸಂಕೀರ್ಣ ಪ್ರಯೋಗಗಳಲ್ಲಿ ತೊಡಗಿದ್ದ ಈ ವಿಜ್ಞಾನಿಗಳು ತಮ್ಮ ನಡುವೆ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕಾದ್ದು ಅನಿವಾರ್ಯವಾಗಿತ್ತು. ಆದರೆ ಅದಕ್ಕೊಂದು ಸರಳ, ಸಶಕ್ತ ವ್ಯವಸ್ಥೆ ಮಾತ್ರ ಇರಲಿಲ್ಲ. ಅಂತರಜಾಲ - ಇಮೇಲ್‌ಗಳೆಲ್ಲ ಆಗಲೇ ಅಸ್ತಿತ್ವದಲ್ಲಿದ್ದರೂ ಅವುಗಳನ್ನು ಪರಿಣಾಮಕಾರಿಯಾಗಿ ಬಳಸುವುದು ಹೇಗೆ ಎನ್ನುವುದು ಮಾತ್ರ ಇನ್ನೂ ಅಸ್ಪಷ್ಟವಾಗಿಯೇ ಇತ್ತು.

ಇಂತಹ ಪರಿಸ್ಥಿತಿಯಲ್ಲಿ ರೂಪುಗೊಂಡದ್ದೇ ವಿಶ್ವವ್ಯಾಪಿ ಜಾಲದ ಪರಿಕಲ್ಪನೆ. ಆ ಪರಿಕಲ್ಪನೆಯನ್ನು ರೂಪಿಸಿದವರು ಟಿಮ್ ಬರ್ನರ್ಸ್-ಲೀ. ಅವರು ಆ ಪರಿಕಲ್ಪನೆಯನ್ನು ಬರಹರೂಪಕ್ಕೆ ತಂದು ತಮ್ಮ ಸಂಸ್ಥೆಗೆ ಸಲ್ಲಿಸಿದ ದಿನವೇ ಮಾರ್ಚ್ ೧೨, ೧೯೮೯.

ಟಿಮ್ ಬರ್ನರ್ಸ್-ಲೀ
ಸರ್ನ್‌ನಲ್ಲಿ ಬೇರೆಬೇರೆ ವಿಜ್ಞಾನಿಗಳು ಬೇರೆಬೇರೆ ರೀತಿಯ ಕಂಪ್ಯೂಟರುಗಳನ್ನು ಬಳಸುತ್ತಿದ್ದರು. ಈ ಕಂಪ್ಯೂಟರುಗಳ ನಡುವೆ ಯಾವುದೇ ರೀತಿಯ ಸಂವಹನ ಇರಲಿಲ್ಲ. ಹೀಗಿರುವಾಗ ವಿಜ್ಞಾನಿಯೊಬ್ಬರಿಗೆ ಏನಾದರೂ ಮಾಹಿತಿ ಬೇಕಾದರೆ ಆ ಮಾಹಿತಿ ಎಲ್ಲಿದೆ ಹಾಗೂ ಅದನ್ನು ಪಡೆಯುವುದು ಹೇಗೆ ಎನ್ನುವುದು ಗೊತ್ತಿಲ್ಲದೆ ಮುಂದುವರೆಯುವುದೇ ಸಾಧ್ಯವಾಗುತ್ತಿರಲಿಲ್ಲ.

'ಎಲ್ಲರೂ ಓದಬಹುದಾದ ಒಂದು ಕಾಲ್ಪನಿಕ ಮಾಹಿತಿ ವ್ಯವಸ್ಥೆ'ಯನ್ನು ರೂಪಿಸಿದರೆ ಈ ಸಮಸ್ಯೆ ಬಗೆಹರಿಯುತ್ತದೆ ಎಂದು ಟಿಮ್ ಬರ್ನರ್ಸ್-ಲೀ ಪ್ರತಿಪಾದಿಸಿದರು. ಬೇರೆಬೇರೆ ಸ್ಥಳಗಳಲ್ಲಿರುವ ಮಾಹಿತಿಯ ಮೂಲಗಳನ್ನು (ಉದಾ: ಸರ್ನ್‌ನ ಕಂಪ್ಯೂಟರುಗಳು) ಅಂತರಜಾಲದ ಮೂಲಕ ಸಂಪರ್ಕಿಸಿ, ಜಾಲತಾಣಗಳ ಮೂಲಕ ಅಲ್ಲಿರುವ ಮಾಹಿತಿಯನ್ನು ಯಾರು ಎಲ್ಲಿಂದ ಬೇಕಾದರೂ ಪಡೆದುಕೊಳ್ಳುವಂತೆ ಮಾಡಬಹುದು ಎನ್ನುವುದು ಅವರ ಯೋಜನೆಯ ಸಾರಾಂಶವಾಗಿತ್ತು.
ಟಿಮ್ ಸಲ್ಲಿಸಿದ ಕಡತ ಹೇಗಿತ್ತು? ಇಲ್ಲಿ ನೋಡಿ!
ಸುದ್ದಿಸಂಸ್ಥೆಯ ಜಾಲತಾಣಕ್ಕೆ ಹೋಗಿ ಕ್ರಿಕೆಟ್ ಸ್ಕೋರ್ ಎಂದಿರುವ ಕಡೆ ಕ್ಲಿಕ್ ಮಾಡಿದರೆ ಪಂದ್ಯದ ವಿವರಗಳನ್ನು ನೀಡುವ ಪುಟ ತೆರೆದುಕೊಳ್ಳುತ್ತದೆ ಎನ್ನುವುದು ಇಂದು ವಿಶ್ವವ್ಯಾಪಿ ಜಾಲ ಬಳಸುವ ಎಲ್ಲರಿಗೂ ಗೊತ್ತು. ಇಂತಹ ಕೊಂಡಿಗಳನ್ನು ಹೈಪರ್‌ಲಿಂಕ್ ಎಂದೂ, ಆ ಬಗೆಯ ಕೊಂಡಿಗಳಿರುವ ಪಠ್ಯವನ್ನು ಹೈಪರ್‌ಟೆಕ್ಸ್ಟ್ ಎಂದೂ ಕರೆಯುತ್ತಾರೆ. ಕೇಳಲು, ನೋಡಲು, ಬಳಸಲು ಬಹಳ ಸುಲಭವಾದ ಈ ವ್ಯವಸ್ಥೆಯ ಮೂಲ ಇರುವುದು ಟಿಮ್ ಬರ್ನರ್ಸ್-ಲೀ ಮೂವತ್ತು ವರ್ಷಗಳ ಹಿಂದೆ ಸಲ್ಲಿಸಿದರಲ್ಲ, ಅದೇ ಯೋಜನೆಯಲ್ಲಿ!

ಅಂದಹಾಗೆ ವಿಶ್ವವ್ಯಾಪಿ ಜಾಲದ ಪರಿಕಲ್ಪನೆಯನ್ನು ಪ್ರಸ್ತಾಪಿಸಿದ ಟಿಮ್ ಬರ್ನರ್ಸ್-ಲೀ ಆನಂತರ ಸುಮ್ಮನೆ ಕುಳಿತುಬಿಡಲಿಲ್ಲ. ಜಾಲತಾಣಗಳನ್ನು ರೂಪಿಸಲು ಬೇಕಾದ ಹೈಪರ್‌ಟೆಕ್ಸ್ಟ್ ಮಾರ್ಕಪ್ ಲ್ಯಾಂಗ್ವೆಜ್ (ಎಚ್‌ಟಿಎಂಎಲ್) ಪ್ರೋಗ್ರಾಮಿಂಗ್ ಭಾಷೆ, ಜಾಲತಾಣ ಹಾಗೂ ಬಳಕೆದಾರರ ನಡುವೆ ಸಂವಹನ ಸಾಧ್ಯವಾಗಿಸುವ ಹೈಪರ್‌ಟೆಕ್ಸ್ಟ್ ಟ್ರಾನ್ಸ್‌ಫರ್ ಪ್ರೋಟೋಕಾಲ್ (ಎಚ್‌ಟಿಟಿಪಿ) ಶಿಷ್ಟಾಚಾರ, ಜಾಲತಾಣಗಳನ್ನು ತೆರೆಯಲು - ವೀಕ್ಷಿಸಲು ಅಗತ್ಯವಾದ ಬ್ರೌಸರ್ ತಂತ್ರಾಂಶಗಳನ್ನೆಲ್ಲ ಅವರು ರೂಪಿಸಿಕೊಟ್ಟರು. ಈ ಎಲ್ಲ ಕೆಲಸಗಳಲ್ಲಿ ಅವರ ಸರ್ನ್ ಸಹೋದ್ಯೋಗಿ ರಾಬರ್ಟ್ ಕೈಲಿಯೌ ಕೂಡ ಜೊತೆಗಿದ್ದರು.

ಜಾಲತಾಣಗಳನ್ನು ರೂಪಿಸುವುದೇ ಆದರೆ ಅವನ್ನು ಪ್ರತ್ಯೇಕವಾಗಿ ಗುರುತಿಸುವ ವ್ಯವಸ್ಥೆಯೂ ಆಗಬೇಕಲ್ಲ! ಈ ಉದ್ದೇಶಕ್ಕಾಗಿ ವಿಶಿಷ್ಟ ವಿಳಾಸಗಳನ್ನು ರೂಪಿಸುವ ಅಭ್ಯಾಸವನ್ನೂ ಅವರು ಪ್ರಾರಂಭಿಸಿದರು. ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್ (ಯುಆರ್‌ಎಲ್) ಎಂಬ ಹೆಸರಿನೊಡನೆ ನಾವು ಈಗ ಗುರುತಿಸುವುದು ಈ ವಿಳಾಸವನ್ನೇ! www.srinidhi.net.in, www.ejnana.com ಮೊದಲಾದವುಗಳೆಲ್ಲ ಯುಆರ್‌ಎಲ್‌ನ ಉದಾಹರಣೆಗಳು.

ಇಷ್ಟೆಲ್ಲ ಮಾಡಿದ ಮೇಲೆ ಜಾಲತಾಣವನ್ನು ರೂಪಿಸದಿದ್ದರೆ ಆದೀತೇ? info.cern.ch ಎಂಬ ವಿಳಾಸದಲ್ಲಿ ಅವರು ರೂಪಿಸಿದ ತಾಣ ವಿಶ್ವದ ಮೊದಲ ಜಾಲತಾಣ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ವಿಶ್ವದ ಮೊದಲ ಜಾಲತಾಣ ಈಗಲೂ ಅಸ್ತಿತ್ವದಲ್ಲಿದೆ. ಅದನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ!
ಬ್ರೌಸರ್ ಎಂಬ ಕಿಟಕಿಯಿಂದ ಅಂತರಜಾಲವೆಂಬ ಲೋಕದೊಳಕ್ಕೆ ಇಣುಕುವುದನ್ನು ಸಾಧ್ಯವಾಗಿಸಿದ್ದು, ಆ ಲೋಕದಲ್ಲಿರುವ ಮಾಹಿತಿಯ ಪೈಕಿ ನಮಗೆ ಬೇಕಾದ್ದನ್ನು ಜಾಲತಾಣಗಳ ಮೂಲಕ ಸುಲಭವಾಗಿ ಪಡೆದುಕೊಳ್ಳುವ ಅವಕಾಶ ಕೊಟ್ಟಿದ್ದು ವಿಶ್ವವ್ಯಾಪಿ ಜಾಲ. ಬಳಕೆದಾರರ ಪಾಲಿಗೆ ಈ ವ್ಯವಸ್ಥೆ ಎಷ್ಟು ಸರಳವೆಂದರೆ ಅದರ ಅಗಾಧ ವ್ಯಾಪ್ತಿ, ಸಂಕೀರ್ಣ ಕಾರ್ಯಾಚರಣೆ ನಮ್ಮ ಗಮನಕ್ಕೆ ಬರುವುದೇ ಇಲ್ಲ. ವಿಶ್ವವ್ಯಾಪಿ ಜಾಲ ಇಂದು ನಿಜಕ್ಕೂ ವಿಶ್ವವ್ಯಾಪಿಯಾಗಿ ಬೆಳೆದಿರುವ ಹಿನ್ನೆಲೆಯಲ್ಲಿರುವುದು ಅದರ ಈ ಸರಳತೆಯೇ.

ವಿಶ್ವವ್ಯಾಪಿ ಜಾಲದ ಸರಳತೆಯ ಬಗ್ಗೆ ಹೇಳಿದಷ್ಟೂ ಮುಗಿಯುವುದಿಲ್ಲ. ಇಂಥದ್ದೊಂದು ಅದ್ಭುತ ವ್ಯವಸ್ಥೆಯನ್ನು ಕಲ್ಪಿಸಿಕೊಂಡ ಟಿಮ್ ಬರ್ನರ್ಸ್-ಲೀ ಮತ್ತವರ ಸಹೋದ್ಯೋಗಿಗಳಾಗಲಿ, ಇದರ ಸೃಷ್ಟಿಗೆ ಬೆಂಬಲ ನೀಡಿದ ಸರ್ನ್ ಆಗಲಿ ಇದರಿಂದ ಯಾವುದೇ ಆರ್ಥಿಕ ಲಾಭವನ್ನು ಬಯಸಲಿಲ್ಲ. ವಿಶ್ವವ್ಯಾಪಿ ಜಾಲ ಅಂದಿನಿಂದ ಇಂದಿನವರೆಗೂ ಮುಕ್ತ ಹಾಗೂ ಸ್ವತಂತ್ರವಾಗಿಯೇ ಬೆಳೆದುಬಂದಿದೆ. ಯಾವುದೇ ವ್ಯಕ್ತಿ, ಯಾವುದೇ ಸಾಧನ, ಯಾವ ಅಡೆತಡೆಗಳೂ ಇಲ್ಲದೆ ವಿಶ್ವವ್ಯಾಪಿ ಜಾಲವನ್ನು ಬಳಸಬಹುದಾದದ್ದು ಅದರ ನೈಜ ಶಕ್ತಿ.

ಕಳೆದ ಮೂರು ದಶಕಗಳಲ್ಲಿ ವಿಶ್ವವ್ಯಾಪಿ ಜಾಲ ನಮ್ಮ ಬದುಕನ್ನು ಅಪಾರವಾಗಿ ಬದಲಿಸಿದೆ; ನಮ್ಮಲ್ಲಿ ಅನೇಕರ ಅದೆಷ್ಟೋ ಕೆಲಸಗಳು ಸಂಪೂರ್ಣವಾಗಿ ವಿಶ್ವವ್ಯಾಪಿ ಜಾಲದ ಮೇಲೆಯೇ ಅವಲಂಬಿತವಾಗಿ ನಡೆಯುತ್ತಿದೆ. ಮಕ್ಕಳ ಹೋಮ್‌ವರ್ಕ್‌ನಿಂದ ದೊಡ್ಡವರ ಆಫೀಸ್‌ವರ್ಕ್‌ವರೆಗೆ ಪ್ರತಿಯೊಂದಕ್ಕೂ ಈ ಜಾಲದ ಮೊರೆಹೋಗುವುದು, ಅನೇಕ ಸಂದರ್ಭಗಳಲ್ಲಿ ನಮ್ಮ ಜ್ಞಾಪಕಶಕ್ತಿಗಿಂತ ಹೆಚ್ಚಾಗಿ ಜಾಲತಾಣಗಳನ್ನು (ವಿಶೇಷವಾಗಿ ಗೂಗಲ್) ಅವಲಂಬಿಸುವುದು ಸಾಮಾನ್ಯ ಅಭ್ಯಾಸವಾಗಿಬಿಟ್ಟಿದೆ.

ಹೌದು, ವಿಶ್ವವ್ಯಾಪಿ ಜಾಲ ನಮಗೆ ಬೇಕಾದಾಗ ಬೇಕಾದ್ದನ್ನು ಕೊಡುವ ಮಾಯಾದೀಪದಂತೆ ಬೆಳೆದುನಿಂತಿದೆ. ಅದನ್ನು ಎಚ್ಚರಿಕೆಯಿಂದ ಬಳಸುವ ಜವಾಬ್ದಾರಿ ಮಾತ್ರ, ಇನ್ನೂ, ನಮ್ಮ ಜೊತೆಯಲ್ಲೇ ಇದೆ!

ಮಾರ್ಚ್ ೧೩, ೨೦೧೯ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge