ಬುಧವಾರ, ಫೆಬ್ರವರಿ 20, 2019

ಸ್ಯಾಟೆಲೈಟ್ ಫೋನ್ ಸಮಾಚಾರ

ಬೆಂಗಳೂರಿನಲ್ಲಿ ಇಂದು ಪ್ರಾರಂಭವಾಗುತ್ತಿರುವ ಏರೋ ಇಂಡಿಯಾ ಪ್ರದರ್ಶನದ ಆಯೋಜಕರು ಸ್ಯಾಟೆಲೈಟ್ ಫೋನುಗಳನ್ನು ಬಳಸಲಿದ್ದಾರಂತೆ. ಈ ಫೋನಿನ ವೈಶಿಷ್ಟ್ಯವೇನು? ನಮ್ಮ ಮೊಬೈಲಿಗೂ ಈ ಫೋನಿಗೂ ಏನು ವ್ಯತ್ಯಾಸ?

ಟಿ. ಜಿ. ಶ್ರೀನಿಧಿ

ಮೊಬೈಲ್ ಫೋನುಗಳ ಬಗ್ಗೆ ನಮಗೆಲ್ಲ ಬಹಳ ಪ್ರೀತಿ. ಬೆಳಗಿನಿಂದ ರಾತ್ರಿವರೆಗೆ ನಮ್ಮ ಜೊತೆಯಲ್ಲೇ ಇರುವ ಸಂಗತಿಗಳ ಸಾಲಿನಲ್ಲೂ ಅದಕ್ಕೆ ವಿಶೇಷ ಸ್ಥಾನ. ಹೀಗಾಗಿಯೇ ಮೊಬೈಲ್ ತಯಾರಕರಿಗೂ ನಮ್ಮ ಮಾರುಕಟ್ಟೆಯ ಕುರಿತು ವಿಶೇಷ ಅಕ್ಕರೆ. ದಿನ ಬೆಳಗಾದರೆ ನಮ್ಮ ಮಾರುಕಟ್ಟೆಯಲ್ಲಿ ಹೊಸ ಮಾದರಿಗಳ ಮೆರವಣಿಗೆ.

ಮೊಬೈಲ್ ಫೋನನ್ನು ಇಷ್ಟೆಲ್ಲ ವ್ಯಾಪಕವಾಗಿ ಬಳಸುವ ನಮ್ಮ ದೇಶದಲ್ಲಿ ಅಂಥದ್ದೇ ಇನ್ನೊಂದು ಬಗೆಯ ದೂರವಾಣಿಯನ್ನು ಬಳಸುವುದಿರಲಿ, ಅನುಮತಿಯಿಲ್ಲದೆ ನಮ್ಮೊಡನೆ ಇಟ್ಟುಕೊಳ್ಳುವುದೂ ಅಪರಾಧ ಎನ್ನುವುದು ವಿಚಿತ್ರವೆನಿಸಿದರೂ ಸತ್ಯ!

ಈ ವಿಶಿಷ್ಟ ದೂರವಾಣಿಯ ಹೆಸರೇ ಸ್ಯಾಟೆಲೈಟ್ ಫೋನ್.

ಸ್ಯಾಟೆಲೈಟ್ ಫೋನಿನ ವೈಶಿಷ್ಟ್ಯವಿರುವುದು ಅದರ ಕಾರ್ಯಾಚರಣೆಯ ವಿಧಾನದಲ್ಲಿ. ಹೆಸರೇ ಹೇಳುವಂತೆ, ಇಬ್ಬರು ಬಳಕೆದಾರರ ನಡುವೆ ಸಂವಹನ ಸಾಧ್ಯವಾಗಿಸಲು ಅದು ಉಪಗ್ರಹ ಸಂಪರ್ಕವನ್ನು ಬಳಸುತ್ತದೆ.

ನಾವೆಲ್ಲ ಬಳಸುವ ಸಾಧಾರಣ ಮೊಬೈಲಿಗೂ ಸ್ಯಾಟೆಲೈಟ್ ಫೋನಿಗೂ ಇದೇ ಪ್ರಮುಖ ವ್ಯತ್ಯಾಸ. ಎರಡೂ ಫೋನುಗಳು ನಿಸ್ತಂತು (ವೈರ್‌ಲೆಸ್) ತಂತ್ರಜ್ಞಾನವನ್ನೇ ಬಳಸುತ್ತವೆ, ನಿಜ; ಆದರೆ ನಮ್ಮ ಮೊಬೈಲಿನ ನಿಸ್ತಂತು ಕಾರ್ಯಾಚರಣೆ ಏನಿದ್ದರೂ ಸಮೀಪದ ಮೊಬೈಲ್ ಟವರ್‌‌ವರೆಗೆ ಮಾತ್ರ. ಅಲ್ಲಿಂದ ಮುಂದಿನ ಸಂವಹನ, ಸಾಮಾನ್ಯ ಫೋನಿನ ಹಾಗೆಯೇ, ಆಪ್ಟಿಕಲ್ ಫೈಬರ್ ಕೇಬಲ್ಲುಗಳನ್ನು (ಓಎಫ್‌ಸಿ) ಬಳಸುತ್ತದೆ. ಊರಿಂದ ಊರಿಗೆ, ದೇಶದಿಂದ ದೇಶಕ್ಕೆ ನಮ್ಮ ಮಾತು ತಲುಪುವುದು ಇಂತಹ ಕೇಬಲ್ಲುಗಳ ಮೂಲಕವೇ.

ತಾಂತ್ರಿಕ ದೋಷದಿಂದಲೋ ಪ್ರಕೃತಿವಿಕೋಪದ ಕಾರಣದಿಂದಲೋ ಅಥವಾ ಆಕಸ್ಮಿಕವಾಗಿಯೋ ಈ ವ್ಯವಸ್ಥೆಗೆ ಧಕ್ಕೆಯಾದರೆ (ಸಮುದ್ರದಾಳದಲ್ಲಿರುವ ಕೇಬಲ್ ತುಂಡಾಗುವುದು, ಭೂಕುಸಿತದ ಸಂದರ್ಭದಲ್ಲಿ ಮೊಬೈಲ್ ಟವರ್ ಬಿದ್ದುಹೋಗುವುದು ಇತ್ಯಾದಿ) ಸಂವಹನ ಅಸಾಧ್ಯವಾಗುತ್ತದೆ. ಸೀಮಿತ ಪ್ರದೇಶದಲ್ಲಿ ವಿಪರೀತ ಸಂಖ್ಯೆಯ ಬಳಕೆದಾರರು ಸೇರಿದಾಗಲೂ ಮೊಬೈಲ್ ಸಂವಹನದಲ್ಲಿ ತೊಂದರೆಯಾಗುವುದು ಸಾಧ್ಯ. ಸಣ್ಣಪುಟ್ಟ ದೋಷಗಳನ್ನು ಬೇಗನೆ ಸರಿಪಡಿಸಬಹುದಾದರೂ ಪ್ರಕೃತಿವಿಕೋಪದಂತಹ ಸಂದರ್ಭಗಳಲ್ಲಿ ಈ ಅಡಚಣೆ ಗಂಭೀರ ಸ್ವರೂಪ ತಾಳುತ್ತದೆ. ಹಾಗಾದಾಗ ಅತ್ಯಂತ ವಿಷಮ ಸನ್ನಿವೇಶಗಳಲ್ಲೂ ಮೊಬೈಲ್ ಸಂಪರ್ಕ ಸಾಧ್ಯವಾಗುವುದಿಲ್ಲ.

ಈ ಸಮಸ್ಯೆಗೆ ಪರಿಹಾರವೇ ಸ್ಯಾಟೆಲೈಟ್ ಫೋನ್. ಈ ದೂರವಾಣಿಯ ಸಂವಹನಕ್ಕೆ ಟವರ್, ಕೇಬಲ್ ಇತ್ಯಾದಿಗಳೆಲ್ಲ ಬೇಕಾಗಿಯೇ ಇಲ್ಲ. ಅಂತರಿಕ್ಷದಲ್ಲಿರುವ ಉಪಗ್ರಹಗಳ ಮೂಲಕ ಈ ಫೋನ್ ಇರುವ ಯಾರು ಯಾರನ್ನು ಯಾವಾಗ ಬೇಕಾದರೂ ಸಂಪರ್ಕಿಸುವುದು ಸಾಧ್ಯ. ಈ ಸೇವೆ ಒದಗಿಸುತ್ತಿರುವ ಸಂಸ್ಥೆ ಯಾವ ರೀತಿಯ ಎಷ್ಟು ಉಪಗ್ರಹಗಳನ್ನು ಬಳಸುತ್ತಿದೆ ಎನ್ನುವುದನ್ನು ಆಧರಿಸಿ ಆಯಾ ಸ್ಯಾಟೆಲೈಟ್ ಫೋನಿನ ವ್ಯಾಪ್ತಿ ಪ್ರದೇಶ ನಿರ್ಧಾರವಾಗುತ್ತದೆ. ಇದು ನಿರ್ದಿಷ್ಟ ವಿಸ್ತೀರ್ಣದ ಪ್ರದೇಶದಿಂದ (ಉದಾ: ಒಂದು ದೇಶ) ಪ್ರಾರಂಭಿಸಿ ಇಡೀ ಜಗತ್ತಿನವರೆಗೆ ಎಷ್ಟಾದರೂ ಇರುವುದು ಸಾಧ್ಯ.

ಸ್ಯಾಟೆಲೈಟ್ ಫೋನ್ ನೋಡಲು ಹೆಚ್ಚೂಕಡಿಮೆ ಮೊಬೈಲಿನಷ್ಟೇ - ಮೊಬೈಲಿನಂತೆಯೇ ಇರುತ್ತದೆ. ಮೊಬೈಲಿನಲ್ಲಿ ಲಭ್ಯವಿರುವ ದೂರವಾಣಿ ಕರೆ, ಎಸ್ಸೆಮ್ಮೆಸ್ ಹಾಗೂ ಇಂಟರ್‌ನೆಟ್ ಸಂಪರ್ಕದಂತಹ ಸೌಲಭ್ಯಗಳು ಇದರಲ್ಲೂ ಇರುತ್ತವೆ. ಆದರೆ ಈ ಸೇವೆ ನೀಡಲು ಬೇಕಾದ ವ್ಯವಸ್ಥೆಯನ್ನು ನಿಭಾಯಿಸುವುದು ಮಾತ್ರ ಬಹಳ ದುಬಾರಿ ವ್ಯವಹಾರ; ಹೀಗಾಗಿ ಅದನ್ನು ಬಳಸಲು ತೆರಬೇಕಾದ ಶುಲ್ಕವೂ ಸಾಕಷ್ಟು ದುಬಾರಿಯೇ. ಸ್ಯಾಟೆಲೈಟ್ ಫೋನ್ ಬಳಕೆದಾರರು ಮಾತ್ರವೇ ಅಲ್ಲ, ಸ್ಯಾಟೆಲೈಟ್ ಫೋನಿಗೆ ಕರೆಮಾಡುವವರೂ ಸಾಕಷ್ಟು ದುಬಾರಿ ಶುಲ್ಕ ಪಾವತಿಸಬೇಕಾಗುತ್ತದೆ!

ಎಂತಹುದೇ ವಿಷಮ ಪರಿಸ್ಥಿತಿಯಲ್ಲೂ ಈ ದೂರವಾಣಿ ಕೆಲಸಮಾಡುವುದರಿಂದ ಪ್ರಕೃತಿವಿಕೋಪ ನಿರ್ವಹಣೆಯಂತಹ ಸಂದರ್ಭಗಳಲ್ಲಿ ಇದರ ಬಳಕೆ ಬಹು ಉಪಯುಕ್ತವಾಗಬಲ್ಲದು. ತುರ್ತು ಸಂದರ್ಭಗಳಲ್ಲಿ ಬಳಸಲೆಂದು ದೇಶದ ಹಲವು ಸರಕಾರಿ ಸಂಸ್ಥೆಗಳಿಗೆ, ಅಧಿಕಾರಿಗಳಿಗೆ ಸ್ಯಾಟೆಲೈಟ್ ಫೋನ್ ವಿತರಿಸುವ ಕೇಂದ್ರ ಸರಕಾರದ ನಿರ್ಧಾರದ ಹಿನ್ನೆಲೆಯಲ್ಲಿರುವುದು ಇದೇ ಚಿಂತನೆ. ದೇಶವಿದೇಶಗಳ ಪ್ರತಿನಿಧಿಗಳನ್ನು ದೊಡ್ಡ ಸಂಖ್ಯೆಯಲ್ಲಿ ಆಕರ್ಷಿಸುವ ಪ್ರತಿಷ್ಠಿತ 'ಏರೋ ಇಂಡಿಯಾ' ನಿರ್ವಹಣೆಯಲ್ಲಿ ಸ್ಯಾಟೆಲೈಟ್ ಫೋನ್ ಬಳಕೆ ಆಗುತ್ತಿರುವುದೂ ಇದೇ ಕಾರಣಕ್ಕೆ.

ಉಪಯೋಗಗಳು ಬಹಳಷ್ಟಿವೆ ಎಂದಮಾತ್ರಕ್ಕೆ ಸ್ಯಾಟೆಲೈಟ್ ಫೋನಿನಲ್ಲಿ ಸಮಸ್ಯೆಗಳೇ ಇಲ್ಲ ಎನ್ನಲಾಗುವುದಿಲ್ಲ. ಈ ದೂರವಾಣಿ ವ್ಯವಸ್ಥೆಯಲ್ಲಿ ಬಳಕೆಯಾಗುವ ಉಪಗ್ರಹಗಳಲ್ಲಿ ಬಹುಪಾಲು ವಿದೇಶಿ ಒಡೆತನದವು. ಹೀಗಾಗಿ ನಮ್ಮ ಸರಕಾರ, ರಕ್ಷಣಾ ಸಂಸ್ಥೆಗಳು ಸ್ಯಾಟೆಲೈಟ್ ಫೋನ್ ಸಂವಹನದ ಮೇಲೆ ನಿಗಾ ವಹಿಸುವುದು - ಅವು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಬಳಕೆಯಾಗದಂತೆ ತಡೆಯುವುದು ಕಷ್ಟ. ಹೀಗಾಗಿಯೇ ನಮ್ಮ ದೇಶವೂ ಸೇರಿದಂತೆ ಜಗತ್ತಿನ ಹಲವೆಡೆ ಈ ಫೋನುಗಳ ಬಳಕೆಯ ಮೇಲೆ ಅನೇಕ ನಿರ್ಬಂಧಗಳನ್ನು ವಿಧಿಸಲಾಗಿದೆ. ಸದ್ಯ ನಮ್ಮ ದೇಶದಲ್ಲಿ ನಿರ್ದಿಷ್ಟ ಸಂಸ್ಥೆ ಒದಗಿಸುವ ಸ್ಯಾಟೆಲೈಟ್ ಫೋನ್ ಸೇವೆಯನ್ನು - ಅದೂ ಸರಕಾರ ಅನುಮತಿಸುವ ಉದ್ದೇಶಗಳಿಗೆ ಮಾತ್ರವೇ - ಬಳಸುವುದು ಸಾಧ್ಯ. 

ಫೆಬ್ರುವರಿ ೨೦, ೨೦೧೯ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge