ಕನ್ನಡದಲ್ಲಿ ಬಹುಸಮಯದಿಂದ ವಿಜ್ಞಾನದ ಕುರಿತ ಲೇಖನ-ಪುಸ್ತಕಗಳನ್ನು ಬರೆಯುತ್ತಿರುವ ಅಪರೂಪದ ಸಂವಹನಕಾರರು ಡಾ. ಬಿ. ಎಸ್. ಶೈಲಜಾ. ಪ್ರಸ್ತುತ ಇವರು ಬೆಂಗಳೂರಿನ ಜವಾಹರಲಾಲ್ ನೆಹರೂ ತಾರಾಲಯದ ನಿರ್ದೇಶಕಿಯಾಗಿದ್ದಾರೆ. ಪ್ರಮುಖ ಪತ್ರಿಕೆಗಳಲ್ಲಿ ಲೇಖನ-ಅಂಕಣಗಳಷ್ಟೇ ಅಲ್ಲದೆ ‘ಬಾನಿಗೊಂದು ಕೈಪಿಡಿ’, ‘ಸಫಾರಿ ಎಂಬ ಲಕ್ಷುರಿ’, ‘ಶುಕ್ರಗ್ರಹದ ಸಂಕ್ರಮಣ’, ‘ಆಗಸದ ಅಲೆಮಾರಿಗಳು’, ‘ಏನು...? ಗಣಿತ ಅಂದ್ರಾ...?’ ಮುಂತಾದ ಹಲವು ಪುಸ್ತಕಗಳನ್ನೂ ರಚಿಸಿದ್ದರೆ. ಇವರ ‘ಶುಕ್ರಗ್ರಹದ ಸಂಕ್ರಮಣ’ ಹಾಗೂ ‘ಆಗಸದ ಅಲೆಮಾರಿಗಳು’ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ. ೨೦೧೩ರಲ್ಲಿ ಬಿಡುಗಡೆಯಾದ 'ಬಾಲಂಕೃತ ಚುಕ್ಕಿ: ಧೂಮಕೇತು' ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದ ‘ಹಸೂಡಿ ವೆಂಕಟಾಚಲಶಾಸ್ತ್ರಿ ವಿಜ್ಞಾನ ಸಾಹಿತ್ಯ ಪ್ರಶಸ್ತಿ’ ದೊರೆತಿದೆ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ನಾನು ಮೂಲತಃ ವಿಜ್ಞಾನಿ; ಸಂವಹನ ನನ್ನ ಕ್ಷೇತ್ರವಲ್ಲ. ಆದರೆ ಕನ್ನಡದ ಮಕ್ಕಳ ಬಗ್ಗೆ ಕಾಳಜಿ, ಅವರಿಗೆ ಅತ್ಯುತ್ತಮ ಪುಸ್ತಕಗಳನ್ನು ತಲುಪಿಸಬೇಕು ಎಂಬ ಆಸಕ್ತಿ ಮತ್ತು ಬಾಲ್ಯದಲ್ಲಿ ಓದಿದ್ದ ಅನೇಕ ಪುಸ್ತಕಗಳ ಪ್ರಭಾವ ನನ್ನನ್ನು ಬರೆಯುವಂತೆ ಪ್ರೇರೇಪಿಸಿತು.
ನೀವು ಮೆಚ್ಚುವ / ನಿಮ್ಮ ಮೇಲೆ ಪ್ರಭಾವ ಬೀರಿದ ಇತರ ವಿಜ್ಞಾನ ಸಂವಹನಕಾರರು ಯಾರು?
ಕನ್ನಡದಲ್ಲಿ ಪಾ ವೆಂ ಆಚಾರ್ಯ, ಜಿ ಟಿ ನಾರಾಯಣರಾಯರು, ಶಿವರಾಮ ಕಾರಂತರು, ಬೆಳ್ಳಾವೆ ವೆಂಕಟನಾರಣಪ್ಪನವರು ಮತ್ತು ಈಚೆಗೆ ಟಿ. ಆರ್. ಅನಂತರಾಮು ಹಾಗೂ ನಾಗೇಶ ಹೆಗಡೆ. ಅಲ್ಲದೆ ನೀವು ಕೇಳಿರದ ಹೆಸರುಗಳೂ ಇವೆ - ಆನಂದ ವರ್ಟಿ, ವೆಲ್ಲಾಲ ಸತ್ಯಂ, ಹೀಗೆ.
ಮುಖ್ಯವಾಗಿ ಇವರು ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಬರೆಯುತ್ತಾರೆ ಎಂಬುದು ಗಮನಿಸಬೇಕಾದ ಅಂಶ.
ಇಂಗ್ಲಿಷಿನಲ್ಲಿ ಹೆಚ್ಚೂಕಡಿಮೆ ಎಲ್ಲ ಖ್ಯಾತನಾಮರ ಪುಸ್ತಕಗಳನ್ನೂ ಓದಿದ್ದೇನೆ. ಅಂಕಣಗಳನ್ನು ಬರೆಯುತ್ತಿದ್ದ ಹಾಲ್ಡೇನ್ ಮುಂತಾದ ವಿದೇಶೀಯರ ಲೇಖನಗಳು ಬಹಳ ಇಷ್ಟವಾಗುತ್ತಿದ್ದವು. ಉಳಿದ ಹೆಸರುಗಳು ನೆನಪಿಗೆ ಬರುತ್ತಿಲ್ಲ.
ನಿಮ್ಮ (ಹಾಗೂ ಇತರ ಸಂವಹನಕಾರರ) ಕೆಲಸವನ್ನು ಸಮಾಜ ಹೇಗೆ ಸ್ವೀಕರಿಸುತ್ತಿದೆ?
ಇದಕ್ಕೆ ಅಳತೆಗೋಲು ಇಲ್ಲ. ಎದುರಿಗೆ ಸಿಕ್ಕಾಗ ಹೇಳುವ ಔಪಚಾರಿಕ ಹೇಳಿಕೆಗಳಿಗೆ ನಾನು ಹೆಚ್ಚು ಬೆಲೆ ಕೊಡುವುದಿಲ್ಲ. ವಿಮರ್ಶೆಗಳು ಕೆಲವೊಮ್ಮೆ ಸಾಂಪ್ರದಾಯಿಕವಾಗಿ ಇರುತ್ತವೆ. ಆದರೆ ಕೆಲವರು ಪತ್ರ ಇಲ್ಲವೇ ಇಮೇಲ್ ಮೂಲಕ ಪ್ರಶ್ನೆಗಳನ್ನು ಕೇಳಿದಾಗ ಸಂತೋಷವಾಗುತ್ತದೆ.
ಈಗ ಸಂವಹನಕಾರರಿಗೂ ಅನುವಾದಕರಿಗೂ ಹೆಚ್ಚಿನ ವ್ಯತ್ಯಾಸ ಇಲ್ಲ. ಇದು ಓದುಗರನ್ನು ಆಕರ್ಷಿಸುವುದಿಲ್ಲ. ಬರೆಯುವವರು ಮೂಲತಃ ಅದೇ ಕ್ಷೇತ್ರದಲ್ಲಿ ಪರಿಣತಿ ಪಡೆದಿದ್ದರೆ ಲೇಖನ ಅಥವಾ ಪುಸ್ತಕದ ಗುಣಮಟ್ಟ ಉತ್ತಮವಾಗಿರುತ್ತದೆ.
ಈ ಕ್ಷೇತ್ರದಲ್ಲಿ ನೀವು ಮಾಡಬಯಸುವ ಮುಂದಿನ ಕೆಲಸ ಯಾವುದು?
ಕೆಲವು ಇಂಗ್ಲಿಷ್ ಪುಸ್ತಕಗಳನ್ನು ಕನ್ನಡಕ್ಕೆ ತರುವುದು. ಕನ್ನಡದ ಮಕ್ಕಳಿಗೆ ಇವು ದೊರಕದೆ ವಂಚನೆಯಾಗುತ್ತಿದೆ. ಈಚಿನ ಕೆಲವು ಅನುವಾದಗಳು ಓದುವ ಆಸಕ್ತಿಯನ್ನೇ ಅಳಿಸಿಹಾಕುತ್ತವೆ.
ವಿಜ್ಞಾನ ಸಂವಹನ ಹೊರತುಪಡಿಸಿ ನಿಮ್ಮ ಇತರ ಆಸಕ್ತಿಗಳು ಯಾವುವು?
ಪರಿಸರದಲ್ಲಿ ವಿಜ್ಞಾನದ ಅಂಶಗಳನ್ನು ಹುಡುಕುವುದು, ಸಣ್ಣಕತೆಗಳನ್ನು ಬರೆಯುವುದು ಹಾಗೂ ಸಂಗೀತ ಕೇಳುವುದು.
ಡಾ. ಶೈಲಜಾ ಅವರ ಪುಸ್ತಕಗಳನ್ನು ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
‘ಏನು...? ಗಣಿತ ಅಂದ್ರಾ...?’ ಕೃತಿಯ ಸಂಕ್ಷಿಪ್ತ ಪರಿಚಯ ಇಲ್ಲಿದೆ
ಕನ್ನಡದ ವಿಜ್ಞಾನ - ತಂತ್ರಜ್ಞಾನ ಸಂವಹನಕಾರರು ಅವರ ಬರವಣಿಗೆಯ ಮೂಲಕ ಬಹಳಷ್ಟು ಓದುಗರಿಗೆ ಪರಿಚಿತರು. ಆದರೆ ವೈಯಕ್ತಿಕವಾಗಿ ಅವರ ಪರಿಚಯ ಬಹಳಷ್ಟು ಓದುಗರಿಗೆ ಇರುವುದಿಲ್ಲ. ಈ ಕೊರತೆಯನ್ನು ಹೋಗಲಾಡಿಸುವ ದೃಷ್ಟಿಯಿಂದ ಇಜ್ಞಾನ ಡಾಟ್ ಕಾಮ್ ಪ್ರಾರಂಭಿಸಿರುವ ಸಂದರ್ಶನ ಸರಣಿಯೇ 'ಪೆನ್ ಸ್ಟಾಂಡ್'. ಈ ಸರಣಿಯ ಬಗ್ಗೆ ನಿಮ್ಮ ಅನಿಸಿಕೆ - ಅಭಿಪ್ರಾಯಗಳಿಗೆ ಹಾರ್ದಿಕ ಸ್ವಾಗತ!
ಪೆನ್ ಸ್ಟಾಂಡ್ ಸಂದರ್ಶನ ಸರಣಿಯಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳೂ ಸಂದರ್ಶಿತರ ವೈಯಕ್ತಿಕ ಅನಿಸಿಕೆಗಳು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ