ಶುಕ್ರವಾರ, ಅಕ್ಟೋಬರ್ 17, 2014

ಗಾಯತ್ರಿ ಮೂರ್ತಿ ಹೇಳುತ್ತಾರೆ... "ಯಾವುದೇ ಕಾರ್ಯವನ್ನು ಪ್ರತಿಫಲಾಪೇಕ್ಷೆಯಿಲ್ಲದೆ ಮಾಡಿದಾಗಲೇ ಅದು ಉತ್ತಮವಾಗಿ ನಡೆಯಲು ಸಾಧ್ಯ"

ನಾವೆಲ್ಲ ಕ್ಲಿಷ್ಟವೆಂದು ಭಾವಿಸುವ ಭೌತವಿಜ್ಞಾನದಂತಹ ವಿಷಯವನ್ನೂ ಸರಳವಾಗಿ ಹೇಳಬಹುದೆಂದು ತೋರಿಸಿಕೊಟ್ಟವರಲ್ಲಿ ಶ್ರೀಮತಿ ಗಾಯತ್ರಿ ಮೂರ್ತಿಯವರು  ಒಬ್ಬರು. ಮೈಸೂರು ವಿವಿಯಿಂದ ಭೌತವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಗಾಯತ್ರಿಯವರು ಮೂರು ದಶಕಗಳ ಅಧ್ಯಾಪನದ ನಂತರ ನಿವೃತ್ತರಾಗಿದ್ದಾರೆ. ಗಾಳಿ, ಶಾಖ, ನೀರು, ಬೆಳಕು ಹಾಗೂ ಶಬ್ದಲೋಕ ಎನ್ನುವ ಕೃತಿಗಳು ಹತ್ತಕ್ಕೂ ಹೆಚ್ಚು ಮುದ್ರಣ ಕಂಡಿವೆ. ನಿಶ್ಶಬ್ದದೊಳಗಿನ ಶಬ್ದ, ದೀಪಗಳು, ಎಕ್ಸ್ ಕಿರಣಗಳ ಅದೃಶ್ಯಲೋಕ - ಇವು ಗಾಯತ್ರಿ ಮೂರ್ತಿಯವರ ಇತರ ಕೃತಿಗಳಲ್ಲಿ ಕೆಲವು. ವಿಜ್ಞಾನ ಸಂವಹನದ ಜೊತೆಗೆ ಮಕ್ಕಳ ಸಾಹಿತ್ಯ ಹಾಗೂ ಲಲಿತಪ್ರಬಂಧಗಳ ರಚನೆಯಲ್ಲೂ ಗಾಯತ್ರಿಯವರಿಗೆ ಆಸಕ್ತಿಯಿದೆ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ..  

ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ನಾನು ಕಾಲೇಜಿನಲ್ಲಿ ಭೌತವಿಜ್ಞಾನದ ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದೆ. ವಿಜ್ಞಾನ ಬೋಧನೆ ಕೂಡ ವಿಜ್ಞಾನ ಸಂವಹನ ಅಲ್ಲವೇ? ಮಕ್ಕಳಿಗಾಗಿ ಬರೆಯಲಾದ ವಿಜ್ಞಾನದ ಪುಸ್ತಕಗಳನ್ನು ಪರಿಶೀಲಿಸಿದಾಗ ಅನೇಕ ಪುಸ್ತಕಗಳಲ್ಲಿ ಮಕ್ಕಳಿಗೆ ಮಾಹಿತಿ ತಿಳಿಸುವ ಕಾತರ ಕಂಡು ಬಂತೇ ಹೊರತು ಮಾಹಿತಿ ತಿಳಿಸುವಲ್ಲಿ ಇರಬೇಕಾದ ವಿವೇಚನೆ, ಶಿಸ್ತು, ಭಾಷೆಯ ಸರಳತೆಗಳೆಲ್ಲ ಇಲ್ಲದಿರುವುದನ್ನು ಗಮನಿಸಿದೆ. ಆಗ ಮಕ್ಕಳಿಗೆ ಸುಲಭವಾಗಿ ಅರಿವಾಗುವಂತಹ ಸರಳ ಭಾಷೆಯಲ್ಲಿ ವಿಜ್ಞಾನ ಪುಸ್ತಕಗಳನ್ನು ಬರೆಯಬೇಕೆಂಬ ನಿರ್ಧಾರ ಮಾಡಿದೆ.
ಅಂತೆಯೇ ಮಕ್ಕಳಿಗಾಗಿ 'ಗಾಳಿ', 'ಶಾಖ', 'ನೀರು', 'ಬೆಳಕು', 'ಶಬ್ದಲೋಕ' ಎಂಬ ಐದು ಪುಸ್ತಕಗಳನ್ನು ಬರೆದೆ. ನಂತರವೂ ಕೆಲವು ವಿಜ್ಞಾನ ಪುಸ್ತಕಗಳನ್ನು ಬರೆದೆ. ನನಗೆ ಸಿಕ್ಕಿದ ಯಶಸ್ಸು ಹಾಗೂ ಪ್ರೋತ್ಸಾಹ ಬರವಣಿಗೆಯನ್ನು ಉತ್ಸಾಹದಿಂದ ಮುಂದುವರೆಸುವಂತೆ ಮಾಡಿದೆ.

ನೀವು ಮೆಚ್ಚುವ / ನಿಮ್ಮ ಮೇಲೆ ಪ್ರಭಾವ ಬೀರಿದ ಇತರ ವಿಜ್ಞಾನ ಸಂವಹನಕಾರರು ಯಾರು?
ತೊಂಬತ್ತರ ದಶಕದಲ್ಲಿ ಪ್ರೊ. ಯಶ್‌ಪಾಲ್‌ರವರು ನಡೆಸಿಕೊಡುತ್ತಿದ್ದ ವಿಜ್ಞಾನ ಕಾರ್ಯಕ್ರಮಗಳು ನನಗೆ ಅಚ್ಚುಮೆಚ್ಚಿನದಾಗಿದ್ದವು. ಡಾ.ಶಿವರಾಮ ಕಾರಂತ, ಪ್ರೊ. ಅಡ್ಯನಡ್ಕ ಕೃಷ್ಣಭಟ್, ಪ್ರೊ. ಜೆ. ಆರ್. ಲಕ್ಷ್ಮಣರಾವ್, ಪ್ರೊ. ಎಚ್. ಆರ್. ರಾಮಕೃಷ್ಣರಾವ್, ಶ್ರೀ ಟಿ. ಆರ್. ಅನಂತರಾಮು, ಶ್ರೀ ನಾಗೇಶ ಹೆಗಡೆ ಮುಂತಾದ ಅನೇಕರ ಕೃತಿಗಳು ಹಾಗೂ ಕಾರ್ಯವೈಖರಿಯನ್ನು ನಾನು ಮೆಚ್ಚುತ್ತೇನೆ.

ನಿಮ್ಮ (ಹಾಗೂ ಇತರ ಸಂವಹನಕಾರರ) ಕೆಲಸವನ್ನು ಸಮಾಜ ಹೇಗೆ ಸ್ವೀಕರಿಸುತ್ತಿದೆ?
ಯಾವುದೇ ಕಾರ್ಯವನ್ನು ಪ್ರತಿಫಲಾಪೇಕ್ಷೆಯಿಲ್ಲದೆ ಮಾಡಿದಾಗಲೇ ಅದು ಉತ್ತಮವಾಗಿ ನಡೆಯಲು ಸಾಧ್ಯ. ವಿಜ್ಞಾನ ಸಂವಹನ ಕಾರ್ಯವೂ ಹಾಗೆಯೇ ಅಲ್ಲವೇ?

ಆದರೂ ಮಾಡಿದ ಕೆಲಸಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಾಗ ಕೆಲಸ ಮಾಡುವ ಉತ್ಸಾಹ ಹೆಚ್ಚುವುದು, ಸಾರ್ಥಕ ಭಾವನೆ ಮೂಡುವುದು ಸಹಜ. ಆ ದೃಷ್ಟಿಯಿಂದ ಹೇಳುವುದಾದರೆ ನನ್ನ ಮಕ್ಕಳ ಪುಸ್ತಕಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅನೇಕ ಉತ್ತಮ ಬರಹಗಾರರು ಇಂದು ವಿವಿಧ ಶಾಖೆಯ ವಿಜ್ಞಾನ ಪುಸ್ತಕಗಳು, ವೈದ್ಯಕೀಯ ಪುಸ್ತಕಗಳನ್ನು ಬರೆಯಲು ತೊಡಗಿರುವುದು, ಜನಪ್ರಿಯ ಪತ್ರಿಕೆಗಳು ವಿಜ್ಞಾನ ಲೇಖನಗಳನ್ನು ಪ್ರಕಟಿಸುವುದು, ಆಕಾಶವಾಣಿ ವಿಜ್ಞಾನ ಕಾರ್ಯಕ್ರಮಗಳನ್ನು ನಡೆಸಿಕೊಡುವುದು - ಇವೆಲ್ಲ ಜನರಿಗೆ ವಿಜ್ಞಾನ ವಿಷಯಗಳ ಬಗ್ಗೆ ಇರುವ ಆಸಕ್ತಿಯನ್ನು ನಿರೂಪಿಸುತ್ತದೆ ಎಂದು ನಾನು ಭಾವಿಸುತ್ತೇನೆ.

ಈ ಕ್ಷೇತ್ರದಲ್ಲಿ ನೀವು ಮಾಡಬಯಸುವ ಮುಂದಿನ ಕೆಲಸ ಯಾವುದು?
ನಾನು ಮಾಡಬಲ್ಲೆ ಎನ್ನಿಸುವ ಯಾವುದೇ ರೀತಿಯ ವಿಜ್ಞಾನ ಸಂವಹನ ಕಾರ್ಯಕ್ಕೂ ನಾನು ಸಿದ್ಧ. ಆದರೂ ಬರವಣಿಗೆಯೇ ನನ್ನ ಮೊದಲ ಆದ್ಯತೆ. ಭೌತವಿಜ್ಞಾನವೆಂದರೆ ಕಬ್ಬಿಣದ ಕಡಲೆ ಎಂದು ಭಾವಿಸುವವರ ತಪ್ಪುಕಲ್ಪನೆಯನ್ನು ನಿವಾರಿಸಲು ನಿತ್ಯ ಜೀವನದಲ್ಲಿ ಭೌತವಿಜ್ಞಾನ ಹೇಗೆ ಹಾಸು ಹೊಕ್ಕಾಗಿದೆ ಎಂಬುದರ ಬಗ್ಗೆ ಬರೆಯುವ ಆಸಕ್ತಿ ಇದೆ. ಹಾಗೆಯೇ ಮಕ್ಕಳಿಗಾಗಿ ಕೆಲವು ವಿಜ್ಞಾನ ಪುಸ್ತಕಗಳು ಹಾಗೂ ವಿಜ್ಞಾನ  ಕಥಾಸಂಕಲನವನ್ನೂ ಬರೆಯಬೇಕೆಂಬ ಆಸೆ ಇದೆ.

ನಮ್ಮ ದೂರದರ್ಶನದಲ್ಲಿ  ವಿಜ್ಞಾನ ಕಾರ್ಯಕ್ರಮಗಳಿಗೆ ಸ್ಥಾನವಿಲ್ಲದಿರುವುದು ವಿಷಾದನೀಯ. ಪ್ರೊ. ಯಶ್‌ಪಾಲ್‌ರವರು ನಡೆಸಿಕೊಡುತ್ತಿದ್ದಂತಹ ಕಾರ್ಯಕ್ರಮಗಳು ದೂರದರ್ಶನದಲ್ಲಿ ಪ್ರಸಾರವಾಗಲಿ ಎಂದು ನನ್ನ ಆಸೆ. ಅಂತಹ ಕಾರ್ಯಕ್ರಮಗಳನ್ನು ನಡೆಸಿಕೊಡಲು ನಮ್ಮ ಯುವ ವಿಜ್ಞಾನ ಬರಹಗಾರರು ಮುಂದೆ ಬರಬೇಕು.

ವಿಜ್ಞಾನ ಸಂವಹನ ಹೊರತುಪಡಿಸಿ ನಿಮ್ಮ ಇತರ ಆಸಕ್ತಿಗಳು ಯಾವುವು?
ನನಗೆ ಲಲಿತ ಪ್ರಬಂಧ ರಚನೆ ಇಷ್ಟ. 'ಕೋಸಂಬರಿ' ಎಂಬ ಲಲಿತ ಪ್ರಬಂಧಗಳ ಪುಸ್ತಕ ರಚಿಸಿ ಪ್ರಕಟಿಸಿದ್ದೇನೆ. ಈಗ ನನ್ನ ಲೇಖನಿಯಿಂದ 'ಹುರಿಗಾಳು' ತಯಾರಾಗಿದೆ; ಸದ್ಯದಲ್ಲೇ ಪ್ರಕಟವಾಗಲಿದೆ.

ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದ ಮಾಡುವುದು ಇತ್ತೀಚೆಗೆ ಬೆಳೆಸಿಕೊಂಡ ಆಸಕ್ತಿ. ಆ ಕ್ಷೇತ್ರದಲ್ಲೂ ಹೆಚ್ಚು ತೊಡಗಿಕೊಳ್ಳುವ ಮನಸ್ಸಿದೆ. ನನಗೆ ತೋಟಗಾರಿಕೆಯಲ್ಲಿ ಆಸಕ್ತಿ. ಅನೇಕ ಕಾರಣಗಳಿಂದ ಆ ಹವ್ಯಾಸಕ್ಕೆ ಕತ್ತರಿ ಬಿತ್ತು. ಮತ್ತೆ ಅದನ್ನು ಸ್ವಲ್ಪ ಮಟ್ಟಿಗಾದರೂ ಬೆಳೆಸಿಕೊಳ್ಳಬೇಕೆಂಬ ಹಂಬಲವಿದೆ.

ಗಾಯತ್ರಿ ಮೂರ್ತಿಯವರ 'ಎಕ್ಸ್ ಕಿರಣಗಳ ಅದೃಶ್ಯ ಲೋಕ' ಕೃತಿ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

'ಕಣಜ' ಅಂತರಜಾಲ ಕನ್ನಡ ಜ್ಞಾನಕೋಶದಲ್ಲಿ ಗಾಯತ್ರಿ ಮೂರ್ತಿಯವರ ಕುರಿತು ಪ್ರಕಟವಾಗಿರುವ ಲೇಖನವನ್ನು ಇಲ್ಲಿ ಓದಬಹುದು
ಕನ್ನಡದ ವಿಜ್ಞಾನ - ತಂತ್ರಜ್ಞಾನ ಸಂವಹನಕಾರರು ಅವರ ಬರವಣಿಗೆಯ ಮೂಲಕ ಬಹಳಷ್ಟು ಓದುಗರಿಗೆ ಪರಿಚಿತರು. ಆದರೆ ವೈಯಕ್ತಿಕವಾಗಿ ಅವರ ಪರಿಚಯ ಬಹಳಷ್ಟು ಓದುಗರಿಗೆ ಇರುವುದಿಲ್ಲ. ಈ ಕೊರತೆಯನ್ನು ಹೋಗಲಾಡಿಸುವ ದೃಷ್ಟಿಯಿಂದ ಇಜ್ಞಾನ ಡಾಟ್ ಕಾಮ್ ಪ್ರಾರಂಭಿಸಿರುವ ಸಂದರ್ಶನ ಸರಣಿಯೇ 'ಪೆನ್ ಸ್ಟಾಂಡ್'. ಈ ಸರಣಿಯ ಬಗ್ಗೆ ನಿಮ್ಮ ಅನಿಸಿಕೆ - ಅಭಿಪ್ರಾಯಗಳಿಗೆ ಹಾರ್ದಿಕ ಸ್ವಾಗತ!
ಪೆನ್‌ ಸ್ಟಾಂಡ್ ಸಂದರ್ಶನ ಸರಣಿಯಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳೂ ಸಂದರ್ಶಿತರ ವೈಯಕ್ತಿಕ ಅನಿಸಿಕೆಗಳು.

ಕಾಮೆಂಟ್‌ಗಳಿಲ್ಲ:

badge