ಟಿ ಜಿ ಶ್ರೀನಿಧಿ
ಮಹಾನಗರಗಳಲ್ಲಿ ಮೊದಲು ಪ್ರಾರಂಭವಾದ ಸೂಪರ್ ಮಾರ್ಕೆಟ್ ಸಂಸ್ಕೃತಿ ಈಗ ಸಣ್ಣಪುಟ್ಟ ಊರುಗಳಲ್ಲೂ ಕಾಣಿಸಿಕೊಳ್ಳಲು ಶುರುವಾಗಿದೆ. ದೊಡ್ಡದೊಡ್ಡ ಅಂಗಡಿಗಳಲ್ಲಿ ನಮಗೆ ಬೇಕಾದ ವಸ್ತುಗಳನ್ನು ಹೊರಗಡೆಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸುವ ಅವಕಾಶ ಕೊಡುವ ಈ ಸೂಪರ್‌ಮಾರ್ಕೆಟ್‌ಗಳು ಬಹುತೇಕ ಎಲ್ಲರಿಗೂ ಅಚ್ಚುಮೆಚ್ಚು. ಆದರೆ ಈ ಜನಪ್ರಿಯತೆಯ ಜೊತೆಗೇ ಒಂದು ಸಮಸ್ಯೆ ಕೂಡ ಹುಟ್ಟಿಕೊಂಡಿದೆ. ಅನೇಕ ಸಂದರ್ಭಗಳಲ್ಲಿ ಸೂಪರ್‌ಮಾರ್ಕೆಟ್‌ಗಳಲ್ಲಿ ಅದೆಷ್ಟು ಜನಸಂದಣಿ ಇರುತ್ತದೆಂದರೆ ಸಾಮಾನು ಕೊಳ್ಳುವುದಕ್ಕಿಂತ ಹೆಚ್ಚಿನ ಸಮಯ ಅದಕ್ಕಾಗಿ ಹಣ ಪಾವತಿಸಲು ಬೇಕಾಗುತ್ತದೆ.
ಆದರೆ ಸಾಮಾನುಗಳನ್ನು ಆಯ್ದುಕೊಂಡ ಮೇಲೆ ಬಿಲ್ ಮಾಡಿಸಿ ಹಣ ಪಾವತಿಸಲು ಕಾಯುವ ಬದಲು ಸಾಮಾನುಗಳನ್ನೆಲ್ಲ ತೆಗೆದುಕೊಂಡು ಸೀದಾ ಮನೆಗೆ ಬಂದುಬಿಡುವ ಹಾಗಿದ್ದರೆ?
ಇದೇನು ವಿಚಿತ್ರಾನಪ್ಪಾ ಎಂದು ನೀವು ಕೇಳುವ ಮೊದಲೇ ಹೇಳಿಬಿಡುತ್ತೇನೆ, ಕೇಳಿ: ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ ಅಥವಾ ಆರ್‌ಎಫ್‌ಐಡಿ ಎಂಬ ತಂತ್ರಜ್ಞಾನದ ಸಹಾಯದಿಂದ ಈ ಕನಸನ್ನು ನನಸು ಮಾಡುವುದು ಸಾಧ್ಯ!
ಈಗ ಚಾಲ್ತಿಯಲ್ಲಿರುವ ಯೂನಿವರ್ಸಲ್ ಪ್ರಾಡಕ್ಟ್ ಕೋಡ್ (ಯುಪಿಸಿ) ’ಬಾರ್ ಕೋಡ್’ ನಿಮಗೆ ಪರಿಚಯವಿರಬೇಕು: ಈ ಬಾರ್ ಕೋಡ್‌ಗಳಲ್ಲಿ ದಪ್ಪ-ಸಣ್ಣ ಗೆರೆಗಳ ಸಂಯೋಜನೆಯಿಂದ ಯಾವುದೇ ವಸ್ತುವಿನ ಬೆಲೆಯನ್ನು ಪ್ರತಿನಿಧಿಸಲಾಗುತ್ತದೆ. ಸೂಪರ್‌ಮಾರ್ಕೆಟ್‌ಗಳಲ್ಲಿ ಬಳಕೆಯಾಗುವ ಪುಟ್ಟ ಸ್ಕ್ಯಾನರ್‌ಗಳು ಈ ಗೆರೆಗಳನ್ನು ಅರ್ಥೈಸಿಕೊಂಡು ನೀವು ಕೊಂಡ ಸಾಮಾನುಗಳ ಬಿಲ್ ತಯಾರಿಸುತ್ತವೆ.
ಇಂತಹ ಬಾರ್ ಕೋಡ್‌ಗಳ ಬದಲು ಅತ್ಯಾಧುನಿಕ ತಂತ್ರಜ್ಞಾನದ ಆರ್‌ಎಫ್‌ಐಡಿ ಟ್ಯಾಗ್‌ಗಳು ಅತಿ ಶೀಘ್ರದಲ್ಲೇ ಬಳಕೆಗೆ ಬರಲಿವೆಯಂತೆ. ಈ ಟ್ಯಾಗ್‌ಗಳ ಬಳಕೆಯಿಂದ ನಮ್ಮ ಶಾಪಿಂಗ್ ಅನುಭವ ಬಹಳ ರೋಚಕವಾಗಿ ಪರವರ್ತನೆಗೊಳ್ಳಲಿದೆ ಎನ್ನುವುದು ತಜ್ಞರ ಹೇಳಿಕೆ.
ಈ ಆರ್‌ಎಫ್‌ಐಡಿ ಟ್ಯಾಗ್‌ಗಳು ಒಂದು ನಿರ್ದಿಷ್ಟ ಪ್ರಮಾಣದ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳುವ ಹಾಗೂ ಆ ಮಾಹಿತಿಯನ್ನು ರೇಡಿಯೋ ಸಂಕೇತಗಳ ಮೂಲಕ ಬಿತ್ತರಿಸುವ ಶಕ್ತಿಯನ್ನು ಹೊಂದಿರುತ್ತವೆ. ಇಂತಹ ಟ್ಯಾಗ್‌ಗಳು ಹಾಗೂ ಅವು ಬಿತ್ತರಿಸುವ ಸಂಕೇತಗಳನ್ನು ಅರ್ಥಮಾಡಿಕೊಳ್ಳಬಲ್ಲ ಗ್ರಾಹಕ(ರೀಡರ್)ಗಳ ನೆರವಿನಿಂದ ಅಪೂರ್ವವಾದ ವ್ಯವಸ್ಥೆಯೊಂದನ್ನು ರೂಪಿಸಬಹುದು.
ನಾವೆಲ್ಲರೂ ನಮ್ಮ ಮನೆಗಳಿಗೆ ಹಾಲಿನ ಪೊಟ್ಟಣಗಳನ್ನು ತರಿಸಿಕೊಳ್ಳುವುದು ಸಾಮಾನ್ಯ ತಾನೆ? ಇಂತಹ ಹಾಲಿನ ಪೊಟ್ಟಣಗಳನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ.
ಡೈರಿಯಲ್ಲಿ ಹಾಲಿನ ಪ್ಯಾಕಿಂಗ್ ನಡೆಯುವಾಗ ಆ ಪೊಟ್ಟಣಗಳಲ್ಲಿ ಒಂದೊಂದು ಆರ್‌ಎಫ್‌ಐಡಿ ಟ್ಯಾಗ್‌ಗಳನ್ನು ಅಳವಡಿಸುತ್ತಾರೆ ಎಂದಿಟ್ಟುಕೊಳ್ಳೋಣ. ಪ್ಯಾಕ್ ಮಾಡಿದ ದಿನಾಂಕ, ಹಾಲಿನ ಪ್ರಮಾಣ, ಆ ಹಾಲನ್ನು ಎಷ್ಟು ದಿನಗಳ ಒಳಗೆ ಉಪಯೋಗಿಸಬೇಕು ಎಂಬಂತಹ ಮಾಹಿತಿಯನ್ನೆಲ್ಲ ಈ ಟ್ಯಾಗ್‌ಗಳಲ್ಲಿ ಶೇಖರಿಸಲಾಗುತ್ತದೆ. ಡೈರಿಯಿಂದ ಹೊರಟ ಈ ಪೊಟ್ಟಣಗಳು ಒಂದು ಸೂಪರ್‌ಮಾರ್ಕೆಟ್‌ಗೆ ಬರುತ್ತವೆ. ಈ ಟ್ಯಾಗ್‌ಗಳಿಂದ ಪ್ರಸಾರವಾಗುವ ಮಾಹಿತಿಯನ್ನು ಅಲ್ಲಿರುವ ರೀಡರ್‌ಗಳು ತಕ್ಷಣವೇ ಗ್ರಹಿಸಿ ಈಗ ಸೂಪರ್‌ಮಾರ್ಕೆಟ್‌ನಲ್ಲಿ ಎಷ್ಟು ಹಾಲಿನ ಪೊಟ್ಟಣಗಳು ದಾಸ್ತಾನಾಗಿವೆ ಎಂಬುದನ್ನು ದಾಖಲಿಸುತ್ತವೆ.
ನಂತರ ನೀವು ಸೂಪರ್‌ಮಾರ್ಕೆಟ್‌ಗೆ ಬಂದು ಹಾಲು ಖರೀದಿಸುತ್ತೀರಿ ಎಂದುಕೊಳ್ಳೋಣ. ಇಲ್ಲಿ ’ಖರೀದಿಸುವುದು’ ಎಂದರೆ ಬಹಳ ಸುಲಭ - ಹಾಲಿನ ಪೊಟ್ಟಣ ಕೈಗೆತ್ತಿಕೊಂಡು ಸೀದಾ ಆಚೆಗೆ ಬರುವುದು ಅಷ್ಟೆ! ನೀವು ಹಾಲಿನ ಪೊಟ್ಟಣದೊಡನೆ ಅಂಗಡಿಯಿಂದ ಹೊರಟ ತಕ್ಷಣ ಕಾರ್ಯಪ್ರವೃತ್ತವಾಗುವ ರೀಡರ್‌ಗಳು ಆ ಹಾಲಿನ ಪೊಟ್ಟಣದ ಬೆಲೆಯನ್ನು ನಿಮ್ಮ ಬ್ಯಾಂಕಿನ ಖಾತೆಯಿಂದ ವರ್ಗಾಯಿಸಿಕೊಳ್ಳುತ್ತವೆ. ದಾಸ್ತಾನಿನಲ್ಲಿದ್ದ ಪೊಟ್ಟಣಗಳ ಪೈಕಿ ಒಂದು ಖರ್ಚಾಯಿತು ಎಂಬುದನ್ನೂ ದಾಖಲಿಸಿಕೊಳ್ಳುತ್ತವೆ.
ನೀವು ಮನೆಗೆ ಬಂದು ಆ ಪೊಟ್ಟಣವನ್ನು ಫ್ರಿಜ್‌ನಲ್ಲಿ ಇಟ್ಟ ತಕ್ಷಣವೇ ಅಲ್ಲಿರುವ ರೀಡರ್ ಹಾಲಿನ ಪ್ರಮಾಣ, ಅದನ್ನು ಯಾವತ್ತಿನ ಮುಂಚೆ ಉಪಯೋಗಿಸಬೇಕು ಮುಂತಾದ ವಿವರಗಳನ್ನೆಲ್ಲ ಗ್ರಹಿಸಿಕೊಳ್ಳುತ್ತದೆ. ಇಲ್ಲಿಂದ ಮುಂದಕ್ಕೆ ಹಾಲು ಹಳೆಯದಾಗಿದೆ, ಅಥವಾ ಮುಗಿದುಹೋಗಿದೆ ಮುಂತಾದ ವಿವರಗಳನ್ನೆಲ್ಲ ನಿಮ್ಮ ಫ್ರಿಜ್ ನಿಮಗೆ ಹೇಳುತ್ತದೆ!
ಮುಂಬರುವ ದಿನಗಳಲ್ಲಿ ಆರ್‌ಎಫ್‌ಐಡಿ ಟ್ಯಾಗ್‌ಗಳ ಈ ರೋಚಕ ಜಗತ್ತು ಇನ್ನೂ ಹೆಚ್ಚಿನ ಬದಲಾವಣೆಗಳನ್ನು ಕಾಣಲಿದೆ ಎಂಬುದು ವಿಜ್ಞಾನಿಗಳ ಹೇಳಿಕೆ. ಇಂಥ ಉಪಕರಣಗಳ ಬಳಕೆ ಹಾಗೂ ಉತ್ಪಾದನೆ ಇದೇ ಪ್ರಮಾಣದಲ್ಲಿ ಹೆಚ್ಚುತ್ತಾ ಹೋದಾಗ ಅವುಗಳ ಉತ್ಪಾದನಾ ವೆಚ್ಚ ಗಣನೀಯವಾಗಿ ಕಡಿಮೆಯಾಗಲಿದೆ; ಆಗ ಪಕ್ಕದ ಬೀದಿಯ ತರಕಾರಿ ಅಂಗಡಿಯವನೂ ಇವನ್ನು ಉಪಯೋಗಿಸಲು ಶುರುಮಾಡುತ್ತಾನೆ!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ