ಬುಧವಾರ, ಆಗಸ್ಟ್ 12, 2009

ವಸುಂಧರೆಯ ಒಡಲು – ಕೋಟಿ ಜೀವಿಗಳ ಮಡಿಲು

ಬೇಳೂರು ಸುದರ್ಶನ

ಕಾಡು ಕಡಿದ ಮೇಲೆ ಅಲ್ಲಿ ಪ್ರಾಣಿಗಳು ಬದುಕಿವೆಯೆ ಎಂದು ನೀವು ಅಚ್ಚರಿಪಡುತ್ತಿರುವ ಈ ಹೊತ್ತಿನಲ್ಲೇ ಮಡಗಾಸ್ಕರ್‌ನಿಂದ ಒಂದು ತಾಜಾ ಸುದ್ದಿ ಬಂದಿದೆ. ಮರಗಳ ಮೇಲೇ ಬದುಕುತ್ತಿದ್ದ ಒಂದು ವಿಶಿಷ್ಟ ಬಾವಲಿಯು ಈಗ ಒಂದು ಗಿಡದ ದೊಡ್ಡ ಎಲೆಗಳ ಮೇಲೆ ಅಂಟಿಕೊಳ್ಳುವುದಕ್ಕೆ ಬೇಕಾದ ರೂಪಾಂತರ ಮಾಡಿಕೊಂಡಿದೆ. ಮಡಗಾಸ್ಕರ್‌ನಲ್ಲಿ ಕೇವಲ ಶೇ. ೬ರಷ್ಟು ಪ್ರದೇಶ ಮಾತ್ರ ಕಾಡು. ಉಳಿದದ್ದೆಲ್ಲ ಮನುಕುಲದ, ನಾಗರಿಕತೆಯ ಜಾಡು. ಇಂಥ ಅರಣ್ಯನಾಶದಿಂದ ತಪ್ಪಿಸಿಕೊಳ್ಳಲೆಂದೇ ಈ ಬಾವಲಿಯು ತನ್ನ ಕಾಲಿನಲ್ಲಿ ಅಂಟುರಸ ಸ್ರವಿಸಿಕೊಂಡು ಎಲೆಗೆ ಅಂಟಿಕೊಳ್ಳುವುದಕ್ಕೆ ಸಜ್ಜಾಗಿದೆ.
ಪೂರ್ತಿ ನಾಶವಾದ ಕಾಡಿನಿಂದಲೇ ಬದುಕಿ ಮೇಲೆದ್ದಿರುವ ಈ ಬಾವಲಿಯನ್ನು ವಿನಾಶದ ಅಂಚಿನಲ್ಲಿರುವ ಪ್ರಾಣಿಸಂಕುಲಕ್ಕೆ ಸೇರಿಸಲಾಗದು ಎಂದು ಈ ಬಾವಲಿಯನ್ನು ಹುಡುಕಿದ ಸ್ಟೀವ್ ಗುಡ್‌ಮನ್ ಹೇಳುತ್ತಾನೆ. ಮೈಝೋಪೋಡಾ ಶ್ಲೀಮಾನ್ನಿ ಎಂಬ ಹೆಸರಿನ ಈ ಬಾವಲಿಯನ್ನು ಹುಡುಕಿದ ಚಿಕಾಗೋದ ಫೀಲ್ಡ್ ಮ್ಯೂಸಿಯಂ ತಂಡದಲ್ಲಿದ್ದ ಗುಡ್‌ಮನ್ ಹೇಳುವಂತೆ ಈ ಬಾವಲಿಯು ನಾಗರಿಕತಯ ಅಟಾಟೋಪಗಳಿಂದ ಪಾರಾಗಲೆಂದೇ ಅಂಟು ತಯಾರಿಸಿಕೊಂಡಿದೆ. ತೀರ ಇತ್ತೀಚೆಗಿನ ಬೆಳವಣಿಗೆ ಇದು.
ಪಶ್ಚಿಮ ಘಟ್ಟದಲ್ಲಿ ಈ ಬಾವಲಿ ಇದ್ದರೆ ಪೂರ್ವದಲ್ಲಿ ಮೈಝೋಪೋಡಾ ಆರಿಟಾ ಎಂಬ ಬಾವಲಿ ಇದೆ. ಅಂತೂ ಶ್ಲೀಮಾನ್ನಿ ಈಗ ಈ ಗುಂಪಿನ ಎರಡನೇ ಸದಸ್ಯ!

ಮಡಗಾಸ್ಕರ್‌ನ ಕಾಡುಪಾಪಗಳು

ಸ್ಟೀವ್ ಗುಡ್‌ಮನ್ ಹೀಗೆ ಹೊಸ ಜೀವಿಗಳನ್ನು ಪತ್ತೆ ಮಾಡುತ್ತಲೇ ಎರಡು ದಶಕ ಕಳೆದಿದ್ದಾನೆ. ಮಡಗಾಸ್ಕರ್‌ನಲ್ಲೇ ಒಂದೂವರೆ ವರ್ಷದ ಹಿಂದೆ ಕಂಡ ಎರಡು ಹೊಸ ಕಾಡುಪಾಪಗಳಿಗೆ ಅವನ ಹೆಸರನ್ನೇ ಇಡಲಾಗಿದೆ. ಇಷ್ಟು ದಿನ ಕೇವಲ ೪೭ ಬಗೆಯ ಕಾಡುಪಾಪಗಳಿದ್ದವು; ಈಗ ಈ ಸಂಖ್ಯೆ ೪೮ಕ್ಕೆ ಹೆಚ್ಚಿತು. ಮನುಷ್ಯನ ವಿಕಾಸವನ್ನು ತಿಳಿಯಲು ಈ ಕಾಡುಪಾಪಗಳು ತುಂಬಾ ಮುಖ್ಯವಂತೆ. ೧೬ ಕೋಟಿ ವರ್ಷಗಳ ಹಿಂದೆ ಮಡಗಾಸ್ಕರ್ ಆಫ್ರಿಕಾಕ್ಕೇ ಅಂಟಿಕೊಂಡಿತ್ತಂತೆ. ಆದು ಆರು ಕೋಟಿ ವರ್ಷಗಳ ಹಿಂದೆ ಬೇರ್ಪಟ್ಟಿತು. ಆಮೇಲೆ ಆಫ್ರಿಕಾದಲ್ಲಿ ಹೆಚ್ಚಿದ ಮಂಗಗಳು ಕಾಡುಪಾಪಗಳನ್ನು ಉಳಿಸಲೇ ಇಲ್ಲ. ಮಡಗಾಸ್ಕರ್ ಒಂದು ರೀತಿಯಲ್ಲಿ ಕಾಡುಪಾಪಗಳ ದ್ವೀಪವಾಗಿಬಿಟ್ಟಿತು! ಈಗ ನೋಡಿ, ಮಡಗಾಸ್ಕರ್ ಬಿಟ್ಟಂತೆ ಹೊರಜಗತ್ತಿನಲ್ಲಿ ಇರುವ ಕಾಡುಪಾಪಗಳ ಸಂಖ್ಯೆ ತೀರಾ ಕಮ್ಮಿ. ಮಿರ್ಝಾ ಜಾಜಾ ಮತ್ತು ಮೈಕ್ರೋಸಿಬಿಸ್ ಲೆಹಿಲಾಹಿತ್ಸಾರಾ ಹೆಸರಿನ ಈ ಕಾಡುಪಾಪಗಳು ಮಾನವನ ಕಥೆಗೂ ಸಾಕ್ಷಿ ಎಂದರೆ ಈ ಜೀವಿಗಳ ಮಹತ್ವವನ್ನು ಊಹಿಸಿ.

ಇತ್ತ ಆಫ್ರಿಕಾದಲ್ಲೇ, ತಾಂಜಾನಿಯಾದಲ್ಲಿ ಜಾಕ್ಸನ್ ಮುಂಗುಸಿ ಎಂಬ ಅತ್ಯಪರೂಪದ ಮುಂಗುಸಿ ಪತ್ತೆಯಾಗಿದೆ. ಇಷ್ಟು ದಿನ ಇದು ಕೇವಲ ಮ್ಯೂಸಿಯಂಗಳಲ್ಲಿ ಮಾದರಿಯಾಗಿ ಮಾತ್ರ ಕಂಡುಬಂದಿತ್ತು. ಬಿಳಿ ಬಾಲದ, ಹಳದಿ ಕುತ್ತಿಗೆಯ ಈ ಮುಂಗುಸಿ ನಿಶಾಚರಿ ಮೊದಲು ಕೇವಲ ಕೀನ್ಯಾದಲ್ಲಿ ಮಾತ್ರ ಇದೆ ಎಂದು ನಂಬಲಾಗಿತ್ತು.
ಈ ಮುಂಗುಸಿಯನ್ನು ಪತ್ತೆಮಾಡಿದ ತಂಡವೇ ಮೂರು ವರ್ಷಗಳ ಹಿಂದೆ ಕಿಪುಂಜಿ ಎಂಬ ಅತ್ಯಪರೂಪದ ಮಂಗವನ್ನೂ ಪತ್ತೆ ಮಾಡಿತ್ತು. ಐದು ವರ್ಷಗಳ ಹಿಂದೆ ವನ್ಯಜೀವಿ ಸಂರಕ್ಷಣಾ ಸೊಸೈಟಿಯು ವಿಶಿಷ್ಟ ಪುನುಗಿನ ಬೆಕ್ಕನ್ನು ಕಂಡಿತ್ತು.

ಅಮೆಝಾನ್‌ನ ರಕ್ತಪಿಪಾಸು ಮೀನುಗಳು ಅತ್ತ ಅಮೆಝಾನ್ ಪ್ರದೇಶದಲ್ಲಿ ಎರಡು ವರ್ಷಗಳ ಹಿಂದೆಯಷ್ಟೇ ವ್ಯಾಂಪೈರ್ ಮೀನು ಕಾಣಿಸಿಕೊಂಡಿದೆ. ಅರಾಗಿಯಾ ನದಿಯಲ್ಲಿ ಕಂಡುಬಂದ ಈ ರಕ್ತಪಿಪಾಸು ಮೀನು ಈ ಪ್ರದೇಶದಲ್ಲೇ ಕಾಣಸಿಗುವ ಕ್ಯಾಂಡಿರು ಎಂಬ ಇನ್ನೊಂದು ರಕ್ತಪಿಪಾಸು ಮೀನಿನ ಸಂಬಂಧಿಯಂತೆ. ಇವೆರಡೂ ಮಾರ್ಜಾಲಮೀನಿನ (ಕ್ಯಾಟ್‌ಫಿಶ್) ಜಾತಿಗೆ ಸೇರಿವೆ. ಬೇರೆ ಮೀನುಗಳ ರೆಕ್ಕೆಬಡಿತದಿಂದ ಉಂಟಾಗುವ ನೀರಿನ ಹರಿವಿನ ಬದಲಾವಣೆಯೇ ಈ ಮೀನಿಗೆ ಸಾಕು, ಹೊಂಚು ಹಾಕಿ ಇಂಥ ಮೀನುಗಳ ಬೆನ್ನುಮೂಳೆಗೆ ಅಂಟಿಕೊಂಡು ರಕ್ತ ಹೀರುತ್ತವೆ. ಕೇವಲ ೨೫ ಮಿಲಿಮೀಟರ್ ಉದ್ದ ಇರುವ ಈ ಮೀನು ಸಂಪೂರ್ಣ ಪಾರದರ್ಶಕ! ದೊಡ್ಡ ಮೀನುಗಳ ಪುಪ್ಪಸದ ಸಂದಿಗೊಂದಿಗಳಲ್ಲಿ ಅಡಗಿ ಅವುಗಳ ರಕ್ತ ಹೀರುವುದೆಂದರೆ ಈ ಮೀನುಗಳಿಗೆ ತುಂಬಾ ಇಷ್ಟ! ಮನುಷ್ಯರ ಮೂತ್ರದ ವಾಸನೆ ಹಿಡಿದೇ ಇವು ದಾಳಿ ಮಾಡುತ್ತವಂತೆ. ಮನುಷ್ಯರ ರಕ್ತವನ್ನೂ ಇವು ಹೀರುತ್ತವೆಯೆ? ಇನ್ನೂ ಗೊತ್ತಾಗಿಲ್ಲ.
ಬಿಬಿಸಿ (ಬ್ರಿಟಿಶ್ ಬ್ರಾಡ್‌ಕಾಸ್ಟಿಂಗ್ ಕಂಪನಿ) ಯ `ಅಮೆಝಾನ್ ಅಬಿಸ್’ ಕಾರ್ಯಕ್ರಮ ನಿರ್ಮಾಣದ ಸಂದರ್ಭದಲ್ಲಿ ಈ ವ್ಯಾಂಪೈರ್ ಮೀನಿನ ಜೊತೆಗೇ ಇನ್ನೂ ಎರಡು ಹೊಸ ಮೀನುಗಳು ದೊರೆತಿವೆ. ಈ ಮೀನು ದೊರೆತದ್ದೆಲ್ಲ ಅಮೆಝಾನ್ ನದಿಯ ಆಳದಲ್ಲಿ. ಬ್ರಿಟಿಶ್ ಚಾನೆಲ್‌ಗಿಂತ ಆಳವಾದ, ಅಗಲವಾದ ಅಮೆಝಾನ್ ನದಿಯ ಹೊಟ್ಟೆಯಲ್ಲಿ ನೂರಾರು ಆಳದ ರಂಧ್ರಗಳಿವೆ. ಅಲ್ಲಿ ಈ ತರಾವರಿ ಜೀವಿಗಳು ಭದ್ರವಾಗಿ ಬದುಕಿವೆ. ಕಾಲದ ಹರಿವನ್ನು ಎದುರಿಸಿಯೂ ಉಳಿದುಕೊಂಡಿವೆ; ಪ್ರಾಣಿಪ್ರಿಯ ಬಿಬಿಸಿ ನಿರ್ದೇಶಕರಿಗೆ ಕಂಡಿವೆ.
ಈ ಮೀನಿಗೆ ಸೂಕ್ತವಾದ ವೈಜ್ಞಾನಿಕ ಹೆಸರೇನು? ಪ್ಯಾರಾಕಾಂತೋಪೋರ್ನಾ ಡ್ರಾಕುಲಾ? ಪ್ಯಾರಾಕಾಂತೋಪೋರ್ನಾ ಇರಿಟಾನ್ಸ್? ಪ್ಯಾರಾಕಾಂತೋಪೋರ್ನಾ ಮಿನ್ಯುಟಾ? ಪ್ಯಾರಾಕಾಂತೋಪೋರ್ನಾ ವ್ಯಾಂಪೈರಾ? ಬಿ ಬಿ ಸಿ ಈಗ ಬಿಸಿಬಿಸಿ ಚರ್ಚೆ ನಡೆಸಿದೆ. ಹುಟ್ಟಿದ ಮಗುವಿಗೆ ಹೆಸರು ಇಡುವಂತೆ ಈ ರಕ್ತಪಿಪಾಸು ಮೀನಿಗೂ ಇನ್ನೇನು ಎಲ್ಲರೂ ಗುರುತಿಸುವ ಹೆಸರು ಬಂದುಬಿಡುತ್ತದೆ. ಮುದ್ದುಮಾಡೀರಿ ಜೋಕೆ…!
ಸಾವೋ ಪಾಲೋ ವಿಶ್ವವಿದ್ಯಾಲಯದ ತಂಡದೊಂದಿಗೆ ಬಿ ಬಿ ಸಿ ನಡೆಸಿದ ಈ ಸಂಶೋಧನೆಯಲ್ಲಿ ಭೂಮಿಯ ಮೇಲೆ ಬದುಕುವ ಒಂದು ಮೀನು ಪತ್ತೆಯಾಗಿದೆ. ಹೀಗೆ ಮರವನ್ನೇ ತಿಂದು ಬದುಕುವ ಈ ಮೀನು ವಿಶ್ವವಿಶಿಷ್ಟ.

ಬ್ರೆಝಿಲ್ ಕಾಡಿನಲ್ಲಿ ಬರ್ನಾಂಡಿ ನಾಲ್ಕು ವರ್ಷಗಳ ಹಿಂದೆ (೨೦೦೨) ಬ್ರೆಝಿಲ್‌ನಲ್ಲಿ ಹರಿಯುವ ಅಮೆಝಾನ್ ನದಿಯ ದಡದಲ್ಲಿ ಎರಡು ವಿಶಿಷ್ಟ ಮಂಗಗಳನ್ನು ಕನ್ಸರ್ವೇಶನ್ ಇಂಟರ್‌ನ್ಯಾಶನಲ್ ಸಂಸ್ಥೆಯು ಪತ್ತೆ ಮಾಡಿತ್ತು. ಬ್ರೆಝಿಲ್‌ನ ಮನಾವುನಲ್ಲಿರುವ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಫಾರ್ ಅಮೆಝಾನ್ ರಿಸರ್ಚ್ ಸಂಸಯಲ್ಲಿ ಕೆಲಸ ಮಾಡುತ್ತಿರುವ ಡಚ್ ವಿಜ್ಞಾನಿ ಮಾರ್ಕ್ ವಾನ್ ರೂಸ್‌ಮಲೆನ್ ಎಂಬಾತ ಈ ಮಂಗಗಳನ್ನು ರಿಯೋ ಡಿ ಜನೈರೋದಿಂದ ವಾಯುವ್ಯ ದಿಕ್ಕಿನಲ್ಲಿ ೧೮೦೦ ಮೈಲುಗಳಾಚೆ ಇರುವ ಕಾಡಿನಲ್ಲಿ ಹುಡುಕಿದ. ಮದೀರಾ ಮತ್ತು ತಾಪಾಜೋಸ್ ನದಿಗಳು ಅಮೆಝಾನನ್ನು ಸೇರುವ ಈ ತಾಣವು ಇನ್ನೂ ತೀವ್ರ ಸಂಶೋಧನೆಗೆ ಗುರಿಯಾಗಿಲ್ಲವಂತೆ.
ಕ್ಯಾಲಿಸೆಬಸ್ ಬರ್ನಾಂಡಿ ಮತ್ತು ಕ್ಯಾಲಿಸೆಬೆಸ್ ಸ್ಟೀಫೆನ್ನಾಶಿ ಹೆಸರಿನ ಈ ಮಂಗಗಳು ೧೯೯೦ರಿಂದೀಚೆಗೆ ಸಿಕ್ಕಿದ ೩೮ ಮತ್ತು ೩೯ನೇ ಹೊಸ ಮಂಗಗಳು ಎಂದರೆ ನೀವೇ ಹೇಳಿ: ಜೀವವೈವಿಧ್ಯದ ಬಗ್ಗೆ ಮನುಷ್ಯನಿಗೆ ಎಷ್ಟೆಲ್ಲ ಗೊತ್ತಿದೆ? ವಿಚಿತ್ರವೆಂದರೆ ವಾನ್ ರೂಸ್‌ಮಲೆನ್ ವಾಸ್ತವವಾಗಿ ಕುಬ್ಜ ಮಾರ್ಮೋಸೆಟ್ ಎಂಬ ಇನ್ನೊಂದು ಹೊಸ ಮಂಗವನ್ನು ಹುಡುಕುತ್ತಿದ್ದಾಗ ಈ ಬರ್ನಾರ್ಡಿ ಸಿಕ್ಕಿದ್ದು. ವಾನ್‌ಗೆ ಮಂಗಗಳು ಎಂದರೆ ತುಂಬಾ ಪ್ರೀತಿ ಎಂದರಿತ ಒಬ್ಬ ಬೆಸ್ತ ಈ ಮಂಗವನ್ನು ತಂದುಕೊಟ್ಟಿದ್ದ. ಬರ್ನಾರ್ಡಿಯ ದೇಹ ೧೫ ಅಂಗುಲ; ಬಾಲ ೨೨ ಅಂಗುಲ. ತೂಕ ಕೇವಲ ೩೩ ಔನ್ಸ್‌ಗಳು. ಸ್ಟೀಫೆನ್ನಾಶಿ ಮಂಗದ ಉದ್ದ ೧೧ ಅಂಗುಲ; ಬಾಲ ೧೭ ಅಂಗುಲ. ತೂಕ ಸುಮಾರು ೨೪ ಔನ್ಸ್. ಕಪ್ಪು ತಲೆ; ಕೆಂಪು ಕೆನ್ನೆಗಳು.
`ಇನ್ನೂ ಹೆಸರಿಡದ ೨೦ಕ್ಕೂ ಹೆಚ್ಚು ಜೀವಪ್ರಬೇಧಗಳನ್ನು ಗುರುತಿಸಿದ್ದೇನೆ’ ಎಂದು ವಾನ್ ಹೇಳುತ್ತಾನೆ. ಜಗತ್ತಿನಲ್ಲಿ ಇರೋದೇ ೩೧೦ ಮಂಗ ಪ್ರಬೇಧಗಳು. ಅವುಗಳಲ್ಲಿ ೯೫ ಮಂಗ ಪ್ರಬೇಧಗಳು ಬ್ರೆಝಿಲ್‌ನಲ್ಲೇ ಇವೆ.
ಈ ಪ್ರದೇಶದಲ್ಲಿ ಅಮೆಝಾನ್ ನದಿಯೊಳಗೇ ಹತ್ತಾರು ದ್ವೀಪಗಳು ಹುಟ್ಟಿಕೊಂಡಿವೆ. ಅಲ್ಲಿ ಜೀವಪ್ರಬೇಧಗಳು ಹಾಯಾಗಿ ಅರಳಿವೆ. ೧೮೦೦ರಿಂದ ಈ ಪ್ರದೇಶದಲ್ಲಿ ಯಾರೂ ಸಂಶೋಧನೆ ನಡೆಸಿರಲಿಲ್ಲ. ನಾನು ಐದೇ ವರ್ಷ ನಡೆಸಿದ ಸಂಶೋಧನೆಯಿಂದ ಇಷ್ಟೆಲ್ಲ ಜೀವಿಗಳು ಕಂಡುಬಂದಿವೆ ಎಂದು ವಾನ್ ವಿನಮ್ರವಾಗಿ ನುಡಿಯುತ್ತಾನೆ.
ಜೀವಶಾಸ್ತ್ರಜ್ಞರು ಮತ್ತು ಸಸ್ಯಶಾಸ್ತ್ರಜ್ಞರಿಗೆ ಇದು ಎಲ್ ಡೊರ್‍ಯಾಡೋ (ಹಿಂದೆ ಚಿನ್ನ ದೊರೆಯುತ್ತಿದ್ಛ್ದ ಇತಿಹಾಸಪ್ರಸಿದ್ಧ ದಕ್ಷಿಣ ಅಮೆರಿಕಾ ಪ್ರದೇಶ) ಇದ್ದ ಹಾಗೆ. ಹುಡುಕಿದಷ್ಟೂ ಜೀವಿಗಳು ಸಿಗುತ್ತವೆ ಎಂಬುದು ವಾನ್ ಅಭಿಮತ.
ಈ ಮಂಗಗಳೇನೂ ವಿನಾಶದ ಅಂಚಿನಲ್ಲಿಲ್ಲ. ಆದರೆ ಅವುಗಳ ರಕ್ಷಣೆಯೂ ಮುಖ್ಯವೇ. ಇಂಥ ರಕ್ಷಣೆಗೆ ನೆರವು ನೀಡಿದವರ ಹೆಸರನ್ನೇ ಹೊಸ ಪ್ರಬೇಧಗಳಿಗೆ ಇಡುವುದು ವಾನ್‌ನ ಒಂದು ಉಪಾಯ. ಬರ್ನಾರ್ಡಿ ಎಂದರೆ ಬೇರಾರೂ ಅಲ್ಲ ; ಡಚ್ ರಾಜಕುಮಾರ!
ಬ್ರೆಝಿಲ್‌ನಲ್ಲಿ ಇರುವ ಕಾಯ್ದೆಯೂ ವಾನ್‌ಗೆ ನೆರವಾಗಿದೆ. ಈ ದೇಶದ ನಾಗರಿಕರು ತಮ್ಮ ಒಡೆತನದ ಪ್ರದೇಶದಲ್ಲಿ ಖಾಸಗಿ ನಿಸರ್ಗ ಮೀಸಲು ಪ್ರದೇಶವನ್ನು ರೂಪಿಸಿ ಆಸ್ತಿ ತ ಎರಿಗೆಯಿಂದ ಬಚಾವಾಗಬಹುದು. ಅದಕ್ಕೇ ವಾನ್ ರೂಸ್‌ಮಲೆನ್ ಡಚ್ ಸರ್ಕಾರದ ನೆರವಿನಿಂದ ಒಂದೂವರೆ ಲಕ್ಷ ಎಕರೆ ಪ್ರದೇಶದಲ್ಲಿ ಎರಡು ಮೀಸಲು ಅರಣ್ಯವನ್ನು ನಿರ್ಮಿಸಿದ್ದಾನೆ.
ಮನುಕುಲದ ನಿರಂತರ ದಾಳಿಯಿಂದ, ನಾಗರಿಕತೆ ಎಂಬ ನಿಸರ್ಗನಾಶದ ಪ್ರಕ್ರಿಯೆಯಿಂದ ಈ ಅಪರೂಪದ ಜೀವಿಗಳು ಉಳಿಯುವಲ್ಲಿ ವಾನ್ ರೂಸ್‌ಮಲೆನ್ ಮಾಡಿದ ಯತ್ನಗಳಿಗೆ ಏನೆನ್ನೋಣ?

ಏಶ್ಯಾದಲ್ಲಿ ಹೊಸ ಜೀವಿಗಳು ಈ ಕಡೆ ಮಲೇಶ್ಯಾಗೆ ಬನ್ನಿ….. ಎರಡು ವರ್ಷಗಳ ಹಿಂದೆ ಮಲೇಶ್ಯಾದ ಜೊಹೊರ್ ರಾಜ್ಯದ ದಟ್ಟ ಅರಣ್ಯದಲ್ಲಿ ದೊಡ್ಡ ಕಾಲಿನ ಆದಿಮಾನವನ ಹೆಜ್ಜೆಗಳೇ ಕಂಡುಬಂದಿದ್ದವು. ಈ ಪರಿಸರದಲ್ಲಿ ಹಿಂದೆಂದೂ ಕಾಣದ ವಿಶಿಷ್ಟ ಜೀವಿಗಳು ಇವೆ ಎಂದು ಈ ದೇಶದ ವಿಜ್ಞಾನಿಗಳು ಹೇಳುತ್ತಿದ್ದಾರೆ.
ಕಳೆದ ಒಂದು ದಶಕದಲ್ಲೇ ಇಂಡೋನೇಶ್ಯಾದ ಬೋರ್ನಿಯೋದಲ್ಲಿ ೩೬೧ ಹೊಸ ಪ್ರಬೇಧಗಳನ್ನು ಹುಡುಕಲಾಗಿದೆ. ದಿನ ಬೆಳಗಾದರೆ ಹಿಂಸೆ ತಾಂಡವವಾಡುವ ಶ್ರೀ ಲಂಕಾದ ಕಾಡುಗಳಲ್ಲಿ ೪೩ ಹೊಸ ಕಶೇರುಕ ಪ್ರಬೇಧಗಳು ಪತ್ತೆಯಾಗಿವೆ. ಇಂಡೋನೇಶ್ಯಾದ ಕಲಿಮಂಟನ್ ಮಳೆಕಾಡಿನಲ್ಲಿ ಅಲ್ಲಿನ ಬೇಟೆಗಾರರ ಕಣ್ಣಿಗೂ ಸಿಗದ ಸಸ್ತನಿಗಳು ಕಂಡಿವೆ. ಮಧ್ಯ ಲಾವೋಸ್‌ನಲ್ಲಿ ವಿಚಿತ್ರವಾದ , ನರಿಯಂತೆ ಕಾಣುವ ಖಾ – ನ್ಯೂ ಎಂಬ ಉದ್ದ ಮೀಸೆಯ ಇಲಿ ಜಾತಿಯ ಪ್ರಾಣಿ ಕಂಡಿದೆ. ಗಿನೀ ಪಿಗ್‌ನ್ನು ಹೋಲುವ ಈ ಪ್ರಾಣಿಯು ಈವರೆಗೂ ಗೊತ್ತೇ ಇರದ ಸಸ್ತನಿ ಕುಟುಂಬಕ್ಕೆ ಸೇರಿದ್ದು.
ಮಲೇಶ್ಯಾದಲ್ಲಿ ಕಾಡು ಸರಸರ ಮಾಯವಾಗುತ್ತಿದೆ. ಅಲ್ಲೀಗ ಕಾಡು ನಾಶದ ವೇಗ ವಾರ್ಷಿಕ ಶೇ. ೮೬. ಒಟ್ಟಾರೆ ಭೂಪ್ರದೇಶದಲ್ಲಿ ಇರುವುದೇ ಶೇ. ೧೦ರಷ್ಟು ಕಾಡು.
ಹಂಟು ಜರಾಂಗ್ ಗಿಗಿ ಎಂಬುದು ಮಲೇಶ್ಯಾದ ಗುಡ್ಡಗಾಡು ಜನರು ಹೇಳುವ ದೊಡ್ಡಕಾಲಿನ ಕೋತಿ ಅರ್ಥಾತ್ ಯೇತಿ. ಭೂತಾನದಲ್ಲಿ ೬೫೦ ಚದರ ಕಿಲೋಮೀಟರ್ ಪ್ರದೇಶವನ್ನೇ ಯೇತಿಗಾಗಿ ಸಂರಕ್ಷಿಸಲಾಗಿದೆ. ಯೇತಿ ಇದೆಯೋ,ಇಲ್ಲವೋ ಎಂದು ಇನ್ನೂ ಖಚಿತವಾಗಿಲ್ಲ ಬಿಡಿ.

ವಿನಾಶದ ಅಂಚಿನಲ್ಲಿ ರುಚಿಕರ ಸೆಪೋರಿಸ್ ಮತ್ತೆ ಬ್ರೆಝಿಲ್‌ಗೆ ಬರೋದಾದರೆ, ಅಮೆಝಾನ್ ನದೀತೀರದಲ್ಲೇ ಅತ್ಯಂತ ರುಚಿಯಾದ ಮಂಗ ಕಂಡುಬಂದಿದೆ ಎಂದು ಜರ್ಮನಿಯ ಸಂಶೋಧಕ ಡಾ|| ಜೆರೋಮ್ ಕೆಲ್ಲರ್ ಹೇಳಿದ್ದಾರೆ. ಆಟೆಲೆಸ್ ಸೆಪೋರಿಸ್ ಎಂದು ಕರೆಯುವ ಈ ಮಂಗವು ೩೫ರಿಂದ ೪೦ ಪೌಂಡ್ ತೂಗುತ್ತೆ; ಹಸಿಯಾಗಲೀ, ಬೇಯಿಸಿಯಾಗಲೀ ತಿನ್ನುವುದಕ್ಕೆ ಇದಕ್ಕಿಂತ ಬೇರೆ ಮಂಗ ಸಿಕ್ಕಿಲ್ಲ ಎಂದು ಕೆಲ್ಲರ್ ಬಾಯಿ ಚಪ್ಪರಿಸುತ್ತಾರೆ. ಆದರೆ ಈ ಮಂಗವು ವಿನಾಶದ ಅಂಚಿನಲ್ಲಿದೆ. ಎಷ್ಟೋ ಪೀಳಿಗೆಗಳ ಕಾಲ ಇದನ್ನು ಸಾಕಿ ಸಂತತಿ ಬೆಳೆಸಬೇಕಂತೆ. ಆಮೇಲೆಯೇ ತಿನ್ನುವ ಯೋಚನೆ ಮಾಡಬಹುದಂತೆ. ಮನುಷ್ಯರ ಥರವೇ ವರ್ತಿಸುವ ಈ ಮಂಗಗಳು ಸಂಸಾರಪ್ರಿಯರಂತೆ.
ನ್ಯೂ ಗಿನಿಯ ಫೋಜಾ ಗುಡ್ಡದಲ್ಲಿ ೨೦೦೫ರ ಡಿಸೆಂಬರಿನಲ್ಲಿ ಓಡಾಡಿದ ವಿಜ್ಞಾನಿಗಳ ತಂಡಕ್ಕೆ ಬಂಪರ್ ಬಹುಮಾನವೇ ಸಿಕ್ಕಿದೆ. ೨೦ ಕಪ್ಪೆಗಳು, ನಾಲ್ಕು ಚಿಟ್ಟೆಗಳು, ಗಿಡಗಳು, ಕಿತ್ತಳೆ ಬಣ್ಣದ ಜೇನುಹಕ್ಕಿ, – ಎಲ್ಲವೂ ಸಿಕ್ಕಿವೆ. ೧೯೩೯ರ ನಂತರ ಈ ಪ್ರದೇಶದಲ್ಲಿ ಕಂಡುಬಂದ ಜೇನುಹಕ್ಕಿಯ ಕಣ್ಣುಗಳ ಕೆಳಗೆ ಪದಕದಂಥ ರಚನೆಗಳಿವೆ. ಉದ್ದ ಕೊಕ್ಕಿನ ಎಕಿಡ್ನಾ ಎಂಬ ಮೊಟ್ಟೆ ಇಡುವ ಸಸ್ತನಿಯೂ ಇಲ್ಲಿ ಕಂಡಿದೆ. ಇಂಡೋನೇಶ್ಯಾದಲ್ಲಿ ಇದೇ ತಂಡಕ್ಕೆ ಚಿನ್ನದ ಬಣ್ಣದ ನೆತ್ತಿಯ ಮರ ಕಾಂಗರೂ – ಡೆಂಡ್ರೋಲೇಗಸ್ ಪಲ್ಚೆರಿಮಸ್ – ಸಿಕ್ಕಿದೆ.
ಪ್ರಾಣಿ ಸಂಕುಲದ ಈ ಹಳೇ ಹೊಸ ಸದಸ್ಯರನ್ನು ಸ್ವಾಗತಿಸೋಣ.

ಸಂಕುಲಪಟ್ಟಿ ಸಾಧ್ಯವೆ? ವಿಶ್ವದಲ್ಲಿ ಒಟ್ಟು ೧೭.೫ ಲಕ್ಷ ಜೀವಿಗಳಿವೆ ಎಂಬುದು ಒಂದು ಸಾಮಾನ್ಯ ಅಂದಾಜು. ಅಮೆರಿಕಾ ಮತ್ತು ಇಂಗ್ಲೆಂಡಿನ ವಿಜ್ಞಾನಿಗಳು ಈ ಪ್ರಾಣಿಸಂಕುಲದ ದೊಡ್ಡ ಪಟ್ಟಿಯನ್ನೇ ಮಾಡುತ್ತಿದ್ದಾರೆ. ೨೦೧೧ರಲ್ಲಿ ಈ ಪಟ್ಟಿಯ ಕರಡು ಸಿದ್ಧವಾಗಬಹುದು. ಈಗ ವಾರ್ಷಿಕ ಕನಿಷ್ಠ ೧೫ರಿಂದ ೨೦ ಸಾವಿರ ಹೊಸ ಜೀವಿಗಳು ಈ ಪಟ್ಟಿಗೆ ಹೊಸದಾಗಿ ಸೇರುತ್ತಿವೆ. ವಿಶ್ವಸಂಸ್ಥೆಯ ಜಾಗತಿಕ ವೈವಿಧ್ಯ ಅಂದಾಜಿನ ಪ್ರಕಾರ ಭೂಮಿಯಲ್ಲಿ ೧.೩೬ ಕೋಟಿ ಜೀವಪ್ರಬೇಧಗಳಿವೆ. ಉದಾಹರಣೆಗೆ ಜೀರುಂಡೆಗಳ ಕರುಳುಗಳಲ್ಲೇ ಇತ್ತೀಚೆಗೆ ೨೦೦ ಬಗೆಯ ಯೀಸ್ಟ್‌ಗಳನ್ನು ಗುರುತಿಸಲಾಗಿದೆ.
ಉಷ್ಣವಲಯದ ಕಾಡುಗಳು ಇಂಥ ಜೀವಿಗಳಿಗೆ ಪ್ರಶಸ್ತವಾದ ತಾಣ. ಜೀವಶಾಸ್ತ್ರಜ್ಞರು ಈಗ ಕೇವಲ ಅರಣ್ಯಗಳ ಛಾವಣಿಗಳಲ್ಲೇ ಸಾಕಷ್ಟು ಹೊಸ ಜೀವಪ್ರಬೇಧಗಳನ್ನು ಹುಡುಕುತ್ತಿದ್ದಾರೆ.
ಇತ್ತ ಸಮುದ್ರದ ಆಳದಲ್ಲಿ ಹೊಸ ಮೀನುಗಳು ಮಿಂಚುತ್ತಿವೆ. ಈ ದಶಕದ ಮೊದಲ ಮೂರೇ ವರ್ಷಗಳಲ್ಲಿ ೫೦೦ ಹೊಸ ಬಗೆಯ ಮೀನುಗಳು ಸಿಕ್ಕಿವೆ. ಈಗ ಸಿದ್ಧವಾದ ಪಟ್ಟಿಯಲ್ಲಿ ಇರುವುದಕ್ಕಿಂತ ಇನ್ನೂ ಹತ್ತು ಪಟ್ಟು ಹೆಚ್ಚು ಜೀವಿಗಳು ಇವೆ ಎಂಬುದು ಒಂದು ಸಣ್ಣ ಅಂದಾಜು.
ಸಸ್ಯಶೋಧನೆಯಲ್ಲಿ ಮಾತ್ರ ವಿಜ್ಞಾನಿಗಳು ಕೊಂಚ ಮುಂದಿದ್ದಾರೆ. ಈಗಾಗಲೇ ಶೇ. ೭೫ರಷ್ಟು ಸಸ್ಯಸಂಕುಲವನ್ನು ಪಟ್ಟಿ ಮಾಡಿದ್ದಾರೆ. ವರ್ಷಕ್ಕೆ ೨೦೦೦ದಷ್ಟು ಹೊಸ ಸಸ್ಯಸಂಕುಲಗಳು ಪತ್ತೆಯಾಗುತ್ತಿವೆ. ಪಾಪುವಾ ನ್ಯೂಗಿನಿ ಮತ್ತು ಮಧ್ಯ ಆಫ್ರಿಕಾದ ಮಳೆಕಾಡುಗಳಲ್ಲಿ ಸಾವಿರಾರು ಸಸ್ಯಗಳು ಹೆಸರಿಲ್ಲದೆ ಬದುಕಿವೆ. ಆದರೆ ಈ ಭಾಗದ ದೇಶಗಳ ಆಂತರಿಕ ಕಲಹದಿಂದ ಸಂಶೋಧಕರಿಗೆ ಹೆಚ್ಚಿನ ಅವಕಾಶ ಸಿಕ್ಕಿಲ್ಲ.
ಒಂದು ಲೆಕ್ಕಾಚಾರದ ಪ್ರಕಾರ, ಜಾಗತಿಕ ಜೀವಿಪಟ್ಟಿ ಪೂರ್ಣಗೊಳಿಸಲು ಮನುಷ್ಯರಿಗೆ ೧೫೦೦ ವರ್ಷಗಳಿಂದ ಹಿಡಿದು ೧೫ ಸಾವಿರ ವರ್ಷಗಳು ಸಾಲುವುದಿಲ್ಲ. ಇಂಟರ್‌ನೆಟ್ ಸಂಪರ್ಕವು ಸಾಧ್ಯ ಮಾಡಿಸಿರುವ ವಿಜ್ಞಾನಿಗಳ ಪರಸ್ಪರ ಸಂಪರ್ಕ, ಡಿ ಎನ್ ಎ ಸರಪಳಿಗಳ ಶೋಧನೆ, ಹೆಚ್ಚುತ್ತಿರುವ ಜೀವಶಾಸ್ತ್ರಜ್ಞರ ಸಂಖ್ಯೆ, – ಇವೆಲ್ಲವೂ ಈ ಪಟ್ಟೀಕರಣದ ವೇಗವನ್ನು ಹೆಚ್ಚಿಸಿವೆ ಎಂಬುದೇನೋ ನಿಜ. ಆದರೆ ದಾರಿ ಮಾತ್ರ ದೂರ.

ಭಾರತದಲ್ಲೂ ಶೋಧದ ಹೊಸ ಹಾದಿ ಭಾರತದಲ್ಲಿ? ಮೊನ್ನೆ ತಾನೇ ಬೆಳಗಾವಿಯಲ್ಲಿ ೬೦ ಕೋಟಿ ವರ್ಷಗಳ ಹಿಂದೆ ಹುಟ್ಟಿದ ಜೀವಿ – ಸಿಹಿನೀರಿನ ಬ್ರಯೋಝೋವಾ – ಕಂಡುಬಂದಿದೆ. ಕನ್ನಡದಲ್ಲಿ ವಿಜ್ಞಾನದ ಸುದ್ದಿಗಳೇ ಪ್ರಕಟವಾಗದ ಈ ದಿನಗಳಲ್ಲಿ `ಕನ್ನಡಪ್ರಭ’ದ ಎಂ.ಕೆ. ಹೆಗಡೆ ಈ ಬಗ್ಗೆ ಸುದ್ದಿ ಬರೆದದ್ದು ಶ್ಲಾಘನೀಯ. ಬೆಳಗಾವಿಯ ಗೋವಿಂದರಾಮ್ ಸೆಕ್ಸಾರಿಯಾ ಸೈನ್ಸ್‌ಕಾಲೇಜಿನ ಪ್ರೊ|| ಎಸ್. ವೈ. ಪ್ರಭು ಈ ಜೀವಿಯನ್ನು ಮೊದಲು ತಮ್ಮ ಜೀವಶಾಸ್ತ್ರ ವಿಭಾಗದ ಮತ್ಸ್ಯಕೊಳದಲ್ಲಿ ಕಂಡರು.
ನಮ್ಮ ವೈವಿಧ್ಯಮಯ ಸಹ್ಯಾದ್ರಿಯ ಒಡಲಲ್ಲಿಯೂ ಇಂಥ ನೂರಾರು ಜೀವಿಗಳು ಅಡಗಿವೆ. ಅವುಗಳನ್ನು ಹುಡುಕುವುದಕ್ಕೆ ವಿಜ್ಞಾನಿಗಳು ಹೊರಟಿದ್ದಾರೆ. ಕೇರಳದಲ್ಲಿ ಹೊಸ ಕಪ್ಪೆಗಳನ್ನು ಹುಡುಕುವುದರಲ್ಲಿ ಎಸ್. ಡಿ. ಬಿಜು ಮತ್ತು ಫ್ರಾಂಕಿ ಬೊಸಿಟ್ ನಿಷ್ಣಾತರು. ಫಿಲಾಟಸ್ ಬಾಬಿಂಗೇರಿ ಮತ್ತು ಫಿಲಾಟಸ್ ಗ್ರಾಮಿನಿರೂಪೆಸ್ ಎಂಬ ಎರಡು ಕಪ್ಪೆಗಳನ್ನು ಪೊನ್‌ಮುಡಿ ಗುಡ್ಡಗಳಲ್ಲಿ ಹುಡುಕಿದ ಈ ಮಹಾಶಯರು ಕಳೆದ ವರ್ಷವಷ್ಟೇ ಸಹ್ಯಾದ್ರಿಯ ತಪ್ಪಲಲ್ಲಿ ನಾಸಿಕಾಬಟ್ರಾಕಸ್ ಸಹ್ಯಾದ್ರೆನ್ಸಿಸ್ ಎಂಬ ನೇರಳೆ ಬಣ್ಣದ ಕಪ್ಪೆಯನ್ನು ಹುಡುಕಿದ್ದಾರೆ. ಈ ಕಪ್ಪೆಯ ಕಥೆ ಬರೆದರೆ ಅದೇ ಒಂದು ದೊಡ್ಡ ಅಧ್ಯಾಯವಾದೀತು!

ಈ ಭೂಮಿಯ ಒಳಗೆ, ಮೇಲೆ, ಮರಗಳ ಬುಡದಲ್ಲಿ, ನೆತ್ತಿಯಲ್ಲಿ, ವಾಯುಗೋಳದ ವಿವಿಧ ಸ್ತರಗಳಲ್ಲಿ… ಜೀವಿಗಳನ್ನು ಹುಡುಕುತ್ತ ಹೋದರೆ ಕಥೆ ಮುಗಿಯುವುದೇ ಇಲ್ಲ.
ಮಂಗಳದಲ್ಲಿ ಜೀವಿಗಳಿದ್ದಾರೆಯೆ?ಬ್ರಹ್ಮಾಂಡದಲ್ಲಿ ಸೌರವ್ಯೂಹದಲ್ಲಿ ನಮ್ಮಂತೆಯೇ ಇರುವ ಗ್ರಹಗಳಲ್ಲಿ ಜೀವಿಗಳಿದ್ದಾರೆಯೆ? ಅವುಗಳನ್ನು ಹುಡುಕಲು ವರ್ಷಗಳಿಂದ ನೌಕೆಗಳು ಆಕಾಶಗಾಮಿಯಾಗಿವೆ. ನಮ್ಮ ಅಕ್ಕಪಕ್ಕದಲ್ಲೇ ಇರುವ ಅಸಂಖ್ಯ ಜೀವಿಗಳನ್ನು ಮಾತ್ರ ನಾವು ಹುಡುಕಿಲ್ಲ; ರಕ್ಷಿಸಿಲ್ಲ; ಸುಮ್ಮನೆ ಬಿಟ್ಟಿಲ್ಲ. ವಿಜ್ಞಾನಿಗಳು ಹೆಚ್ಚೆಂದರೆ ಇವುಗಳನ್ನು ಹೀಗೆಯೇ ಬದುಕಲು ಬಿಡಿ ಎನ್ನಬಹುದು.
ಆದರೆ ಅಭಿವೃದ್ಧಿಯ ಮದ ಹತ್ತಿರುವ ಈ ಮನುಷ್ಯ ಏನು ಮಾಡಬಹುದು?
ಜೀವನಪ್ರೀತಿ ಉಳ್ಳವರಾಗಿ ನಾವು ಸಸ್ಯಶ್ಯಾಮಲೆಯಾಗಿ ಕೋಟಿ ಕೋಟಿ ಜೀವಿಗಳನ್ನು ಒಡಲಿನಲ್ಲಿ ಇಟ್ಟುಕೊಂಡ ಈ ವಸುಂಧರೆಗೆ ಒಮ್ಮೆ ತಲೆಬಾಗಿ ನಮಿಸೋಣ. ಈ ಜೀವಿಗಳನ್ನು ಹುಡುಕುತ್ತಿರುವ ವಿಜ್ಞಾನಿಗಳಿಗೆ ವಂದಿಸೋಣ.
ಸಿದ್ಧಾಂತಗಳ ಮಾತಿರಲಿ, ಮನುಷ್ಯೇತರ ಜೀವಿಗಳನ್ನೂ ಬದುಕಲು ಬಿಡುವುದೇ ಈಗಿರುವ ದೊಡ್ಡ ಸವಾಲು.

(ಹೊಸದಿಗಂತ, ೨೦೦೭ ಜನವರಿ ೨೧, ಈ ಸಂಚಿಕೆಯ ಸಾಪ್ತಾಹಿಕದಲ್ಲಿ ಪ್ರಕಟಿತ)

ಕಾಮೆಂಟ್‌ಗಳಿಲ್ಲ:

badge