ಕ್ರೆಡಿಟ್ ಕಾರ್ಡು ಬಳಸುವುದು ಎಷ್ಟು ಅನುಕೂಲಕರವೋ ಅಷ್ಟೇ 'ರಿಸ್ಕಿ' ಎಂದು ಎಲ್ಲರೂ ಒಪ್ಪುತ್ತಾರೆ. ಅಂತರಜಾಲದಲ್ಲಿ ಬಳಸುವಾಗಲಂತೂ ಈ ರಿಸ್ಕು ಇನ್ನೂ ಹೆಚ್ಚು. ಕ್ರೆಡಿಟ್ ಕಾರ್ಡ್ ನಿಮ್ಮ ಬಳಿಯಲ್ಲೇ ಭದ್ರವಾಗಿರುವಾಗಲೂ ನಿಮ್ಮ ಕಾರ್ಡ್ ಸಂಖ್ಯೆ, ಮಾನ್ಯತೆಯ ಅವಧಿ ಹಾಗೂ ಕಾರ್ಡ್ ಪರಿಶೀಲಿಸುವ ಸಂಕೇತ(ಸಿವಿವಿ) - ಈ ಮೂರನ್ನೂ ಬಲ್ಲ ಯಾರು ಬೇಕಿದ್ದರೂ ನಿಮ್ಮ ಲೆಕ್ಕದಲ್ಲಿ ಶಾಪಿಂಗ್ ಮಾಡಿಬಿಡಬಹುದು!
ಈ ಎಲ್ಲ ಮಾಹಿತಿಯೂ ಕ್ರೆಡಿಟ್ ಕಾರ್ಡಿನ ಮೇಲೆಯೇ ಮುದ್ರಿತವಾಗಿರುವುದು ತಲೆನೋವಿನ ಸಂಗತಿ. ವಿವಿಧ ಸ್ಥಳಗಳಲ್ಲಿ ಕಾರ್ಡ್ ಬಳಸುವಾಗ ಈ ಮಾಹಿತಿಯನ್ನು ಯಾರು ಬೇಕಾದರೂ ಕದಿಯುವುದು ಸಾಧ್ಯ. ಹೀಗಾಗಿಯೇ ಅಂತರಜಾಲದಲ್ಲಿ ಕ್ರೆಡಿಟ್ ಕಾರ್ಡ್ ಅವ್ಯವಹಾರಗಳು ತೀರಾ ವ್ಯಾಪಕವಾಗಿ ನಡೆಯುತ್ತವೆ. ಒಂದು ಅಂದಾಜಿನ ಪ್ರಕಾರ ೨೦೦೮ರಲ್ಲಿ ನಡೆದ ಇಂತಹ ಅವ್ಯವಹಾರದ ಒಟ್ಟು ಮೊತ್ತ ೨೩೦೦ ಕೋಟಿ ರೂಪಾಯಿಗೂ ಹೆಚ್ಚು.
ಇಷ್ಟೆಲ್ಲ ದೊಡ್ಡ ಪ್ರಮಾಣದ ಅವ್ಯವಹಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಅನೇಕ ಪ್ರಯತ್ನಗಳು ಸಾಗಿವೆ. ಕ್ರೆಡಿಟ್ ಕಾರ್ಡಿನ ಮೇಲೆ ಮುದ್ರಿತವಾಗಿರುವ ಮಾಹಿತಿಯ ಜೊತೆಗೆ ಇನ್ನೊಂದು ರಹಸ್ಯ ಸಂಕೇತವನ್ನೂ ಬಳಸುವಂತೆ ಮಾಡುವ ಮಾಸ್ಟರ್‌ಕಾರ್ಡ್ ಸೆಕ್ಯೂರ್‌ಕೋಡ್, ವೆರಿಫೈಡ್ ಬೈ ವೀಸಾ ಮುಂತಾದ ವ್ಯವಸ್ಥೆಗಳು ಬಳಕೆಗೆ ಬಂದಿರುವುದೂ ಇದೇ ಉದ್ದೇಶದಿಂದ.
ವಿಶ್ವವಿಖ್ಯಾತ ಕ್ರೆಡಿಟ್ ಕಾರ್ಡ್ ಸಂಸ್ಥೆ ವೀಸಾ ಈ ನಿಟ್ಟಿನಲ್ಲಿ ಇನ್ನೊಂದು ವಿಶಿಷ್ಟ ಪ್ರಯತ್ನ ಕೈಗೊಂಡಿದೆ. ಆಸ್ಟ್ರೇಲಿಯಾ ಮೂಲದ ಈಮ್ಯೂ ಟೆಕ್ನಾಲಜೀಸ್ ಎಂಬ ಸಂಸ್ಥೆ ಈ ಪ್ರಯತ್ನದಲ್ಲಿ ವೀಸಾ ಜೊತೆ ಕೈಗೂಡಿಸಿದೆ.
ಈಮ್ಯೂ ಸಂಸ್ಥೆ ತಯಾರಿಸಿರುವ ಹೊಸ ಬಗೆಯ ಕಾರ್ಡು ಈ ಪ್ರಯತ್ನದ ವೈಶಿಷ್ಟ್ಯ. ಕಾರ್ಡಿನಲ್ಲೇ ಅಳವಡಿಸಲಾಗಿರುವ ವಿಶೇಷ ವ್ಯವಸ್ಥೆ ಪ್ರತಿ ಬಾರಿ ಪಾವತಿ ಮಾಡಲು ಪ್ರಯತ್ನಿಸಿದಾಗಲೂ ಹೊಸತೊಂದು ಸಂಖ್ಯೆಯನ್ನು ಪ್ರದರ್ಶಿಸುತ್ತದೆ. ಈ ಸಂಖ್ಯೆಯನ್ನು ಉಪಯೋಗಿಸಿದಾಗ ಮಾತ್ರ ಅಂತರಜಾಲತಾಣಗಳು ಕಾರ್ಡ್ ಬಳಕೆಯನ್ನು ಮಾನ್ಯಮಾಡುತ್ತವೆ. ಹೀಗಾಗಿ ಕ್ರೆಡಿಟ್ ಕಾರ್ಡ್ ಮಾಹಿತಿ ಕದ್ದು ಬಳಸುವವರು ಈ ಕಾರ್ಡಿನ ದುರ್ಬಳಕೆ ಮಾಡಿಕೊಳ್ಳುವುದು ಸಾಧ್ಯವಾಗುವುದಿಲ್ಲ.
ಈ ವಿಶೇಷ ಸಂಖ್ಯೆಯನ್ನು ಪಡೆಯಲು ನಮ್ಮ ಪಿನ್ ಸಂಖ್ಯೆಯನ್ನು ದಾಖಲಿಸಬೇಕು. ಇದಕ್ಕಾಗಿ ಕಾರ್ಡಿನಲ್ಲಿ ಒಂದು ಪುಟ್ಟ ಕೀಲಿಮಣೆಯನ್ನೂ ಅಳವಡಿಸಲಾಗಿದೆ. ಬಹುರಾಷ್ಟ್ರೀಯ ಸಂಸ್ಥೆಯೊಂದರ ಐನೂರು ಉದ್ಯೋಗಿಗಳು ಸದ್ಯ ಈ ತಂತ್ರಜ್ಞಾನವನ್ನು ಪರೀಕ್ಷಾರ್ಥವಾಗಿ ಬಳಸುತ್ತಿದ್ದಾರೆ. ಅವರ ಪರೀಕ್ಷೆಗಳೆಲ್ಲ ಯಶಸ್ವಿಯಾಗಿ ಮುಗಿದ ಮೇಲೆ ಈ ಕಾರ್ಡುಗಳು ವಿಶ್ವದೆಲ್ಲೆಡೆ ಲಭ್ಯವಾಗಲಿವೆ.
ಪ್ರತಿಬಾರಿ ಬಳಸುವಾಗಲೂ ಪಿನ್ ಸಂಖ್ಯೆ ದಾಖಲಿಸಿ ಹೊಸ ಸಂಕೇತ ಪಡೆಯಬೇಕಾದ 'ಸೆಕ್ಯೂರ್ ಐಡಿ' ಕಾರ್ಡುಗಳು ಗಣಕ ಜಾಲಗಳಿಗೆ ಸುರಕ್ಷಿತ ಪ್ರವೇಶ ಕಲ್ಪಿಸಲು ಈಗಾಗಲೇ ಯಶಸ್ವಿಯಾಗಿ ಬಳಕೆಯಾಗುತ್ತಿವೆ. ಹೀಗಾಗಿ ಕ್ರೆಡಿಟ್ ಕಾರ್ಡುಗಳಲ್ಲೂ ಈ ಪರಿಕಲ್ಪನೆ ಯಶಸ್ಸು ಕಾಣುವ, ಹಾಗೂ ಕೋಟ್ಯಂತರ ರೂಪಾಯಿಗಳ ಅವ್ಯವಹಾರಕ್ಕೆ ತಡೆಹಾಕುವ ನಿರೀಕ್ಷೆಯಿದೆ.
ಜುಲೈ ೨೨, ೨೦೦೯ರ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ