ಬುಧವಾರ, ನವೆಂಬರ್ 11, 2009

ಸೈಬರ್ ಸಮರ

ಟಿ ಜಿ ಶ್ರೀನಿಧಿ
 
ರಷ್ಯಾ ಸಮೀಪವಿರುವ  ಪುಟ್ಟ ರಾಷ್ಟ್ರ ಎಸ್ಟೋನಿಯಾ. ಮಾಹಿತಿ ತಂತ್ರಜ್ಞಾನದಲ್ಲಿ ಅಪಾರ ಪ್ರಗತಿ ಸಾಧಿಸಿರುವ ಈ ದೇಶ ಇ-ಆಡಳಿತವನ್ನು ವ್ಯಾಪಕವಾಗಿ ಅಳವಡಿಸಿಕೊಂಡಿದೆ. ಅಲ್ಲಿನ ಆಡಳಿತದಲ್ಲಿ ಫೈಲು ಕೆಂಪುಪಟ್ಟಿಗಳಿಗೆಲ್ಲ ಜಾಗವೇ ಇಲ್ಲ; iತದಾನದಿಂದ ಪ್ರಾರಂಭಿಸಿ ದೈನಂದಿನ ವಹಿವಾಟುಗಳವರೆಗೆ ಬಹುತೇಕ ಎಲ್ಲ ಕೆಲಸವೂ ಅಂತರಜಾಲದ ಮೂಲಕವೇ ನಡೆಯುತ್ತದೆ.

ರಷ್ಯಾಕ್ಕೂ ಎಸ್ಟೋನಿಯಾಗೂ  ಬಹಳ ಹಿಂದಿನಿಂದಲೂ ಎಣ್ಣೆ ಸೀಗೇಕಾಯಿಯ  ಸಂಬಂಧ. ಇವೆರಡೂ ದೇಶಗಳ ನಡುವೆ ಏನಾದರೊಂದು ಕಿತಾಪತಿ ನಡೆದೇ ಇರುತ್ತದೆ. ಹೀಗಿರುವಾಗ ೨೦೦೭ರಲ್ಲಿ ಎಸ್ಟೋನಿಯಾ ಸರಕಾರ ಸೋವಿಯತ್ ಯುಗದ ಸ್ಮಾರಕವೊಂದನ್ನು ಸ್ಥಳಾಂತರಿಸುವ ತೀರ್ಮಾನ ಕೈಗೊಂಡಿತು. ಇದಕ್ಕೆ ರಷ್ಯನ್ನರ ತೀವ್ರ ವಿರೋಧ ವ್ಯಕ್ತವಾಯಿತು, ಬಂದ್-ರಸ್ತೆತಡೆ ಇತ್ಯಾದಿಗಳೂ ನಡೆದವು.

ಇನ್ನು ಕೆಲವರು ಎಸ್ಟೋನಿಯಾದ  ಗಣಕ ವ್ಯವಸ್ಥೆಯನ್ನು ಹಾಳುಗೆಡವುವ  ಪ್ರಯತ್ನ ಶುರುಮಾಡಿದರು. ಜಾಲತಾಣಗಳಿಗೆ ಅಪಾರ ಪ್ರಮಾಣದ ಮಾಹಿತಿ ಹರಿದುಬರಲು ಪ್ರಾರಂಭವಾಯಿತು. ಮಾಹಿತಿಯ ಒಳಹರಿವು ಸರ್ವರುಗಳ ಸಾಮರ್ಥ್ಯವನ್ನೂ ಮೀರಿದಾಗ ಜಾಲತಾಣಗಳ ಕಾರ್ಯಾಚರಣೆ ನಿಧಾನವಾಯಿತು. ಇಡೀ ದೇಶದ ಆಡಳಿತ ವ್ಯವಸ್ಥೆಯೇ ಅಲುಗಾಡಿಹೋಗುವ ಪರಿಸ್ಥಿತಿ ಎದುರಾಯಿತು.

ದೇಶದೇಶಗಳ ನಡುವಿನ ಸಮರದ ಹೊಸ ಮುಖ ಜಗತ್ತಿಗೆ ಪರಿಚಯವಾದದ್ದೇ ಆಗ.

* * *

ಎಸ್ಟೋನಿಯಾ ಹೇಳಿಕೇಳಿ  ನ್ಯಾಟೋದ (NATO) ಸದಸ್ಯ ರಾಷ್ಟ್ರ. ಎಸ್ಟೋನಿಯಾ ವಿರುದ್ಧ ಯಾವುದೇ ಬಗೆಯ ಸೇನಾ ದಾಳಿ ನಡೆದರೆ ನ್ಯಾಟೋದ ಮಿಕ್ಕೆಲ್ಲ ರಾಷ್ಟ್ರಗಳೂ ಅದರ ಸಹಾಯಕ್ಕೆ ಧಾವಿಸುತ್ತವೆ. ಆದರೆ ಅಂತರಜಾಲದ ಮೂಲಕ ಯುದ್ಧಸಾರಿದರೆ?

ಈ ಯೋಚನೆಯಿಂದ ಹುಟ್ಟಿಕೊಂಡದ್ದೇ  ಸೈಬರ್ ಸಮರದ ಪರಿಕಲ್ಪನೆ - ಶತ್ರುರಾಷ್ಟ್ರದ ಗಣಕವ್ಯವಸ್ಥೆಯನ್ನು ಹಾಳುಮಾಡಿ ಅಲ್ಲಿನ ಜನರಿಗೆ ತೊಂದರೆಕೊಡುವ ಹೊಸಬಗೆಯ ಭಯೋತ್ಪಾದನೆ.

ತೀರಾ ಈಚೆಗೆ, ೨೦೦೯ರ  ಜುಲೈ ತಿಂಗಳಲ್ಲೂ ಇಂತಹ ದಾಳಿಗಳು ನಡೆದ ಬಗ್ಗೆ ವರದಿಯಾಗಿದೆ. ಆ ಸಂದರ್ಭದಲ್ಲಿ ದಕ್ಷಿಣ ಕೊರಿಯಾ ಹಾಗೂ ಅಮೆರಿಕಾದ ಅನೇಕ ಸರಕಾರಿ ಹಾಗೂ ವಾಣಿಜ್ಯ ಜಾಲತಾಣಗಳು ತೊಂದರೆಗೀಡಾಗಿದ್ದವು. ಇದ್ದಕ್ಕಿದ್ದಂತೆ ಮಿತಿಮೀರಿ ಹೆಚ್ಚಿದ ಮಾಹಿತಿಯ ಒಳಹರಿವು ಈ ತಾಣಗಳನ್ನು ಹೆಚ್ಚೂಕಡಿಮೆ ನಿಷ್ಕ್ರಿಯಗೊಳಿಸಿಬಿಟ್ಟಿದ್ದವು. ಇರಾನ್ ಹಾಗೂ ಜಾರ್ಜಿಯಾದ ಗಣಕವ್ಯವಸ್ಥೆಗಳ ಮೇಲೂ ಈ ಬಗೆಯ ದಾಳಿಗಳು ನಡೆದಿವೆ.

* * *

ಕಳೆದ ದಶಕದಲ್ಲಿ  ಅಂತರಜಾಲದ ಬಳಕೆ ತೀವ್ರವಾಗಿ ಹೆಚ್ಚಿದಂತೆ  ಅಂತರಜಾಲ ಬಳಸಿ ಇತರರಿಗೆ ತೊಂದರೆಯುಂಟುಮಾಡುವ ಉದಾಹರಣೆಗಳೂ ಹೆಚ್ಚುತ್ತಿವೆ. ಬಳಕೆದಾರರನ್ನು  ವಂಚಿಸಿ ಹಣ ಸಂಪಾದಿಸುವ ಟೋಪೀವಾಲರಿಂದ ಹಿಡಿದು ಶತ್ರುರಾಷ್ಟ್ರಗಳ ರಹಸ್ಯಮಾಹಿತಿ ಕದಿಯಲು ಪ್ರಯತ್ನಿಸುವ ಗೂಢಚಾರರವರೆಗೆ ಎಲ್ಲರೂ ಅಂತರಜಾಲವನ್ನು ತಮ್ಮ ಅಸ್ತ್ರವನ್ನಾಗಿ ಬಳಸುತ್ತಿದ್ದಾರೆ. ಸೈಬರ್ ಸಮರದ ಗುಮ್ಮ ನಿಜಕ್ಕೂ ಗಂಡಾಂತರಕಾರಿಯಾಗಿ ಬೆಳೆಯುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ.

ಈವರೆಗೆ ದಾಖಲಾಗಿರುವ  ಸೈಬರ್ ಸಮರಗಳಲ್ಲಿ ಹೆಚ್ಚಾಗಿ ಬಳಕೆಯಾಗಿರುವುದು ಡಿಸ್ಟ್ರಿಬ್ಯೂಟೆಡ್ ಡಿನಯಲ್ ಆಫ್ ಸರ್ವಿಸ್ ಅಥವಾ ಡಿಡಿಒಎಸ್ ದಾಳಿಗಳು.

ಪ್ರಸಿದ್ಧ ಜಾಲತಾಣಗಳಿಗೆ ಅಸಂಖ್ಯಾತ ಕೃತಕ ಗ್ರಾಹಕರನ್ನು ಸೃಷ್ಟಿಸುವ ಬ್ಲ್ಯಾಕ್‌ಮೇಲ್ ತಂತ್ರಕ್ಕೆ ಡಿಡಿಒಎಸ್ ದಾಳಿ ಎಂದು ಕರೆಯುತ್ತಾರೆ. ಇಂತಹ ದಾಳಿಗೆ ಈಡಾಗುವ ತಾಣದ ಸರ್ವರ್‌ಗೆ ಇದ್ದಕ್ಕಿದ್ದಂತೆ ಅಪಾರ ಪ್ರಮಾಣದ ಮಾಹಿತಿ ಹರಿದುಬರಲು ಪ್ರಾರಂಭವಾಗುತ್ತದೆ. ಇದರಿಂದಾಗಿ ಆ ಜಾಲತಾಣದ ಕಾರ್ಯಾಚರಣೆ ಬಲು ನಿಧಾನವಾಗಿಬಿಡುತ್ತದೆ. ಇಂತಹ ದಾಳಿಗಳು ಹೆಚ್ಚುಕಾಲ ಮುಂದುವರೆದದ್ದೇ ಆದರೆ ಮಾಹಿತಿಯ ಮಿತಿಮೀರಿದ ಒತ್ತಡದಿಂದಾಗಿ ದಾಳಿಗೀಡಾದ ಜಾಲತಾಣ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆಯೂ ಇರುತ್ತದೆ.

ಈ ದಾಳಿಗಳಲ್ಲಿ ಸ್ಪೈವೇರ್‌ಗಳು  ಹಾಗೂ ಬಾಟ್‌ನೆಟ್‌ಗಳ ಬಳಕೆ ಸಾಮಾನ್ಯ.

ಸ್ಪೈವೇರ್ ಅಥವಾ ಗೂಢಚಾರಿ ತಂತ್ರಾಂಶಗಳು ಸಾಮಾನ್ಯವಾಗಿ ಉಪಯುಕ್ತ ತಂತ್ರಾಂಶಗಳ  ಸೋಗಿನಲ್ಲಿ ನಿಮ್ಮ ಗಣಕವನ್ನು ಪ್ರವೇಶಿಸುತ್ತವೆ. ನಿಮ್ಮ ಗಣಕವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಅದನ್ನು ತಮ್ಮ ಕುಕೃತ್ಯಗಳಿಗೆ ಬಳಸಿಕೊಳ್ಳುವಲ್ಲಿ ಈ ತಂತ್ರಾಂಶಗಳು ಹ್ಯಾಕರ್‌ಗಳಿಗೆ ನೆರವಾಗುತ್ತವೆ. ಪ್ರತಿ ಬಾರಿ ಗಣಕವನ್ನು ಚಾಲೂ ಮಾಡಿದಾಗಲೂ ಸಕ್ರಿಯವಾಗುವ ಈ ತಂತ್ರಾಂಶ ಹ್ಯಾಕರ್‌ನ ಆದೇಶಗಳನ್ನು ಪಾಲಿಸಲು ಪ್ರಾರಂಭಿಸುತ್ತದೆ. ಹೀಗೆ ನಿಮ್ಮ ಗಣಕ ಒಂದು ಜಾಂಬಿ ಗಣಕ ಅಥವಾ ಬಾಟ್ ಆಗಿ ಬದಲಾಗುತ್ತದೆ (ಬಾಟ್ ಎನ್ನುವುದು ರೋಬಾಟ್ ಎಂಬ ಹೆಸರಿನ ಅಪಭ್ರಂಶ). ಪ್ರಪಂಚದಾದ್ಯಂತ ಇರುವ ಇಂತಹ ನೂರಾರು-ಸಾವಿರಾರು ಬಾಟ್‌ಗಳನ್ನು ಒಗ್ಗೂಡಿಸಿದ ಬಾಟ್‌ನೆಟ್ಗಳೆಂಬ ಜಾಲಗಳೂ ಸಿದ್ಧವಾಗುತ್ತವೆ.

ಡಿಡಿಒಎಸ್ ದಾಳಿಗೆ ತುತ್ತಾಗುವ ತಾಣಗಳಿಗೆ ಅಪಾರ ಪ್ರಮಾಣದ ಮಾಹಿತಿ ಹರಿದುಬರುವುದು ಇವೇ ಬಾಟ್‌ಗಳಿಂದ. ಈ ಗಣಕಗಳು ಜಗತ್ತಿನ ಯಾವ ಮೂಲೆಯಲ್ಲಿ ಬೇಕಾದರೂ ಇರಬಹುದಾದ್ದರಿಂದ ಅನೇಕ ಸನ್ನಿವೇಶಗಳಲ್ಲಿ ನಿಜವಾದ ಅಪರಾಧಿಯ ಪತ್ತೆಯಾಗುವುದೇ ಇಲ್ಲ.

ಈ ಮೊದಲು ಹೇಳಿದ  ಉದಾಹರಣೆಗಳಲ್ಲಿ ಆಗಿರುವುದೂ ಅದೇ. ತನ್ನ ಗಣಕ ವ್ಯವಸ್ಥೆಗಳನ್ನು ಹಾಳುಗೆಡವಲು ಪ್ರಯತ್ನಿಸಿದ್ದು ರಷ್ಯಾ ಎಂದು ಎಸ್ಟೋನಿಯಾ ಹೇಳಿದರೆ ನನಗೇನೂ ಗೊತ್ತಿಲ್ಲ ಎಂದು ರಷ್ಯಾ ಹೇಳುತ್ತಿದೆ. ಅಮೆರಿಕಾದ ತಾಣಗಳಿಗೆ ತೊಂದರೆ ಕೊಟ್ಟಿದ್ದು ಯಾರು ಎಂಬ ಪ್ರಶ್ನೆ ಇನ್ನೂ ಬಗೆಹರಿದಿಲ್ಲ. ಕೆಲ ರಾಷ್ಟ್ರಗಳ ಸೇನೆಯಲ್ಲಿ ಇಂತಹ ದಾಳಿಗಳಿಗಾಗಿಯೇ ವಿಶೇಷ ತರಬೇತಿ ಪಡೆದ ತಂತ್ರಜ್ಞರಿದ್ದಾರಂತೆ ಎಂಬುದು ಇನ್ನೂ ಗಾಳಿಸುದ್ದಿಯಾಗಿಯೇ ಇದೆ.

* * *

ಸೈಬರ್ ಸಮರತಂತ್ರ ಇನ್ನಷ್ಟು ದೊಡ್ಡ ಸಮಸ್ಯೆಯಾಗಿ ಬೆಳೆಯುವ  ಮೊದಲೇ ಅದನ್ನು ತಡೆಯುವ ನಿಟ್ಟಿನಲ್ಲಿ  ಸಾಕಷ್ಟು ಪ್ರಯತ್ನಗಳು ಸಾಗಿವೆ. ಕೋಆಪರೇಟಿವ್ ಸೈಬರ್ ಡಿಫೆನ್ಸ್ ಸೆಂಟರ್ ಆಫ್ ಎಕ್ಸೆಲೆನ್ಸ್ ಎಂಬ ಕೇಂದ್ರವನ್ನು ಸ್ಥಾಪಿಸಿರುವ ಎಸ್ಟೋನಿಯಾ ಈ ಪ್ರಯತ್ನಗಳ ಮುಂಚೂಣಿಯಲ್ಲಿದೆ. ಸೈಬರ್ ಸಮರ ತಡೆಗೆ ತಂತ್ರಜ್ಞಾನ ರೂಪಿಸುವುದರಿಂದ ಪ್ರಾರಂಭಿಸಿ ಅಂತರರಾಷ್ಟ್ರೀಯ ಸಹಕಾರ ಒಟ್ಟುಗೂಡಿಸುವವರೆಗೆ ಈ ಕೇಂದ್ರ ಅನೇಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ. ಅಮೆರಿಕಾ ಹಾಗೂ ದಕ್ಷಿಣ ಕೊರಿಯಾಗಳೂ ಈ ನಿಟ್ಟಿನಲ್ಲಿ ಕೆಲಸಮಾಡಲು ಪ್ರಾರಂಭಿಸಿವೆ. ಸೈಬರ್ ಭಯೋತ್ಪಾದಕರ ವಿರುದ್ಧದ ಈ ಹೋರಾಟದಲ್ಲಿ ಅವರೆಲ್ಲರಿಗೂ ಜಯವಾಗಲಿ ಎಂದು ಇಡೀ ಪ್ರಪಂಚ ಹಾರೈಸುತ್ತಿದೆ.

ನವೆಂಬರ್ ೧೧, ೨೦೦೯ರ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge