ಟಿ ಜಿ ಶ್ರೀನಿಧಿ
ಸಬ್‌ಮರೀನ್ - ಎಂತಹ ರೋಚಕ ಕಲ್ಪನೆ! ಮೀನಿನಂತೆ ನೀರಿನೊಳಗೆ ಓಡಾಡಿಕೊಂಡಿದ್ದು ವೈಜ್ಞಾನಿಕ ಸಂಶೋಧನೆಯಿಂದ ವೈರಿಗಳ ಮೇಲೆ ದಾಳಿಯವರೆಗೆ ಅನೇಕ ಬಗೆಯ ಕೆಲಸಗಳನ್ನು ಕೈಗೊಳ್ಳುವ ಈ ವಿಶಿಷ್ಟ ವಾಹನ ನಮ್ಮಲ್ಲಿ ಉಂಟುಮಾಡುವ ಕುತೂಹಲಕ್ಕೆ ಕೊನೆಯೇ ಇಲ್ಲ ಎಂದರೂ ತಪ್ಪಾಗಲಾರದೇನೋ.
ನೀರಿನೊಳಗೆ ಚಲಿಸಬಲ್ಲ ವಾಹನಗಳನ್ನು ರಚಿಸುವ ಹಂಬಲ ಮಾನವನಲ್ಲಿ ಬಹಳ ಹಿಂದಿನಿಂದಲೇ ಇತ್ತು. ಈ ನಿಟ್ಟಿನಲ್ಲಿ ೧೫೦೦ನೇ ಇಸವಿಯ ಸುಮಾರಿನಿಂದಲೇ ಪ್ರಯತ್ನಗಳೂ ನಡೆಯುತ್ತಿದ್ದವು. ಹದಿನಾರು-ಹದಿನೇಳನೇ ಶತಮಾನಗಳಲ್ಲೇ ಹಲವಾರು ಸಣ್ಣಪುಟ್ಟ ಸಬ್‌ಮರೀನ್‌ಗಳೂ ತಯಾರಾಗಿದ್ದವು. ಯುದ್ಧಗಳ ಸಂದರ್ಭದಲ್ಲಿ ಸಬ್‌ಮರೀನ್‌ಗಳ ಬಳಕೆ ೧೮೬೪ರಷ್ಟು ಹಿಂದೆಯೇ ನಡೆದಿತ್ತಂತೆ!
ಸಬ್‌ಮರೀನ್‌ಗಳು ಸದಾ ನೀರಿನೊಳಗೇ ಸಂಚರಿಸಬೇಕಾಗಿರುವುದರಿಂದ ಅವುಗಳ ರಚನೆ ಬಹಳ ಗಟ್ಟಿಮುಟ್ಟಾಗಿ, ’ಏರ್‌ಟೈಟ್’ ಆಗಿರಬೇಕಾಗುತ್ತದೆ. ಸಮುದ್ರದಾಳದಲ್ಲಿರುವ ಅಪಾರ ಒತ್ತಡವನ್ನು ಸಹಿಸಿಕೊಳ್ಳಲು ಇಂತಹ ಸದೃಢ ರಚನೆ ಅನಿವಾರ್ಯವೂ ಕೂಡ. ಅದಲ್ಲದೆ ಸಮುದ್ರದಾಳದಲ್ಲೇ ಕೆಲಸಮಾಡುವ ಈ ಸಬ್‌ಮರೀನ್‌ಗಳಿಗೆ ಹೆಚ್ಚಿನ ಗಾಳಿಯನ್ನು ಬಳಸದ ಇಂಜನ್‌ಗಳೂ ಬೇಕು! ಹೀಗಾಗಿಯೇ ಹೆಚ್ಚಿನ ಸಬ್‌ಮರೀನ್‌ಗಳು ಬ್ಯಾಟರಿ ಅಥವಾ ಅಣುಶಕ್ತಿಚಾಲಿತವಾಗಿರುತ್ತವೆ.
ಸಬ್‌ಮರೀನ್‌ಗಳಲ್ಲಿ ಉಪಯೋಗವಾಗುವ ಉಪಕರಣಗಳು ಕೂಡ ಸಬ್‌ಮರೀನ್‌ನಷ್ಟೇ ಕುತೂಹಲ ಮೂಡಿಸುವಂಥವು: ಸದಾ ನೀರಿನಡಿಯಲ್ಲೇ ಇರುವ ಸಬ್‌ಮರೀನ್ ಚಾಲಕವರ್ಗದವರು ತಮ್ಮ ಸುತ್ತಮುತ್ತ ನೀರಿನ ಮೇಲೆ ಏನಾಗುತ್ತಿದೆ ಎಂಬುದನ್ನು ಅರಿತುಕೊಳ್ಳಲು ಪೆರಿಸ್ಕೋಪ್ ಎಂಬ ಉಪಕರಣವನ್ನು ಬಳಸುತ್ತಾರೆ. ಇದು ಸಬ್‌ಮರೀನ್‌ನ ’ಕಣ್ಣು’ ಎನ್ನುವುದಾದರೆ ಸೋನಾರ್ ಎಂಬ ಉಪಕರಣ ಸಬ್‌ಮರೀನ್‌ನ ’ಕಿವಿ’ (ಸೋನಾರ್ ಎಂಬ ಸಂಕೇತದ ಪೂರ್ಣರೂಪ ಸೌಂಡ್ ನ್ಯಾವಿಗೇಷನ್ ಆಂಡ್ ರೇಂಜಿಂಗ್ ಎಂದು). ಈ ಉಪಕರಣ ಶಬ್ದದ ಅಲೆಗಳ ಸಹಾಯದಿಂದ ಸಬ್‌ಮರೀನ್‌ನ ಸುತ್ತಮುತ್ತ ಏನೇನಿದೆ ಎಂಬುದನ್ನು ಪತ್ತೆಹಚ್ಚುತ್ತದೆ.
ಈಗಾಗಲೇ ಹೇಳಿದಂತೆ ಸಬ್‌ಮರೀನ್‌ಗಳ ಬಳಕೆ ಕೇವಲ ಮಿಲಿಟರಿ ಉಪಯೋಗಕ್ಕಷ್ಟೆ ಸೀಮಿತವಲ್ಲ. ವೈಜ್ಞಾನಿಕ ಸಂಶೋಧನೆ ಹಾಗೂ ಸಮುದ್ರದಾಳದಲ್ಲಿ ನಡೆಯುವ ಶೋಧನಾ ಕಾರ್ಯಗಳಲ್ಲೂ ಸಬ್‌ಮರೀನ್‌ಗಳು ವ್ಯಾಪಕವಾಗಿ ಬಳಕೆಯಾಗುತ್ತವೆ - ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ನಿಕ್ಷೇಪಗಳ ಪತ್ತೆ, ಮುಳುಗಿಹೋದ ಹಡಗುಗಳ ಅನ್ವೇಷಣೆ ಹೀಗೆ. ಆದರೆ ಇಲ್ಲಿ ಉಪಯೋಗಿಸುವ ಸಬ್‌ಮರೀನ್‌ಗಳ ಗಾತ್ರ ಕೊಂಚ ಚಿಕ್ಕದಾಗಿರುತ್ತದೆ, ಅಷ್ಟೆ! ಹೀಗಾಗಿ ಈ ವಾಹನಗಳನ್ನು ’ಸಬ್‌ಮರ್ಸಿಬಲ್’ಗಳೆಂದು ಕರೆಯುತ್ತಾರೆ. ೧೯೧೨ರಲ್ಲಿ ಅಪಘಾತಕ್ಕೀಡಾಗಿ ಮುಳುಗಿಹೋದ ಟೈಟಾನಿಕ್ ಮತ್ತೆ ಪತ್ತೆಯಾದದ್ದು ಇಂತಹುದೊಂದು ಸಬ್‌ಮರ್ಸಿಬಲ್‌ನ ನೆರವಿನಿಂದಲೇ.
ದೊಡ್ಡದೊಂದು ಕೇಬಲ್‌ನ ಸಹಾಯದಿಂದ ಹಡಗಿಗೆ ಅಂಟಿಕೊಂಡು ದೂರನಿಯಂತ್ರಿತವಾಗಿ ಕೆಲಸಮಾಡುವ ಸಬ್‌ಮರೀನ್‌ಗಳೂ ಇವೆ. ಇವುಗಳನ್ನು ’ರಿಮೋಟ್‌ಲಿ ಆಪರೇಟೆಡ್ ವೆಹಿಕಲ್’ ಅಥವಾ ’ಆರ್‌ಒವಿ’ಗಳೆಂದು ಕರೆಯುತ್ತಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ