ಸೋಮವಾರ, ಏಪ್ರಿಲ್ 20, 2009

ಇಸ್ರೋ ಮಡಿಲಿಗೆ ಮತ್ತೊಂದು ಯಶಸ್ಸು

ಭಾರತದ ಹೆಮ್ಮೆಯ ಉಪಗ್ರಹ ಉಡಾವಣಾ ವಾಹನ ಪಿಎಸ್‌ಎಲ್‌ವಿ-ಸಿ೧೨ ಮೂಲಕ ಇಂದು ಹಾರಿಬಿಡಲಾದ ಎರಡು ಉಪಗ್ರಹಗಳ ಉಡಾವಣೆ ಯಶಸ್ವಿಯಾಗಿದೆ. ಮುನ್ನೂರು ಕಿಲೋಗ್ರಾಂ ತೂಕದ ರೇಡಾರ್ ಇಮೇಜಿಂಗ್ ಉಪಗ್ರಹ (RISAT-2) ಹಾಗೂ ನಲವತ್ತು ಕೇಜಿಯ ಪುಟಾಣಿ ಉಪಗ್ರಹ ANUSAT ಇಂದು ಉಡಾವಣೆಯಾದ ಉಪಗ್ರಹಗಳು. ಇದರೊಡನೆ ಪಿಎಸ್‌ಎಲ್‌ವಿ ವಾಹನ ಈವರೆಗೆ ಹದಿನೈದು ಉಡಾವಣೆಗಳಲ್ಲಿ ಒಟ್ಟು ಮೂವತ್ತು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದಂತಾಗಿದೆ.

ಇಂದು ಉಡಾವಣೆಯಾದ ಉಪಗ್ರಹಗಳಲ್ಲಿ ತೀವ್ರ ಕುತೂಹಲ ಕೆರಳಿಸಿರುವುದು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ಸಹಯೋಗದಲ್ಲಿ ತಯಾರಾಗಿರುವ RISAT-2. ಎಲ್ಲ ಬಗೆಯ ವಾತಾವರಣಗಳಲ್ಲೂ ಭೂಮಿಯ ಸ್ಪಷ್ಟ ಚಿತ್ರಗಳನ್ನು ತೆಗೆಯಬಲ್ಲ ಈ ಉಪಗ್ರಹ ಅಂತರಿಕ್ಷದಲ್ಲಿನ ನಮ್ಮ ಕಣ್ಣಿನಂತೆ ಕೆಲಸಮಾಡಲಿದೆ. ಪ್ರವಾಹ ಹಾಗೂ ಚಂಡಮಾರುತದಂತಹ ನೈಸರ್ಗಿಕ ಪ್ರಕೋಪಗಳ ಸಂದರ್ಭದಲ್ಲಿ ಈ ಉಪಗ್ರಹ ವಿಪತ್ತು ನಿರ್ವಹಣೆಯ ಕೆಲಸದಲ್ಲಿ ನೆರವಾಗಲಿದೆ ಎಂದು ಇಸ್ರೋ ಪ್ರಕಟಣೆ ತಿಳಿಸಿದೆ.

ಈ ಉಪಗ್ರಹದ ನೆರವಿನಿಂದ ನಮ್ಮ ನೆರೆರಾಷ್ಟ್ರಗಳ, ಹಾಗೂ ವಿಶೇಷವಾಗಿ ಅಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೂ ಕಣ್ಣಿಡಬಹುದು; ನಮ್ಮ ಕರಾವಳಿಯನ್ನು ಹಾಗೂ ಅಂತರರಾಷ್ಟ್ರೀಯ ಗಡಿಗಳನ್ನೂ ಗಮನಿಸುತ್ತಿರಬಹುದು. ಹೀಗಾಗಿ ಇದೊಂದು ಗೂಢಚರ ಉಪಗ್ರಹ ಎಂಬ ಅಭಿಪ್ರಾಯ ಮಾಧ್ಯಮಗಳಲ್ಲಿ ಕೇಳಿಬಂದಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಇಸ್ರೋ ಮುಖ್ಯಸ್ಥ ಡಾ ಮಾಧವನ್ ನಾಯರ್ "RISAT-2 ಒಂದು ಭೂ ಸರ್ವೇಕ್ಷಣಾ ಉಪಗ್ರಹ ಮಾತ್ರ" ಎಂದು ಹೇಳಿದ್ದಾರೆ. ಇಂತಹುದೇ ಇನ್ನೊಂದು ಉಪಗ್ರಹವನ್ನು ಇದೇ ವರ್ಷ ಉಡಾಯಿಸಲಾಗುವುದು ಎಂದೂ ಅವರು ಹೇಳಿದ್ದಾರೆ.

ಇಂದು ಉಡಾವಣೆಯಾದ ಇನ್ನೊಂದು ಉಪಗ್ರಹ ANUSAT ಸಣ್ಣ ಗಾತ್ರದ 'ಮೈಕ್ರೋ ಸ್ಯಾಟೆಲೈಟ್' ವರ್ಗಕ್ಕೆ ಸೇರುತ್ತದೆ. ಈ ಉಪಗ್ರಹವನ್ನು ಚೆನ್ನೈನ ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ ನಿರ್ಮಿಸಲಾಗಿತ್ತು. ಇಸ್ರೋ ಮಾರ್ಗದರ್ಶನದಲ್ಲಿ ಭಾರತೀಯ ವಿಶ್ವವಿದ್ಯಾಲಯವೊಂದು ನಿರ್ಮಿಸಿದ ಮೊತ್ತಮೊದಲ ಉಪಗ್ರಹ ಎಂಬ ಹೆಗ್ಗಳಿಕೆ ANUSATಗೆ ಸಲ್ಲುತ್ತದೆ.

ಚಿತ್ರ: ಇಸ್ರೋ ಕೃಪೆ

ಕಾಮೆಂಟ್‌ಗಳಿಲ್ಲ:

badge