ಕಂಪ್ಯೂಟರಿನಲ್ಲಿ ಕನ್ನಡವೆಂದರೆ ಟೈಪಿಂಗ್ ಅಷ್ಟೇ ಅಲ್ಲ. ಇಂಗ್ಲಿಷಿನಲ್ಲೋ ಬೇರೊಂದು ಭಾಷೆಯಲ್ಲೋ ಕಂಪ್ಯೂಟರ್ ಬಳಸಿ ಏನೆಲ್ಲ ಸಾಧಿಸಬಹುದೋ ಅವನ್ನೆಲ್ಲ ಕನ್ನಡದಲ್ಲೂ ಸಾಧ್ಯವಾಗಿಸುವ ದಿನ ದೂರವಿಲ್ಲ. ಈ ನಿಟ್ಟಿನಲ್ಲಿ ನಡೆಯುತ್ತಿರುವ ಕೆಲವು ಬೆಳವಣಿಗೆಗಳನ್ನು ಪರಿಚಯಿಸುವ ಲೇಖನ ಇಲ್ಲಿದೆ. ಇಂತಹ ಇನ್ನೂ ಹಲವಾರು ಪ್ರಯತ್ನಗಳನ್ನು ಮುಂದಿನ ದಿನಗಳಲ್ಲಿ ಕನ್ನಡದ ಓದುಗರಿಗೆ ಪರಿಚಯಿಸುವ ಉದ್ದೇಶ ಇಜ್ಞಾನ ಡಾಟ್ ಕಾಮ್ ತಾಣಕ್ಕಿದೆ. ನಿಮ್ಮ ಗಮನಕ್ಕೆ ಬಂದ ಕನ್ನಡ ತಂತ್ರಾಂಶಗಳನ್ನು (ಕಂಪ್ಯೂಟರಿನ ತಂತ್ರಾಂಶಗಳು - ಮೊಬೈಲ್ ಆಪ್‌ಗಳೆರಡೂ ಸೇರಿದಂತೆ) ಇಜ್ಞಾನ ಫೇಸ್‌ಬುಕ್ ಪುಟದ ಮೂಲಕ ನಮಗೂ ಪರಿಚಯಿಸಿ!ಟಿ. ಜಿ. ಶ್ರೀನಿಧಿ
ಹಿರಿಯ ವಿದ್ವಾಂಸ ಪ್ರೊ. ಜಿ. ವೆಂಕಟಸುಬ್ಬಯ್ಯನವರು ಯಾವುದೋ ಸಂದರ್ಭದಲ್ಲಿ ನಿರ್ದಿಷ್ಟ ಪದ್ಯವೊಂದನ್ನು ಉದಾಹರಿಸಬೇಕಾಗಿ ಬಂದಿತ್ತು. ಆಗ ಅದರ ಪೂರ್ಣಪಾಠವನ್ನು ಒಮ್ಮೆ ನೋಡಿಬಿಡೋಣ ಎಂದು ಅವರು ತಮ್ಮ ಪುಸ್ತಕ ಸಂಗ್ರಹದಲ್ಲಿ ಹುಡುಕುತ್ತಿದ್ದರು. ಅಷ್ಟರಲ್ಲಿ ಅಲ್ಲಿಗೆ ಬಂದ ಅವರ ಮೊಮ್ಮಗಳು ಆ ಪದ್ಯವನ್ನು ಅಂತರಜಾಲದ ಮೂಲಕ ಕೆಲವೇ ಕ್ಷಣಗಳಲ್ಲಿ ಹುಡುಕಿಕೊಟ್ಟರಂತೆ!
ನಮ್ಮ ಬದುಕನ್ನು ಮಾಹಿತಿ ತಂತ್ರಜ್ಞಾನ ಹೇಗೆ ಬದಲಿಸುತ್ತಿದೆ ಎನ್ನುವ ಕುರಿತು ಮಾತನಾಡುವಾಗ ಜೀವಿಯವರು ಹೇಳಿದ ಉದಾಹರಣೆ ಇದು. ನಿಜ, ಕೆಲವೇ ವರ್ಷಗಳ ಹಿಂದೆ ಯೋಚಿಸಿಕೊಳ್ಳಲೂ ಕಷ್ಟವಾಗುವಂತಿದ್ದ ಕೆಲಸಗಳು ಇಂದು ಮಾಹಿತಿ ತಂತ್ರಜ್ಞಾನದಿಂದಾಗಿ ಬಹಳ ಸುಲಭವಾಗಿಬಿಟ್ಟಿವೆ. ಅಷ್ಟೇ ಅಲ್ಲ, ಮಾಹಿತಿ ತಂತ್ರಜ್ಞಾನದ ಅನುಕೂಲಗಳನ್ನು ಪಡೆಯಲು ಇದ್ದ ಭಾಷೆಯ - ತಾಂತ್ರಿಕ ಜ್ಞಾನದ ಅಡೆತಡೆಗಳೂ ನಿಧಾನಕ್ಕೆ ದೂರವಾಗುತ್ತಿವೆ.
ಈ ಹೇಳಿಕೆಗೆ ಪೂರಕವಾಗಿ ನಾವು 'ವಚನ ಸಂಚಯ'ದ ಉದಾಹರಣೆಯನ್ನು ಗಮನಿಸಬಹುದು. ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ವಚನಗಳನ್ನು ಒಂದೇಕಡೆ ಸಂಗ್ರಹಿಸಿಕೊಟ್ಟಿರುವ ಈ ತಾಣ ವಚನಸಾಹಿತ್ಯ ಕುರಿತ ಸಂಶೋಧನೆಗೆ ಮಹತ್ವದ ನೆರವು ನೀಡುತ್ತಿದೆ. ನಿರ್ದಿಷ್ಟ ಪದವೊಂದನ್ನು ಯಾವ ವಚನಕಾರರು ಎಲ್ಲಿ, ಹೇಗೆ ಬಳಸಿದ್ದಾರೆ ಎನ್ನುವುದನ್ನೆಲ್ಲ ಇಲ್ಲಿ ಬಹಳ ಸುಲಭವಾಗಿ ಹುಡುಕಬಹುದು; ಆ ಮಾಹಿತಿಯನ್ನು ಭಾಷೆ, ಇತಿಹಾಸ ಮುಂತಾದ ಹಲವು ಕ್ಷೇತ್ರಗಳ ಸಂಶೋಧನೆಯಲ್ಲಿ ಬಳಸಬಹುದು. ಬಹಳಷ್ಟು ಸಂದರ್ಭಗಳಲ್ಲಿ ಮುದ್ರಣಕ್ಕಾಗಿಯಷ್ಟೆ ಕಂಪ್ಯೂಟರೀಕೃತವಾಗುವ ಪಠ್ಯದಿಂದ ಬೇರೆಬೇರೆ ರೀತಿಗಳಲ್ಲಿ ಹೇಗೆ ಪ್ರಯೋಜನ ಪಡೆದುಕೊಳ್ಳಬಹುದು ಎನ್ನುವುದಕ್ಕೆ ವಚನ ಸಂಚಯ ಒಂದು ಉತ್ತಮ ಉದಾಹರಣೆ.
ಕಂಪ್ಯೂಟರಿಗೆ ಊಡಿಸಿದ ಮಾಹಿತಿಯನ್ನು ವಿನೂತನವಾಗಿ ಬಳಸಿಕೊಳ್ಳುವ ಇನ್ನೊಂದು ಪ್ರಯತ್ನ ಕನ್ನಡ ವಿಕಿಪೀಡಿಯದಲ್ಲಿ ನಡೆಯುತ್ತಿದೆ. ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ವಿಶ್ವಕೋಶ ಇದೆಯಲ್ಲ, ಅದರ ಸಂಪುಟಗಳನ್ನು ಇದೀಗ ವಿಕಿಪೀಡಿಯ ಆನ್‌ಲೈನ್ ವಿಶ್ವಕೋಶಕ್ಕೆ ಸೇರಿಸಲಾಗುತ್ತಿದೆ; ಆ ಮೂಲಕ ಅಪಾರ ಪ್ರಮಾಣದ ಮಾಹಿತಿ ಕನ್ನಡದ ಅಂತರಜಾಲ ಬಳಕೆದಾರರಿಗೆ ದೊರಕುವಂತಾಗಿದೆ. ಅಷ್ಟೇ ಅಲ್ಲ, ಯಾವುದೇ ವಿಷಯಕ್ಕೆ ಸಂಬಂಧಪಟ್ಟ ಹೊಸ ಬೆಳವಣಿಗೆಗಳು ಸಂಭವಿಸಿದಾಗ ಆ ಲೇಖನಗಳನ್ನು ಪರಿಷ್ಕರಿಸುವುದು ಕೂಡ ಸಾಧ್ಯವಾಗಿದೆ.
ಇಂಗ್ಲಿಷ್ ಪದಗಳನ್ನು ಟೈಪಿಸುವಾಗ ಏನಾದರೂ ಅಕ್ಷರದೋಷಗಳಿದ್ದರೆ ಅವನ್ನು ಕೆಂಪು ಅಡಿಗೆರೆಯ ಮೂಲಕ ಗುರುತಿಸುವ, ಸ್ಪೆಲಿಂಗ್ ಸರಿಪಡಿಸಲು ಸಹಾಯವನ್ನೂ ಮಾಡುವ ಸೌಲಭ್ಯಗಳನ್ನು ನಾವು ಹಲವು ತಂತ್ರಾಂಶ ಹಾಗೂ ಜಾಲತಾಣಗಳಲ್ಲಿ ನೋಡುತ್ತೇವೆ. ಇಮೇಲ್ ಫೇಸ್‌ಬುಕ್ ಇತ್ಯಾದಿಗಳಲ್ಲೆಲ್ಲ ನಾವು ಸರಾಗವಾಗಿ ಕನ್ನಡ ಪಠ್ಯವನ್ನು ಟೈಪಿಸುತ್ತೇವಲ್ಲ, ಅಲ್ಲಿರಬಹುದಾದ ಅಕ್ಷರದೋಷಗಳನ್ನು ಗುರುತಿಸುವ ಸೌಲಭ್ಯವೂ ಲಭ್ಯವಿದೆ. ಫೈರ್‌ಫಾಕ್ಸ್ ಬ್ರೌಸರ್‌ಗಾಗಿ ದೊರಕುವ 'ಕನ್ನಡ ಸ್ಪೆಲ್ ಚೆಕರ್' ಎನ್ನುವ ಉಚಿತ ತಂತ್ರಾಂಶವನ್ನು (ಆಡ್-ಆನ್) ಅಳವಡಿಸಿಕೊಂಡರೆ ಸಾಕು; ಆ ಬ್ರೌಸರಿನ ಕಿಟಕಿಗಳಲ್ಲಿ ಇಮೇಲ್ ಸಂದೇಶವನ್ನೋ ಫೇಸ್‌ಬುಕ್ ಪೋಸ್ಟನ್ನೋ ಬ್ಲಾಗ್ ಪ್ರತಿಕ್ರಿಯೆಯನ್ನೋ ಕನ್ನಡದಲ್ಲಿ ಟೈಪಿಸುವಾಗ ಅಕ್ಷರ ದೋಷಗಳನ್ನು ಪತ್ತೆಮಾಡುವುದು ಹಾಗೂ ಸೂಕ್ತವಾಗಿ ತಿದ್ದುಪಡಿಮಾಡಲು ನೆರವು ಪಡೆಯುವುದು ಸಾಧ್ಯವಾಗುತ್ತದೆ.
ಇದೆಲ್ಲ ಈಗಾಗಲೇ ಕಂಪ್ಯೂಟರಿಗೆ ಸೇರಿರುವ - ಈಗ ಸೇರುತ್ತಿರುವ ಮಾಹಿತಿಯನ್ನು ಉಪಯೋಗಿಸಿಕೊಳ್ಳುವ ಮಾತಾಯಿತು. ಕಂಪ್ಯೂಟರ್ ನಮಗೆ ಪರಿಚಯವಾಗುವ ಮುನ್ನವೇ ಅದೆಷ್ಟೋ ಪುಸ್ತಕ - ಪತ್ರಿಕೆ - ಕಡತಗಳು ಸೃಷ್ಟಿಯಾಗಿದ್ದವಲ್ಲ, ಅವುಗಳ ಬಳಕೆಯಲ್ಲಿ ಕಂಪ್ಯೂಟರ್ ಸಹಾಯ ಪಡೆದುಕೊಳ್ಳಲು ಸಾಧ್ಯವಿಲ್ಲವೆ?
ಖಂಡಿತಾ ಸಾಧ್ಯವಿದೆ. ಸ್ಕ್ಯಾನ್ ಮಾಡಿದ ಪುಟಗಳಲ್ಲಿ ಏನು ಮುದ್ರಿತವಾಗಿದೆ ಎಂದು ಗುರುತಿಸುವ, ಹಾಗೂ ಅಲ್ಲಿ ನಮಗೆ ಬೇಕಾದ ಮಾಹಿತಿಯನ್ನು ಹುಡುಕಿಕೊಳ್ಳಲು ನೆರವಾಗುವ ಓಸಿಆರ್ (ಆಪ್ಟಿಕಲ್ ಕ್ಯಾರಕ್ಟರ್ ರೆಕಗ್ನಿಶನ್, ಅಕ್ಷರಗಳ ಗುರುತಿಸುವಿಕೆ) ತಂತ್ರಾಂಶ ಕನ್ನಡದಲ್ಲೂ ಇದೆ. ಕಂಪ್ಯೂಟರಿನ ಕಡತದಲ್ಲೋ ವೆಬ್‌ಪುಟದಲ್ಲೋ ಮಾಡುವಂತೆ ನಮಗೆ ಬೇಕಾದ ಮಾಹಿತಿಯನ್ನು ಸ್ಕ್ಯಾನ್ ಮಾಡಿದ ಪುಟಗಳಲ್ಲೂ ಹುಡುಕಿಕೊಳ್ಳುವ ಉದಾಹರಣೆಯನ್ನು ನಾವು 'ಸಿರಿನುಡಿ' ಜಾಲತಾಣದಲ್ಲಿ ನೋಡಬಹುದು. ಅಲ್ಲಿ ಲಭ್ಯವಿರುವ 'ಅಖಿಲ ಭಾರತ ಪತ್ರಿಕೆ'ಯ ಸಂಚಿಕೆಗಳಲ್ಲಿ (ಮುದ್ರಿತ ಸಂಚಿಕೆಯ ಸ್ಕ್ಯಾನ್ ಮಾಡಿದ ರೂಪ) ನಾವು ನಮಗೆ ಬೇಕಾದ ಮಾಹಿತಿಯನ್ನು ಹುಡುಕಿಕೊಳ್ಳುವುದು ಸಾಧ್ಯ. ಮುಂದೆ ಕನ್ನಡ ಓಸಿಆರ್ ತಂತ್ರಜ್ಞಾನದ ಬಳಕೆ ವ್ಯಾಪಕವಾದಾಗ ಏನೆಲ್ಲ ಸಾಧ್ಯವಾಗಬಹುದು ಎನ್ನುವುದರ ಸಣ್ಣದೊಂದು ಮುನ್ನೋಟದಂತಿದೆ ಈ ಪ್ರಯತ್ನ.
ಕಂಪ್ಯೂಟರ್ ಬಳಸಲು ಬಾರದವರಿಗೂ ತಂತ್ರಜ್ಞಾನ ನೆರವಾಗಬಲ್ಲದು ಎನ್ನುವುದಕ್ಕೆ ಗೂಗಲ್‌ನ ಅನುವಾದ ತಂತ್ರಾಂಶ ಒಂದು ಉತ್ತಮ ಉದಾಹರಣೆ. ಈಗ ಹೇಗಿದ್ದರೂ ಎಲ್ಲೆಲ್ಲೂ ಟಚ್‌ಸ್ಕ್ರೀನು-ಸ್ಮಾರ್ಟ್‌ಫೋನುಗಳದೇ ಭರಾಟೆ ತಾನೆ, ಅದಕ್ಕಾಗಿ ಗೂಗಲ್ ಸಂಸ್ಥೆ ತನ್ನ ಅನುವಾದ ತಂತ್ರಾಂಶವನ್ನು ಆಪ್ ರೂಪದಲ್ಲೂ ಬಿಡುಗಡೆ ಮಾಡಿದೆ. ಸ್ಪರ್ಶಸಂವೇದಿ ಪರದೆಯಿರುವ (ಟಚ್ ಸ್ಕ್ರೀನ್) ಮೊಬೈಲ್ - ಟ್ಯಾಬ್ಲೆಟ್ ಮುಂತಾದ ಸಾಧನಗಳಲ್ಲಿ ನಾವು 'ಗೂಗಲ್ ಟ್ರಾನ್ಸ್‌ಲೇಟ್' ಆಪ್ ಅಳವಡಿಸಿಕೊಂಡರೆ ಸಾಕು; ಪರದೆಯ ಮೇಲೆ ಬೆರಳನ್ನೋ ಸ್ಟೈಲಸ್ ಕಡ್ಡಿಯನ್ನೋ ಬಳಸಿ ಕನ್ನಡ ಪದಗಳನ್ನು ಬರೆಯುವುದು, ಹಾಗೂ ಕ್ಷಣಾರ್ಧದಲ್ಲಿ ಆ ಪದಗಳನ್ನು ಇತರ ಭಾಷೆಗಳಿಗೆ ಅನುವಾದಿಸಿಕೊಳ್ಳುವುದು ಸಾಧ್ಯವಾಗುತ್ತದೆ.
ಮುದ್ರಿತ ಅಕ್ಷರಗಳನ್ನು, ಕೈಬರಹವನ್ನು ಗುರುತಿಸುವ ಕಂಪ್ಯೂಟರಿಗೆ ತನ್ನಲ್ಲಿರುವ ಮಾಹಿತಿಯನ್ನು ಧ್ವನಿರೂಪದಲ್ಲಿ ಪ್ರಸ್ತುತಪಡಿಸುವುದೂ ಗೊತ್ತು. ಪಠ್ಯವನ್ನು ಧ್ವನಿಗೆ ಬದಲಿಸುವ (ಟೆಕ್ಸ್ಟ್-ಟು-ಸ್ಪೀಚ್) ಇಂತಹ ತಂತ್ರಾಂಶ ಕನ್ನಡದಲ್ಲೂ ಇದೆ. ಕಣಜ ಅಂತರಜಾಲ ಕನ್ನಡ ಜ್ಞಾನಕೋಶದ ಮೂಲಕ ಉಚಿತವಾಗಿ ದೊರಕುವ 'ಇ-ಸ್ಪೀಕ್' ತಂತ್ರಾಂಶ ಕನ್ನಡದ ಯುನಿಕೋಡ್ ಪಠ್ಯವನ್ನು ಓದಿಹೇಳಬಲ್ಲದು. ದೃಷ್ಟಿ ಸವಾಲು ಎದುರಿಸುತ್ತಿರುವ ವ್ಯಕ್ತಿಗಳು ಕೂಡ ಕಂಪ್ಯೂಟರ್ ಲೋಕದಲ್ಲಿರುವ ಕನ್ನಡದ ಮಾಹಿತಿಯನ್ನು ಆಲಿಸಲು ನೆರವಾಗುವುದು ಈ ತಂತ್ರಾಂಶದ ಹೆಗ್ಗಳಿಕೆ.
ಕಂಪ್ಯೂಟರಿನಲ್ಲಿ ಕನ್ನಡವೆಂದರೆ ಟೈಪಿಂಗ್ ಅಷ್ಟೇ ಅಲ್ಲ ಎನ್ನುವುದನ್ನು ಪದೇ ಪದೇ ನೆನಪಿಸಲು ಶಕ್ತವಾದ ಇಂತಹ ಅನೇಕ ಪ್ರಯತ್ನಗಳು ಐಟಿ ಜಗದಲ್ಲಿ ಕನ್ನಡದ ಬಾವುಟವನ್ನು ಎತ್ತಿಹಿಡಿದಿವೆ. ಇಂತಹ ಪ್ರಯತ್ನಗಳನ್ನು ಬೆಂಬಲಿಸಲು, ಅವುಗಳ ಪ್ರಯೋಜನ ಪಡೆದುಕೊಳ್ಳಲು ನಾವು ಹೆಚ್ಚೇನೂ ಕಷ್ಟಪಡಬೇಕಿಲ್ಲ. ಇಂತಹ ಯಾವುದೇ ಪ್ರಯತ್ನಕ್ಕೆ ನಾವು ನೀಡುವ ಅತ್ಯಲ್ಪ ಬೆಂಬಲವೂ ಕನ್ನಡದ ಬೆಳವಣಿಗೆಲ್ಲಿ ಮಹತ್ವದ ಪಾತ್ರ ವಹಿಸಬಲ್ಲದು.
ನವೆಂಬರ್ ೨೬, ೨೦೧೪ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ