ಮಂಗಳವಾರ, ಆಗಸ್ಟ್ 28, 2012

ಫಾಂಟ್ ಫಂಡಾ!

ಟಿ. ಜಿ. ಶ್ರೀನಿಧಿ

ಕಂಪ್ಯೂಟರಿನ ಮುಂದೆ ಕುಳಿತಿದ್ದಷ್ಟೂ ಹೊತ್ತು ನಮ್ಮ ಸುತ್ತ ಮಾಹಿತಿಯ ಮಹಾಸಾಗರವೇ ಹರಡಿಕೊಂಡಿರುತ್ತದೆ, ಮತ್ತು ಅದರಲ್ಲಿ ಬಹುಪಾಲು ಪಠ್ಯರೂಪದಲ್ಲೇ ಇರುತ್ತದೆ. ಕಂಪ್ಯೂಟರ್ ಬಿಟ್ಟು ಎದ್ದಮೇಲೂ ಅಷ್ಟೆ: ಮೇಜಿನ ಮೇಲಿನ ಪತ್ರಿಕೆ, ಪಕ್ಕದ ರಸ್ತೆಯ ಲೈಬ್ರರಿಯಿಂದ ತಂದಿರುವ ಪುಸ್ತಕ, ಬೆಳಿಗ್ಗೆ ಪೇಪರಿನ ಜೊತೆ ಬಂದ ಪಾಂಪ್ಲೆಟ್ಟು, ಪೋಸ್ಟಿನಲ್ಲಿ ಬಂದಿರುವ ಟೆಲಿಫೋನ್ ಬಿಲ್ಲು - ಹೀಗೆ ಅಲ್ಲೂ ಭಾರೀ ಪ್ರಮಾಣದ ಮಾಹಿತಿ ಕಂಪ್ಯೂಟರಿನ ಸಹಾಯದಿಂದಲೇ ಮುದ್ರಿತವಾಗಿರುವುದು ನಮ್ಮ ಗಮನಕ್ಕೆ ಬರುತ್ತದೆ.

ಇಷ್ಟೆಲ್ಲ ಮಾಹಿತಿಯನ್ನು ನಮಗೆ ತಲುಪಿಸುವ ಮಹತ್ವದ ಜವಾಬ್ದಾರಿ ಅಕ್ಷರಗಳದು. ಈ ಅಕ್ಷರಗಳ ಅನನ್ಯಲೋಕ ಕಂಪ್ಯೂಟರ್‌ನಲ್ಲಿ ತೆರೆದುಕೊಳ್ಳುವ ಬಗೆಯತ್ತ ಒಂದು ನೋಟ ಇಲ್ಲಿದೆ.


ಅಕ್ಷರಲೋಕ
ಕಂಪ್ಯೂಟರ್ ಪರದೆಯಲ್ಲಿ ಮೂಡುವ ಅಕ್ಷರಗಳನ್ನು ನೋಡಿದ್ದೀರಾ? ನೋಡುವುದೇನು ಬಂತು, ಸರಾಗವಾಗಿ ಓದಲಿಕ್ಕೂ ಗೊತ್ತು ಎಂದು ನೀವು ಹೇಳಬಹುದು; ಅದರಲ್ಲೇನು ವಿಶೇಷ ಎಂದು ಕೇಳಲೂಬಹುದು. ಇರಲಿ.

ಕಂಪ್ಯೂಟರಿನಲ್ಲಿ ಯಾವುದೇ ಭಾಷೆಯ ಅಕ್ಷರಗಳನ್ನು ಮೂಡಿಸಬೇಕೆಂದರೆ ಅದಕ್ಕೆ ಅಕ್ಷರಶೈಲಿಗಳು ಬೇಕು. ಕಂಪ್ಯೂಟರಿನ ಭಾಷೆಯಲ್ಲಿ ಇವಕ್ಕೆ ಫಾಂಟ್‌ಗಳೆಂದು ಹೆಸರು. ಪರದೆಯ ಮೇಲಿರುವ ಅಕ್ಷರಗಳನ್ನು 'ನೋಡುವ' ಬಗೆಗೆ ಪ್ರಶ್ನೆ ಕೇಳಿದ್ದು ಇದೇ ಹಿನ್ನೆಲೆಯನ್ನಿಟ್ಟುಕೊಂಡು.

ಅಕ್ಷರಗಳು ರೂಪಿಸುವ ಪದ-ವಾಕ್ಯಗಳ ಅರ್ಥ ಹೇಗಾದರೂ ಇರಲಿ. ಆ ಅಕ್ಷರಗಳ ರೂಪವನ್ನು ನೋಡಿದರೆ ಪ್ರತಿಯೊಂದು ಅಕ್ಷರ ಹಾಗೂ ಲೇಖನ ಚಿಹ್ನೆಯೂ ಬಳಕೆಯಾಗಿರುವ ಫಾಂಟಿನ ವಿನ್ಯಾಸಕ್ಕೆ ಹೊಂದುವ ಆಕಾರದಲ್ಲಿರುವುದು ಕಂಡುಬರುತ್ತದೆ. ಒಂದು ಫಾಂಟು ಕೈಬರೆಹದಂತೆ ಕಂಡರೆ ಇನ್ನೊಂದು ಸ್ಕೇಲು-ಪೆನ್ಸಿಲ್ ಹಿಡಿದುಕೊಂಡು ಚಿತ್ರಿಸಿದಂತೆ ಕಾಣುತ್ತದೆ. ಕೆಲವು ಗಾಢವಾಗಿ ಎದ್ದುಕಾಣುವಂತಿದ್ದರೆ (ಬೋಲ್ಡ್) ಇನ್ನು ಕೆಲವು ಓರೆಯಾಗಿ ಒಂದು ಪಕ್ಕಕ್ಕೆ ವಾಲಿಕೊಂಡಂತೆ (ಇಟಾಲಿಕ್) ಇರುತ್ತವೆ.

ಇಂಗ್ಲಿಷಿನಲ್ಲಿ ಇರುವುದೇ ಇಪ್ಪತ್ತಾರು ಅಕ್ಷರ; ಜೊತೆಗೆ ಮೊದಲಿನಿಂದಲೂ ಕಂಪ್ಯೂಟರ್ ತಂತ್ರಜ್ಞಾನದ ಬೆಳೆವಣಿಗೆ ಇಂಗ್ಲಿಷ್ ಕೇಂದ್ರಿತವಾಗಿಯೇ ಆಗಿದೆ. ಹಾಗಾಗಿ ಇಂಗ್ಲಿಷ್ ಮತ್ತು ರೋಮನ್ ಲಿಪಿ ಬಳಸುವ ಇನ್ನಿತರ ಕೆಲ ಭಾಷೆಗಳಿಗೆ ಫಾಂಟುಗಳ ದೃಷ್ಟಿಯಿಂದ ಹೆಚ್ಚೇನೂ ಸಮಸ್ಯೆಯಿಲ್ಲ. ಫಾಂಟುಗಳಲ್ಲಿ 'ಎ' ಇಂದ 'ಜೆಡ್'ವರೆಗೆ ಪ್ರತಿಯೊಂದು ಅಕ್ಷರಕ್ಕೂ ತನ್ನದೇ ಆದ ಪ್ರತ್ಯೇಕ ಆಕಾರ ಇದೆ.

ಅಕ್ಷರಭಾಗಗಳು
ಅಕ್ಷರವನ್ನೋ ಅಂಕೆಯನ್ನೋ ಲೇಖನ ಚಿಹ್ನೆಯನ್ನೋ ಪ್ರತಿನಿಧಿಸುವ ಇಂತಹ ಆಕಾರಗಳನ್ನು 'ಗ್ಲಿಫ್', ಅಂದರೆ ಅಕ್ಷರಭಾಗಗಳೆಂದು ಕರೆಯುತ್ತಾರೆ. ಇಂಗ್ಲಿಷಿನ ಉದಾಹರಣೆಯನ್ನೇ ತೆಗೆದುಕೊಂಡರೆ ದೊಡ್ಡಕ್ಷರದ 'ಎ' ಒಂದು ಗ್ಲಿಫ್, ಸಣ್ಣಕ್ಷರದ 'ಎ' ಇನ್ನೊಂದು ಗ್ಲಿಫ್.

ಆದರೆ ಕನ್ನಡದಂತಹ ಭಾಷೆಗಳಲ್ಲಿ ಇದು ಇಷ್ಟು ಸುಲಭವಲ್ಲ. ನುಡಿಯದೋ ಬರಹದ್ದೋ ಒಂದು ಅಕ್ಷರಶೈಲಿ ಬಳಸಿ ಮೈಕ್ರೋಸಾಫ್ಟ್ ವರ್ಡ್‌ನಲ್ಲಿ ಒಂದಷ್ಟು ಪಠ್ಯ ಟೈಪಿಸಿ ನೋಡಿ. ಅ, ಆ, ಇ, ಈ, ಉ, ಊಗಳಿಗೆಲ್ಲ ತಮ್ಮದೇ ಆದ ಗ್ಲಿಫ್ ಇದೆಯಾದರೂ ಋ ಅಕ್ಷರಕ್ಕೆ ಬರುವಷ್ಟರಲ್ಲೇ ಅಕ್ಷರದಲ್ಲಿ ಎರಡು ಭಾಗಗಳಿರುವುದು ನಿಮ್ಮ ಗಮನಕ್ಕೆ ಬರುತ್ತದೆ. ಅದರ ನಂತರದ ಅಕ್ಷರವನ್ನು (ಅದು ಇದೆಯೋ ಇಲ್ಲವೋ ಎಂಬ ಚರ್ಚೆ ಬಿಟ್ಟು) ಟೈಪಿಸಿ ನೋಡಿದರೆ ಋ ಅಕ್ಷರದ ಪೂರ್ವಾರ್ಧಕ್ಕೆ ಹೊಸತೊಂದು ಉತ್ತರಾರ್ಧ ಸೇರಿ ೠ ರೂಪುಗೊಂಡಿರುವುದು ಗೊತ್ತಾಗುತ್ತದೆ. 'ಅ' ಪಕ್ಕದಲ್ಲಿ ಒಂದು ಸೊನ್ನೆ ಸೇರಿ ಅಂ, ಎರಡು ಪುಟಾಣಿ ಸೊನ್ನೆಗಳು ಒಟ್ಟಿಗೆ ಸೇರಿ ಅಃ ಆಗಿದ್ದೂ ಗೊತ್ತಾಗುತ್ತದೆ.

ವ್ಯಂಜನಗಳತ್ತ ಬಂದರಂತೂ ತಲೆಕಟ್ಟಿಲ್ಲದ ಅಪೂರ್ಣ ಕ ಅಕ್ಷರ ತಲೆಕಟ್ಟಿನ ಜೋಡಣೆಯಿಂದ ಪೂರ್ಣವಾಗುವುದು, ದೀರ್ಘ ಸೇರಿ ಕಾ ಆಗುವುದು ಅತ್ಯಂತ ಸ್ಪಷ್ಟವಾಗಿ ಕಾಣುತ್ತದೆ. ಕ ಕಾ ಕಿ ಕೀ ದಾಟಿ ಕು ಕೂ ಅನ್ನುವಷ್ಟರಲ್ಲಿ ಮೂರುಮೂರು ಭಾಗಗಳು ಸೇರುವುದು ಶುರುವಾಗಿರುತ್ತದೆ!

ಇಷ್ಟೆಲ್ಲ ಭಾಗಗಳಿವೆಯಲ್ಲ, ನೀವು ಬಳಸುತ್ತಿರುವ ಅಕ್ಷರಶೈಲಿಯ ಮಟ್ಟಿಗೆ ಅವೆಲ್ಲವೂ ಪ್ರತ್ಯೇಕ ಗ್ಲಿಫ್‌ಗಳೇ.

ಎನ್‌ಕೋಡಿಂಗ್
ಹಾಗಾದರೆ ಕನ್ನಡ ಫಾಂಟುಗಳಲ್ಲಿರುವ ಅಕ್ಷರಭಾಗಗಳ ಸಂಖ್ಯೆ ಇಂಗ್ಲಿಷ್ ಫಾಂಟುಗಳಲ್ಲಿರುವುದಕ್ಕಿಂತ ಹೆಚ್ಚು ಎಂದಾಯಿತು. ಆದರೆ ಇಂಗ್ಲಿಷ್ ಟೈಪಿಂಗಿಗೆ ಒಂದು ಕೀಬೋರ್ಡು, ಕನ್ನಡ ಟೈಪಿಸಲಿಕ್ಕೇ ಇನ್ನೊಂದು ಕೀಬೋರ್ಡು ಇಟ್ಟುಕೊಳ್ಳಿ ಎಂದು ಬಳಕೆದಾರರಿಗೆ ಹೇಳುವಂತಿಲ್ಲವಲ್ಲ? ಹಾಗಾಗಿಯೇ ಕಂಪ್ಯೂಟರಿನ ಕೀಲಿಮಣೆಯಲ್ಲಿ ಲಭ್ಯವಿರುವ ಅಕ್ಷರಗಳ ಜಾಗದಲ್ಲೇ ಕನ್ನಡದ ಅಕ್ಷರಭಾಗಗಳನ್ನು ಕೂರಿಸಬೇಕಾಗುತ್ತದೆ.

ಕನ್ನಡದ ಪದಸಂಸ್ಕರಣಾ ತಂತ್ರಾಂಶಗಳು ಮೂಲತಃ ಮಾಡುವುದು ಇದೇ ಕೆಲಸವನ್ನು. ಬರಹದಲ್ಲೋ ನುಡಿಯಲ್ಲೋ ಟೈಪು ಮಾಡಿದ ಒಂದು ಸಾಲನ್ನು ಯಾವುದಾದರೂ ಇಂಗ್ಲಿಷ್ ಫಾಂಟಿಗೆ ಬದಲಿಸಿ ನೋಡಿದರೆ ಇದು ನಿಮಗೇ ತಿಳಿಯುತ್ತದೆ; ನುಡಿ ಅಥವಾ ಬರಹದ ಉದಾಹರಣೆಯನ್ನೇ ತೆಗೆದುಕೊಂಡರೆ ಇಂಗ್ಲಿಷಿನ ಸಿ ಅಕ್ಷರ ಕನ್ನಡದ ಅ ಆಗಿರುತ್ತದೆ.

ನಾವು ಟೈಪಿಸಿದ ಅಕ್ಷರ ಇಂಗ್ಲಿಷಿನಲ್ಲಿರಲಿ, ಕನ್ನಡದಲ್ಲೇ ಇರಲಿ, ಅದು ಕಂಪ್ಯೂಟರಿಗೆ ಅರ್ಥವಾಗಬೇಕಾದರೆ ದ್ವಿಮಾನ ಪದ್ದತಿಯ ಅಂಕಿಗಳ ರೂಪಕ್ಕೆ ಬದಲಾಗಲೇಬೇಕು. ಹೀಗಾಗಿ ಯಾವುದೇ ಅಕ್ಷರ, ಅಂಕೆ ಅಥವಾ ವ್ಯಾಕರಣ ಚಿಹ್ನೆ ಕಂಪ್ಯೂಟರಿನಲ್ಲಿ ದಾಖಲಾಗುವಾಗ ಅದನ್ನು ಯಾವುದೋ ಒಂದು ಸಂಖ್ಯೆ ಪ್ರತಿನಿಧಿಸುತ್ತದೆ. ಇಂತಹ ಅಕ್ಷರವನ್ನು ಈ ಸಂಖ್ಯೆ ಪ್ರತಿನಿಧಿಸಬೇಕು ಎಂದು ಹೇಳುವುದು ಎನ್‌ಕೋಡಿಂಗ್ ವ್ಯವಸ್ಥೆಗಳ ಕೆಲಸ.

ನಾವು ಆಗಿಂದಾಗ್ಗೆ ಕೇಳುವ ಹೆಸರುಗಳಾದ ಯುನಿಕೋಡ್, ಆಸ್ಕಿ (ಅಮೆರಿಕನ್ ಸ್ಟಾಂಡರ್ಡ್ ಕೋಡ್ ಫಾರ್ ಇನ್ಫರ್ಮೇಶನ್ ಇಂಟರ್‌ಚೇಂಜ್) ಮುಂತಾದವೆಲ್ಲ ಎನ್‌ಕೋಡಿಂಗ್ ವ್ಯವಸ್ಥೆಗೆ ಉದಾಹರಣೆಗಳು.

ಆಗಸ್ಟ್ ೨೮, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge