ಶುಕ್ರವಾರ, ಆಗಸ್ಟ್ 10, 2012

ಜೈವಿಕ ಇಂಧನ ಕ್ರಾಂತಿ: ಮಲ್ಲಿಗೆವಾಳು ಮೊದಲುಗೊಂಡು..

ಇವತ್ತು (ಆಗಸ್ಟ್ ೧೦) ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನ. ಇಂದಿನಿಂದ ಮೂರು ದಿನಗಳವರೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ 'ಜೈವಿಕ ಇಂಧನ ಮೇಳ' ನಡೆಯುತ್ತಿದೆ. ಈ ಸಂದರ್ಭದಲ್ಲೊಂದು ವಿಶೇಷ ಲೇಖನ ಪ್ರಕಟಿಸಲು ಇಜ್ಞಾನ ಡಾಟ್ ಕಾಮ್ ಸಂತೋಷಿಸುತ್ತದೆ. ಜೈವಿಕ ಇಂಧನ ಮೇಳದ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ತಾಣಕ್ಕೆ ಭೇಟಿಕೊಡಬಹುದು.

ಟಿ. ಎಸ್. ಗೋಪಾಲ್

ಹಾಸನದಿಂದ ಸಕಲೇಶಪುರಕ್ಕೆ ಹೋಗುವ ಹೆದ್ದಾರಿಯಲ್ಲಿ ಆರೇಳು ಕಿ.ಮೀ. ದೂರ ಹೋದರೆ ಅಲ್ಲೇ ಎಡಕ್ಕೆ ಶೆಟ್ಟಿಹಳ್ಳಿಗೆ ಹೋಗುವ ರಸ್ತೆ. ಆ ರಸ್ತೆಯಲ್ಲಿ ಸ್ವಲ್ಪ ಮುಂದೆ ಹೋಗಿ ಶಂಕರನಹಳ್ಳಿ ದಾಟಿದರೆ, ಬಲಕ್ಕೆ ಮಲ್ಲಿಗೆವಾಳು ಗ್ರಾಮಕ್ಕೆ ಎರಡೇ ಕಿಲೋಮೀಟರು ಎಂಬ ಬೋರ್ಡು ಕಾಣಸಿಗುತ್ತದೆ. ಹಾಸನದಿಂದ ಹನ್ನೆರಡು ಕಿ.ಮೀ. ದೂರದ ಈ ಹಳ್ಳಿಯಲ್ಲಿ ಹೆಚ್ಚೆಂದರೆ ಒಂದು ನೂರು ಕುಟುಂಬಗಳಿವೆ.

ಶಾಲೆಯ ಮುಂದಿನ ಮಣ್ಣುರಸ್ತೆಯಲ್ಲಿ ನಮ್ಮ ವಾಹನ ನಿಲ್ಲುವಾಗ, ಹೊರಗೆ ಆಡುತ್ತಿದ್ದ ಮಕ್ಕಳು, ಆಗಾಗ ಬರುವ ಪ್ರೀತಿಯ ನೆಂಟರನ್ನು ಸ್ವಾಗತಿಸುವಷ್ಟೇ ಸಲಿಗೆಯಿಂದ ಸುತ್ತ ಬಂದು ನಿಂತವು. ಕಚ್ಚಾ ರಸ್ತೆಯಲ್ಲಿ ವಾಹನ ತಮ್ಮನ್ನು ದಾಟಿ ಬರುವಾಗಲೇ ಕೈಬೀಸಿ ನಗುಮುಖ ತೋರಿದ್ದ ನಾಲ್ಕಾರು ಜನ ಶಾಲೆಯತ್ತಲೇ ಬಂದರು.

ಹಳ್ಳಿಯ ಎಲ್ಲ ಮನೆಗಳ ಬೇಲಿಯಲ್ಲಿ ಕಳ್ಳಿಗಿಡ ಎಂದು ಇವರು ಹೆಸರಿಟ್ಟ ಜಟ್ರೋಫಾ ನಳನಳಿಸುತ್ತಿದೆ. ಅವುಗಳ ಬೆಳೆವಣಿಗೆ ನೋಡಿದರೆ ಯಾವ ಯಾವ ವರ್ಷಗಳಲ್ಲಿ ನಟ್ಟ ಗಿಡಗಳೆಂದು ಸುಲಭವಾಗಿ ಗುರುತಿಸುವ ಹಾಗಿದೆ. ಮಳೆಯಿಲ್ಲದ ಈ ದಿನಗಳಲ್ಲೂ ಬೇವು, ಹೊಂಗೆಗಳು ತಕ್ಕ ಮಟ್ಟಿಗೆ ಉತ್ಸಾಹದಿಂದಿವೆ. ಪರಂಪರೆಯಲ್ಲಿ ನಟ್ಟುಕೊಂಡು ಬಂದ ಹಳೆಯ ತಲೆಮಾರಿನ ಮರಗಳ ನಡುವೆ ಎರಡು-ಮೂರು ವರ್ಷದ ಗಿಡಗಳು ಜಂಭದಿಂದ ತಲೆಯೆತ್ತಿವೆ. ಹಿಂದೆಲ್ಲ ಇಲ್ಲಿ ಚಂದದ ಕಾಡು ಇತ್ತು ಎಂಬುದನ್ನು ನೆನಪಿಸುವ ಕಾಡುಮರಗಳೂ ಅಲ್ಲಲ್ಲಿ ಉಳಿದುಕೊಂಡಿವೆ. ಹಳ್ಳಿಯ ಹಲವರಿಗೆ ಇನ್ನೂ ಬಾಯಿಪಾಠವಾಗಿರದ ಸಿಮರೂಬ ಎಂಬ ಹೆಸರಿನ ಗಿಡವೂ ಅಲ್ಲಲ್ಲಿ ಬೇರುಬಿಟ್ಟುಕೊಂಡಿದೆ. ಶಾಲೆಯ ಅಂಗಳದಲ್ಲಿ ಹೆಚ್ಚೇನೂ ಜಾಗವಿರದೆ ಇದ್ದರೂ ಮಕ್ಕಳು ತಾವೂ ಒಂದೆರಡು ಸಿಮರೂಬ ಗಿಡಗಳನ್ನು ನೆಟ್ಟಿದ್ದು ಅವಾಗಲೇ ಶಾಲೆಯ ಹೆಂಚಿನೆತ್ತರಕ್ಕೆ ಬೆಳೆದು ನಿಂತಿವೆ. ಹಲವು ಮನೆಗಳ ಮುಂದೆ ಒಣಗಲು ಇಟ್ಟ ಜಟ್ರೋಫಾ ಕಾಯಿಗಳೂ ಬಿಡಿಸಿಟ್ಟ ಹೊಂಗೆಬೀಜಗಳೂ ಹರಡಿಕೊಂಡಿವೆ. ನೆನ್ನೆಯೋ ಮೊನ್ನೆಯೋ ಕೊಯ್ದುತಂದ ಶುಂಠಿಯ ಪಕ್ಕದಲ್ಲೇ ಹೊಂಗೆಯ ಬೀಜಗಳನ್ನೂ ಹರವಿದ್ದಾರೆ.

ಇಳಿವಯಸ್ಸಿನ ಅಜ್ಜಿ ಕಾಳಮ್ಮ ತನ್ನ ಮೊಮ್ಮಗನನ್ನೂ ಕಟ್ಟಿಕೊಂಡು ಕಳ್ಳಿಕಾಯಿಗಳನ್ನು ಸಂಗ್ರಹಿಸಿ ಒಣಗಿಸುವ ಕಾಯಕವನ್ನು ಶ್ರದ್ಧೆಯಿಂದ ನೆರವೇರಿಸುತ್ತಾರೆ. ಎಪ್ಪತ್ತೈದು ವರ್ಷ ವಯಸ್ಸಿನ ಚಂದ್ರಮ್ಮನಿಗೆ ಈಚೆಗೆ ತಾನು ನಟ್ಟ ಸಸಿಗಳು ಎತ್ತರಕ್ಕೆ ಬೆಳೆದಿರುವ ಬಗೆಗೆ ಸಂತೋಷವಿದ್ದರೂ ಈ ವರ್ಷ ಮಳೆಯಿಲ್ಲದ ಕಾರಣ ಅವುಗಳಿಗೆ ಪೋಷಣೆಯಿಲ್ಲವೆಂಬ ಕೊರಗೂ ಇದೆ. ವೃದ್ಧ ಭೋಗಮಲ್ಲೇಗೌಡರು ನನ್ನೊಂದಿಗೆ ಬಂದ ಕ್ಷೇತ್ರವೀಕ್ಷಕ ತಿಮ್ಮೇಗೌಡರನ್ನು ಪಕ್ಕಕ್ಕೆ ಕರೆದು, ತಮ್ಮ ಹಿತ್ತಿಲಿನಲ್ಲಿ ಹಾಳಾದ ಗಿಡಗಳಿಗೆ ಬದಲಿ ಸಸಿಗಳನ್ನು ಯಾವಾಗ ತಂದುಕೊಡುತ್ತೀರೆಂದು ವಿಚಾರಿಸಿಕೊಂಡರು.

ನನ್ನನ್ನು ಅಲ್ಲಿಗೆ ಕರೆದೊಯ್ದ ಪ್ರೊ.ಬಾಲಕೃಷ್ಣಗೌಡರು ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಅರಣ್ಯ ಮತ್ತು ಪರಿಸರವಿಜ್ಞಾನದ ಪ್ರಾಧ್ಯಾಪಕರು. ಹಾಸನದ ಸಮೀಪದ ಮಡೆನೂರಿನಲ್ಲಿ ಕರ್ನಾಟಕ ಸರ್ಕಾರ ಸ್ಥಾಪಿಸಿರುವ ಜೈವಿಕ ಇಂಧನ ಉದ್ಯಾನದ ಯೋಜನಾ ನಿರ್ದೇಶಕರೂ ಇವರೇ. ಜೈವಿಕ ಇಂಧನ ಕಾರ್ಯಪಡೆಯ ಯೋಜನೆಯನ್ನು ಹಾಸನ ಜಿಲ್ಲೆಯಲ್ಲಿ ಸಾರ್ವತ್ರಿಕವಾಗಿ ಜಾರಿಗೆ ತರಲು ಪ್ರೇರಕರಾಗಿ ಬಾಲಕೃಷ್ಣಗೌಡರ ತಂಡ ಕಳೆದ ನಾಲ್ಕು ವರ್ಷಗಳಿಂದ ಕಾರ್ಯಪ್ರವೃತ್ತವಾಗಿದೆ.

ಕರ್ನಾಟಕ ಸರಕಾರ ೨೦೦೮ರಲ್ಲಿ ಜೈವಿಕ ಇಂಧನ ನೀತಿಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಜೈವಿಕ ಇಂಧನ ಕಾರ್ಯಪಡೆಯನ್ನು ರಚಿಸಿತು. ಜೈವಿಕ ಇಂಧನ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುವುದು, ಗ್ರಾಮ ಅರಣ್ಯ ಸಮಿತಿಗಳ ಮೂಲಕ ಜೈವಿಕ ಇಂಧನ ಸಸಿಗಳನ್ನು ಬೆಳೆಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ರೈತರಿಗಾಗಿ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸುವುದು, ಜೈವಿಕ ಇಂಧನ ಉತ್ಪ್ಪಾದನಾ ಘಟಕಗಳನ್ನು ಸ್ಥಾಪಿಸುವುದು, ಸಮುದಾಯ ಸಹಭಾಗಿತ್ವದಲ್ಲಿ ಜೈವಿಕ ಇಂಧನ ಸಸ್ಯಕೃಷಿ, ಇಂಧನ ತಯಾರಿಕೆ, ಮೌಲ್ಯವರ್ಧನೆಗಳನ್ನು ಪ್ರೋತ್ಸಾಹಿಸುವುದು... ಈ ಮೊದಲಾದವು ಕಾರ್ಯಪಡೆಯ ಧ್ಯೇಯೋದ್ದೇಶಗಳಾಗಿದ್ದವು. ಕಾರ್ಯಪಡೆಯ ಉದ್ದೇಶಗಳನ್ನು ಈಡೇರಿಸುವ ಸಲುವಾಗಿ ೨೦೧೦ರಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಸ್ಥಾಪಿತವಾಗಿದೆ.

ಮೇಲ್ಕಂಡ ಕಾರ್ಯಕ್ರಮಗಳಿಗೆ ಮಾದರಿಯೋಪಾದಿಯಲ್ಲಿ, ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಮಾರ್ಗದರ್ಶನದಲ್ಲಿ, ಹಾಸನದ ಸಮೀಪದ ಮಡೆನೂರಿನಲ್ಲಿ ಜೈವಿಕ ಇಂಧನ ಉದ್ಯಾನದ ಸ್ಥಾಪನೆಗೆ ಚಾಲನೆ ನೀಡಲಾಯಿತು. ಇಡೀ ದೇಶದಲ್ಲಿಯೇ ಪ್ರಪ್ರಥಮವಾದ ಈ ಆದರ್ಶಯೋಜನೆ ಇದೀಗ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಉದ್ಯಾನದ ಯಶಸ್ಸಿನಿಂದ ಉತ್ತೇಜಿತವಾಗಿರುವ ಮಂಡಳಿ ಇದೀಗ ಹಟ್ಟಿ ಚಿನ್ನದ ಗಣಿಯ ಸಹಯೋಗದಲ್ಲಿ ಯಾದಗಿರಿಯ ತಿಂತಿಣಿಯಲ್ಲಿ ೪೫ ಎಕರೆಯಷ್ಟು ವಿಶಾಲ ಪ್ರದೇಶದಲ್ಲಿ ಮತ್ತೊಂದು ಉದ್ಯಾನವನ್ನು ಸ್ಥಾಪಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ಜೈವಿಕ ಇಂಧನ ಉದ್ಯಾನದ ಪರವಾಗಿ ಜಿಲ್ಲೆಯ ಎಲ್ಲ ಎಂಟು ತಾಲ್ಲೂಕುಗಳಿಗೂ ಒಬ್ಬೊಬ್ಬರಂತೆ ಕ್ಷೇತ್ರ ವೀಕ್ಷಕರಿದ್ದಾರೆ. ಇವರೆಲ್ಲ ತಮ್ಮ ತಮ್ಮ ವಿಭಾಗದ ಹಳ್ಳಿಗಳಿಗೆ ಪದೇ ಪದೇ ಭೇಟಿ ಕೊಟ್ಟು ಹಳ್ಳಿಗರೊಡನೆ ಮಾತನಾಡಿ ಜೈವಿಕ ಇಂಧನಸಸ್ಯಗಳನ್ನು ಬೆಳೆಸುವ ಕಾರ್ಯಕ್ರಮದಲ್ಲಿ ಸಹಭಾಗಿಗಳಾಗಲು ಕರೆನೀಡುತ್ತಾರೆ. ತತ್‌ಕ್ಷಣದ ಲಾಭವನ್ನೇನೂ ಪ್ರಸ್ತಾಪಿಸದೆ, ನಾಲ್ಕೈದು ವರ್ಷಗಳ ನಂತರ ಯಾವತ್ತೋ ಫಲ ನೀಡುವ ಯೋಜನೆಯ ಬಗೆಗೆ ಹಳ್ಳಿಗರು ಉತ್ಸಾಹ ತೋರಿಸುವುದೂ ಅಷ್ಟಕ್ಕಷ್ಟೆ. ಆದರೆ ತಮ್ಮ ಕೃಷಿಭೂಮಿಯ ಚಟುವಟಿಕೆಗಳಿಂದ ಹೊರತಾಗಿ, ಹಿತ್ತಲಿನಲ್ಲೋ, ಮನೆಯ ಬೇಲಿಯಲ್ಲೋ, ಜಮೀನಿನ ಬದುವಿನಲ್ಲೋ ನಾಲ್ಕಾರು ಹೊಂಗೆ, ಬೇವು, ಜಟ್ರೋಫಾಗಳನ್ನು ನಟ್ಟುಕೊಂಡರೆ ಮುಂದೆ ಆಗುವ ಪ್ರಯೋಜನಗಳ ಮಾಹಿತಿ ನೀಡಲು ಕ್ಷೇತ್ರವೀಕ್ಷಕರು ಸಿದ್ಧರಾಗಿಯೇ ಬಂದಿರುತ್ತಾರೆ.ಮುಂದಿನ ಭೇಟಿಯಲ್ಲಿ ಅವರು ಹಳ್ಳಿಗರಿಗೆ ಹೆಚ್ಚಿನ ಮಾಹಿತಿ ನೀಡುತ್ತಾರೆ. ಜೈವಿಕ ಇಂಧನ ಉದ್ಯಾನಕ್ಕೆ ಭೇಟಿ ನೀಡಿ ಅಲ್ಲಿ ಬೆಳೆದಿರುವ ಜೈವಿಕ ಇಂಧನ ಸಸ್ಯಗಳ ಕೃಷಿ,ನರ್ಸರಿ, ಕಸಿ ತೋಪು, ಎಣ್ಣೆ ತೆಗೆಯುವ ಪ್ರಾತ್ಯಕ್ಷಿಕೆ ಘಟಕ, ಮೊದಲಾದವುಗಳ ಪರಿಚಯ ಪಡೆದುಕೊಳ್ಳುವುದಕ್ಕೂ ರೈತನನ್ನು ಆಹ್ವಾನಿಸುತ್ತಾರೆ. ಉದ್ಯಾನದ ವತಿಯಿಂದ ೨೫೬೦ ರಷ್ಟು ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದ್ದು, ಕೇಂದ್ರದಲ್ಲಿ ೨೬೧ ಹಾಗೂ, ಹೊರಾವರಣದಲ್ಲಿ ೧೧೦೩ ರಷ್ಟು ತರಬೇತಿ ಕಾರ್ಯಕ್ರಮಗಳು ಜರುಗಿವೆ. ೮೩,೩೭೨ ರಷ್ಟು ರೈತಬಾಂಧವರು ಈ ಕಾರ್ಯಕ್ರಮಗಳ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಇವರಲ್ಲಿ ಶೇಕಡಾ ೫೦ ರಷ್ಟು ರೈತ ಮಹಿಳೆಯರು ಎನ್ನುವುದು ವಿಶೇಷ.

ಹಾಸನ ಜಿಲ್ಲೆಯ ವಾರ್ಷಿಕ ಮಳೆಯ ಪ್ರಮಾಣ ೫೦೦ ರಿಂದ ೫೦೦೦ ಮಿ.ಮೀ. ಗಳವರೆಗೂ ಇದೆ. ಇಲ್ಲಿಯ ಭೌಗೋಳಿಕ ವಿನ್ಯಾಸ ದಟ್ಟಮಲೆನಾಡಿನಿಂದ ಹಿಡಿದು ಅರೆಮಲೆನಾಡು, ಬಯಲುಸೀಮೆಯವರೆಗೆ ವೈವಿಧ್ಯಮಯ. ಹಾಸನ ಜಿಲ್ಲೆಯು ಎಲ್ಲಾ ಬಗೆಯ ಮಣ್ಣು, ಹವಾಮಾನ, ಹಾಗೂ ಸಸ್ಯ ಸಂಪನ್ಮ್ಮೂಲಗಳನ್ನು ಹೊಂದಿದ್ದು ಇಡೀ ಕರ್ನಾಟಕವನ್ನೇ ಪ್ರತಿಬಿಂಬಿಸುವ ರೀತಿಯಲ್ಲಿ ಇರುವುದರಿಂದಲೇ ಜೈವಿಕ ಇಂಧನ ಉದ್ಯಾನದ ಸ್ಥಾಪನೆಗೆ ಹಾಸನ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ.

ಉದ್ಯಾನದ ಚಟುವಟಿಕೆಗಳ ಅಂಗವಾಗಿ ೨೦೫೦ ಗ್ರಾಮಗಳಲ್ಲಿ ಮಾಹಿತಿ ಸಂಗ್ರಹಣೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಕೃಷಿಭೂಮಿಯಲ್ಲಿ ಜೈವಿಕ ಇಂಧನ ಸಸ್ಯಕೃಷಿ ಮಾಡಕೂಡದೆನ್ನುವುದು ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ನಿಯಮ. ಇಂಧನ ಭದ್ರತೆಯ ಗುಂಗಿನಲ್ಲಿ ಆಹಾರಭದ್ರತೆ ಕಳವಳಿಸಬಾರದಲ್ಲವೇ! ಹಾಸನ ಜಿಲ್ಲೆಯಲ್ಲಿ ಕೃಷಿಯೋಗ್ಯವಲ್ಲದ ಇಲ್ಲವೇ ಬಂಜರಾದ ೨೮,೦೦೦ ಹೆಕ್ಟೇರ್‌ಗಳಷ್ಟು ಪ್ರದೇಶದಲ್ಲಿ ಜೈವಿಕ ಇಂಧನ ಸಸ್ಯಗಳನ್ನು ನೆಡುವ ಗುರಿ ಹೊಂದಲಾಗಿದೆ. . ಜೀವ ವೈವಿಧ್ಯದ ದೃಷ್ಟಿಯಿಂದ ಏಕಸಸ್ಯ ಸಂಸ್ಕೃತಿ ಕೂಡದು. ಈಗಾಗಲೇ ೧೭,೫೮೮ ಎಕರೆ ಪ್ರದೇಶದಲ್ಲಿ ೧೪ ಲಕ್ಷಕ್ಕೂ ಮೀರಿ ಹೊಂಗೆ, ಬೇವು, ಹಿಪ್ಪೆ, ಜಟ್ರೋಫಾ, ಸಿಮರೂಬ ಮೊದಲಾಗಿ ಐದು ಬಗೆಯ ಸಸ್ಯಗಳನ್ನು ನೆಡಲಾಗಿದೆ.

ಎಪ್ಪತ್ತು ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಮಡೆನೂರಿನ ಜೈವಿಕ ಇಂಧನ ಉದ್ಯಾನ -ನಾವುನೀವೆಲ್ಲರೂ ಒಮ್ಮೆ ಭೇಟಿ ನೀಡಲೇಬೇಕಾದ ಸ್ಥಳ. ಹಾಸನ-ಚೆನ್ನರಾಯಪಟ್ಟಣ ಹೆದ್ದಾರಿಯಲ್ಲಿ ೧೮ ಕಿ.ಮೀ. ದೂರ ಕ್ರಮಿಸಿದರೆ, ಬಲಗಡೆ ಕೃಷಿವಿಜ್ಞಾನ ಕೇಂದ್ರವೂ ಎಡಗಡೆ ಉದ್ಯಾನವೂ ಕಾಣಸಿಗುತ್ತವೆ. ಉದ್ಯಾನದ ದಾರಿಯ ಅಕ್ಕಪಕ್ಕ ಗೇರು, ಸಿಮರೂಬ, ಹಿಪ್ಪೆ, ಸುರಹೊನ್ನೆ, ಅಮುರಾ, ಹೊಂಗೆ, ಜಟ್ರೋಫಾ ಮೊದಲಾದ ಜೈವಿಕ ಇಂಧನಸಸ್ಯಗಳ ನೆಡುತೋಪುಗಳಿವೆ. ಕೇಂದ್ರಕಟ್ಟಡದ ಎಡಗಡೆ ನರ್ಸರಿ, ತಳಿ ಅಭಿವೃದ್ಧಿ ತೋಪುಗಳು. ಐದು ಪ್ರಭೇದಗಳಿಗೆ ಸಂಬಂಧಿಸಿದಂತೆ ೨೫೦ಕ್ಕೂ ಹೆಚ್ಚು ಬಗೆಯ ಅಧಿಕ ಇಳುವರಿ ತಳಿಗಳನ್ನು ಇಲ್ಲಿ ಅಭಿವೃದ್ಧಿ ಪಡಿಸಿರುವುದೊಂದು ವಿಶೇಷ. ಔಷಧೀಯ ಸಸ್ಯವನವೂ ಇಲ್ಲಿದೆ.

ಕಟ್ಟಡದ ಹಿಂಭಾಗದಲ್ಲಿ ತೈಲ ಉತ್ಪಾದನಾಘಟಕವಿದ್ದು, ಖಾಸಗಿಸಹಯೋಗದೊಡನೆ ಈ ಘಟಕ ಕಾರ್ಯ ನಿರ್ವಹಿಸುತ್ತಿದೆ. ರೈತರಿಂದ ಕೊಳ್ಳಲಾದ ಬೀಜಗಳನ್ನು ಅರೆದು ಎಣ್ಣೆ ತೆಗೆಯುವ, ಹಿಂಡಿಯಲ್ಲಿ ಉಳಿದ ತೈಲಾಂಶವನ್ನು ಪ್ರತ್ಯೇಕಿಸುವ, ಬಯೋಡಿಸೆಲ್ ತಯಾರಿಸುವ, ಗ್ಲಿಸೆರಿನ್ ಉಪ ಉತ್ಪನ್ನವನ್ನು ಪಡೆಯುವ, ಶುದ್ಧ ಎಣ್ಣೆಯನ್ನು ಪ್ರತ್ಯೇಕಿಸುವ ಘಟಕಗಳನ್ನು ಕಾರ್ಯರೂಪದಲ್ಲಿ ವೀಕ್ಷಿಸಬಹುದು.ಮುಖ್ಯ ಕಟ್ಟಡದಲ್ಲಿ ಮಾಹಿತಿ ಕೇಂದ್ರ, ಸಭಾಂಗಣ, ಪ್ರಯೋಗಾಲಯಗಳಿವೆ.

ಹಳ್ಳಿಗಳಲ್ಲಿ ಸಂಗ್ರಹವಾಗುವ ಬೀಜಗಳನ್ನು ಅಲ್ಲೇ ಅರೆದು ಎಣ್ಣೆ, ಹಿಂಡಿಗಳನ್ನು ರೈತರೇ ಬಳಸಿಕೊಳ್ಳಲು ಅನುವಾಗಲೆಂದು ಆಯಾ ಹಳ್ಳಿಗಳಲ್ಲೇ ಯಂತ್ರಗಳನ್ನು ಸ್ಥಾಪಿಸಬೇಕೆನ್ನುವುದು ಒಳ್ಳೆಯ ಆಶಯ. ಬಾಲಕೃಷ್ಣ ಗೌಡರ ಸಲಹೆಯಂತೆ ಹಾಸನ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಮಲ್ಲಿಗೆವಾಳು ಗ್ರಾಮಕ್ಕೆ ರೂ. ೩೫,೦೦೦ ವೆಚ್ಚದಲ್ಲಿ ಒಂದು ಅಶ್ವಶಕ್ತಿ ಸಾಮರ್ಥ್ಯದ ಎಣ್ಣೆ ಅರೆಯುವ ಯಂತ್ರವನ್ನು ಕೊಟ್ಟಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಕಟ್ಟಡ ಹುಡುಕದೆ ಉತ್ಸಾಹಿ ರೈತ ಚಂದ್ರಪ್ಪ ತಮ್ಮ ಮನೆಯ ಅಂಗಳದಲ್ಲೇ ಇರಿಸಿಕೊಂಡಿರುವುದಲ್ಲದೆ, ತಾವೇ ಮೇಲ್ವಿಚಾರಣೆ ನಡೆಸುವ ಹೊಣೆವಹಿಸಿಕೊಂಡಿದ್ದಾರೆ. ಅವರ ಹೊಣೆ ಇಷ್ಟಕ್ಕೆ ಮುಗಿದೀತೇ? ಯಂತ್ರ ನೋಡುವ ನೆಪದಲ್ಲಿ ಮನೆಯೊಳಗೆ ಕಾಲಿಟ್ಟ ನಮ್ಮಂಥವರಿಗೆ ಸತ್ಕಾರ ಮಾಡಬೇಡವೇ!

ಜೈವಿಕ ಇಂಧನ ಉದ್ಯಾನದಿಂದ ಸ್ಪೂರ್ತಿ ಪಡೆದ ಹಾಸನ ಜಿಲ್ಲೆಯ ಹಳ್ಳಿಗಳ ಪೈಕಿ ಮಲ್ಲಿಗೆವಾಳು ಗ್ರಾಮವೂ ಸೇರಿದಂತೆ ೭೦ ಗ್ರಾಮಗಳು ಸಂಪೂರ್ಣ ಜೈವಿಕ ಇಂಧನ ಗ್ರಾಮಗಳೆಂದು ಘೋಷಿಸಿಕೊಂಡಿವೆ. ೪೪೦ ಕ್ಕೂ ಹೆಚ್ಚು ಜೈವಿಕ ಇಂಧನ ಬೆಳೆಗಾರರ ಸಂಘಗಳು ರಚಿತವಾಗಿವೆ. ಈ ಆಂದೋಲನವು ರಾಜ್ಯವ್ಯಾಪಿಯಾಗಬೇಕು, ಹಾಲು ಉತ್ಪಾದಕರ ಸಂಘಗಳ ಮಾದರಿಯಲ್ಲೇ ರಾಜ್ಯಾದ್ಯಂತ ಇಂಥ ಸಾವಿರಾರು ಸಂಘಗಳು ರಚನೆಗೊಂಡು ಕಾರ್ಯ ನಿರ್ವಹಿಸಬೇಕೆನ್ನುವುದು ಮಂಡಳಿಯ ಆಶಯ.

ಮಡೆನೂರಿನ ಉದ್ಯಾನದ ಹೊರ ಆವರಣದಲ್ಲಿ ಬೆಂಗಳೂರು ಹೆದ್ದಾರಿಯ ಸಮೀಪ ಬಯೋಡಿಸೆಲ್ ಬಂಕ್ ಸದ್ಯದಲ್ಲೇ ಕಾರ್ಯಾರಂಭ ಮಾಡಲಿದೆ. ಇದಕ್ಕೆ ಬೇಕಾಗುವ ಜೈವಿಕ ಇಂಧನವನ್ನು ಉದ್ಯಾನದಿಂದಲೇ ಪೂರೈಸಲಾಗುತ್ತದೆ. ಇದಕ್ಕಾಗಿ ಭಾರತ್ ಪೆಟ್ರೋಲಿಯಂ ಅಧಿಕಾರಿಗಳೊಡನೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ನಿಕಟಭವಿಷ್ಯದಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಮುಗಿದುಹೋಗುವ ಅಪಾಯವಿದೆ. ಇಡೀ ಜಗತ್ತು ಬದಲಿ ಇಂಧನವನ್ನು ಅನ್ವೇಷಿಸುವ ತವಕದಲ್ಲಿದೆ. ಜೈವಿಕ ಇಂಧನವೇ ಸಮರ್ಥ ಪರ್ಯಾಯವೆಂದು ತಜ್ಞರು ಕಂಡುಕೊಳ್ಳುತ್ತಿರುವಂತೆಯೇ ಕರ್ನಾಟಕ ಸರ್ಕಾರವು ಜೈವಿಕ ಇಂಧನ ಆಂದೋಲನವನ್ನು ರಾಜ್ಯವ್ಯಾಪಿಯಾಗಿ ಹಮ್ಮಿಕೊಳ್ಳಲು ಅವಿರತ ಶ್ರಮಿಸುತ್ತಿದೆ. ಈ ಪ್ರಯತ್ನದಲ್ಲಿ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯೊಡನೆ ಕೃಷಿ, ಅರಣ್ಯ, ಗ್ರಾಮೀಣ ಅಭಿವೃದ್ಧಿ ಮೊದಲಾದ ಇಲಾಖೆಗಳೂ ವಿವಿಧ ವಿಶ್ವವಿದ್ಯಾನಿಲಯಗಳೂ ಸ್ವಯಂಸೇವಾ ಸಂಘಟನೆಗಳೂ ಕೈಜೋಡಿಸಿವೆ. ಎಲ್ಲಕ್ಕಿಂತ ಮುಖ್ಯವಾಗಿ ರೈತಬಂಧುಗಳೇ ಈ ಕಾರ್ಯಕ್ರಮದ ರೂವಾರಿಗಳು. ಆಹಾರದಂತೆಯೇ ಇಂಧನಕ್ಷೇತ್ರದಲ್ಲೂ ಸ್ವಯಂಪರಿಪೂರ್ಣತೆ ಸಾಧಿಸಲು ಜೈವಿಕ ಇಂಧನ ಕಾರ್ಯಕ್ರಮಕ್ಕಿಂತ ಮಿಗಿಲಾದ ಪರ್ಯಾಯ ಯಾವುದೂ ಇಲ್ಲ. ಭಾರತದಲ್ಲೇ ವಿಶಿಷ್ಟವಾದ ಈ ಆಂದೋಲನ ಹಿಂದಿನ ಹಸಿರುಕ್ರಾಂತಿ, ಕ್ಷೀರಕ್ರಾಂತಿಗಳಂತೆಯೇ ಯಶಸ್ಸುಪಡೆದು ಜಗತ್ತಿನ ಗಮನಸೆಳೆಯಲೆಂದು ಆಶಿಸೋಣ.

ಆಗಸ್ಟ್ ೫, ೨೦೧೨ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge