ಮಂಗಳವಾರ, ಆಗಸ್ಟ್ 21, 2012

ಪಿಕ್ಚರ್ ವಿಷಯ!

ಟಿ. ಜಿ. ಶ್ರೀನಿಧಿ

ಒಂದು ಚಿತ್ರ ಸಾವಿರ ಪದಗಳಿಗೆ ಸಮವಂತೆ. ಸುದೀರ್ಘ ವಿವರಣೆ ಸೇರಿಸಿ ಪೇಜುಗಟ್ಟಲೆ ಬರೆದರೂ ಪರಿಣಾಮಕಾರಿಯಾಗಿ ಹೇಳಲಾಗದ್ದನ್ನು ಒಂದೇ ಒಂದು ಚಿತ್ರ ಹೇಳಬಲ್ಲದು ಎನ್ನುವುದು ಈ ಮಾತಿನ ಅಭಿಪ್ರಾಯ; ಅದು ಅಕ್ಷರಶಃ ನಿಜವೂ ಹೌದು.

ಸಾವಿರ ಪದಗಳಿಗೆ ಪರ್ಯಾಯವಾದ ಇಂತಹ ಅದೆಷ್ಟೋ ಚಿತ್ರಗಳು ಕಂಪ್ಯೂಟರಿನೊಳಗೆ ಕಡತಗಳಾಗಿ ಕುಳಿತಿರುತ್ತವಲ್ಲ, ಅಂತಹುದೊಂದು ಕಡತದ ಬಾಲಂಗೋಚಿ, ಅಂದರೆ ಫೈಲ್ ಎಕ್ಸ್‌ಟೆನ್ಷನ್ ನೋಡಿಯೇ ಆ ಚಿತ್ರದ ಬಗೆಗೆ ಒಂದಷ್ಟು ಮಾಹಿತಿ ತಿಳಿದುಕೊಳ್ಳಬಹುದು. ಚಿತ್ರದ ಹೆಸರಿನ ಬಗೆಗೆ ಅದರ ಬಾಲಂಗೋಚಿ ತೆರೆದಿಡುವ ಈ ವಿವರಗಳನ್ನು ಸಾವಿರ ಪದಗಳೊಳಗೇ ವಿವರಿಸುವ ಪ್ರಯತ್ನ ಈ ಲೇಖನದಲ್ಲಿದೆ.


ಹೆಸರಿಗೊಂದು ಬಾಲಂಗೋಚಿ
ಕಂಪ್ಯೂಟರಿನಲ್ಲಿ ಯಾವುದೇ ಕಡತವನ್ನು ಉಳಿಸಿಡುವಾಗ ಅದಕ್ಕೊಂದು ಹೆಸರಿಡುವುದು ನಮಗೆಲ್ಲ ಗೊತ್ತೇ ಇದೆ. ಕಡತಗಳನ್ನು ಹೀಗೆ ಉಳಿಸಿಡಲು ನಾವು ಯಾವ ತಂತ್ರಾಂಶವನ್ನು ಬಳಸುತ್ತೇವೋ ಅದಕ್ಕೆ ಅನುಗುಣವಾಗಿ ಕಡತದ ಹೆಸರಿಗೊಂದು ಬಾಲಂಗೋಚಿ, ಅಂದರೆ ಫೈಲ್ ಎಕ್ಸ್‌ಟೆನ್ಷನ್ ಸೇರ್ಪಡೆಯಾಗುವುದನ್ನು ನೀವು ಗಮನಿಸಿರಬಹುದು. ನೋಟ್‌ಪ್ಯಾಡ್ ಕಡತಗಳಿಗೆ '.ಟಿಎಕ್ಸ್‌ಟಿ', ಮೈಕ್ರೋಸಾಫ್ಟ್ ವರ್ಡ್ ಕಡತಕ್ಕೆ '.ಡಿಒಸಿ', ಸಿನಿಮಾ ಹಾಡಿನ ಫೈಲಿಗೆ '.ಎಂಪಿ೩' - ಹೀಗೆ ಸಾಗುತ್ತದೆ ಫೈಲ್ ಎಕ್ಸ್‌ಟೆನ್ಷನ್‌ಗಳ ಈ ಪಟ್ಟಿ.

ಚಿತ್ರಗಳೂ ಅಷ್ಟೆ. ನಮ್ಮ ಕಂಪ್ಯೂಟರಿನಲ್ಲಿರುವ ಚಿತ್ರಗಳನ್ನೆಲ್ಲ ಒಟ್ಟುಸೇರಿಸಿ ನೋಡಿದರೆ ಆ ಕಡತಗಳ ಹೆಸರಿಗೆ ಬೇರೆಬೇರೆ ಬಗೆಯ ಬಾಲಂಗೋಚಿಗಳಿರುವುದು ನಮ್ಮ ಗಮನಕ್ಕೆ ಬರುತ್ತದೆ. ಅವುಗಳಲ್ಲಿ ಕೆಲವು ಜೆಪಿಜಿ ಕಡತಗಳಾಗಿದ್ದರೆ ಇನ್ನು ಕೆಲವು ಬಿಎಂಪಿ, ಇನ್ನಷ್ಟು ಪಿಎನ್‌ಜಿ, ಒಂದೆರಡು ಪಿಎಸ್‌ಡಿ, ಮಿಕ್ಕವು ಪಿಎನ್‌ಜಿ.

ಇವು, ಹಾಗೂ ಇಂತಹ ಇನ್ನೂ ಹಲವು ಹೆಸರುಗಳು ಕಂಪ್ಯೂಟರಿನಲ್ಲಿ ಆ ಚಿತ್ರಗಳನ್ನು ಹೇಗೆ ಉಳಿಸಿಡಲಾಗಿದೆ ಎನ್ನುವುದನ್ನು ಸೂಚಿಸುತ್ತವೆ. ಇವನ್ನು ಫೈಲ್ ಫಾರ್ಮ್ಯಾಟ್ಸ್ ಅಥವಾ ಫೈಲ್ ಟೈಪ್ಸ್ ಎಂದೂ ಕರೆಯುತ್ತಾರೆ. ಚಿತ್ರದ ಗಾತ್ರವನ್ನು ಕುಗ್ಗಿಸಲು ಬಳಸಲಾದ ವಿಧಾನ, ಚಿತ್ರದಲ್ಲಿರುವ ಬಣ್ಣಗಳ ಸಂಖ್ಯೆ, ಚಿತ್ರವನ್ನು ರೂಪಿಸಲು ಬಳಕೆಯಾದ ತಂತ್ರಾಂಶ - ಇಂತಹ ಹಲವು ವಿವರಗಳನ್ನು ಫೈಲ್ ಫಾರ್ಮ್ಯಾಟುಗಳು ಹೇಳಬಲ್ಲವು.

ಕಂಪ್ರೆಷನ್ ತಂತ್ರ
ಡಿಜಿಟಲ್ ರೂಪದಲ್ಲಿರುವ ಯಾವುದೇ ಚಿತ್ರ ದೊಡ್ಡ ಸಂಖ್ಯೆಯ ಪಿಕ್ಸೆಲ್‌ಗಳು ಸೇರಿ ರೂಪುಗೊಂಡಿರುತ್ತದೆ. ಚಿತ್ರದ ಗುಣಮಟ್ಟ ಹೆಚ್ಚಿರಬೇಕು ಎಂದರೆ ಅದರಲ್ಲಿರುವ ಪಿಕ್ಸೆಲ್‌ಗಳ ಸಂಖ್ಯೆಯೂ ಜಾಸ್ತಿಯಾಗಬೇಕು. ಹಾಗಾದಾಗ ಚಿತ್ರವನ್ನು ಉಳಿಸಿಡಲು ಬೇಕಾದ ಸ್ಥಳಾವಕಾಶವೂ ಜಾಸ್ತಿಯಾಗುತ್ತದೆ. ಕಡತದ ಗಾತ್ರ ದೊಡ್ಡದಾದಂತೆ ಸಹಜವಾಗಿಯೇ ಅದು ಮೆಮೊರಿಯಲ್ಲಿ ಹೆಚ್ಚಿನ ಸ್ಥಳವನ್ನು ಆಕ್ರಮಿಸಿಕೊಳ್ಳುತ್ತದೆ; ಅಷ್ಟೇ ಅಲ್ಲ, ಅದನ್ನು ಇಮೇಲ್ ಮಾಡುವುದಾಗಲಿ ಯಾವುದೋ ಜಾಲತಾಣಕ್ಕೆ ಸೇರಿಸುವುದಾಗಲಿ ನಿಧಾನವಾಗುತ್ತದೆ. ಡೌನ್‌ಲೋಡ್ ಮಾಡಿಕೊಳ್ಳಲೂ ಹೆಚ್ಚಿನ ಸಮಯ ಹಿಡಿಸುತ್ತದೆ.

ಇದನ್ನು ತಪ್ಪಿಸಲೆಂದೇ ಚಿತ್ರಗಳನ್ನು ಉಳಿಸಿಡುವಾಗ ಅದರಲ್ಲಿರುವ ಮಾಹಿತಿಯನ್ನು ಕುಗ್ಗಿಸಲಾಗುತ್ತದೆ (ಕಂಪ್ರೆಷನ್). ಬಹುಭಾಗದಲ್ಲಿ ಒಂದೇ ಬಣ್ಣವಿರುವ ಚಿತ್ರವನ್ನು ಉದಾಹರಣೆಯಾಗಿ ತೆಗೆದುಕೊಂಡರೆ ಅದಷ್ಟೂ ಭಾಗದಲ್ಲಿರುವ ಬಣ್ಣ ಯಾವುದು ಎಂಬ ಮಾಹಿತಿಯನ್ನು ಪ್ರತಿಯೊಂದು ಪಿಕ್ಸೆಲ್‌ಗೂ ಪ್ರತ್ಯೇಕವಾಗಿ ಉಳಿಸಿಡುವ ಅಗತ್ಯವಿಲ್ಲವಲ್ಲ!

ಹೀಗೆ ಕುಗ್ಗಿಸುವಾಗ ಚಿತ್ರದಲ್ಲಿರುವ ಮಾಹಿತಿಯ ಕೆಲವುಭಾಗ ಕಳೆದುಹೋದರೆ, ಅಂದರೆ ಲಾಸ್ ಆದರೆ, ಅದು 'ಲಾಸಿ' ಕಂಪ್ರೆಷನ್; ಎಲ್ಲ ಮಾಹಿತಿಯನ್ನೂ ಉಳಿಸಿಕೊಂಡೇ ಚಿತ್ರವನ್ನು ಕುಗ್ಗಿಸುವುದಾದರೆ ಅದರಲ್ಲಿ ಏನೂ ಲಾಸ್ ಇಲ್ಲವಲ್ಲ, ಹಾಗಾಗಿ ಅದು 'ಲಾಸ್‌ಲೆಸ್' ಕಂಪ್ರೆಷನ್.

ಚಿತ್ರಗಳನ್ನು ಕಂಪ್ಯೂಟರಿನಲ್ಲಿ ಉಳಿಸಿಡಲು ಬಳಕೆಯಾಗುವ ಬೇರೆಬೇರೆ ಫೈಲ್ ಫಾರ್ಮ್ಯಾಟುಗಳಲ್ಲಿ ಕೆಲವು ಲಾಸಿ ಕಂಪ್ರೆಷನ್ ವಿಧಾನ ಬಳಸಿದರೆ ಇನ್ನು ಕೆಲವು ಲಾಸ್‌ಲೆಸ್ ಕಂಪ್ರೆಷನ್ ಮೊರೆಹೋಗುತ್ತವೆ. ಇದಕ್ಕೆ ಅನುಗುಣವಾಗಿ ಚಿತ್ರದ ಗುಣಮಟ್ಟ ಹಾಗೂ ಕಡತದ ಗಾತ್ರದಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಲಾಸಿ ಕಂಪ್ರೆಷನ್ ಬಳಸುವ ಚಿತ್ರಗಳ ಗುಣಮಟ್ಟ ಕಡಿಮೆ; ಲಾಸ್‌ಲೆಸ್ ತಂತ್ರ ಬಳಸಿದ ಚಿತ್ರದ ಗುಣಮಟ್ಟ ಹೆಚ್ಚು.

ಬಗೆಬಗೆ ಚಿತ್ರ
ಚಿತ್ರಗಳ ಮಟ್ಟಿಗೆ ಹೇಳುವುದಾದರೆ ವ್ಯಾಪಕವಾಗಿ ಬಳಕೆಯಾಗುವ ಫೈಲ್ ಫಾರ್ಮ್ಯಾಟುಗಳಲ್ಲಿ ಜೆಪಿಜಿ, ಜೆಪಿಇಜಿ ಅಥವಾ 'ಜೆಪೆಗ್'ನದು ಪ್ರಮುಖ ಸ್ಥಾನ. ಲಾಸಿ ಕಂಪ್ರೆಷನ್ ಮೂಲಕ ಚಿತ್ರಗಳ ಗಾತ್ರವನ್ನು ಕುಗ್ಗಿಸಲು 'ಜಾಯಿಂಟ್ ಫೋಟೋಗ್ರಾಫಿಕ್ ಎಕ್ಸ್‌ಪರ್ಟ್ಸ್ ಗ್ರೂಪ್' ಎಂಬ ಸಂಸ್ಥೆ ರೂಪಿಸಿದ ಈ ವಿಧಾನಕ್ಕೆ ಆ ಸಂಸ್ಥೆಯ ಹೆಸರನ್ನೇ ಸಂಕ್ಷಿಪ್ತಗೊಳಿಸಿ ನಾಮಕರಣಮಾಡಲಾಗಿದೆ. ಚಿತ್ರದ ಗುಣಮಟ್ಟವನ್ನು ತೀರಾ ಹಾಳುಮಾಡದೆಯೇ ಅದರ ಗಾತ್ರವನ್ನು ಗಮನಾರ್ಹವಾಗಿ ಕುಗ್ಗಿಸಬಲ್ಲ ಈ ವಿಧಾನ ಅದೆಷ್ಟು ಪರಿಣಾಮಕಾರಿಯೆಂದರೆ ಬಹುತೇಕ ಎಲ್ಲ ಡಿಜಿಟಲ್ ಕ್ಯಾಮೆರಾಗಳೂ ಚಿತ್ರಗಳನ್ನು ಉಳಿಸಿಡಲು ಇದನ್ನೇ ಬಳಸುತ್ತವೆ. ವಿಶ್ವವ್ಯಾಪಿ ಜಾಲದಲ್ಲೂ ಜೆಪೆಗ್ ಬಳಕೆ ವ್ಯಾಪಕವಾಗಿ ಕಾಣಸಿಗುತ್ತದೆ.

ಕೆಲವು ಡಿಜಿಟಲ್ ಕ್ಯಾಮೆರಾಗಳಲ್ಲಿ ಚಿತ್ರಗಳನ್ನು ಟಿಐಎಫ್‌ಎಫ್ ಅಥವಾ 'ಟಿಫ್' (ಟ್ಯಾಗ್ ಇಮೇಜ್ ಫೈಲ್ ಫಾರ್ಮ್ಯಾಟ್) ರೂಪದಲ್ಲೂ ಉಳಿಸಿಡುವುದು ಸಾಧ್ಯ. ಬಹುತೇಕ ಸನ್ನಿವೇಶಗಳಲ್ಲಿ ಲಾಸ್‌ಲೆಸ್ ಕಂಪ್ರೆಷನ್ ವಿಧಾನ ಬಳಸುವ ಈ ಫೈಲ್ ಫಾರ್ಮ್ಯಾಟಿನಲ್ಲಿ ಚಿತ್ರಗಳ ಗುಣಮಟ್ಟ ತನ್ನ ಮೂಲರೂಪದಲ್ಲೇ ಉಳಿದುಕೊಳ್ಳುತ್ತದೆ. ಆದರೆ ಕಡತಗಳ ಗಾತ್ರ ಹೆಚ್ಚು, ಹಾಗೂ 'ಟಿಫ್' ರೂಪದ ಚಿತ್ರಗಳನ್ನು ಎಲ್ಲ ತಂತ್ರಾಂಶಗಳಲ್ಲೂ ತೆರೆಯುವುದು ಸಾಧ್ಯವಿಲ್ಲ. ಹಾಗಾಗಿ ಈ ವಿಧಾನ ಮುದ್ರಣದ ಉದ್ದೇಶಕ್ಕಾಗಿಯೇ ಬಳಕೆಯಾಗುವುದು ಹೆಚ್ಚು.

ಇನ್ನು ಕೆಲ ಕ್ಯಾಮೆರಾಗಳಲ್ಲಿ (ವಿಶೇಷವಾಗಿ ದುಬಾರಿ ಬೆಲೆಯ ಡಿಜಿಟಲ್ ಎಸ್‌ಎಲ್‌ಆರ್‌ಗಳಲ್ಲಿ) ಚಿತ್ರಗಳನ್ನು ಆರ್‌ಎಡಬ್ಲ್ಯೂ ಅಥವಾ 'ರಾ' ಫಾರ್ಮ್ಯಾಟಿನಲ್ಲೂ ಉಳಿಸಿಡಬಹುದು. ಈ ರೂಪದಲ್ಲಿ ಉಳಿಸಿಟ್ಟ ಚಿತ್ರಗಳನ್ನು ಹಂಚಿಕೊಳ್ಳುವ ಮುನ್ನ ಸೂಕ್ತ ತಂತ್ರಾಂಶಗಳನ್ನು ಬಳಸಿ ಸಂಸ್ಕರಿಸಬೇಕಾದದ್ದು ಕಡ್ಡಾಯ. ಹೀಗಾಗಿ ಈ ಬಗೆಯ ಚಿತ್ರಗಳನ್ನು ಪರಿಣತರಷ್ಟೇ ಬಳಸುತ್ತಾರೆ.

ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಡಿಜಿಟಲ್ ಕ್ಯಾಮೆರಾದಲ್ಲಿ ತೆಗೆದ ಚಿತ್ರಗಳನ್ನು ಜೆಪೆಗ್ ಬದಲು ಟಿಫ್ ಅಥವಾ ರಾ ರೂಪದಲ್ಲಿ ಉಳಿಸಿಡುವುದಾದರೆ ಅವು ಮೆಮೊರಿ ಕಾರ್ಡಿನಲ್ಲಿ ಬಹಳ ಹೆಚ್ಚಿನ ಸ್ಥಳಾವಕಾಶವನ್ನು ಬೇಡುತ್ತವೆ.

ಇನ್ನಷ್ಟು ವಿಧ
ಜಾಲಲೋಕದಲ್ಲಿ ಹೆಚ್ಚಾಗಿ ಕಾಣಸಿಗುವ ಇನ್ನೆರಡು ಫೈಲ್ ಫಾರ್ಮ್ಯಾಟುಗಳೆಂದರೆ ಜಿಐಎಫ್ (ಗ್ರಾಫಿಕ್ಸ್ ಇಂಟರ್‌ಚೇಂಜ್ ಫಾರ್ಮ್ಯಾಟ್, 'ಜಿಫ್') ಹಾಗೂ ಪಿಎನ್‌ಜಿ. ಕೆಲವೇ ಬಣ್ಣಗಳಿರುವ ಚಿಕ್ಕಗಾತ್ರದ ಚಿತ್ರಗಳನ್ನು ಜಿಫ್ ರೂಪದಲ್ಲಿ ಉಳಿಸಿಡಬಹುದು. ಈ ಬಗೆಯ ಚಿತ್ರಗಳಲ್ಲಿ ಸಣ್ಣಪುಟ್ಟ ಅನಿಮೇಷನ್‌ಗಳನ್ನು ಸೇರಿಸುವುದೂ ಸಾಧ್ಯ. ಆದರೆ ಮುದ್ರಣಕ್ಕಾಗಲಿ ಹೆಚ್ಚು ಬಣ್ಣಗಳಿರುವ ಚಿತ್ರಗಳನ್ನು ಉಳಿಸಿಡಲಾಗಲಿ ಇದು ಸೂಕ್ತವಲ್ಲ. ಈಚೆಗೆ ಪ್ರಚಲಿತಕ್ಕೆ ಬರುತ್ತಿರುವ ಪಿಎನ್‌ಜಿ (ಪೋರ್ಟಬಲ್ ನೆಟ್‌ವರ್ಕ್ ಗ್ರಾಫಿಕ್ಸ್) ಫೈಲ್ ಫಾರ್ಮ್ಯಾಟ್ ಜಿಫ್‌ನಲ್ಲಿರುವ ಕೊರತೆಗಳನ್ನು ತುಂಬಿಕೊಡುವಂತೆ ಕಾಣುತ್ತಿದೆ.

ಬಿಎಂಪಿ ('ಬಿಟ್‌ಮ್ಯಾಪ್') ಎನ್ನುವುದು ಮೈಕ್ರೋಸಾಫ್ಟ್ ಒಡೆತನದ ಇನ್ನೊಂದು ಫೈಲ್ ಫಾರ್ಮ್ಯಾಟ್. ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯ ಜೊತೆಗೆ ಬರುವ ಪೇಂಟ್ ತಂತ್ರಾಂಶದಲ್ಲಿ ಚಿತ್ರಗಳನ್ನು ಬರೆದು ಉಳಿಸಿಟ್ಟವರಿಗೆ ಇದರ ಪರಿಚಯವಿರಬಹುದು. ಯಾವುದೇ ಬಗೆಯ ಕಂಪ್ರೆಷನ್ ತಂತ್ರವನ್ನೂ ಬಳಸದ ಈ ಫಾರ್ಮ್ಯಾಟ್‌ನ ಬಳಕೆ ಈಚೆಗೆ ತೀರಾ ಕಡಿಮೆಯಾಗಿದೆ ಎಂದೇ ಹೇಳಬಹುದು.

ಫೋಟೋಶಾಪ್ ತಂತ್ರಾಂಶವನ್ನು ಬಳಸಿ ರೂಪಿಸಲಾದ ಚಿತ್ರಗಳು ಸಾಮಾನ್ಯವಾಗಿ ಪಿಎಸ್‌ಡಿ ಫೈಲ್ ಫಾರ್ಮ್ಯಾಟ್ ಬಳಸುತ್ತವೆ. ಈ ರೂಪದಲ್ಲಿರುವ ಚಿತ್ರಗಳನ್ನು ಫೋಟೋಶಾಪ್ ತಂತ್ರಾಂಶದಲ್ಲಿ ಮಾತ್ರವೇ ತೆರೆಯಲು ಸಾಧ್ಯ. ಹಾಗಾಗಿ ಅವನ್ನು ಹಂಚಿಕೊಳ್ಳಬೇಕಾದಾಗ ಜೆಪೆಗ್‌ನಂತಹ ಯಾವುದಾದರೂ ಸಾಮಾನ್ಯ ಫಾರ್ಮ್ಯಾಟಿನಲ್ಲಿ ಉಳಿಸಿಡುವುದು ಒಳಿತು.

ಆಗಸ್ಟ್ ೨೧, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge