ಗುರುವಾರ, ಡಿಸೆಂಬರ್ 11, 2014

ವಿಜ್ಞಾನಲೋಕದ ವಿದ್ಯಾಲಂಕಾರ

ಟಿ. ಆರ್. ಅನಂತರಾಮು 
ರೋಹಿತ್ ಚಕ್ರತೀರ್ಥ

"ತುಂಬ ಬೋರು ಹೊಡೆಯುತ್ತದೆ ಎನ್ನುವ ಕಾರಣಕ್ಕೆ ಮಿಸ್ಟರ್ ಟಾಂಪ್ಕಿನ್ಸ್ ಹತ್ತಿರದ ಕಟ್ಟಡವೊಂದರಲ್ಲಿ ನಡೆಯುತ್ತಿದ್ದ ಉಪನ್ಯಾಸ ಕೇಳಲು ಹೋದ. ಅದು ಹೇಳಿಕೇಳಿ ಸಾಪೇಕ್ಷ ಸಿದ್ಧಾಂತದ ಮೇಲೆ ನಡೆಯುತ್ತಿದ್ದ ಭೀಕರಭಾಷಣ! ಬಿಸಿಲುಗಾಲಕ್ಕೆ ಕಪ್ಪೆ ಬಂಡೆಯೇರಿ ಕೂತ ಹಾಗಾಯಿತು! ಈಗಾಗಲೇ ಬೋರಾಗಿದ್ದ ಟಾಂಪ್ಕಿನ್ಸ್ ಬೋರಲುಬಿದ್ದು ನಿದ್ದೆಗೆ ಜಾರಿದ. ಆಗ ಅವನಿಗೊಂದು ಕನಸು ಬಿತ್ತು. ಕನಸಿನಲ್ಲಿ ಅವನೊಂದು ಹೊಸಲೋಕಕ್ಕೆ ಪ್ರವೇಶ ಪಡೆದಿದ್ದ. ಸೆಕೆಂಡಿಗೆ ಮೂರುಲಕ್ಷ ಕಿಮೀಗಳನ್ನು ಕ್ರಮಿಸುತ್ತ ಯಮವೇಗದಲ್ಲಿ ಓಡಬೇಕಿದ್ದ ಬೆಳಕು ಈ ವಿಚಿತ್ರ ಜಗತ್ತಿನಲ್ಲಿ ಸೆಕೆಂಡಿಗೆ ಕೇವಲ ಹತ್ತು ಕಿಮೀ ಮಾತ್ರ ಸಾಗುತ್ತಿತ್ತು! ಇನ್ನೂ ಸ್ವಾರಸ್ಯದ ಸಂಗತಿಯೆಂದರೆ, ಅಲ್ಲಿನ ವಸ್ತುಗಳ ಗಾತ್ರ, ರಾಶಿ, ಗುರುತ್ವಗಳೆಲ್ಲ ಭೂಮಿಯ ಲೆಕ್ಕಾಚಾರಕ್ಕಿಂತ ಸಂಪೂರ್ಣ ಭಿನ್ನವಾಗಿದ್ದವು.." - ಹೀಗೆ ಶುರುವಾಗುತ್ತದೆ ಜಾರ್ಜ್ ಗ್ಯಾಮೋ ಎಂಬ ಜಗತ್ಪ್ರಸಿದ್ಧ ಭೌತವಿಜ್ಞಾನಿ, ಪ್ರೊಫೆಸರ್ ಮತ್ತು ವಿಜ್ಞಾನಲೇಖಕ ಬರೆದ ಕತೆ "ಮಿಸ್ಟರ್ ಟಾಂಪ್ಕಿನ್ಸ್ ಇನ್ ವಂಡರ್‌ಲ್ಯಾಂಡ್".

ವಿಜ್ಞಾನಾಸಕ್ತರ - ಅದರಲ್ಲೂ ಮುಖ್ಯವಾಗಿ ಸಾಪೇಕ್ಷ ಸಿದ್ಧಾಂತವೆಂಬ ಆ ಕಾಲದ ಕಬ್ಬಿಣದ ಕಡಲೆಯನ್ನು ಜಗಿದು ಹಲ್ಲು ಮುರಿದುಕೊಳ್ಳುತ್ತಿದ್ದವರನ್ನು ಆಕರ್ಷಿಸಿದ್ದ ಈ ಪುಸ್ತಕ ಹೋಗಿಹೋಗಿ ಒಬ್ಬರು ಕನ್ನಡಪಂಡಿತರ ಕೈಗೆ ಬಿತ್ತು. ಬೇರೆಯವರ ಉಡಿಗೆ ಬಿದ್ದಿದ್ದರೆ ಅದೆಲ್ಲಿ ಪಂಪಕುಮಾರವ್ಯಾಸರ ನಡುವೆ ಕಳೆದುಹೋಗುತ್ತಿತ್ತೋ. ಆದರೆ ಇವರು ಆಸಕ್ತಿಯಿಂದ ಓದತೊಡಗಿದ್ದೇ, ಸಾಲುಸಾಲುಗಳನ್ನು ಆಸ್ವಾದಿಸುತ್ತ ವಿಜ್ಞಾನಸಾಹಿತ್ಯದ ಕಚಗುಳಿರುಚಿಯನ್ನು ಚಪ್ಪರಿಸತೊಡಗಿದರು! "ಅಯ್ಯೋ, ಇಂತಹ ಪುಸ್ತಕ ಇದೆಯೆನ್ನುವುದೇ ಗೊತ್ತಿಲ್ಲದೆ ಕನ್ನಡಿಗ ಕೈಕಟ್ಟಿ ಕೂತಿದ್ದಾನಲ್ಲ!" ಎಂದು ಪಂಡಿತರ ಹೊಟ್ಟೆ ಚುರ್ ಅಂದಿತು. ತನ್ನ ಕಿರಿಯ ಮಿತ್ರರೊಬ್ಬರನ್ನು ಕರೆದು ದೀಕ್ಷೆ ಕೊಟ್ಟೇಬಿಟ್ಟರು. "ಈ ಪುಸ್ತಕ ಕನ್ನಡದಲ್ಲಿ ಬರಲಿಕ್ಕೇಬೇಕು. ವಿಚಿತ್ರ ಲೋಕದಲ್ಲಿ ವಿದ್ಯಾಲಂಕಾರ - ಅಂತ ಟೈಟಲ್ ಇಟ್ಟುಕೋ. ಪ್ರಕಟಿಸುವ ಜವಾಬ್ದಾರಿ ನನ್ನದು" ಎಂಬ ಆಗ್ರಹಪೂರ್ವಕ ಬಿನ್ನಹ ಮಾಡಿದರು.

ಇದು ೧೯೫೧ರ ಮಾತು. ಬಡಮೇಸ್ಟ್ರ ತಿಂಗಳ ಸಂಬಳ ಹೆಚ್ಚೆಂದರೆ ಅರುವತ್ತೆಪ್ಪತ್ತು ಇದ್ದ ಸಮಯ. ಹಾಗಿರುವಾಗ, ಗೆಳೆಯ ಬರೆದ ಪುಸ್ತಕ ಪ್ರಕಟಿಸಲು ೮೦೦ ರುಪಾಯಿ ತೊಡಗಿಸಿ ಕೈಸುಟ್ಟುಕೊಳ್ಳುವುದುಂಟೆ? "ಹಾಗೆ ಹಿಮ್ಮೆಟ್ಟುತ್ತ ಕೂತರೆ ಕನ್ನಡಕ್ಕೆ ವಿಜ್ಞಾನ ತರುವವರು ಯಾರು? ಈ ಸಹಾಯವನ್ನು ನಾನು ಮಾಡಿಲ್ಲವಾದರೆ ಬೇರಾರು ಮಾಡಬೇಕು?" ಎಂದ ಮೇಸ್ಟ್ರು ಎರಡನೇ ಯೋಚನೆಯನ್ನೇ ಮಾಡಲಿಲ್ಲ. ಪುಸ್ತಕ ಪ್ರಕಟವಾಯಿತು.
ಹಾಗೆ ಕನ್ನಡ ಸಾರಸ್ವತ ಜಗತ್ತಿಗೆ ಪದಾರ್ಪಣೆ ಮಾಡಿದ ಆ ಕಿರಿಯಮಿತ್ರನೇ ಮುಂದೆ ಜಗತ್ತಿನ ವಿಜ್ಞಾನೇತಿಹಾಸದಲ್ಲಿ ಅಧಿಕಾಯುತವಾಣಿಯಾದ; ರಾಷ್ಟ್ರೀಯ ವಿಜ್ಞಾನ ಅಕಾಡೆಮಿಗೆ ಸದಸ್ಯನಾಗಿ ಆಯ್ಕೆಯಾದ ಪ್ರೊಫೆಸರ್ ಬಿ.ವಿ.ಸುಬ್ಬರಾಯಪ್ಪನವರು. ವಿಜ್ಞಾನದ ತತ್ವ ಮತ್ತು ಚರಿತ್ರೆಯ ಅಧ್ಯಯನ ನಡೆಸುವ ಅಂತಾರಾಷ್ಟ್ರೀಯ ಸಮಿತಿಯ ಒಂದು ಪ್ರಮುಖ ವಿಭಾಗಕ್ಕೆ ಸುಬ್ಬರಾಯಪ್ಪ ಅಧ್ಯಕ್ಷರಾಗಿದ್ದರು. ೧೯೭೩ರಷ್ಟು ಹಿಂದೆಯೇ, ಪೊಲಿಶ್ ವಿಜ್ಞಾನ ಅಕಾಡೆಮಿಯ ಪ್ರತಿಷ್ಠಿತ ಕೊಪರ್ನಿಕಸ್ ಪದಕ ಪಡೆದ ಮೇಧಾವಿ ಅವರು. ೨೦೦೮ರಲ್ಲಿ ಕರ್ನಾಟಕ ರಾಜ್ಯಪ್ರಶಸ್ತಿಯೂ ಆ ಪಂಡಿತನನ್ನು ಅರಸಿಕೊಂಡು ಬಂತು. ಎಲ್ಲ ಸರಿ, ಆದರೆ ಬೆಳೆಯ ಸಿರಿಯನ್ನು ಮೊಳಕೆಯಲ್ಲಿದ್ದಾಗಲೇ ಗುರುತಿಸಿ ನಿಸ್ವಾರ್ಥದಿಂದ ನೀರು-ಗೊಬ್ಬರ ಹಾಕಿ ಕಾಪಾಡಿದ ಆ ಘನಗುರು ಯಾರು? ಯಾರೆನ್ನುತ್ತೀರಿ, ಬೇಡಿಬಂದವರಿಗೆಲ್ಲ "ಇಗೋ ಕನ್ನಡ" ಎಂದು ಭಾಷೆಯ ರುಚಿಹತ್ತಿಸಿದ ನಿಘಂಟುತಜ್ಞ, ಪದಬಂಧು, ಶತಾಯುಷಿ ಜಿ. ವೆಂಕಟಸುಬ್ಬಯ್ಯವರು!


ಆಗಲೇ ಹೇಳಿದಂತೆ, ಇದು ಬರೋಬ್ಬರಿ ೬೫ ವರ್ಷಗಳ ಹಿಂದಿನ ಕತೆ. ಆಗಿನ್ನೂ ಜೀವಿ ಅವರಿಗೆ ೩೫ರ ಹರೆಯ. ದೇಶಕ್ಕೆ ಸ್ವಾತಂತ್ರ್ಯ ಬಂದು ಮೂರ್ನಾಲ್ಕು ವರ್ಷ ಆಗಿತ್ತಷ್ಟೆ. ದೇಶವಾಸಿಗಳಲ್ಲಿ "ಸೈಂಟಿಫಿಕ್ ಟೆಂಪರ್" ಬೆಳೆಯಬೇಕು ಎಂದು ಪ್ರಧಾನಿಗಳು ಕರೆಕೊಡುತ್ತಿದ್ದ ಸಮಯ. ಆದರೇನು? ಕನ್ನಡದಲ್ಲಿ ಆಗ ವಿಜ್ಞಾನದ ಅವಸ್ಥೆ ಇನ್ನೂ ಅಯೋಮಯ. ಆರಕ್ಕೇರದು ಮೂರಕ್ಕಿಳಿಯದು ಎನ್ನುವಂತಹ ಪರಿಸ್ಥಿತಿ. ವಿಜ್ಞಾನಕ್ಕೆ ಸಂಬಂಧಿಸಿದ ಹೊಚ್ಚಹೊಸ ವಿಷಯಗಳೆಲ್ಲ ಬರುತ್ತಿದ್ದದ್ದು ಇಂಗ್ಲೀಷಿನಲ್ಲೇ. ಕನ್ನಡದಂತಹ ಕನ್ನಡವನ್ನೇ ಬಿಎಂಶ್ರೀಯಂತಹ ಗುರುಗಳು ಇಂಗ್ಲಿಷಿನಲ್ಲಿ ಬೋಧಿಸುತ್ತಿದ್ದರು ಅಂದಮೇಲೆ ಕೇಳಬೇಕೆ! ಕನ್ನಡ ಎಂಎಯನ್ನು ಬಂಗಾರದ ಪದಕದೊಂದಿಗೆ ಪಾಸು ಮಾಡಿಕೊಂಡು ಬಂದಿದ್ದ ವೆಂಕಟಸುಬ್ಬಯ್ಯ ಅವರಿಗೆ "ವಿಜ್ಞಾನಕ್ಕೇನಾದರೂ ಮಾಡಬೇಕಲ್ಲ!" ಎಂದು ಮನಸ್ಸು ಕೊರೆಯುತ್ತಲೇ ಇತ್ತು. ಅದೂ ಅಲ್ಲದೆ, ಮೈಸೂರು ವಿಶ್ವವಿದ್ಯಾಲಯದಲ್ಲಿ ಸೈಕಾಲಜಿ ವಿಭಾಗ ತೆರೆದಿದ್ದ ಪ್ರೊ.ಗೋಪಾಲಸ್ವಾಮಿ, "ಎಲ್ಲ ಜ್ಞಾನ-ವಿಜ್ಞಾನಕ್ಕೂ ತತ್ವಶಾಸ್ತ್ರವೇ ಮೂಲ. ಇಡೀ ವಿಜ್ಞಾನದ ಹೆಮ್ಮರ ನಿಂತಿರುವುದೇ ಈ ಕಲ್ಲುಕಟ್ಟೆಯ ಮೇಲೆ. ಫಿಲಾಸಫಿ ಓದಬೇಕು ಕಣಯ್ಯ, ಹೊಸದೃಷ್ಟಿ ಸಿಗುತ್ತೆ" ಎಂದಿದ್ದು ಕಿವಿಯಲ್ಲಿ ಗುಂಯ್‌ಗುಡುತ್ತಿತ್ತು. ವಿಜ್ಞಾನದ ಹಿನ್ನೆಲೆಯಿಂದ ಬಂದ ತನ್ನ ಓರಗೆಯ ಒಂದಷ್ಟು ಜನರನ್ನು ಕೂಡಿಸಿ ಒತ್ತಾಯಿಸಿ ಜೀವಿ ವಿಜ್ಞಾನ ಬರೆಸಿದರು. ಆದರೆ, ಅದು ಒತ್ತಾಯಕ್ಕೆ ಒತ್ತಿತೆಗೆದ ಗಡಸು ಶ್ಯಾವಿಗೆಯಾಯಿತೆ ಹೊರತು ಗಸಗಸೆ ಪಾಯಸದ ಹದಕ್ಕೆ ಬರಲಿಲ್ಲ. ಇನ್ನೊಬ್ಬರನ್ನು ವಿಕ್ರಮನಂತೆ ಅಟ್ಟಿಸಿಕೊಂಡು ಹೋಗಿ ಬೆನ್ನಿಗೆ ನೇತುಹಾಕಿಕೊಳ್ಳುವುದಕ್ಕಿಂತ, ತಾನಾಗಿ ಹೊಸ ಪ್ರಯತ್ನಕ್ಕೆ ಕೈಹಾಕಬೇಕೆಂದು, ಒಂದು ಅಮೃತಘಳಿಗೆಯಲ್ಲಿ ಜೀವಿ ಸಂಕಲ್ಪ ಮಾಡಿದರು! ವಿಜ್ಞಾನದ ನಾವೆಗೆ ಜಿಗಿದರು!

ಈ ನಿಟ್ಟಿನಲ್ಲಿ ೧೯೫೧ ಮಹತ್ವದ ವರ್ಷ. ಜೀವಿ ಕೋರಿಕೆಯ ಮೇರೆಗೆ ಸುಬ್ಬರಾಯಪ್ಪ ಗ್ಯಾಮೋ ಕಾದಂಬರಿಯನ್ನು ಅನುವಾದಿಸಿದ್ದು, ಅದನ್ನು ಜೀವಿ ಪ್ರಕಟಿಸಿದ್ದು ಆ ವರ್ಷದಲ್ಲಿಯೇ. ಆದರೆ, ಅಷ್ಟಕ್ಕೇ ನಿಲ್ಲದೆ ಜೀವಿ ಅದೇ ಮಿತ್ರನನ್ನು ಕಟ್ಟಿಕೊಂಡು ಇನ್ನೊಂದು ಸಾಹಸಕ್ಕೆ ಮುಂದಾದರು. ಅದುವೇ ಕನ್ನಡದಲ್ಲಿ ವಿಜ್ಞಾನಪತ್ರಿಕೆ! ೧೯೫೧ರಲ್ಲಿ ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದ ಜೀವಿ "ವಿಜ್ಞಾನ ಯುಗ" ಎಂಬ ಪತ್ರಿಕೆ ಶುರುಮಾಡಿದರು! ಸಂಪಾದಕನಾಗಿ ಸುಬ್ಬರಾಯಪ್ಪ ಅವರನ್ನು ಕೂರಿಸಿ ತಾನು ಗೌರವ ಸಲಹೆಗಾರನಾಗಿ ಬೆನ್ನಿಗೆ ನಿಂತರು. ಈ ಪತ್ರಿಕೆ ಪತ್ರಿಕೋದ್ಯಮದ ಎಲ್ಲ ಗಾಳಿಮಳೆಗೆ ತನ್ನನ್ನು ಒಡ್ಡಿಕೊಂಡು ಒಂದುವರ್ಷ ನಡೆಯಿತು. ಏನು ಮಾಡೋಣ, ಅನಾಸಕ್ತ ಕನ್ನಡಿಗಿನ ಪೃಷ್ಠಕ್ಕೆ ತಕ್ಕ ಸೂಜಿ ಸಂಪಾದಕರಲ್ಲಿ ಇರಲಿಲ್ಲ. ಚಂದಾದಾರರು ನಡುನೀರಲ್ಲಿ ಕೈಬಿಟ್ಟು ನೀವುಂಟು ನಿಮ್ಮ ಪತ್ರಿಕೆಯುಂಟು ಎಂದರು. ವಿನಂತಿಸಿ ಬರೆದರೂ ಲೇಖಕರು ಸಮಯಕ್ಕೆ ಸರಿಯಾಗಿ ಲೇಖನಗಳನ್ನು ಕೊಡದೆ ಸತಾಯಿಸಿದರು. ಗಾಂಧಿತತ್ವಗಳನ್ನು ನಂಬಿಕೊಂಡು ಪತ್ರಿಕೋದ್ಯಮಕ್ಕೆ ಬಂದವರು ಪಡುವ ಬವಣೆಗಳನ್ನೆಲ್ಲ "ವಿಜ್ಞಾನ ಯುಗ"ವೂ ಅನುಭವಿಸಿತು. ಇವೆಲ್ಲ ಬಿರುಗಾಳಿಯ ನಡುವಲ್ಲಿಯೂ ಅಚಲವಾಗಿ ನಿಂತಿದ್ದ ಬಾವುಟ ಒಂದೇ - ಜೀವಿ. ಪತ್ರಿಕೆ ಮತ್ತು ವಿಜ್ಞಾನದ ಮೇಲಿನ ಪ್ರೀತಿಯಿಂದ ಜೀವಿಯೇ "ಕಲಾ ವಿಜ್ಞಾನಿ"ಯಾದರು. ತನ್ನ ಬತ್ತಳಿಕೆಯಿಂದ ಒಂದಾದಮೇಲೊಂದರಂತೆ ವಿಜ್ಞಾನ ಲೇಖನಗಳನ್ನು ಬರೆದು ಪತ್ರಿಕೆಯ ಘನತೆ ಎತ್ತಿಹಿಡಿದರು. ಪ್ರಸಾರದ ಕೊರತೆಯ ದುಃಖವನ್ನು ಕಲಾವಿಜ್ಞಾನಿಯ ಬರಹಗಳ ಮೌಲ್ಯ ಒರೆಸಿಹಾಕಿತು.
ವಿಜ್ಞಾನದ ವಿಷಯದಲ್ಲಿ ಜೀವಿ ಬರೆದದ್ದು ಕಮ್ಮಿ ಇರಬಹುದು. ಆದರೆ ಬರೆದದ್ದೆಲ್ಲ ಅಪ್ಪಟ ಅಪರಂಜಿಯೇ. ಸರಳತೆ ಮತ್ತು ಸ್ಪಷ್ಟತೆ ಅವರ ಬರಹಗಳ ಮೇರುಗುಣ. ವಿಷಯಪ್ರತಿಪಾದನೆಯಲ್ಲಿ ಗೊಂದಲವಿಲ್ಲ. ಪದಗಳ ಜೊತೆ ಆಡುತ್ತ ವಿಷಯವನ್ನು ಮರೆಸಿಹಾಕುವ ಕಪಟನಾಟಕವಿಲ್ಲ. ಜೀವನಚರಿತ್ರೆಯನ್ನು ಹೇಳುವಾಗ - ಯಾವುದನ್ನು ಎಷ್ಟು, ಹೇಗೆ, ಎಲ್ಲಿ ಹೇಳಬೇಕು - ಎನ್ನುವುದರಲ್ಲಿ ಅವರ ಕೈ ಸೂಟು ಹೊಲಿಯುವ ದರ್ಜಿಯಷ್ಟೇ ನಿಖರ. ಕೆಲವು ಕಡೆಗಳಲ್ಲಿ ನಾಲ್ಕು ಪುಟದ ಲೇಖನ ಬರೆಯಲಿಕ್ಕೂ ನಲವತ್ತು ಪುಸ್ತಕಗಳನ್ನು ತಡಕಾಡಿ ವಿಷಯ ಸಂಗ್ರಹಿಸಿದ್ದಾರೆ ಎನ್ನುವುದು ಆ ಕ್ಷೇತ್ರಗಳಲ್ಲಿ ಕೈಯಾಡಿಸಿದವರಿಗೆ ತಟ್ಟನೆ ತಿಳಿದುಹೋಗುತ್ತದೆ. ಕಷ್ಟಪಟ್ಟು ಬರೆಯಬೇಕು, ಆದರೆ ಅದನ್ನು ಕಷ್ಟಪಟ್ಟು ಓದುವಂತಿರಬಾರದು - ಇದು ಅವರ ನಿಯಮ.



ಹೇಳಿಕೇಳಿ ಅವರು ಪದಜೀವಿ. ಬುಲ್ಡೆಗಿಲ್ಡೆ ಎತ್ತಿಕೊಳ್ಳದೆಯೂ ಪದಗಳ ಬಾಣ ಬಿಡಬಲ್ಲ ಅರ್ಜುನ! ಅವರ ಕೊಪರ್‌ನಿಕಸ್ ಎಂಬ ಲೇಖನ ಪ್ರಾರಂಭವಾಗುವುದು ಹೀಗೆ: "ಕೊಪರ್‌ನಿಕಸ್ - ಎಂಬುದು ಒಂದು ಹಳ್ಳಿಯ ಹೆಸರು. ಜರ್ಮನಿಯಲ್ಲಿ ಈ ಸ್ಥಳದಿಂದ ಈತನ ಪೂರ್ವಿಕರು ಪೋಲೆಂಡ್ ದೇಶಕ್ಕೆ ಬಂದು ಟೋರನ್ ಪಟ್ಟಣದಲ್ಲಿ ನೆಲಸಿದರು. ಆದರೆ ಈ ವಂಶದಲ್ಲಿ ಮೊದಲು ಹೆಸರುವಾಸಿಗೆ ಬಂದವನು ನಿಕೊಲಾಸ್. ಈತನೇ ನಮ್ಮ ವಿಜ್ಞಾನಿಯ ತಂದೆ. ಇವನು ಒಳ್ಳೆಯ ವ್ಯಾಪಾರಿಯಾಗಿ ಹಣಗಳಿಸಿ ಪೋಲೆಂಡಿನ ಪ್ರಸಿದ್ಧ ಮನೆತನದ ಬಾರ್‍ಪಾರ ಎಂಬ ಕನ್ಯೆಯನ್ನು ಮದುವೆಯಾದನು. ಇವರಿಗೆ ನಾಲ್ಕು ಮಕ್ಕಳು; ಇಬ್ಬರು ಗಂಡು, ಇಬ್ಬರು ಹೆಣ್ಣು. ಕೊಪರ್‌ನಿಕಸ್ ಎಂಬವನೇ ಕೊನೆಯ ಮಗ". ನಿಕೊಲಾಸ್ ಯಾರು, ಕೊಪರ್‌ನಿಕಸ್ ಯಾವುದು ಎನ್ನುವುದನ್ನು ಯಾವ ಗೊಂದಲಕ್ಕೆಡೆ ಇಲ್ಲದಂತೆ ಮೂರ್ನಾಲ್ಕು ವಾಕ್ಯದಲ್ಲಿ ಹೇಳಿಮುಗಿಸುವ ಸರಳತೆಯ ಸೊಬಗು ನೋಡಿ! ಈ ಲೇಖನ ಮುಂದೆ ಕೊಪರ್‌ನಿಕಸನ ಜೀವನ-ಸಾಧನೆಗಳ ವಿವರಣೆ ಕೊಡುತ್ತ, ಆತನ ಚಿಂತನೆ ಹೇಗೆ ರೂಪುತಳೆಯುತ್ತ ಸಾಗಿತು ಎನ್ನುವುದನ್ನು ವಿವರಿಸುತ್ತದೆ. ವಿಶೇಷವೆಂದರೆ, ಅವನು ಶಾಲೆಯಲ್ಲಿರುವಾಗ ಅಧ್ಯಾಪಕರ ಸಹಾಯದಿಂದ ಗಡಿಯಾರ ತಯಾರಿಸಿದ; ೧೫೦೦ರಲ್ಲಿ ರೋಂ ನಗರದಲ್ಲಿ ಚಂದ್ರಗ್ರಹಣ ವೀಕ್ಷಿಸಿದ; ೧೫೧೨ರ ಹೊತ್ತಿಗೇ ತನ್ನ ಸಿದ್ಧಾಂತದ ಮೂಲಕಲ್ಪನೆಗಳನ್ನು 'ಲಿಟಲ್ ಕಾಮೆಂಟರಿ' ಎಂಬ ಪುಸ್ತಕದಲ್ಲಿ ಬರೆದು ಪ್ರಕಟಿಸಿದ; ಗ್ರೀಕ್ ಭಾಷೆಯಿಂದ ಕವನಗಳನ್ನು ಭಾಷಾಂತರ ಮಾಡಿದ; ದೇಶವನ್ನು ಆರ್ಥಿಕದುಸ್ಥಿತಿಯಿಂದ ಮೇಲೆತ್ತಲು ಒಂದು ಎಕನಾಮಿಕ್ಸ್ ಗ್ರಂಥ ಬರೆದ; ಮೇಕೆಯ ರಕ್ತ-ಬಾವುಲಿಗಳ ಕೊಂಬು ಇತ್ಯಾದಿ ಅರೆದು ಮದ್ದು ಕೊಟ್ಟು ಜನರ ಕಾಯಿಲೆಕಸಾಲೆ ದೂರಮಾಡುತ್ತಿದ್ದ, ೧೫೩೩ರಲ್ಲಿ ಧೂಮಕೇತುವನ್ನು ನೋಡಿ ಅದರ ಬಗ್ಗೆ ವೈಜ್ಞಾನಿಕ ವಿವರಗಳನ್ನು ಬರೆದ - ಹೀಗೆ ನಾವು ಇದುವರೆಗೆ ಕನ್ನಡದ ವಿಜ್ಞಾನಸಾಹಿತ್ಯದಲ್ಲಿ ಎಲ್ಲೂ ಓದಿರದ ಹತ್ತುಹಲವು ಅಂಶಗಳನ್ನು ಈ ಲೇಖನ ಬಿಚ್ಚಿಡುತ್ತಾ ಹೋಗುತ್ತದೆ! ಜೀವಿ ಅವರ ಬಹುಮುಖ ಆಸಕ್ತಿ ಹೀಗೆ ಪ್ರತಿಯೊಂದು ವಿಷಯದಲ್ಲೂ ಆಳ-ಇನ್ನಷ್ಟು ಆಳಕ್ಕೆ ಇಳಿಯುತ್ತ, ಓದುಗನನ್ನು ಬೆರಗುಗೊಳಿಸುತ್ತ ನಡೆಯುವುದನ್ನು ನೋಡಬಹುದು.

ಸಾಮಾನ್ಯವಾಗಿ ವಿಜ್ಞಾನಲೇಖಕರು ಬಿಟ್ಟುಬಿಡುವ ಬದುಕಿನ ಕೆಲ ಸೂಕ್ಷ್ಮಸಂಗತಿಗಳನ್ನು ದಾಖಲಿಸಿ ತೋರಿಸುವುದರಲ್ಲಿ ಜೀವಿಗೆ ಅನನ್ಯ ತನ್ಮಯತೆ. ಲೂಯಿ ಪಾಶ್ಚರ್ ಬಗ್ಗೆ ಬರೆಯುವಾಗ, ಅವರೊಂದು ಸಣ್ಣ ಘಟನೆಯನ್ನು ಉದಾಹರಿಸುತ್ತಾರೆ. "ಇವನಷ್ಟು ನಿಷ್ಪ್ರಯೋಜಕನಾದ ಹುಡುಗ ನನ್ನ ತರಗತಿಯಲ್ಲೇ ಇಲ್ಲ" ಎಂದು ಬಾಲ್ಯದಲ್ಲಿ ಅವನಿಗೆ ಗುರುಗಳಿಂದ ಬಹುಮಾನ ಬಂದಿತ್ತಂತೆ. ವಿಜ್ಞಾನವನ್ನು ಓದಿ ಯಾಕೆ ಸಮಯ ಹಾಳುಮಾಡುತ್ತೀಯ ಎಂದು ಊರವರೂ ಗೇಲಿ ಮಾಡುತ್ತಿದ್ದರಂತೆ. ಆದರೆ, ಚರ್ಮ ಹದಮಾಡುವ ವೃತ್ತಿ ಮಾಡಿದರೂ ಸರಿ, ಮಗನನ್ನು ಚೆನ್ನಾಗಿ ಓದಿಸಬೇಕು ಎಂದು ದೃಢಸಂಕಲ್ಪ ಮಾಡಿದ್ದ ತಂದೆಗೆ ಪಾಶ್ಚರ್ ವಿಜ್ಞಾನ ಪದವೀಧರನಾದದ್ದು ಖುಷಿಯಾಯಿತು. ಆದರೆ, ರಸಾಯನಶಾಸ್ತ್ರದಲ್ಲಿ ಹೆಚ್ಚು ಅಂಕ ಬರಲಿಲ್ಲ ಎಂದು ಬೇಸರವೂ ಆಯಿತು. ಆಗ ಯುವಕ ಪಾಶ್ಚರ್ "ಮುಂದುವರಿದಂತೆ ನಾನು ಕೀರ್ತಿ ಗಳಿಸುತ್ತೇನೆ. ತೀರ್ಥರೂಪರು ಸ್ವಲ್ಪ ಸಮಾಧಾನ ತಂದುಕೊಳ್ಳಬೇಕು" ಎಂದು ಪತ್ರ ಬರೆದನಂತೆ. ಇನ್ನೊಂದು ಕಡೆ, ಮೈಕೆಲ್ ಫ್ಯಾರಡೆಯ ಜೀವನದ ಬಗ್ಗೆ ಹೇಳುವಾಗ ಒಂದು ಸನ್ನಿವೇಶ ಬರುತ್ತದೆ. ಮೂಲತಃ ಫ್ಯಾರಡೆ ಯಾವ ಉನ್ನತಶಿಕ್ಷಣವನ್ನೂ ಪಡೆದವನಲ್ಲ. ಪುಸ್ತಕಗಳಿಗೆ ರಟ್ಟು ಹಾಕುವ ಕೆಲಸದಲ್ಲಿದ್ದುಕೊಂಡೇ ಅಲ್ಲಿ ಬರುತ್ತಿದ್ದ ಪುಸ್ತಕಗಳನ್ನು ಓದುತ್ತ ತನ್ನ ಜ್ಞಾನವನ್ನು ಬೆಳೆಸಿಕೊಂಡವನು. ಕೊನೆಗೆ ಅವನು ರಾಯಲ್ ಸೊಸೈಟಿಯ ವಿಜ್ಞಾನಿ ಸರ್ ಹಂಫ್ರಿ ಡೇವಿಯ ಬಳಿ ಸಹಾಯಕನಾಗಿ ಸೇರುತ್ತಾನೆ. ಡೇವಿ ಈ ಹುಡುಗನ ಚುರುಕುತನ ಮತ್ತು ಪ್ರಾಮಾಣಿಕತೆಯನ್ನು ಮೆಚ್ಚಿ ತನ್ನ ಜೊತೆ ಯುರೋಪ್ ಪ್ರವಾಸಕ್ಕೆ ಕರೆದುಕೊಂಡುಹೋಗುತ್ತಾರೆ. ಆದರೆ, ಡೇವಿಯ ಪತ್ನಿಗೆ ಫ್ಯಾರಡೆಯ ಬಗ್ಗೆ ತಾತ್ಸಾರ. ಜಿನೀವಾದಲ್ಲಿ ಒಬ್ಬ ಪ್ರಾಧ್ಯಾಪಕ ಮೂವರಿಗೂ ಒಟ್ಟಿಗೆ ಊಟಕ್ಕೆ ಬಡಿಸಿದಾಗ, ಅದನ್ನೇ ನೆಪ ಮಾಡಿಕೊಂಡು ಆಕೆ ದೊಡ್ಡ ರಂಪವನ್ನೇ ಮಾಡಿದಳಂತೆ. ಕೊನೆಗೆ ಫ್ಯಾರಡೆ ಬೇರೆಯಾಗಿ ಕೂತು ಉಣ್ಣಬೇಕಾಯಿತಂತೆ. "ಮಾನವತೆಯಲ್ಲಿ ಅಮೃತವೂ ಕೆಸರೂ ಎರಡೂ ಸೇರಿದೆಯೆಂಬುದು ಅಂದು ಅವನಿಗೆ ಗೊತ್ತಾಯಿತು" ಎಂದು ಜೀವಿ ಬರೆಯುತ್ತಾರೆ. ವಿಜ್ಞಾನದಲ್ಲಿ ಹಾಸ್ಯವನ್ನು ತುರುಕಬಾರದು ಎಂದುಕೊಂಡಿರುವ ಗಂಭೀರಾಚಾರ್ಯರಿಗೆ ಚುಚ್ಚುಮದ್ದಿನಂತಿದೆ ಅವರ ಈ ಸಾಲು: "೧೮೪೯ರಲ್ಲಿ ರಸಾಯನಶಾಸ್ತ್ರದ ಪ್ರೊಫೆಸರ್ ಆಗಿ ಅವನಿಗೆ (ಪಾಶ್ಚರ್‌ಗೆ) ಕೆಲಸ ದೊರಕಿತು. ಆ ವಿಶ್ವವಿದ್ಯಾನಿಲಯದ ಪ್ರೊಫೆಸರಾಗಿ ಆತನು ಮಾಡಿದ ಮೊದಲನೆಯ ಸಂಶೋಧನೆಯೆಂದರೆ ರೆಕ್ಟರಿನ ಮಗಳಾದ ಮೇರಿ ಎಂಬುವಳ ಹೃದಯದಲ್ಲಿ ತನ್ನ ಮೇಲೆ ಪ್ರೇಮವಿದೆಯೋ ಇಲ್ಲವೋ ಎಂಬುದು". ಜೀವಿಯ ಹಾಸ್ಯ, ರಥ ಹಾರಿಸುವ ಧೂಳಿನ ತರಹದ್ದಲ್ಲ; ಮಕರಂದ ಹೀರಲು ಕೂತ ಚಿಟ್ಟೆ ಕಾಲುಕೊಡವಿ ಬೀಳಿಸಿದ ಪರಾಗರೇಣುವಿನ ಹಾಗಿನದ್ದು.



ವಿಜ್ಞಾನದ ಯುಗ ಮುಗಿಯುವ ಹೊತ್ತಿಗೆ ಜೀವಿಯ ಜೀವನದಲ್ಲಿ ನಿಘಂಟುಯುಗ ಶುರುವಾಯಿತು. ಅಲ್ಲಿಂದ ಮುಂದೆ ಅಖಂಡ ಐದು ದಶಕಗಳ ಕಾಲ ಅವರು ಮೈಮೇಲೆ ಬೆಟ್ಟವನ್ನೇ ಎಳೆದುಕೊಂಡಂತೆ, ಬೆಟ್ಟದಷ್ಟು ಅಚಲವಾಗಿ ಕೂತು ಕನ್ನಡಿಗರಿಗೆ ಕನ್ನಡ ಕಲಿಸುವ ನಿಘಂಟು ರಚನೆಗೆ ಕೈಹಾಕಿದರು. ಆದರೂ ಬಿಡುವು ಮಾಡಿಕೊಂಡು ಅರವತ್ತರ ದಶಕದಲ್ಲಿ ಒಂದೂವರೆ ವರ್ಷ ಪ್ರತಿ ಶನಿವಾರ ವಿಜಯ ಕಾಲೇಜಿನಲ್ಲಿ ಆಸಕ್ತರನ್ನು ಒಟ್ಟುಸೇರಿಸುತ್ತ "ಕನ್ನಡದಲ್ಲಿ ವಿಜ್ಞಾನವನ್ನು ಬರೆಯುವುದು ಹೇಗೆ?" ಎಂಬ ವಿಷಯದ ಮೇಲೆ ಕ್ಲಾಸು ತೆಗೆದರು! ಎಸ್. ವೇಂಕಟೇಶಮೂರ್ತಿ, ಕೆ.ಆರ್.ಮೋಹನ್‌ರಂತಹ ವಿಜ್ಞಾನ ಲೇಖಕರು ಈ ಗರಡಿಯಲ್ಲಿ ಪಳಗಿಬಂದವರು ಎನ್ನುವುದು ಗುರು-ಶಿಷ್ಯರಿಬ್ಬರಿಗೂ ಹೆಮ್ಮೆಯ ವಿಷಯ. ಡಾರ್ವಿನ್ ಬಗ್ಗೆ ಬರೆಯುತ್ತ ಜೀವಿ "ಈತನ ಜೀವನದಲ್ಲಿ ಬುದ್ಧನಂತೆ ಜೀವದಯೆಯೂ ಕ್ರಿಸ್ತನಂತೆ ಆಶಾವಾದವೂ ತುಂಬಿವೆ. ಈ ವಿಜ್ಞಾನಿಗೆ ಶ್ರದ್ಧೆ, ಕಾರ್ಯಾಸಕ್ತತೆ, ಕಷ್ಟಸಹಿಷ್ಣುತೆ ಇವುಗಳಲ್ಲಿ ಅಪಾರ ನಂಬಿಕೆ" ಎಂದು ಬರೆದಿದ್ದಾರೆ. ವಿಜ್ಞಾನಿಗಳ ವ್ಯಕ್ತಿತ್ವಗಳಲ್ಲಿ ಮಾನವೀಯತೆಯ ಸೆಲೆಗಳನ್ನು ಚಕ್ಕನೆ ಗ್ರಹಿಸಿ ಚಿಮ್ಮಿಸುತ್ತಿದ್ದ ಜೀವಿ, ವಿಜ್ಞಾನದ ಹಾದಿಯಲ್ಲಿ ಇನ್ನಷ್ಟು ದೂರ ಯಾಕೆ ನಡೆಯಲಿಲ್ಲ? ನಮಗಂತೂ ಅಸಮಾಧಾನ ಇದ್ದೇ ಇದೆ.

ಪ್ರೊ. ಜಿ. ವೆಂಕಟಸುಬ್ಬಯ್ಯನವರ ಪುಸ್ತಕಗಳನ್ನು ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಡಿಸೆಂಬರ್ ೭, ೨೦೧೪ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ; ಲೇಖನ ಮಾಡುವಾಗ ಜಿ. ವೆಂಕಟಸುಬ್ಬಯ್ಯನವರನ್ನು ಮಾತಾಡಿಸಲು ನೆರವಾದ ಮತ್ತು ಸಂದರ್ಶನದ ಕೊನೆಯವರೆಗೂ ನಮ್ಮ ಜೊತೆ ಇದ್ದು ಸಹಕರಿಸಿದ ಶ್ರೀ ಜಿ.ವಿ. ಅರುಣ್ (ಜೀವಿ ಪುತ್ರ) ಅವರಿಗೆ ಲೇಖಕರು ತಮ್ಮ ಹಾರ್ದಿಕ ಧನ್ಯವಾದಗಳನ್ನು ಸಲ್ಲಿಸುತ್ತಾರೆ.

ಕಾಮೆಂಟ್‌ಗಳಿಲ್ಲ:

badge