ಗುರುವಾರ, ಜೂನ್ 2, 2011

ಏಳುನೂರು ಕೋಟಿ ತಲುಪಲಿದೆ ಭೂಮಿಯ ಜನಸಂಖ್ಯೆ: ಆಹಾರ-ಇಂಧನ ಸಮತೋಲನ ಹೇಗೆ?

ಟಿ ಜಿ ಶ್ರೀನಿಧಿ

೨೦೧೧ - ಭೂಗ್ರಹದ ಇತಿಹಾಸದ ಮಹತ್ವದ ಮೈಲಿಗಲ್ಲುಗಳಲ್ಲೊಂದು. ಭೂಮಿಯ ಜನಸಂಖ್ಯೆ ಈ ವರ್ಷದಲ್ಲಿ ಏಳುನೂರು ಕೋಟಿ ತಲುಪಲಿದೆ.

ಈಚಿನ ವರ್ಷಗಳಲ್ಲಿ ಜನರ ಜೀವನಮಟ್ಟ ಕೊಂಚ ಸುಧಾರಿಸಿದೆ, ನಿಜ. ಆದರೆ ಇಂದಿಗೂ ಜಗತ್ತಿನಲ್ಲಿರುವ ಸಂಪತ್ತಿನ ಅರ್ಧಭಾಗವನ್ನು ಶೇಕಡಾ ಎರಡರಷ್ಟು ಸಂಖ್ಯೆಯ ಜನರೇ ನಿಯಂತ್ರಿಸುತ್ತಿದ್ದಾರೆ.

ಬಡವರು ಹಾಗೂ ಶ್ರೀಮಂತರ ನಡುವಿನ ಈ ಭಾರೀ ಕಂದರವನ್ನು ಮಧ್ಯಮವರ್ಗದ ಜನ ನಿಧಾನವಾಗಿ ಮುಚ್ಚುತ್ತಿದ್ದಾರೆ. ಬಡವರನ್ನು ಮಧ್ಯಮವರ್ಗದತ್ತ, ಮಧ್ಯಮವರ್ಗದವರನ್ನು ಸಿರಿವಂತಿಕೆಯತ್ತ ಕೊಂಡೊಯ್ಯುವ ಪ್ರಕ್ರಿಯೆ, ನಿಧಾನವಾಗಿಯಾದರೂ, ನಡೆಯುತ್ತಿದೆ.

ಹಿಂದುಳಿದ ರಾಷ್ಟ್ರಗಳು ತಮ್ಮ ಹಣೆಪಟ್ಟಿ ಕಳಚಿಕೊಳ್ಳುವ ಉದ್ದೇಶದಿಂದ ಅಭಿವೃದ್ಧಿಹೊಂದಿದ ರಾಷ್ಟ್ರಗಳ ಜೀವನಶೈಲಿ ಅನುಕರಿಸಲು ಪ್ರಯತ್ನಿಸುತ್ತಿವೆ. ಇನ್ನು ಅಭಿವೃದ್ಧಿಹೊಂದಿದ ದೇಶಗಳಿಗೆ ತಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳುವ ಯಾವ ಉದ್ದೇಶವೂ ಇದ್ದಂತಿಲ್ಲ. ಹೀಗಾಗಿ ವಿಶ್ವದ ಸಂಪನ್ಮೂಲಗಳಿಗೆ ಬೇಡಿಕೆ ತೀವ್ರವಾಗಿ ಹೆಚ್ಚುತ್ತಿದೆ.

'ಬೇಕು'ಗಳ ಪಟ್ಟಿ ದೊಡ್ಡದಾಗುತ್ತಿದ್ದಂತೆ ಅದರ ಪರಿಣಾಮ ಅಂತಿಮವಾಗಿ ಆಗುವುದು ಇಂಧನಗಳ ಮೇಲೆಯೇ. ವಿದ್ಯುತ್ತು, ಸಂಚಾರ ವ್ಯವಸ್ಥೆ, ಆಹಾರ, ಬಟ್ಟೆಬರೆ, ಸಂವಹನ ವ್ಯವಸ್ಥೆ - ಹೀಗೆ ಯಾವುದನ್ನೇ ಗಮನಿಸಿದರೂ ಅದರ ಉತ್ಪಾದನೆಯಾಗುವಲ್ಲಿಂದ ಪ್ರಾರಂಭಿಸಿ ನಾವು ಅದನ್ನು ಬಳಸುವವರೆಗೆ ಎಲ್ಲ ಹಂತಗಳಲ್ಲೂ ಒಂದಲ್ಲ ಒಂದು ಬಗೆಯ ಇಂಧನ ಬೇಕು. ಕೃಷಿಯ ಉದಾಹರಣೆಯನ್ನೇ ನೋಡಿ - ರಸಗೊಬ್ಬರ ತಯಾರಿಕೆಗೆ, ಅದರ ಸಾಗಾಣಿಕೆಗೆ, ಕೃಷಿಭೂಮಿಯಲ್ಲಿ ಟ್ರಾಕ್ಟರ್ ನಡೆಸಲು, ಬೆಳೆಯನ್ನು ಸಂಸ್ಕರಿಸಲು ಎಲ್ಲದಕ್ಕೂ ಇಂಧನ ಬೇಕು. ಆಮೇಲೂ ಅಷ್ಟೆ - ಕೃಷಿ ಉತ್ಪನ್ನವನ್ನು ಮಾರುಕಟ್ಟೆಗೆ ತಲುಪಿಸಲು, ಅಲ್ಲಿ ಕೊಂಡ ವಸ್ತುಗಳನ್ನು ಮನೆಗೆ ಒಯ್ಯಲು, ಕಡೆಗೆ ಬೇಯಿಸಿ ತಿನ್ನಲಿಕ್ಕೂ ಇಂಧನ ಬೇಕೇ ಬೇಕು. ಹೀಗಾಗಿ ಪೆಟ್ರೋಲ್, ಡೀಸಲ್ ಮುಂತಾದ ಪಳೆಯುಳಿಕೆ ಇಂಧನಗಳಿಲ್ಲದೆ ಯಾವ ಕೆಲಸವೂ ಸಾಗುವುದೇ ಕಷ್ಟ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಆದರೆ ಒಂದಲ್ಲ ಒಂದುದಿನ ಮುಗಿದುಹೋಗಲಿರುವ ಈ ಇಂಧನಮೂಲಗಳನ್ನು ನೆಚ್ಚಿಕೊಳ್ಳುವುದು ಎಷ್ಟು ಸರಿ? ಹೆಚ್ಚುತ್ತಿರುವ ಜನಸಂಖ್ಯೆ, ಏರುತ್ತಿರುವ ಬೇಡಿಕೆಗಳಿಗೆ ಸರಿಸಮಾನವಾಗಿ ಇಂಧನ ಪೂರೈಕೆ ವ್ಯವಸ್ಥೆಮಾಡಿಕೊಳ್ಳುವುದು ಹೇಗೆ?


ಈ ಪ್ರಶ್ನೆಗೆ ಉತ್ತರ ಹುಡುಕಲು ಹೊರಟವರಿಗೆ ಜೈವಿಕ ಇಂಧನಗಳು ವಿಶ್ವಸನೀಯ ಪರ್ಯಾಯ ಮಾರ್ಗವಾಗಿ ಕಂಡಿವೆ. ಸಸ್ಯಜನ್ಯ ಅಥವಾ ಪ್ರಾಣಿಜನ್ಯ ಎಣ್ಣೆಗಳನ್ನು ಪಳೆಯುಳಿಕೆ ಇಂಧನಗಳ ಬದಲಿಗೆ, ಅಥವಾ ಅವುಗಳೊಡನೆ ಮಿಶ್ರಮಾಡಿ ಬಳಸುವ ಪರಿಕಲ್ಪನೆ ಇದು. ಇಂತಹ ಯಾವುದೇ ಎಣ್ಣೆಯನ್ನು ರಾಸಾಯನಿಕವಾಗಿ ಸಂಸ್ಕರಿಸಿ ಜೈವಿಕ ಇಂಧನಗಳನ್ನು ತಯಾರಿಸಲಾಗುತ್ತದೆ. ಇದನ್ನು ನೇರವಾಗಿ ಅಥವಾ ಪೆಟ್ರೋಲ್, ಡೀಸಲ್ ಜೊತೆ ವಿವಿಧ ಪ್ರಮಾಣದಲ್ಲಿ ಮಿಶ್ರಮಾಡಿ ಉಪಯೋಗಿಸಬಹುದು. ಇದಕ್ಕಾಗಿ ಇಂಜಿನ್‌ನಲ್ಲಿ ಯಾವುದೇ ರೀತಿಯ ಬದಲಾವಣೆಯ ಅಗತ್ಯವೂ ಇಲ್ಲ; ಇದು ನವೀಕರಿಸಬಹುದಾದ ಇಂಧನಮೂಲವಾದ್ದರಿಂದ ಪರಿಸರ ಸ್ನೇಹಿ ಕೂಡ!

ಇಂತಹ ಜೈವಿಕ ಇಂಧನಗಳ ಸಾಲಿನಲ್ಲಿ ಅಗ್ರಗಣ್ಯವಾಗಿ ನಿಲ್ಲುವುದು ಎಥನಾಲ್ (ಈಥೈಲ್ ಆಲ್ಕೊಹಾಲ್).ಭಾರತವೂ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಎಥನಾಲ್ ಅನ್ನು ನಿರ್ದಿಷ್ಟ ಪ್ರಮಾಣದಲ್ಲಿ ಪೆಟ್ರೋಲಿನ ಜೊತೆಗೆ ಮಿಶ್ರಮಾಡಬೇಕೆಂಬ ನಿಯಮವೇ ಇದೆ. ಬ್ರೆಜಿಲ್ ದೇಶದಲ್ಲಂತೂ ಪೆಟ್ರೋಲಿನ ಜೊತೆಗೆ ಶೇ.೨೫ರಷ್ಟು ಎಥನಾಲ್ ಮಿಶ್ರಮಾಡಬೇಕಾದದ್ದು ಕಡ್ಡಾಯ.

ಇದೇ ರೀತಿ ಡೀಸಲ್‌ಗೂ ಕೂಡ ಜೈವಿಕ ಪರ್ಯಾಯ ಲಭ್ಯವಿದೆ, ಹಾಗೂ ಜನಪ್ರಿಯತೆ ಗಳಿಸಿಕೊಳ್ಳುತ್ತಿದೆ.

ಹಾಗೆಂದಮೇಲೆ ಜೈವಿಕ ಇಂಧನಕ್ಕೂ ಅಪಾರ ಪ್ರಮಾಣದ ಬೇಡಿಕೆಯಿದೆ ಎಂದಾಯಿತು. ಆದರೆ ಈ ಬೇಡಿಕೆಗೆ ತಕ್ಕಷ್ಟು ಪ್ರಮಾಣದಲ್ಲಿ ಅದನ್ನು ಪೂರೈಸುವುದು ಹೇಗೆ?

ಸಕ್ಕರೆ ಕಾರ್ಖಾನೆಗಳಲ್ಲಿ ಎಥನಾಲ್ ಅನ್ನು ಉಪಉತ್ಪನ್ನವಾಗಿ ತಯಾರಿಸುವುದು ಸಾಧ್ಯ. ಆದರೆ ಸಕ್ಕರೆಯ ಪ್ರಮುಖ ಉತ್ಪಾದಕ ಬ್ರೆಜಿಲ್‌ನಂತಹ ರಾಷ್ಟ್ರಗಳಲ್ಲಿ ಮಾತ್ರ ಸಕ್ಕರೆ ಕಾರ್ಖಾನೆಗಳು ದೊಡ್ಡ ಪ್ರಮಾಣದಲ್ಲಿ ಎಥನಾಲ್ ತಯಾರಿಸಬಲ್ಲವು. ಆದರೆ ಅಲ್ಲಿ ತಯಾರಾಗುವ ಎಥನಾಲ್ ಬ್ರೆಜಿಲ್‌ಗಷ್ಟೆ ಸಾಕಾಗಬಹುದೇ ಹೊರತು ಅದನ್ನು ಬೇರೆ ದೇಶಗಳಿಗೆ ರಫ್ತುಮಾಡುವುದು ದೂರದ ಮಾತು.

ಹೀಗಾಗಿಯೇ ಜೈವಿಕ ಇಂಧನ ತಯಾರಕರ ದೃಷ್ಟಿ ಆಹಾರ ಪದಾರ್ಥಗಳತ್ತ ಹೊರಳಿದೆ. ಅಮೆರಿಕಾ ಹಾಗೂ ಯುರೋಪಿನಲ್ಲಿ ಅಪಾರ ಪ್ರಮಾಣದ ಆಹಾರಧಾನ್ಯಗಳು ಜೈವಿಕ ಇಂಧನ ತಯಾರಿಕೆಗಾಗಿ ಬಳಕೆಯಾಗುತ್ತಿವೆ. ತೃತೀಯ ವಿಶ್ವದ ರಾಷ್ಟ್ರಗಳಿಂದ ಖಾದ್ಯ ತೈಲ ಆಮದುಮಾಡಿಕೊಂಡು ಅದನ್ನು ಜೈವಿಕ ಇಂಧನವಾಗಿ ಪರಿವರ್ತಿಸಿಕೊಳ್ಳುವ ಪರಿಪಾಠವೂ ಬೆಳೆಯುತ್ತಿದೆ. ಪಾಮ್ ಎಣ್ಣೆಯಿಂದ ಜೈವಿಕ ಡೀಸಲ್ ತಯಾರಿಸುವ ಉದ್ದೇಶದಿಂದ ಇಂಡೋನೇಷಿಯಾ, ಮಲೇಷ್ಯಾದಂತಹ ದೇಶಗಳಲ್ಲಿ ಕಾಡುಗಳನ್ನು ನಾಶಮಾಡಿ ಪಾಮ್ ತೋಟಗಳನ್ನು ಬೆಳೆಸಲಾಗುತ್ತಿದೆ.

ಇವೆಲ್ಲದರ ಪರಿಣಾಮವಾಗಿ ವಿಶ್ವದ ಆಹಾರ ಭದ್ರತೆ ಇಂದು ಅಪಾಯದಲ್ಲಿದೆ. ಹೆಚ್ಚುತ್ತಿರುವ ಜನಸಂಖ್ಯೆ, ಕಡಿಮೆಯಾಗುತ್ತಿರುವ ಆಹಾರ ಉತ್ಪಾದನೆಗಳ ನಡುವೆ ವಾಹನಗಳ ಇಂಧನಕ್ಕೂ ಆಹಾರಧಾನ್ಯಗಳೇ ಬೇಕು ಎಂದಾಗ ಆಹಾರದ ಕೊರತೆ ತಲೆದೋರುತ್ತದೆ; ಪರಿಣಾಮವಾಗಿ ಬೆಲೆಯೇರಿಕೆಗೂ ಕಾರಣವಾಗುತ್ತದೆ.

ಇಷ್ಟರ ಮೇಲೆ ದೊಡ್ಡ ಜನಸಂಖ್ಯೆ ಹೊಂದಿರುವ, ಹಾಗೂ ಆಹಾರಪೂರೈಕೆಯ ಸಮಸ್ಯೆಗಳನ್ನು ಈಗಾಗಲೇ ಎದುರಿಸುತ್ತಿರುವ ನಮ್ಮ ದೇಶದಲ್ಲಿ ಜೈವಿಕ ಇಂಧನ ತಯಾರಿಕೆಗೆ ಆಹಾರಧಾನ್ಯಗಳನ್ನು ಬಳಸುವುದು ಆಗದ ಮಾತು. ಮನುಷ್ಯರ ಉಪಯೋಗಕ್ಕೆ ಬೇಕಾದ ಆಹಾರಕ್ಕಾಗಿಯೇ ಪರದಾಡುವ ಸ್ಥಿತಿ ಇರುವಾಗ ಕಾರು ಬಸ್ಸುಗಳಿಗೂ ಆಹಾರಧಾನ್ಯಗಳೇ ಬೇಕು ಎನ್ನಲಾಗುವುದಿಲ್ಲವಲ್ಲ.

ಹಾಗೆಂದ ಮಾತ್ರಕ್ಕೆ ನಾವು ಜೈವಿಕ ಇಂಧನ ಬಳಸದೆ ಸುಮ್ಮನಿರುವಂತೆಯೂ ಇಲ್ಲ - ಜಗತ್ತಿನ ಪೆಟ್ರೋಲಿಯಂ ನಿಕ್ಷೇಪಗಳು ಒಂದಲ್ಲ ಒಂದು ದಿನ ಮುಗಿದುಹೋಗುವ ಭೀತಿ ಒಂದೆಡೆಯಾದರೆ ಸಿಕ್ಕಷ್ಟು ದಿನ ಅವನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳಲು ಕೊಡಬೇಕಾದ ಕೋಟಿಗಟ್ಟಲೆ ಹಣದ ಭಾರ ಇನ್ನೊಂದೆಡೆ ನಮ್ಮನ್ನು ಹೆದರಿಸುತ್ತದೆ. ಇಷ್ಟರ ಮೇಲೆ ನಮಗೆ ಕಚ್ಚಾತೈಲ ಪೂರೈಸುವ ರಾಷ್ಟ್ರಗಳ ಮರ್ಜಿ ಕಾಯಬೇಕಾದ ಹಣೆಬರಹ ಬೇರೆ.

ಇವೆಲ್ಲ ಕಾರಣಗಳಿಂದ ಜೈವಿಕ ಇಂಧನ ತಯಾರಿಕೆಗಾಗಿ ಬೇರೆ ಮಾರ್ಗ ಅನ್ವೇಷಿಸಲೇಬೇಕಾದ ಅನಿವಾರ್ಯತೆ ನಮ್ಮ ವಿಜ್ಞಾನಿಗಳಿಗಿತ್ತು. ಅವರು ಆ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎನ್ನುವುದು ಹೆಮ್ಮೆಯ ವಿಷಯ.

ನಮ್ಮಲ್ಲಿ ಸಾಮಾನ್ಯವಾಗಿ ಬೆಳೆಯುವ ಹೊಂಗೆ, ಹಿಪ್ಪೆ, ಬೇವು, ಸುರಹೊನ್ನೆ ಮೊದಲಾದ ಯಾವುದೇ ಮರಗಳ ಬೀಜದಿಂದ ತೆಗೆದ ಎಣ್ಣೆಯನ್ನು ಜೈವಿಕ ಡೀಸಲ್ ಉತ್ಪಾದನೆಯಲ್ಲಿ ಬಳಸಬಹುದು ಎಂದು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ವಿಜ್ಞಾನಿಗಳು ತೋರಿಸಿಕೊಟ್ಟಿದ್ದಾರೆ. ಆಹಾರ ಭದ್ರತೆ ಹಾಗೂ ಇಂಧನ ಭದ್ರತೆಯನ್ನು ಏಕಕಾಲಕ್ಕೆ ಸಾಧಿಸುವ ದೃಷ್ಟಿಯಿಂದ ಯಾವುದೇ ಖಾದ್ಯ ಎಣ್ಣೆಯನ್ನು ಜೈವಿಕ ಇಂಧನ ತಯಾರಿಕೆಯಲ್ಲಿ ಬಳಸದೆ ಆ ಮೂಲಕ ವಿಶ್ವಕ್ಕೇ ಮಾದರಿಯಾಗಿದ್ದಾರೆ.

ಈ ಎಣ್ಣೆಗಳನ್ನು ಬಳಸಿ ಬಯೋಡೀಸಲ್ ತಯಾರಿಸುವ ಹಾಗೂ ಬಳಸುವ ಪ್ರಯೋಗಗಳಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ. ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲೂ ಜೈವಿಕ ಇಂಧನ ಬಳಕೆ ಪ್ರಾರಂಭವಾಗಿದೆ. ನಿಗಮದ ೨೨೦೦ ಬಸ್ಸುಗಳು ಈಗಾಗಲೇ ಎಥನಾಲ್ ಮಿಶ್ರಿತ ಡೀಸಲ್ ಬಳಸುತ್ತಿವೆ; ಐದುನೂರಕ್ಕೂ ಹೆಚ್ಚು ಬಸ್ಸುಗಳನ್ನು ವಿವಿಧ ಪ್ರಮಾಣದ ಜೈವಿಕ ಡೀಸಲ್ ಮಿಶ್ರಣದೊಡನೆ ಓಡಿಸಲಾಗುತ್ತಿದೆ. ಅಷ್ಟೇ ಅಲ್ಲ, ಬಯೋಡೀಸಲ್ ಅನ್ನು ನಮ್ಮ ನಿಮ್ಮಂತಹ ಬಳಕೆದಾರರಿಗೂ ಲಭ್ಯವಾಗಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ.

ಜೈವಿಕ ಇಂಧನ ತಯಾರಿಕೆಯಲ್ಲಿ ಬಳಕೆಯಾಗುವ ಹೊಂಗೆ, ಬೇವು, ಹಿಪ್ಪೆ, ಸೀಮಾರೂಬಾ, ಕಾಡುಹರಳುಗಳಂತಹ ಮರಗಿಡಗಳನ್ನು ಬೆಳೆಸಲು ನಮ್ಮ ರೈತರಿಗೆ ಸಾಕಷ್ಟು ಪ್ರೋತ್ಸಾಹವನ್ನೂ ನೀಡಲಾಗುತ್ತಿದೆ. ಜೈವಿಕ ಇಂಧನ ಸಸಿಗಳನ್ನು ಕೃಷಿಯೋಗ್ಯವಲ್ಲದ ಭೂಮಿಯಲ್ಲೂ ಬೆಳೆಸಬಹುದಾಗಿರುವುದು ಗಮನಾರ್ಹ ಅಂಶ.

ಹೀಗೆ ಬೆಳೆದ ಗಿಡಮರಗಳಿಂದ ಎಣ್ಣೆಬೀಜ ಸಂಗ್ರಹಿಸಿ ಮಾರಾಟಮಾಡುವ, ಅಥವಾ ಎಣ್ಣೆಯನ್ನೇ ಉತ್ಪಾದಿಸಿ ಮಾರುವ ಆಯ್ಕೆ ರೈತರ ಮುಂದಿದೆ. ಈ ಹಣಕಾಸಿನ ಲಾಭದ ಜೊತೆಗೆ ಹಿಂಡಿ ಹಾಗೂ ಎಲೆಗಳನ್ನು ಗೊಬ್ಬರವಾಗಿಯೂ ಬಳಸಿ ಅದರಿಂದಲೂ ಅನುಕೂಲ ಮಾಡಿಕೊಳ್ಳಬಹುದು. ಹಾಲು ಉತ್ಪಾದನಾ ಸಂಘಗಳ ಮಾದರಿಯಲ್ಲಿ ಜೈವಿಕ ಇಂಧನ ಎಣ್ಣೆಬೀಜಗಳಿಗೂ ಮಾರುಕಟ್ಟೆ ಜಾಲ ಸ್ಥಾಪಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ.

'ಬಯೋಡೀಸಲ್ ಬಳಸಿರಿ!' ಎಂಬ ಶೀರ್ಷಿಕೆಯೊಡನೆ ಜೂನ್ ೯, ೨೦೧೧ರ ಸುಧಾದಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge