ಟಿ ಜಿ ಶ್ರೀನಿಧಿ
ದಿನಕ್ಕೆ ನೂರಿನ್ನೂರು ರೂಪಾಯಿ ಸಂಪಾದಿಸುವ ಪುಟ್ಟ ದಿನಸಿ ಅಂಗಡಿಗೂ ನಡೆಸುವುದಕ್ಕೂ ನೂರಾರು ಕೋಟಿ ವ್ಯವಹಾರ ನಡೆಸುವ ದೊಡ್ಡದೊಂದು ಕಾರ್ಖಾನೆ ನಡೆಸುವುದಕ್ಕೂ ಏನೇನು ಸಾಮ್ಯತೆಗಳಿವೆ ಹೇಳುತ್ತೀರಾ?
ಏನೇನೂ ಇಲ್ಲ ಎಂದಿರಾದರೆ ನಿಮ್ಮ ಉತ್ತರ ಖಂಡಿತಾ ತಪ್ಪು.
ಅಂಗಡಿಯಲ್ಲಿ ಬೇರೆಬೇರೆ ವಸ್ತುಗಳ ದಾಸ್ತಾನು ಎಷ್ಟಿದೆ, ಯಾವುದೆಲ್ಲ ಮುಗಿಯುತ್ತ ಬಂದಿದೆ, ನಾಳೆ ಪಕ್ಕದಮನೆಯವರಿಗೆ ತಿಂಗಳ ದಿನಸಿ ಪೂರೈಸಬೇಕಾದರೆ ಏನನ್ನೆಲ್ಲ ಕೊಂಡುತರಬೇಕು ಎನ್ನುವುದನ್ನೆಲ್ಲ ಅಂಗಡಿಯ ಮಾಲೀಕ ಗಮನಿಸುತ್ತಿರಬೇಕಾಗುತ್ತದೆ. ಖರ್ಚುವೆಚ್ಚ, ಲಾಭನಷ್ಟಗಳ ಲೆಕ್ಕವನ್ನೂ ಇಟ್ಟಿರಬೇಕಾಗುತ್ತದೆ. ಇದನ್ನೆಲ್ಲ ಬರೆದಿಟ್ಟುಕೊಳ್ಳಲು ಆತ ಹತ್ತಾರು ಚೀಟಿಗಳನ್ನೋ ಪುಟ್ಟದೊಂದು ಪುಸ್ತಕವನ್ನೋ ಇಟ್ಟುಕೊಂಡಿರುತ್ತಾನೆ.
ದೊಡ್ಡ ಕಾರ್ಖಾನೆಯಲ್ಲಿಯೂ ಹೀಗೆಯೇ - ಕಚ್ಚಾವಸ್ತುಗಳ ದಾಸ್ತಾನು, ಉತ್ಪಾದನೆಯ ಪ್ರಮಾಣ, ಮುಂದಿನ ದಿನಗಳಲ್ಲಿ ಬರಬಹುದಾದ ಬೇಡಿಕೆಯ ಅಂದಾಜು, ಉದ್ಯೋಗಿಗಳ ಸಂಬಳ, ಲಾಭನಷ್ಟಗಳ ಲೆಕ್ಕಾಚಾರ ಇವೆಲ್ಲವನ್ನು ಅಲ್ಲಿಯೂ ಸದಾಕಾಲ ಗಮನಿಸುತ್ತಲೇ ಇರಬೇಕಾಗುತ್ತದೆ.
ಇದನ್ನೆಲ್ಲ ಗಮನಿಸಿಕೊಳ್ಳಲು ಅವರು ಇಆರ್‌ಪಿ ತಂತ್ರಾಂಶ ಬಳಸುತ್ತಾರೆ ಎನ್ನುವುದೊಂದೇ ವ್ಯತ್ಯಾಸ.
ಏನಿದು ಇಆರ್‌ಪಿ?
'ಇಆರ್‌ಪಿ' ಎಂದು ಪ್ರಚಲಿತದಲ್ಲಿರುವ ಎಂಟರ್‌ಪ್ರೈಸ್ ರಿಸೋರ್ಸ್ ಪ್ಲಾನಿಂಗ್ ಎನ್ನುವುದು ಯಾವುದೇ ಸಂಸ್ಥೆಯ ಎಲ್ಲ ವಿಭಾಗಗಳ ಅಗತ್ಯಗಳಿಗೆ ಒದಗಿಬರುವ ಕ್ರಮವಿಧಿಗಳ ಸಂಗ್ರಹ; ಸಂಸ್ಥೆಯಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಉತ್ತಮವಾಗಿ ನಿರ್ವಹಿಸಲು ನೆರವಾಗುವ ಮೂಲಕ ಅಲ್ಲಿನ ಕೆಲಸಗಳ ನಿರ್ವಹಣೆಯನ್ನು ಉತ್ತಮಗೊಳಿಸುತ್ತದೆ. ಆ ಸಂಸ್ಥೆಗೆ ಸಂಬಂಧಪಟ್ಟ ಎಲ್ಲ ಮಾಹಿತಿಯನ್ನೂ ಒಂದೇ ದತ್ತಸಂಚಯದಲ್ಲಿ (ಡೇಟಾಬೇಸ್) ಶೇಖರಿಸಿಟ್ಟು ವಿವಿಧ ಕ್ರಮವಿಧಿಗಳ ನೆರವಿನಿಂದ ಆ ಮಾಹಿತಿಯ ಸೂಕ್ತ ಉಪಯೋಗ ಮಾಡಿಕೊಳ್ಳಲು ಇಆರ್‌ಪಿ ಸಹಾಯಮಾಡುತ್ತದೆ.
ಒಂದು ಸಂಸ್ಥೆಯ ಎಲ್ಲ ಚಟುವಟಿಕೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಇಆರ್‌ಪಿ ವ್ಯವಸ್ಥೆಯಲ್ಲಿ ಶೇಖರಿಸಿಡಬಹುದು. ಸಂಸ್ಥೆಯ ಹೆಸರಲ್ಲಿರುವ ಆಸ್ತಿಪಾಸ್ತಿ ವಿವರ, ಉತ್ಪನ್ನಗಳು ಖರ್ಚಾಗುತ್ತಿರುವ ಪ್ರಮಾಣ, ಬಂದಿರುವ ಖರೀದಿ ಆದೇಶಗಳು, ಗೋದಾಮಿನಲ್ಲಿರುವ ಕಚ್ಚಾವಸ್ತುಗಳ ವಿವರ, ಮುಂದಿನ ತಿಂಗಳು ಬೇಕಾಗಬಹುದಾದ ಕಚ್ಚಾವಸ್ತುವಿನ ಪ್ರಮಾಣದ ಅಂದಾಜು, ಅದರ ತಯಾರಕರಿಗೆ ಕೊಡಬೇಕಾದ ಬಾಕಿ, ಖರ್ಚುವೆಚ್ಚ ಲಾಭನಷ್ಟಗಳ ಲೆಕ್ಕ, ಉದ್ಯೋಗಿಗಳ ಸಂಬಳ, ಗ್ರಾಹಕರ ವಿವರ - ಹೀಗೆ ಪ್ರತಿಯೊಂದು ವಿವರವನ್ನೂ ಇಆರ್‌ಪಿಯ ಘಟಕಗಳು ಸಂಗ್ರಹಿಸಿಟ್ಟುಕೊಳ್ಳಬಲ್ಲವು. ಈ ಎಲ್ಲ ಘಟಕಗಳೂ ಒಂದರ ಜೊತೆಗೊಂದು ಸಂಪರ್ಕದಲ್ಲಿರುವುದರಿಂದ ಯಾವುದೇ ವಿಭಾಗದಲ್ಲಿರುವ ವ್ಯಕ್ತಿ ತನಗೆ ಸಂಬಂಧಪಟ್ಟ ಎಲ್ಲ ಮಾಹಿತಿಯನ್ನೂ ಬಹಳ ಸುಲಭವಾಗಿ ಪಡೆದುಕೊಳ್ಳಬಹುದು. ಒಂದು ಕಡೆ ಮಾಡಿದ ಬದಲಾವಣೆ ತನ್ನಷ್ಟಕ್ಕೆ ತಾನೆ ಎಲ್ಲ ಘಟಕಗಳಲ್ಲೂ ಕಾಣಿಸಿಕೊಳ್ಳುತ್ತದೆ. ಯಾರಿಗೆ ಯಾವ ಮಾಹಿತಿ ಲಭ್ಯವಾಗಬೇಕು ಅಥವಾ ಲಭ್ಯವಾಗಬಾರದು ಎಂಬುದನ್ನೂ ಕೂಡ ಬಹಳ ಸುಲಭವಾಗಿ ನಿಗದಿಪಡಿಸಬಹುದು. ಹೀಗಾಗಿ ಸಂಸ್ಥೆಯ ಮಹತ್ವದ ದಾಖಲೆಗಳು ಅಪಾತ್ರರ ಕೈಸೇರುವ ಭಯವೂ ಇರುವುದಿಲ್ಲ.
ಸಂಸ್ಥೆಯ ಎಲ್ಲ ವಿಭಾಗಗಳ ಮಾಹಿತಿ ಸಂಗ್ರಹಣೆ, ನಿರ್ವಹಣೆ ಹಾಗೂ ಸಂಸ್ಕರಣೆಯ ಕೇಂದ್ರೀಕರಣ ಇಆರ್‌ಪಿಯಿಂದಾಗಿ ಸಾಧ್ಯವಾಗುತ್ತದೆ. ಇದರಿಂದಾಗಿ ವಿಭಾಗಗಳ ನಡುವಿನ ಮಾಹಿತಿಯ ಹರಿವು ಸರಾಗವಾಗುತ್ತದೆ, ಸಂಸ್ಥೆಯ ಕಾರ್ಯನಿರ್ವಹಣೆ ಹೆಚ್ಚು ಸಕ್ಷಮವಾಗುತ್ತದೆ. ಇಷ್ಟೆಲ್ಲ ಅನುಕೂಲಗಳಿರುವ ಇಆರ್‌ಪಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದರಿಂದ ಸಂಸ್ಥೆ ತನ್ನ ಸೇವೆಯ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವುದು ಸಾಧ್ಯ. ಇದರಿಂದ ಸಂಸ್ಥೆಗೆ ಹೆಚ್ಚಿನ ಆರ್ಥಿಕ ಲಾಭವೂ ದೊರಕುತ್ತದೆ.
ಇಆರ್‌ಪಿ ಇತಿಹಾಸ
ಉತ್ಪಾದನಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಪ್ರಚಾರಕ್ಕೆ ಬಂದ ಗಣಕೀಕರಣದ ಯಶಸ್ಸು ಇಆರ್‌ಪಿಯ ಹುಟ್ಟಿಗೆ ಕಾರಣವಾದ ಅಂಶ. ಇಆರ್‌ಪಿಯ ಕಲ್ಪನೆಗೆ ಜೀವಕೊಟ್ಟಿದ್ದು ಕಾರ್ಖಾನೆಗಳಲ್ಲಿ ಈ ಹಿಂದೆ ಬಳಕೆಯಲ್ಲಿದ್ದ ಮ್ಯಾನುಫಾಕ್ಚರಿಂಗ್ ರಿಸೋರ್ಸ್ ಪ್ಲಾನಿಂಗ್, ಕಂಪ್ಯೂಟರ್ ಇಂಟಿಗ್ರೇಟೆಡ್ ಮ್ಯಾನುಫಾಕ್ಚರಿಂಗ್ ಮುಂತಾದ ಪರಿಕಲ್ಪನೆಗಳೇ. ಈ ವ್ಯವಸ್ಥೆಗೆ ಇಆರ್‌ಪಿ ಎಂದು ನಾಮಕರಣವಾದದ್ದು ೧೯೯೦ರಲ್ಲಿ.
ಮೊದಲಿಗೆ ಉತ್ಪಾದನಾ ಘಟಕಗಳಲ್ಲಿ ಮಾತ್ರ ಬಳಕೆಯಾಗುತ್ತಿದ್ದ ಈ ವ್ಯವಸ್ಥೆ ಇದೀಗ ಎಲ್ಲ ಬಗೆಯ ಸಂಸ್ಥೆಗಳಲ್ಲೂ ಬಳಕೆಯಲ್ಲಿದೆ. ಇಆರ್‌ಪಿ ಅಳವಡಿಸಲು ಆಗುವ ಅಪಾರ ವೆಚ್ಚ, ಈ ವ್ಯವಸ್ಥೆಯ ಸಂಕೀರ್ಣತೆ, ಇಆರ್‌ಪಿ ವ್ಯವಸ್ಥೆ ಒದಗಿಸುವ ಸಂಸ್ಥೆಯ ಮೇಲಿನ ಅವಲಂಬನೆ ಮುಂತಾದ ಸಮಸ್ಯೆಗಳ ನಡುವೆಯೂ ಇಆರ್‌ಪಿ ಬಳಕೆ ಹೆಚ್ಚುತ್ತಿದೆ.
ಪ್ರಾಜೆಕ್ಟ್ ನಿರ್ವಹಣೆ, ಹಣಕಾಸು, ಸಂಪನ್ಮೂಲ ಯೋಜನೆ ಹಾಗೂ ನಿರ್ವಹಣೆ, ಗ್ರಾಹಕ ಸೇವೆ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಎಂಟರ್‌ಪ್ರೈಸ್ ರಿಸೋರ್ಸ್ ಪ್ಲಾನಿಂಗ್‌ನ ಉಪಯುಕ್ತತೆ ಕಾಣಸಿಗುತ್ತಿದೆ. ಇಆರ್‌ಪಿ ವ್ಯವಸ್ಥೆಗೆ ಹೊಂದಿಕೊಂಡಂತೆ ಕೆಲಸಮಾಡುವ ಬಿಸಿನೆಸ್ ಇಂಟೆಲಿಜೆನ್ಸ್ ತಂತ್ರಾಂಶಗಳೂ ಇವೆ.
ಎಸ್‌ಎಪಿ ಹಾಗೂ ಅರೇಕಲ್ ಸಂಸ್ಥೆಗಳು ಇಆರ್‌ಪಿ ತಂತ್ರಾಂಶಗಳ ಪ್ರಮುಖ ತಯಾರಕರು.
ಹಿಂದೊಮ್ಮೆ ಬರೆದಿದ್ದ ಲೇಖನದ ಸುಧಾರಿತ ರೂಪ; ಮೇ ೩೧, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾಗಿದೆ

1 ಕಾಮೆಂಟ್:
ಬಹಳ ಚೆನ್ನಾಗಿ ಬರೆದಿದ್ದೀರ. ಕನ್ನಡದಲ್ಲಿ ಓದಿದ್ರೆ, ಮನಸ್ಸಿಗೆ ಥಟ್ ಅಂತ ಸೇರ್ಕೊಂಡುಬಿಡುತ್ತೆ.
-ಅಂಜನ್
ಕಾಮೆಂಟ್ ಪೋಸ್ಟ್ ಮಾಡಿ