ಟಿ ಜಿ ಶ್ರೀನಿಧಿ
ಅಂತರಜಾಲದ ಜನಪ್ರಿಯ ಉಪಯೋಗಗಳಲ್ಲಿ ಇನ್ಸ್‌ಟಂಟ್ ಮೆಸೇಜಿಂಗ್ ಅಥವಾ ಚಾಟಿಂಗ್ ಕೂಡ ಒಂದು. ಹರಟೆ ಅಥವಾ ಚಾಟ್ ಎಂದು ಕರೆಸಿಕೊಳ್ಳುವ ಈ ಮಾಧ್ಯಮದಲ್ಲಿ ಸಂದೇಶವಾಹಕ ತಂತ್ರಾಂಶದ ಸಂಪರ್ಕ ಹೊಂದಿರುವ ಯಾರು ಬೇಕಿದ್ದರೂ ಮತ್ತೊಬ್ಬರಿಗೆ ಸಂದೇಶಗಳನ್ನು ಕಳುಹಿಸುವುದು ಹಾಗೂ ಅವರ ಉತ್ತರಗಳನ್ನು ಪಡೆದುಕೊಳ್ಳಬಹುದು. ಪಠ್ಯ, ಧ್ವನಿ ಅಥವಾ ವೀಡಿಯೋ - ಈ ಯಾವುದೇ ರೂಪದಲ್ಲಿ ಹರಟೆ ಸಾಧ್ಯ.
ಅಂತರಜಾಲ ಸಂಪರ್ಕದಲ್ಲಿರುವಾಗ ಮಿತ್ರರ ಗಣಕಕ್ಕೆ ಕರೆ ಮಾಡಿ ಮಾತನಾಡುವುದು ಅಥವಾ 'ವಾಯ್ಸ್ ಚಾಟ್' ಮಾಡುವುದು ಜಾಲಿಗರಲ್ಲಿ ಬಹುತೇಕರ ಅಚ್ಚುಮೆಚ್ಚಿನ ಹವ್ಯಾಸ. ಗೆಳೆಯರೊಡನೆ ಮುಖಾಮುಖಿ ಮಾತನಾಡಲು ಅವಕಾಶಮಾಡಿಕೊಡುವ ವೀಡಿಯೋ ಚಾಟ್ ಕೂಡ ಸಾಕಷ್ಟು ಜನಪ್ರಿಯ. ನಮಗೆ ಬೇಕಾದವರೊಡನೆ ನೇರವಾಗಿ ಮಾತನಾಡಲು ಸಹಾಯಮಾಡುವ ಈ ಮಾಧ್ಯಮಗಳದ್ದು ಸಾಂಪ್ರದಾಯಿಕ ದೂರವಾಣಿಗಿಂತ ಬಹಳ ಕಡಿಮೆ ವೆಚ್ಚ; ಅಷ್ಟೇ ಅಲ್ಲ, ಹೇಳಬೇಕಾದ್ದನ್ನೆಲ್ಲ ಕೀಲಿಮಣೆಯಲ್ಲಿ ಕುಟ್ಟಬೇಕಾದ ಪಠ್ಯರೂಪದ ಚಾಟಿಂಗ್‌ಗಿಂತ ಇದು ಸುಲಭವೂ ಹೌದು!
ಈ ಬಗೆಯ ಸೇವೆಗಳನ್ನು ಒದಗಿಸುವ ಅನೇಕ ಸಂಸ್ಥೆಗಳು ಜಾಲಲೋಕದಲ್ಲಿ ಸಕ್ರಿಯವಾಗಿವೆ; ಗೂಗಲ್, ಯಾಹೂ ಮುಂತಾದ ಅನೇಕ ಜನಪ್ರಿಯ ತಾಣಗಳ ಮೂಲಕ ವಾಯ್ಸ್ ಹಾಗೂ ವೀಡಿಯೋ ಚಾಟಿಂಗ್ ಸೌಲಭ್ಯ ದೊರಕುತ್ತದೆ.
ಇಂತಹ ತಾಣಗಳ ಸಾಲಿನಲ್ಲಿ ಅಗ್ರಗಣ್ಯವಾಗಿ ನಿಲ್ಲುವುದು ಸ್ಕೈಪ್‌ನ ಹೆಸರು.
ಎಂಟುನೂರಾ ಐವತ್ತು ಕೋಟಿ ಡಾಲರುಗಳ ಭಾರೀ ಮೊತ್ತ ಪಾವತಿಸಿ ಐಟಿ ದಿಗ್ಗಜ ಮೈಕ್ರೋಸಾಫ್ಟ್ ಈ ಸಂಸ್ಥೆಯನ್ನು ಕೊಂಡುಕೊಂಡಿರುವುದು ಕಳೆದ ವಾರದ ದೊಡ್ಡ ಸುದ್ದಿ.
ಏನಿದು ಸ್ಕೈಪ್
ಧ್ವನಿ ಹಾಗೂ ವೀಡಿಯೋ ರೂಪದ ಚಾಟಿಂಗ್ ಸೇವೆ ಒದಗಿಸುವ ಜನಪ್ರಿಯ ತಾಣ ಸ್ಕೈಪ್ (www.skype.com). ಅಂತರಜಾಲ ಸಂಪರ್ಕದಲ್ಲಿರುವ ಮಿತ್ರರೊಡನೆ ಸ್ಕೈಪ್ ಸೇವೆ ಬಳಸಿ ಪಠ್ಯ, ಧ್ವನಿ ಹಾಗೂ ವೀಡಿಯೋ ಮೂರೂ ರೂಪದಲ್ಲಿ ಚಾಟ್ ಮಾಡುವುದು ಸಾಧ್ಯ. ಹಣ ನೀಡಲು ಸಿದ್ಧರಿದ್ದರೆ ಮಿತ್ರರ ದೂರವಾಣಿಗೇ ಕರೆ ಮಾಡಿ ಮಾತನಾಡಬಹುದು; ನಾಲ್ಕಾರು ಜನರ ಜೊತೆಗೆ ವೀಡಿಯೋ ಕಾನ್‌ಫರೆನ್ಸಿಂಗ್ ಕೂಡ ಮಾಡಬಹುದು. ಗೂಗಲ್ ಬಳಸಿ ಹುಡುಕಾಟ ನಡೆಸುವುದಕ್ಕೆ ಗೂಗ್ಲಿಂಗ್ ಎಂಬ ಕ್ರಿಯಾಪದ ಹುಟ್ಟಿಕೊಂಡಿರುವಂತೆ ಸ್ಕೈಪ್ ಬಳಸಿ ಹರಟುವುದು ಸ್ಕೈಪಿಂಗ್ ಎಂದೇ ಪರಿಚಿತ. ಈ ತಾಣ ಒಟ್ಟು ಸುಮಾರು ಅರುವತ್ತಾರು ಕೋಟಿ ಬಳಕೆದಾರರನ್ನು ಹೊಂದಿದೆ.
೨೦೦೩ರಲ್ಲಿ ಪ್ರಾರಂಭವಾದ ಈ ಯುರೋಪಿಯನ್ ಸಂಸ್ಥೆ ಬಳಕೆದಾರರಲ್ಲಿ ಬಹುಬೇಗ ಜನಪ್ರಿಯವಾಯಿತು. ಅಂತರಜಾಲದ ಮೂಲಕ ಉಚಿತ ಕರೆಗಳನ್ನು ಮಾಡಲು ಅನುವುಮಾಡಿಕೊಟ್ಟಿದ್ದು ಈ ತಾಣದ ಜನಪ್ರಿಯತೆಗೆ ಅತಿದೊಡ್ಡ ಕಾರಣ. ಇದೇ ರೀತಿಯ ಸೇವೆ ಬೇರೆ ತಾಣಗಳಲ್ಲೂ ಲಭ್ಯವಿತ್ತು, ನಿಜ. ಆದರೆ ಅಲ್ಪಪ್ರಮಾಣದ ಶುಲ್ಕ ಪಾವತಿಸಿ ಅಂತರಜಾಲದಿಂದಲೇ ಸಾಂಪ್ರದಾಯಿಕ ದೂರವಾಣಿಗಳಿಗೂ ಕರೆಮಾಡುವುದು ಸ್ಕೈಪ್‌ನಿಂದಾಗಿ ಸಾಧ್ಯವಾಯಿತು; ಅಂತರರಾಷ್ಟ್ರೀಯ ಕರೆಗಳ ವೆಚ್ಚಕ್ಕಿಂತ ಈ ಶುಲ್ಕ ಬಹಳ ಕಡಿಮೆಯಾದ್ದರಿಂದ ಕೋಟಿಗಟ್ಟಲೆ ಬಳಕೆದಾರರು ಸ್ಕೈಪ್‌ನತ್ತ ಆಕರ್ಷಿತರಾದರು. ಅಂತರಜಾಲದ ಸಂಪನ್ಮೂಲಗಳನ್ನು ಕೊಂಚ ಅತಿಯಾಗಿಯೇ ಬಳಸುತ್ತದೆ ಎಂಬ ಆರೋಪ ಇದ್ದರೂ ಕೂಡ ವಾಣಿಜ್ಯ ಸಂಸ್ಥೆಗಳೂ ಸ್ಕೈಪ್ ಬಳಕೆ ಪ್ರಾರಂಭಿಸಿದವು.
ಇದೆಲ್ಲವುಗಳಿಂತ ಆಕರ್ಷಿತವಾದ ಇ-ವ್ಯಾಪಾರ ಕ್ಷೇತ್ರದ ಅಗ್ರಗಣ್ಯ ಸಂಸ್ಥೆ ಇ-ಬೇ ೨೦೦೫ರಲ್ಲಿ ಇನ್ನೂರ ಅರವತ್ತು ಕೋಟಿ ಡಾಲರ್ ಪಾವತಿಸಿ ಸ್ಕೈಪ್ ಅನ್ನು ತನ್ನದಾಗಿಸಿಕೊಂಡಿತ್ತು. ಆದರೆ ಈ ವ್ಯವಹಾರ ಇ-ಬೇ ಮಟ್ಟಿಗೆ ಅಷ್ಟೇನೂ ಲಾಭದಾಯಕವಾಗಿರಲಿಲ್ಲ; ಹೀಗಾಗಿ ಅದು ೨೦೦೯ರಲ್ಲಿ ಸ್ಕೈಪ್‌ನ ಬಹುಭಾಗವನ್ನು ಖಾಸಗಿ ಹೂಡಿಕೆದಾರರಿಗೆ ಮಾರಿ ಕೈತೊಳೆದುಕೊಂಡಿತು.
ಮುಂದಿನ ನಡೆ
ಆಂಡ್ರಾಯ್ಡ್ ಹಾಗೂ ಐಫೋನ್ ಆಪ್‌ಗಳ ಮೂಲಕವೂ ಸ್ಕೈಪ್ ಸೇವೆ ಲಭ್ಯವಾಗಿರುವುದು ಅದರ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಸ್ಕೈಪ್‌ಗೆ ಪ್ರಬಲ ಪ್ರತಿಸ್ಪರ್ಧಿಗಳಾಗುವ ನಿರೀಕ್ಷೆ ಹುಟ್ಟಿಸಿದ್ದ ಗೂಗಲ್ ವಾಯ್ಸ್, ಆಪಲ್ ಫೇಸ್‌ಟೈಮ್ ಮುಂತಾದ ಸೇವೆಗಳು ಈವರೆಗೆ ಅಷ್ಟೇನೂ ಜನಪ್ರಿಯತೆ ಗಳಿಸಿಕೊಳ್ಳದಿರುವುದು ಕೂಡ ಸ್ಕೈಪ್ ಪಾಲಿಗೆ ಸಂತೋಷದ ವಿಷಯವೇ.
ಆದರೆ ಇಲ್ಲಿಯತನಕ ಭಾರೀ ಎನ್ನಿಸಿಕೊಳ್ಳುವಷ್ಟು ಲಾಭವನ್ನೇನೂ ಗಳಿಸಿರದ ಸ್ಕೈಪ್‌ಗಾಗಿ ಮೈಕ್ರೋಸಾಫ್ಟ್ ಎಂಟುನೂರಾ ಐವತ್ತು ಕೋಟಿ ಡಾಲರ್ ಕೊಟ್ಟಿರುವುದು ವಾಣಿಜ್ಯ ಲೋಕದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಗೂಗಲ್ ಹಾಗೂ ಯಾಹೂ ಮೆಸೆಂಜರ್‌ಗಳ ರೀತಿಯದೇ ಸೇವೆ ಒದಗಿಸುವ ಮೈಕ್ರೋಸಾಫ್ಟ್‌ನ ಎಂಎಸ್‌ಎನ್ ಮೆಸೆಂಜರ್ ವ್ಯವಸ್ಥೆ ಬಹಳ ಸಮಯದಿಂದಲೇ ಲಭ್ಯವಿದೆ. ಇಲ್ಲಿಯವರೆಗೆ ಸ್ಕೈಪ್ ಜೊತೆ ಪೈಪೋಟಿ ನಡೆಸಲು ಪ್ರಯತ್ನಿಸುತ್ತಿದ್ದ ತನ್ನದೇ ಆದ ಈ ಉತ್ಪನ್ನಕ್ಕೆ ಪೂರಕವಾಗಿ ಸ್ಕೈಪ್ ಸೇವೆಯನ್ನು ಮೈಕ್ರೋಸಾಫ್ಟ್ ಸಂಸ್ಥೆ ಹೇಗೆ ಬಳಸಿಕೊಳ್ಳಲಿದೆ, ಹಾಗೂ ಅದಕ್ಕೆ ಜಾಲಿಗರ ಪ್ರತಿಕ್ರಿಯೆ ಹೇಗಿರಲಿದೆ ಎನ್ನುವತ್ತ ಎಲ್ಲರ ಗಮನವೂ ಇದೆ. ಸಂಸ್ಥೆಗಳಲ್ಲಿ ಬಳಕೆಯಾಗುವ ಮೈಕ್ರೋಸಾಫ್ಟ್ ಆಫೀಸ್ ಕಮ್ಯೂನಿಕೇಟರ್‌ನ ಹೊಸ ರೂಪವಾಗಿ ಈಚೆಗೆ ಬಿಡುಗಡೆಯಾದ'ಮೈಕ್ರೋಸಾಫ್ಟ್ ಲಿಂಕ್'ನ ಜೊತೆಗೆ ಸ್ಕೈಪ್ ಸವಲತ್ತುಗಳನ್ನೂ ಸಮ್ಮಿಲನಗೊಳಿಸಬಹುದು ಎಂಬ ಊಹೆ ಕೂಡ ಕೇಳಿಬರುತ್ತಿದೆ.
ಮೇ ೧೭, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ; ಲೇಖನ ರೂಪಿಸುವಲ್ಲಿ ನೆರವಾದ ಡಾ| ಯು ಬಿ ಪವನಜ ಅವರಿಗೆ ಧನ್ಯವಾದಗಳು.

1 ಕಾಮೆಂಟ್:
ನಿಜಕ್ಕೂ ಒಳ್ಳೆಯ ಪ್ರಯತ್ನ. ನಮಗೆ ಇನ್ನೂ ಹೆಚ್ಚಿನ ವಿಜ್ಞಾನ ಮಾಹಿತಿಗಳು ಸಿಗುವಂತಾಗಲಿ.
ಕಾಮೆಂಟ್ ಪೋಸ್ಟ್ ಮಾಡಿ