ಟಿ ಜಿ ಶ್ರೀನಿಧಿ
ಹೀಗೊಂದು ದಿನ ಬೆಳಗ್ಗೆ, ಯಾವುದೋ ಕಾರಣಕ್ಕಾಗಿ, ನಿಮ್ಮ ಮನೆಗೆ ದಿನಪತ್ರಿಕೆ ತಲುಪಲಿಲ್ಲ ಎಂದಿಟ್ಟುಕೊಳ್ಳೋಣ. ಪಕ್ಕದ ಮನೆಯವರನ್ನು ಕೇಳೋಣ ಎಂದುಕೊಂಡರೆ ಅವರ ಮನೆಗೂ ಪತ್ರಿಕೆ ಬಂದಿಲ್ಲ. ಹೀಗಿರುವಾಗ ಆ ದಿನ ಪತ್ರಿಕೆ ಓದಬೇಕಾದರೆ ಅಂತರಜಾಲದ ಮೊರೆಹೋಗುವುದೊಂದೇ ನಿಮ್ಮ ಮುಂದಿರುವ ಆಯ್ಕೆ.
ಸರಿ, ಈಗ ನೀವು ಉದಯವಾಣಿಯ ಜಾಲತಾಣವನ್ನು ಸಂದರ್ಶಿಸಲು ಹೊರಟಿದ್ದೀರಿ ಎಂದುಕೊಳ್ಳೋಣ. ಇದಕ್ಕಾಗಿ ಮೊದಲು ನಿಮ್ಮ ಗಣಕದಲ್ಲಿರುವ ಬ್ರೌಸರ್ ತಂತ್ರಾಂಶವನ್ನು ತೆರೆದು ಅಲ್ಲಿರುವ ವಿಳಾಸ ಪಟ್ಟಿಯಲ್ಲಿ (ಅಡ್ರೆಸ್ ಬಾರ್) ಉದಯವಾಣಿ ಡಾಟ್ ಕಾಮ್ ಎಂದು ದಾಖಲಿಸಿ ಎಂಟರ್ ಕೀಲಿ ಒತ್ತುತ್ತೀರಿ.
ಮುಂದೆ?
"ಮುಂದೆ ಇನ್ನೇನು, ಉದಯವಾಣಿಯ ಜಾಲತಾಣ ತೆರೆದುಕೊಳ್ಳುತ್ತದೆ; ಅವತ್ತಿನ ಸುದ್ದಿಗಳನ್ನು ಓದಿ ಮುಗಿಸಿ ಮುಂದಿನ ಕೆಲಸಕ್ಕೆ ಹೊರಡುತ್ತೇನೆ" ಎನ್ನುತ್ತೀರಾ? ಅದೂ ಸರಿಯೇ, ಆದರೆ ನೀವು ತಾಣದ ವಿಳಾಸವನ್ನು ದಾಖಲಿಸಿ ಎಂಟರ್ ಕೀಲಿ ಒತ್ತಿದಾಗಿನಿಂದ ಜಾಲತಾಣದ ಮುಖಪುಟ (ಹೋಮ್‌ಪೇಜ್) ತೆರೆದುಕೊಳ್ಳುವವರೆಗೆ ಏನೇನು ನಡೆಯುತ್ತದೆ ಗೊತ್ತೆ?
ಮೊದಲಿಗೆ ನಿಮ್ಮ ಕೋರಿಕೆಯನ್ನು ಪಡೆದುಕೊಳ್ಳುವುದು ಬ್ರೌಸರ್ ತಂತ್ರಾಂಶ. ನೀವು ಕೇಳುತ್ತಿರುವ ಜಾಲತಾಣವನ್ನು ಸಂಪರ್ಕಿಸಿ ಅದರಲ್ಲಿರುವ ಮಾಹಿತಿಯನ್ನು ನಿಮ್ಮ ಗಣಕದ ಪರದೆಯ ಮೇಲೆ ಪ್ರದರ್ಶಿಸುವುದು ಈ ತಂತ್ರಾಂಶದ ಕೆಲಸ. ಅದು ಈ ಕೆಲಸವನ್ನು ಹೇಗೆ ಮಾಡುತ್ತದೆ ನೋಡೋಣ ಬನ್ನಿ.
ಅಂತರಜಾಲ ಸಂಪರ್ಕದಲ್ಲಿರುವ ಪ್ರತಿಯೊಂದು ಗಣಕವನ್ನೂ ಪ್ರತ್ಯೇಕವಾಗಿ ಗುರುತಿಸುವ ಸಲುವಾಗಿ ಅವುಗಳಿಗೆ 'ಐ.ಪಿ. ಅಡ್ರೆಸ್' ಎಂಬ ವಿಶಿಷ್ಟವಾದ ವಿಳಾಸವೊಂದನ್ನು ನೀಡಲಾಗಿರುತ್ತದೆ. ಐ.ಪಿ. ಎನ್ನುವುದು ಇಂಟರ್‌ನೆಟ್ ಪ್ರೋಟೋಕಾಲ್ ಎಂಬ ಹೆಸರಿನ ಹ್ರಸ್ವರೂಪ. ಇದನ್ನು ಅಂತರಜಾಲದಲ್ಲಿರುವ ಬೇರೆಬೇರೆ ಗಣಕಗಳು ತಮ್ಮ ನಡುವೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಬಳಸುವ ಶಿಷ್ಟತೆ ಎಂದು ಕರೆಯಬಹುದು. ಇದೇ ರೀತಿ, ವಿಶ್ವವ್ಯಾಪಿ ಜಾಲದ ಮೂಲಕ ಲಭ್ಯವಿರುವ ಪ್ರತಿಯೊಂದು ತಾಣ ಹಾಗೂ ಅದಕ್ಕೆ ಸಂಬಂಧಿಸಿದ ಪುಟಗಳೆಲ್ಲವೂ ಅಂತರಜಾಲದಲ್ಲೆಲ್ಲೋ ಇರುವ ಗಣಕಗಳಲ್ಲಿ ಶೇಖರವಾಗಿರುತ್ತವೆ. ಈ ಗಣಕಗಳನ್ನು 'ವೆಬ್ ಸರ್ವರ್'ಗಳೆಂದು ಕರೆಯಲಾಗುತ್ತದೆ. ಇಂತಹ ಪ್ರತಿಯೊಂದು ಸರ್ವರ್‌ಗೂ ತನ್ನದೇ ಆದ ಒಂದು ಐ.ಪಿ. ವಿಳಾಸ ಇರುತ್ತದೆ.
೭೪.೧೨೭.೬೧.೧೦೬ ಎನ್ನುವುದು ಐ.ಪಿ. ವಿಳಾಸಕ್ಕೊಂದು ಉದಾಹರಣೆ. ಇಂತಹ ಬೇರೆಬೇರೆ ಐ.ಪಿ. ವಿಳಾಸಗಳು ವಿಭಿನ್ನ ಜಾಲತಾಣಗಳನ್ನು ಪ್ರತಿನಿಧಿಸುತ್ತವೆ ಎಂದರೆ ನಿಮಗೆ ತಮಾಷೆಯಾಗಿ ಕಾಣಬಹುದು. ಆದರೆ ಉದಯವಾಣಿ ಡಾಟ್ ಕಾಮ್ ಎಂಬಂತಹ ವಿಳಾಸಗಳನ್ನು ಸುಲಭವಾಗಿ ನೆನಪಿಟ್ಟುಕೊಳ್ಳುವ ಬದಲು ಗೊಂದಲಮಯವಾದ ಸಂಖ್ಯೆಗಳ ಸರಣಿಯನ್ನು ಯಾರುತಾನೇ ನೆನಪಿಟ್ಟುಕೊಳ್ಳಲು ಸಾಧ್ಯ? ಇದಕ್ಕಾಗಿಯೇ ಪ್ರತಿಯೊಂದು ತಾಣದ ಐ.ಪಿ. ವಿಳಾಸಕ್ಕೂ ಹೊಂದುವಂತೆ ಒಂದೊಂದು ವಿಳಾಸ ಅಥವಾ ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್ (ಯುಆರ್‌ಎಲ್) ಅನ್ನು ನೀಡಲಾಗಿರುತ್ತದೆ.
ಹೀಗಿದ್ದರೂ ಗಣಕಗಳು ಜಾಲತಾಣಗಳನ್ನು ಗುರುತಿಸುವುದು ಅವುಗಳ ಐ.ಪಿ. ವಿಳಾಸದಿಂದಲೇ. ಆದ್ದರಿಂದ ಯಾವುದೇ ತಾಣವನ್ನು ತೆರೆಯುವ ಮುನ್ನ ಅದರ ಐ.ಪಿ. ವಿಳಾಸವನ್ನು ಪತ್ತೆಹಚ್ಚುವುದು ಅನಿವಾರ್ಯವಾಗುತ್ತದೆ.
ಈ ಕೆಲಸವನ್ನು ಬ್ರೌಸರ್ ಮಾಡುತ್ತದೆ. ನಿಮ್ಮ ಇಚ್ಛೆಯ ತಾಣದ ವಿಳಾಸವನ್ನು ಅನ್ನು ದಾಖಲಿಸಿದ ತಕ್ಷಣ ಕಾರ್ಯನಿರತವಾಗುವ ಬ್ರೌಸರ್ ತಂತ್ರಾಂಶ, ಡೊಮೈನ್ ನೇಮ್ ಸರ್ವರ್ (ಡಿ ಎನ್ ಎಸ್) ಎಂಬ ವ್ಯವಸ್ಥೆಯ ನೆರವಿನಿಂದ ಆ ತಾಣದ ಐ.ಪಿ. ವಿಳಾಸವನ್ನು ಪತ್ತೆಹಚ್ಚುತ್ತದೆ. ಈ ವ್ಯವಸ್ಥೆ ಪ್ರತಿಯೊಂದು ತಾಣದ ಯುಆರ್‌ಎಲ್ ಅನ್ನು ಅದರ ಐ.ಪಿ. ವಿಳಾಸದೊಂದಿಗೆ ಹೊಂದಿಸಿಕೊಡುವ ಕೆಲಸ ಮಾಡುತ್ತದೆ.
ಇದು ಕೇಳಲು ಬಹಳ ಸುಲಭವಾಗಿದೆ, ನಿಜ. ಆದರೆ ಪ್ರಪಂಚದಾದ್ಯಂತ ಕೋಟ್ಯಂತರ ಜನರು ದಿನನಿತ್ಯ ಲಕ್ಷಾಂತರ ತಾಣಗಳಿಗೆ ಭೇಟಿಕೊಡುತ್ತಿರುತ್ತಾರೆ ಎಂಬ ಅಂಶವನ್ನು ಗಮನಿಸಿದಾಗ, ಈ ಕೆಲಸ ಅದೆಷ್ಟು ಕಷ್ಟದ್ದು ಎಂಬ ವಿಷಯ ಅರಿವಿಗೆ ಬರುತ್ತದೆ. ಇದಲ್ಲದೆ ಪ್ರತಿನಿತ್ಯವೂ ಸೃಷ್ಟಿಯಾಗುವ ಹಾಗೂ ಬದಲಾಗುವ ಸಾವಿರಾರು ಯುಆರ್‌ಎಲ್‌ಗಳ ಬಗೆಗೆ ಮಾಹಿತಿ ಸಂಗ್ರಹಿಸಿಟ್ಟುಕೊಳ್ಳುವ ಕೆಲಸವನ್ನೂ ಇದೇ ಡೊಮೈನ್ ನೇಮ್ ಸರ್ವರ್ ಮಾಡುತ್ತದೆ.
ಇಷ್ಟೆಲ್ಲ ತಾಪತ್ರಯಗಳ ನಡುವೆಯೂ ನಮ್ಮ ಗಣಕದ ಬ್ರೌಸರ್ ಕಳುಹಿಸುವ ಯುಆರ್‌ಎಲ್ ಅನ್ನು ಗುರುತಿಸುವ ಡೊಮೈನ್ ನೇಮ್ ಸರ್ವರ್, ನಮಗೆ ಬೇಕಾಗಿರುವ ತಾಣದ ಪುಟಗಳು ಯಾವ ಗಣಕದಲ್ಲಿ (ಸರ್ವರ್) ಶೇಖರವಾಗಿವೆ ಎಂಬುದನ್ನು ಪತ್ತೆಹಚ್ಚಿ ಕೊಡುತ್ತದೆ.
ಹೀಗೆ ಡೊಮೈನ್ ನೇಮ್ ಸರ್ವರ್‌ನ ನೆರವಿನೊಡನೆ ವೆಬ್ ಸರ್ವರ್ ಅನ್ನು ಪತ್ತೆಹಚ್ಚಿದ ನಂತರ ಬ್ರೌಸರ್ ತಂತ್ರಾಂಶ ಅದನ್ನು ಸಂಪರ್ಕಿಸುತ್ತದೆ; ತನಗೆ ಬೇಕಾದ ಮಾಹಿತಿಯನ್ನು ಒದಗಿಸುವಂತೆ ಕೋರಿ ಅದಕ್ಕೊಂದು ಮನವಿಯನ್ನೂ ಸಲ್ಲಿಸುತ್ತದೆ. ಇಂತಹುದೊಂದು ಮನವಿ ತಲುಪಿದ ತಕ್ಷಣ ಕಾರ್ಯನಿರತವಾಗುವ ವೆಬ್ ಸರ್ವರ್, ಯಾವ ಮಾಹಿತಿಗಾಗಿ ಮನವಿ ಬಂದಿದೆಯೋ ಅದನ್ನು ನಿಮ್ಮ ಗಣಕಕ್ಕೆ ಕಳುಹಿಸಿಕೊಡುತ್ತದೆ; ಈ ಮಾಹಿತಿಯನ್ನು ಪಡೆದುಕೊಳ್ಳುವ ಬ್ರೌಸರ್ ತಂತ್ರಾಂಶ ಅದನ್ನು ಗಣಕದ ಪರದೆಯ ಮೇಲೆ ಪ್ರದರ್ಶಿಸುತ್ತದೆ.
ಮೇ ೧೦, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ