ಮಂಗಳವಾರ, ಮೇ 3, 2011

ಡೇಟಾ ವೇರ್‌ಹೌಸ್ ಎಂಬ ಮಾಹಿತಿ ಗೋದಾಮು


ಟಿ ಜಿ ಶ್ರೀನಿಧಿ

ಪಕ್ಕದ ರಸ್ತೆಯ ಬ್ಯಾಂಕಿಗೆ ಹೋಗಿ ಒಂದು ಲಕ್ಷ ಸಾಲ ತೆಗೆದುಕೊಂಡಿದ್ದ ವ್ಯಕ್ತಿ ಆ ಸಾಲ ತೀರಿಸದೆ ತಲೆಮರೆಸಿಕೊಂಡನಂತೆ. ಸ್ವಲ್ಪದಿನ ಬಿಟ್ಟು ದೂರದ ಇನ್ನೊಂದು ಊರಿಗೆ ಹೋಗಿ ಅಲ್ಲಿನ ಬ್ಯಾಂಕಿನಲ್ಲಿ ಐದು ಲಕ್ಷದ ಸಾಲ ಕೇಳಿದನಂತೆ, ನಮ್ಮ ಊರಿನಲ್ಲಿ ಸಾಲ ತೆಗೆದುಕೊಂಡು ಓಡಿಬಂದಿರುವ ವಿಷಯ ಇವರಿಗೇನು ಗೊತ್ತು ಎಂಬ ಧೈರ್ಯದಿಂದ.

ತನ್ನ ಹಣಕಾಸು ವ್ಯವಹಾರಕ್ಕೆ ಸಂಬಂಧಪಟ್ಟ ಎಲ್ಲ ವಿವರಗಳು ಎಲ್ಲ ಬ್ಯಾಂಕುಗಳಿಗೂ ಗೊತ್ತಿರುತ್ತವೆ ಎಂಬ ವಿಷಯ ಮಾತ್ರ ಅವನಿಗೆ  ಗೊತ್ತೇ ಇರಲಿಲ್ಲ, ಪಾಪ!


ಇದೆಲ್ಲ ಸಾಧ್ಯವಾಗಿರುವುದು ಮಾಹಿತಿ ತಂತ್ರಜ್ಞಾನದ ದೆಸೆಯಿಂದ.

ಮಾಹಿತಿ ಸಂಪತ್ತು
ಮಾಹಿತಿ ಎಂದರೆ ಸಂಪತ್ತು ಎಂದು ಪರಿಗಣಿಸುವ ಈ ಕಾಲದಲ್ಲಿ ಪ್ರಪಂಚದಲ್ಲಿರುವ ಪ್ರತಿಯೊಂದು ವಿಷಯಕ್ಕೂ ಸಂಬಂಧಿಸಿದಂತೆ ಅಪಾರ ಪ್ರಮಾಣದ ಮಾಹಿತಿ ಲಭ್ಯವಿದೆ. ಅದೆಲ್ಲ ಮಾಹಿತಿಯನ್ನೂ ಸರಿಯಾಗಿ ಸಂಗ್ರಹಿಸಿಡುವ ಹಾಗೂ ಬೇಕಾದಾಗ ತಕ್ಷಣ ದೊರಕುವಂತೆ ಮಾಡುವ ಅಗತ್ಯವೂ ಅಷ್ಟೇ ತೀವ್ರವಾಗಿದೆ.

ಈಗ ಸಾಲ ತೀರಿಸದ ಆ ವ್ಯಕ್ತಿಯ ವಿಷಯವನ್ನೇ ತೆಗೆದುಕೊಳ್ಳಿ. ಆತ ಪಕ್ಕದ ರಸ್ತೆಯ ಬ್ಯಾಂಕಿಗೆ ಹೋಗಿ ಖಾತೆ ತೆರೆದ ಕ್ಷಣದಿಂದ ಬ್ಯಾಂಕಿನಲ್ಲಿ ಆತನ ಹಾಗೂ ಆತನ ಖಾತೆಯ ಬಗ್ಗೆ ಮಾಹಿತಿ ಸಂಗ್ರಹಣೆ ಪ್ರಾರಂಭವಾಗುತ್ತದೆ - ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಇಮೇಲ್ ವಿಳಾಸ, ಪ್ಯಾನ್ ಸಂಖ್ಯೆ ಇವುಗಳಿಂದ ಪ್ರಾರಂಭಿಸಿ ಅವನು ಬ್ಯಾಂಕಿನಿಂದ ಏನೇನು ಸೌಲಭ್ಯಗಳನ್ನು ಬಳಸಿಕೊಂಡಿದ್ದಾನೆ, ಎಷ್ಟು ಸಾಲ ತೆಗೆದುಕೊಂಡಿದ್ದಾನೆ, ಸರಿಯಾಗಿ ವಾಪಸ್ ಕಟ್ಟುತ್ತಿದ್ದಾನೋ ಇಲ್ಲವೋ - ಹೀಗೆ.

ಈ ಬಗೆಯ ಮಾಹಿತಿ ಸಂಗ್ರಹಣೆ ಎಲ್ಲ ಕ್ಷೇತ್ರಗಳಲ್ಲೂ ನಡೆಯುತ್ತದೆ:  ತಾವು ತಮ್ಮ ಗ್ರಾಹಕರಿಗೆ ಎಷ್ಟು ಸಾಲ ಒದಗಿಸಿದ್ದೇವೆ ಹಾಗೂ ಅದರ ವಾಪಸಾತಿ ಹೇಗಿದೆ ಎನ್ನುವುದರ ಬಗ್ಗೆ  ಹಣಕಾಸು ಸಂಸ್ಥೆಗಳು ಮಾಹಿತಿ ಸಂಗ್ರಹಿಸುತ್ತವೆ; ತಮ್ಮ ಸಂಪರ್ಕಗಳನ್ನು ಬಳಸಿ ಯಾರು ಯಾವಾಗ ಎಲ್ಲಿಗೆ ಎಷ್ಟುಬಾರಿ ಕರೆಮಾಡಿದರು ಎಂಬ ವಿಷಯ ದೂರಸಂಪರ್ಕ ಸಂಸ್ಥೆಗಳಲ್ಲಿ ಸಂಗ್ರಹವಾಗಿರುತ್ತದೆ; ಕ್ರೆಡಿಟ್ ಕಾರ್ಡ್ ಬಳಕೆದಾರ ಮರುಪಾವತಿ ಅಭ್ಯಾಸಗಳ ಕುರಿತು ಕ್ರೆಡಿಟ್‌ಕಾರ್ಡ್ ಸಂಸ್ಥೆಗಳು ಮಾಹಿತಿ ಸಂಗ್ರಹಣೆ ಮಾಡುತ್ತವೆ; ದಿನಬಳಕೆಯ ವಸ್ತುಗಳನ್ನು ತಯಾರಿಸುವ ಸಂಸ್ಥೆ ಮಾರುಕಟ್ಟೆಯಲ್ಲಿ ತನ್ನ ಉತ್ಪನ್ನಗಳ ಮಾರಾಟದ ಪ್ರಮಾಣದ ಬಗ್ಗೆ ಮಾಹಿತಿ ಸಂಗ್ರಹಿಸುತ್ತದೆ.

ಇಷ್ಟೆಲ್ಲ ಕಡೆಗಳಲ್ಲಿ ನಡೆಯುವ ಇವೆಲ್ಲ ಮಾಹಿತಿ ಸಂಗ್ರಹಣೆಯ ಅಂತಿಮ ಉದ್ದೇಶ ಮಾತ್ರ ಒಂದೇ - ಈ ಚಾರಿತ್ರಿಕ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ತಮ್ಮ ಮುಂದಿನ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುವುದು. ಯಾವುದೋ ಒಬ್ಬ ವ್ಯಕ್ತಿ ಸಾಲಕ್ಕಾಗಿ ಅರ್ಜಿ ಹಿಡಿದು ಬಂದಾಗ ಅವನಿಗೆ ಸಾಲ ಕೊಡಬಹುದೋ ಇಲ್ಲವೋ ಎಂದು ನಿರ್ಧರಿಸುವುದು, ದೂರವಾಣಿ ಸಂಪರ್ಕಗಳ ಬಳಕೆಯನ್ನು ಆಧರಿಸಿ ಹೊಸಹೊಸ ಕಾರ್ಯಕ್ರಮಗಳನ್ನು ರೂಪಿಸುವುದು, ತಮ್ಮ ಉತ್ಪನ್ನಗಳ ಮಾರಾಟದ ಪ್ರಮಾಣ ಆಧರಿಸಿ ಮುಂದಿನ ಚಟುವಟಿಕೆಗಳನ್ನು ತೀರ್ಮಾನಿಸುವುದು - ಹೀಗೆ ಇಂತಹ ಮಾಹಿತಿಯ ಉಪಯೋಗ ಹಲವು ಬಗೆಗಳಲ್ಲಿ ನಡೆಯುತ್ತದೆ.

ಡೇಟಾ ವೇರ್‌ಹೌಸ್
ಈ ಮಾಹಿತಿಯನ್ನೆಲ್ಲ ಸಂಗ್ರಹಿಸಿಡುವ ವ್ಯವಸ್ಥೆಯೇ 'ಡೇಟಾ ವೇರ್‌ಹೌಸ್', ಸರಳವಾಗಿ ಹೇಳಬೇಕಾದರೆ ಮಾಹಿತಿಯ ಗೋದಾಮು! ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಚಾರಿತ್ರಿಕ ಮಾಹಿತಿಯನ್ನು ಸಂಗ್ರಹಿಸಿಡುವ ಈ ವ್ಯವಸ್ಥೆಯಲ್ಲಿ ಸಂಗ್ರಹವಾಗುವ ಮಾಹಿತಿ ಇನ್ನೆಂದೂ ಬದಲಾಗುವುದಿಲ್ಲ, ಅಳಿಸಿಹೋಗುವುದೂ ಇಲ್ಲ. ಸಮಯ ಸರಿದಂತೆ ಸಂಗ್ರಹವಾಗುವ ಮಾಹಿತಿಯ ಪ್ರಮಾಣ ಮಾತ್ರ ಹೆಚ್ಚುತ್ತಲೇ ಹೋಗುತ್ತದೆ.

ಹೀಗೆ ಮಾಹಿತಿಯನ್ನು ಸಂಗ್ರಹಿಸುವುದು, ಸರಿಯಾಗಿ ಶೇಖರಿಸಿಡುವುದು ಹಾಗೂ ಬೇಕಾದಾಗ ಬೇಕಾದ ರೂಪದಲ್ಲಿ ಬಳಕೆದಾರರಿಗೆ ಒದಗಿಸುವುದು ಮಕ್ಕಳಾಟದ ವಿಷಯವೇನೂ ಅಲ್ಲ. ಸಂಸ್ಥೆಗಳು ಎಷ್ಟೋ ವಿಷಯಗಳ ಬಗ್ಗೆ ಕೈಗೊಳ್ಳುವ ನಿರ್ಧಾರಗಳು ಈ ಮಾಹಿತಿಯನ್ನೇ ಆಧರಿಸಿರುವುದರಿಂದ ಬಹಳಷ್ಟು ಸಾರಿ ಅವುಗಳ ಭವಿಷ್ಯವೇ ಈ ಮಾಹಿತಿಯನ್ನು ಅವಲಂಬಿಸಿರುತ್ತದೆ.

ಇದು ಇಟಿಎಲ್
ಡೇಟಾ ವೇರ್‌ಹೌಸ್‌ನಲ್ಲಿ ಸಂಗ್ರಹಿಸಲು ವಿವಿಧ ಮೂಲಗಳಿಂದ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸುವ ಪ್ರಕ್ರಿಯೆಯೇ ಎಕ್ಸ್‌ಟ್ರಾಕ್ಷನ್. ಈ ಹಂತದಲ್ಲಿ ಬೇರೆಬೇರೆ ಮಾಹಿತಿ ಮೂಲಗಳಿಂದ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.

ಈ ಪ್ರಾಥಮಿಕ ಮಾಹಿತಿಯನ್ನು ಬೇಕಾದ ರೂಪಕ್ಕೆ ಬದಲಾಯಿಸುವುದಕ್ಕೆ ಟ್ರಾನ್ಸ್‌ಫಾರ್ಮೇಷನ್ ಎಂದು ಹೆಸರು. ಬೇರೆಬೇರೆ ಮೂಲಗಳಿಂದ ಬಂದಿರುವ ಮಾಹಿತಿಯನ್ನು ಈ ಹಂತದಲ್ಲಿ ಒಂದೇ ರೂಪಕ್ಕೆ ಬದಲಾಯಿಸಲಾಗುತ್ತದೆ.

ಅಂತಿಮವಾಗಿ ಈ ಮಾಹಿತಿಯನ್ನು ಡೇಟಾ ವೇರ್‌ಹೌಸಿನ ಒಳಕ್ಕೆ ಕೊಂಡೊಯ್ದು ಶೇಖರಿಸುವ ಪ್ರಕ್ರಿಯೆ ಲೋಡಿಂಗ್. ಹೀಗೆ ಡೇಟಾ ವೇರ್‌ಹೌಸ್ ಸೇರಿದ ಮಾಹಿತಿ ತಕ್ಷಣದಿಂದಲೇ ತನ್ನ ಬಳಕೆದಾರ ಉಪಯೋಗಕ್ಕೆ ಲಭ್ಯವಾಗುತ್ತದೆ.

ಬಿಸಿನೆಸ್ ಇಂಟಲಿಜೆನ್ಸ್
ಡೇಟಾ ವೇರ್‌ಹೌಸ್ ಸಿದ್ಧವಾದ ನಂತರ ಅದರಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು ಸರಿಯಾಗಿ ಬಳಸಲು ಅನುವುಮಾಡಿಕೊಡುವುದು ಮತ್ತೊಂದು ಮಹತ್ವದ ಭಾಗ. ಈ ಭಾಗಕ್ಕೆ ಬಿಸಿನೆಸ್ ಇಂಟಲಿಜೆನ್ಸ್ ಎಂಬ ಹೆಸರಿದೆ. ಇಲ್ಲಿ ಡೇಟಾ ವೇರ್‌ಹೌಸ್‌ನಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು ಬಳಸಿ ಬೇಕಾದ ರೂಪದ ವರದಿಗಳನ್ನು (ರಿಪೋರ್ಟ್) ತಯಾರಿಸಲಾಗುತ್ತದೆ.

ಮೇ ೩, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

1 ಕಾಮೆಂಟ್‌:

VK ಹೇಳಿದರು...

This information is useful and to the point. thanks

badge