ಗುರುವಾರ, ಏಪ್ರಿಲ್ 28, 2011

ಮಲಿನ ಗಾಳಿಯ ಮರುಚೇತನ ಸಾಧ್ಯ

ಕೊಳ್ಳೇಗಾಲ ಶರ್ಮ

ಬೆಂಗಳೂರಿನ ಉಸಿರುಗಟ್ಟಿಸುವ ಹೊಗೆಗಾಳಿಯಿಂದ ತಪ್ಪಿಸಿಕೊಂಡು ತುಸು ಆರಾಮ ಪಡೆಯಲು ಪ್ರತಿ ವಾರವೂ ವಾಹನದಲ್ಲಿ ಬೇರಾವುದೋ ಊರಿಗೆ ಓಟಕೀಳುವವರಲ್ಲಿ ನೀವೂ ಒಬ್ಬರಾಗಿದ್ದರೆ ಇದೋ ಇಲ್ಲೊಂದು ಸಮಾಧಾನಕರವಾದ ಸುದ್ದಿ. ನವದೆಹಲಿಯಲ್ಲಿ ಕೆಲವು ವರ್ಷಗಳ ಹಿಂದೆ ಅನುಷ್ಠಾನಕ್ಕೆ ಬಂದ ವಾಯುಮಾಲಿನ್ಯವನ್ನು ನಿಯಂತ್ರಿಸುವ ಕ್ರಮಗಳು ಮಲಿನವಾಗಿರುವ ಗಾಳಿಯ ದುಷ್ಪ್ರಭಾವವನ್ನು ಕಡಿಮೆ ಮಾಡುತ್ತವೆ ಎನ್ನುವ ಸುದ್ದಿಯನ್ನು ಅಟ್ಮಾಸ್ಫೆರಿಕ್ ಎನ್‌ವಿರಾನ್‌ಮೆಂಟ್ ಪತ್ರಿಕೆ ಪ್ರಕಟಿಸಿದೆ. ಅಮೆರಿಕೆಯ ಅಯೋವಾ ವಿಶ್ವವಿದ್ಯಾನಿಲಯದ ಭೂಗೋಳವಿಜ್ಞಾನಿ ಭಾರತ ಸಂಜಾತ ನರೇಶ್ ಕುಮಾರ್ ಬ್ರೌನ್ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರಜ್ಞ ಆಂಡ್ರ್ಯೂ ಫಾಸ್ಟರ್ ಜೊತೆಗೂಡಿ ಪ್ರಕಟಿಸಿರುವ ಒಂದು ವಿಶ್ಲೇಷಣಾ ಪ್ರಬಂಧವೊಂದು ಈ ತೀರ್ಮಾನಕ್ಕೆ ಬಂದಿದೆ.


ರಾಷ್ಟ್ರದ ರಾಜ್ಯಧಾನಿ ದೆಹಲಿ ಅತಿ ದಟ್ಟಣೆಯ ಜನಸಂಖ್ಯೆ ಇರುವ ಪಟ್ಟಣವಷ್ಟೆ ಅಲ್ಲ, ಅತ್ಯಂತ ಮಲಿನ ಗಾಳಿಯಿರುವ ವಿಶ್ವದ ನಗರಗಳಲ್ಲಿ ಒಂದು. ಇದಕ್ಕೆ ಆ ಪಟ್ಟಣದ ಜನಸಂಖ್ಯೆ, ವಾಹನಗಳ ಸಂಖ್ಯೆ ಹಾಗೂ ಅಲ್ಲಿರುವ ಕಾರ್ಖಾನೆಗಳ ಸಂಖ್ಯೆಯಲ್ಲಿ ಆಗಿರುವ ಹೆಚ್ಚಳ ಕಾರಣ. ದೇಶದ ಎಲ್ಲೆಡೆಯಿಂದಲೂ ಜನರನ್ನು ತನ್ನೆಡೆಗೆ ಸೆಳೆಯುವ ಈ ಮಾಯಾನಗರಿಯ ಜನಸಂಖ್ಯೆ ೧೯೯೧ ರಲ್ಲಿ ೯೪ ಲಕ್ಷವಿದ್ದದ್ದು ೨೦೦೧ರ ವೇಳೆಗೆ ೧.೪ ಕೋಟಿಯಷ್ಟು ಅಂದರೆ ಶೇಕಡ ೧೫೦ರಷ್ಟು ಹೆಚ್ಚಿತ್ತು. ಇತ್ತೀಚಿನ ಸಂಖ್ಯೆಗಳ ಪ್ರಕಾರ iಜu ೧.೬೭ ಕೋಟಿಯನ್ನು ಮುಟ್ಟಿದೆ. ಜನಸಂಖ್ಯೆಯ ಹೆಚ್ಚಳದ ಗತಿಯನ್ನು ಮೀರಿಸುವ ವೇಗದಲ್ಲಿ ವಾಹನಗಳ ದಟ್ಟಣೆ ಬೆಳೆದಿದೆ. ೧೯೭೫ರಲ್ಲಿ ಕೇವಲ ಎರಡು ಲಕ್ಷದಷ್ಟು ಇದ್ದ ವಾಹನಗಳು ೨೦೦೨ನೇ ಇಸವಿಯಲ್ಲಿ ೪೨ ಲಕ್ಷದಷ್ಟು ಆಗಿದ್ದುವು. ಇದರ ಜೊತೆಗೇ ದೆಹಲಿಯ ಕೈಗಾರಿಕೆಗಳ ಸಂಖ್ಯೆಯೂ ಕೆಲವು ಸಾವಿರದಿಂದ ಮೂರ್‍ನಾಲ್ಕು ಲಕ್ಷದಷ್ಟಕ್ಕೆ ಹೆಚ್ಚಿದೆ. ಇವೆಲ್ಲದರ ಪರಿಣಾಮ ದೆಹಲಿಯ ಗಾಳಿ ಬೆಳಕೂ ನುಸುಳದಷ್ಟು ಗಾಢವಾದ ದೂಳು, ಹೊಗೆಯಿಂದ ಮಲಿನವಾಗಿದೆ. ಗಾಳಿಯಲ್ಲಿ ಉಸಿರಾಟಕ್ಕೆ ತೊಂದರೆಯನ್ನುಂಟು ಮಾಡುವ ವಿಷಕಾರಿ ಅನಿಲಗಳಾದ ನೈಟ್ರೊಜನ್ ಆಕ್ಸೈಡ್‌ಗಳು, ಗಂಧಕದ ಆಕ್ಸೈಡ್ ಹಾಗೂ ಕಾರ್ಬನ್ ಮಾನಾಕ್ಸೈಡ್ ಪ್ರಮಾಣ ವರ್ಷಂಪ್ರತಿ ಶೇಕಡ ೨೩ರ ಪ್ರಮಾಣದಲ್ಲಿ ಹೆಚ್ಚಿದೆ ಎನ್ನುತ್ತದೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಒಂದು ವರದಿ. ಈ ವಾಯುಮಾಲಿನ್ಯ ೨೦೦೧ನೇ ಇಸವಿಯಲ್ಲಿ ಗರಿಷ್ಟ ಮಟ್ಟ ಮುಟ್ಟಿ, ವಿಶ್ವದ ಅತಿ ಮಲಿನ ಗಾಳಿಯ ನಗರಗಳಲ್ಲಿ ಹತ್ತನೆಯದು ಎನ್ನುವ ಕುಖ್ಯಾತಿ ದೆಹಲಿಗೆ ದಕ್ಕಿತ್ತು.

ವಾಯುಮಾಲಿನ್ಯಕ್ಕೆ ಅತಿ ಪ್ರಮುಖವಾದ ಕಾರಣ ವಾಹನಗಳು ಹಾಗೂ ಕೈಗಾರಿಕೆಗಳು ಉಗುಳುವ ಹೊಗೆ. ದೆಹಲಿಯ ಗಾಳಿ ಮಲಿನವಾಗುವುದಕ್ಕೆ ಮುಕ್ಕಾಲು ಪಾಲು ಈ ಎರಡು ಅಂಶಗಳು ಕಾರಣ ಎನ್ನುತ್ತಾರೆ ನರೇಶ್ ಕುಮಾರ್. ಆದರೆ ಪರಿಸ್ಥಿತಿ ಈಗ ಸುಧಾರಿಸಿದೆ. ೧೯೯೭ರಿಂದ ೨೦೦೨ರ ಅವಧಿಯಲ್ಲಿ ದೆಹಲಿಯ ವಾಯುಮಾಲಿನ್ಯವನ್ನು ಹತ್ತಿಕ್ಕಲು ಅಲ್ಲಿನ ಸರಕಾರ ಕೈಗೊಂಡ ಹಲವು ಕ್ರಮಗಳಿಂದಾಗಿ ಈಗ ದೆಹಲಿಯ ಗಾಳಿಯಲ್ಲಿನ ಮಲಿನತೆಯ ಪ್ರಮಾಣ ಕುಗ್ಗಿದೆಯಂತೆ. ದೆಹಲಿಯ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್‌ವಿರಾನ್‌ಮೆಂಟ್ ಸಂಸ್ಥೆಯ ಸಂಸ್ಥಾಪಕರಾದ ದಿವಂಗತ ಅನಿಲ್ ಅಗರವಾಲ್‌ರವರು ತಮಗೆ ಉಂಟಾದ ಶ್ವಾಸಕೋಶದ ಕ್ಯಾನ್ಸರ್‌ಗೆ ದೆಹಲಿಯ ಮಲಿನ ಗಾಳಿಯೇ ಕಾರಣವೆಂದೂ, ಇದು ಸರಕಾರದ ನಿರ್ಲಕ್ಷ್ಯದಿಂದಾಗಿ ಆದ ಹಾನಿಯೆಂದೂ ಸುಪ್ರೀಂ ಕೋರ್ಟ್‌ನ ಮೊರೆ ಹೊಕ್ಕಿದ್ದರು. ಸುಪ್ರೀಂ ಕೋರ್ಟ್ ಈ ವ್ಯಾಜ್ಯವನ್ನು ಗಂಭೀರವಾಗಿ ಪರಿಗಣಿಸಿ ನಗರದ ಗಾಳಿಯ ಗುಣಮಟ್ಟವನ್ನು ಕಾಪಾಡುವಂತೆ ಸರ್ಕಾರಕ್ಕೆ ಆದೇಶ ನೀಡಿತ್ತು. ಹೀಗಾಗಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಯಿತು. ಈ ಕ್ರಮಗಳಲ್ಲಿ ವಿಷಕಾರಿ ಅನಿಲಗಳನ್ನು ಉಗುಳುವ ಪೆಟ್ರೋಲ್ ಹಾಗೂ ಡೀಸೆಲ್ ಬದಲಿಗೆ ಅನಿಲ ಇಂಧನವನ್ನು ವಾಹನಗಳಲ್ಲಿ ಬಳಸುವ ತೀರ್ಮಾನ, ಡೀಸೆಲ್ ಬಳಸುವ ಟ್ರಕ್ಕುಗಳು ನಗರದೊಳಗೆ ಪ್ರವೇಶಿಸದಂತೆ ನಿಷೇಧ ಹಾಗೂ ಜನವಸತಿಯ ಪ್ರದೇಶಗಳಿಗೆ ಸಮೀಪವಿರುವ ಕಾರ್ಖಾನೆಗಳ ಎತ್ತಂಗಡಿ ಪ್ರಮುಖ ಕ್ರಮಗಳಾಗಿದ್ದುವು. ಐದೇ ವರ್ಷಗಳಲ್ಲಿ ಎಲ್ಲ ಬಗೆಯ ವಿರೋಧಗಳನ್ನು ಲೆಕ್ಕಿಸದೆ ಈ ಕ್ರಮಗಳನ್ನು ಸರ್ಕಾರ ಕೈಗೊಂಡಿದ್ದು ಭಾರತದ ನಗರಾಡಳಿತದ ಇತಿಹಾಸದಲ್ಲಿ ಒಂದು ದಾಖಲೆ ಎನ್ನಿಸಿದೆ.

ಹೌದೇ? ಗಾಳಿಯ ಮಾಲಿನ್ಯ ಕಡಿಮೆಯಾಗಿದೆಯೇ? ಮಾಲಿನ್ಯ ಕಡಿಮೆಯಾಗಿದೆ ಎಂದ ಮೇಲೆ ಅದರಿಂದುಂಟಾಗುತ್ತಿದ್ದ ಅನಾರೋಗ್ಯದ ಪರಿಮಾಣವೂ ಕಡಿಮೆಯಾಗಿರಬೇಕಲ್ಲ? ಇದು ನಿಜವೇ? ಈ ಪ್ರಶ್ನೆಗಳನ್ನು ಉತ್ತರಿಸಲು ನರೇಶ್ ಕುಮಾರ್ ಮತ್ತು ಆಂಡ್ರ್ಯೂ ಫಾಸ್ಟರ್ ಪ್ರಯತ್ನಿಸಿದ್ದಾರೆ. ಮಾಲಿನ್ಯದಲ್ಲಾಗಿರುವ ಬದಲಾವಣೆಗಳನ್ನು ಗುರುತಿಸಲು ಇವರು ದೆಹಲಿಯ ೧೧೩ ಜಾಗೆಗಳಲ್ಲಿ ಸತತ ಆರು ವರ್ಷಗಳ ಕಾಲ ಜೂಲೈ-ಡಿಸೆಂಬರ್ ಅವಧಿಯಲ್ಲಿ ಗಾಳಿಯನ್ನು ವಿಶ್ಲೇಷಿಸಿದರು. ಗಾಳಿಯಲ್ಲಿದ್ದ ಅತಿ ಸಣ್ಣ ದೂಳು (ಒಂದರಿಂದ ಹತ್ತು ಮೈಕ್ರಾನ್‌ನಷ್ಟು ಸಣ್ಣ ಗಾತ್ರದ ದೂಳು - ಹತ್ತು ಮೈಕ್ರಾನ್‌ನ ನೂರು ಕಣಗಳನ್ನು ಒಂದು ಮಿಲಿಮೀಟರ್‌ನಲ್ಲಿ ಹುದುಗಿಸಬಹುದು), ಗಾಳಿಯ ಪಾರಕತೆ (ಬೆಳಕು ಕ್ರಮಿಸುವ ದೂರ) ಮುಂತಾದ ಗುಣಗಳನ್ನು ಅಳೆದರು. ಹತ್ತು ಮೈಕ್ರಾನ್ ದೂಳಿರುವ ಗಾಳಿಯ ಪ್ರಭಾವ ಶ್ವಾಸಕೋಶದ ತೊಂದರೆಗಳ ಮೇಲೆ ಹೆಚ್ಚು ಎಂದು ಈ ಹಿಂದಿನ ಹಲವು ಅಧ್ಯಯನಗಳು ತಿಳಿಸಿವೆ. ಅಲ್ಲದೆ ಈ ಗಾತ್ರದ ದೂಳು ಕೈಗಾರಿಕೆ ಹಾಗೂ ವಾಹನಗಳಿಂದ ಹೊರಸೂಸುವಂಥವು. ನಗರದ ಒಳಗೆ ಹಾಗೂ ಹೊರಗಿನ ಪ್ರದೇಶಗಳಲ್ಲಿಯೂ ಈ ಅಧ್ಯಯನ ಕೈಗೊಳ್ಳಲಾಯಿತು. ಫಲಿತಾಂಶ: ನಗರದೊಳಗಿನ ಗಾಳಿಯಲ್ಲಿನ ದೂಳಿನ ಪ್ರಮಾಣದಲ್ಲಿ ಏರಿಕೆ ಕುಗ್ಗಿದೆ. ಪ್ರಮಾಣ ಕುಗ್ಗಿದೆ ಅಂತಲ್ಲ. ಆದರೆ ಅದರ ಏರಿಕೆಯ ವೇಗ ಸಾಕಷ್ಟು ನಿಧಾನವಾಗಿದೆ. ಆದರೆ ನಗರದ ಹೊರಗಿನ ಪ್ರದೇಶಗಳಲ್ಲಿ ಇದು ಹೆಚ್ಚಾಗಿದೆ. ನರೇಶ್ ಕುಮಾರ್‌ರವರ ಪ್ರಕಾರ ಮಾಲಿನ್ಯವನ್ನುಂಟು ಮಾಡುವ ಡೀಸೆಲ್ ಟ್ರಕ್ಕುಗಳು ಹಾಗೂ ಪೆಟ್ರೋಲು ಬಳಸುವ ವಾಹನಗಳು ಈಗ ನಗರದ ಹೊರಗಡೆಯಷ್ಟೆ ಸಂಚರಿಸುತ್ತಿರುವುದರಿಂದ ನಗರದ ಹೊರ ಪ್ರದೇಶಗಳಲ್ಲಿ ಮಾಲಿನ್ಯ ಹೆಚ್ಚಾಗಿದೆಯಂತೆ.

ಇದು ಮಾಲಿನ್ಯದ ಪ್ರಮಾಣವಾಯ್ತು. ಇನ್ನು ಅದರ ಪರಿಣಾಮದ ಗತಿ? ಅದಕ್ಕಾಗಿ ಇವರು ನಗರದಲ್ಲಿ ತಾವು ವಿಶ್ಲೇಷಣೆಗೆ ಆಯ್ದಿದ್ದ ತಾಣಗಳ ಸಮೀಪದಲ್ಲಿ ವಾಸವಿದ್ದ ಜನರನ್ನು ಸಂಪರ್ಕಿಸಿ ಅವರ ಆರೋಗ್ಯದ ಗತಿ-ಸ್ಥಿತಿಗಳ ಬಗ್ಗೆ ಕೂಲಂಕಷವಾಗಿ ವಿಚಾರಿಸಿದ್ದಾರೆ. ಮುಖ್ಯವಾಗಿ ೧೯೯೭ರಿಂದ ೨೦೦೯ರವರೆಗಿನ ಅವರ ಆರೋಗ್ಯದ ಬಗ್ಗೆ, ಶ್ವಾಸಕೋಶದ ತೊಂದರೆಗಳ ಬಗ್ಗೆ ಮಾಹಿತಿ ಒಟ್ಟು ಮಾಡಿದ್ದಾರೆ. ಈ ಮಾಹಿತಿಯನ್ನು ಅತಿ ಮಾಲಿನ್ಯವಿರುವ ಸ್ಥಳದ ಬಳಿ ಇರುವವರು ಹಾಗೂ ಅದರಿಂದ ದೂರವಿರುವವರು ಎಂದು ವಿಂಗಡಿಸಿದ್ದಾರೆ. ಸಂಕೀರ್ಣ ಸೂತ್ರಗಳನ್ನು ಬಳಸಿ ವಿಶ್ಲೇಷಿಸಿದಾಗ ಈ ಮಾಹಿತಿ ಗುಟ್ಟು ಬಿಟ್ಟುಕೊಟ್ಟಿದೆ. ನಗರದಲ್ಲಿರುವ ಜನತೆಯಲ್ಲಿ ಮಾಲಿನ್ಯ ನಿಯಂತ್ರಣ ಕ್ರಮಗಳು ಅನುಷ್ಠಾನಕ್ಕೆ ಬಂದ ಅನಂತರ ಶ್ವಾಸಕೋಶದ ತೊಂದರೆಗಳು ತುಸು ಕಡಿಮೆಯಾಗಿವೆಯಂತೆ.

ಮಾಲಿನ್ಯ ನಿಯಂತ್ರಣ ಕ್ರಮಗಳು ಇಷ್ಟು ಶೀಘ್ರವಾಗಿ ಪರಿಣಾಮ ತೋರಿಸುವವೇ? ಗಾಳಿಯಲ್ಲಿ ಮಲಿನಕಗಳು ಉಳಿಯುವ ಕಾಲ ಸರಾಸರಿ ಏಳು ದಿನಗಳಷ್ಟೆ! ಅಷ್ಟರೊಳಗೆ ಇಂತಹ ಕ್ರಮಗಳ ಪರಿಣಾಮ ಗೋಚರಿಸಿಬಿಡುತ್ತದೆ. ಮಳೆ, ಗಾಳಿ ಇತ್ಯಾದಿಗಳ ಪರಿಣಾಮಗಳನ್ನು ಕೂಡಿಸಿಕೊಂಡರೂ ೪೫ ದಿನಗಳೊಳಗೆ ಪರಿಣಾಮ ಸ್ಪಷ್ಟ, ಎನ್ನುತ್ತಾರೆ ಕುಮಾರ್. ಇಂತಹ ಅಧ್ಯಯನಗಳು ಸರಳವೂ ಅಲ್ಲ, ಸುಲಭವೂ ಅಲ್ಲ. ಆಯಾ ಜಾಗೆಗಳಲ್ಲಿ ಆಗಾಗಲೇ ಗಾಳಿಯ ಗುಣವನ್ನು ಅಳೆಯುವ ಯಂತ್ರಗಳು ಬೇಕಾದುವು. ಆಯ್ದ ೧೧೩ ಜಾಗೆಗಳಲ್ಲಿ ಇವನ್ನಿಟ್ಟು ದೆಹಲಿಯ ಒಟ್ಟಾರೆ ಮಾಲಿನ್ಯದ ಚಹರೆಯನ್ನು ತಿಳಿದೆವು,. ಇದು ಸರಿಯೋ ತಪ್ಪೋ ಎನ್ನುವುದನ್ನು ಉಪಗ್ರಹದ ವೀಕ್ಷಣೆಯ ಮೂಲಕ ಖಚಿತಪಡಿಸಿಕೊಂಡೆವು ಎನ್ನುತ್ತಾರೆ ಕುಮಾರ್.

ಹಾಗಿದ್ದರೆ ನಮ್ಮ ಊರಿನ ಆಟೋ, ಟ್ಯಾಕ್ಸಿ, ಬಸ್‌ಗಳಿಗೆ ಹಸಿರು ಬಣ್ಣ ಹಚ್ಚಿಸಿ, ಸಿಎನ್‌ಜಿ ತುಂಬಿಸಿದರೆ ಬೆಂಗಳೂರಿನ ಗಾಳಿ ಹಿತವಾಗಬಹುದೇ? ತಾಳಿ. ಎರಡು ವರ್ಷಗಳ ಹಿಂದೆ ಚೀನಾದ ಬೈಜಿಂಗ್‌ನಲ್ಲಿ ಒಲಿಂಪಿಕ್‌ಗೆ ಮೊದಲು ಗಾಳಿಯನ್ನು ಸ್ವಚ್ಛಗೊಳಿಸುವ ಕಾರ್ಯ ನಡೆದಿತ್ತು. ಬೈಜಿಂಗ್‌ನಲ್ಲಿ ಒಲಿಂಪಿಕ್‌ನ ವೇಳೆ ಗಾಳಿ ಹಿತವಾಗಿತ್ತು ಎಂದು ವರದಿಯಾಗಿದೆ. ಆದರೆ ಒಲಿಂಪಿಕ್ ಮುಗಿದ ಮೇಲೆ ಅಲ್ಲಿನ ಗಾಳಿ ಸ್ವಸ್ಥಿತಿಗೆ ಮರಳಿದೆಯಂತೆ! ದೆಹಲಿಯ ಗಾಳಿಯ ಗುಣ ಸುಧಾರಿಸಿರಬಹುದು. ಆದರೆ ಕೈಗಾರಿಕೆಗಳು ವರ್ಗಾವಣೆಯಾಗಿದ್ದರಿಂದ ಹಾಗೂ ವಿಷಕಾರಿ ಅನಿಲಗಳನ್ನು ಉಗುಳುವ ವಾಹನಗಳು ಅಲ್ಲಿ ಹೆಚ್ಚಾದ್ದರಿಂದ ದೆಹಲಿಯ ಆಸುಪಾಸಿನ ಜಾಗೆಗಳ ಗಾಳಿ ಕೆಡುತ್ತಿದೆ. ನಾವೂ ವಾರದ ಕೊನೆಗೆ ಹೀಗೇ ಪ್ರವಾಸ ಹೋಗುತ್ತಿದ್ದರೆ ಹೊಸಗಾಳಿಯ ಬದಲಿಗೆ ಮಲಿನ ಗಾಳಿಯನ್ನೇ ಸೇವಿಸುತ್ತೇವೇನೋ! ಅದೇನೇ ಇರಲಿ. ನಗರದ ಗಾಳಿ ಉಸಿರಾಡಲು ಹಿತವಾಗುವುದಕ್ಕೆ, ಅನಾರೋಗ್ಯ ಉಂಟಾಗದಿರುವುದಕ್ಕೆ ನಾವು ಏನು ಮಾಡಬಹುದು? ವಾಯು ಮಾಲಿನ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕು. ಬಾಯಿಗೆ ಕರವಸ್ತ್ರ ಕಟ್ಟಿಕೊಳ್ಳುವುದು, ದಿನದಲ್ಲಿ ಕೆಲವಾರು ಗಂಟೆಗಳಾದರೂ ಕಿಟಕಿ, ಬಾಗಿಲುಗಳನ್ನು ಮುಚ್ಚಿಕೊಂಡಿರುವುದು ಈ ವಿಷಾನಿಲಗಳ ಸೇವನೆಯನ್ನು ಕಡಿಮೆ ಮಾಡಬಹುದು, ಎಂದು ಕುಮಾರ್ ಸಲಹೆ ನೀಡುತ್ತಾರೆ.

ಏಪ್ರಿಲ್ ೨೭, ೨೦೧೧ರ ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge