ಮಂಗಳವಾರ, ಏಪ್ರಿಲ್ 5, 2011

ಮತ್ತೆ ಸುದ್ದಿಮಾಡಿದ ಸ್ಪೇಸ್ ಟೂರಿಸಂ

ಟಿ ಜಿ ಶ್ರೀನಿಧಿ

ಮನುಕುಲದ ಇತಿಹಾಸದಲ್ಲಿ ಪ್ರತಿಯೊಂದು ಹೊಸ ಆವಿಷ್ಕಾರ ನಡೆದಾಗಲೂ ಅದಕ್ಕೆ ವ್ಯಾಪಕವಾದ ಪ್ರತಿರೋಧಗಳು ವ್ಯಕ್ತವಾಗುತ್ತಲೇ ಬಂದಿವೆ. ಬೆಂಕಿಯ ಬಳಕೆಯಿಂದ ಪ್ರಾರಂಭಿಸಿ ವಿದ್ಯುತ್ತಿನ ಬಳಕೆಯವರೆಗೆ, ಕಾರು-ಬಸ್ಸು-ರೈಲುಗಳಿಂದ ವಿಮಾನದವರೆಗೆ, ಅಲೆಗ್ಸಾಂಡರ್ ಗ್ರಹಾಂಬೆಲ್‌ನ ದೂರವಾಣಿಯಿಂದ ಹಿಡಿದು ಇತ್ತೀಚಿನ ಮೊಬೈಲ್ ದೂರವಾಣಿಗಳವರೆಗೆ ಎಲ್ಲ ಹೊಸ ಉಪಕರಣ-ಸಲಕರಣೆಗಳೂ ಜನಪ್ರಿಯವಾಗುವ ಮುನ್ನ ಸಾಕಷ್ಟು ಉಪೇಕ್ಷೆ-ತಾತ್ಸಾರಕ್ಕೆ ತುತ್ತಾಗಿವೆ.


ಈಚಿನ ವರ್ಷಗಳಲ್ಲಿ ಇಂತಹುದೇ ಪ್ರತಿಕ್ರಿಯೆ ಪಡೆದುಕೊಂಡಿರುವುದು ಬಾಹ್ಯಾಕಾಶ ಪ್ರವಾಸೋದ್ಯಮದ ಕಲ್ಪನೆ.


ಕಳೆದೊಂದು ದಶಕದಲ್ಲಿ ಈ ಕ್ಷೇತ್ರ ಕೊಂಚ ಅತಿ ಎನಿಸುವಷ್ಟೇ ಸುದ್ದಿಮಾಡಿದೆ. ಸುದ್ದಿಸಂಸ್ಥೆಯ ಪ್ರತಿನಿಧಿಯೊಬ್ಬರನ್ನು ಇತ್ತೀಚೆಗಷ್ಟೆ ತನ್ನ ಸಂಶೋಧನಾಲಯದೊಳಕ್ಕೆ ಬರಮಾಡಿಕೊಂಡ ವರ್ಜಿನ್ ಗೆಲಾಕ್ಟಿಕ್ ಸಂಸ್ಥೆ ಬಾಹ್ಯಾಕಾಶ ಪ್ರವಾಸೋದ್ಯಮದ ಭವಿಷ್ಯ ಕುರಿತು ಇನ್ನಷ್ಟು ಕನಸುಗಳಿಗೆ ರೆಕ್ಕೆಕಟ್ಟಿದೆ.

ಹಾಗೆ ನೋಡಿದರೆ ಬಾಹ್ಯಾಕಾಶ ಪ್ರವಾಸೋದ್ಯಮದ ಕಲ್ಪನೆ ಮೊದಲಿಗೆ ಜನ್ಮತಳೆದದ್ದು ರಷ್ಯಾದ ಬಾಹ್ಯಾಕಾಶ ಸಂಸ್ಥೆಯ ಅಂಗಳದಲ್ಲಿ. ಬಾಹ್ಯಾಕಾಶ ಪ್ರವಾಸ ಕೇವಲ ವಿಜ್ಞಾನಿಗಳಿಗೆ ಮಾತ್ರವೇ ಸೀಮಿತವಾಗದೆ ಎಲ್ಲರಿಗೂ ಲಭಿಸುವಂತಾಗಬೇಕು ಎಂಬುದು ಈ ಕಲ್ಪನೆಯ ಮೂಲ ಉದ್ದೇಶವಾಗಿತ್ತು.

ಈ ಕಲ್ಪನೆ ಮೊದಲ ಬಾರಿಗೆ ಕಾರ್ಯರೂಪಕ್ಕೆ ಇಳಿದದ್ದು ೨೦೦೧ರಲ್ಲಿ. ಆ ವರ್ಷ ರಷ್ಯಾದ ಸೂಯೆಜ್ ರಾಕೆಟ್‌ನ ಯಾತ್ರಿಯಾಗಿ ಅಂತರಿಕ್ಷಕ್ಕೆ ಹೋಗಿಬಂದ ಅಮೆರಿಕಾದ ಡೆನಿಸ್ ಟಿಟೋ ವಿಶ್ವದ ಪ್ರಪ್ರಥಮ ಅಂತರಿಕ್ಷ ಪ್ರವಾಸಿಗ ಎಂಬ ಹಣೆಪಟ್ಟಿಗೆ ಭಾಜನರಾಗಿ ಭಾರೀ ಸುದ್ದಿಮಾಡಿದ್ದರು. ಆನಂತರ ೨೦೦೨ರಲ್ಲಿ ದಕ್ಷಿಣ ಆಫ್ರಿಕಾದ ಮಾರ್ಕ್ ಷಟಲ್‌ವರ್ಥ್ ಕೂಡ ಅಂತರಿಕ್ಷಕ್ಕೆ ಪ್ರಯಾಣ ಕೈಗೊಂಡಿದ್ದರು. ಇವರುಗಳು ಈ ಪ್ರಯಾಣಕ್ಕಾಗಿ ತೆತ್ತ ಹಣ ನಮ್ಮ ಲೆಕ್ಕದಲ್ಲಿ ಹೆಚ್ಚೂಕಡಿಮೆ ನೂರು ಕೋಟಿ ರೂಪಾಯಿಗಳಷ್ಟು!

ರಷ್ಯಾದ ಬಾಹ್ಯಾಕಾಶ ಸಂಸ್ಥೆಯ ಕಲ್ಪನೆಯಲ್ಲಿ ಜನ್ಮತಳೆದ ಅಂತರಿಕ್ಷ ಪ್ರವಾಸೋದ್ಯಮ ಬಹು ಲಾಭದಾಯಕವಾಗಬಲ್ಲ ವ್ಯವಹಾರ ಎಂದು ಗೋಚರವಾಗುತ್ತಿದ್ದಂತೆಯೇ ಅನೇಕ ಖಾಸಗೀ ಸಂಸ್ಥೆಗಳು ಇದರಲ್ಲಿ ಆಸಕ್ತಿ ತೋರಿಸಲಾರಂಭಿಸಿದವು. ಇಂತಹ ಪ್ರಯತ್ನಗಳನ್ನು ಉತ್ತೇಜಿಸುವ ಸಲುವಾಗಿ ಎರಡು ವಾರಗಳ ಅವಧಿಯಲ್ಲಿ ಎರಡು ಸಾರಿ ಪ್ರಯಾಣಿಕರನ್ನು ಅಂತರಿಕ್ಷಕ್ಕೆ ಕರೆದೊಯ್ದು ಕ್ಷೇಮವಾಗಿ ಹಿಂದಕ್ಕೆ ಕರೆತರುವ ಮೊದಲ ಖಾಸಗೀ ಸಂಸ್ಥೆಗೆ ಒಂದು ಕೋಟಿ ಅಮೆರಿಕನ್ ಡಾಲರು(ಸುಮಾರು ಐವತ್ತು ಕೋಟಿ ರೂಪಾಯಿ)ಗಳ ಮೊತ್ತದ 'ಅನ್ಸಾರಿ ಎಕ್ಸ್-ಪ್ರೈಜ್' ಎಂಬ ಬಹುಮಾನವನ್ನೂ ಘೋಷಿಸಲಾಯಿತು.

೨೦೦೪ರ ಜೂನ್‌ನಲ್ಲಿ ಪ್ರಥಮಬಾರಿಗೆ ಪರೀಕ್ಷಿಸಲ್ಪಟ್ಟ 'ಸ್ಪೇಸ್ ಶಿಪ್ ಒನ್' ಎಂಬ ಅಂತರಿಕ್ಷವಾಹನ ಅದೇ ಅಕ್ಟೋಬರ್‌ನಲ್ಲಿ ಈ ಬಹುಮಾನ ಗಳಿಸುವ ಮೂಲಕ ಇತಿಹಾಸ ಸೃಷ್ಟಿಸಿತು.

ಅಮೆರಿಕಾದ ಸ್ಕೇಲ್ಡ್ ಕಾಂಪೋಸಿಟ್ಸ್ ಎಂಬ ಸಂಸ್ಥೆಯ ಈ ಸಾಧನೆಯಿಂದ ಪ್ರೇರಣೆ ಪಡೆದ ಇನ್ನೂ ಅನೇಕ ಖಾಸಗೀ ಸಂಸ್ಥೆಗಳು ಇಂತಹುದೇ ಪ್ರಯತ್ನಗಳನ್ನು ಕೈಗೊಂಡಿವೆ. ಇಷ್ಟೇ ಅಲ್ಲ, ಸ್ಪೇಸ್ ಶಿಪ್ ಒನ್‌ನ ಈ ಯಶಸ್ಸು ವಾಣಿಜ್ಯೋದ್ಯಮಿಗಳಲ್ಲೂ ಸಾಕಷ್ಟು ಕುತೂಹಲ ಮೂಡಿಸಿದೆ.

ಕೋಟ್ಯಾಧಿಪತಿ ಉದ್ಯಮಿ ರಿಚರ್ಡ್ ಬ್ರಾನ್ಸನ್‌ನ ವರ್ಜಿನ್ ಅಟ್ಲಾಂಟಿಕ್ ಏರ್‌ಲೈನ್ಸ್ ನಿಗದಿತವಾಗಿ ಅಂತರಿಕ್ಷಕ್ಕೆ ಪ್ರವಾಸಗಳನ್ನು ನಡೆಸುವ ಯೋಜನೆಯನ್ನೂ ಪ್ರಕಟಿಸಿಬಿಟ್ಟಿದೆ. ಈ ಉದ್ದೇಶಕ್ಕಾಗಿ 'ವರ್ಜಿನ್ ಗೆಲಾಕ್ಟಿಕ್' ಎಂಬ ಸಂಸ್ಥೆಯ ಸ್ಥಾಪನೆಯೂ ಆಗಿದೆ. ಅಮೆರಿಕಾದ ಮೊಜಾವೆ ಮರುಭೂಮಿಯಲ್ಲಿರುವ ವರ್ಜಿನ್ ಗೆಲಾಕ್ಟಿಕ್‌ನ ಕೇಂದ್ರಸ್ಥಾನದಲ್ಲಿ ಇಂತಹ ಪ್ರವಾಸಗಳಿಗೆ ಬೇಕಾದ ಅಂತರಿಕ್ಷವಾಹನಗಳ ನಿರ್ಮಾಣ ಭರದಿಂದ ಸಾಗಿದೆ.

ತಲಾ ಆರು ಆಸನಗಳನ್ನು, ಹಾಗೂ ಇಬ್ಬರು ಚಾಲಕರನ್ನು ಹೊಂದಲಿರುವ ಈ ಅಂತರಿಕ್ಷವಾಹನಗಳಲ್ಲಿ ನಿಯಮಿತವಾಗಿ ಯಾತ್ರಿಗಳನ್ನು ಅಂತರಿಕ್ಷಕ್ಕೆ ಕರೆದೊಯ್ಯುವ ಉದ್ದೇಶ ಈ ಸಂಸ್ಥೆಯದು. ಹೆಚ್ಚೂಕಡಿಮೆ ಎರಡು ಗಂಟೆ ಅವಧಿಯ ಈ ಅಂತರಿಕ್ಷಯಾನದಲ್ಲಿ ಯಾತ್ರಿಗಳು ನಾಲ್ಕೈದು ನಿಮಿಷಗಳ ಕಾಲ ಭಾರರಹಿತ ಸ್ಥಿತಿಯನ್ನು ಅನುಭವಿಸಲಿದ್ದಾರೆ. ಅಲ್ಲದೆ ಬಾಹ್ಯಾಕಾಶದಿಂದ ಭೂಮಿಯ ರಮಣೀಯ ನೋಟವನ್ನು ಕಾಣುವ ಅವಕಾಶ ಕೂಡ ಅವರಿಗೆ ದೊರಕಲಿದೆ.

ಈ ಯಾನದ ಪ್ರತಿಯೊಂದು ಟಿಕೇಟಿಗೂ ಹೆಚ್ಚೂಕಡಿಮೆ ಒಂದು ಕೋಟಿ ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ. ಈ ಭಾರೀ ಮೊತ್ತವನ್ನು ಪಾವತಿಸುವುದು ಜನಸಾಮಾನ್ಯರಿಗೆ ಅಸಾಧ್ಯವೇ ಆದರೂ ಕೇವಲ ನಾಲ್ಕೈದು ವರ್ಷಗಳ ಅವಧಿಯಲ್ಲಿ ಈ ಮೊತ್ತ ನೂರು ಕೋಟಿ ರೂಪಾಯಿಗಳಿಂದ ಒಂದು ಕೋಟಿಯ ಆಸುಪಾಸಿಗೆ ಬಂದು ತಲುಪಿರುವುದನ್ನು ಗಣನೀಯ ಸಾಧನೆ ಎಂದೇ ಪರಿಗಣಿಸಬೇಕಾಗುತ್ತದೆ. ಅಷ್ಟೇ ಅಲ್ಲ, ನಾಲ್ಕುನೂರಕ್ಕೂ ಹೆಚ್ಚು ಜನ ಈಗಾಗಲೇ ಈ ಯಾನಗಳಿಗಾಗಿ ನೋಂದಾಯಿಸಿಕೊಂಡುಬಿಟ್ಟಿದ್ದಾರೆ!

ವರ್ಜಿನ್ ಗೆಲಾಕ್ಟಿಕ್ ಒಂದೇ ಅಲ್ಲದೆ ಇನ್‌ಬ್ಲೂನ್, ಬ್ಲೂ ಆರಿಜಿನ್, ಬಿಗೆಲೋ ಮುಂತಾದ ಹಲವಾರು ಸಂಸ್ಥೆಗಳೂ ಈ ನಿಟ್ಟಿನಲ್ಲಿ ತಮ್ಮ ಪ್ರಯೋಗಗಳನ್ನು ಮುಂದುವರೆಸಿವೆ. ಜಗತ್ತಿನ ಅತಿದೊಡ್ಡ ವಿಮಾನಯಾನ ಸಂಸ್ಥೆಗಳಲ್ಲೊಂದಾದ ಕೆಎಲ್‌ಎಂ ಕೂಡ ಬಾಹ್ಯಾಕಾಶ ಪ್ರವಾಸೋದ್ಯಮದತ್ತ ತನ್ನ ಆಸಕ್ತಿ ತೋರಿಸಿದೆ.

ಒಂದು ದಶಕಕ್ಕೂ ಕಡಿಮೆ ಅವಧಿಯಲ್ಲಿ ಅಂತರಿಕ್ಷ ಪ್ರವಾಸದ 'ಟಿಕೇಟಿನ ಬೆಲೆ' ನೂರು ಪಟ್ಟು ಇಳಿಕೆ ಕಂಡಿರುವುದು ಈ ಉದ್ಯಮದ ಭವಿಷ್ಯದ ಬಗೆಗೆ ಹೊಸ ಆಸೆಗಳನ್ನು ಮೂಡಿಸಿದೆ; ಜನಸಾಮಾನ್ಯರೂ ಅಂತರಿಕ್ಷಕ್ಕೆ ತೆರಳುವುದು ಇಷ್ಟರಲ್ಲೇ ಸಾಧ್ಯವಾಗಬಹುದು ಎಂಬ ಭರವಸೆಯನ್ನೂ ಹುಟ್ಟುಹಾಕಿದೆ.

ಕಾಮೆಂಟ್‌ಗಳಿಲ್ಲ:

badge