ಮಂಗಳವಾರ, ಏಪ್ರಿಲ್ 12, 2011

ಸುರಕ್ಷಿತ ಜಾಲತಾಣಗಳ ಸುತ್ತ

ಟಿ ಜಿ ಶ್ರೀನಿಧಿ

ಆನ್‌ಲೈನ್ ಬ್ಯಾಂಕಿಂಗ್ - ವಿಶ್ವವ್ಯಾಪಿ ಜಾಲದ ಅತ್ಯಂತ ಜನಪ್ರಿಯ ಉಪಯೋಗಗಳಲ್ಲೊಂದು. ಪಕ್ಕದ ಬೀದಿಯ ಬ್ಯಾಂಕಿಗೆ ಹೋಗಿ ಮಾಡಬಹುದಾದ ಬಹುತೇಕ ಕೆಲಸಗಳನ್ನೆಲ್ಲ ನಮ್ಮ ಗಣಕದ ಮುಂದೆಯೇ ಕುಳಿತು ಮಾಡುವ ಸೌಲಭ್ಯವನ್ನು ಈ ವ್ಯವಸ್ಥೆ ನಮಗೆ ಒದಗಿಸಿಕೊಟ್ಟಿದೆ.

ನೀವು ಆನ್‌ಲೈನ್ ಬ್ಯಾಂಕಿಂಗ್ ವ್ಯವಸ್ಥೆ ಬಳಸಿದ್ದರೆ ಅಂತಹ ಸೇವೆ ಒದಗಿಸುವ ತಾಣ ಇತರ ಸಾಮಾನ್ಯ ತಾಣಗಳಿಗಿಂತ ಕೊಂಚ ಬೇರೆ ರೀತಿ ಇರುವುದನ್ನು ನೋಡಿರಬಹುದು - ಅವುಗಳ ವಿಳಾಸ ಇತರ ತಾಣಗಳಂತೆ 'http://' ಎಂದು ಪ್ರಾರಂಭವಾಗುವ ಬದಲು 'https://' ಎಂದು ಪ್ರಾರಂಭವಾಗಿರುತ್ತದೆ; ಜೊತೆಗೆ ನೀವು ಆ ತಾಣ ತೆರೆದಾಗ ಪರದೆಯ ಮೇಲೆ ಪುಟ್ಟದೊಂದು ಬೀಗದ ಚಿತ್ರವೂ ಕಾಣಿಸಿಕೊಂಡಿರುತ್ತದೆ.

ನೀವು ತೆರೆದಿರುವ ತಾಣ ನಿಮ್ಮ ವಹಿವಾಟು ನಡೆಸಲು ಸಾಕಷ್ಟು ಸುರಕ್ಷಿತವಾಗಿದೆ ಎಂದು ತಿಳಿಸುವ ಅಂಶಗಳು ಇವು.
ನೀವು ತೆರೆದಿರುವ ತಾಣದ ವಿವರಗಳನ್ನು ಪರಿಶೀಲಿಸಿ ಈ ಅಂಶಗಳ ಮೂಲಕ ಅದರ ವಿಶ್ವಾಸಾರ್ಹತೆಯನ್ನು ನಿಮಗೆ ತಿಳಿಸುವುದು ಎಸ್‌ಎಸ್‌ಎಲ್‌ನ ಕೆಲಸ.

ಸೆಕ್ಯೂರ್ ಸಾಕೆಟ್ಸ್ ಲೇಯರ್
ಎಸ್‌ಎಸ್‌ಎಲ್ ಎನ್ನುವುದು ಸೆಕ್ಯೂರ್ ಸಾಕೆಟ್ಸ್ ಲೇಯರ್ ಎಂಬ ಹೆಸರಿನ ಹ್ರಸ್ವರೂಪ. ಟ್ರಾನ್ಸ್‌ಪೋರ್ಟ್ ಲೇಯರ್ ಸೆಕ್ಯೂರಿಟಿ ಅಥವಾ ಟಿಎಲ್‌ಎಸ್‌ನ ಜೊತೆಗೂಡಿ ಈ ವ್ಯವಸ್ಥೆ ಬಳಕೆದಾರ ಹಾಗೂ ಜಾಲತಾಣದ ನಡುವಿನ ಮಾಹಿತಿ ಸಂವಹನವನ್ನು ಸುರಕ್ಷಿತಗೊಳಿಸುತ್ತದೆ. ಇದರಿಂದಾಗಿ ಜಾಲತಾಣದಲ್ಲಿ ನೀವು ದಾಖಲಿಸುವ ಪಾಸ್‌ವರ್ಡ್‌(ಗುಪ್ತಪದ)ನಂತಹ ಖಾಸಗಿ ಮಾಹಿತಿ ಅಂತರಜಾಲದ ಮೂಲಕ ಸಾಗುವಾಗ ಬೇರೆ ಯಾರೂ ಅದನ್ನು ಕದಿಯುವುದು ಸಾಧ್ಯವಿಲ್ಲದಂತಾಗುತ್ತದೆ.

ಅಂತರಜಾಲದ ಮೂಲಕ ಬ್ಯಾಂಕ್ ವ್ಯವಹಾರ, ಇ-ವ್ಯಾಪಾರ ಮುಂತಾದ ಹಣಕಾಸಿಗೆ ಸಂಬಂಧಪಟ್ಟ ಕೆಲಸಗಳನ್ನು ಮಾಡುವಾಗ ಸಂಬಂಧಪಟ್ಟ ಜಾಲತಾಣಗಳು ಉನ್ನತಮಟ್ಟದ ಸುರಕ್ಷತಾ ವ್ಯವಸ್ಥೆ ಹೊಂದಿರಬೇಕಾದದ್ದು ಅನಿವಾರ್ಯ. ಇಮೇಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಮಾಣದ ಖಾಸಗಿ ಮಾಹಿತಿ ವಿನಿಮಯವಾಗುವುದರಿಂದ ಕೆಲ ಬಾರಿ ಆ ತಾಣಗಳಿಗೂ ಸಾಕಷ್ಟು ಸುರಕ್ಷತೆ ಬೇಕಾಗುತ್ತದೆ.

ಹೀಗಾಗಿಯೇ ಇಂತಹ ಸೇವೆ ಒದಗಿಸುವ ಅನೇಕ ತಾಣಗಳು 'ಸೆಕ್ಯೂರ್ಡ್ ಸೈಟ್' ಅಥವಾ 'ಸುರಕ್ಷಿತ ತಾಣ'ಗಳಾಗಿರುತ್ತವೆ. ಇಂತಹ ತಾಣಗಳ ವಿಳಾಸದ ಮೊದಲ ಭಾಗದಲ್ಲಿರುವ 'https://'ನಲ್ಲಿ s ಎಂದರೆ ಸೆಕ್ಯೂರ್ ಎಂದೇ ಅರ್ಥ.

ಡಿಜಿಟಲ್ ಪ್ರಮಾಣಪತ್ರ
ಸುರಕ್ಷಿತ ತಾಣಗಳೊಡನೆ ವ್ಯವಹರಿಸುವಾಗ ನಿಮ್ಮ ಬ್ರೌಸರ್ ತಂತ್ರಾಂಶ ಅದರ ವಿಶ್ವಾಸಾರ್ಹತೆಯನ್ನು ಪತ್ತೆಮಾಡಲು 'ಡಿಜಿಟಲ್ ಪ್ರಮಾಣಪತ್ರ'ಗಳನ್ನು ಬಳಸುತ್ತದೆ. ಪ್ರಮಾಣೀಕರಣ ಸಂಸ್ಥೆಗಳು ನೀಡುವ ಈ ಪುಟ್ಟ ಕಡತ ಯಾವುದೇ ತಾಣದ ಕುರಿತ ವಿವರಗಳನ್ನು ಒಳಗೊಂಡಿರುತ್ತದೆ.

ನೀವು ಭೇಟಿಮಾಡಿದ ತಾಣದ ಡಿಜಿಟಲ್ ಪ್ರಮಾಣಪತ್ರದಲ್ಲಿರುವ ವಿವರಗಳನ್ನು ಪಡೆದುಕೊಳ್ಳುವ ನಿಮ್ಮ ಬ್ರೌಸರ್ ತಂತ್ರಾಂಶ ಪ್ರಮಾಣೀಕರಣ ಸಂಸ್ಥೆಯ ತಾಣದಲ್ಲಿರುವ ವಿವರಗಳ ಜೊತೆಗೆ ಅವನ್ನು ಹೋಲಿಸಿನೋಡುತ್ತದೆ. ಅವೆರಡೂ ಒಂದೇ ಆಗಿದ್ದರೆ ನೀವು ಭೇಟಿನೀಡಲು ಹೊರಟಿರುವ ತಾಣ ನಿಜಕ್ಕೂ ಸುರಕ್ಷಿತವಾದದ್ದು ಎನ್ನುವುದು ಖಚಿತವಾಗುತ್ತದೆ.

ಇಂತಹ ತಾಣಗಳಲ್ಲಿ ನೀವು ನಿಮ್ಮ ಗುಪ್ತಪದವನ್ನೋ, ಬ್ಯಾಂಕ್ ಖಾತೆ ಅಥವಾ ಕ್ರೆಡಿಟ್ ಕಾರ್ಡ್ ವಿವರಗಳನ್ನೋ ದಾಖಲಿಸಿದರೆ ಅದು ತಲುಪಬೇಕಾದವರಿಗೆ ತಲುಪುವ ತನಕ ಸುರಕ್ಷಿತವಾಗಿರಲು ಎಸ್‌ಎಸ್‌ಎಲ್ ವ್ಯವಸ್ಥೆ ಸಹಾಯಮಾಡುತ್ತದೆ. ನೀವು ದಾಖಲಿಸಿರುವ ಆನ್‌ಲೈನ್ ಬ್ಯಾಂಕಿಂಗ್ ಗುಪ್ತಪದ ನಿಮ್ಮ ಬ್ಯಾಂಕಿಗೆ ಮಾತ್ರ ತಿಳಿಯಬೇಕು ಎನ್ನುವುದು ಇದರ ಉದ್ದೇಶ.

ಎಷ್ಟು ಸುರಕ್ಷಿತ?
ಅಂತರಜಾಲ ಜಗತ್ತಿನಲ್ಲಿ ಸರ್ವಾಂತರ್ಯಾಮಿಯಾಗಿರುವ ಈ ವ್ಯವಸ್ಥೆ ಸಂಪೂರ್ಣವಾಗಿ ಸುರಕ್ಷಿತವೇನಲ್ಲ ಎನ್ನುವ ಅಭಿಪ್ರಾಯ ಕೂಡ ಇದೆ. ಕಳೆದ ತಿಂಗಳಷ್ಟೆ ನಡೆದಿರುವ ವೆಬ್ ದಾಳಿಯೊಂದರಲ್ಲಿ ಈ ವ್ಯವಸ್ಥೆಯ ನ್ಯೂನತೆಗಳು ಬಹಿರಂಗವಾಗಿರುವುದು ಈ ಅಭಿಪ್ರಾಯಕ್ಕೆ ಮತ್ತಷ್ಟು ಪುಷ್ಟಿನೀಡಿದೆ. ಬಳಕೆದಾರರು ಹಾಗೂ ಅವರು ಭೇಟಿನೀಡಿದ ತಾಣದ ನಡುವಿನ ಸುರಕ್ಷಿತ ಮಾಹಿತಿ ಸಂವಹನವನ್ನು ಭೇದಿಸಿದ ದುಷ್ಕರ್ಮಿಗಳು ಆ ಸಂದರ್ಭದಲ್ಲಿ ರಹಸ್ಯ ಮಾಹಿತಿಯನ್ನು ಕದಿಯುವುದರಲ್ಲಿ ಯಶಸ್ವಿಯಾಗಿದ್ದರು.

ಈ ಆಘಾತದಿಂದ ಎಚ್ಚೆತ್ತುಕೊಂಡಿರುವ ಗಣಕ ತಜ್ಞರು ಎಸ್‌ಎಸ್‌ಎಲ್ ವ್ಯವಸ್ಥೆಯನ್ನು ಸುಧಾರಿಸುವ ಸುಧಾರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಅವರಿಗೆ ಆದಷ್ಟು ಬೇಗ ಯಶಸ್ಸು ಸಿಗಲಿ ಎಂದು ವಿಶ್ವದೆಲ್ಲೆಡೆಯ ಅಂತರಜಾಲ ಬಳಕೆದಾರರು ಹಾರೈಸುತ್ತಿದ್ದಾರೆ.

'S ಫಾರ್ ಸೆಕ್ಯೂರ್' ಎಂಬ ಶೀರ್ಷಿಕೆಯೊಡನೆ ೧೨ ಏಪ್ರಿಲ್ ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ; 'ವಿಜ್ಞಾಪನೆ' ಅಂಕಣದ ೨೫ನೆಯ ಕಂತು

1 ಕಾಮೆಂಟ್‌:

Padyana Ramachandra ಹೇಳಿದರು...

ಸುರಕ್ಷಿತ ಜಾಲತಾಣದ ಮಾಹಿತಿಯನ್ನು ಜನತೆಯ ಮುಂದಿಟ್ಟ ಶ್ರೀಯುತ ಟಿ. ಜಿ. ಶ್ರೀನಿಧಿಯವರಿಗೆ ವಂದನೆಗಳು.

-ಪ.ರಾಮಚಂದ್ರ
ರಾಸ್ ಲಫ್ಫಾನ್, ಕತಾರ್.

badge