ಕೊಳ್ಳೇಗಾಲ ಶರ್ಮ
ಏನು ಮಾರಾಯರೇ! ನಿಮ್ಮ ಹೆಸರು ಓದಿ ನೀವೆಲ್ಲೋ ಬಹಳ ವಯಸ್ಸಾದವರಿರಬೇಕು ಅಂದುಕೊಂಡಿದ್ದೆ. ಈಗ ನಮ್ಮ ಜೊತೆಯಿಲ್ಲದ ಹಿರಿಯ ಸಂಪಾದಕ ಸಂತೋಷ ಕುಮಾರ್ ಗುಲ್ವಾಡಿ ಇಪ್ಪತ್ತೈದು ವರ್ಷಗಳ ಹಿಂದೆ ಮೊತ್ತ ಮೊದಲು ಭೇಟಿಯಾದಾಗ ನನ್ನನ್ನು ಕುರಿತು ಹೇಳಿದ ಮಾತು ಇದು. ಲೇಖನವನ್ನು ಓದಿಯೇ ಲೇಖಕರ ಸ್ವರೂಪವನ್ನು ಊಹಿಸಿಕೊಳ್ಳುತ್ತಿದ್ದ ಕಾಲ ಅದು. ಗುಲ್ವಾಡಿಯವರಾದರೂ ಕೇವಲ ವಯಸ್ಸು ಹೆಚ್ಚಿಸಿದ್ದರು. ನನಗೆ ಪರಿಚಿತರಾದ ಪ್ರಖ್ಯಾತ ಹಾಸ್ಯ ಸಾಹಿತಿಗಳೊಬ್ಬರಿದ್ದಾರೆ. ಮುಖತಃ ಭೇಟಿ ಮಾಡಿದಾಗ ಅವರ ಮುಖದ ಮೇಲೆ ಮುಗುಳ್ನಗುವೂ ಕಾಣಿಸಲಿಕ್ಕಿಲ್ಲ. ಆದರೆ ಬಾಯಿ ಬಿಟ್ಟರೋ, ನೀವು ನಗುತ್ತಲೇ ಇರುತ್ತೀರಿ. ಅಷ್ಟು ಹಾಸ್ಯ! ಹೀಗಾಗಿ ಬರೆಹಕ್ಕೂ, ಲೇಖಕರ ಸ್ವರೂಪಕ್ಕೂ ಏನಕೇನ ಸಂಬಂಧವಿರಲಿಕ್ಕಿಲ್ಲ.
ಆದರೂ ಬರೆಹದ ಸ್ವರೂಪವನ್ನೇ ಗಮನಿಸಿ ನಾವು ಲೇಖಕ ಹೀಗೇ ಇರಬೇಕು ಎಂದು ಕಲ್ಪಿಸಿಕೊಳ್ಳುತ್ತೇವೆ. ಲೇಖನಗಳಲ್ಲಿರುವ ಭಾವಕ್ಕೆ ಅನುಗುಣವಾದ ಮುಖಭಾವವನ್ನು ಕಲ್ಪಿಸಿಕೊಳ್ಳುತ್ತೇವೆ. ನಾನು ಆಂಗ್ಲ ಪತ್ರಿಕೆ ಸೈನ್ಸ್ ರಿಪೋರ್ಟರ್‌ನಲ್ಲಿ ಬರೆಯುತ್ತಿದ್ದಾಗ ಉತ್ತರ ಭಾರತದ ಕೆಲವು ಓದುಗರು 'ಕೊಳ್ಳೇಗಾಲ' ಎನ್ನುವುದು ಯಾವುದೋ ಹುಡುಗಿಯ ಹೆಸರು ಎಂದು ಭಾವಿಸಿ ಪ್ರೇಮಪತ್ರವನ್ನೂ ಬರೆದಿದ್ದಿದೆ. ಸದ್ಯ! ಪರಿಸ್ಥಿತಿ ಬದಲಾಗಿದೆ. ಈ ಅಂಕಣದಲ್ಲಿ ಭಾವಚಿತ್ರವೂ ಈಗ ಕಾಣಿಸಿಕೊಳ್ಳುತ್ತಿರುವುದರಿಂದ ಇಂತಹ ಮುಜುಗರದ ಪರಿಸ್ಥಿತಿ ಎದುರಾಗುವುದು ಕಡಿಮೆಯಾಗಿದೆ.
ಈ ಸ್ವಂತ ಪುರಾಣಕ್ಕೆ ಕಾರಣವಿದೆ. ಸ್ವಾರಸ್ಯಕರವಾದ ಬರೆಹಗಳನ್ನು ಪ್ರಕಟಿಸುವ ಜನಪ್ರಿಯ ಪತ್ರಿಕೆಗಳ ಲೇಖಕರ ಅನುಭವವೇ ಹೀಗಾದರೆ ಇನ್ನು ನೀರಸವಾದ ಸಂಶೋಧನಾ ಪ್ರಬಂಧಗಳನ್ನು ಬರೆವ ವಿಜ್ಞಾನಿಗಳ ಬಗ್ಗೆ ಓದುಗರ ಕಲ್ಪನೆ ಹೇಗಿರಬಹುದು ಊಹಿಸಿಕೊಳ್ಳಿ! ನಿಜ. ವಿಜ್ಞಾನ ಜಗತ್ತಿನಲ್ಲಿ ಲೇಖಕರ ಅಜ್ಞಾತವಾಸ ಇನ್ನೂ ಹೆಚ್ಚು. ಈಗೀಗಲಂತೂ ಸಂಶೋಧನೆ ಎನ್ನುವುದು ಉದ್ಯೋಗವಾದ ಮೇಲೆ ಪ್ರತಿನಿತ್ಯವೂ ಕೋಟ್ಯಂತರ ವಿಜ್ಞಾನಿಗಳ ಲೇಖನಗಳು ವಿವಿಧ ಸಂಶೋಧನಾ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುತ್ತದೆ. ಸಹಜವಾಗಿಯೇ ನಿರ್ಭಾವುಕವಾದ ಈ ಪ್ರಬಂಧಗಳು ವಿಜ್ಞಾನಿಗಳ ವ್ಯಕ್ತಿತ್ವದ ಬಗ್ಗೆ ಏನನ್ನೂ ಹೇಳಲಾರವು. ಹೀಗಾಗಿ ಪ್ರಬಂಧಕಾರನ ವ್ಯಕ್ತಿತ್ವವನ್ನು ಮನಬಂದಂತೆ ಊಹಿಸಿಕೊಳ್ಳಬೇಕಾಗುತ್ತದೆ.
ಮೊನ್ನೆ ಅಮೆರಿಕೆಯ ರಸಾಯನವಿಜ್ಞಾನಿಗಳ ಸಂಘವು ಪ್ರಕಟಿಸುವ ಎಸಿಎಸ್ ನ್ಯಾನೋ ಪತ್ರಿಕೆಯ ಹೊಸ ಸಂಚಿಕೆಯನ್ನು ಓದಿದಾಗ ಇವೆಲ್ಲ ನೆನಪಾಯಿತು. ವಿಜ್ಞಾನ ಪತ್ರಿಕೆಗಳಲ್ಲೇ ಯಾಕೆ ಜನಪ್ರಿಯ ಪತ್ರಿಕೆಗಳಲ್ಲೂ ಕಾಣಿಸಿಕೊಳ್ಳದ ಒಂದು ಹೊಸ ಪ್ರಯೋಗವನ್ನು ಸಂಘ ಮಾಡಿದೆ. ಸಾಮಾನ್ಯವಾಗಿ ಪ್ರಕಟವಾಗುವ ಸಂಶೋಧನಾ ಪ್ರಬಂಧಗಳ ಜೊತೆಗೇ ಸಂಶೋಧಕರೇ ತಮ್ಮ ಶೋಧದ ಕುರಿತಾಗಿ ನಿರ್ಮಿಸಿದ ಚಲನಚಿತ್ರಗಳನ್ನೂ ಜೊತೆಗೂಡಿಸಿ ಏಸಿಎಸ್ ನ್ಯಾನೋ ಹಾಗೂ ನ್ಯಾನೋಲೆಟರ್ಸ್ ಪತ್ರಿಕೆಗಳ ವರ್ಚುವಲ್ ವೀಡಿಯೊ ಸಂಚಿಕೆಯನ್ನು ಸಂಘ ಪ್ರಕಟಿಸಿದೆ. ಈ ಸಂಚಿಕೆಗಳಲ್ಲಿ ಸ್ವತಃ ವಿಜ್ಞಾನಿಗಳೇ ಕಾಣಿಸಿಕೊಂಡು ತಮ್ಮ ಶೋಧಗಳ ಬಗ್ಗೆ ವಿವರಿಸುತ್ತಾರಾದ್ದರಿಂದ ಸಂಶೋಧಕರ ಮುಖಪರಿಚಯದ ಜೊತೆಗೇ ಅವರ ಹಾವ-ಭಾವ, ಭಾಷೆಗಳ ಬಗ್ಗೆಯೂ ಓದುಗರು (ಹಾಗೂ ನೋಡುಗರು, ಕೇಳುಗರು) ತಿಳಿದುಕೊಳ್ಳಬಹುದು. ನಾವು ಕರ್ವಾಲೋ ಓದುತ್ತಿದ್ದಾಗ ಜೊತೆ-ಜೊತೆಗೇ ತೇಜಸ್ವಿಯವರು ಅದರ ಬಗ್ಗೆ ಕಥೆ ಹೇಳಿದರೆ ಹೇಗಿರುತ್ತದೆ ಊಹಿಸಿಕೊಳ್ಳಿ!
ವಿಜ್ಞಾನ ಪತ್ರಿಕೆಗಳು ನೀರಸ ಎಂದೆನಷ್ಟೆ! ವಿಜ್ಞಾನ ಪತ್ರಿಕೆಗಳ ಪ್ರಕಟಣೆಯಲ್ಲಿ ಕಳೆದ ಐದಾರು ವರ್ಷಗಳಿಂದೀಚೆಗೆ ಆಗಿರುವ ಸುಧಾರಣೆ ಮಾತ್ರ ಅತ್ಯಂತ ಸ್ವಾರಸ್ಯಕರ. ಒಂದೆರಡು ದಶಕಗಳ ಹಿಂದೆ ಬಹುತೇಕ ಸಂಶೋಧನಾ ಪತ್ರಿಕೆಗಳ ಸ್ವರೂಪ ಏಕರೂಪದ್ದಾಗಿತ್ತು. ಹತ್ತಾರು ಪುಟಗಳ ಪಾಠದ ನಡುವೆ ಎಲ್ಲೋ ಒಂದೊಂದು ಚಿತ್ರ ಮೂಡಿರುತ್ತಿತ್ತು. ಆ ಚಿತ್ರವೂ ಅಷ್ಟೆ! ಅಂಕಿ ಅಂಶಗಳ ಕೋಷ್ಟಕವೋ, ಗ್ರಾಫೋ ಆಗಿದ್ದುದೇ ಹೆಚ್ಚು. ಎಲ್ಲೋ ಒಮ್ಮೊಮ್ಮೆ ಕಪ್ಪು-ಬಿಳುಪು ಚಿತ್ರ ಮೂಡಿರುತ್ತಿತ್ತು. ಬಣ್ಣದ ಚಿತ್ರಗಳನ್ನು ಪ್ರಕಟಿಸಬೇಕಾದರೆ ಲೇಖಕರೇ ಮುದ್ರಣವೆಚ್ಚವನ್ನೂ ನೀಡಬೇಕಾಗುತ್ತಿತ್ತು. ಹೀಗಾಗಿ ಬಡ ವಿಜ್ಞಾನಿಗಳು ತಮ್ಮ ಚಿತ್ರಗಳನ್ನು ಪ್ರಕಟಿಸುವುದಿರಲಿ, ಸಂಶೋಧನೆಗೆ ಸಂಬಂಧಿಸಿದ ಚಿತ್ರಗಳ ಪ್ರಕಟಣೆಯನ್ನೂ, ಅವಶ್ಯಕವಿಲ್ಲವೆನ್ನಿಸಿದರೆ, ಮಾಡುತ್ತಲೇ ಇರಲಿಲ್ಲ. ಕಾಲ ಬದಲಾಗಿದೆ. ತಂತ್ರಜ್ಞಾನವು ಬದಲಾಗಿದೆ. ಇಂಟರ್‌ನೆಟ್ (ಅಂತರಜಾಲ), ಮುದ್ರಣ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನಗಳಲ್ಲಿ ಆಗಿರುವ ಸುಧಾರಣೆಗಳು ವಿಜ್ಞಾನ ಪತ್ರಿಕೆಗಳ ಸ್ವರೂಪವನ್ನು ಬದಲಿಸಿವೆ.
ಈಗ ಈ ಪತ್ರಿಕೆಗಳು, ಕನ್ನಡಪ್ರಭದ ಇ-ಪತ್ರಿಕೆಯಂತೆಯೇ, ಪ್ರಕಟವಾದ ಕೂಡಲೇ ಕೈ ಹತ್ತುವ ಇಲೆಕ್ಟ್ರಾನಿಕ್ ಸ್ವರೂಪದಲ್ಲಿ ಲಭ್ಯ. ಉದಾಹರಣೆಗೆ, ಸುಪ್ರಸಿದ್ಧ ಸೈನ್ಸ್ ಪತ್ರಿಕೆಯನ್ನು ಪ್ರತಿ ಶುಕ್ರವಾರ ಗ್ರಂಥಾಲಯದ ಮೆಟ್ಟಿಲು ಹತ್ತದೆಯೇ ನಿಮ್ಮ ಮೊಬೈಲ್‌ನಲ್ಲಿಯೇ ಓದಬಹುದಾದ ಸವಲತ್ತು ಇದೆ. ಪ್ರತಿ ವರ್ಷ ವಿಜ್ಞಾನಿಗಳು ತವಕದಿಂದ ಕಾಯುವ ನೋಬೆಲ್ ಪಾರಿತೋಷಕಗಳ ಘೋಷಣೆ ಈಗ ನೇರವಾಗಿ ಇಂಟರ್‌ನೆಟ್‌ನಲ್ಲೇ ಲಭ್ಯ. ಅಕ್ಟೋಬರ್ ತಿಂಗಳ ಮೊದಲವಾರದಲ್ಲಿ ಘೋಷಣೆಯಾಗುತ್ತಿದ್ದ ಈ ಪ್ರಶಸ್ತಿಗಳ ವಿವರವಾದ ವರದಿ ದೊರೆಯಲು ನಾಲ್ಕೈದು ದಿನಗಳ ಕಾಲವಾದರೂ ಕಾಯಬೇಕಾಗುತ್ತಿತ್ತು. ಈಗ ಹಾಗಿಲ್ಲ. ನೇರವಾಗಿ ಅಂತರಜಾಲದಲ್ಲಿ ಪತ್ರಿಕಾ ಗೋಷ್ಟಿಯನ್ನು ಅದು ನಡೆಯುತ್ತಿರುವ ಸಮಯದಲ್ಲಿಯೇ ಯಾರು ಬೇಕಿದ್ದರೂ ನೋಡಬಹುದು. ಹಾಗೆಯೇ ಅದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಪಡೆದುಕೊಳ್ಳಬಹುದು, ವಿಜ್ಞಾನಿಗಳ ಸಂದರ್ಶನವನ್ನು ನೇರವಾಗಿ ಕೇಳಬಹುದು. ರೆಕಾರ್ಡು ಮಾಡಿಟ್ಟುಕೊಳ್ಳಬಹುದು. ಕೆಲವು ವರ್ಷಗಳ ಹಿಂದೆ ಸೈನ್ಸ್ ಪತ್ರಿಕೆ ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿ ಸಂಚಿಕೆಯಲ್ಲಿನ ಹೂರಣವನ್ನು ಪಾಡ್‌ಕಾಸ್ಟ್ ರೂಪದಲ್ಲಿ ಪ್ರಕಟಿಸಲಾರಂಭಿಸಿತು. ಆಯ್ದ ಕೆಲವು ಸಂಶೋಧನೆಗಳ ಕರ್ತೃಗಳನ್ನು ಮಾತನಾಡಿಸಿ ಅವರ ಸಂದರ್ಶನವನ್ನು 'ಧ್ವನಿಕಡತ'ದ ರೂಪದಲ್ಲಿ ನೀಡುತ್ತಿತ್ತು. ಈ ಧ್ವನಿಕಡತದ ಪಾಠವೂ ಅದೇ ಸಮಯದಲ್ಲಿಯೇ ದೊರಕುತ್ತದೆ. ಅರ್ಥಾತ್, ನಮ್ಮಂಥ ವಿಜ್ಞಾನ ಬರೆಹಗಾರರಿಗೆ ಸಿದ್ಧ ಮಾಹಿತಿ, ವಿವರಣೆ, ವಿಜ್ಞಾನಿಗಳ ಅಭಿಪ್ರಾಯವೂ ನಿರಾಯಾಸವಾಗಿ ಲಭ್ಯ!
ಸೈನ್ಸ್ ಒಂದು ಬಹುವಿಷಯಕ ಪತ್ರಿಕೆ. ಹಲವು ಬಗೆಯ ಓದುಗರಿರುವ ಪತ್ರಿಕೆ ಎಂದಿರಾ? ಕೆಲವೇ ಸೀಮಿತ ವಿಷಯಗಳಿಗಷ್ಟೆ ಮೀಸಲಾಗಿರುವ ವಿಶಿಷ್ಟ ಸಂಶೋಧನಾ ಪತ್ರಿಕೆಗಳಲ್ಲಿಯೂ ಬದಲಾವಣೆಗಳಾಗಿವೆ. ಇವು ಆ ಕ್ಷೇತ್ರದ ಪರಿಣತರಿಗಷ್ಟೆ ಅರ್ಥವಾಗುವ ಪಾಠಗಳನ್ನು ಮುದ್ರಿಸಿದರೂ, ಜೊತೆಗೆ ಆಕರ್ಷಕವಾದ, ಕಷ್ಟದ ಪರಿಕಲ್ಪನೆಗಳನ್ನು ಸುಲಭವಾಗಿ ಮನವರಿಕೆ ಮಾಡಿಸುವ ಬಣ್ಣದ ರೇಖಾಚಿತ್ರಗಳನ್ನೂ, ಇಂಟರ್‌ನೆಟ್ ಆವೃತ್ತಿಯಲ್ಲಿ ಅವುಗಳ ಅನಿಮೇಷನ್‌ಗಳನ್ನೂ ಪ್ರಕಟಿಸುತ್ತಿವೆ. ಪುಟ್ಟ ರೋಬೋನೊಣವೊಂದರ ಸೃಷ್ಟಿಯಾಯಿತೆನ್ನಿ. ಈ ಹಿಂದೆ ಆ ಬಗ್ಗೆ ಬರೆದ ಲೇಖನದಲ್ಲಿ ಒಂದು ಪುಟ್ಟ ಚಿತ್ರವನ್ನಷ್ಟೆ ಕಾಣಬಹುದಿತ್ತು. ಹೆಚ್ಚೆಂದರೆ ಅದರ ಬಣ್ಣದ ಚಿತ್ರವಿರುತ್ತಿತ್ತು ಅಷ್ಟೆ. ಆದರೆ ಈಗ ಹಾಗಲ್ಲ. ಆ ರೋಬೋವಿನ ಚಲನೆಯನ್ನು ತೋರಿಸುವ ವೀಡಿಯೋವನ್ನೂ ಇಂಟರ್‌ನೆಟ್ ಆವೃತ್ತಿಯಲ್ಲಿ ಪ್ರಕಟಿಸುತ್ತಿದ್ದಾರೆ. ಇದೇ ರೀತಿಯಲ್ಲಿ ಇಲಿ, ಬ್ಯಾಕ್ಟೀರಿಯಾಗಳ ಚಲನವಲನಗಳನ್ನೂ, ಅಂಗಾಂಗಗಳ ರಚನೆಯನ್ನೂ ತೋರಿಸುವ ಚಿತ್ರಗಳಿವೆ. ಕಷ್ಟದ ಫಿಸಿಕ್ಸ್ ಪರಿಕಲ್ಪನೆಗಳನ್ನು ವಿವರಿಸುವ ಅಂದದ ಅನಿಮೇಷನ್‌ಗಳಿವೆ. ಇವೆಲ್ಲವೂ ಇರುವುದು ಜನಪ್ರಿಯ ಪತ್ರಿಕೆಗಳಲ್ಲಿ ಅಲ್ಲ ಅನ್ನುವುದು ವಿಶೇಷ.
ಏಸಿಎಸ್ ನ್ಯಾನೋ ಈಗ ಇವೆಲ್ಲವನ್ನೂ ದಾಟಿ ಮುಂದೆ ಸಾಗಿದೆ. ಮುದ್ರಿತ ಪಾಠದ ಜೊತೆ, ಜೊತೆಗೇ ಅದನ್ನು ವಿಜ್ಞಾನಿಗಳೇ ವಿವರಿಸುತ್ತಿರುವ ವೀಡಿಯೋವನ್ನೂ ನೋಡಬಹುದು. ನ್ಯಾನೋ ಎಂದರೆ ಅತಿ ಸೂಕ್ಷ್ಮ. ಕಣ್ಣಿಗೆ ಕಾಣದ ವಿದ್ಯಮಾನಗಳು ಹಾಗೂ ವಸ್ತುಗಳ ವಿನ್ಯಾಸ. ಇವನ್ನು ಮಾಡುವ ವಿಜ್ಞಾನಿಗಳ ಜಾಣತನವನ್ನು ಕಣ್ಣಿಗೆ ಕಟ್ಟುವಂಥ ಅನಿಮೇಷನ್‌ಗಳನ್ನೂ ಪಾಠದ ಜೊತೆಗೇ ನೋಡಬಹುದು. ವಿಜ್ಞಾನಿಗಳೇ ಸ್ವತಃ ತಯಾರಿಸಿರುವ ಈ ವೀಡಿಯೋಗಳು ಸ್ವರ್ಣಕಮಲ ಪ್ರಶಸ್ತಿ ಪಡೆಯುವಂಥವಲ್ಲ. ಆದರೆ ಸ್ವತಃ ವಿಜ್ಞಾನಿಗಳಿಗೇ ಬೋರು ಹೊಡೆಸುವಂಥಹ ಪತ್ರಿಕೆಗಳನ್ನು ಉಲ್ಲಾಸಕರ ಮಾಧ್ಯಮವನ್ನಾಗಿಸುತ್ತವೆನ್ನುವುದಂತೂ ನಿಜ. ಜೊತೆಗೆ ಇವು ಯಾರೋ ಪತ್ರಕರ್ತರು ನಡೆಸಿದ ಸಂದರ್ಶನವೂ ಅಲ್ಲ. ಈ ಹೊಸ ಪ್ರಯೋಗದ ಬಗ್ಗೆ ಪ್ರತಿಕ್ರಿಯೆಗಳು ಇನ್ನು ಬರಬೇಕಷ್ಟೆ. ಏನಿಲ್ಲದಿದ್ದರೂ ಹೊಸ ವಿಷಯಗಳನ್ನು ದೂರದಲ್ಲಿರುವ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲು ಇವು ಉತ್ತಮ ಪಾಠಗಳಾದಾವು.
ವಿಜ್ಞಾನ ಪ್ರಬಂಧಗಳು ಈಗಲೂ ನೀರಸವೇ. ಆದರೆ ಅವನ್ನು ಪ್ರಕಟಿಸುವ ಪತ್ರಿಕೆಗಳು ಬಳಸುತ್ತಿರುವ ತಂತ್ರಗಳು ಮಾತ್ರ ಜನಪ್ರಿಯ ಪತ್ರಿಕೆಗಳನ್ನೂ ನಾಚಿಸುವಂಥವು ಎನ್ನುವುದಂತೂ ನಿಜ.
ಏಪ್ರಿಲ್ ೧೩, ೨೦೧೧ರ ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ

ಏಸಿಎಸ್ ನ್ಯಾನೋ ಹಾಗೂ ನ್ಯಾನೋಲೆಟರ್ಸ್ ಪತ್ರಿಕೆಗಳ ವರ್ಚುವಲ್ ವೀಡಿಯೊ ಸಂಚಿಕೆ ಈ ತಾಣದಲ್ಲಿ ಲಭ್ಯವಿದೆ
ಏಪ್ರಿಲ್ ೧೩, ೨೦೧೧ರ ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ