ರೈಲು ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ? ಅದರ ಚುಕುಬುಕು ಸದ್ದಂತೂ ಮಕ್ಕಳಿಗೆ ಅಚ್ಚುಮೆಚ್ಚು. ರೈಲು ಪ್ರಯಾಣವೂ ಅಷ್ಟೆ; ನಿಲ್ದಾಣದಲ್ಲಿನ ಗಡಿಬಿಡಿ, ತಿಂಡಿತಿನಿಸು ಮಾರಾಟಗಾರರ ಕೂಗು, ಸೇತುವೆ ಮೇಲೆ ಸುರಂಗದ ಒಳಗೆ ರೈಲಿನ ಓಟ - ಪ್ರತಿಯೊಂದೂ ವಿಶಿಷ್ಟ ಅನುಭವವೇ.
ರೈಲುಗಳಲ್ಲಿ ಅದೆಷ್ಟೋ ವಿಧಗಳಿವೆ. ಹಿಂದಿನ ಕಾಲದಲ್ಲಿ ಎಲ್ಲ ರೈಲುಗಳೂ ಕಲ್ಲಿದ್ದಲನ್ನು ಉರಿಸಿ ನೀರಿನ ಹಬೆಯನ್ನು ಉತ್ಪಾದಿಸಿಕೊಂಡು ಅದರ ಶಕ್ತಿಯಿಂದ ಚಲಿಸುತ್ತಿದ್ದವು. ಹೀಗಾಗಿಯೇ ರೈಲುಗಳಿಗೆ ಉಗಿಬಂಡಿ ಎಂಬ ಹೆಸರು ಬಂದದ್ದು.
ನಂತರ, ತಂತ್ರಜ್ಞಾನ ಬೆಳೆದಂತೆ ರೈಲಿನ ಇಂಜನ್ನಿನಲ್ಲಿ ಬೇರೆಬೇರೆ ಬಗೆಯ ಇಂಧನಗಳ ಬಳಕೆ ಪ್ರಾರಂಭವಾಯಿತು. ವಿಶ್ವದ ಅತಿದೊಡ್ಡ ರೈಲ್ವೇ ಜಾಲ ಹೊಂದಿರುವ ನಮ್ಮ ದೇಶದಲ್ಲಿ ಡೀಸಲ್ ಹಾಗೂ ವಿದ್ಯುತ್ ಚಾಲಿತ ರೈಲುಗಳು ಓಡಾಡುತ್ತಿವೆ. ಕೆಲವು ಪ್ರವಾಸಿ ತಾಣಗಳಲ್ಲಿ ಇನ್ನೂ ಬಳಕೆಯಲ್ಲಿರುವ ಉಗಿಬಂಡಿಗಳು ಜನರಿಗೆ ವಿಶಿಷ್ಟ ಅನುಭವ ನೀಡುತ್ತವೆ.
ನಮ್ಮ ಬೆಂಗಳೂರಿನಲ್ಲಿ ಇದೀಗ ಮೆಟ್ರೋ ರೈಲಿನ ಸಂಚಾರಕ್ಕೆ ಸಿದ್ಧತೆ ನಡೆದಿದೆ. ಇವು ಸಂಚಾರಕ್ಕಾಗಿಯೇ ವಿಶೇಷವಾಗಿ ರೂಪಿಸಲಾಗಿರುವ ವಿದ್ಯುತ್ ಚಾಲಿತ ರೈಲುಗಳು. ಯಾವುದೇ ಅಡೆತಡೆಯಿಲ್ಲದೆ ಸುರಂಗದೊಳಗೆ ಅಥವಾ ಎತ್ತರದ ಸೇತುವೆಗಳ ಮೇಲೆ ಸಂಚರಿಸುವುದು ಈ ರೈಲುಗಳ ವೈಶಿಷ್ಟ್ಯ. ಈ ರೈಲುಗಳು ನಿರ್ದಿಷ್ಟ ಮಾರ್ಗದಲ್ಲಿ ಕೆಲವೇ ನಿಮಿಷಗಳ ಅಂತರದಲ್ಲಿ ದಿನಪೂರ್ತಿ ಓಡಾಡುತ್ತಲೇ ಇರುತ್ತವೆ. ದೆಹಲಿ ಹಾಗೂ ಕೋಲ್ಕಾತಾ - ಇವು ನಮ್ಮ ದೇಶದಲ್ಲಿ ಮೆಟ್ರೋ ರೈಲು ವ್ಯವಸ್ಥೆ ಹೊಂದಿರುವ ಇನ್ನೆರಡು ನಗರಗಳು.
ಕೋಲ್ಕಾತಾ ನಗರದಲ್ಲಿ ಕಂಡುಬರುವ ಟ್ರಾಮ್‌ಗಳೂ ಒಂದು ಬಗೆಯ ರೈಲುಗಳೇ. ಇತರ ರೈಲುಗಳಂತೆ ಇವಕ್ಕೆ ಪ್ರತ್ಯೇಕ ಮಾರ್ಗಗಳಿರುವಿದಿಲ್ಲ. ಟ್ರಾಮ್ ಮಾರ್ಗಗಳೇನಿದ್ದರೂ ರಸ್ತೆಯ ಮೇಲೆಯೇ ಹಾದುಹೋಗಿರುತ್ತವೆ. ಬೇರೆಲ್ಲ ವಾಹನಗಳ ಜೊತೆಗೇ ಸಂಚರಿಸಬೇಕಿರುವುದರಿಂದ ಟ್ರಾಮ್ ಓಡಾಟ ಸ್ವಲ್ಪ ನಿಧಾನವೇ.
ರೈಲುಗಳಲ್ಲಿ ಮಾನೋರೈಲು ಎಂಬುದೊಂದು ವಿಧವೂ ಇದೆ. ಸಾಮಾನ್ಯ ರೈಲುಗಳಿಗಿಂತ ವಿಭಿನ್ನವಾಗಿ ಒಂದೇ ಕಂಬಿಯ ಹಳಿ ಹೊಂದಿರುವುದು ಈ ರೈಲಿನ ವಿಶೇಷತೆ. ಬೆಂಗಳೂರು ನಗರದಲ್ಲಿ ಈ ಬಗೆಯ ರೈಲುಗಳ ಓಡಾಟವೂ ಬೇಕು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಸಾಮಾನ್ಯ ರೈಲುಗಳು ದೇಶದ ಮೂಲೆಮೂಲೆಗಳನ್ನೂ ಸಂಪರ್ಕಿಸುತ್ತವೆ. ಬೇರೆಬೇರೆ ದೇಶಗಳನ್ನು ಸಂಪರ್ಕಿಸುವ ರೈಲುಗಳೂ ಇವೆ. ಇಷ್ಟೆಲ್ಲ ದೂರವನ್ನು ಪ್ರಯಾಣಿಸುವಾಗ ರೈಲುಗಳು ನಿಧಾನಕ್ಕೆ ಹೋದರೆ ಆಗುವುದಿಲ್ಲವಲ್ಲ, ಹಾಗಾಗಿ ಅತಿವೇಗದ ರೈಲುಗಳನ್ನೂ ರೂಪಿಸಲಾಗಿದೆ.
ರಾಜಧಾನಿ ಎಕ್ಸ್‌ಪ್ರೆಸ್, ಶತಾಬ್ದಿ ಎಕ್ಸ್‌ಪ್ರೆಸ್ ಹಾಗೂ ತುರಂತೋ ಎಕ್ಸ್‌ಪ್ರೆಸ್ ರೈಲುಗಳು ನಮ್ಮ ದೇಶದ ಮಟ್ಟಿಗೆ ಹೇಳುವುದಾದರೆ ಅತ್ಯಂತ ವೇಗದ ರೈಲುಗಳು. ಇವುಗಳ ಸರಾಸರಿ ವೇಗ ಗಂಟೆಗೆ ನೂರು ಕಿಲೋಮೀಟರುಗಳವರೆಗೂ ಇದೆ. ಭೂಪಾಲಕ್ಕೆ ಹೋಗುವ ಶತಾಬ್ದಿ ಎಕ್ಸ್‌ಪ್ರೆಸ್ ರೈಲು ದೆಹಲಿಯಿಂದ ಆಗ್ರಾ ನಡುವೆ ಗಂಟೆಗೆ ೧೬೧ ಕಿಲೋಮೀಟರ್ ವೇಗದಲ್ಲಿ ಚಲಿಸಿದ್ದು ರಾಷ್ಟ್ರೀಯ ದಾಖಲೆ.
ಪ್ರಪಂಚದ ಬೇರೆಬೇರೆ ದೇಶಗಳಲ್ಲಿ ಇನ್ನೂ ಹೆಚ್ಚು ವೇಗದಲ್ಲಿ ಸಂಚರಿಸುವ ರೈಲುಗಳಿವೆ. ಬುಲೆಟ್ ರೈಲುಗಳೆಂದೂ ಕರೆಸಿಕೊಳ್ಳುವ ಇವು ಗಂಟೆಗೆ ಇನ್ನೂರು ಕಿಲೋಮೀಟರುಗಳಿಗಿಂತ ಹೆಚ್ಚಿನ ವೇಗದಲ್ಲಿ ಚಲಿಸುತ್ತವೆ. ಒಂದುವೇಳೆ ಮೈಸೂರಿನಿಂದ ಬೆಂಗಳೂರಿನ ನಡುವೆ ಇಂಥದ್ದೊಂದು ರೈಲು ಇದ್ದರೆ ಒಂದು ಗಂಟೆಗಿಂತ ಕಡಿಮೆ ಸಮಯದಲ್ಲೇ ಅದು ತನ್ನ ಪ್ರಯಾಣ ಮುಗಿಸಿಬಿಡುತ್ತದೆ!
ಮ್ಯಾಗ್ಲೆವ್ ಅಥವಾ ಮ್ಯಾಗ್ನೆಟಿಕ್ ಲೆವಿಟೇಶನ್ ತಂತ್ರಜ್ಞಾನ ಬಳಸಿ ಸಂಚರಿಸುವ ರೈಲುಗಳೂ ಇವೆ. ಭಾರೀ ಸಂಖ್ಯೆಯ ಅಯಸ್ಕಾಂತಗಳನ್ನು ಬಳಸಿ ಅವುಗಳಿಂದ ಉಂಟಾಗುವ ಅಯಸ್ಕಾಂತೀಯ ತೇಲುವಿಕೆ
ಯಿಂದ ಈ ರೈಲುಗಳು ಚಲಿಸುತ್ತವೆ. ಇಂತಹ ರೈಲುಗಳು ಗಂಟೆಗೆ ಐದುನೂರು ಕಿಲೋಮೀಟರುಗಳಿಗಿಂತ ಹೆಚ್ಚು ವೇಗದಲ್ಲಿ ಚಲಿಸಿದ ದಾಖಲೆಗಳಿವೆ.
ಅಬ್ಬಾ, ಪ್ರಪಂಚದಲ್ಲಿ ಎಷ್ಟೆಲ್ಲ ಬಗೆಯ ರೈಲುಗಳಿವೆಯಲ್ಲ!
ಚಿಣ್ಣರ ಚೇತನ ಗೋಡೆ ಪತ್ರಿಕೆಯ ೨೦೧೧ ಮಾರ್ಚ್ ೧೬-೩೧ ಸಂಚಿಕೆಯಲ್ಲಿ ಪ್ರಕಟವಾದ ಲೇಖನ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ