ಮಂಗಳವಾರ, ಏಪ್ರಿಲ್ 26, 2011

ಇದು ಸೋಶಿಯಲ್ ನ್ಯೂಸ್

ಟಿ ಜಿ ಶ್ರೀನಿಧಿ

೨೦೦೮ರಲ್ಲೇ ಪ್ರಾರಂಭವಾಗಿದ್ದರೂ ನಿರೀಕ್ಷಿತ ಜನಪ್ರಿಯತೆ ಗಳಿಸುವಲ್ಲಿ ವಿಫಲವಾದ ಯಾಹೂ ಬಜ್ ಸೇವೆ ಏಪ್ರಿಲ್ ೨೧, ೨೦೧೧ರಿಂದ ಸ್ಥಗಿತಗೊಳ್ಳಲಿದೆ ಎಂಬ ಸುದ್ದಿ ಈಚೆಗೆ ಕೆಲ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿತ್ತು. ಯಾಹೂ ಡಾಟ್ ಕಾಮ್‌ನಲ್ಲಿ ಅಂಥದ್ದೊಂದು ಸೇವೆ ಲಭ್ಯವಿತ್ತು ಎನ್ನುವುದೇ ಬಹಳಷ್ಟು ಜನಕ್ಕೆ ಗೊತ್ತಿರಲಿಲ್ಲ; ಹೀಗಾಗಿ ಅದು ನಿಂತುಹೋದ ಸುದ್ದಿ ಓದಿದವರಲ್ಲಿ ಅನೇಕರು ಕೇಳಿದ ಪ್ರಶ್ನೆ - "ಯಾಹೂ ಬಜ್ ಅಂದರೇನು?"

ಸೋಶಿಯಲ್ ನ್ಯೂಸ್ ವಿಶ್ವವ್ಯಾಪಿ ಜಾಲದ ಬಳಕೆದಾರರು ಬೇರೆಬೇರೆ ತಾಣಗಳಲ್ಲಿ ನೋಡಿ, ಓದಿ, ಮೆಚ್ಚಿದ ಮಾಹಿತಿಯನ್ನು ಇತರರೊಡನೆ ಒಂದೇ ವೇದಿಕೆಯಲ್ಲಿ ಹಂಚಿಕೊಳ್ಳಲು ಸಹಾಯಮಾಡುವ ತಾಣಗಳನ್ನು ಸೋಶಿಯಲ್ ನ್ಯೂಸ್ ಅಥವಾ ಸಾಮಾಜಿಕ ಸುದ್ದಿತಾಣಗಳು ಎಂದು ಕರೆಯುತ್ತಾರೆ.

ಈಗಷ್ಟೆ ಕಣ್ಣುಮುಚ್ಚಿದ ಯಾಹೂ ಬಜ್ ಕೂಡ ಇಂತಹುದೇ ಒಂದು ತಾಣ.


ಸ್ಲಾಶ್‌ಡಾಟ್, ಡಿಗ್, ರೆಡಿಟ್ ಮೊದಲಾದವು ಸಾಮಾಜಿಕ ಸುದ್ದಿತಾಣಗಳಿಗೆ ಕೆಲ ಜನಪ್ರಿಯ ಉದಾಹರಣೆಗಳು. ಪ್ರಪಂಚದ ಮೂಲೆಮೂಲೆಗಳಲ್ಲಿರುವ ಬಳಕೆದಾರರು ತಾವು ಬೇರೆಬೇರೆ ತಾಣಗಳಲ್ಲಿ ಓದಿ ಮೆಚ್ಚಿದ ಸುದ್ದಿ, ಲೇಖನ ಇತ್ಯಾದಿಗಳನ್ನು ಈ ತಾಣಗಳಿಗೆ ಸೇರಿಸುತ್ತಾರೆ. ಹೀಗೆ ಸೇರಿಸಲಾದ ಸುದ್ದಿಗಳನ್ನು ಪ್ರತ್ಯೇಕ ವಿಭಾಗಗಳಲ್ಲಿ ಅವುಗಳ ಜನಪ್ರಿಯತೆಯ ಪ್ರಕಾರ ಪಟ್ಟಿಮಾಡಿ ಪ್ರಕಟಿಸುವುದು ಆ ತಾಣಗಳ ಕೆಲಸ. ವಿಶ್ವವ್ಯಾಪಿ ಜಾಲದಲ್ಲಿರುವ ಕೋಟ್ಯಂತರ ಪುಟಗಳಲ್ಲಿ ಎಲ್ಲೋ ಪ್ರಕಟವಾಗಿ ನಮ್ಮ ಗಮನಕ್ಕೆ ಬಾರದೆ ಹೋಗಬಹುದಾದ ಉಪಯುಕ್ತ ಮಾಹಿತಿಯನ್ನು ಅನೇಕ ಬಾರಿ ಈ ತಾಣಗಳ ಮೂಲಕ ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ.

ಇಲ್ಲಿ ಸೇರಿಸುವ ಸುದ್ದಿಗಳನ್ನು ಈಗಾಗಲೇ ಅನೇಕರು ಓದಿ ಮೆಚ್ಚಿರುವುದರಿಂದ ಸುಳ್ಳುಸುದ್ದಿಗಳು ಮೊದಲ ಪಂಕ್ತಿಯಲ್ಲಿ ಪ್ರಕಟವಾಗುವ ಸಾಧ್ಯತೆ ಸ್ವಲ್ಪ ಕಡಿಮೆಯೇ; ವಿಶ್ವವ್ಯಾಪಿ ಜಾಲದಲ್ಲಿ ಆಗಿಂದಾಗ್ಗೆ ಕಾಣಿಸಿಕೊಳ್ಳುವ ಸುಳ್ಳುಸುದ್ದಿಗಳ ಹಾವಳಿ ತಡೆಯಲು ಈ ತಾಣಗಳು ಹೀಗೆ ತಮ್ಮದೇ ಆದ ರೀತಿಯಲ್ಲಿ ಸಹಾಯ ಮಾಡುತ್ತಿವೆ.

ಬುಕ್‌ಮಾರ್ಕ್ ಲೇಖನಗಳನ್ನು ಸಾಮಾಜಿಕ ಸುದ್ದಿತಾಣಗಳಿಗೆ ಸೇರಿಸಲು ಬಳಕೆಯಾಗುವ ತಂತ್ರಾಂಶ ಉಪಕರಣಗಳಿಗೆ ಸೋಶಿಯಲ್ ಬುಕ್‌ಮಾರ್ಕಿಂಗ್ ಟೂಲ್‌ಗಳೆಂದು ಹೆಸರು. ಆಡ್ ದಿಸ್, ಶೇರ್ ದಿಸ್ ಮೊದಲಾದವು ಇಂತಹ ಉಪಕರಣಗಳಿಗೆ ಕೆಲ ಉದಾಹರಣೆಗಳು.

ಸಾಮಾನ್ಯವಾಗಿ ಲೇಖನ ಪ್ರಕಟವಾಗಿರುವ ವೆಬ್‌ಪುಟದಲ್ಲೇ ಸೋಷಿಯಲ್ ಬುಕ್‌ಮಾರ್ಕಿಂಗ್ ಉಪಕರಣಗಳಿಗೂ ಒಂದು ಕೊಂಡಿ ಇರುತ್ತದೆ. ಆ ಕೊಂಡಿಯ ಮೇಲೆ ಕ್ಲಿಕ್ ಮಾಡುವ ಮೂಲಕ ವಿವಿಧ ವೇದಿಕೆಗಳಲ್ಲಿ ಆ ಲೇಖನವನ್ನು ಹಂಚಿಕೊಳ್ಳುವುದು ಸಾಧ್ಯವಾಗುತ್ತದೆ.

ಅಂದಹಾಗೆ ಸೋಶಿಯಲ್ ಬುಕ್‌ಮಾರ್ಕಿಂಗ್ ಟೂಲ್‌ಗಳ ಸಹಾಯದಿಂದ ಸಾಮಾಜಿಕ ಸುದ್ದಿತಾಣಗಳಲ್ಲಿ ಮಾತ್ರವಲ್ಲದೆ ಫೇಸ್‌ಬುಕ್, ಟ್ವೀಟರ್, ಗೂಗಲ್ ಬಜ್, ಮೈಸ್ಪೇಸ್ ಮುಂತಾದ ಇನ್ನೂ ಅನೇಕ ತಾಣಗಳ ಮೂಲಕವೂ ನಿಮ್ಮ ಮೆಚ್ಚಿನ ಲೇಖನಗಳನ್ನು ಹಂಚಿಕೊಳ್ಳಬಹುದು. ನಿಮ್ಮದೇ ಆದ ಬ್ಲಾಗ್ ಅಥವಾ ಜಾಲತಾಣ ಇದ್ದರೆ ಅಲ್ಲಿ ಯಾವುದಾದರೂ ಸೋಶಿಯಲ್ ಬುಕ್‌ಮಾರ್ಕಿಂಗ್ ಟೂಲ್ ಅನ್ನು ಬಳಸುವುದು ಒಳ್ಳೆಯದು; ಆ ಮೂಲಕ ಓದುಗರು ನಿಮ್ಮ ಬರೆಹಗಳನ್ನು ಅಂತರಜಾಲದ ವಿವಿಧ ವೇದಿಕೆಗಳಲ್ಲಿ ಹಂಚಿಕೊಳ್ಳಲು ಸಹಾಯಮಾಡಿದಂತಾಗುತ್ತದೆ.

ಯಾಹೂ ಡಾಟ್ ಕಾಮ್‌ನ 'ಡಿಲೀಶಿಯಸ್' ಕೂಡ ಒಂದು ಬುಕ್‌ಮಾರ್ಕಿಂಗ್ ತಾಣ. ವಿಶ್ವವ್ಯಾಪಿ ಜಾಲದಲ್ಲಿ ನಿಮಗಿಷ್ಟವಾದುದನ್ನು ಹಂಚಿಕೊಳ್ಳುವುದು, ಹಾಗೂ ಇತರರು ಏನನ್ನು ಇಷ್ಟಪಡುತ್ತಿದ್ದಾರೆ ಎಂದು ನೋಡುವುದು ಈ ತಾಣದ ಮೂಲಕ ಸಾಧ್ಯ. ಸ್ಟಂಬಲ್‌ಅಪಾನ್ ಡಾಟ್ ಕಾಮ್ ಕೂಡ ಹೆಚ್ಚೂಕಡಿಮೆ ಇಂತಹುದೇ ಸೇವೆ ಒದಗಿಸುತ್ತಿದೆ.

ಪ್ಲಸ್ ಒನ್ ಫೇಸ್‌ಬುಕ್‌ನಲ್ಲಿ ನಮಗಿಷ್ಟವಾದ ಸಂದೇಶ, ಸುದ್ದಿ, ಚಿತ್ರ ಅಥವಾ ಪುಟವನ್ನು ಇಷ್ಟಪಡುವ ('ಲೈಕ್' ಮಾಡುವ) ಸೌಲಭ್ಯ ಇದೆ. ನಿಮ್ಮ ಗೆಳೆಯರು ಏನನ್ನು ಇಷ್ಟಪಟ್ಟಿದ್ದಾರೆ ಎನ್ನುವುದನ್ನು ತಿಳಿಯುವುದು ಕೂಡ ಸಾಧ್ಯ. ಅಷ್ಟೇ ಅಲ್ಲ, ಮೈಕ್ರೋಸಾಫ್ಟ್‌ನ ಬಿಂಗ್ ಸರ್ಚ್ ಇಂಜನ್‌ನಲ್ಲಿ ನೀವು ಏನನ್ನಾದರೂ ಹುಡುಕುವಾಗ ನಿಮ್ಮ ಫೇಸ್‌ಬುಕ್ ಗೆಳೆಯರು ಇಷ್ಟಪಟ್ಟ ಪುಟಗಳು ಕೂಡ ಕಾಣಸಿಗಲಿವೆ.

ಈ ಹೊಸ ಪರಿಕಲ್ಪನೆಯ ಹೆಸರೇ ಸೋಶಿಯಲ್ ಸರ್ಚ್. ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲಗಳನ್ನು (ಸೋಶಿಯಲ್ ನೆಟ್‌ವರ್ಕ್) ಶೋಧನ ಚಾಲಕ ಅಥವಾ ಸರ್ಚ್ ಇಂಜನ್‌ಗಳ ಜೊತೆಗೆ ಬೆಸೆಯುವ ವಿನೂತನ ಪ್ರಯತ್ನ ಇದು.

ಗೂಗಲ್ ಸರ್ಚ್‌ನಲ್ಲಿ ಕೂಡ 'ಪ್ಲಸ್ ಒನ್' ಎನ್ನುವ ಇಂತಹುದೇ ಸೌಲಭ್ಯ ಇದೆ. ನಿಮಗಿಷ್ಟವಾದ ವೆಬ್‌ಪುಟಗಳನ್ನು ಪ್ರತ್ಯೇಕವಾಗಿ ಗುರುತಿಸಿ ನಿಮ್ಮ ಆಯ್ಕೆ ಇತರರಿಗೂ ಕಾಣುವಂತೆ ಮಾಡುವುದು ಈ ಸೌಲಭ್ಯದ ವೈಶಿಷ್ಟ್ಯ. ಅದೇ ರೀತಿ ನಿಮ್ಮ ಮಿತ್ರರು ಇಷ್ಟಪಟ್ಟ ಪುಟಗಳನ್ನು ನೀವು ನೋಡುವುದು ಕೂಡ ಸಾಧ್ಯ.

ಏಪ್ರಿಲ್ ೨೬, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge