ಶನಿವಾರ, ಜೂನ್ 4, 2011

ಪರಿಸರ ದಿನ ವಿಶೇಷ: ವನ್ಯಜೀವಿ ಪ್ರೇಮ - ನಮ್ಮ ನಿಮ್ಮಲ್ಲಿ!?

ಟಿ. ಎಸ್. ಗೋಪಾಲ್

ನಾಳೆ (ಜೂನ್ ೫) ವಿಶ್ವ ಪರಿಸರ ದಿನ. ಈ ಸಂದರ್ಭದಲ್ಲಿ ಇಜ್ಞಾನ ವಿದ್ಯುನ್ಮಾನ ಪತ್ರಿಕೆಯ ಮೊದಲ ಸಂಚಿಕೆ 'ಪರಿಸರ ಸಂಚಿಕೆ'ಯಾಗಿ ಲಭ್ಯವಾಗಲಿದೆ. ನಿರೀಕ್ಷಿಸಿ!!!

"ಬದುಕನ್ನು ಕುರಿತು ನಿಜವಾದ ಪ್ರೀತಿಯಿದ್ದವನಿಗೆ ಮಾತ್ರ ಅದರ ಸಮೃದ್ಧಿಯಲ್ಲಿ, ವೈವಿಧ್ಯತೆಯಲ್ಲಿ ಆಸಕ್ತಿ ಹುಟ್ಟೀತು. ಅದಿಲ್ಲದೆ, ಬದುಕನ್ನು ಕೇವಲ ವ್ಯಾವಹಾರಿಕವಾಗಿ ಹಾಗೂ ಪ್ರಾಯೋಜನಿಕ ದೃಷ್ಟಿಯಿಂದ ನೋಡುವವನಿಗೆ ಅದರೊಳಗಿನ ಚಟುವಟಿಕೆಯಾಗಲೀ ಜೀವಂತಿಕೆಯಾಗಲೀ ಕಂಡೀತು ಹೇಗೆ?" - ಡಾ|| ಜಿ. ಎಸ್. ಶಿವರುದ್ರಪ್ಪ

ಕಾಡನ್ನು ಉಳಿಸಬೇಕು, ವನ್ಯಪ್ರಾಣಿಗಳನ್ನು ಕಾಪಾಡಬೇಕು ಎಂದು ಮಂತ್ರಿಗಳಿಂದ ಹಿಡಿದು ಶ್ರೀಸಾಮಾನ್ಯನವರೆಗೆ ಎಲ್ಲರೂ ಹೇಳುತ್ತಾರೆ. ಆದರೆ ಅದು ಹೇಗೆಂದು ಯಾರೂ ಯೋಚಿಸುವ ಗೋಜಿಗೆ ಹೋಗುವುದಿಲ್ಲ. ಹೇಗಿದ್ದರೂ ಅದು ಅರಣ್ಯ ಇಲಾಖೆಯವರ ಕೆಲಸ, ನೋಡಿಕೊಳ್ಳಲಿ - ಎಂಬುದೇ ಬಹುಜನರ ಆಲೋಚನೆ.

ಅಣೆಕಟ್ಟೆಗಳಿಂದ ಹಿಡಿದು ಬೃಹದಾಕಾರದ ವಿದ್ಯುತ್ ಕಂಬಗಳವರೆಗೆ ಸಕಲವೂ ಅರಣ್ಯಪ್ರದೇಶಗಳಲ್ಲೇ ಸ್ಥಾಪಿತವಾಗುವಂತೆ ಯೋಜನೆಗಳನ್ನು ರೂಪಿಸುವ ತಜ್ಞರು, ವೋಟುಗಳು ಮಾತ್ರವೇ ಶಾಶ್ವತ ಸತ್ಯವೆಂದು ಭ್ರಮಿಸಿರುವ ರಾಜಕಾರಣಿಗಳು, ಜನಪರ ಕಾರ್ಯಗಳ ನೆಪದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಕಾತರರಾಗಿರುವ ಅರಣ್ಯ ಇಲಾಖೆಯ ಅಧಿಕಾರಿಗಳು, ಕಾಡನ್ನೇ ನೋಡದೆ ವನ್ಯಜೀವಿ ಹಾಗೂ ಮಾನವನ ಸಹಜೀವನದ ಬಗೆಗೆ ಭಾಷಣಬಿಗಿಯುವ ಪರಿಸರವಾದಿ ಮಹಾಶಯರು ಮೊದಲಾಗಿ ಸಕಲರೂ ಅರಣ್ಯನಾಶದ ಪಾಲುದಾರರಾಗಿದ್ದಾರೆ.


ಸಾಮಾನ್ಯ ಜನರೂ ಅಷ್ಟೆ: ನಗರ ಪ್ರದೇಶಗಳಲ್ಲಿರುವ ಜನರಿಗೆ ಕಾಡು, ಕಾಡುಪ್ರಾಣಿಗಳೆಂದರೆ ಬೆರಗು ಹುಟ್ಟಿಸುವ ಸಂಗತಿಗಳು; ದಿನನಿತ್ಯದ ಯಾಂತ್ರಿಕ ಬದುಕಿನಿಂದ ಬೇಸತ್ತಾಗ ಎಂದೋ ಒಂದು ದಿನ ಮನತಣಿಸುವ ರಂಜನೆಯ ತಾಣಗಳು.
ಇನ್ನು ಕಾಡಿನ ಸುತ್ತಮುತ್ತ ಇರುವ ಹಳ್ಳಿಗಳ ಜನರಿಗೆ ಕಾಡು - ಅವಶ್ಯಕ ವಸ್ತುಗಳನ್ನು ಉಚಿತವಾಗಿ ಒದಗಿಸುವ ಉಗ್ರಾಣ ಮಾತ್ರ. ಕಾಡುಪ್ರಾಣಿಗಳಿರುವುದೂ ತಮಗಾಗಿ ಅಥವಾ ತಾವು ಬಿಟ್ಟುಕೊಟ್ಟಿರುವುದರಿಂದಲೇ ಎಂಬ ಔದಾರ್ಯ ಬೇರೆ. ತಾವು ಕಾಡಿಗೆ ನುಗ್ಗುವ ಬಗ್ಗೆ ಯಾರೂ ಏನೂ ಕೇಳುವಹಾಗಿಲ್ಲ, ತಮ್ಮಿಂದಾಗಿಯೇ ಕಾಡುಪ್ರಾಣಿಗಳ ವಸತಿಪ್ರದೇಶ ದಿನದಿನಕ್ಕೆ ಕುಗ್ಗತೊಡಗಿರುವುದರ ಬಗೆಗೆ ಚಿಂತೆಯಿಲ್ಲ. ಆದರೆ ಕಾಡುಪ್ರಾಣಿಗಳು ಮಾತ್ರ ಅಪ್ಪಿತಪ್ಪಿಯೂ ನಾಡಿಗೆ ಬರಕೂಡದು.
ಕಾಡು ಮಾನವನ ಅತಿಕ್ರಮಣಕ್ಕಾಗಿಯೇ ಇರುವುದು; ನಾಡಿಗೆ ವನ್ಯಪ್ರಾಣಿ ಬರುವುದು ಮರಣದಂಡನೆಗೆ ಅರ್ಹವಾದ ಅಪರಾಧ - ಎಂದು ಪ್ರಾಣಿಗಳಲ್ಲೇ ಸರ್ವಶ್ರೇಷ್ಠನಾದ ಮಾನವ ನಿರ್ಣಯಿಸಿಕೊಂಡುಬಿಟ್ಟಿದ್ದಾನೆ. ಹೀಗಾಗಿ ಕಾಡಿನ ಪ್ರಾಣಿಗಳು ಮನುಷ್ಯನ ದೃಷ್ಟಿಯಲ್ಲಿ ಉಪದ್ರವಕಾರಿಗಳಾಗಿಬಿಟ್ಟಿವೆ.

ಕೇವಲ ಖುಷಿಗಾಗಿಯೋ, ಮಾಂಸಕ್ಕಾಗಿಯೋ, ಚರ್ಮ-ದಂತ-ಹಾಳುಮೂಳುಗಳಿಗಾಗಿಯೋ ತಮ್ಮವರು ಬೇಟೆಗೆ ತೊಡಗುವುದರ ಬಗೆಗೆ ಅತಿನಿರ್ಲಿಪ್ತವಾಗಿರುವ ಜನತೆಯ ಈ ಇಬ್ಬಂದಿತನ, ಮನುಕುಲದ ಬುಡಕ್ಕೇ ಬೀಳಲಿರುವ ಕೊಡಲಿಪೆಟ್ಟೆಂಬುದನ್ನು ಎಷ್ಟು ಜನ ಅರಿತಿದ್ದಾರೋ ತಿಳಿಯದು.

ಕಾಡಿನ ಒಂದೊಂದು ವೃಕ್ಷಕ್ಕೆ ಬೀಳುತ್ತಿರುವ ಕೊಡಲಿಪೆಟ್ಟಿನೊಡನೆ ವನ್ಯಜೀವಿಗಳ ಉಸಿರೂ ಕುಗ್ಗತೊಡಗಿದೆ. ಬರಗಾಲ, ಭೂಕುಸಿತ, ಪ್ರವಾಹ, ಮಣ್ಣಿನ ಸವಕಳಿ, ಅಣೆಕಟ್ಟೆಗಳಲ್ಲಿ ತುಂಬಿದ ಹೂಳು - ಹೀಗೆ ಹಲವು ಹತ್ತು ರೂಪಗಳಲ್ಲಿ ಪ್ರಕೃತಿ ತಾನು ಸೃಷ್ಟಿಸಿರುವ ಅತಿಬುದ್ಧಿವಂತ ಪ್ರಾಣಿಯ ಅವಿವೇಕಕ್ಕೆ ಸಾಕ್ಷಿಗಳನ್ನು ಮುಂದಿಡುತ್ತಿದೆ.

ಸಹನೆ, ಮಾನವೀಯತೆ, ದಯೆಗಳು ಒತ್ತಟ್ಟಿಗಿರಲಿ. ತಮ್ಮ ಜೀವನಕ್ಕೆ ಮೂಲಾಧಾರವಾದ ಪ್ರಾಣವಾಯು, ಜಲ, ಆಹಾರ, ಔಷಧಗಳ ಅತ್ಯಮೂಲ್ಯ ಕೊಡುಗೆ ನೀಡುತ್ತಿರುವ ವನಸಂಪತ್ತು ಶಾಶ್ವತ ಸಂಪನ್ಮೂಲವಲ್ಲ; ಈ ಸಂಪತ್ತು ಉಳಿಯಬೇಕಾದರೆ ಕಾಡುಪ್ರಾಣಿಗಳನ್ನು ಉಳಿಸಿಕೊಳ್ಳಲೇಬೇಕು ಎಂಬ ಸತ್ಯದ ಅರಿವಿನಿಂದಾದರೂ ವನ-ವನ್ಯಜೀವಿಗಳ ಬಗೆಗೆ ಒಂದಿಷ್ಟು ಆಸಕ್ತಿಯನ್ನು ಬೆಳೆಸಿಕೊಳ್ಳುವುದು ಅತ್ಯವಶ್ಯಕ.

ನಮ್ಮ ಪೂರ್ವಿಕರು ಹಾವು, ಗರುಡ, ನವಿಲು, ಹುಲಿ, ಆನೆ ಮೊದಲಾಗಿ ಸಕಲ ವನ್ಯಜೀವಿಗಳಿಗೂ ದೈವಿಕ ನೆಲೆಯಲ್ಲಿ ಸ್ಥಾನಮಾನಗಳನ್ನು ಕಲ್ಪಿಸಿಕೊಟ್ಟಿದ್ದರು; ನಾಗರಬನ, ದೇವರಕಾಡುಗಳಂಥ ನೆಲೆಗಳನ್ನು ರೂಪಿಸಿದ್ದರು. ಮಾನವೀಯತೆ ಮರೆತರೆ ಹೋಗಲಿ, ದೈವಭೀತಿಯಿಂದಾದರೂ ಕಾಡುಪ್ರಾಣಿಗಳನ್ನು ಉಳಿಸಲೆಂಬ ಆಶಯ ಅವರದ್ದಾಗಿತ್ತು. ಆದರೆ ಈಗ, ಮಾನವನ ನೈತಿಕ ನೆಲೆಯೇ ಕುಸಿಯುತ್ತಿರುವಾಗ ಧಾರ್ಮಿಕ ಕಟ್ಟುಪಾಡನ್ನು ಲೆಕ್ಕಿಸುವುದೆಲ್ಲಿ ಬಂತು?

ಕೃಷ್ಣಮೃಗಗಳ (ಬ್ಲಾಕ್‌ಬಕ್) ಬಗೆಗೆ ಆತ್ಮೀಯತೆ ತೋರುವ ರಾಜಸ್ಥಾನದ ಬಿಷ್ಣೋಯಿ ಜನಾಂಗದವರಾಗಲಿ, ಹೆಜ್ಜಾರ್ಲೆಗಳ (ಪೆಲಿಕಾನ್) ಬಗೆಗೆ ಅಪಾರ ಮಮತೆಯುಳ್ಳ ಕೊಕ್ಕರೆಬೆಳ್ಳೂರಿನ ಜನತೆಯಾಗಲಿ ಇಂದು ಎಲ್ಲರ ಆದರ್ಶವಾಗಬೇಕಿದೆ. ವನ್ಯಜೀವಿಗಳ ಬಗೆಗೆ ನಮ್ಮನಿಮ್ಮಲ್ಲಿ ಪ್ರೀತಿಮೂಡದ ಹೊರತು ವನಸಂಪತ್ತಿನ ರಕ್ಷಣೆ ಅಸಾಧ್ಯ.

ನಮ್ಮ ಸ್ವಾರ್ಥಲಾಲಸೆಗಳನ್ನು ಬದಿಗಿರಿಸಿ ಅರಣ್ಯದ ಪರವಾಗಿ, ಕಾಡುಪ್ರಾಣಿಗಳ ಪರವಾಗಿ ಚಿಂತನೆ ಮಾಡುವುದು ಇಂದಿನ ಅಗತ್ಯವಾಗಿದೆ. ಇದರಿಂದ ನಾವು ಅವುಗಳಿಗೇನೋ ಉಪಕಾರ ಮಾಡುತ್ತಿರುವೆವೆಂದು ಭ್ರಮಿಸಬೇಕಾಗಿಲ್ಲ. ಆದರೆ ಇದು, ನಮ್ಮ ಪೀಳಿಗೆಯ ಬಗೆಗೆ ಪೂರ್ವಿಕರು ತೋರುತ್ತಿದ್ದ ಕಾಳಜಿಯನ್ನೇ ಮುಂದುವರೆಸುತ್ತಿರುವುದರ ಶುಭಸೂಚನೆ ಎಂದು ಧಾರಾಳವಾಗಿ ಹೇಳಬಹುದು.

ಪ್ರಸಿದ್ಧ ಪರಿಸರಶಾಸ್ತ್ರಜ್ಞ ಡಾ| ಎಚ್. ಆರ್. ಕೃಷ್ಣಮೂರ್ತಿಯವರು ಹೇಳುವಂತೆ "ಈ ಲೋಕದಿಂದ ಮನುಷ್ಯವರ್ಗ ಅಳಿದುಹೋದರೆ ವನ್ಯಜೀವಿಗಳು ತಮ್ಮ ಪಾಡಿಗೆ ತಾವು ಆರಾಮವಾಗಿ ಬದುಕಿಯಾವು; ವನ್ಯಜೀವಿಗಳೇನಾದರೂ ಈ ಪ್ರಪಂಚದಿಂದ ಕಾಣೆಯಾದರೆ ಮಾತ್ರ ಅವುಗಳ ಹಿಂದೆಯೇ ಮನುಷ್ಯನಿಗೂ ವಿನಾಶ ಖಂಡಿತ." ಈ ಸತ್ಯವನ್ನು ಮನಗಂಡು ವನ್ಯಪ್ರಾಣಿಗಳನ್ನೂ ಅವುಗಳ ನೆಲೆಯಾದ ಅರಣ್ಯಗಳನ್ನೂ ಸಂರಕ್ಷಿಸಬೇಕಾದುದು ನಮ್ಮ ತಕ್ಷಣದ ಕರ್ತವ್ಯ. ಅರಣ್ಯದ ಬಗೆಗಿನ ನಮ್ಮ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಿಕೊಳ್ಳುವುದೇ ಈ ನಿಟ್ಟಿನಲ್ಲಿ ನಾವು ಮಾಡಬೇಕಾದ ಮೊದಲ ಕೆಲಸ.

ಈ ಲೇಖನದ ಮೂಲರೂಪ 'ನಿಸರ್ಗ' ಪತ್ರಿಕೆಯಲ್ಲಿ ಈ ಹಿಂದೆ ಪ್ರಕಟವಾಗಿತ್ತು

ಕಾಮೆಂಟ್‌ಗಳಿಲ್ಲ:

badge