ಮಂಗಳವಾರ, ಆಗಸ್ಟ್ 9, 2016

ಸಿಮ್ ಕಾರ್ಡಿನ ಕಾಲು ಶತಮಾನ

ಟಿ. ಜಿ. ಶ್ರೀನಿಧಿ


ಮೊಬೈಲ್ ಸಂಪರ್ಕ ಪಡೆಯಲು ಏನೆಲ್ಲ ಬೇಕು? ಮೊದಲಿಗೆ ಒಂದು ಮೊಬೈಲ್ ಫೋನ್ ಬೇಕು, ಆಮೇಲೊಂದು ಸಿಮ್ ಕಾರ್ಡ್ ಬೇಕು!

ಹೌದು, ನಿಮ್ಮ ಮೊಬೈಲ್ ಫೋನು ಯಾವುದೇ ಇರಲಿ - ಸ್ಮಾರ್ಟ್ ಆಗಿರಲಿ ಇಲ್ಲದಿರಲಿ - ಜಿಎಸ್‌ಎಂ ತಂತ್ರಜ್ಞಾನ ಬಳಸುವುದಾದರೆ ಅದರಲ್ಲೊಂದು ಸಿಮ್ ಅಂತೂ ಇರಲೇಬೇಕು. 'ಸಿಮ್' ಎಂಬ ಹೆಸರು 'ಸಬ್‌ಸ್ಕ್ರೈಬರ್  ಐಡೆಂಟಿಫಿಕೇಶನ್ ಮಾಡ್ಯೂಲ್' (ಚಂದಾದಾರರನ್ನು ಗುರುತಿಸುವ ಘಟಕ) ಎನ್ನುವುದರ ಹ್ರಸ್ವರೂಪ. ಹೆಸರೇ ಹೇಳುವಂತೆ ಚಂದಾದಾರರನ್ನು ಗುರುತಿಸಿ ಮೊಬೈಲ್ ಜಾಲದೊಡನೆ ಅವರ ಸಂಪರ್ಕ ಏರ್ಪಡಿಸುವಲ್ಲಿ ಈ ಪುಟ್ಟ ಬಿಲ್ಲೆಯದು ಮಹತ್ವದ ಪಾತ್ರ.

ಈ ವಿಶಿಷ್ಟ ಸಾಧನ ಸೃಷ್ಟಿಯಾಗಿ ಇದೀಗ ಇಪ್ಪತ್ತೈದು ವರ್ಷ. ತಂತ್ರಜ್ಞಾನ ಲೋಕದ ಮಟ್ಟಿಗೆ ಇದೊಂದು ಬಹುದೊಡ್ಡ ಅವಧಿ. ಇಷ್ಟೆಲ್ಲ ಸಮಯದವರೆಗೂ ಚಾಲ್ತಿಯಲ್ಲಿ ಉಳಿದುಕೊಂಡಿರುವುದು ಸಿಮ್‌ನ ಹಿರಿಮೆಯೇ ಸರಿ!


ಕಾರ್ಯಾಚರಣೆ ಹೇಗೆ?
ನಮ್ಮ ದೇಶವೂ ಸೇರಿದಂತೆ ಪ್ರಪಂಚದ ಬಹಳಷ್ಟು ಭಾಗಗಳಲ್ಲಿ ಮೊಬೈಲ್ ಸಂಪರ್ಕಕ್ಕಾಗಿ ವ್ಯಾಪಕ ಬಳಕೆಯಲ್ಲಿರುವುದು ಗ್ಲೋಬಲ್ ಸಿಸ್ಟಂ ಫಾರ್ ಮೊಬೈಲ್ ಕಮ್ಯೂನಿಕೇಶನ್, ಅಂದರೆ ಜಿಎಸ್‌ಎಂ ತಂತ್ರಜ್ಞಾನ. ಈ ತಂತ್ರಜ್ಞಾನ ಬಳಸುವ ಫೋನುಗಳಲ್ಲಿ ಸಿಮ್ ಬಳಕೆ ಅನಿವಾರ್ಯ. ಇಲ್ಲಿ ಮೊಬೈಲ್ ಜಾಲದ ಸಂಪರ್ಕ ಸಿಮ್ ಮೇಲೆ ಅವಲಂಬಿತವಾಗಿರುವುದರಿಂದ ಯಾವ ಹ್ಯಾಂಡ್‌ಸೆಟ್‌ನಲ್ಲಿ ಬೇಕಿದ್ದರೂ ನಮ್ಮ ಸಿಮ್ ಬಳಸುವುದು ಸಾಧ್ಯ.

ಫೋನ್ ಯಾವುದೇ ಇರಲಿ, ಅದರಲ್ಲಿ ಸಿಮ್ ಹಾಕಿದ ಮೇಲೆ ಮೊಬೈಲ್ ಸಂಪರ್ಕ ಏರ್ಪಡಬೇಕು. ಅದಕ್ಕಾಗಿ ಮೊದಲು ಆ ಸಿಮ್ ಬಳಸುತ್ತಿರುವವರು ನಿಜಕ್ಕೂ ಸಂಸ್ಥೆಯೊಂದರ ಚಂದಾದಾರರೋ ಇಲ್ಲವೋ ಎಂದು ಪರೀಕ್ಷಿಸಬೇಕಾದ್ದು ಅತ್ಯಗತ್ಯ. ಈ ಉದ್ದೇಶಕ್ಕಾಗಿ ಬಳಕೆಯಾಗುವ ಇಂಟರ್‌ನ್ಯಾಶನಲ್ ಮೊಬೈಲ್ ಸಬ್‌ಸ್ಕ್ರೈಬರ್ ಐಡೆಂಟಿಟಿ (ಐಎಂಎಸ್‌ಐ) ಸಂಖ್ಯೆ ಸಿಮ್‌ನಲ್ಲಿ ಶೇಖರವಾಗಿರುತ್ತದೆ. ಈ ಸಂಖ್ಯೆಯನ್ನು ಬಳಸಿಕೊಂಡು ಮೊಬೈಲ್ ಚಂದಾದಾರರನ್ನು ಗುರುತಿಸಿ ಅವರ ದೂರವಾಣಿಗೆ ಜಾಲದ ಸಂಪರ್ಕ ಕಲ್ಪಿಸಿಕೊಡುವ ಕೆಲಸವನ್ನು ಸಿಮ್ ಮಾಡುತ್ತದೆ. ಯಾವ ಜಾಲವನ್ನು ಸಂಪರ್ಕಿಸಬೇಕು ಎಂದು ತೀರ್ಮಾನಿಸಲೂ ಈ ಮಾಹಿತಿ ಬಳಕೆಯಾಗುತ್ತದೆ.

ಇಷ್ಟೆಲ್ಲ ಕೆಲಸಮಾಡುವ ಸಿಮ್‌ಗೂ ಒಂದು ಗುರುತು ಬೇಕಲ್ಲ, ಇದಕ್ಕಾಗಿ ಇಂಟಿಗ್ರೇಟೆಡ್ ಸರ್ಕ್ಯೂಟ್ ಕಾರ್ಡ್ ಐಡೆಂಟಿಫೈಯರ್ (ಐಸಿಸಿಐಡಿ) ಎಂಬ ಸಂಖ್ಯೆ ಬಳಕೆಯಾಗುತ್ತದೆ. ಕಾಲೇಜಿನ ವಿದ್ಯಾರ್ಥಿಗಳಿಗೆ, ಕಚೇರಿ ಉದ್ಯೋಗಿಗಳಿಗೆಲ್ಲ ಇರುವಂತೆ ಇದು ಸಿಮ್ ಕಾರ್ಡಿನ ಐಡಿ ಕಾರ್ಡು. ಪ್ರಪಂಚದಲ್ಲಿರುವ ಪ್ರತಿಯೊಂದು ಸಿಮ್‌ಗೂ ಪ್ರತ್ಯೇಕ ಐಸಿಸಿಐಡಿ ಇರಬೇಕು ಎನ್ನುವುದು ನಿಯಮ. ಅಂದಹಾಗೆ ಫೋನುಗಳ ಸುದ್ದಿ ಬಂದಾಗ ಐಎಂಇಐ ಎನ್ನುವ ಇನ್ನೊಂದು ಸಂಖ್ಯೆಯ ಪ್ರಸ್ತಾಪವೂ ಬರುತ್ತದಲ್ಲ, ಅದಕ್ಕೂ ಸಿಮ್‌ಗೂ ಯಾವ ಸಂಬಂಧವೂ ಇಲ್ಲ. 'ಇಂಟರ್‌ನ್ಯಾಶನಲ್ ಮೊಬೈಲ್ ಇಕ್ವಿಪ್ಮೆಂಟ್ ಐಡೆಂಟಿಟಿ' ಎಂಬ ಹೆಸರಿನ ಹ್ರಸ್ವರೂಪವಾದ ಐಎಂಇಐ, ಪ್ರಪಂಚದಲ್ಲಿರುವ ಪ್ರತಿಯೊಂದು ಮೊಬೈಲ್ ದೂರವಾಣಿಯನ್ನೂ ಪ್ರತ್ಯೇಕವಾಗಿ ಗುರುತಿಸುವ ಸಂಖ್ಯೆ.

ಸಿಮ್ ಸಮಾಚಾರ
ಈಗಿನ ಫೋನುಗಳಲ್ಲಿ ಗಿಗಾಬೈಟ್‌ಗಟ್ಟಲೆ ಮಾಹಿತಿ ಶೇಖರಣಾ ಸಾಮರ್ಥ್ಯ, ಅಂದರೆ ಮೆಮೊರಿ, ಇರುವುದು ನಮಗೆಲ್ಲ ಗೊತ್ತೇ ಇದೆ. ಅದರ ಜೊತೆಗೆ ಸಿಮ್‌ನಲ್ಲಿ ಕೂಡ ಅಲ್ಪಪ್ರಮಾಣದ (ಕೆಲವು ಕಿಲೋಬೈಟ್‌ಗಳಷ್ಟು) ಮಾಹಿತಿ ಶೇಖರಣಾ ಸಾಮರ್ಥ್ಯ ಇರುತ್ತದೆ. ನಮ್ಮ ಮೊಬೈಲಿನಲ್ಲಿ ದಾಖಲಾಗಿರುವ ದೂರವಾಣಿ ಸಂಖ್ಯೆಗಳು ಕೆಲವೊಮ್ಮೆ ಸಿಮ್‌ನಲ್ಲೂ ಶೇಖರವಾಗುತ್ತವಲ್ಲ (ಫೋನ್ ಬದಲಿಸುವಾಗ ನಮ್ಮ ಬಳಗದ ದೂರವಾಣಿ ಸಂಖ್ಯೆಗಳನ್ನು ಸಿಮ್‌ಗೆ ವರ್ಗಾಯಿಸುವ - ಹಳೆಯ - ಅಭ್ಯಾಸ ನೆನಪಿಸಿಕೊಳ್ಳಿ), ಅವು ಇದೇ ಮೆಮೊರಿಯನ್ನು ಬಳಸುತ್ತವೆ. ಫೋನ್ ಮೆಮೊರಿ ಹೋಲಿಕೆಯಲ್ಲಿ ಸಿಮ್ ಮೊಮೊರಿ ಸಾಮರ್ಥ್ಯ ತೀರಾ ಕಡಿಮೆಯಾದ್ದರಿಂದ ಸ್ಮಾರ್ಟ್‌ಫೋನ್ ಬಳಕೆದಾರರ ದೃಷ್ಟಿಯಲ್ಲಿ ಅದು ಬಹುತೇಕ ನಿರುಪಯುಕ್ತವೆಂದೇ ಹೇಳಬೇಕು. ಆದರೆ ಈ ಮೆಮೊರಿಯನ್ನು ಮೊಬೈಲ್ ಸಂಸ್ಥೆಗಳೇ ಬಳಸುವುದು ಸಾಧ್ಯ: ರೋಮಿಂಗ್‌ನಲ್ಲಿರುವಾಗ ನಮ್ಮ ದೂರವಾಣಿ ಯಾವ ಸಂಸ್ಥೆಯ ಸಂಪರ್ಕ ಬಳಸಬೇಕು ಎಂದು ನಿರ್ದೇಶಿಸುವಂತಹ ಅಂಶಗಳನ್ನು ಅವು ಸಿಮ್ ಮೆಮೊರಿಯಲ್ಲಿ ಉಳಿಸಿಡಬಹುದು.

ಮೊಬೈಲ್ ತಂತ್ರಜ್ಞಾನ ಬೆಳೆದಂತೆ ಏನೆಲ್ಲ ಬದಲಾವಣೆಗಳಾಗಿವೆಯಲ್ಲ, ಆ ಸಾಲಿನಲ್ಲಿ ಸಿಮ್ ಗಾತ್ರದ ಬದಲಾವಣೆಗೂ ಸ್ಥಾನವಿದೆ. ಮೊದಮೊದಲು ಮಾರುಕಟ್ಟೆಗೆ ಬಂದ ಸಿಮ್‌ಗಳು ಇಂದಿನ ಕ್ರೆಡಿಟ್ ಕಾರ್ಡಿನಷ್ಟು ದೊಡ್ಡದಾಗಿದ್ದವಂತೆ! ಆಮೇಲೆ ಬಂದದ್ದು, ಸಾಕಷ್ಟು ಸಮಯ ಚಲಾವಣೆಯಲ್ಲಿದ್ದದ್ದು, ಪುಟ್ಟ ಗಾತ್ರದ 'ಮಿನಿ ಸಿಮ್'ಗಳು. ಮಿನಿ ಸಿಮ್ ಗಾತ್ರದ ಅರ್ಧದಷ್ಟಿರುವ 'ಮೈಕ್ರೋ ಸಿಮ್', ಹಾಗೂ ಅದಕ್ಕಿಂತ ಚಿಕ್ಕದಾದ 'ನ್ಯಾನೋ ಸಿಮ್'ಗಳು ಇದೀಗ ವ್ಯಾಪಕವಾಗಿ ಬಳಕೆಯಲ್ಲಿವೆ. ಸಿಮ್ ಗಾತ್ರ ಇಷ್ಟೆಲ್ಲ ಬದಲಾಗಿದೆಯಲ್ಲ, ಅದರ ಗಾತ್ರಕ್ಕೂ ಕಾರ್ಯಾಚರಣೆಯ ವಿಧಾನಕ್ಕೂ ಮೊದಲಿಂದಲೇ ಯಾವ ಸಂಬಂಧವೂ ಇರಲಿಲ್ಲ ಎನ್ನುವುದು ಗಮನಾರ್ಹ ಸಂಗತಿ. ಅಂದರೆ, ಸಿಮ್ ಗಾತ್ರ ಕಡಿಮೆಯಾಗುತ್ತಿರುವುದು ಮೊಬೈಲ್ ಫೋನಿನೊಳಗೆ ಕಡಿಮೆಯಾಗುತ್ತಿರುವ ಸ್ಥಳಾವಕಾಶಕ್ಕೆ ಹೊಂದಿಕೊಳ್ಳಲಷ್ಟೆ ಎನ್ನಬಹುದು. ದೊಡ್ಡ ಸಿಮ್ ಸುತ್ತಲಿನ ಪ್ಲಾಸ್ಟಿಕ್ ಕತ್ತರಿಸಿ ಚಿಕ್ಕದಾಗಿಸುವುದು, ಅಡಾಪ್ಟರ್ ಬಳಸಿ ಸಣ್ಣ ಸಿಮ್ ಅನ್ನು ದೊಡ್ಡ ಸಿಮ್ ಕಿಂಡಿಯೊಳಗೆ ತೂರಿಸುವುದೆಲ್ಲ ಸಾಧ್ಯವಾಗಲಿಕ್ಕೂ ಇದೇ ಕಾರಣ.

ಲಾಕ್ಡ್ ಸಿಮ್? ಹಾಗೆಂದರೇನು?
ಈಗಾಗಲೇ ಹೇಳಿದಂತೆ ಸಿಮ್ ಬಳಕೆ ಅನಿವಾರ್ಯವಾಗಿರುವುದು ಜಿಎಸ್‌ಎಂ ತಂತ್ರಜ್ಞಾನ ಬಳಸುವ ಫೋನುಗಳಲ್ಲಿ. ಕೆಲವರ್ಷಗಳ ಹಿಂದೆ ಭಾರತದಲ್ಲೂ ಸುದ್ದಿಮಾಡಿತ್ತಲ್ಲ ಸಿಡಿಎಂಎ ತಂತ್ರಜ್ಞಾನ, ಅದನ್ನು ಬಳಸುವ ಜಾಲಗಳಲ್ಲಿ ಸಿಮ್ ಬಳಕೆ ಇಲ್ಲ. ಅಲ್ಲಿ ಮೊಬೈಲ್ ಸಂಪರ್ಕ ನೇರವಾಗಿ ಹ್ಯಾಂಡ್‌ಸೆಟ್ ಅನ್ನೇ ಅವಲಂಬಿಸಿರುತ್ತದೆ. ಹಾಗಾಗಿ ಬಳಕೆದಾರರು ತಮ್ಮ ಹ್ಯಾಂಡ್‌ಸೆಟ್ ಬದಲಿಸುವುದು ಅಷ್ಟು ಸುಲಭದ ಕೆಲಸವಲ್ಲ.

ಆದರೆ ನೀವು ಕೊಂಡ ಫೋನಿನಲ್ಲಿ ಇದೇ ಸಂಸ್ಥೆಯ ಸಂಪರ್ಕ ಬಳಸಬೇಕು ಎನ್ನುವಂತಹ ನಿರ್ಬಂಧ ಜಿಎಸ್‌ಎಂ ಸಂಪರ್ಕಗಳಲ್ಲೂ ಇರುವುದು ಸಾಧ್ಯವಿದೆ (ಇದು ವಿದೇಶಗಳಲ್ಲಿ ಸರ್ವೇಸಾಮಾನ್ಯ; ಆದರೆ ಭಾರತದ ಮಟ್ಟಿಗೆ ಈ ಪರಿಕಲ್ಪನೆ ಹೊಸದು). ಇಂತಹ ಸಂದರ್ಭಗಳಲ್ಲೂ ಸಿಮ್‌ನಲ್ಲಿ ಬದಲಾವಣೆಯೇನೂ ಇರುವುದಿಲ್ಲ ಎನ್ನುವುದು ವಿಶೇಷ: ಮೊಬೈಲ್ ಸೇವೆ ಒದಗಿಸುವ ಸಂಸ್ಥೆಗಳು ಹ್ಯಾಂಡ್‌ಸೆಟ್‌ನಲ್ಲಿ ಅಳವಡಿಸುವ ತಂತ್ರಾಂಶದ ಮೂಲಕ ಈ ನಿರ್ಬಂಧವನ್ನು ಅನುಷ್ಠಾನಕ್ಕೆ ತರುತ್ತವೆ. ಕಡಿಮೆ ಬೆಲೆಗೆ ವಿದೇಶದಿಂದ ಫೋನು ತಂದು 'ಅನ್‌ಲಾಕ್' ಮಾಡಿಸುತ್ತಾರಲ್ಲ, ಅವರು ಈ ತಂತ್ರಾಂಶದ ನಿರ್ಬಂಧವನ್ನು ತೆಗೆಸುತ್ತಾರೆ ಅಷ್ಟೆ.  

ಸುರಕ್ಷತೆ
ಸಿಮ್ ಕಾರ್ಡ್ ಪ್ರಯೋಜನಗಳು ಏನೇ ಇದ್ದರೂ ಅದರೊಡನೆ ಬರುವ ತೊಂದರೆಗಳೂ ಬೇಕಾದಷ್ಟಿವೆ. ಮೊದಲನೆಯ ತೊಂದರೆಯೆಂದರೆ ಅದನ್ನು ಜೋಪಾನವಾಗಿ ಕಾಪಾಡಿಕೊಳ್ಳುವುದು - ಮೊಬೈಲಿನ ಒಳಗಿರುವಾಗ ಹೆಚ್ಚು ಯೋಚನೆಯಿಲ್ಲವಾದರೂ ಅದರಿಂದ ಹೊರತೆಗೆದಾಗ ಈ ಪುಟ್ಟ ಬಿಲ್ಲೆಯ ಯೋಗಕ್ಷೇಮ ನೋಡಿಕೊಳ್ಳುವುದು ಕಷ್ಟವೇ ಸರಿ. ಅದೆಲ್ಲಾದರೂ ಹಾಳಾದರೆ ಅಥವಾ ಕಳೆದುಹೋದರೆ ಬದಲಿ ಸಿಮ್ ಪಡೆಯುವುದು ಸಾಕಷ್ಟು ಶ್ರಮಬೇಡುವ ಕೆಲಸವೇ.

ನಾವು ಜೋಪಾನವಾಗಿ ನೋಡಿಕೊಳ್ಳದಿದ್ದರೆ ಸಿಮ್ ದುರ್ಬಳಕೆಯಾಗುವ ಸಾಧ್ಯತೆಗಳೂ ಇರುತ್ತವೆ. ಯಾರದೋ ಹೆಸರಿನಲ್ಲಿರುವ ಸಿಮ್ ಕಾರ್ಡ್ ನಕಲಿಸಿಕೊಂಡು ಅವರ ಮೊಬೈಲ್ ಸಂಪರ್ಕವನ್ನು ಬೇರೆ ಯಾರೋ ಬಳಸಿದಂತಹ ಹಲವು ಪ್ರಕರಣಗಳು ಆಗಿಂದಾಗ್ಗೆ ಕೇಳಿಬರುತ್ತಿರುತ್ತವೆ. 'ಕ್ಲೋನಿಂಗ್' ಎಂದೇ ಪರಿಚಿತವಾದ ಈ ದುಷ್ಕೃತ್ಯದ ಹಿಂದೆ ಸಮಾಜವಿರೋಧಿ ಶಕ್ತಿಗಳ ಪಾತ್ರವೇ ಹೆಚ್ಚಿರುವುದು ಆತಂಕಕಾರಿ ವಿಷಯ.

ಸಿಮ್ ಭವಿಷ್ಯ
ಇಂದಿನ ಮೊಬೈಲ್ ತಂತ್ರಾಂಶಗಳು ಮಾಡದ ಕೆಲಸವೇ ಇಲ್ಲ ಎನ್ನಬೇಕು. ಹಾಗಿರುವಾಗ ಸಿಮ್ ಯಾಕಿನ್ನೂ ಯಂತ್ರಾಂಶವಾಗಿಯೇ ಉಳಿದಿದೆ? ಈ ಪ್ರಶ್ನೆಯನ್ನು ತಂತ್ರಜ್ಞರೂ ಕೇಳಿಕೊಳ್ಳುತ್ತಿದ್ದಾರೆ, ಹಾಗೂ ಅದರ ಪರಿಣಾಮವಾಗಿ ಸಿಮ್ ಮಾಡುವ ಕೆಲಸವನ್ನು ತಂತ್ರಾಂಶವೊಂದಕ್ಕೆ ವಹಿಸಿಕೊಡುವ ಪ್ರಯತ್ನಗಳೂ ಸಾಗಿವೆ. ತಂತ್ರಜ್ಞಾನ ಕ್ಷೇತ್ರದ ದೈತ್ಯ ಸಂಸ್ಥೆಗಳಲ್ಲೊಂದಾದ ಆಪಲ್ ಸೇರಿದಂತೆ ಹಲವು ಮಂದಿ ಇಂತಹ ಪ್ರಯತ್ನಗಳಲ್ಲಿ ತೊಡಗಿಕೊಂಡಿದ್ದಾರೆ.

ಇಂದು ನಾವು ಬಳಸುವ ಸಿಮ್ ಕಾರ್ಡ್ ಬದಲಿಗೆ ತಂತ್ರಾಂಶ ರೂಪದ 'ಸಾಫ್ಟ್ ಸಿಮ್' ಅನ್ನು ಮೊಬೈಲ್ ಫೋನುಗಳಲ್ಲಿ ಅಳವಡಿಸಲು ಸಾಧ್ಯ ಎಂದು ಈಗಾಗಲೇ ಪ್ರಾಯೋಗಿಕವಾಗಿ ತೋರಿಸಲಾಗಿದೆ. ಸಿಮ್ ಮಾಡುವ ಕೆಲಸವನ್ನು ಮೊಬೈಲ್ ಫೋನೇ ಮಾಡಲಿ, ಅದು ಸಂಪರ್ಕಿಸಬೇಕಾದ ಮೊಬೈಲ್ ಜಾಲ ಯಾವುದು, ಬಳಕೆದಾರರ ಐಎಂಎಸ್‌ಐ ಏನು ಎನ್ನುವಂತಹ ಪ್ರಶ್ನೆಗಳಿಗೆ ಮೊಬೈಲ್ ಆಪ್ ಮೂಲಕವೇ ಉತ್ತರಿಸಿದರೆ ಆಯಿತು ಎನ್ನುವುದು ಈ ಪ್ರಯೋಗದ ಹಿನ್ನೆಲೆ. ವೆಬ್‌ಸೈಟಿನಲ್ಲಿ ನೋಂದಾಯಿಸಿ ಮನೆಬಾಗಿಲಿಗೆ ಸಿಮ್ ತರಿಸಿಕೊಳ್ಳುವುದು ಗೊತ್ತಲ್ಲ, ಈ ಪ್ರಯೋಗ ವ್ಯಾಪಕ ಬಳಕೆಗೆ ಬಂದರೆ ನಮ್ಮ ಮೊಬೈಲ್ ಸಂಪರ್ಕ ಬದಲಿಸುವುದು ಅದಕ್ಕಿಂತ ಸುಲಭವಾಗುತ್ತದೋ ಏನೋ!

ಆಗಸ್ಟ್ ೨೦೧೬ರ ತುಷಾರದಲ್ಲಿ ಪ್ರಕಟವಾದ ಲೇಖನ

1 ಕಾಮೆಂಟ್‌:

Chinnamma baradhi ಹೇಳಿದರು...

ಟಿ. ಜಿ. ಶ್ರೀನಿಧಿಯವರ "ಸಿಮ್ ಕಾರ್ಡಿನ ಕಾಲು ಶತಮಾನ " ಬಹಳ ಮಾಹಿತಿಪೂರ್ಣವಾಗಿತ್ತು.
ಮೊಬೈಲ್ ಫೋನ್ ಮತ್ತು ಅದರ ಟೆಕ್ನೋಲಜಿ ಬಗೆಗಿನ, ಕನ್ನಡದಲ್ಲಿನ ಈ ಬರಹ ಇ೦ಗ್ಲೀಷಿಗಿ೦ತ ಸರಾಗವಾಗಿ ಓದಿಸಿಕೊ೦ಡು ಹೋಯ್ತು!
ಕನ್ನಡದಲ್ಲಿನ ಹ್ರಸ್ವರೂಪಗಳು ಸೂಪರ್.

badge