ಶುಕ್ರವಾರ, ಜುಲೈ 22, 2016

ಗೋಧಿಯ ಕುರಿತು ಗೊಂದಲ ಬೇಕಿಲ್ಲ

ಡಾ. ಶರಣಬಸವೇಶ್ವರ ಅಂಗಡಿ

ಗೆಳೆಯ ಗೋವಿಂದ ಒಮ್ಮೆ ತಮಾಷೆಗೆ 'ಗೋಧಿ ಅದೇ ವ್ಹೀಟ್‌ನಲ್ಲಿ ಹೀಟ್ ಇದೆ, ರೈಸ್‌ನಲ್ಲಿ ಐಸ್ ಇದೆ, ಅದಕ್ಕೇ ಚಪಾತಿ ತಿಂದರೆ ಉಷ್ಣ, ಅನ್ನವುಂಡರೆ ತಂಪು' ಅಂದಿದ್ದ. ಮೊನ್ನೆ, ತಮ್ಮನ್ನು ಯೋಗಗುರು ಎಂದು ಕರೆದುಕೊಳ್ಳುವ ಅನಂತ್‌ಜಿ ಎನ್ನುವ ವ್ಯಕ್ತಿ ಗೋಧಿಯನ್ನು ನಿಂದಿಸುವುದಲ್ಲದೇ, ಅಕ್ಕಿಯನ್ನು ಅನಿಷ್ಟವೆಂದದ್ದು, ದೇಶದ ಕೃಷಿಯನ್ನು, ಹಸಿರು ಕ್ರಾಂತಿಯನ್ನು ನಿರಾಧಾರವಾಗಿ, ಅವೈಜ್ಞಾನಿಕವಾಗಿ ಹಿಗ್ಗಾಮುಗ್ಗಾ ಟೀಕಿಸಿದ್ದನ್ನು ಕೇಳಿದಾಗ ಗೋವಿಂದನ ಹಳೆಯ ಜೋಕ್ ನೆನಪಾಯ್ತು. ಹಿಂದೊಮ್ಮೆ ಇದೇ ಅನಂತ್‌ಜಿ ಗೋಧಿಯನ್ನು ದುಷ್ಟ ಧಾನ್ಯವೆಂದಿದ್ದು ಸುದ್ದಿಯಾಗಿತ್ತು. ಅದಕ್ಕೆ(ಅವರೇ ಹೇಳಿದ್ದು) ಬಂದ ಸಾವಿರಾರು ಫೋನ್ ಕರೆಗಳಿಗೆ, ಮತ್ತು ಮಿಸ್ಡ್‌ಕಾಲ್‌ಗಳಿಗೆ ಪ್ರತಿಕ್ರಿಯೆಯಾಗಿ ಸುಮಾರು ಅರ್ಧಗಂಟೆಯ ಒಂದು ಆಡಿಯೋ ಕ್ಲಿಪ್ ತೇಲಿಬಿಟ್ಟಿದ್ದಾರೆ. ಅದನ್ನು ವಾಟ್ಸಾಪ್‌ನಲ್ಲಿ ಕೇಳುವ ಅವಕಾಶ ನನಗೂ ಸಿಕ್ಕಿತು. ಅವರ ಆ 'ಜ್ಞಾನ'ದಲ್ಲಿ ಹೇರಳ ತಪ್ಪುಗಳಿವೆ. ಅದು ಜನಸಾಮಾನ್ಯರಿಗೆ ತಿಳಿದಿರಲಿ ಎಂದು ಈ ಲೇಖನದ ಉದ್ದೇಶ.


ಮೊದಲನೆಯದಾಗಿ ವೇದ ಕಾಲದಲ್ಲಿ, 'ಪುರಾಣಗಳಲ್ಲಿ ಗೋಧಿಯನ್ನು ಗೋಧುಮ ಎಂದು ಉಲ್ಲೇಖಿಸಿದೆಯಲ್ಲ?' ಎನ್ನುವ ಓದುಗರೊಬ್ಬರ ಪ್ರಶ್ನೆಗೆ ಉತ್ತರವಾಗಿ ತಾನು ಹಳಿದದ್ದು ಪುರಾತನ ಕಾಲದ, ದೇಶೀಯ ಗೋಧಿ ಅಥವಾ ಗೋಧುಮವನ್ನಲ್ಲ. ಅದು ಒಳ್ಳೆಯದೇ. ಅದು ಗೋಧಿಯಲ್ಲ ಜವೆ ಗೋಧಿ. ತಾನು ವಿರೋಧಿಸುವುದು ಹೊರದೇಶಗಳಿಂದ ಬಂದಿರುವ ಕುಲಾಂತರಿ ಗೋಧಿಯನ್ನು ಎನ್ನುತ್ತಾರೆ.

ವಾಸ್ತವಾಂಶ ಹೀಗಿದೆ: ಜವೆಗೋಧಿ ಗೋಧಿಯಲ್ಲ. ಅದು ಬಾರ್ಲಿ. ದೇಶೀಯ ತಳಿ ಎಂಬುದೂ ತಪ್ಪು. ಗೋಧಿಯ ಉಗಮಸ್ಥಾನ ಭಾರತ ಅಲ್ಲ. ಆದ್ದರಿಂದ ದೇಶೀಯ ತಳಿಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಟರ್ಕಿ, ಲೆಬನಾನ್, ಸಿರಿಯ, ಇಸ್ರೇಲ್, ಇಜಿಪ್ತ್ ಮತ್ತು ಇಥಿಯೊಪಿಯ ದೇಶಗಳ ಭಿನ್ನ ಭಾಗಗಳಲ್ಲಿ ಉದಿಸಿದ ವನ್ಯ ಗೋಧಿ, ಟರ್ಕಿಯಲ್ಲಿ ಕ್ರಿ.ಪೂ. ೯೦೦೦ರ ಹೊತ್ತಿಗೆ ಪಳಗಿ ಐನ್ ಕಾರ್ನ(ಟ್ರಿಟಿಕಮ್ ಮೊನೊಕಾಕ್ಕಮ್) ಗೋಧಿಯಾಯ್ತು. ಕ್ರಿ.ಪೂ. ೮೦೦೦ರ ವೇಳೆಗೆ ಫರ್ಟೈಲ್ ಕ್ರೆಸೆಂಟ್(ಸಿರಿಯ, ಲೆಬನಾನ್, ಪಾಲೆಸ್ತೀನ್, ಜೊರ್ಡಾನ್, ಇಸ್ರೇಲ್ ಪ್ರದೇಶಗಳನ್ನು ಕ್ರಮಿಸಿ ಉತ್ತರ ಇಜಿಪ್ತಿನ ಫಲವತ್ತಾದ ಭಾಗದವರೆಗೆ ಹಬ್ಬಿರುವ ಅರ್ಧಚಂದ್ರಾಕೃತಿಯ ಫಲವತ್ತಿನ ಪ್ರದೇಶ)ದಲ್ಲಿ ಬೇಸಾಯಗೊಂಡಿತು. ನಂತರ ಪ್ರಕೃತಿಯ ಸಹಜ ಸಂಕರ ಕ್ರಿಯೆಯಿಂದ ಎಮ್ಮರ್ ಗೋಧಿ(ಟ್ರಿಟಿಕಮ್ ಡೈಕಾಕ್ಕಮ್) ಅವತರಿಸಿತು. ಈ ಎರಡನ್ನು ಗೋಧಿಯ ಪ್ರಾಚೀನ ತಳಿಗಳೆನ್ನುತ್ತಾರೆ. ಇವು ಭಾರತಕ್ಕೆ ಪ್ರವೇಶಿಸಿದ್ದು ಕ್ರಿ.ಪೂ. ೫೦೦೦ರ ವೇಳೆಗೆ, ವೇದಕಾಲದಲ್ಲಿ. ಅದಷ್ಟೇ ಅಲ್ಲ ಜೋಳ, ರಾಗಿ, ನವಣೆ ಎಲ್ಲವೂ ಬೇರೆಬೇರೆ ದೇಶಗಳಲ್ಲಿ ಉಗಮಿಸಿ ನಮ್ಮಲ್ಲಿ ನೆಲೆಗೊಂಡಿವೆ. ಅವೆಲ್ಲವನ್ನೂ ದೇಶೀಯ ಎನ್ನುವುದಾದರೆ ಗೋಧಿ ಯಾಕೆ ಪರದೇಶಿ? ಕುಲಾಂತರಿ ಪದ(ಅರ್ಥಗೊತ್ತಿದ್ದೋ ಗೊತ್ತಿಲ್ಲದೆಯೋ)ವನ್ನು ಬೇಜವಾಬ್ದಾರಿಯಿಂದ ಬಳಸಿರುವುದಷ್ಟೇ ಅಲ್ಲ ಅದನ್ನು ಮತ್ತೆಮತ್ತೆ ಹೇಳಿದ್ದಾರೆ. ಕುಲಾಂತರಿ ಅಂದರೆ ಟ್ರಾನ್ಸ್‌ಜೆನಿಕ್, ಜೆನೆಟಿಕಲಿ ಮಾಡಿಫಾಯ್ಡ್ ಅರ್ಥಾತ್ ಜಿಎಮ್ ತಳಿಗಳು. ತೀರಾ ವಿಭಿನ್ನ ಜೀವಿಗಳ ಗುಣಾಣು ಸೇರಿಸಿ ವರ್ಧಿಸಲ್ಪಟ್ಟ ಕುಲಾಂತರಿಯ ಉದಾಹರಣೆ ಮಣ್ಣಿನ ಬ್ಯಾಕ್ಟೀರಿಯದ ಗುಣ ಹೊಂದಿರುವ ಬಿಟಿ ಹತ್ತಿ. ಗೋಧಿಯಲ್ಲಿ ಕುಲಾಂತರಿ ತಳಿ ಇಲ್ಲಿಯವರೆಗೆ ಬೇಸಾಯಗೊಂಡಿಲ್ಲ. ಆದ್ದರಿಂದ ಅವರು ಹೇಳಿರುವುದು ಸಂಪೂರ್ಣ ತಪ್ಪು. ಪ್ರಾಯಶಃ ಅವರು ತಳಿ ಸಂವರ್ಧನೆಯಿಂದ ರೂಪಿಸಿದ ಹೈಬ್ರಿಡ್ ಅಥವಾ ಸಂಕರ ತಳಿಗಳನ್ನು ಕುಲಾಂತರಿ ಎಂದಿರಬಹುದು ಎನ್ನುವುದಾದರೆ ಅದೂ ತಪ್ಪಾಗುತ್ತದೆ. ಸಂಕರ ತಳಿಗಳನ್ನು ರೂಪಿಸುವುದು ಅಧಿಕ ಇಳುವರಿ, ಸುಧಾರಿತ ಪೌಷ್ಟಿಕತೆ, ರೋಗ ನಿರೋಧಕತೆ ಇತ್ಯಾದಿ ಉತ್ತಮ ಗುಣಗಳನ್ನು ಒಗ್ಗೂಡಿಸಲು. ಅನಿಷ್ಟ ಗುಣಗಳನ್ನಲ್ಲ.

ಗೋಧಿ ಪಾಶ್ಚಾತ್ಯದೇಶಗಳಿಗೆ ಸರಿ, ಯಾಕೆಂದರೆ ಅಲ್ಲಿ ಹಿಮ ಬೀಳುತ್ತದೆ, ನಮ್ಮಲ್ಲಿ ಹಿಮಪಾತ ಆಗುವದಿಲ್ಲವಾದ್ದರಿಂದ ನಮಗದು ಹೊಂದುವುದಿಲ್ಲ ಎಂದಿರುವುದು ಬಾಲಿಶವಾಗಿದೆ. ಗೋಧಿಯಲ್ಲಿನ ಗ್ಲುಟೆನ್ ಪ್ರೋಟೀನು ಕರುಳಿಗೆ ಅಂಟಿದರೆ ಹಾನಿ, ಮಲಬದ್ಧತೆಗೆ ಮೂಲ, ಸಕ್ಕರೆಕಾಯಿಲೆಗೆ ಕಾರಣ ಎನ್ನುತ್ತ, ವಿದೇಶಿ ಔಷಧಿ ಕಂಪನಿಗಳ ಲಾಭಕೋರತನ, ರೈತ ಶೋಷಣೆಯ ಹುನ್ನಾರಗಳ್ನು ಅಪ್ರಾಸಂಗಿಕವಾಗಿ ಎಳೆದುತಂದಿರುವುದು ಹಾಸ್ಯಾಸ್ಪದ. ಅದಕ್ಕೆ ತಮ್ಮ ರೈತಪರಿವಾರದ ಹಿನ್ನೆಲೆ ಸೇರಿಸಿರುವುದು ಅಸಂಬದ್ಧ. ಅವರ ಈ ತೀವ್ರ ಟೀಕೆ ಬಹುಶಃ ಕಳೆದ ಕೆಲ ವರ್ಷಗಳಿಂದ ಪ್ರಚಾರದಲ್ಲಿರುವ ಗೋಧಿಯ ಬಗೆಗಿನ ಮಿಥ್ಯಾರೋಪಗಳಿಂದ ಪ್ರೇರಿತಗೊಂಡಿರಬಹುದು. ಹೌದು 'ಗೋಧಿ ಸುರಕ್ಷಿತವೇ?', 'ಅದರ ಉಪಯೋಗ ಮುಂದುವರಿಸಬಹುದೇ?', 'ಗೋಧಿ ಸೇವನೆ ಯಾಕೆ ಒಳ್ಳೆಯದಲ್ಲ?' ಎಂಬಿತ್ಯಾದಿ ಪ್ರಚೋದಕ ತಲೆಬರಹಗಳಡಿಯಲ್ಲಿ ಸಾಕಷ್ಟು ಅಪಪ್ರಚಾರ ಅಂತರ್ಜಾಲದಲ್ಲಿ ನಡೆದಿದೆ. ಗ್ಲುಟೆನ್ ಅಲರ್ಜಿಯನ್ನು ಬೃಹದಾಕಾರವಾಗಿ ಬಿಂಬಿಸಿ ಸೃಷ್ಟಿಸಿರುವ ಸುಮಾರು ೧೬೦ ಕೋಟಿ ಮೌಲ್ಯದ ಗ್ಲುಟೆನ್‌ಮುಕ್ತ ಆಹಾರದ ಮಾರುಕಟ್ಟೆಯಲ್ಲಿ ಗೋಧಿಯ ಐನ್ಕಾರ್ನ ಮತ್ತು ಎಮ್ಮರ್ ಪ್ರಾಚೀನ ತಳಿಗಳ ಉತ್ಪನ್ನಗಳನ್ನು ದುಬಾರಿ ಬೆಲೆಯಲ್ಲಿ ಪ್ರಮೋಟ್ ಮಾಡಲಾಗುತ್ತಿದೆ. ಇದು ಒಂದು ತೆರನಾದ ಸೆನ್ಸೇಷನ್ ಉಂಟುಮಾಡುವ ಆಹಾರದ ರಾಜಕಾರಣ. ಮತ್ತಿನ್ನೇನೂ ಅಲ್ಲ. ಅದರಲ್ಲಿ ವಾಸ್ತವಾಂಶವಿಲ್ಲ. ಎಲ್ಲ ಮಿಥ್ಯಾರೋಪಗಳನ್ನು ವ್ಯವಸ್ಥಿತವಾದ ವಿವರವಾದ ಸಂಶೋಧನೆಗಳ ಆಧಾರದಿಂದ ಅಲ್ಲಗಳೆದೂ ಆಗಿದೆ. ದುರದೃಷ್ಟವಶಾತ್ ಅನಂತ್‌ಜಿ ಅವನ್ನು ಗಮನಿಸಿದಂತಿಲ್ಲ.

ವಾಸ್ತವಾಂಶ: ಗೋಧಿಯಲ್ಲಿನ ಅಲ್ಬ್ಯುಮಿನ್, ಗ್ಲೊಬ್ಯುಲಿನ್, ಗ್ಲಯಡಿನ್ ಮತ್ತು ಗ್ಲುಟೆನಿನ್ (ಗ್ಲುಟೆನ್) ಪ್ರೊಟೀನುಗಳು ಕೆಲವರಲ್ಲಿ ಉಸಿರಾಟದ ತೊಂದರೆ, ಹೊಟ್ಟೆಯುಬ್ಬರ, ವಾಕರಿಕೆ, ಚರ್ಮದ ದದ್ದುಗಳು ಮುಂತಾದ ಅಲರ್ಜಿಕ್ ಪ್ರತಿಕ್ರಿಯೆಯನ್ನು ಉಂಟುಮಾಡುವುದಿದೆ. ಹೆಚ್ಚಿನಂಶ ಅಲರ್ಜಿ ಅಲ್ಬ್ಯುಮಿನ್, ಗ್ಲೊಬ್ಯುಲಿನ್ ಪ್ರೊಟೀನುಗಳಿಗೆ ಸಂಬಂಧಿಸಿದ್ದು. ಗ್ಲಯಡಿನ್ ಮತ್ತು ಗ್ಲುಟೆನ್ ಅಲರ್ಜಿ ವಿರಳ. ಜಗತ್ತಿನ ಕೇವಲ ಶೇಕಡಾ ಒಂದರಷ್ಟು ಜನರಿಗಷ್ಟೇ ಗ್ಲುಟೆನ್ ಅಲರ್ಜಿಯಿದೆ. ಅದನ್ನು ಎಲ್ಲರಿಗೂ ಅನ್ವಯಿಸಲಾಗದು. ಹಾಗೆನೋಡಿದರೆ ನಾವು ಸೇವಿಸುವ ಪ್ರತಿಯೊಂದು ಆಹಾರಧಾನ್ಯ, ತರಕಾರಿ, ಹಣ್ಣುಹಂಪಲುಗಳಲ್ಲಿ ಒಂದಲ್ಲಒಂದು ಹಾನಿಕಾರಕ ಅಂಶವಿದ್ದೇಇದೆ. ಯಾವುದೂ ಸಂಪೂರ್ಣ ಸುರಕ್ಷಿತವಲ್ಲ. ಗೋಧಿ ಬಹುಜನರ ಪ್ರಧಾನ ಆಹಾರವಾಗಿರುವುದರಿಂದ ಅದರ ಅಲರ್ಜಿ ದೊಡ್ಡದಾಗಿ ಬಿಂಬಿತವಾಗಿದೆ ಅಷ್ಟೆ. ಅಲರ್ಜಿ ಇರುವವರು ಗೋಧಿ ತಿನ್ನದಿದ್ದರಾಯ್ತು. ಬದಲಿಗೆ 'ಯಾರೂ ಗೋಧಿ ತಿನ್ನಬೇಡಿ' ಎಂದು ನಿರ್ಬಂಧ ಹೇರುವುದು ಸರಿಯಲ್ಲ. ಅವರೇ ಶಿಫಾರಸು ಮಾಡುವ ಜೋಳ, ರಾಗಿ, ಆರ್ಕ, ನವಣೆ, ಬೂರುಗ ಇತ್ಯಾದಿ ಧಾನ್ಯಗಳಲ್ಲೂ ಅನಿಷ್ಟ ಪದಾರ್ಥಗಳು ಹಾನಿಕಾರಕ ಎನ್ಜೈಮು(ಕಿಣ್ವ) ಇವೆ. ಅವೆಲ್ಲವನ್ನೂ ಕಡೆಗಣಿಸಿ ಗೋಧಿಯ ಮೇಲಷ್ಟೇ ಗೂಬೆಕೂರಿಸಿದ್ದು ಸರಿಯಲ್ಲ. ಬೆರಳೆಣಿಕೆಯಷ್ಟು ಜನರಿಗೆ ಬೇಡವಾದ ಗ್ಲುಟೆನ್‌ನಿಂದಾಗಿಯೇ ಗೋಧಿ ವೈವಿಧ್ಯಮಯ ಆಹಾರ ತಯಾರಿಕೆಗೆ ಪ್ರಶಸ್ತವೆನ್ನಿಸಿದೆ. ಗೋಧಿಯಿಂದ ತಯಾರಿಸಬಹುದಾದಷ್ಟು ತರಹೇವಾರಿ ತಿನಿಸುಗಳನ್ನು ಬೇರಾವುದೇ ಆಹಾರಧಾನ್ಯದಿಂದ ತಯಾರಿಸಲಾಗದು. ಗೋಧಿಯಲ್ಲಿರುವ ಪುಷ್ಕಳ ನಾರಿನಂಶ ಮಲಬದ್ಧತೆಯನ್ನು ದೂರಾಗಿಸುತ್ತದೆ. ವಿಟಮಿನ್ ಮತ್ತು ಖನಿಜಾಂಶ ಭರಿತ ಗೋಧಿ ಸಸ್ಯಾಹಾರಿಗಳಿಗೆ ಸಸಾರಜನಕ(ಪ್ರೊಟೀನು) ಪೂರೈಸುತ್ತದೆ. ಟೈಪ್೨ ಡಯಾಬಿಟೀಸ್ ಕಾಯಿಲೆ ಮತ್ತು ಹೃದಯರೋಗಳನ್ನು ಕಡಿಮೆ ಮಾಡುತ್ತದೆ. ಈ ಎಲ್ಲ ಉತ್ತಮಿಕೆಗಳ ಜೊತೆಗೆ ವಿವಿಧ ಹವಾಮಾನಗಳಿಗೆ ಒಗ್ಗಿಕೊಂಡು ಬೆಳೆದು ಉತ್ತಮ ಇಳುವರಿ ನೀಡುವ ಸಾಮರ್ಥ್ಯ ಹೊಂದಿರುವ ಗೋಧಿ ಜಗತ್ತಿನ ಎರಡನೆಯ(ಮೆಕ್ಕೆ ಜೋಳದ್ದು ಮೊದಲ ಸ್ಥಾನ) ಮುಖ್ಯ ಆಹಾರಬೆಳೆಯಾಗಿದೆ. ವರ್ಷಂಪ್ರತಿ ೮೦ ಕೋಟಿ ಟನ್ನುಗಳಷ್ಟು ಗೋಧಿಯನ್ನು ವಿಶ್ವದ ಬಹುತೇಕ ರಾಷ್ಟ್ರಗಳು ಉತ್ಪಾದಿಸಿ ಉಣ್ಣುತ್ತವೆ. ೬೦ರ ದಶಕದಲ್ಲಿ ಭಾರತ ಆಹಾರದ ಬಿಕ್ಕಟ್ಟನ್ನೆದುರಿಸುತ್ತಿದ್ದಾಗ, ನಾವೆಲ್ಲ ಊಟಕ್ಕೆ ಆಮದಿತ ಆಹಾರವನ್ನವಲಂಬಿಸಿದ ದಿನಗಳಲ್ಲಿ ವರದಾನವಾಗಿ ಒದಗಿಬಂದ ಗೋಧಿ, ಹಸಿವಿನ ಹೆದರಿಕೆಯನ್ನು ಹಿಮ್ಮೆಟ್ಟಿಸಿ ಆಹಾರಭದ್ರತೆಯನ್ನೊದಗಿಸಿತು. ಆಗ ಪರಿಚಯಿತವಾದ ರೋಗನಿರೋಧಕ, ಗಿಡ್ಡ ಗೋಧಿ ತಳಿಗಳು ರಸಗೊಬ್ಬರಗಳಿತ್ತ ಉತ್ತಮ ಪೋಷಣೆಗೆ ಸ್ಪಂದಿಸಿ ಇಳುವರಿಯ ಹೊಸ ದಾಖಲೆ ಸೃಷ್ಟಿಸಿದುವು. ಹಸಿರು ಕ್ರಾಂತಿಯಾಯ್ತು. ತಳಿಗಳ ಜನಕ ಡಾ.ನಾರ್ಮನ್ ಬೋರ್ಲಾಗ್ ನೊಬೆಲ್ ಪಾರಿತೋಷಕ ಪಡೆದರು. ಅದನ್ನು ವಿನಾಕಾರಣ ಟೀಕಿಸುವ ಅನಂತ್‌ಜಿ ರಸಗೊಬ್ಬರಗಳನ್ನು ಮಹಾಯುದ್ಧದ ವಿಷವಸ್ತುಗಳೆಂದಿರುವುದು ವಿಷಾದಕರ. ಇದು ಸಾರಾಸಗಟಾದ ತಪ್ಪು ಗ್ರಹಿಕೆ. ಸಸ್ಯಗಳು ಆರೋಗ್ಯಪೂರ್ಣವಾಗಿ ಬೆಳೆದು ಉತ್ತಮ ಇಳುವರಿ ನೀಡಲು ಅಗತ್ಯವಾದ ಸಸ್ಯ ಪೋಷಕಾಂಶಗಳನ್ನು ಸಾಂದ್ರರೂಪದಲ್ಲಿ ಪೂರೈಸುವ ರಸಗೊಬ್ಬರಗಳ ಆವಿಷ್ಕಾರದಿಂದ ಕೃಷಿಗೆ ಹೇರಳ ಲಾಭವಾಗಿದೆ. ಅತಿಬಳಕೆಯಿಂದ ತೊಂದರೆಯಾಗಿದೆ ನಿಜ; ಅದಕ್ಕೆ ಪರಿಹಾರ ಸಮರ್ಪಕ ಬಳಕೆಯೇ ಹೊರತು ಅವನ್ನು ತ್ಯಜಿಸುವುದಲ್ಲ.

ಇನ್ನು ಅವರು ಮೇಲಿಂದಮೇಲೆ ಬಡಬಡಿಸುವ ಜೋಳ, ಸಜ್ಜೆ, ರಾಗಿ, ಆರ್ಕ, ನವಣೆ ಬೂರುಗಗಳಂಥ ಸಾಂಪ್ರದಾಯಿಕ ಬೆಳೆಗಳ ಬಳಕೆ ಒಳ್ಳೆಯದೇ. ಈ ಸಿರಿಧಾನ್ಯಗಳು ನಿಸ್ಸಂದೇಹವಾಗಿ ನಮ್ಮ ಅರೋಗ್ಯಕ್ಕೆ ಒಳ್ಳೆಯವು. ಇವುಗಳ ಪುನರುಜ್ಜೀವನವಾಗಬೇಕು. ಅದಕ್ಕಾಗಿ ವ್ಯಾಪಕ ಸಂಶೋಧನೆಗಳನ್ನು ಕೃಷಿವಿಜ್ಞಾನಿಗಳು ಕೈಗೊಂಡಿದ್ದಾರೆ. ಇವು ಕಠಿಣ ಹವೆಗೆ ಒಗ್ಗಿಕೊಂಡು ಉತ್ತಮವಾಗಿ ಬೆಳೆಯುತ್ತವೆ ನಿಜ. ಇಳುವರಿಯಲ್ಲಿ ಸಾಕಷ್ಟು ವೃದ್ಧಿಯಾಗಬೇಕಿದೆ. ಆದರೆ ಇವನ್ನಷ್ಟೇ ಉಪಯೋಗಿಸಿ ಗೋಧಿ, ಅಕ್ಕಿಯ ಬಳಕೆ ತ್ಯಜಿಸುವ ಸಲಹೆಯಲ್ಲಿ ಹುರುಳಿಲ್ಲ. ಕೃಷಿಪ್ರಧಾನವಾದ ನಮ್ಮ ದೇಶದಲ್ಲಿ ವ್ಯವಸಾಯ ವಿಜ್ಞಾನಕ್ಕೆ ಹೆಚ್ಚಿನ ಮಹತ್ವವಿದೆ. ಸಹಸ್ರಾರು ಕೃಷಿ ವಿಜ್ಞಾನಿಗಳು ಆಹಾರೋತ್ಪಾನೆಯ ವಿವಿಧ ಮಗ್ಗುಲುಗಳನ್ನು ಕುರಿತು ವ್ಯವಸ್ಥಿತ ಸಂಶೋಧನೆಗಳನ್ನು ಮಾಡಿದ್ದಾರೆ, ಮಾಡುತ್ತಲಿದ್ದಾರೆ. ಯಾವುದೇ ಆಮದಿತ ತಂತ್ರಜ್ಞಾನವನ್ನು ನಮ್ಮಲ್ಲಿ ಅಳವಡಿಕೆಯ ಸೂಕ್ತತೆಗಾಗಿ ವಿವರವಾಗಿ ಪರೀಕ್ಷಿಸಿದ ನಂತರವೇ ಉಪಯೋಗಕ್ಕೆ ಶಿಫಾರಸು ಮಾಡಲಾಗುತ್ತದೆ. ಅವನ್ನೆಲ್ಲ ಸಾರಾಸಗಟಾಗಿ ಕಡೆಗಣಿಸಿ ಅಲ್ಲಿಲ್ಲಿ ಅಲ್ಪಸ್ವಲ್ಪ ಓದಿ/ಕೇಳಿ ಅರಿತ ಅರೆಬರೆ ಜ್ಞಾನವನ್ನಾಧರಿಸಿ ಬೇಜವಾಬ್ದಾರಿ ಬ್ಲಾಂಕೆಟ್ ಭಾಷಣಗಳ ಮೂಲಕ ಜನರಲ್ಲಿ ತಪ್ಪು ಕಲ್ಪನೆಗಳನ್ನು, ಅಭಿಪ್ರಾಯಗಳನ್ನು ಬಿತ್ತುತ್ತ ತಮ್ಮ ಕಸುಬಿಗೆ ಪ್ರಚಾರ ಪಡೆಯುವುದು ಯೋಗ ಗುರುಗಳೆನ್ನಿಸಿಕೊಂಡವರಿಗೆ ಭೂಷಣವಲ್ಲ. ಸತ್ಯಾಂಶರಹಿತ ಪ್ರಚಾರ ಅಪಪ್ರಚಾರವಾಗುವ ಅಪಾಯವಿದೆಯೆಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕು.

ಜುಲೈ ೧೮, ೨೦೧೬ರ ವಿಶ್ವವಾಣಿಯಲ್ಲಿ ಪ್ರಕಟವಾದ ಲೇಖನ, ಲೇಖಕರ ಅನುಮತಿಯೊಡನೆ ಮರುಪ್ರಕಟಿಸಲಾಗಿದೆ.

1 ಕಾಮೆಂಟ್‌:

Sudarshan HS ಹೇಳಿದರು...

ಬಹಳ ಮಾಹಿತಯುಕ್ತ ಲೇಖನ. ಧನ್ಯವಾದಗಳು. ಈ ಕೆಳಗಿನ ಹೋದವರ್ಷಪ್ರಕಟನಗೊಂಡ ಲೇಖನದಲ್ಲಿ ಸದಕ-ಜಾತಿಯ ಗೋಧಿಗೆ ಜವೆಗೋಧಿ ಅಂತಲೂ ಹೆಸರಿದೆ ಅಂದಿದ್ದಾರೆ. ಇದೆ ವೇದದ ಗೋಧುಮವಂತಲೂ ಸಹ. ಆ ವಿಷಯವು ಮೇಲಿನ ಲೇಖನಕ್ಕೆ ವಿರುದ್ಧವಾದ್ದರಿಂದ ಗೊಂದಲಕೊಟ್ಟಿದೆ. ಯಾರಾದರೂ ಈ ವಿಷಯದಲ್ಲಿ ಸಂಶೋಧನ ಮಾಡಿ ಗೊಂದಲವನ್ನು ಬಿಡಿಸಿದ್ದರೆ ಉತ್ತಮ.
https://vijaykarnataka.indiatimes.com/lavalavk/ancient-wheat-variety-sadaka/articleshow/57620217.cms

badge