ಬುಧವಾರ, ಜುಲೈ 20, 2016

ಸಮಾಜ ಜಾಲಗಳ ಮೊಬೈಲ್ ಅವತಾರ

ಟಿ. ಜಿ. ಶ್ರೀನಿಧಿ

ಮೊಬೈಲ್ ದೂರವಾಣಿಗಳ ಬಳಕೆ ಹೆಚ್ಚಿದಂತೆ ನಮ್ಮ ಅದೆಷ್ಟೋ ಚಟುವಟಿಕೆಗಳು ಮೊಬೈಲ್ ಕೇಂದ್ರಿತವಾಗಿಬಿಟ್ಟಿವೆ. ಇಂತಹ ಚಟುವಟಿಕೆಗಳ ಸಾಲಿನಲ್ಲಿ ಸೋಶಿಯಲ್ ನೆಟ್‌ವರ್ಕ್‌ಗಳ ಬಳಕೆಗೂ ಪ್ರಮುಖ ಸ್ಥಾನವಿದೆ.

ಹೌದು, ಸೋಶಿಯಲ್ ನೆಟ್‌ವರ್ಕ್‌ಗಳು ಪರಿಚಯವಾದಾಗ ಕಂಪ್ಯೂಟರಿನಲ್ಲಿ ಮಾತ್ರವೇ ಅವನ್ನು ಬಳಸುತ್ತಿದ್ದ ನಾವು ಈಗ ಅವುಗಳ ಬಳಕೆಯನ್ನು ಹೆಚ್ಚೂಕಡಿಮೆ ಪೂರ್ತಿಯಾಗಿಯೇ ಮೊಬೈಲಿಗೆ ವರ್ಗಾಯಿಸಿಬಿಟ್ಟಿದ್ದೇವೆ. ಮೊಬೈಲುಗಳು ಸದಾಕಾಲ ನಮ್ಮ ಜೊತೆಗಿರುತ್ತವಲ್ಲ, ಹಾಗಾಗಿಯೋ ಏನೋ ಅವು ಸಮಾಜಜಾಲಗಳಲ್ಲಿ ನಮ್ಮ ಎಲ್ಲ ಚಟುವಟಿಕೆಗಳಿಗೂ ಸರಿಯಾದ ಜೋಡಿಯಾಗಿ ಬೆಳೆದಿವೆ.

ಮೊದಲಿಗೆ ಸಮಾಜಜಾಲಗಳ ವೆಬ್‌ಸೈಟನ್ನು ತೆರೆಯಲಷ್ಟೆ ಮೊಬೈಲ್ ಫೋನ್ ಬಳಕೆಯಾಗುತ್ತಿತ್ತು. ನಂತರ ನಮ್ಮ ಫೋನುಗಳು ಹೆಚ್ಚು ಸ್ಮಾರ್ಟ್ ಆದಂತೆ, ಆಪ್‌ಗಳ ಪ್ರಭಾವ ಜಾಸ್ತಿಯಾದಂತೆ ಸಮಾಜಜಾಲಗಳ ಆಪ್‌ಗಳು ನಮ್ಮ ಮೊಬೈಲಿಗೆ ಬಂದು ಕುಳಿತವು. ಫೇಸ್‌ಬುಕ್‌ನದೊಂದು ಆಪ್, ಟ್ವಿಟರ್‌ನದೊಂದು ಆಪ್ ಎಂದು ಸಮಾಜಜಾಲಗಳ ಆಪ್‌ಗಳು ಒಂದೊಂದಾಗಿ ನಮ್ಮ ಮೊಬೈಲನ್ನು ಸೇರಿಕೊಂಡವು.


ಮೊಬೈಲ್ ಮೂಲಕ ಸಮಾಜಜಾಲಗಳ ಬಳಕೆ ಇನ್ನಷ್ಟು ಹೆಚ್ಚಲು ಸಹಾಯಕವಾದದ್ದು ಮೊಬೈಲಿನ ಕೆಲ ವೈಶಿಷ್ಟ್ಯಗಳು. ಡಿಜಿಟಲ್ ಕ್ಯಾಮೆರಾದಲ್ಲಿ ಫೋಟೋ ತೆಗೆದು, ಅದನ್ನು ಕಂಪ್ಯೂಟರಿಗೆ ವರ್ಗಾಯಿಸಿ, ಚಿತ್ರವನ್ನು ಬೇಕಾದಂತೆ ಎಡಿಟ್ ಮಾಡಿ ಆಮೇಲಷ್ಟೆ ಸಮಾಜಜಾಲಕ್ಕೆ ಸೇರಿಸಬೇಕಿದ್ದ ಪರಿಸ್ಥಿತಿ ಮೊಬೈಲಿನಿಂದಾಗಿ ಬದಲಾಗಿದೆ: ಮೊಬೈಲ್ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ ಚಿತ್ರವನ್ನು ಅದರಲ್ಲೇ ಇರುವ ಎಡಿಟರ್ ತಂತ್ರಾಂಶ ಬಳಸಿ ಚೆಂದಗಾಣಿಸಿ ಫೇಸ್‌ಬುಕ್‌ಗೆ ಏರಿಸುವುದು ಎಷ್ಟು ಸುಲಭ! ನಾವು ಎಲ್ಲಿದ್ದೇವೆ ಎಂದು ಚೆಕ್-ಇನ್ ಮಾಡುವುದೂ ಅಷ್ಟೆ, ಮೊಬೈಲಿನ ಜಿಪಿಎಸ್ ವ್ಯವಸ್ಥೆಯ ಮೂಲಕ ಈಗ ಅತ್ಯಂತ ಸರಳ.

ಮೊಬೈಲ್ ಫೋನುಗಳು ಇಷ್ಟೆಲ್ಲ ರೀತಿಯಲ್ಲಿ ಸಹಾಯಕ ಎನ್ನುವುದು ಗೊತ್ತಾಗುತ್ತಿದ್ದಂತೆ ಮೊಬೈಲಿಗೆಂದೇ ಕೆಲ ಸಮಾಜಜಾಲಗಳು ಸೃಷ್ಟಿಯಾದವು. ಈ ಪೈಕಿ ವಾಟ್ಸ್‌ಆಪ್‌ನದು ಪ್ರಮುಖ ಹೆಸರು.

ಮೊಬೈಲುಗಳು ಸ್ಮಾರ್ಟ್ ಆಗುವುದಕ್ಕೂ  ಮುಂಚೆ ಮೊಬೈಲ್ ಲೋಕದಲ್ಲಿ ಎಸ್ಸೆಮ್ಮೆಸ್ ತಂತ್ರಜ್ಞಾನ ತಂದಂಥದ್ದೇ ಬದಲಾವಣೆಯನ್ನು ಸ್ಮಾರ್ಟ್‌ಫೋನ್ ಜಗತ್ತಿನಲ್ಲೂ ತಂದದ್ದು ವಾಟ್ಸ್‌ಆಪ್‌ನ ಹೆಗ್ಗಳಿಕೆ. ಅಂತರಜಾಲ ಸಂಪರ್ಕ ಬಳಸಿಕೊಂಡು ಪಠ್ಯ ಹಾಗೂ ಧ್ವನಿರೂಪದ ಸಂದೇಶಗಳು, ಚಿತ್ರಗಳು, ವೀಡಿಯೋಗಳನ್ನೆಲ್ಲ ಸರಾಗವಾಗಿ ಹಂಚಿಕೊಳ್ಳಲು ಈ ವ್ಯವಸ್ಥೆ ನೆರವಾಗುತ್ತದೆ. ನಿರ್ದಿಷ್ಟ ವಿಷಯಗಳನ್ನು (ಮನೆಗೆ ಸಂಬಂಧಿಸಿದ್ದು, ಕಚೇರಿ ಕೆಲಸದ ವಿಷಯ ಇತ್ಯಾದಿ) ಹಂಚಿಕೊಳ್ಳಲು ಪ್ರತ್ಯೇಕ ಗುಂಪುಗಳನ್ನು ರೂಪಿಸಿಕೊಳ್ಳಬಹುದಾದ್ದು ಇದರ ಇನ್ನೊಂದು ವೈಶಿಷ್ಟ್ಯ. ವಾಟ್ಸ್‌ಆಪ್ ಬಳಸಿ ಗೆಳೆಯರಿಗೆ ಕರೆ ಮಾಡುವುದೂ ಸಾಧ್ಯ. ಇವೆಲ್ಲ ವೈಶಿಷ್ಟ್ಯಗಳ ಒಟ್ಟು ಪರಿಣಾಮವಾಗಿಯೇ ಈಗ ಲಕ್ಷಾಂತರ ಬಳಕೆದಾರರು ವಾಟ್ಸ್‌ಆಪ್ ಉಪಯೋಗಿಸುತ್ತಿದ್ದಾರೆ.

ವಾಟ್ಸ್‌ಆಪ್ ಅಭೂತಪೂರ್ವ ಜನಪ್ರಿಯತೆ ಗಳಿಸಿರುವುದು ನಿಜವೇ. ಆದರೆ ಅಂತರಜಾಲ ಸಂಪರ್ಕ ಬಳಸಿ ಮೊಬೈಲ್ ಮೂಲಕ ಸಂದೇಶಗಳನ್ನು ಕಳುಹಿಸಲು ಅನುವುಮಾಡಿಕೊಟ್ಟಿರುವ ವ್ಯವಸ್ಥೆ ಅದೊಂದೇ ಏನಲ್ಲ. ಹೈಕ್, ವೈಬರ್ ಮುಂತಾದ ಅಂತಹವೇ ಹಲವಾರು ವ್ಯವಸ್ಥೆಗಳು ಲಭ್ಯವಿವೆ, ತಕ್ಕಮಟ್ಟಿಗೆ ಜನಪ್ರಿಯವೂ ಆಗಿವೆ.

ಈ ಪೈಕಿ ಗಮನಿಸಬಹುದಾದ ಇನ್ನೊಂದು ಹೆಸರು ಸ್ನಾಪ್‌ಚಾಟ್‌ನದು. ನಾವು ಹಂಚಿಕೊಂಡ ಚಿತ್ರವು ನಿರ್ದಿಷ್ಟ ಸಮಯದ ನಂತರ ತನ್ನಷ್ಟಕ್ಕೆ ತಾನೇ ಡಿಲೀಟ್ ಆಗಿಬಿಡುವ ವಿಶೇಷ ಸೌಲಭ್ಯದಿಂದಾಗಿ ಸುದ್ದಿಮಾಡಿದ ಈ ವ್ಯವಸ್ಥೆ ಹಲವು ಮಾರುಕಟ್ಟೆಗಳಲ್ಲಿ ಜನಪ್ರಿಯ. ಸಮಾಜ ಜಾಲಗಳ ಮೂಲಕ "ಏನನ್ನು ಬೇಕಾದರೂ" ಹಂಚಿಕೊಳ್ಳಬಹುದೆಂಬ ಭಾವನೆ ಮೂಡಿಸುವಲ್ಲಿ ಸ್ನಾಪ್‌ಚಾಟ್ ಪಾತ್ರವೂ ಮಹತ್ವದ್ದು ಎನ್ನಬಹುದು.

ಈ ಬಗೆಯ ವ್ಯವಸ್ಥೆಗಳು ಬೆಳೆದಂತೆ ಸಮಾಜಜಾಲಗಳ ಸ್ವರೂಪದಲ್ಲಿ ಇನ್ನೊಂದು ಬದಲಾವಣೆ ಕಾಣಿಸಿಕೊಳ್ಳುತ್ತಿರುವುದನ್ನೂ ನಾವು ಗಮನಿಸಬಹುದು. ಮೊದಲು ಫೇಸ್‌ಬುಕ್‌ನಂತಹ ತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದ ವೈಯಕ್ತಿಕ ಮಾಹಿತಿ (ಕುಟುಂಬದ ಛಾಯಾಚಿತ್ರಗಳು, ಭೇಟಿಕೊಟ್ಟ ಸ್ಥಳದ - ಅಲ್ಲಿ ನಮ್ಮ ಚಟುವಟಿಕೆಗಳ ವಿವರಗಳು) ನಿಧಾನಕ್ಕೆ ವಾಟ್ಸ್‌ಆಪ್‌ನಂತಹ ವ್ಯವಸ್ಥೆಗಳತ್ತ ಮುಖಮಾಡುತ್ತಿದೆ. ಫೇಸ್‌ಬುಕ್‌ನಂತಹ ಸಮಾಜಜಾಲಗಳಲ್ಲಿ ಈಗ ಅನಿಸಿಕೆಗಳ ಅಭಿವ್ಯಕ್ತಿ, ಸುದ್ದಿವಿಶ್ಲೇಷಣೆ ಮುಂತಾದ ಸಂಗತಿಗಳಿಗೆ ಹೆಚ್ಚಿನ ಪ್ರಾಮುಖ್ಯ ದೊರಕುತ್ತಿದೆ. ವೀಡಿಯೋ, ದೀರ್ಘ ಲೇಖನ ಮುಂತಾದ ಹೊಸ ಆಯ್ಕೆಗಳನ್ನು ಬಳಸಿ ಗೆಳೆಯರಷ್ಟೇ ಅಲ್ಲ - ಜಾಹೀರಾತುದಾರರೂ ಅಲ್ಲಿ ನಮ್ಮನ್ನು ಸಂಪರ್ಕಿಸಲು ಕಾಯುತ್ತಿದ್ದಾರೆ. ಖ್ಯಾತನಾಮರನ್ನು "ಹಿಂಬಾಲಿಸಲು" ಮುಕ್ತ ಅವಕಾಶವಾಗಿದ್ದ ಟ್ವಿಟರ್ ಈಗ ಅದೆಷ್ಟೋ ಜನ ಸಾರ್ವಜನಿಕ ವರದಿಗಾರರನ್ನು ಹುಟ್ಟುಹಾಕಿದೆ.

ಎಲ್ಲ ವಿಷಯಗಳನ್ನೂ ಎಲ್ಲರೊಡನೆಯೂ ಹಂಚಿಕೊಳ್ಳುವುದು ಬೇಡವೆನ್ನುವ ಭಾವನೆ ನಿಧಾನವಾಗಿಯಾದರೂ ಬೆಳೆಯುತ್ತಿದೆ. ಇದು ಒಳ್ಳೆಯದೇ, ಆದರೆ ವಿಷಯಗಳನ್ನು ಹಂಚಿಕೊಳ್ಳಲು ಅವಕಾಶಗಳು ಹೆಚ್ಚಿದಂತೆ ಅನಗತ್ಯವಾದ - ಅನುಪಯುಕ್ತವಾದ ಮಾಹಿತಿಯ ಓಡಾಟವೂ ಹೆಚ್ಚಾಗಿದೆ: ಒಂದು ವಾಟ್ಸ್‌ಆಪ್ ಗುಂಪಿನಲ್ಲಿ ಕಾಣಿಸಿಕೊಂಡ ಯಾವುದೋ ಸಂದೇಶ ಐದು ನಿಮಿಷಗಳೊಳಗೆ ಇನ್ನು ನಾಲ್ಕು ಗುಂಪುಗಳ ಮೂಲಕ ನಮಗೆ ತಲುಪುತ್ತದೆ; ನಾಲ್ಕು ದಿನಗಳ ನಂತರ ಅದೇ ಗುಂಪುಗಳಲ್ಲಿ ಮತ್ತೆ ಅದೇ ಸಂದೇಶ. ಇನ್ನೂ ತಮಾಷೆಯೆಂದರೆ ನಿನ್ನೆ ವಾಟ್ಸ್‌ಆಪ್ ಮೂಲಕ ಬಂದ ಸಂದೇಶ ಇವತ್ತು ಫೇಸ್‌ಬುಕ್‌ನಲ್ಲಿ ಪ್ರತ್ಯಕ್ಷವಾಗುತ್ತದೆ. ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುವುದಕ್ಕಿಂತ ಹೆಚ್ಚಾಗಿ ಎಲ್ಲೋ ಸಿಕ್ಕಿದ (ಬಹಳಷ್ಟು ಸಾರಿ ಹಳಸಿದ) ಮಾಹಿತಿಯನ್ನು ಹಂಚುವುದರಲ್ಲೇ ನಾವು ಹೆಚ್ಚು ಬಿಜಿಯಾಗುತ್ತಿದ್ದೇವೆ.

ಈ ಹಿಂದೆ ಅಂಚೆ ಮೂಲಕ ಬರುತ್ತಿದ್ದ "ಇದನ್ನು ಇಪ್ಪತ್ತು ಜನಕ್ಕೆ ಕಳುಹಿಸಿ" ಎಂಬಂತಹ ಸಂದೇಶಗಳು ಇದೀಗ ವಾಟ್ಸ್‌ಆಪ್ ಮೂಲಕ ಬರುತ್ತಿವೆ. "ಕಳುಹಿಸಿದರೆ ನಿಮಗೆ ಭಗವಂತ ಒಳ್ಳೆಯದು ಮಾಡುತ್ತಾನೆ" ಎನ್ನುವುದು ಹೋಗಿ "ನಿಮ್ಮ ಮೊಬೈಲಿಗೆ ಐವತ್ತು ರೂಪಾಯಿ ರೀಚಾರ್ಜ್ ಬರುತ್ತದೆ" ಎಂದಾಗಿದೆ ಅಷ್ಟೆ. ಇಂತಹ ಸಂದೇಶಗಳನ್ನು ಹಂಚಿಕೊಳ್ಳಬೇಡಿ ಎಂದು ಯಾರು ಎಷ್ಟುಬಾರಿ ಹೇಳಿದರೂ ಒಬ್ಬರಲ್ಲ ಒಬ್ಬರು ಇದನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ: ತಂತ್ರಜ್ಞಾನ ಬೆಳೆದರೆ ಸಾಕೇ, ಬಳಸುವವರೂ ಬದಲಾಗಬೇಕಲ್ಲ!

ಅನಗತ್ಯ ಮಾಹಿತಿಯ ಓಡಾಟ ಮಾತ್ರವೇ ಅಲ್ಲ, ದ್ವೇಷ ಸಾಧನೆ - ಅವಹೇಳನಗಳನ್ನು ಗುರಿಯಾಗಿಟ್ಟುಕೊಂಡ ಸಂದೇಶಗಳ ಹರಿವಿಗೂ ವಾಟ್ಸ್‌ಆಪ್‌ನಂತಹ ಮಾಧ್ಯಮಗಳು ಬಳಕೆಯಾಗುತ್ತಿರುವುದು ಇನ್ನೊಂದು ಗಂಭೀರ ಸಂಗತಿ. ಸೀಮಿತ ಸಂಖ್ಯೆಯ ವ್ಯಕ್ತಿಗಳ ನಡುವೆ ಖಾಸಗಿ ಸಂವಹನದ ವಾಟ್ಸ್‌ಆಪ್ ಹಾಗಿರಲಿ, ಹೆಚ್ಚೂಕಡಿಮೆ ಸಾರ್ವಜನಿಕವೇ ಆದ ಟ್ವಿಟರ್ ಸಂವಹನದಲ್ಲೂ ಇಂತಹ ಸಮಸ್ಯೆ ಕಂಡುಬಂದಿದೆ. ಇಂತಹ ಸಂದೇಶಗಳನ್ನು ಕಳುಹಿಸಿದವರಿಗೆ ಶಿಕ್ಷೆಯಾದ ಉದಾಹರಣೆಗಳಿದ್ದರೂ ಈ ಪಿಡುಗು ಕಡಿಮೆಯಾಗದಿರುವುದು ದುರದೃಷ್ಟಕರವೇ ಸರಿ.

ಸಮಾಜಜಾಲಗಳು ಮೊಬೈಲಿನೊಳಗೆ ಸೇರಿಕೊಳ್ಳುವುದರ ಇನ್ನೊಂದು ಪರಿಣಾಮ, ಮಾಹಿತಿಯ ಮಿತಿಮೀರಿದ ಹಂಚಿಕೆ. ಯಾವಾಗ ಯಾರು ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ, ಅವರು ತಿಂದ ತಿಂಡಿಯ ಜೊತೆ ಚಟ್ನಿಯಿತ್ತೋ ಸಾಂಬಾರಿತ್ತೋ ಎನ್ನುವವರೆಗೆ ಸಮಾಜಜಾಲಗಳು ನಮಗೆ ಎಲ್ಲವನ್ನೂ ತಿಳಿಸುತ್ತಿವೆ. ಫೇಸ್‌ಬುಕ್‌ನಲ್ಲಿ ವಿವಿಧ ಸ್ಥಳಗಳಲ್ಲಿ ಕ್ಲಿಕ್ಕಿಸಿದ ಸೆಲ್ಫಿಗಳ ಮಹಾಪೂರವಾದರೆ ಇನ್ಸ್‌ಟಾಗ್ರಾಮ್‌ನಲ್ಲಿ (ಚಿತ್ರಗಳನ್ನು ಹಂಚಿಕೊಳ್ಳುವ ಸಮಾಜಜಾಲ) ವಿಧವಿಧ ತಿಂಡಿಗಳ ಚಿತ್ರದ ಪ್ರವಾಹ!

ಇಷ್ಟೆಲ್ಲ ಮಾಹಿತಿ ಹಂಚಿಕೊಳ್ಳುವುದು ವೈಯಕ್ತಿಕ ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದೋ ಅಲ್ಲವೋ ಎನ್ನುವುದು ನಾವೆಲ್ಲ ಕೇಳಿಕೊಳ್ಳಬೇಕಾದ ಪ್ರಶ್ನೆ. ವೈಯಕ್ತಿಕ ಸುರಕ್ಷತೆ ಹಾಗಿರಲಿ, ಹೋದಕಡೆಯಲ್ಲೆಲ್ಲ ಫೇಸ್‌ಬುಕ್‌ಗೆ ಫೋಟೋ ಸೇರಿಸುವುದು - ಪ್ರತಿಕ್ರಿಯೆಗಾಗಿ ಕಾಯುವುದೇ ನಮ್ಮ ಕೆಲಸವಾಗಿಬಿಟ್ಟರೆ ಕುಟುಂಬದೊಡನೆ ಸಂತೋಷವಾಗಿರುವುದು - ನೆಮ್ಮದಿಯಾಗಿ ಊಟಮಾಡುವುದು ಯಾವಾಗ?

ಜುಲೈ ೨೦೧೬ರ ತುಷಾರದಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge