ಟಿ. ಜಿ. ಶ್ರೀನಿಧಿ
ಕಂಪ್ಯೂಟರ್ ವಿಜ್ಞಾನ ಹಾಗೂ ನಮ್ಮ ದೇಶದ ನಂಟು ಸಾಕಷ್ಟು ಹಳೆಯದು. ಭಾರತದ ವೈಜ್ಞಾನಿಕ ಕಾರ್ಯಕ್ರಮಗಳಿಗೆ ಭದ್ರ ಬುನಾದಿ ಹಾಕಿಕೊಟ್ಟ ಹೋಮಿ ಭಾಭಾರಂತಹ ದಾರ್ಶನಿಕರ ಪ್ರಯತ್ನಗಳನ್ನು ಈ ನಂಟಿನ ಹಿನ್ನೆಲೆಯಲ್ಲಿ ನಾವು ಕಾಣಬಹುದು. ಭಾರತೀಯ ಕಂಪ್ಯೂಟರ್ ವಿಜ್ಞಾನ ಕ್ಷೇತ್ರದ ಭೀಷ್ಮಪಿತಾಮಹ ಪ್ರೊ. ಆರ್. ನರಸಿಂಹನ್ ನೇತೃತ್ವದಲ್ಲಿ ನಮ್ಮ ಮೊದಲ ಕಂಪ್ಯೂಟರ್ TIFRAC ಸೃಷ್ಟಿಯ ಕೆಲಸ ೧೯೫೦ರ ದಶಕದಲ್ಲೇ ಪ್ರಾರಂಭವಾಗಿತ್ತು. ಸರಿಸುಮಾರು ಇದೇ ಸಮಯದಲ್ಲಿ ಭಾರತದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲೂ ಕಂಪ್ಯೂಟರ್ ವಿಜ್ಞಾನ ಅಧ್ಯಯನದ ವಿಷಯಗಳಲ್ಲೊಂದಾಗಿ ಪ್ರಚಲಿತವಾಯಿತು.
ಇದರ ಬೆನ್ನಲ್ಲೇ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳೂ ಸಕ್ರಿಯವಾದವು. ವಾಯುಯಾನ, ಬೃಹತ್ ಕೈಗಾರಿಕೆ ಮುಂತಾದೆಡೆಗಳಂತೆ ಐಟಿ ಕ್ಷೇತ್ರದಲ್ಲೂ ಟಾಟಾ ಸಂಸ್ಥೆ ಪ್ರಾರಂಭಿಕ ಹಂತದಲ್ಲೇ ಭಾಗಿಯಾಗಿದ್ದು ವಿಶೇಷ. ೧೯೬೦-೮೦ರ ಆಸುಪಾಸಿನಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಪಟ್ನಿ ಕಂಪ್ಯೂಟರ್ ಸಿಸ್ಟಮ್ಸ್, ಎಚ್‌ಸಿಎಲ್ ಟೆಕ್ನಾಲಜೀಸ್, ವಿಪ್ರೋ, ಇನ್‌ಫೋಸಿಸ್ - ಹೀಗೆ ಹಲವು ಸಂಸ್ಥೆಗಳು ಕೆಲಸ ಪ್ರಾರಂಭಿಸಿದವು.
ನಮ್ಮಲ್ಲಿ ಲಭ್ಯವಿದ್ದ ಮಾನವ ಸಂಪನ್ಮೂಲವನ್ನೇ ಬಂಡವಾಳವನ್ನಾಗಿಟ್ಟುಕೊಂಡು ಬೆಳೆದ ಐಟಿ ಉದ್ದಿಮೆಯ ಪ್ರಾರಂಭಿಕ ಉದ್ದೇಶ ಹೊರದೇಶದ ಸಂಸ್ಥೆಗಳಲ್ಲಿ ಕೆಲಸಮಾಡಲು ಸಾಫ್ಟ್‌ವೇರ್ ತಂತ್ರಜ್ಞರನ್ನು ಒದಗಿಸುವುದಷ್ಟೇ ಆಗಿತ್ತು.
ತಂತ್ರಜ್ಞಾನದಲ್ಲಿ ಪರಿಣತರಾದವರನ್ನು ಅಂತಹವರ ಅಗತ್ಯವಿದ್ದ ಸಂಸ್ಥೆಗಳಿಗೆ ಕಳುಹಿಸಿಕೊಡುವುದು, ಹಾಗೂ ಆ ಸೇವೆಯನ್ನು ಒದಗಿಸಿಕೊಟ್ಟದ್ದಕ್ಕೆ ತಮ್ಮ ಶುಲ್ಕ ಪಡೆದುಕೊಳ್ಳುವುದು - ಇದು ಈ ಕ್ಷೇತ್ರದ ಬಹಳಷ್ಟು ಸಂಸ್ಥೆಗಳ ಪ್ರಾಥಮಿಕ ಚಟುವಟಿಕೆಯಾಗಿತ್ತು ಎನ್ನಬಹುದು.
ಪ್ರಾರಂಭಿಕ ವರ್ಷಗಳಲ್ಲಿ ಐಟಿ ಉದ್ದಿಮೆಯ ಬೆಳವಣಿಗೆ ಅಷ್ಟೇನೂ ಉತ್ತಮವಾಗಿರಲಿಲ್ಲ. ಕಂಪ್ಯೂಟರ್ ಆಮದು ಮಾಡಿಕೊಳ್ಳುವುದಿರಲಿ, ಹೊಸದೊಂದು ದೂರವಾಣಿ ಸಂಪರ್ಕ ಪಡೆಯಲೂ ವರ್ಷಗಟ್ಟಲೆ ಕಾಯುವಂತಹ ಪರಿಸ್ಥಿತಿ ಇತ್ತು.
ಇಂತಹ ಪರಿಸ್ಥಿತಿಯ ನಡುವೆಯೇ ಒಂದಷ್ಟು ಪ್ರಗತಿಯೂ ನಡೆದಿತ್ತು. ಭಾರತದಲ್ಲೇ ಕೆಲ ಕಂಪ್ಯೂಟರುಗಳ ವಿನ್ಯಾಸವಾಯಿತು, ಮುಂಬಯಿಯಲ್ಲೊಂದು ಇಲೆಕ್ಟ್ರಾನಿಕ್ಸ್ ಎಕ್ಸ್‌ಪೋರ್ಟ್ ಪ್ರಾಸೆಸಿಂಗ್ ವಲಯದ ಸ್ಥಾಪನೆಯಾಯಿತು, ೧೯೭೯ರ ವೇಳೆಗೆ ಖಾಸಗಿ ಸಂಸ್ಥೆಗಳೂ ಕಂಪ್ಯೂಟರ್ ತಯಾರಿಸಲು ಪ್ರಾರಂಭಿಸಿದವು.
ಈ ನಡುವೆ ವಿದೇಶಿ ವಿನಿಮಯ ಕುರಿತ ಕಠಿಣ ನಿಯಮಗಳು ಜಾರಿಗೆ ಬಂದವು. ಇದೇ ಸಂದರ್ಭದಲ್ಲಿ ಐಬಿಎಂ ಸೇರಿದಂತೆ ಹಲವು ಬಹುರಾಷ್ಟ್ರೀಯ ಸಂಸ್ಥೆಗಳು ಭಾರತದಲ್ಲಿ ತಮ್ಮ ವಹಿವಾಟು ನಿಲ್ಲಿಸುವ ಪರಿಸ್ಥಿತಿ ಸೃಷ್ಟಿಯಾಯಿತು. ದೇಶದ ಹಲವೆಡೆ ಕಾರ್ಯನಿರ್ವಹಿಸುತ್ತಿದ್ದ ಐಬಿಎಂ ಕಂಪ್ಯೂಟರುಗಳನ್ನು ನಿರ್ವಹಿಸಲೆಂದೇ ಸರಕಾರಿ ಸ್ವಾಮ್ಯದ 'ಕಂಪ್ಯೂಟರ್ ಮೇಂಟೆನೆನ್ಸ್ ಕಾರ್ಪೊರೇಶನ್' ಕೂಡ ಹುಟ್ಟಿಕೊಂಡಿತು.
ಈ ನಡುವೆ ೧೯೭೬ರಲ್ಲಿ ಪ್ರಾರಂಭವಾದ ನ್ಯಾಶನಲ್ ಇನ್‌ಫರ್ಮ್ಯಾಟಿಕ್ಸ್ ಸೆಂಟರ್ (ಎನ್‌ಐಸಿ) ಸರಕಾರಿ ಸಂಸ್ಥೆಗಳಿಗೆ ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ಒದಗಿಸಲು ಪ್ರಾರಂಭಿಸಿತು. ಸರಕಾರದ್ದೇ ಇನ್ನೊಂದು ಸಂಸ್ಥೆ ಸಿಡ್ಯಾಕ್ ವತಿಯಿಂದ ಸೂಪರ್‌ಕಂಪ್ಯೂಟರ್ ಕ್ಷೇತ್ರದಲ್ಲೂ ಕೆಲಸ ಪ್ರಾರಂಭವಾಯಿತು.
ಕೇಂದ್ರ ಸರಕಾರದ ಜೊತೆಜೊತೆಗೆ ರಾಜ್ಯ ಸರಕಾರಗಳ ಮಟ್ಟದಲ್ಲೂ ಗಮನಾರ್ಹ ಕೆಲಸಗಳು ಸಾಗಿದ್ದವು. ಕರ್ನಾಟಕ ಸರಕಾರದ ಉದ್ದಿಮೆ ಕಿಯೋನಿಕ್ಸ್‌ನ ಪ್ರಯತ್ನದಿಂದ ೧೯೭೮ರಷ್ಟು ಹಿಂದೆಯೇ ಬೆಂಗಳೂರು ಹೊರವಲಯದಲ್ಲಿ ಇಲೆಕ್ಟ್ರಾನಿಕ್ಸ್ ಸಿಟಿಯ ನಿರ್ಮಾಣವಾಯಿತು.
ವಿಪ್ರೋ, ಇನ್‌ಫೋಸಿಸ್, ಎನ್‌ಐಐಟಿಯಂತಹ ಅಂದಿನ 'ಸ್ಟಾರ್ಟ್‌ಅಪ್'ಗಳು ಎಂಬತ್ತರ ದಶಕದಲ್ಲಿ ಪ್ರಾರಂಭವಾದವು. ಆ ವೇಳೆಗೆ ಕಂಪ್ಯೂಟರುಗಳ ಆಮದು ಕೂಡ ಕೊಂಚಮಟ್ಟಿಗೆ ಸುಲಭವಾಗಿತ್ತು.
ಇವೆಲ್ಲದರ ಜೊತೆಗೆ ಕಂಪ್ಯೂಟರ್ ಜಗತ್ತೂ ಬದಲಾಗುತ್ತಿತ್ತು. ಪ್ರೋಗ್ರಾಮಿಂಗ್ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗುತ್ತಿದ್ದಂತೆ ನಿರ್ದಿಷ್ಟ ಯಂತ್ರಾಂಶದ ಮೇಲೆ ಅವಲಂಬಿತವಾಗಿರದ ತಂತ್ರಾಂಶಗಳ ಸೃಷ್ಟಿ ಸಾಧ್ಯವಾಯಿತು. ಇದರ ಪರಿಣಾಮವಾಗಿ ತಂತ್ರಾಂಶ ಹಾಗೂ ತಂತ್ರಾಂಶ ಸೇವೆಗಳನ್ನು 'ರಫ್ತು ಮಾಡುವ' ಪರಿಕಲ್ಪನೆಯೂ ಬೆಳೆಯಿತು. ಸರಕಾರದ ಮಟ್ಟದಲ್ಲಿ ಇದಕ್ಕೆ ಪೂರಕವಾದ ಕೆಲ ಕಾರ್ಯನೀತಿಗಳೂ (ಉದಾ: ಕಂಪ್ಯೂಟರ್ ಪಾಲಿಸಿ ೧೯೮೪, ಸಾಫ್ಟ್‌ವೇರ್ ಪಾಲಿಸಿ ೧೯೮೬) ರೂಪುಗೊಂಡವು.
ಹೊರದೇಶಗಳಿಗೆ ಮಾತ್ರವೇ ಅಲ್ಲ, ಭಾರತದೊಳಗಿನ ಗ್ರಾಹಕರಿಗೂ ಐಟಿ ಕ್ಷೇತ್ರ ಸೇವೆ ಒದಗಿಸಲು ಪ್ರಾರಂಭಿಸಿತು. ಭಾರತೀಯ ಬ್ಯಾಂಕುಗಳ ಕಂಪ್ಯೂಟರೀಕರಣ, ಭಾರತೀಯ ರೇಲ್ವೆಯ ಮುಂಗಡ ಕಾಯ್ದಿರಿಸುವಿಕೆ ವ್ಯವಸ್ಥೆಗಳೆಲ್ಲ ನಮ್ಮ ತಂತ್ರಜ್ಞರಿಗೆ - ಸಂಸ್ಥೆಗಳಿಗೆ ಈ ಕ್ಷೇತ್ರದಲ್ಲಿ ಮಹತ್ವದ ಅನುಭವವನ್ನು ಒದಗಿಸಿಕೊಟ್ಟವು. ಇದರ ಜೊತೆಜೊತೆಗೇ ಬಹುರಾಷ್ಟ್ರೀಯ ಸಂಸ್ಥೆಗಳೂ ಮತ್ತೆ ಭಾರತದತ್ತ ಮುಖಮಾಡಲು ಪ್ರಾರಂಭಿಸಿದವು.
ಇದೆಲ್ಲ ಬೆಳವಣಿಗೆಗಳಿಗೆ ಪೂರಕವಾಗಿ ಬಂದದ್ದು ೧೯೯೧ರ ಉದಾರೀಕರಣ.
ಉದಾರೀಕರಣದ ಪರಿಣಾಮವಾಗಿ ಲೈಸನ್ಸ್ ರಾಜ್ ಕೊನೆಗೊಂಡು ವ್ಯಾಪಾರ ವಹಿವಾಟುಗಳನ್ನು ನಡೆಸುವುದು ಸರಳವಾದ ಮೇಲೆ ಭಾರತದಲ್ಲಿ ಐಟಿ ಉದ್ದಿಮೆ - ವಿಶೇಷವಾಗಿ ಐಟಿ ಸೇವೆಗಳ ರಫ್ತು - ವ್ಯಾಪಕವಾಗಿ ಬೆಳೆಯಿತು. ಭಾರತೀಯ ಸಂಸ್ಥೆಗಳು ಬೆಳೆದದ್ದು ಮಾತ್ರವಲ್ಲ, ನಮ್ಮಲ್ಲಿ ವಿಪುಲವಾಗಿ ದೊರಕುವ ಸುಶಿಕ್ಷಿತ ಮಾನವ ಸಂಪನ್ಮೂಲವನ್ನು ಬಳಸಿಕೊಳ್ಳಲು ಹಲವು ವಿದೇಶೀ ಸಂಸ್ಥೆಗಳೂ ಮುಂದೆಬಂದವು.
ಇದೇ ಸುಮಾರಿಗೆ ದೂರಸಂಪರ್ಕ ಕ್ಷೇತ್ರ ಕೂಡ ತೀವ್ರಗತಿಯಲ್ಲಿ ಬೆಳೆಯಿತು. ಕಂಪ್ಯೂಟರ್ ವಿಜ್ಞಾನ ಹಾಗೂ ಸಂವಹನ ತಂತ್ರಜ್ಞಾನಗಳಲ್ಲಿ ಸಂಭವಿಸಿದ್ದ ಬೆಳವಣಿಗೆಗಳ ಪರಿಣಾಮವಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳು ಎಲ್ಲಿಂದ ಬೇಕಿದ್ದರೂ ಕೆಲಸಮಾಡುವುದು ಸಾಧ್ಯವಾಯಿತು. ಇದರ ಪರಿಣಾಮವಾಗಿ ಗ್ರಾಹಕರ ಕಚೇರಿಯಲ್ಲಿ, ಅವರ ಕಂಪ್ಯೂಟರನ್ನು ಬಳಸಿಯೇ ಕೆಲಸಮಾಡುವ ಅನಿವಾರ್ಯತೆಯೂ ಹೋಯಿತು; ಭಾರತದಿಂದಲೇ ಕೆಲಸಮಾಡಿ ಅದನ್ನು ಗ್ರಾಹಕರಲ್ಲಿಗೆ 'ಕಳುಹಿಸುವ' ಅಭ್ಯಾಸ ವ್ಯಾಪಕವಾಗಿ ಬೆಳೆಯಿತು.
ಮುಂದಿನ ದಿನಗಳಲ್ಲಿ ಸುದ್ದಿಮಾಡಿದ ವೈಟೂಕೆ ಸಮಸ್ಯೆ ಹಾಗೂ 'ಡಾಟ್‌ಕಾಮ್ ಬೂಮ್'ಗಳೂ ಭಾರತೀಯ ಐಟಿ ಸಂಸ್ಥೆಗಳ ಬೆಳವಣಿಗೆಗೆ ಸಾಕಷ್ಟು ನೆರವು ನೀಡಿದವು. ಆನಂತರದಲ್ಲಿ ಕೆಲ ಸಂಕಷ್ಟದ ದಿನಗಳು ಬಂದವಾದರೂ ಐಟಿ ಕ್ಷೇತ್ರ ತನ್ನ ಸಮಸ್ಯೆಗಳಿಂದ ಸಾಕಷ್ಟು ವೇಗವಾಗಿಯೇ ಹೊರಗೆ ಬಂತು. ಬಿಸಿನೆಸ್ ಪ್ರಾಸೆಸ್ ಔಟ್‌ಸೋರ್ಸಿಂಗ್ ಪರಿಕಲ್ಪನೆ ಪರಿಚಯವಾದ ಮೇಲೆ ಬರಿಯ ಸಾಫ್ಟ್‌ವೇರ್ ಅಭಿವೃದ್ಧಿ ಮಾತ್ರವಲ್ಲದೆ ಇನ್ನೂ ಹಲವು ಕೆಲಸಗಳಲ್ಲೂ ಈ ಕ್ಷೇತ್ರ ತನ್ನನ್ನು ತೊಡಗಿಸಿಕೊಂಡಿತು.
ಭಾರತದ ಐಟಿ ಉದ್ದಿಮೆ ಬೆಳೆಯುತ್ತ ಹೋದಂತೆ ಹೊರದೇಶಗಳ ಅದೆಷ್ಟೋ ಸಂಸ್ಥೆಗಳು ತಮ್ಮ ಮಾಹಿತಿ ತಂತ್ರಜ್ಞಾನದ ಅಗತ್ಯಗಳಿಗಾಗಿ ನಮ್ಮ ದೇಶದತ್ತ ಮುಖಮಾಡಲು ಪ್ರಾರಂಭಿಸಿದವು. ಡಾಲರಿನಲ್ಲೋ ಪೌಂಡು-ಯೂರೋಗಳಲ್ಲೋ ಗಳಿಸುವ ಸಂಸ್ಥೆಗಳಿಗೆ ರೂಪಾಯಿಗಳಲ್ಲಿ ಸಂಬಳಕೊಟ್ಟು ಕೆಲಸಮಾಡಿಸಿಕೊಳ್ಳುವುದು ಉಳಿತಾಯದ ಹೊಸ ಹಾದಿಯಾಗಿಯೂ ಕಾಣಿಸಿತು. ಈ ಅಭ್ಯಾಸ ಎಷ್ಟರ ಮಟ್ಟಿಗೆ ಬೆಳೆಯಿತೆಂದರೆ ವಿದೇಶಿ ಸಂಸ್ಥೆಗಳು ತಮ್ಮ ಹೊಸ ಅಗತ್ಯಗಳಿಗಾಗಿ ಮಾತ್ರ ಭಾರತದತ್ತ ನೋಡುವುದರ ಬದಲಿಗೆ ತಮ್ಮಲ್ಲಿ ನಡೆಯುತ್ತಿದ್ದ ಐಟಿ ಕೆಲಸವಷ್ಟನ್ನೂ ಇಲ್ಲಿನ ಸಂಸ್ಥೆಗಳಿಗೆ ವಹಿಸಿಕೊಡಲು ಪ್ರಾರಂಭಿಸಿದವು.
ಇಂದಿಗೂ ಭಾರತೀಯ ಐಟಿ ಉದ್ದಿಮೆ ನಿರ್ವಹಿಸುವ ಕೆಲಸದ ದೊಡ್ಡ ಪಾಲು ಇಂತಹ ಹೊರಗುತ್ತಿಗೆ ಕೆಲಸಗಳದ್ದೇ. ಈ ಕ್ಷೇತ್ರದ ಬಹಳಷ್ಟು ಸಂಸ್ಥೆಗಳು ತಮ್ಮ ಗ್ರಾಹಕರು ಬಳಸುವ ವಿವಿಧ ಕಂಪ್ಯೂಟರ್ ವ್ಯವಸ್ಥೆಗಳ ನಿರ್ವಹಣೆ ಮತ್ತು ಅದಕ್ಕೆ ಪೂರಕವಾದ ತಂತ್ರಾಂಶಗಳ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ದಶಕಗಳ ಹಿಂದಿನ ಮೇನ್‌ಫ್ರೇಮ್ ಇರಲಿ, ಇಂದಿನ ಕ್ಲೌಡ್ ಕಂಪ್ಯೂಟಿಂಗ್ - ಮೊಬೈಲ್ ಆಪ್ ಇತ್ಯಾದಿಗಳೇ ಇರಲಿ ಪ್ರತಿಯೊಂದು ತಂತ್ರಜ್ಞಾನವನ್ನೂ ತಮ್ಮ ಕೆಲಸದಲ್ಲಿ ಬಳಸುವ ಐಟಿ ಉದ್ಯೋಗಿಗಳು ನಮ್ಮಲ್ಲಿದ್ದಾರೆ.
ಹೊರಗುತ್ತಿಗೆ, ಅಂದರೆ 'ಔಟ್‌ಸೋರ್ಸಿಂಗ್'ನ ಈ ಅಭ್ಯಾಸ ಬೆಳೆದಂತೆ ವಿವಿಧ ಸೇವಾಸಂಸ್ಥೆಗಳ ನಡುವಿನ ಸ್ಪರ್ಧೆ ಹೆಚ್ಚಿತು. ಮುಂದೆ ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಏರುಪೇರುಗಳಾದಾಗ ಕೆಲಸಗಳನ್ನು ಹೊರಗುತ್ತಿಗೆ ನೀಡುವವರು ಕೂಡ ತಮ್ಮ ವೆಚ್ಚವನ್ನು ಆದಷ್ಟೂ ಕಡಿಮೆಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಪ್ರಾರಂಭಿಸಿದರು.
ಇವೆಲ್ಲದರ ಪರಿಣಾಮವಾಗಿ ಭಾರತೀಯ ಐಟಿ ಉದ್ದಿಮೆ ಕಡಿಮೆ ವೆಚ್ಚದ ಸೇವೆಯನ್ನೇ ತನ್ನ ಪ್ರಮುಖ ಗುರಿಯನ್ನಾಗಿಸಿಕೊಂಡುಬಿಟ್ಟಿದೆ; ಇದು ಖಂಡಿತಾ ಒಳ್ಳೆಯ ಬೆಳವಣಿಗೆಯಲ್ಲ ಎನ್ನುವುದು ತಜ್ಞರ ಅನಿಸಿಕೆ. ಕಡಿಮೆ ವೆಚ್ಚದ ಧ್ಯೇಯವನ್ನು ಬೆನ್ನಟ್ಟಿ ಓಡುವ ರಭಸದಲ್ಲಿ ಕೆಲಸದ ಮೌಲ್ಯವರ್ಧನೆಯತ್ತ ಹೆಚ್ಚು ಗಮನ ನೀಡದಿರುವುದು ದೀರ್ಘಾವಧಿಯಲ್ಲಿ ಭಾರತೀಯ ಐಟಿ ಉದ್ದಿಮೆಗೆ ತೊಂದರೆಯುಂಟುಮಾಡುವ ಸಂಗತಿಯೇ ಸರಿ.
ನಿಜ, ಗ್ರಾಹಕರಿಂದ ನಿರ್ದೇಶನಗಳನ್ನು ಪಡೆದು ಅದಷ್ಟೇ ಕೆಲಸವನ್ನು ಮಾಡಿಕೊಡುವ ಬದಲಿಗೆ ಸ್ವತಃ ತಾವೇ ತಮ್ಮ ಗ್ರಾಹಕರಿಗೆ ತಂತ್ರಜ್ಞಾನದ ವಿಷಯದಲ್ಲಿ ಮಾರ್ಗದರ್ಶಕರಾಗುವ ಮಟ್ಟಕ್ಕೆ ನಮ್ಮ ಎಲ್ಲ ಸಂಸ್ಥೆಗಳೂ ಬೆಳೆದಿಲ್ಲ. ತಮ್ಮ ಕೆಲಸಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ತಿಳಿದುಕೊಂಡು ಮುಂದುವರೆಯುವ ಬದಲಿಗೆ ತಮ್ಮ ಗ್ರಾಹಕರ ಕಾರ್ಯಕ್ಷೇತ್ರದ (ಡೊಮೈನ್) ಕುರಿತು ಹೆಚ್ಚಿನ ಅರಿವು ಪಡೆದುಕೊಳ್ಳುವ ಮನೋಭಾವ, ಆ ಕ್ಷೇತ್ರದಲ್ಲಿ ಹೊಸ ಬೆಳವಣಿಗೆಗಳಿಗೆ ಕಾರಣರಾಗುವ ಹುಮ್ಮಸ್ಸು ಕೂಡ ಬೆಳೆಯಬೇಕಿದೆ. ತಂತ್ರಜ್ಞಾನದ ವಿಷಯದಲ್ಲೂ ಅಷ್ಟೇ, ತಮ್ಮ ಜ್ಞಾನವನ್ನು ಕಾಲಕಾಲಕ್ಕೆ ವಿಸ್ತರಿಸಿಕೊಳ್ಳದ ಉದ್ಯೋಗಿಗಳು ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಘಟನೆಗಳು ಈಗಾಗಲೇ ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚುವ ಸೂಚನೆಯೂ ಇದೆ.
ಬುದ್ಧಿಮತ್ತೆ ಹಾಗೂ ಕೌಶಲವನ್ನು ಆಧರಿಸಿದ ಕ್ಷೇತ್ರ ಎಂಬ ಹಣೆಪಟ್ಟಿಯೂ ಬಹಳಷ್ಟು ಸಂದರ್ಭಗಳಲ್ಲಿ ನಮ್ಮ ಐಟಿ ಉದ್ದಿಮೆಗೆ ಹೊಂದುವುದಿಲ್ಲ ಎನ್ನುವುದು ಆಗಾಗ್ಗೆ ಕೇಳಿಬರುವ ಇನ್ನೊಂದು ಆಪಾದನೆ. ಇದರಲ್ಲಿ ಸತ್ಯವೂ ಇಲ್ಲದಿಲ್ಲ. ದೊಡ್ಡ ಸಂಬಳದೊಡನೆ ಯುವಜನರನ್ನು ತಮ್ಮತ್ತ ಸೆಳೆಯುವ ಸಂಸ್ಥೆಗಳು ಬಹಳಷ್ಟು ಸಾರಿ ಅವರ ಪೂರ್ಣ ಬೌದ್ಧಿಕ ಸಾಮರ್ಥ್ಯವನ್ನು ಬಳಸಿಕೊಳ್ಳುವಲ್ಲಿ ಸೋಲುತ್ತವೆ ಎಂದು ಭಾರತರತ್ನ ಸಿಎನ್‌ಆರ್ ರಾವ್‌ರಂತಹ ಹಿರಿಯರೇ ಹೇಳಿದ್ದೂ ಇದೆ. ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಗಳೊಡನೆ ನಿರಂತರ ಸಂಪರ್ಕ ಏರ್ಪಡಿಸಿಕೊಳ್ಳುವಲ್ಲೂ ಬಹಳಷ್ಟು ಐಟಿ ಸಂಸ್ಥೆಗಳ ಸಾಧನೆ ಹೇಳಿಕೊಳ್ಳುವ ಮಟ್ಟದಲ್ಲಿಲ್ಲ.
ಯುವಜನತೆಯ ಬೌದ್ಧಿಕ ಸಾಮರ್ಥ್ಯಕ್ಕೆ ತಕ್ಕುದಾದ ಸವಾಲುಗಳನ್ನು ಸೃಷ್ಟಿಸಲು ಬಹಳಷ್ಟು ಐಟಿ ಸಂಸ್ಥೆಗಳು ಸೋಲುತ್ತಿವೆ ಎನ್ನುವ ಆರೋಪ ಒಂದು ಕಡೆಯಾದರೆ ಕಾಲೇಜುಗಳಿಂದ ಹೊರಬರುತ್ತಿರುವ ವಿದ್ಯಾರ್ಥಿಗಳಲ್ಲಿ ಬಹುಮಂದಿ ಇಂತಹ ಸಂಸ್ಥೆಗಳ ಅಪೇಕ್ಷಿಸುವ ಮಟ್ಟವನ್ನೂ ಮುಟ್ಟುತ್ತಿಲ್ಲ ಎನ್ನುವುದು ಇನ್ನೊಂದು ಸಮಸ್ಯೆ. ತರ್ಕಬದ್ಧ ಆಲೋಚನೆ, ಸ್ಪಷ್ಟ ಸಂವಹನದಂತಹ ಮೂಲಭೂತ ಗುಣಗಳನ್ನು ಬೆಳೆಸಿಕೊಳ್ಳುವಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಿಸದಿರುವುದು (ಹಾಗೂ ಅದಕ್ಕೆ ಪೂರಕವಾದ ವಾತಾವರಣ ಕಾಲೇಜುಗಳಲ್ಲಿ ನಿರ್ಮಾಣವಾಗದಿರುವುದು) ನಿಜಕ್ಕೂ ಚಿಂತೆಗೀಡುಮಾಡುವ ಸಂಗತಿಯೇ ಎನ್ನಬೇಕು - ಅದು ಬರಿಯ ಐಟಿ ಕ್ಷೇತ್ರಕ್ಕೆ ಮಾತ್ರವೇ ಅಲ್ಲ!
ಪ್ರಾರಂಭಿಕ ದಿನಗಳಿಂದಲೂ ವಿದೇಶೀ ಗ್ರಾಹಕರನ್ನೇ ಮುಖ್ಯವಾಗಿ ಗಮನದಲ್ಲಿಟ್ಟುಕೊಂಡಿದ್ದ ಭಾರತೀಯ ಐಟಿ ಉದ್ದಿಮೆ, ಕೆಲ ಉದಾಹರಣೆಗಳನ್ನು ಹೊರತುಪಡಿಸಿ, ಭಾರತವನ್ನು ತನ್ನ ಮಾರುಕಟ್ಟೆಯೆಂದು ಪರಿಗಣಿಸಿದ್ದು ಅಪರೂಪವೆಂದೇ ಹೇಳಬೇಕು. ಈಚಿನ ವರ್ಷಗಳಲ್ಲಿ ಈ ಪರಿಸ್ಥಿತಿ ಗಮನಾರ್ಹವಾಗಿ ಬದಲಾಗಿರುವುದು ಸಂತೋಷದ ವಿಷಯ. ಹಣಕಾಸು ವ್ಯವಹಾರ, ಆಡಳಿತ, ವ್ಯಾಪಾರ ವಹಿವಾಟು, ಸಾರಿಗೆ, ಸಂಪರ್ಕ ಮಾಧ್ಯಮಗಳೇ ಮೊದಲಾದ ಪ್ರತಿಯೊಂದು ಕ್ಷೇತ್ರದಲ್ಲೂ ಆಗುತ್ತಿರುವ ಬದಲಾವಣೆಗಳು ಐಟಿ ಉದ್ದಿಮೆಯ ಪಾಲಿಗೆ ಭಾರತವನ್ನೂ ಮಹತ್ವದ ಮಾರುಕಟ್ಟೆಯಾಗಿ ರೂಪಿಸಿವೆ. ಇದರ ಜೊತೆಗೆ ಮಾಹಿತಿ ತಂತ್ರಜ್ಞಾನದ ಉಪಯೋಗಗಳು ಸಾಮಾನ್ಯ ಜನತೆಗೂ ದೊರಕಲು ಪ್ರಾರಂಭವಾಗಿವೆ.
ನಮ್ಮ ಐಟಿ ಉದ್ದಿಮೆ ಹೊರಗುತ್ತಿಗೆಯ ಕೆಲಸಗಳಿಗಷ್ಟೇ ಲಾಯಕ್ಕು ಎನ್ನುವ ಅಭಿಪ್ರಾಯವನ್ನು ಬದಲಿಸುವ ನಿಟ್ಟಿನಲ್ಲೂ ಪ್ರಯತ್ನಗಳು ನಡೆದಿರುವುದು ಗಮನಾರ್ಹ. ಮಾಹಿತಿ ತಂತ್ರಜ್ಞಾನದ ನೆರವಿನಿಂದ ಹೊಸ ಪರಿಕಲ್ಪನೆಗಳನ್ನು ಪರಿಚಯಿಸುತ್ತಿರುವ ಭಾರತೀಯ ಸಂಸ್ಥೆಗಳು ನಮ್ಮ ಐಟಿ ಜಗತ್ತಿನಲ್ಲಿ ಸೇವೆಗಳ (ಸರ್ವಿಸ್) ಜೊತೆಗೆ ಉತ್ಪನ್ನಗಳಿಗೂ (ಪ್ರಾಡಕ್ಟ್) ಜಾಗ ಒದಗಿಸಿಕೊಡುವ ಪ್ರಯತ್ನದಲ್ಲಿವೆ. ತಂತ್ರಾಂಶದ ಜೊತೆಗೆ ಯಂತ್ರಾಂಶ ಅಭಿವೃದ್ಧಿಯಲ್ಲೂ ಕೆಲಸಗಳು ನಡೆಯುತ್ತಿವೆ.
ಎಷ್ಟು ಕಡಿಮೆ ಖರ್ಚಿನಲ್ಲಿ ಕೆಲಸಮಾಡಬಹುದು ಎಂದು ಯೋಚಿಸುವ ಜೊತೆಗೆ ಹೊಸದಾಗಿ ಏನೇನೆಲ್ಲ ರೂಪಿಸಬಹುದು ಎಂದು ಯೋಚಿಸುವುದನ್ನೂ ನಮ್ಮ ಐಟಿ ಉದ್ಯಮ ಕಲಿಯುತ್ತಿದೆ. ಸರಕಾರದಿಂದ ಪೂರಕ ವಾತಾವರಣ ಸೃಷ್ಟಿಯಾಗಿ ಹೂಡಿಕೆದಾರರ ಸೂಕ್ತ ಬೆಂಬಲವೂ ದೊರೆತರೆ, ಈ ಕ್ಷೇತ್ರದಲ್ಲಿ ಆಗಿಂದಾಗ್ಗೆ ನಡೆಯುವ ಅತಿರೇಕಗಳಿಗೆ (ಉದಾ: ಈಚಿನ ವರ್ಷಗಳ ಇ-ಕಾಮರ್ಸ್ ರಿಯಾಯಿತಿಗಳ ಭರಾಟೆ) ಕೊಂಚ ಕಡಿವಾಣ ಬಿದ್ದರೆ, ಭಾರತೀಯ ಐಟಿ ಉದ್ದಿಮೆಯ ಇತಿಹಾಸದಲ್ಲಿ ಹೊಸದೊಂದು ಅಧ್ಯಾಯ ತೆರೆದುಕೊಳ್ಳಲು ಯಾವ ಅಡ್ಡಿಯೂ ಇಲ್ಲ!
ಜುಲೈ ೧೨, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

1 ಕಾಮೆಂಟ್:
೧೯೯೧ರ ಉದಾರೀಕರಣ ನೀತಿಯಿ೦ದ ಬೆ೦ಗಳೂರಿನ ಜೀವಾಳವಾದ ಅನೇಕ ಸಾರ್ವಜನಿಕ ಉದ್ದಿಮೆಗಳು( ಪಬ್ಲಿಕ್ ಸೆಕ್ಟಾರಗಳು) ಅಧೋಗತಿಗೆ ಇಳಿದದ್ದು ಸತ್ಯ.
ಮಾಹಿತಿ ತಂತ್ರಜ್ಞಾನದ ನೆರವಿನಿಂದ ಹೊಸ ಪರಿಕಲ್ಪನೆಗಳನ್ನು ಪರಿಚಯಿಸಿ,ಇವುಗಳ ಪುನರುಜ್ಜೀವನಗೊಳಿಸುವತ್ತ ಗಮನ ಹರಿಸಿದರೆ, ಸೂಕ್ತ ಬೆಂಬಲವೂ ದೊರೆತು,ಭಾರತೀಯ ಸಾರ್ವಜನಿಕ ಉದ್ದಿಮೆಯ ಇತಿಹಾಸದಲ್ಲಿ ಹೊಸದೊಂದು ಅಧ್ಯಾಯ ತೆರೆದುಕೊ೦ಡ೦ತೆಯೇ ಸರಿ.
ಕಾಮೆಂಟ್ ಪೋಸ್ಟ್ ಮಾಡಿ