ಬುಧವಾರ, ಮೇ 23, 2018

ಎಸ್ಸೆಮ್ಮೆಸ್‌ಗೆ ಮರುಹುಟ್ಟು

ಟಿ. ಜಿ. ಶ್ರೀನಿಧಿ

ಮೊಬೈಲ್ ಫೋನ್ ಪರಿಚಯವಾದ ಹೊಸದರಲ್ಲಿ ಅದರಲ್ಲಿ ಕೆಲವೇ ಆಯ್ಕೆಗಳು ಇರುತ್ತಿದ್ದವು. ಮಾತನಾಡಬೇಕಾದರೆ ದೂರವಾಣಿ ಕರೆ, ಸಂದೇಶ ಕಳಿಸಬೇಕಾದರೆ ಎಸ್ಸೆಮ್ಮೆಸ್ - ಆಗ ನಮಗಿರುತ್ತಿದ್ದ ಆಯ್ಕೆಯ ಸ್ವಾತಂತ್ರ್ಯ ಇಷ್ಟೇ.

ಆದರೆ ಈಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಸ್ಮಾರ್ಟ್‌ಫೋನ್ ಹಾಗೂ ಅದರಲ್ಲಿ ಬಳಸಬಹುದಾದ ಆಪ್‌ಗಳಿಂದಾಗಿ ಪ್ರತಿ ಕೆಲಸಕ್ಕೂ ಹತ್ತಾರು ಆಯ್ಕೆಗಳು ನಮಗೆ ದೊರಕುತ್ತಿವೆ. ಸಂದೇಶ ಕಳಿಸುವ ಉದಾಹರಣೆಯನ್ನೇ ತೆಗೆದುಕೊಂಡರೆ ಈಗ ವಾಟ್ಸ್‌ಆಪ್, ಮೆಸೆಂಜರ್, ಟೆಲಿಗ್ರಾಂ ಮುಂತಾದ ಆಪ್‌ಗಳದೇ ರಾಜ್ಯಭಾರ. ಕೆಲ ವರ್ಷಗಳ ಹಿಂದೆ ವ್ಯಾಪಕವಾಗಿ ಬಳಕೆಯಾಗುತ್ತಿದ್ದ ಎಸ್ಸೆಮ್ಮೆಸ್ ಇದೀಗ ಹೆಚ್ಚಾಗಿ ಬಳಕೆಯಾಗುತ್ತಿರುವುದು ಓಟಿಪಿ ಪಡೆದುಕೊಳ್ಳಲು ಮಾತ್ರವೇ ಇರಬೇಕೇನೋ!

ಎಸ್ಸೆಮ್ಮೆಸ್ (ಶಾರ್ಟ್ ಮೆಸೇಜ್ ಸರ್ವಿಸ್) ಮಾನಕ ಅಭಿವೃದ್ಧಿಯಾದದ್ದು ಮೊಬೈಲ್ ತಂತ್ರಜ್ಞಾನದ ಪ್ರಾರಂಭಿಕ ವರ್ಷಗಳಲ್ಲಿ. ಯಾವುದೇ ಸಂಸ್ಥೆ ತಯಾರಿಸಿದ ಮೊಬೈಲ್ ಫೋನ್‌ಗಳನ್ನು ಬಳಸಿ ಯಾವ ಜಾಲದಲ್ಲೇ ಆದರೂ ಸಂದೇಶ ವಿನಿಮಯ ಮಾಡಿಕೊಳ್ಳುವುದನ್ನು ಸಾಧ್ಯವಾಗಿಸಿದ್ದು ಎಸ್ಸೆಮ್ಮೆಸ್‌ನ ಹೆಗ್ಗಳಿಕೆ. ಇದೇ ಕಾರಣದಿಂದ ಎಸ್ಸೆಮ್ಮೆಸ್‌ಗೆ ಅಪಾರ ಜನಪ್ರಿಯತೆಯೂ ದೊರೆತಿತ್ತು: ೨೦೧೦ರಲ್ಲಿ ಸಕ್ರಿಯರಾಗಿದ್ದ ಮೊಬೈಲ್ ಫೋನ್ ಬಳಕೆದಾರರ ಪೈಕಿ ಶೇ. ೮೦ರಷ್ಟು ಮಂದಿ ಎಸ್ಸೆಮ್ಮೆಸ್ ಸೌಲಭ್ಯವನ್ನು ಬಳಸುತ್ತಿದ್ದರಂತೆ!

ಸ್ಮಾರ್ಟ್‌ಫೋನುಗಳ ಬಳಕೆ ಹೆಚ್ಚಿದಂತೆ ಎಸ್ಸೆಮ್ಮೆಸ್ ಜನಪ್ರಿಯತೆ ಕಡಿಮೆಯಾದದ್ದು ನಮಗೆಲ್ಲ ಗೊತ್ತೇ ಇದೆ. ಇದಕ್ಕೆ ಕಾರಣವಾದದ್ದು ವಾಟ್ಸ್‌ಆಪ್‌ನಂತಹ ವ್ಯವಸ್ಥೆಗಳಲ್ಲಿರುವ ಹೆಚ್ಚುವರಿ ಸೌಲಭ್ಯಗಳು. ಚಿತ್ರ - ಕಡತಗಳನ್ನೆಲ್ಲ ಕಳಿಸುವ ಸೌಲಭ್ಯವಿರುವ, ಸಂದೇಶಕ್ಕೆ ಇಷ್ಟು ಎಂದು ಪ್ರತ್ಯೇಕ ಶುಲ್ಕ ನೀಡುವ ಅಗತ್ಯವಿಲ್ಲದ ಆಪ್‌ಗಳು ಸಿಗುವಾಗ ಎಸ್ಸೆಮ್ಮೆಸ್ ಸಂದೇಶವನ್ನು ಯಾರು ತಾನೇ ಇಷ್ಟಪಡುತ್ತಾರೆ?

ಸ್ಮಾರ್ಟ್‌ಫೋನ್ ಇಲ್ಲದ, ನಿರ್ದಿಷ್ಟ ಆಪ್ ಬಳಸದ ಗ್ರಾಹಕರಿಗೆ ಸೇವೆ ದೊರಕದಿರುವುದು ಈ ಆಪ್‌ಗಳ ಪ್ರಮುಖ ಕೊರತೆ. ವಾಟ್ಸ್‌ಆಪ್‌ನಲ್ಲಿ ನಾವು ಏನೇ ಕಳುಹಿಸಿದರೂ ಆ ಆಪ್ ಬಳಸದ ಮೊಬೈಲ್ ಗ್ರಾಹಕರಿಗೆ ಅದು ತಲುಪುವುದೇ ಇಲ್ಲ.

ಎಸ್ಸೆಮ್ಮೆಸ್ ತಂತ್ರಜ್ಞಾನದ ಕುಂದುಕೊರತೆಗಳನ್ನು ಸರಿಪಡಿಸುವುದರ ಜೊತೆಗೆ ನಿರ್ದಿಷ್ಟ ಆಪ್‌ಗಳ ಮೇಲಿನ ಅವಲಂಬನೆಯನ್ನೂ ಕಡಿಮೆ ಮಾಡಬಲ್ಲ ಮಹತ್ವದ ಯೋಜನೆಯೊಂದು ಇದೀಗ ಅನುಷ್ಠಾನಗೊಳ್ಳುತ್ತಿದೆ. ಈ ಯೋಜನೆಯ ಅಂಗವಾಗಿ ಪರಿಚಯವಾಗುತ್ತಿರುವ ಹೊಸ ಮಾನಕವೇ ಆರ್‌ಸಿಎಸ್, ಅಂದರೆ ರಿಚ್ ಕಮ್ಯೂನಿಕೇಶನ್ ಸರ್ವಿಸಸ್.

ಯಾವುದೇ ಫೋನಿನಿಂದ ಕಳಿಸಿದ ಎಸ್ಸೆಮ್ಮೆಸ್ ಸಂದೇಶವನ್ನು ಯಾವುದೇ ಫೋನಿನಲ್ಲಿ ಸರಾಗವಾಗಿ ಓದಬಹುದಲ್ಲ, ಬಹುಮಾಧ್ಯಮ ಸಂದೇಶಗಳನ್ನೂ ಅಷ್ಟೇ ಸುಲಭವಾಗಿ ವಿನಿಮಯ ಮಾಡಿಕೊಳ್ಳುವುದು ಆರ್‌ಸಿಎಸ್‌ನಿಂದ ಸಾಧ್ಯವಾಗುವ ನಿರೀಕ್ಷೆಯಿದೆ.

ಅಂದರೆ, ವಾಟ್ಸ್‌ಆಪ್ - ಟೆಲಿಗ್ರಾಂಗಳಂತೆ ಈ ಆರ್‌ಸಿಎಸ್ ಇನ್ನೊಂದು ಆಪ್ ಅಲ್ಲ. ಫೋನ್ ಯಾವುದೇ ಆದರೂ ಅದರಲ್ಲಿ ಎಸ್ಸೆಮ್ಮೆಸ್ ಕಳಿಸುವ ಹಾಗೆಯೇ ಚಿತ್ರ - ಧ್ವನಿ - ವೀಡಿಯೋ ಇತ್ಯಾದಿಗಳನ್ನೂ ಕಳುಹಿಸುವುದನ್ನು ಸಾಧ್ಯವಾಗಿಸುವ ಮಾನಕ (ಸ್ಟಾಂಡರ್ಡ್) ಇದು. ಗೂಗಲ್ ನೇತೃತ್ವದಲ್ಲಿ, ಬೇರೆಬೇರೆ ದೇಶಗಳ ಮೊಬೈಲ್ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಅನುಷ್ಠಾನಗೊಳ್ಳುತ್ತಿರುವ ಈ ಯೋಜನೆ ಪೂರ್ಣಗೊಂಡಾಗ ಎಲ್ಲ ಫೋನುಗಳೂ ಎಸ್ಸೆಮ್ಮೆಸ್ ಬದಲು ಆರ್‌ಸಿಎಸ್ ಬಳಸಲಿವೆಯಂತೆ. ನಮ್ಮ ಫೋನಿನಲ್ಲಿ ಆಂಡ್ರಾಯ್ಡ್ ಇಲ್ಲದಿದ್ದರೆ? ಚಿಂತೆಯಿಲ್ಲ, ಪಠ್ಯ ಸಂದೇಶಗಳು ತಮ್ಮಷ್ಟಕ್ಕೆ ತಾವೇ ಎಸ್ಸೆಮ್ಮೆಸ್ ರೂಪದಲ್ಲಿ ಕಾಣಿಸಿಕೊಳ್ಳಲಿವೆ!

'ಚಾಟ್' ಎಂದು ಹೆಸರಿಡಲಾಗಿರುವ ಈ ಹೊಸ ಸೌಲಭ್ಯ ಇಷ್ಟರಲ್ಲೇ ಆಂಡ್ರಾಯ್ಡ್ ಬಳಕೆದಾರರಿಗೆ ದೊರಕಲು ಶುರುವಾಗಲಿದೆ ಎಂದು ಗೂಗಲ್ ಹೇಳಿದೆ. ಆಂಡ್ರಾಯ್ಡ್ ಫೋನುಗಳಲ್ಲಿರುವ ಎಸ್ಸೆಮ್ಮೆಸ್ ಆಪ್ ಸ್ಥಾನದಲ್ಲಿ ಈ ಸೌಲಭ್ಯ ಕಾಣಿಸಿಕೊಳ್ಳಲಿದೆಯಂತೆ. ವಾಟ್ಸ್‌ಆಪ್‌ನಂತಹ ವ್ಯವಸ್ಥೆಗಳಲ್ಲಿ ದೊರಕುವ ಸವಲತ್ತುಗಳನ್ನೆಲ್ಲ ಸಾಮಾನ್ಯ ಎಸ್ಸೆಮ್ಮೆಸ್ ಬಳಕೆದಾರರಿಗೂ ನೀಡುವುದರ ಜೊತೆಗೆ ಸದ್ಯ ಎಸ್ಸೆಮ್ಮೆಸ್ ಸಂದೇಶಗಳಿಗಿರುವ ೧೬೦ ಅಕ್ಷರಗಳ ಮಿತಿಯನ್ನೂ ಇದು ನಿವಾರಿಸಲಿದೆ.

ಮೈಕ್ರೋಸಾಫ್ಟ್ ಸಂಸ್ಥೆ ಆರ್‌ಸಿಎಸ್ ಮಾನಕವನ್ನು ಬೆಂಬಲಿಸುತ್ತಿರುವುದರಿಂದ ಇದನ್ನು ಕಂಪ್ಯೂಟರುಗಳಲ್ಲೂ ಬಳಸುವುದು ಸಾಧ್ಯವಾಗಬಹುದೆಂಬ ಊಹೆ ಕೇಳಸಿಗುತ್ತಿದೆ. ಆಪಲ್ ಫೋನುಗಳಲ್ಲಿ ಈ ಹೊಸ ವ್ಯವಸ್ಥೆಯ ಬಳಕೆಯ ಬಗ್ಗೆ ಇನ್ನೂ ಮಾಹಿತಿ ದೊರೆತಿಲ್ಲ.

ಮೇ ೨, ೨೦೧೮ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge