ಬುಧವಾರ, ಮೇ 16, 2018

ಬೆಳಕಿನ ದಿನ ವಿಶೇಷ: ಬೆಳಕೆಂಬ ಬೆರಗು

ಟಿ. ಜಿ. ಶ್ರೀನಿಧಿ

ಬೆಳಕಿನ ಮಹತ್ವ ಏನು ಎಂಬ ಪ್ರಶ್ನೆಗೆ ಉತ್ತರಿಸುವುದು ಬಹಳ ಸುಲಭ: ನಮ್ಮ ಸುತ್ತಮುತ್ತಲ ಪ್ರಪಂಚವನ್ನು ನೋಡಲು ಬೆಳಕು ಬೇಕು. ಸಸ್ಯಗಳು ಆಹಾರ ತಯಾರಿಸಿಕೊಳ್ಳಬೇಕಾದರೂ ಬೆಳಕು ಇರಬೇಕು. ಸೋಲಾರ್ ಹೀಟರಿನಲ್ಲಿ ನೀರು ಬಿಸಿಯಾಗುವುದೂ ಬೆಳಕಿನ ಸಹಾಯದಿಂದ. ಇದನ್ನೆಲ್ಲ ಬರೆದಿರುವ ಈ ಲೇಖನದ ಸಾಲುಗಳು ನಮಗೆ ಕಾಣುತ್ತಿರುವುದೂ ಬೆಳಕಿನ ಕಾರಣದಿಂದಲೇ!

ಇಂತಹ ಅನೇಕ ಉಪಯೋಗಗಳಿಗೆ ಒದಗಿಬರುವುದು ಸೂರ್ಯನ ಬೆಳಕು. ಸೂರ್ಯನ ಬೆಳಕು ಇಲ್ಲದಾಗ ಅಥವಾ ನಮ್ಮ ಅಗತ್ಯಕ್ಕೆ ಸಾಲದಾದಾಗ ನಾವು ಟ್ಯೂ‌ಬ್‌ಲೈಟ್, ಬಲ್ಬ್ ಮುಂತಾದ ಕೃತಕ ಬೆಳಕಿನ ಮೂಲಗಳನ್ನೂ ಬಳಸುತ್ತೇವೆ.

ಆದರೆ ಬೆಳಕಿನ ಮಹತ್ವ ಇಷ್ಟಕ್ಕೇ ಮುಗಿಯುವುದಿಲ್ಲ. ಸುಲಭವಾಗಿ ನಮ್ಮ ಗಮನಕ್ಕೆ ಬರದ, ಕೆಲವೊಮ್ಮೆ ನಮ್ಮ ಕಣ್ಣಿಗೂ ಕಾಣದ ಹಲವು ಬಗೆಗಳಲ್ಲಿ ಬೆಳಕು ನಮಗೆ ನೆರವಾಗುತ್ತದೆ.

ಇಂತಹ ಅನ್ವಯಗಳಿಗೆ ಲೇಸರ್ ಒಂದು ಉತ್ತಮ ಉದಾಹರಣೆ. ಕಡತಗಳನ್ನು ಉತ್ತಮ ಗುಣಮಟ್ಟದಲ್ಲಿ ಮುದ್ರಿಸುವುದಿರಲಿ, ಕಣ್ಣಿನ ಶಸ್ತ್ರಚಿಕಿತ್ಸೆಯಂತಹ ಕ್ಲಿಷ್ಟ ಕೆಲಸವೇ ಇರಲಿ - ಇಂದು ಲೇಸರ್ ಕಿರಣಗಳು ಅನೇಕ ಉದ್ದೇಶಗಳಿಗಾಗಿ ಬಳಕೆಯಾಗುತ್ತವೆ. ಬೆಳಕಿಗೆ ಸಂಬಂಧಪಟ್ಟ ಒಂದೇ ಆವಿಷ್ಕಾರ ಸಂವಹನ, ಆರೋಗ್ಯ, ಕೈಗಾರಿಕೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ನಮ್ಮ ಬದುಕನ್ನು ಹೇಗೆ ಪ್ರಭಾವಿಸುವುದು ಸಾಧ್ಯವೆಂದು ತೋರಿಸಿಕೊಟ್ಟಿದ್ದು ಲೇಸರ್. ಹೀಗಾಗಿಯೇ ೧೯೬೦ನೇ ಇಸವಿಯಲ್ಲಿ ಲೇಸರ್ ಆವಿಷ್ಕಾರವಾದ ಮೇ ೧೬ನೇ ದಿನಾಂಕವನ್ನು ಇದೀಗ ಅಂತಾರಾಷ್ಟ್ರೀಯ ಬೆಳಕಿನ ದಿನವೆಂದು (ಇಂಟರ್‌ನ್ಯಾಶನಲ್ ಡೇ ಆಫ್ ಲೈಟ್) ಆಚರಿಸಲಾಗುತ್ತಿದೆ.



ಬೆಳಕಿಗೆ ಸಂಬಂಧಪಟ್ಟ, ಬರಿಗಣ್ಣಿಗೆ ಕಾಣದಿದ್ದರೂ ಪರೋಕ್ಷವಾಗಿ ನಮ್ಮ ಅನುಭವಕ್ಕೆ ಬರುವ ವಿದ್ಯಮಾನಗಳು ಇನ್ನೂ ಬಹಳಷ್ಟಿವೆ. ದೂರದ ಉದಾಹರಣೆಗಳೆಲ್ಲ ಏಕೆ, ರಿಮೋಟಿನ ಗುಂಡಿ ಒತ್ತಿದಾಗ ಟೀವಿಯನ್ನು ಚಾಲೂ ಮಾಡುವುದೂ ಬೆಳಕಿನ ಕಿರಣಗಳೇ. ಅಂತರಜಾಲದ ಮೂಲಕ ಹರಿದುಬರುವ ಮಾಹಿತಿ ನಮ್ಮನ್ನು ಆಪ್ಟಿಕಲ್ ಫೈಬರ್ ಎಳೆಗಳ ಮೂಲಕ ತಲುಪುತ್ತದಲ್ಲ, ಮಾಹಿತಿಯನ್ನು ಹಾಗೆ ಹೊತ್ತು ತರುವುದೂ ಬೆಳಕಿನದೇ ಕೆಲಸ. ರೇಡಿಯೋ ಅಲೆಗಳು, ಮೈಕ್ರೋತರಂಗಗಳು (ಮೈಕ್ರೋವೇವ್), ಅತಿನೇರಳೆ (ಅಲ್ಟ್ರಾವಯಲೆಟ್), ಅವರಕ್ತ (ಇನ್‌ಫ್ರಾರೆಡ್) ಕಿರಣಗಳ ಬಗೆಗೆಲ್ಲ ಕೇಳುತ್ತೇವಲ್ಲ - ಅವೂ ಬೆಳಕಿನ ಅಲೆಗಳೇ!

ಬೆಳಕಿನ ಉಪಯೋಗ ನಮ್ಮ ಭೂಮಿಗಷ್ಟೇ ಸೀಮಿತವೇನಲ್ಲ. ಹವಾಮಾನ ಪರಿವೀಕ್ಷಣೆಯಿಂದ ಪ್ರಾರಂಭಿಸಿ ಬಾಹ್ಯಾಕಾಶ ಸಂಶೋಧನೆಯವರೆಗೆ ಎಲ್ಲೆಡೆಯೂ ಒಂದಲ್ಲ ಒಂದು ರೀತಿಯ ಬೆಳಕು ಪ್ರಯೋಜನಕ್ಕೆ ಬರುತ್ತದೆ.

ಮಾಹಿತಿ ತಂತ್ರಜ್ಞಾನದ ಜಗತ್ತಿನಲ್ಲೂ ಬೆಳಕಿನ ಪಾತ್ರ ಬಹಳ ಮಹತ್ವದ್ದು. ನಿಸ್ತಂತು (ವೈರ್‌ಲೆಸ್) ಮಾಹಿತಿ ಸಂವಹನದಲ್ಲಿ ರೇಡಿಯೋ ಅಲೆಗಳ ಬದಲಿಗೆ ಬೆಳಕಿನ ಕಿರಣಗಳನ್ನು ಬಳಸಿದರೆ ಕ್ಷಿಪ್ರ ಹಾಗೂ ಸುರಕ್ಷಿತ ಮಾಹಿತಿ ಸಂವಹನ ಸಾಧ್ಯವಾಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ನಮಗೆಲ್ಲ ಪರಿಚಯವಿರುವ ವೈ-ಫೈ ತಂತ್ರಜ್ಞಾನಕ್ಕೆ ಈ ಲೈ-ಫೈ, ಅಂದರೆ 'ಲೈಟ್ ಎನೇಬಲ್ಡ್ ವೈ-ಫೈ' ಪರ್ಯಾಯವಾಗಿ ಬೆಳೆಯಬಹುದು ಎನ್ನುವುದು ಅವರ ಅಭಿಪ್ರಾಯ.

ಅಷ್ಟೇ ಅಲ್ಲ, ಬೆಳಕಿನ ಬಳಕೆ ಹಾಗೂ ಅದರ ಉಪಯೋಗಗಳ ಸುತ್ತ ಫೋಟಾನಿಕ್ಸ್ (Photonics) ಎಂಬ ವಿಜ್ಞಾನದ ಶಾಖೆಯೇ ಬೆಳೆದಿದೆ. ಬೆಳಕಿನ ಸೂಕ್ಷ್ಮ ಕಣಗಳಾದ ಫೋಟಾನುಗಳ ಉತ್ಪಾದನೆ, ನಿಯಂತ್ರಣ ಹಾಗೂ ಗುರುತಿಸುವಿಕೆಗೆ ಬೇಕಾದ ವಿಜ್ಞಾನ ಹಾಗೂ ತಂತ್ರಜ್ಞಾನಗಳ ಸಮ್ಮಿಲನವೇ ಇದು. ಸ್ಮಾರ್ಟ್‌ಫೋನುಗಳಿಂದ ಲ್ಯಾಪ್‌ಟಾಪ್‌ಗಳವರೆಗೆ, ಕೃತಕ ಬೆಳಕಿನ ಮೂಲಗಳಿಂದ ವೈದ್ಯಕೀಯ ಸಾಧನಗಳವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಫೋಟಾನಿಕ್ಸ್ ಇಂದು ಪ್ರಮುಖ ಪಾತ್ರ ವಹಿಸುತ್ತಿದೆ. ಕಳೆದ ಶತಮಾನದಲ್ಲಿ ವಿದ್ಯುನ್ಮಾನ ವಿಜ್ಞಾನ (ಇಲೆಕ್ಟ್ರಾನಿಕ್ಸ್) ವಹಿಸಿದಂತಹುದೇ ಪಾತ್ರವನ್ನು ಈ ಶತಮಾನದಲ್ಲಿ ಬೆಳಕಿನ ವಿಜ್ಞಾನ (ಫೋಟಾನಿಕ್ಸ್) ವಹಿಸಲಿದೆ ಎನ್ನುವುದು ವಿಜ್ಞಾನಿಗಳ ನಿರೀಕ್ಷೆ. 

ಕಾಮೆಂಟ್‌ಗಳಿಲ್ಲ:

badge