ಶುಕ್ರವಾರ, ಮೇ 11, 2018

ವೀಕೆಂಡ್ ಇಜ್ಞಾನ: ಇಮೇಲ್ ಕಸದ ನಾಲ್ಕು ದಶಕ

ಟಿ. ಜಿ. ಶ್ರೀನಿಧಿ


ವ್ಯವಹಾರವಿರಲಿ, ವೈಯಕ್ತಿಕ ವಿಷಯವೇ ಇರಲಿ, ಆಧುನಿಕ ಜಗತ್ತಿನ ಸಂವಹನ ಮಾಧ್ಯಮಗಳಲ್ಲಿ ಇಮೇಲ್‌ಗೆ ಪ್ರಮುಖ ಸ್ಥಾನವಿದೆ. ಈ ಮಾಧ್ಯಮ ಅದೆಷ್ಟು ಜನಪ್ರಿಯವೆಂದರೆ ಪ್ರಪಂಚದಲ್ಲಿ ಪ್ರತಿನಿತ್ಯ ೨೫ ಸಾವಿರ ಕೋಟಿಗೂ ಹೆಚ್ಚು ಸಂಖ್ಯೆಯ ಇಮೇಲ್ ಸಂದೇಶಗಳನ್ನು ಕಳುಹಿಸಲಾಗುತ್ತದಂತೆ.

ಇಷ್ಟೆಲ್ಲ ಸಂಖ್ಯೆಯ ಇಮೇಲ್ ಸಂದೇಶಗಳನ್ನು ಜನರು ಬಳಸುತ್ತಿದ್ದಾರಲ್ಲ ಎಂದು ಆಶ್ಚರ್ಯಪಡುವ ಮುನ್ನ ಇಲ್ಲಿ ಹೇಳಲೇಬೇಕಾದ ವಿಷಯವೊಂದಿದೆ: ವಿನಿಮಯವಾಗುವ ಒಟ್ಟು ಇಮೇಲ್‌ಗಳ ಪೈಕಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಅನಪೇಕ್ಷಿತವಾದವು!

ನಾವಾಗಿ ಕೇಳದ ಮಾಹಿತಿಯನ್ನು ಹೊತ್ತುತರುವ ಇಂತಹ ಸಂದೇಶಗಳನ್ನು 'ಸ್ಪಾಮ್' ಎಂದು ಗುರುತಿಸಲಾಗುತ್ತದೆ. ಬಳಕೆದಾರರಿಗೆ, ಇಮೇಲ್ ಸೇವೆ ಒದಗಿಸುವ ಸಂಸ್ಥೆಗಳಿಗೆ ಎಲ್ಲಿಲ್ಲದ ತಲೆನೋವು ತಂದೊಡ್ಡುವ ಈ ಪಿಡುಗು ಪ್ರಾರಂಭವಾಗಿ ಇದೀಗ ನಲವತ್ತು ವರ್ಷ. 

ನಮ್ಮಲ್ಲಿ ಅನೇಕ ಕಡೆ ಪ್ರತಿದಿನವೂ ಪತ್ರಿಕೆಯ ಜೊತೆಯಲ್ಲಿ ಕರಪತ್ರಗಳು ಬರುತ್ತವಲ್ಲ, ಸ್ಪಾಮ್ ಸಂದೇಶಗಳೂ ಅದೇ ಗುಂಪಿಗೆ ಸೇರಿದವು. ಉತ್ಪನ್ನಗಳ ಜಾಹೀರಾತಿಗೆ ಬೇರೆಬೇರೆ ಮಾಧ್ಯಮಗಳನ್ನು ಬಳಸುವ ಇಂತಹ ಅಭ್ಯಾಸ ಬಹಳ ಹಳೆಯದು. ೧೮೬೪ರಷ್ಟು ಹಿಂದೆಯೇ ಬ್ರಿಟನ್ನಿನ ಹಲ್ಲಿನ ಡಾಕ್ಟರೊಬ್ಬರು ತಮ್ಮ ಕ್ಲಿನಿಕ್ ಬಗ್ಗೆ ಪ್ರಸಿದ್ಧರಿಗೆಲ್ಲ ಟೆಲಿಗ್ರಾಮ್ ಕಳಿಸಿ ಕುಖ್ಯಾತಿ ಗಳಿಸಿದ್ದರಂತೆ. ಸರಿಸುಮಾರು ಅದೇ ಸಮಯದಲ್ಲಿ ಹೂಡಿಕೆಯ ಹೊಸ ಮಾರ್ಗಗಳನ್ನು ತಿಳಿಸಲೆಂದು ಟೆಲಿಗ್ರಾಮ್ ಕಳಿಸುವ ಅಭ್ಯಾಸ ಅಮೆರಿಕಾದಲ್ಲೂ ಇತ್ತೆಂದು ಇತಿಹಾಸ ಹೇಳುತ್ತದೆ.

ಅಂದಹಾಗೆ ಈ ಅಭ್ಯಾಸ ಕಂಪ್ಯೂಟರ್ ಜಗತ್ತಿಗೆ ಕಾಲಿರಿಸಿದ್ದು ೧೯೭೮ರ ಮೇ ತಿಂಗಳಿನಲ್ಲಿ. ಡಿಜಿಟಲ್ ಇಕ್ವಿಪ್‌ಮೆಂಟ್ ಕಾರ್ಪೊರೇಶನ್‌ನ ಮಾರಾಟ ಪ್ರತಿನಿಧಿಯಾಗಿದ್ದ ಗ್ಯಾರಿ ಥುವೆರ್ಕ್ ಎಂಬ ವ್ಯಕ್ತಿ ಅಂತರಜಾಲದ ಅಂದಿನ ರೂಪವಾದ 'ಅರ್ಪಾನೆಟ್' ಮೂಲಕ ೪೦೦ ಗ್ರಾಹಕರಿಗೆ ಕಳಿಸಿದ ಸಂದೇಶವನ್ನು ಪ್ರಪಂಚದ ಮೊದಲ ಸ್ಪಾಮ್ ಸಂದೇಶ ಎಂದು ಗುರುತಿಸಲಾಗುತ್ತದೆ.

ಇಂತಹ ಸಂದೇಶಗಳಿಗೆ ಸ್ಪಾಮ್ ಎಂಬ ಹೆಸರು ಬಂದಿದ್ದರ ಹಿನ್ನೆಲೆಯಲ್ಲೂ ಒಂದು ತಮಾಷೆಯ ಸಂಗತಿಯಿದೆ. ಹಾಸ್ಯ ಕಾರ್ಯಕ್ರಮಗಳನ್ನು ನಡೆಸುತ್ತಿದ್ದ ಮಾಂಟಿ ಪೈಥಾನ್ ಎಂಬ ತಂಡ ಒಮ್ಮೆ ಪ್ರತಿಯೊಂದು ತಿನಿಸಿನಲ್ಲೂ ಸ್ಪಾಮ್ (ಹಂದಿ ಮಾಂಸದಿಂದ ತಯಾರಿಸಿದ ಉತ್ಪನ್ನ) ಬಳಸಿದ ಹೋಟಲ್ ಬಗೆಗೆ ತಮಾಷೆ ಮಾಡಿತ್ತಂತೆ. ಸ್ಪಾಮ್ ಮತ್ತದರ ಪ್ರಚಾರ ಎಷ್ಟು ಪ್ರಮಾಣದಲ್ಲಿತ್ತೆಂದರೆ ಆ ಹೋಟಲಿನಲ್ಲಿ ಯಾರಿಗೂ ಬೇರೇನೂ ಕೇಳಿಸುತ್ತಲೇ ಇರಲಿಲ್ಲವಂತೆ. ಅನಪೇಕ್ಷಿತ ಇಮೇಲ್‌ಗಳೂ ಇಷ್ಟೇ ಕಿರಿಕಿರಿ ಮಾಡುವುದರಿಂದ ಅವಕ್ಕೆ ಆ ಹೆಸರನ್ನೇ ನೀಡಲಾಯಿತು ಎನ್ನುವುದು ಸೈಬರ್ ಜನಪದದಲ್ಲಿ ಪ್ರಚಲಿತದಲ್ಲಿರುವ ಕತೆ. ಈ ಶಬ್ದ ಆಕ್ಸ್‌ಫರ್ಡ್ ನಿಘಂಟಿಗೆ ಸೇರಿದ್ದು ೧೯೯೮ರಲ್ಲಿ.

ಪ್ರಾರಂಭಿಕ ದಿನಗಳಲ್ಲಿ ಸ್ಪಾಮ್ ಸಂದೇಶಗಳ ಉದ್ದೇಶ ಜಾಹೀರಾತುಗಳ ಪ್ರಸಾರ ಮಾತ್ರವೇ ಆಗಿತ್ತು. ಆದರೆ ನಂತರದ ದಿನಗಳಲ್ಲಿ ಇದಕ್ಕೆ ಒಂದಷ್ಟು ದುರುದ್ದೇಶವೂ ಸೇರಿ ನಕಲಿ ಮಾಲಿನ ಪ್ರಚಾರ - ಕಾನೂನುಬಾಹಿರ ಔಷಧಗಳ ಮಾರಾಟ ಮುಂತಾದ ಕೃತ್ಯಗಳೂ ಸ್ಪಾಮ್ ಉದ್ದೇಶಗಳ ಸಾಲಿಗೆ ಸೇರಿಕೊಂಡವು. ಲಾಭದ ಆಸೆ ತೋರಿಸಿ ವಂಚಿಸುವ 'ಫಿಶಿಂಗ್'ನಂತಹ ದುಷ್ಕೃತ್ಯಗಳಲ್ಲೂ ಸ್ಪಾಮ್ ಸಂದೇಶಗಳು ವ್ಯಾಪಕವಾಗಿ ಬಳಕೆಯಾಗುತ್ತವೆ.

ನಮ್ಮ ಅನುಮತಿಯಿಲ್ಲದೆ ಬರುವ ಸಂದೇಶಗಳಷ್ಟೆ ಸ್ಪಾಮ್ ಎಂದು ಕರೆಸಿಕೊಳ್ಳುವುದಿಲ್ಲ. ಕೆಲವೊಮ್ಮೆ ಯಾವುದೋ ಸನ್ನಿವೇಶದಲ್ಲಿ ನಮ್ಮ ಸಂಪರ್ಕ ವಿವರ ಪಡೆದುಕೊಂಡವರು ಮತ್ತೆಮತ್ತೆ ಇಮೇಲ್ ಕಳುಹಿಸಿ ಕಿರಿಕಿರಿಮಾಡುತ್ತಾರಲ್ಲ (ಉದಾ: ಆನ್‌ಲೈನ್ ಶಾಪಿಂಗ್ ಜಾಲತಾಣಗಳು), ಅಂತಹ ಸಂದೇಶಗಳೂ ಸ್ಪಾಮ್ ಗುಂಪಿಗೇ ಸೇರುತ್ತವೆ.

ಅಂದಹಾಗೆ ರದ್ದಿ ಸಂದೇಶಗಳು ಇಮೇಲ್ ಮಾಧ್ಯಮಕ್ಕಷ್ಟೇ ಸೀಮಿತವೇನಲ್ಲ. ಎಸ್ಸೆಮ್ಮೆಸ್ ಮೂಲಕವೂ ದೊಡ್ಡ ಪ್ರಮಾಣದ ಅನುಪಯುಕ್ತ ಸಂದೇಶಗಳು ಹರಿದುಬರುತ್ತವೆ. ಫೇಸ್‌ಬುಕ್‌ನಂತಹ ಸಮಾಜ ಜಾಲಗಳು ಮತ್ತು ವಾಟ್ಸ್‌ಆಪ್‌ನಲ್ಲೂ ಈ ಸಮಸ್ಯೆ ಇದೆ.

ಹೀಗಾಗಿಯೇ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಅನೇಕ ಸಂಸ್ಥೆಗಳು ಸ್ಪಾಮ್ ವಿರುದ್ಧದ ಹೋರಾಟದಲ್ಲಿ ತೊಡಗಿಕೊಂಡಿವೆ. ಬಹಳಷ್ಟು ದೇಶಗಳಲ್ಲಿ ಈ ಸಂಸ್ಥೆಗಳಿಗೆ ಕಾನೂನಿನ ಬೆಂಬಲವೂ ದೊರೆತಿದೆ. ಇಂತಹ ಹಲವಾರು ಪ್ರಯತ್ನಗಳ ಫಲವಾಗಿ ಸ್ಪಾಮ್ ಸಂದೇಶಗಳ ಒಟ್ಟು ಪ್ರಮಾಣ ೨೦೧೭ನೇ ಇಸವಿಯಲ್ಲಿ ದಶಕದಲ್ಲೇ ಕನಿಷ್ಠ ಮಟ್ಟ (೨೦೦೭ರಲ್ಲಿದ್ದ ಶೇ. ೮೮.೫ರಿಂದ ಶೇ. ೩೯.೨ಕ್ಕೆ) ತಲುಪಿದ್ದು ವಿಶೇಷ.

ಇಷ್ಟೆಲ್ಲ ಪ್ರಯತ್ನಗಳ ನಡುವೆಯೂ ಇಮೇಲ್ ಕಸ ನಮ್ಮ ಬದುಕನ್ನು ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಭಾವಿಸುತ್ತಿದೆ. ಈ ಪಿಡುಗನ್ನು ಇನ್ನಷ್ಟು ಕಡಿಮೆಮಾಡಿ ಆನ್‌ಲೈನ್ ಜಗತ್ತನ್ನೂ ಸ್ವಚ್ಛವಾಗಿಡುವಲ್ಲಿ ನಮ್ಮ ಜವಾಬ್ದಾರಿ ಕೂಡ ಇದೆ: ಸಂಶಯಾಸ್ಪದ ತಾಣಗಳಲ್ಲಿ ನಮ್ಮ ಇಮೇಲ್ ವಿಳಾಸ ದಾಖಲಿಸದಿರುವ ಮೂಲಕ, ನಮಗೆ ಬರುವ ಅನಪೇಕ್ಷಿತ ಸಂದೇಶಗಳನ್ನು 'ಸ್ಪಾಮ್' ಎಂದು ಗುರುತಿಸುವ ಮೂಲಕ ಈ ನಿಟ್ಟಿನಲ್ಲಿ ನಾವೂ ನೆರವಾಗುವುದು ಸಾಧ್ಯ.

ಮೇ ೯, ೨೦೧೮ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge