ದೈನಂದಿನ ಕೆಲಸಗಳಲ್ಲಿ ನೆರವಾಗುವ ಗೂಗಲ್ ಹೋಮ್ ಹಾಗೂ ಅಮೆಜಾನ್ ಎಕೋದಂತಹ ಡಿಜಿಟಲ್ ಸಹಾಯಕ ಸಾಧನಗಳು ಈಚೆಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದುಮಾಡುತ್ತಿವೆ. ಮಕ್ಕಳ ಪ್ರಶ್ನೆಗೆ ಉತ್ತರ ಕೊಡುವುದಿರಲಿ, ಮೂಲೆ ಸೇರಿರುವ ಮೊಬೈಲ್ ಫೋನನ್ನು ಪತ್ತೆಮಾಡುವುದಿರಲಿ, ಬೇಕಾದವರಿಗೆ ಕರೆಮಾಡುವುದಿರಲಿ, ಬೇಕಾದ ಹಾಡನ್ನು ಕೇಳಿಸುವುದೇ ಇರಲಿ - ಇಂತಹ ಅನೇಕ ಕೆಲಸಗಳನ್ನು ಈ ಸಾಧನಗಳು ಮಾಡಬಲ್ಲವು ಎಂದು ಹೇಳುವ ಜಾಹೀರಾತುಗಳನ್ನು ನಾವು ನೋಡುತ್ತಲೇ ಇದ್ದೇವೆ.
ಹಾಗೆಂದು ಈ ಸಾಧನಗಳ ಉಪಯೋಗ ಇಷ್ಟಕ್ಕೇ ಸೀಮಿತವೇ? ಖಂಡಿತಾ ಇಲ್ಲ. ವಿಶ್ವವ್ಯಾಪಿ ಜಾಲದಿಂದ ಮಾಹಿತಿ ಹೆಕ್ಕಿಕೊಡುವುದು ಹಾಗೂ ಮೊಬೈಲ್ ಫೋನ್ ಸವಲತ್ತುಗಳನ್ನು ದೂರದಿಂದಲೇ ಬಳಸಲು ಅನುವುಮಾಡಿಕೊಡುವುದರ ಜೊತೆಗೆ ಇವು ಇನ್ನೂ ಅನೇಕ ಕೆಲಸಗಳನ್ನು ಮಾಡಬಲ್ಲವು. ಸ್ವಿಚ್ ಒತ್ತುವ ಬದಲು ಧ್ವನಿರೂಪದ ಆದೇಶಗಳ ಮೂಲಕವೇ ಗೃಹೋಪಯೋಗಿ ಸಾಧನಗಳನ್ನು ನಿಯಂತ್ರಿಸುವುದು ಇಂತಹ ಕೆಲಸಗಳಿಗೊಂದು ಉದಾಹರಣೆ. ಹೀಗೆ ನಿಯಂತ್ರಿಸಬಹುದಾದ ಸಾಧನಗಳ ಸಾಲಿನಲ್ಲಿ ಸ್ಮಾರ್ಟ್ ದೀಪಗಳಿಗೆ ಪ್ರಮುಖ ಸ್ಥಾನ.
ಸ್ಮಾರ್ಟ್ ಫೋನು - ಸ್ಮಾರ್ಟ್ ಟೀವಿ ಗೊತ್ತು, ಇದೇನಿದು ಸ್ಮಾರ್ಟ್ ದೀಪ?
ಮನೆಯ ದೀಪಗಳು ವಿದ್ಯುತ್ ಸಂಪರ್ಕ ಬಳಸಿಕೊಂಡು ಬೆಳಕು ನೀಡುವುದು ನಮಗೆಲ್ಲ ಗೊತ್ತೇ ಇದೆ. ವಿದ್ಯುನ್ಮಾನ ಸಾಧನಗಳ ಜೊತೆ ದತ್ತಾಂಶ ವಿನಿಮಯ ಮಾಡಿಕೊಳ್ಳುವ ಸಾಮರ್ಥ್ಯವನ್ನೂ ಈ ದೀಪಗಳಿಗೆ ನೀಡುವುದು ಸ್ಮಾರ್ಟ್ ದೀಪ ಪರಿಕಲ್ಪನೆಯ ಹೂರಣ. ಇಂತಹ ದೀಪಗಳು ಬ್ಲೂಟೂತ್ ತಂತ್ರಜ್ಞಾನ ಬಳಸಿ ನಮ್ಮ ಮೊಬೈಲ್ ಫೋನಿನೊಡನೆ ಸಂಪರ್ಕ ಸಾಧಿಸಬಲ್ಲವು, ವೈ-ಫೈ ಸಂಕೇತಗಳ ಮೂಲಕ ಅಮೆಜಾನ್ ಎಕೋ ಜೊತೆಗೂ ಕೆಲಸಮಾಡಬಲ್ಲವು!
ಸ್ಮಾರ್ಟ್ ದೀಪಗಳು ನಮ್ಮೆದುರು ಅಪಾರ ಸಾಧ್ಯತೆಗಳನ್ನು ತೆರೆದಿಡುತ್ತವೆ. ಈ ದೀಪಗಳನ್ನು ಸ್ಮಾರ್ಟ್‌ಫೋನ್ ಬಳಸಿ ನಿಯಂತ್ರಿಸಬಹುದು ಎಂದೆನಲ್ಲ, ಆ ಮೂಲಕ ಬಲ್ಬಿನ ಪ್ರಖರತೆಯನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಕಡಿಮೆ-ಹೆಚ್ಚು ಮಾಡಿಕೊಳ್ಳುವುದು ಸಾಧ್ಯ. ಅಂದರೆ, ಅದೇ ಎಲ್‌ಇಡಿ ಬಲ್ಬನ್ನು ಪುಸ್ತಕ ಓದುವಾಗಲೂ ಬಳಸಬಹುದು - ಪ್ರಖರತೆ ಕಡಿಮೆಮಾಡಿ ನೈಟ್ ಲ್ಯಾಂಪಿನಂತೆಯೂ ಉಪಯೋಗಿಸಬಹುದು. ಮೊಬೈಲ್ ಫೋನಿಗೆ ಕರೆಬಂದಾಗ - ಅದು ಸೈಲೆಂಟ್ ಮೋಡ್‌ನಲ್ಲೇ ಇದ್ದರೂ - ಬಲ್ಬನ್ನು ಮಿನುಗಿಸಿ ನಮಗೆ ಸೂಚನೆಕೊಡುವ ಸೌಲಭ್ಯವೂ ಕೆಲ ಸ್ಮಾರ್ಟ್ ದೀಪಗಳಲ್ಲಿವೆ.
ಅಷ್ಟೇ ಏಕೆ, ಬೆಳಕಿನಲ್ಲಿರುವ ಕೆಂಪು - ಹಸಿರು - ನೀಲಿ (ಆರ್‌ಜಿಬಿ) ಬಣ್ಣಗಳ ಪ್ರಮಾಣವನ್ನು ಮೊಬೈಲ್ ಮೂಲಕ ಬದಲಿಸುತ್ತ ಬೇರೆಬೇರೆ ಸಂದರ್ಭಗಳಲ್ಲಿ ಬೇರೆಬೇರೆ ಬಣ್ಣದ ಬೆಳಕು ಮೂಡುವಂತೆಯೂ ನೋಡಿಕೊಳ್ಳುವುದು ಸಾಧ್ಯ. ಈ ಬದಲಾವಣೆಗಳನ್ನು ಸಂಗೀತದ ಏರಿಳಿತಕ್ಕೆ ತಳುಕುಹಾಕಿ ಮೊಬೈಲಿನಲ್ಲಿ ಕೇಳುವ ಹಾಡಿಗೆ ಪೂರಕವಾಗಿ ಬಣ್ಣಗಳು ಬದಲಾಗುವಂತೆಯೂ ಮಾಡಬಹುದು. ಅಂದರೆ, ಪಾರ್ಟಿಗಳಲ್ಲಿ ಕಾಣುವಂತಹ ಬಣ್ಣಬಣ್ಣದ ಬೆಳಕಿನ ವ್ಯವಸ್ಥೆಯನ್ನು ನಮ್ಮ ಮನೆಯ ದಿವಾನಖಾನೆಯಲ್ಲೇ ಮಾಡಿಕೊಳ್ಳಬಹುದು!
ಬಣ್ಣ ಬದಲಿಸುವ ದೀಪಗಳೆಲ್ಲ ನಮಗೆ ಬೇಡ ಎನ್ನುವವರಿಗೂ ಸ್ಮಾರ್ಟ್ ದೀಪಗಳು ಹಲವು ಸೌಲಭ್ಯಗಳನ್ನು ನೀಡುತ್ತವೆ. ಮೊಬೈಲ್ ಫೋನಿನಲ್ಲಿ ಅಲಾರಂ ಇಟ್ಟುಕೊಳ್ಳುತ್ತೇವಲ್ಲ, ಹಾಗೆಯೇ ದೀಪ ಹಾಕುವ - ಆರಿಸುವ ಸಮಯವನ್ನೂ ಹೊಂದಿಸಿಡುವುದು ಇಂತಹ ಸೌಲಭ್ಯಗಳಲ್ಲೊಂದು. ಸಂಜೆ ಇಷ್ಟುಹೊತ್ತಿಗೆ ದೀಪ ಹಾಕಬೇಕು, ರಾತ್ರಿ ಇಂತಿಷ್ಟು ಹೊತ್ತಿಗೆ ಆರಿಸಬೇಕು ಎನ್ನುವ ಕೆಲಸವನ್ನು ನಾವು ಈ ಮೂಲಕ ಯಂತ್ರಗಳಿಗೇ ವಹಿಸಿಕೊಟ್ಟುಬಿಡಬಹುದು. ಬೆಳಗಿನ ಜಾವ ಬೇಗನೆ ಏಳುವವರು ಅಲಾರಂ ಜೊತೆಗೆ ದೀಪ ಹಾಕುವಂತೆಯೂ ಮಾಡಿಕೊಳ್ಳಬಹುದು. ಎದ್ದ ನಂತರವೂ ಅಷ್ಟೇ, ಬೇಕಾದಾಗ ದೀಪ ಹಾಕಲು - ಆರಿಸಲು ಮೊಬೈಲ್ ಫೋನನ್ನೇ ರಿಮೋಟ್ ಕಂಟ್ರೋಲಿನಂತೆ ಬಳಸುವುದು ಕೂಡ ಸಾಧ್ಯ.
ಗೂಗಲ್ ಅಸಿಸ್ಟೆಂಟ್, ಅಮೆಜಾನ್ ಅಲೆಕ್ಸಾ ಮುಂತಾದ ವ್ಯವಸ್ಥೆಗಳ ಜೊತೆಗೆ ಹೊಂದಿಕೊಂಡು ಕೆಲಸಮಾಡಬಲ್ಲ ಸ್ಮಾರ್ಟ್ ದೀಪಗಳೂ ಇದೀಗ ಮಾರುಕಟ್ಟೆಯಲ್ಲಿವೆ. ಸಿಸ್ಕಾ ಎಲ್‌ಇಡಿ ಸಂಸ್ಥೆ ರೂಪಿಸಿರುವ 'ಸಿಸ್ಕಾ ಸ್ಮಾರ್ಟ್‌ಲೈಟ್' ಇಂತಹ ಸಾಧನಗಳಿಗೊಂದು ಉದಾಹರಣೆ. ಅಮೆಜಾನ್ ಅಲೆಕ್ಸಾ ತಂತ್ರಜ್ಞಾನ ಬಳಸುವ ಸಾಧನವನ್ನೂ (ಉದಾ: ಎಕೋ ಡಾಟ್) ಸಿಸ್ಕಾದ ಈ ಸ್ಮಾರ್ಟ್ ದೀಪವನ್ನೂ ಒಂದೇ ಜಾಲಕ್ಕೆ (ಉದಾ: ಮನೆಯ ವೈ-ಫೈ) ಸಂಪರ್ಕಿಸಿಟ್ಟರೆ ಆಯಿತು: "ಅಲೆಕ್ಸಾ, ದೀಪಹಾಕು", "ಅಲೆಕ್ಸಾ, ದೀಪ ಆರಿಸು", "ಅಲೆಕ್ಸಾ, ದೀಪದ ಬೆಳಕಿನ ಬಣ್ಣ ಬದಲಾಯಿಸು" ಎಂದೆಲ್ಲ (ಸದ್ಯ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ) ಕುಳಿತ ಕಡೆಯಿಂದಲೇ ಕೆಲಸಗಳನ್ನು ಹೇಳಿ ಮಾಡಿಸಿಕೊಳ್ಳಬಹುದು!
ಅಲೆಕ್ಸಾ ಮೂಲಕ ಮಾತ್ರವಲ್ಲದೆ ಸಿಸ್ಕಾ ಸ್ಮಾರ್ಟ್‌ಲೈಟ್ ಅನ್ನು ಮೊಬೈಲ್ ಆಪ್ ಮೂಲಕವೂ ನಿಯಂತ್ರಿಸುವುದು ಸಾಧ್ಯ. ಮೊಬೈಲ್ ಆಪ್ ಇನ್‌ಸ್ಟಾಲ್ ಮಾಡಿಕೊಂಡು ಅದಕ್ಕೆ ಬಲ್ಬನ್ನು ಒಂದುಬಾರಿ ಸಂಪರ್ಕಿಸಿದರೆ ಸಾಕು: ಆನಂತರದಲ್ಲಿ ಅದನ್ನು ಹಾಕುವುದು - ಆರಿಸುವುದು, ಬೆಳಕಿನ ಬಣ್ಣವನ್ನು ಬೇಕಾದಂತೆ ಬದಲಿಸಿಕೊಳ್ಳುವುದು, ಹಾಕಲು-ಆರಿಸಲು ಟೈಮರ್ ಹೊಂದಿಸುವುದು ಎಲ್ಲವನ್ನೂ ಮೊಬೈಲ್ ಮೂಲಕವೇ ಮಾಡಬಹುದು. ರೂ. ೧೭೯೯ ಮುಖಬೆಲೆಯ ಈ ಬಲ್ಬನ್ನು ಅಮೆಜಾನ್ ಜಾಲತಾಣದಲ್ಲಿ ಕೊಳ್ಳಬಹುದು.
ಮೇ ೩೦, ೨೦೧೮ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನದ ವಿಸ್ತೃತರೂಪ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ