ಒಂದಾನೊಂದು ಕಾಲದಲ್ಲಿ ಎಲ್ಲ ಲೆಕ್ಕಾಚಾರಗಳನ್ನೂ - ಅದು ಎಷ್ಟೇ ಸಂಕೀರ್ಣವಾಗಿರಲಿ - ಮನುಷ್ಯರೇ ಮಾಡಬೇಕಾದ್ದು ಅನಿವಾರ್ಯವಾಗಿತ್ತು. ಲೆಕ್ಕಾಚಾರವೆಂದರೆ ಮನೆಯ ತಿಂಗಳ ಖರ್ಚುವೆಚ್ಚದ ವಿವರ ಮಾತ್ರವೇ ಅಲ್ಲ; ತಂತ್ರಜ್ಞರು, ವಿಜ್ಞಾನಿಗಳು, ನಾವಿಕರು ಬಳಸುತ್ತಿದ್ದ ಅದೆಷ್ಟೋ ಕ್ಲಿಷ್ಟ ಲೆಕ್ಕಾಚಾರಗಳಿಗೂ ಆಗ ಇದ್ದದ್ದು ಇದೊಂದೇ ಮಾರ್ಗ.
ಇದನ್ನೆಲ್ಲ ನೋಡುತ್ತಿದ್ದ ಕೆಲವರು ಈ ಪರಿಸ್ಥಿತಿ ಬದಲಿಸಲು ಏನಾದರೂ ಮಾಡಬಹುದೇ ಎಂದು ಯೋಚಿಸುತ್ತಲೇ ಇದ್ದರು. ಬ್ರಿಟನ್ನಿನ ಚಾರ್ಲ್ಸ್ ಬ್ಯಾಬೇಜ್ ಅಂತಹ ವ್ಯಕ್ತಿಗಳಲ್ಲೊಬ್ಬರು. ಮನುಷ್ಯರು ಮಾಡುವ ಲೆಕ್ಕಾಚಾರಗಳನ್ನು ಯಂತ್ರವೇ ಮಾಡುವ ಹಾಗಾದರೆ ಲೆಕ್ಕಾಚಾರದ ವೇಗ ಹಾಗೂ ನಿಖರತೆಗಳೆರಡೂ ಹೆಚ್ಚುತ್ತವೆ ಎಂಬ ಯೋಚನೆ ಇಟ್ಟುಕೊಂಡು ಅವರು 'ಡಿಫರೆನ್ಸ್ ಇಂಜನ್' ಎಂಬ ಯಂತ್ರವೊಂದನ್ನು ವಿನ್ಯಾಸಗೊಳಿಸಿದ್ದರು. ಈ ಯಂತ್ರವೇನಾದರೂ ನಿರ್ಮಾಣವಾಗಿದ್ದರೆ ಹಲವು ವ್ಯಕ್ತಿಗಳು ಹಲವು ದಿನಗಳಲ್ಲಿ ಮಾಡುವ ಕೆಲಸವನ್ನು ಅದು ಹತ್ತಾರು ಪಟ್ಟು ಕಡಿಮೆ ಸಮಯದಲ್ಲಿ ಮಾಡಿಮುಗಿಸುತ್ತಿತ್ತು!
ಅಂದಹಾಗೆ ಈ ವಿನ್ಯಾಸದ ವಿವರ ಮೊದಲಿಗೆ ಪ್ರಕಟವಾದದ್ದು ಸುಮಾರು ಎರಡು ಶತಮಾನಗಳ ಹಿಂದೆ (೧೮೨೨ನೇ ಇಸವಿ), ಇದೇ ಜೂನ್ ತಿಂಗಳಿನಲ್ಲಿ. ಈಗ, ೨೦೧೮ರ ಜೂನ್ ತಿಂಗಳಿನಲ್ಲಿ, ಇಂಥದ್ದೇ ಇನ್ನೊಂದು ಬೆಳವಣಿಗೆ ನಡೆದಿದೆ. ಅಂದಿಗೂ ಇಂದಿಗೂ ನಡುವೆ ಹೆಚ್ಚೂಕಡಿಮೆ ಇನ್ನೂರು ವರ್ಷ ಕಳೆದುಹೋಗಿದೆಯಲ್ಲ, ಹಾಗಾಗಿ ಇಂದಿನ ಬೆಳವಣಿಗೆ - ಇಂದಿನ ಕಾಲಕ್ಕೆ ತಕ್ಕಂತೆ - ಕೇಳಲು ಇನ್ನೂ ರೋಚಕವಾಗಿದೆ.
ಇಂದಿನ ಬೆಳವಣಿಗೆಯ ಸಾರಾಂಶ ಇಷ್ಟೇ: ಅಮೆರಿಕಾದ ತಂತ್ರಜ್ಞರು ಇದೀಗ ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ಎನ್ನಬಹುದಾದಂತಹ ಕಂಪ್ಯೂಟರ್ ಒಂದನ್ನು ರೂಪಿಸಿದ್ದಾರೆ. ಅಷ್ಟೆಲ್ಲಾ ಶಕ್ತಿಶಾಲಿಯಾದ್ದರಿಂದಲೇ ಇದು 'ಸೂಪರ್'ಕಂಪ್ಯೂಟರು. 'ಸಮಿಟ್' ಎನ್ನುವುದು ಈ ಕಂಪ್ಯೂಟರಿಗೆ ಆ ತಂತ್ರಜ್ಞರು ಕೊಟ್ಟಿರುವ ಹೆಸರು.
ಇದನ್ನು 'ಸೂಪರ್' ಕಂಪ್ಯೂಟರ್ ಎಂದು ಕರೆದಿದ್ದು ಸಾಮರ್ಥ್ಯದ ಕುರಿತಾದ ಮೆಚ್ಚಿಗೆಯಿಂದ ಮಾತ್ರವೇ ಏನಲ್ಲ. ನಿಜಕ್ಕೂ ಸೂಪರ್‌ಕಂಪ್ಯೂಟರ್ ಎನ್ನುವುದು ಒಂದು ಬಗೆಯ ಕಂಪ್ಯೂಟರುಗಳ ಹೆಸರು. ಕ್ಲಿಷ್ಟ ಲೆಕ್ಕಾಚಾರಗಳ ಅಗತ್ಯವಿರುವ ವೈಜ್ಞಾನಿಕ ಸಂಶೋಧನೆಯಂತಹ ಕ್ಷೇತ್ರಗಳಲ್ಲಿ ಬಳಕೆಯಾಗುವ ಇವು ತಮ್ಮ ಬೃಹತ್ ಸಂಸ್ಕರಣಾ ಸಾಮರ್ಥ್ಯಕ್ಕಾಗಿ ಹೆಸರಾಗಿವೆ. ಸಂಸ್ಕರಣಾ ಸಾಮರ್ಥ್ಯದ ಪ್ರಕಾರ ಸದ್ಯ ವಿಶ್ವದಲ್ಲಿರುವ ಸೂಪರ್‌ಕಂಪ್ಯೂಟರುಗಳ ಪೈಕಿ ಸಮಿಟ್‌ಗೆ ಅಗ್ರಸ್ಥಾನ.
ಇದನ್ನೂ ಓದಿ: ಸೂಪರ್‌ಕಂಪ್ಯೂಟರ್ ಸಮಾಚಾರಬೃಹತ್ ಸಂಸ್ಕರಣಾ ಸಾಮರ್ಥ್ಯ ಎಂದಿರಲ್ಲ, ಇಲ್ಲಿ ಬೃಹತ್ ಎಂದರೆ ಎಷ್ಟು ಎಂದು ನೀವು ಕೇಳಬಹುದು. ಅದನ್ನು ಅರ್ಥಮಾಡಿಕೊಳ್ಳಲು ಈ ಉದಾಹರಣೆ ನೋಡಬಹುದು: ಒಂದು ಸೆಕೆಂಡಿಗೆ ಒಂದು ಲೆಕ್ಕ ಬಿಡಿಸಬಲ್ಲ ವ್ಯಕ್ತಿ ಎಡೆಬಿಡದೆ ಕೆಲಸ ಮಾಡಿದರೆ ೬೩೦ ಕೋಟಿ ವರ್ಷಗಳ ಅವಧಿಯಲ್ಲಿ ಎಷ್ಟು ಲೆಕ್ಕಗಳನ್ನು ಬಿಡಿಸಬಹುದೋ ಅಷ್ಟನ್ನು ಈ ಸಮಿಟ್ ಒಂದೇ ಸೆಕೆಂಡಿನಲ್ಲಿ ಮುಗಿಸಿ ಬಿಸಾಕುತ್ತದೆ. ಜಾಸ್ತಿ ಜನರನ್ನು ತೊಡಗಿಸುತ್ತೇವೆ, ಅವರಿಗೆ ಕಂಪ್ಯೂಟರನ್ನೂ ಕೊಡುತ್ತೇವೆ ಎಂದಿರಾ? ಆಧುನಿಕ ಲ್ಯಾಪ್‌ಟಾಪ್‌ಗಳಿರುವ ಒಂದು ಲಕ್ಷ ಜನರನ್ನು ಕ್ರಿಕೆಟ್ ಸ್ಟೇಡಿಯಂನಲ್ಲಿ ಕೂರಿಸಿ ಕೆಲಸ ಮಾಡಿಸುವುದೇ ಆದರೂ ಸಮಿಟ್‌ನ ಶಕ್ತಿಯನ್ನು ಸರಿಗಟ್ಟಲು ಅಂತಹ ಇಪ್ಪತ್ತು ಸ್ಟೇಡಿಯಂಗಳನ್ನು ಭರ್ತಿಮಾಡಬೇಕಾಗುತ್ತದೆ!
ಸೆಕೆಂಡಿಗೊಂದು ಲೆಕ್ಕದ್ದೂ ಸ್ಟೇಡಿಯಂ ಭರ್ತಿ ಜನರದ್ದೂ ಉದಾಹರಣೆ ಸರಿಹೋಗಲಿಲ್ಲ ಎಂದರೆ ಸಮಿಟ್ ಸಾಮರ್ಥ್ಯವನ್ನು ಒಂದೇ ಸಾಲಿನಲ್ಲಿ ಹೀಗೆ ವಿವರಿಸಬಹುದು: ಇದು ೨೦೦ ಪೆಟಾಫ್ಲಾಪ್ಸ್ ಸಾಮರ್ಥ್ಯದ ಸೂಪರ್‌ಕಂಪ್ಯೂಟರ್.
ಫ್ಲಾಪ್ಸ್ (ಫ್ಲೋಟಿಂಗ್ ಪಾಯಿಂಟ್ ಆಪರೇಶನ್ಸ್ ಪರ್ ಸೆಕೆಂಡ್) ಎನ್ನುವುದು ಸೂಪರ್‌ಕಂಪ್ಯೂಟರುಗಳ ಸಂಸ್ಕರಣಾ ಸಾಮರ್ಥ್ಯವನ್ನು ಅಳೆಯಲು ಬಳಕೆಯಾಗುವ ಏಕಮಾನ. ದಶಾಂಶವಿರುವ ದೊಡ್ಡದೊಡ್ಡ ಸಂಖ್ಯೆಗಳ ಮೇಲೆ ಯಾವುದೇ ಕಂಪ್ಯೂಟರ್ ಒಂದು ಸೆಕೆಂಡಿನಲ್ಲಿ ಎಷ್ಟು ಲೆಕ್ಕಾಚಾರಗಳನ್ನು ಮಾಡಬಲ್ಲದು ಎನ್ನುವುದನ್ನು ಇದು ಸೂಚಿಸುತ್ತದೆ. ನಮ್ಮ-ನಿಮ್ಮ ಮನೆಗಳಲ್ಲಿರುವ ಇಂದಿನ ಸಾಮಾನ್ಯ ಕಂಪ್ಯೂಟರುಗಳು, ಮೊಬೈಲ್ ಫೋನುಗಳು ಪ್ರತಿ ಸೆಕೆಂಡಿಗೆ ಇಂತಹ ಕೋಟ್ಯಂತರ ಲೆಕ್ಕಾಚಾರಗಳನ್ನು ಮಾಡಬಲ್ಲವು.
ಯಾವುದೋ ಕಂಪ್ಯೂಟರ್ ಪ್ರತಿ ಸೆಕೆಂಡಿಗೆ ನೂರು ಕೋಟಿ ಲೆಕ್ಕಾಚಾರಗಳನ್ನು ಮಾಡಬಲ್ಲದು ಎಂದರೆ ಅದರ ಸಾಮರ್ಥ್ಯ ಒಂದು ಗಿಗಾಫ್ಲಾಪ್ಸ್ ಆಗುತ್ತದೆ. ಕೇಳಲು ಬಹಳ ದೊಡ್ಡದೆಂದು ತೋರಿದರೂ ಸಮಿಟ್ ಸಾಮರ್ಥ್ಯದ ಮುಂದೆ ಇದು ಲೆಕ್ಕಕ್ಕೇ ಇಲ್ಲ. ಏಕೆ ಗೊತ್ತಾ, ಸಮಿಟ್ ಸಾಮರ್ಥ್ಯದಲ್ಲಿರುವ ಪೆಟಾ ಎಂದರೆ ಒಂದರ ಮುಂದೆ ಹದಿನೈದು ಸೊನ್ನೆ ಜೋಡಿಸಿದಷ್ಟು ದೊಡ್ಡ ಸಂಖ್ಯೆ! ಅದು ಒಂದು ಗಿಗಾಫ್ಲಾಪ್ಸ್ ಸಾಮರ್ಥ್ಯದ ಕಂಪ್ಯೂಟರಿಗಿಂತ ಹತ್ತು ಲಕ್ಷ ಪಟ್ಟು ಹೆಚ್ಚಿನ ಕೆಲಸ ಮಾಡಬಲ್ಲದು!
ಅಣ್ವಸ್ತ್ರ ಪರೀಕ್ಷೆಯಿಂದ ವೈದ್ಯಕೀಯ ಸಂಶೋಧನೆಯವರೆಗೆ, ಹವಾಮಾನ ಪರಿವೀಕ್ಷಣೆಯಿಂದ ದತ್ತಾಂಶ ಸಂಸ್ಕರಣೆಯವರೆಗೆ ಇಂದು ಸೂಪರ್‌ಕಂಪ್ಯೂಟರುಗಳು ಹಲವೆಡೆ ಬಳಕೆಯಾಗುತ್ತಿವೆ. ಭಾರತವೂ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಸೂಪರ್‌ಕಂಪ್ಯೂಟರುಗಳಿವೆ. ತಮ್ಮ ಅದ್ಭುತ ಸಾಮರ್ಥ್ಯವನ್ನು ಪ್ರದರ್ಶಿಸುವ ಜೊತೆಗೆ ಇವು ಆ ಸಾಮರ್ಥ್ಯ ಬಳಸಿಕೊಂಡು ಅದ್ಭುತಗಳನ್ನು ಸಾಧಿಸಲಿವೆಯೆಂಬ ನಿರೀಕ್ಷೆಯೂ ವ್ಯಾಪಕವಾಗಿಯೇ ಇದೆ. ಆ ನಿರೀಕ್ಷೆಗೆ ತಕ್ಕ ಫಲಿತಾಂಶಗಳು ದೊರಕಲಿ, ದೊರಕುತ್ತಲೇ ಇರಲಿ ಎಂಬ ಹಾರೈಕೆಯೂ!
* * * *
ಫಸ್ಟ್ ರ್‍ಯಾಂಕ್ ಪಡೆದ ಸಮಿಟ್
ಸಂಸ್ಕರಣಾ ಸಾಮರ್ಥ್ಯದ ಪ್ರಕಾರ ಅಗ್ರಸ್ಥಾನಗಳಲ್ಲಿರುವ ವಿಶ್ವದ ಐದುನೂರು ಸೂಪರ್‌ಕಂಪ್ಯೂಟರುಗಳನ್ನು ಟಾಪ್೫೦೦ ಎಂಬ ಜಾಲತಾಣ ಪಟ್ಟಿಮಾಡುತ್ತದೆ. ಈ ಪಟ್ಟಿಯಲ್ಲಿ ಸಮಿಟ್ ಇದೀಗ ಅಗ್ರಸ್ಥಾನ ಪಡೆದುಕೊಂಡಿದೆ. ಐಬಿಎಂ ನಿರ್ಮಿಸಿರುವ ಈ ಸೂಪರ್‌ಕಂಪ್ಯೂಟರ್ ಅಮೆರಿಕಾದ ಓಕ್ ರಿಜ್ ರಾಷ್ಟ್ರೀಯ ಸಂಶೋಧನಾಲಯದಲ್ಲಿದೆ. ಈ ಸಂಸ್ಥೆಯ ಸದ್ಯದ ನಿರ್ದೇಶಕ ಥಾಮಸ್ ಜಕಾರಿಯಾ ಕೇರಳ ಮೂಲದವರು, ಅವರು ಓದಿದ್ದು ಕರ್ನಾಟಕದ ಸುರತ್ಕಲ್‌ನಲ್ಲಿ.
ಮೊದಲ ಐನೂರಲ್ಲಿ ಭಾರತದ ಸ್ಥಾನ
ನವೆಂಬರ್ ೨೦೧೭ರ ಅಂಕಿಅಂಶಗಳ ಪ್ರಕಾರ ಟಾಪ್ ೫೦೦ ಪಟ್ಟಿಯಲ್ಲಿ ಭಾರತದ ನಾಲ್ಕು ಸೂಪರ್‌ಕಂಪ್ಯೂಟರುಗಳಿವೆ. ಈ ಪೈಕಿ ಬೆಂಗಳೂರಿನ ಭಾರತೀಯ ವಿಜ್ಞಾನಮಂದಿರದಲ್ಲಿರುವ 'SahasraT' ಸೂಪರ್‌ಕಂಪ್ಯೂಟರಿಗೆ ೨೨೮ನೇ ಸ್ಥಾನ. ಇದು ಭಾರತದ ಮೊದಲ ಪೆಟಾಫ್ಲಾಪ್ಸ್ ಸಾಮರ್ಥ್ಯದ ಕಂಪ್ಯೂಟರ್ ಎನ್ನುವುದು ವಿಶೇಷ. ಒಂದು ಪೆಟಾಫ್ಲಾಪ್ಸ್ ಸಾವಿರ, ಅರ್ಥಾತ್ ಸಹಸ್ರ ಟೆರಾಫ್ಲಾಪ್ಸ್ ಸಾಮರ್ಥ್ಯಕ್ಕೆ ಸಮಾನ. ಅದನ್ನೇ ಈ ಕಂಪ್ಯೂಟರಿನ ಹೆಸರೂ ಸೂಚಿಸುತ್ತಿದೆ: ಸಹಸ್ರ ಟಿ (ಟೆರಾಫ್ಲಾಪ್ಸ್) ಎಂದು!
ಜೂನ್ ೨೦, ೨೦೧೮ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ