ಬುಧವಾರ, ಜೂನ್ 13, 2018

ವೈರ್‌ಲೆಸ್ ಸ್ಪೀಕರ್ ಮಾಯಾಲೋಕ

ಟಿ. ಜಿ. ಶ್ರೀನಿಧಿ

ತಂತ್ರಜ್ಞಾನದ ಪ್ರಭಾವವಿರುವ ಬಹುತೇಕ ಕ್ಷೇತ್ರಗಳಲ್ಲಿ ಈಗ ವೈರ್‌ಲೆಸ್‌ನದೇ ಭರಾಟೆ. ಅಂತರಜಾಲ ಸಂಪರ್ಕ, ಮೊಬೈಲ್ ಚಾರ್ಜಿಂಗ್ ಸೇರಿದಂತೆ ನಿಸ್ತಂತು ತಂತ್ರಜ್ಞಾನದ ಹಲವು ಉದಾಹರಣೆಗಳು ನಮಗೆ ಪ್ರತಿದಿನವೂ ಕಾಣಲು ಸಿಗುತ್ತಿವೆ. ಇಂತಹ ಉದಾಹರಣೆಗಳ ಸಾಲಿಗೆ ಕೆಲವರ್ಷಗಳ ಹಿಂದಷ್ಟೇ ಸೇರಿದರೂ ಅಪಾರ ಜನಪ್ರಿಯತೆ ಗಳಿಸಿರುವುದು ವೈರ್‌ಲೆಸ್ ಸ್ಪೀಕರುಗಳು.

ಉಪಯೋಗದ ದೃಷ್ಟಿಯಿಂದ ಇವು ಸಾಮಾನ್ಯ ಸ್ಪೀಕರುಗಳಿಗಿಂತ ಹೆಚ್ಚು ಭಿನ್ನವೇನಲ್ಲ; ಆದರೆ ಧ್ವನಿಯ ಮೂಲದೊಡನೆ  ಸಂಪರ್ಕ ಕಲ್ಪಿಸಲು ಯಾವುದೇ ಬಗೆಯ ಕೇಬಲ್ ಬೇಕಿಲ್ಲದಿರುವುದು ಈ ಸ್ಪೀಕರುಗಳ ಹೆಚ್ಚುಗಾರಿಕೆ. ಇವುಗಳನ್ನು ಎಲ್ಲಿ ಯಾವಾಗ ಹೇಗೆ ಬೇಕಾದರೂ ಬಳಸಲು ಸಾಧ್ಯವಾಗಿರುವುದೂ ಇದೇ ಕಾರಣದಿಂದ.

ಮೊಬೈಲುಗಳಲ್ಲಿ, ಲ್ಯಾಪ್‌ಟಾಪಿನಲ್ಲಿ ಸ್ಪೀಕರ್ ಅಡಕವಾಗಿರುವುದು ಹೊಸ ವಿಷಯವೇನಲ್ಲ. ಆದರೆ ಅವುಗಳಿಂದ ಹೊರಹೊಮ್ಮುವ ಧ್ವನಿಯ ಪ್ರಮಾಣ ಬಹಳಷ್ಟು ಸಾರಿ ನಮ್ಮ ಅಗತ್ಯಕ್ಕೆ ತಕ್ಕಂತೆ ಇರುವುದಿಲ್ಲ. ಈ ವ್ಯತ್ಯಾಸವನ್ನು ಸರಿದೂಗಿಸಲು ಬಾಹ್ಯ ಸ್ಪೀಕರುಗಳನ್ನು ಬಳಸಬಹುದಾದರೂ ಅವುಗಳನ್ನು ಸಂಪರ್ಕಿಸಲು ಕೇಬಲ್ ಬಳಸುವುದು, ಅವಕ್ಕೆ ವಿದ್ಯುತ್ ಪೂರೈಸಲು ವ್ಯವಸ್ಥೆಮಾಡುವುದು ಕಿರಿಕಿರಿ ಉಂಟುಮಾಡುವ ಸಂಗತಿಗಳು.

ಈ ಕಿರಿಕಿರಿಗಳನ್ನು ತಕ್ಕಮಟ್ಟಿಗೆ ನಿವಾರಿಸುವುದು ವೈರ್‌ಲೆಸ್ ಸ್ಪೀಕರುಗಳ ಹೆಚ್ಚುಗಾರಿಕೆ. ಧ್ವನಿಯ ಮೂಲದೊಡನೆ ಸಂಪರ್ಕಕ್ಕಾಗಿ ಇವು ನಿಸ್ತಂತು ತಂತ್ರಜ್ಞಾನ ಬಳಸುವುದರಿಂದ ಇವನ್ನು ಮೊಬೈಲು-ಕಂಪ್ಯೂಟರುಗಳ ಆಸುಪಾಸಿನಲ್ಲಿ ಎಲ್ಲಿ ಬೇಕಾದರೂ ಇಟ್ಟುಕೊಳ್ಳುವುದು ಸಾಧ್ಯ. ಬಹುತೇಕ ವೈರ್‌ಲೆಸ್ ಸ್ಪೀಕರುಗಳಲ್ಲಿ ಬ್ಯಾಟರಿಯೂ ಅಡಕವಾಗಿರುತ್ತದೆ; ಮೊಬೈಲ್ ಚಾರ್ಜ್ ಮಾಡುವಂತೆಯೇ ಅವನ್ನೂ ಚಾರ್ಜ್ ಮಾಡಿಟ್ಟುಕೊಂಡರೆ ಸಾಕು, ಪ್ರತ್ಯೇಕವಾಗಿ ವಿದ್ಯುತ್ ಪೂರೈಸುವ ಯೋಚನೆ ಇರುವುದಿಲ್ಲ.

ವೈರ್‌ಲೆಸ್ ಸ್ಪೀಕರುಗಳು ಸಂಪರ್ಕಕ್ಕಾಗಿ ವೈ-ಫೈ ಅಥವಾ ಬ್ಲೂಟೂತ್ ತಂತ್ರಜ್ಞಾನ ಬಳಸುವುದು ಸಾಧ್ಯ. ಸದ್ಯ ಮಾರುಕಟ್ಟೆಯಲ್ಲಿರುವ ಬಹುತೇಕ ಮಾದರಿಗಳು ಬ್ಲೂಟೂತ್ ತಂತ್ರಜ್ಞಾನ ಬಳಸುವುದೇ ಹೆಚ್ಚು ಎನ್ನಬಹುದು. ಬ್ಲೂಟೂತ್ ಬಳಸಿ ಮೊಬೈಲ್ ಫೋನುಗಳನ್ನು ಪರಸ್ಪರ ಸಂಪರ್ಕಿಸುತ್ತೇವಲ್ಲ, ಅಷ್ಟೇ ಸುಲಭವಾಗಿ ಸ್ಪೀಕರುಗಳನ್ನೂ ಅವಕ್ಕೆ ಸಂಪರ್ಕಿಸುವುದು ಸಾಧ್ಯ (ಸಂಪರ್ಕಿಸುವ ಈ ಪ್ರಕ್ರಿಯೆಯನ್ನು - ಪೇರಿಂಗ್ - ಇನ್ನಷ್ಟು ಸುಲಭಗೊಳಿಸುವ ನಿಟ್ಟಿನಿಂದ ಹಲವು ಸ್ಪೀಕರುಗಳು ಎನ್‌ಎಫ್‌ಸಿ ತಂತ್ರಜ್ಞಾನವನ್ನೂ ಬಳಸುತ್ತವೆ). ಒಮ್ಮೆ ಸಂಪರ್ಕಿಸಿದರೆ ಆಯಿತು, ಆ ಸಂಪರ್ಕ ಚಾಲೂ ಇರುವವರೆಗೂ ಮೊಬೈಲಿನಿಂದ ಹೊರಹೊಮ್ಮುವ ಧ್ವನಿ ಸ್ಪೀಕರ್ ಮೂಲಕ ನಮ್ಮನ್ನು ತಲುಪುತ್ತದೆ. ಮೊಬೈಲನ್ನು ಜೇಬಿನಲ್ಲೇ ಇಟ್ಟುಕೊಂಡು ಸ್ಪೀಕರನ್ನು ಮೇಜಿನ ಮೇಲೆ ಬೇಕಾದರೂ ಇಡಬಹುದು, ಕ್ಯಾಂಪ್‌ಫೈರಿನ ಪಕ್ಕದಲ್ಲೂ ಇಟ್ಟುಕೊಳ್ಳಬಹುದು!

ಧ್ವನಿಯ ಮೂಲ ಯಾವುದೇ ಆದರೂ ಅದರ ಪ್ರಮಾಣವನ್ನು (ವಾಲ್ಯೂಂ) ನಿಯಂತ್ರಿಸಲು ಬೇಕಾದ ಸೌಲಭ್ಯ ವೈರ್‌ಲೆಸ್ ಸ್ಪೀಕರುಗಳಲ್ಲಿರುತ್ತದೆ. ನಾವು ಬಳಸುತ್ತಿರುವ ಸ್ಪೀಕರ್ ಗುಣಮಟ್ಟವನ್ನು ಅವಲಂಬಿಸಿ, ಮೊಬೈಲ್ ಅಥವಾ ಲ್ಯಾಪ್‌ಟಾಪಿನ ಸ್ಪೀಕರಿನಿಂದ ಹೊರಹೊಮ್ಮುವುದಕ್ಕಿಂತ ಹೆಚ್ಚು ಪ್ರಮಾಣದ ಧ್ವನಿಯನ್ನು ಪಡೆದುಕೊಳ್ಳುವುದೂ ಸಾಧ್ಯ. ಊಟದ ಮೇಜಿನ ಮೇಲೋ ಸ್ವಿಮ್ಮಿಂಗ್ ಪೂಲ್ ಪಕ್ಕದಲ್ಲೋ ಇಟ್ಟಾಗ ಸ್ಪೀಕರ್ ಒದ್ದೆಯಾಗುವ ಸಾಧ್ಯತೆ ಇರುತ್ತದಲ್ಲ, ಅದರಿಂದ ದುಷ್ಪರಿಣಾಮಗಳಾಗುವುದನ್ನು ತಪ್ಪಿಸಲು ಹಲವು ಸ್ಪೀಕರುಗಳು ನೀರು ನಿರೋಧಕವೂ (ವಾಟರ್‌ಪ್ರೂಫ್) ಆಗಿರುತ್ತವೆ.

ಮೊಬೈಲಿನಿಂದ ಹೊರಹೊಮ್ಮುವ ಧ್ವನಿಯನ್ನು ಇವು ಗ್ರಹಿಸಿ ಪಸರಿಸಬಲ್ಲವು ಎಂದಮೇಲೆ ಆ ಧ್ವನಿ ಸಿನಿಮಾ ಹಾಡು ಮಾತ್ರವೇ ಆಗಿರಬೇಕು ಎಂದೇನೂ ಇಲ್ಲವಲ್ಲ. ಹಾಗಾಗಿ ಮೊಬೈಲ್ ಕರೆಗಳನ್ನೂ ನಾವು ಇಂತಹ ಸ್ಪೀಕರುಗಳ ಮೂಲಕ ಸ್ವೀಕರಿಸುವುದು ಸಾಧ್ಯ. ಈ ಸೌಲಭ್ಯವಿರುವ ಸ್ಪೀಕರುಗಳಲ್ಲಿ ಮೈಕ್ ಸೌಲಭ್ಯವೂ ಇರುವುದರಿಂದ ಕೇಳಿಸಿಕೊಳ್ಳುವ ಜೊತೆಗೆ ಅವನ್ನು ಬಳಸಿ ಮಾತನಾಡುವುದೂ ಸಾಧ್ಯವಾಗುತ್ತದೆ. ಯಾವುದೇ ಕರೆಯಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿ ಪಾಲ್ಗೊಳ್ಳಬೇಕಾದ ಟೆಲಿಕಾನ್ಫರೆನ್ಸ್‌ನಂತಹ ಸಂದರ್ಭದಲ್ಲಿ ಈ ಸೌಲಭ್ಯ ಬಹಳ ಅನುಕೂಲಕರ.

ಅಂಗೈ ಮೇಲಿಟ್ಟುಕೊಳ್ಳಬಹುದಾದ ಪುಟ್ಟ ಗಾತ್ರದಿಂದ ಪ್ರಾರಂಭಿಸಿ ಮೇಜಿನ ಮೇಲಿಡಬಹುದಾದ, ಹಳೆಯ ರೇಡಿಯೋದಷ್ಟು ದೊಡ್ಡ ಗಾತ್ರದವರೆಗೆ ಹಲವಾರು ಬಗೆಯ ವೈರ್‌ಲೆಸ್ ಸ್ಪೀಕರುಗಳು ಇದೀಗ ಮಾರುಕಟ್ಟೆಯಲ್ಲಿವೆ. ಇಂತಹ ಸ್ಪೀಕರುಗಳ ಬೆಲೆ, ಅವುಗಳ ಗುಣಮಟ್ಟಕ್ಕೆ ಅನುಗುಣವಾಗಿ, ಕೆಲವು ನೂರು ರೂಪಾಯಿಗಳಿಂದ ಹತ್ತಾರು ಸಾವಿರ ರೂಪಾಯಿಗಳವರೆಗೂ ಇರುವುದು ಸಾಧ್ಯ. ಈ ಕ್ಷೇತ್ರದಲ್ಲಿ ಈಗಾಗಲೇ ಹೆಸರುಮಾಡಿರುವ ಬೋಸ್, ಜೆಬಿಎಲ್ ಮುಂತಾದ ಸಂಸ್ಥೆಗಳಿಂದ ಪ್ರಾರಂಭಿಸಿ ತುಲನಾತ್ಮಕವಾಗಿ ಅವುಗಳಿಗಿಂತ ಹೊಸದಾದ ಸೌಂಡ್‌ಬಾಟ್‌‌ನಂತಹ ಸಂಸ್ಥೆಗಳವರೆಗೆ ಹಲವಾರು ಉತ್ಪಾದಕರು ವೈರ್‌ಲೆಸ್ ಸ್ಪೀಕರುಗಳನ್ನು ಉತ್ಪಾದಿಸುತ್ತಿದ್ದಾರೆ.


ಈ ಲೇಖನಕ್ಕಾಗಿ ನಾವು ಪರೀಕ್ಷಿಸಿದ ಮಾದರಿ ಸೌಂಡ್‌ಬಾಟ್‌ನ ಎಸ್‌ಬಿ೫೧೭. ಸಣ್ಣ ಗಾತ್ರದ ಆಕರ್ಷಕ ರೂಪದ ಈ ವೈರ್‌ಲೆಸ್ ಸ್ಪೀಕರ್ ನೀರು ನಿರೋಧಕವೂ ಹೌದು. ಮೊಬೈಲ್ ಫೋನಿನೊಡನೆ ಬಹಳ ಸುಲಭವಾಗಿ ಸಂಪರ್ಕಿಸಬಹುದಾದ ಈ ಸ್ಪೀಕರ್‌ನ ಧ್ವನಿ ಗುಣಮಟ್ಟ ಚೆನ್ನಾಗಿದೆ. ಸ್ಪೀಕರ್ ಜೊತೆಗೆ ಮೈಕ್ ಸೌಲಭ್ಯವೂ ಇರುವುದರಿಂದ ಮೊಬೈಲಿನೊಡನೆ ಇದನ್ನು ಸ್ಪೀಕರ್ ಫೋನಿನಂತೆಯೂ ಬಳಸಬಹುದು. ಒಮ್ಮೆ ಚಾರ್ಜ್ ಮಾಡಿದರೆ ಹಲವಾರು ಗಂಟೆಗಳ ಕಾಲ ಬಳಸುವುದು ಸಾಧ್ಯ.

ನುಣುಪಾದ ಮೇಲ್ಮೈಗಳಿಗೆ ಅಂಟಿಸಬಹುದಾದ ವ್ಯಾಕ್ಯೂಮ್ ಸಕ್ಷನ್ ಕಪ್ ಈ ಸ್ಪೀಕರಿಗೆ ಹೊಂದಿಕೊಂಡಂತೆಯೇ ಇದೆ. ಕಳಚಿಕೊಂಡು ಬೀಳುವ ಸಾಧ್ಯತೆ ಇರುವುದರಿಂದ ಇದು ಅನುಕೂಲದ ಜೊತೆಗೆ ಅನನುಕೂಲವೂ ಹೌದು ಎನ್ನಬೇಕು. ಆಕಸ್ಮಿಕವಾಗಿ ಕೈತಪ್ಪಿ ಬಿದ್ದರೂ ಸುಲಭಕ್ಕೆ ಒಡೆಯದಷ್ಟು ಗಟ್ಟಿಯಾದ ರಚನೆ ಈ ಸ್ಪೀಕರಿನದು ಎನ್ನುವುದೂ ಗಮನಾರ್ಹ. 

ಈ ಸ್ಪೀಕರಿನೊಡನೆ ಬರುವ ಕೇಬಲ್ ಅನ್ನು ಯಾವುದೇ ಸಾಮಾನ್ಯ ಯುಎಸ್‌ಬಿ ಪೋರ್ಟ್‌ಗೆ ಸಂಪರ್ಕಿಸಿ ಚಾರ್ಜ್ ಮಾಡಿಕೊಳ್ಳುವುದು ಸಾಧ್ಯ. ವಿಭಿನ್ನ ವಿನ್ಯಾಸದ ಕೇಬಲ್ ಆದ್ದರಿಂದ ಚಾರ್ಜ್ ಮಾಡಿಕೊಳ್ಳಲು ಇದೇ ಕೇಬಲ್ ಅನ್ನು ಬಳಸುವುದು ಕಡ್ಡಾಯ. ಸುಮಾರು ೩ ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಆಗುವ ಈ ಸ್ಪೀಕರನ್ನು ಐದಾರು ಗಂಟೆಗಳ ಕಾಲ ಬಳಸಬಹುದು. 

ರೂ. ೧೨೯೦ ಮುಖಬೆಲೆಯ, ಕಪ್ಪು ಹಾಗೂ ಬಿಳಿ ಬಣ್ಣಗಳಲ್ಲಿ ಲಭ್ಯವಿರುವ ಈ ಪುಟ್ಟ ಸ್ಪೀಕರನ್ನು ಅಮೆಜಾನ್ ತಾಣದಲ್ಲಿ ಆಕರ್ಷಕ ರಿಯಾಯಿತಿಯೊಡನೆ ಕೊಳ್ಳಬಹುದು. ಖರೀದಿಯ ನಂತರ ೧೮ ತಿಂಗಳ ವಾರಂಟಿ ಇದೆಯೆಂದು ಸಂಸ್ಥೆ ಹೇಳಿಕೊಂಡಿದೆ.



ಇಂತಹ ಯಾವುದೇ ಸ್ಪೀಕರ್ ಅನ್ನು ಕೊಳ್ಳುವ ಮುನ್ನ ಅದನ್ನು ನಾವು ಎಲ್ಲಿ ಹಾಗೂ ಏತಕ್ಕಾಗಿ ಬಳಸಲು ಬಯಸುತ್ತೇವೆ ಎನ್ನುವುದನ್ನು ಗಮನಿಸಿಕೊಳ್ಳುವುದು ಒಳ್ಳೆಯದು. ಹಾಗೆಯೇ ಈಗಾಗಲೇ ಬಳಸಿದವರು ಅವುಗಳ ಬಗ್ಗೆ ಪ್ರಕಟಿಸಿರುವ ವಿಮರ್ಶೆಯನ್ನೂ ಒಮ್ಮೆ ಗಮನಿಸಿ ಆನಂತರವೇ ನಿರ್ಧಾರ ಕೈಗೊಳ್ಳುವುದು ಉತ್ತಮ. ಸ್ಪೀಕರ್ ಬೆಲೆಯ ಬಗ್ಗೆ ಕಾಳಜಿವಹಿಸುವುದು ಎಷ್ಟು ಮುಖ್ಯವೋ ಅದರ ಬ್ಯಾಟರಿ ಸಾಮರ್ಥ್ಯ, ವೈರ್‌ಲೆಸ್ ವ್ಯಾಪ್ತಿ ಹಾಗೂ ಧ್ವನಿಯ ಗುಣಮಟ್ಟವನ್ನು ಗಮನಿಸಿಕೊಳ್ಳುವುದೂ ಅಷ್ಟೇ ಮುಖ್ಯ.

ಮೇ ೨೩, ೨೦೧೮ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನದ ವಿಸ್ತೃತ ರೂಪ

ಕಾಮೆಂಟ್‌ಗಳಿಲ್ಲ:

badge