ಶನಿವಾರ, ಜೂನ್ 30, 2018

ಸೋಮೀ ದಿನ ವಿಶೇಷ: ಸೋಶಿಯಲ್ ಮೀಡಿಯಾ ನಾವೆಯಲ್ಲಿ ನಾವೆಲ್ಲ!

ಟಿ. ಜಿ. ಶ್ರೀನಿಧಿ


ಹನ್ನೊಂದು ವರ್ಷಗಳ ಹಿಂದೆ, ೨೦೦೭ರ ಜೂನ್ ೨೯ರಂದು ವಿಶೇಷವಾದ ಮೊಬೈಲ್ ದೂರವಾಣಿಯೊಂದು ಮಾರುಕಟ್ಟೆಗೆ ಬಂತು. ಪ್ರತಿವಾರ, ಪ್ರತಿದಿನ ಹೊಸ ಮೊಬೈಲುಗಳು ಪರಿಚಯವಾಗುತ್ತಿರುವ ಇಂದಿನ ಸನ್ನಿವೇಶದಲ್ಲಿ ಇದೇನೂ ದೊಡ್ಡ ಸಂಗತಿ ಎನ್ನಿಸುವುದಿಲ್ಲ. ಆದರೆ ಆ ದಿನ ಮಾರುಕಟ್ಟೆಗೆ ಬಂತಲ್ಲ ಆ ಫೋನು, ಅದು ನಮ್ಮ ಪ್ರಪಂಚವನ್ನೇ ಬದಲಿಸಿಬಿಟ್ಟಿತು.

ಅಂದಹಾಗೆ ಆ ದಿನ ಮಾರುಕಟ್ಟೆಗೆ ಬಂದದ್ದು ಐಫೋನ್. ಸ್ಮಾರ್ಟ್‌ಫೋನ್ ಪರಿಕಲ್ಪನೆಯನ್ನು ಜನಸಾಮಾನ್ಯರಿಗೂ ತಲುಪಿಸಿದ್ದು ಈ ಫೋನಿನ ಹೆಗ್ಗಳಿಕೆ. ಮೊದಲು ಬಂದ ಐಫೋನ್ ಹಾಗೂ ಆನಂತರ ಬಂದ ಆಂಡ್ರಾಯ್ಡ್ ಫೋನುಗಳಿಂದಾಗಿ ಸ್ಮಾರ್ಟ್‌ ದೂರವಾಣಿಗಳ ವ್ಯಾಪ್ತಿ ಅದೆಷ್ಟು ವಿಸ್ತರಿಸಿತೆಂದರೆ ಇದೀಗ ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಪ್ರತಿಯೊಂದು ಕ್ಷಣದಲ್ಲೂ ಅವು ನಮ್ಮ ಬದುಕನ್ನು ಆವರಿಸಿಕೊಂಡುಬಿಟ್ಟಿವೆ.

ಸ್ಮಾರ್ಟ್‌ಫೋನಿನ ಸಾಧನೆಗಳ ಸಾಲಿನಲ್ಲಿ ಕಂಪ್ಯೂಟರನ್ನು ಅಂಗೈ ಗಾತ್ರಕ್ಕೆ ಇಳಿಸಿದ್ದಕ್ಕೆ ಪ್ರಮುಖ ಸ್ಥಾನವಿದೆ, ನಿಜ. ಇದರ ಜೊತೆಗೆ ಸಂವಹನದ ಪರಿಭಾಷೆಯನ್ನು ಆಮೂಲಾಗ್ರವಾಗಿ ಬದಲಾಯಿಸಿದ್ದೂ ಸ್ಮಾರ್ಟ್‌ಫೋನುಗಳದೇ ಸಾಧನೆ. ಇಂತಹುದೊಂದು ಬದಲಾವಣೆಗೆ ಕಾರಣವಾದ ಸಂಗತಿಗಳ ಪೈಕಿ ಸಾಮಾಜಿಕ ಮಾಧ್ಯಮ, ಅರ್ಥಾತ್ ಸೋಶಿಯಲ್ ಮೀಡಿಯಾದ ಉಗಮ ಕೂಡ ಒಂದು.

ಸುದ್ದಿಪ್ರಸಾರಕ್ಕೆ ಟೀವಿ ರೇಡಿಯೋಗಳನ್ನೂ, ಉಭಯ ಕುಶಲೋಪರಿಗೆ ಫೋನು ಪೋಸ್ಟುಗಳನ್ನೂ ಕಡ್ಡಾಯವಾಗಿ ಅವಲಂಬಿಸಬೇಕಾದ ಕಾಲವೊಂದಿತ್ತು. ಇವಿಷ್ಟೂ ಕೆಲಸಗಳನ್ನು ಮೊಬೈಲ್ ಅಥವಾ ಕಂಪ್ಯೂಟರಿನ ಮೂಲಕವೇ ಮಾಡಿ ಮುಗಿಸಬಹುದಾದ ಅವಕಾಶ ಒದಗಿಸಿಕೊಟ್ಟಿದ್ದು ಸೋಶಿಯಲ್ ಮೀಡಿಯಾ. ಫೇಸ್‌ಬುಕ್, ಟ್ವಿಟರ್, ಲಿಂಕ್ಡ್‌ಇನ್, ಯೂಟ್ಯೂಬ್, ವಾಟ್ಸ್‌ಆಪ್ ಸೇರಿದಂತೆ ನೂರೆಂಟು ಉದ್ದೇಶಗಳಿಗೆ ಬಳಸಬಹುದಾದ ನೂರೆಂಟು ಜಾಲತಾಣಗಳೂ ಮೊಬೈಲ್ ಆಪ್‌ಗಳೂ ಇವೆಯಲ್ಲ, ಸೋಶಿಯಲ್ ಮೀಡಿಯಾ ಎನ್ನುವುದು ಅವೆಲ್ಲವನ್ನೂ ಸೇರಿಸಿದ ಗುಂಪಿನ ಹೆಸರು.

ನಾವು ಹೇಳಬೇಕಿರುವ ವಿಷಯವನ್ನು ಪಠ್ಯ, ಚಿತ್ರ, ಧ್ವನಿ, ವೀಡಿಯೋ ಮುಂತಾದ ಯಾವುದೇ ಮಾಧ್ಯಮ ಬಳಸಿಕೊಂಡು ಪ್ರಪಂಚದೊಡನೆ ಹಂಚಿಕೊಳ್ಳಲು ಸಾಧ್ಯವಾಗಿದ್ದು ಈ ಸೋಶಿಯಲ್ ಮೀಡಿಯಾದಿಂದಾಗಿಯೇ.  ಅಂತರಜಾಲದ ವ್ಯಾಪ್ತಿ ಹಾಗೂ ಸಾಧ್ಯತೆಗಳಿಗೆ ಅತ್ಯಂತ ಸಮರ್ಪಕ ಉದಾಹರಣೆಯೆಂದು ಇದನ್ನು ಕರೆಯಬಹುದೋ ಏನೋ.

ಇಷ್ಟೆಲ್ಲ ಹೆಗ್ಗಳಿಕೆಗಳಿಗೆ ಪಾತ್ರವಾದ ಸೋಶಿಯಲ್ ಮೀಡಿಯಾದ ಸಾಧನೆಗಳನ್ನು ಸಂಭ್ರಮಿಸಲು ಒಂದು ಅವಕಾಶ ಬೇಕಲ್ಲ, ಆ ಅವಕಾಶ 'ಸೋಶಿಯಲ್ ಮೀಡಿಯಾ ದಿನ'ದ ಹೆಸರಿನಲ್ಲಿ ಇದೇ ಜೂನ್ ಮೂವತ್ತರಂದು ನಮ್ಮನ್ನು ಎದುರುಗೊಳ್ಳುತ್ತಿದೆ. ಜಾಗತಿಕ ಸಂವಹನದ ಮೇಲೆ ಸೋಶಿಯಲ್ ಮೀಡಿಯಾದ ಪ್ರಭಾವವನ್ನು ಗುರುತಿಸುವ ಹಾಗೂ ಪ್ರಶಂಸಿಸುವ ಉದ್ದೇಶದಿಂದ 'ಮ್ಯಾಶಬಲ್' ಎನ್ನುವ ಜಾಲತಾಣ ೨೦೧೦ರಲ್ಲಿ ಈ ದಿನದ ಆಚರಣೆಯನ್ನು ಪ್ರಾರಂಭಿಸಿತು.

ಸೋಶಿಯಲ್ ಮೀಡಿಯಾಗೆ ಒಂದು ದಿನವನ್ನು ಮೀಸಲಾಗಿಡುವುದರ ಔಚಿತ್ಯವಾದರೂ ಏನು ಎಂದು ನೀವು ಕೇಳಬಹುದು. ಒಂದುಕ್ಷಣವೂ ಬಿಡುವಿಲ್ಲದಂತೆ ನಮ್ಮಲ್ಲಿ ಅನೇಕರು ಅದರಲ್ಲೇ ಮುಳುಗೇಳುತ್ತಿರುತ್ತೇವಲ್ಲ?

ಹೌದು, ಈ ಬಾರಿಯ ಸೋಶಿಯಲ್ ಮೀಡಿಯಾ ದಿನದ ಆಸುಪಾಸಿನಲ್ಲಿ ಈ ಪ್ರಶ್ನೆ ಸಾಕಷ್ಟು ಸದ್ದುಮಾಡುತ್ತಿದೆ. ಅಂದಹಾಗೆ ಇಲ್ಲಿನ ಪ್ರಶ್ನೆ ಸೋಶಿಯಲ್ ಮೀಡಿಯಾಗೆ ಒಂದು ದಿನವಷ್ಟೇ ಏಕೆ ಎನ್ನುವುದಲ್ಲ. ನಾವೆಲ್ಲ ಸೋಶಿಯಲ್ ಮೀಡಿಯಾಗೆ ನೀಡುತ್ತಿರುವ ಸಮಯ ಮಿತಿಮೀರಿ ಹೋಗುತ್ತಿದೆಯೇ ಎನ್ನುವುದು ಇದೀಗ ಚರ್ಚೆಗೆ ಕಾರಣವಾಗಿರುವ ಪ್ರಶ್ನೆ.

ಬಸ್ಸು-ಟ್ರೈನುಗಳಲ್ಲಿ, ಕಚೇರಿಗಳಲ್ಲಿ, ಹೋಟಲಿನಲ್ಲಿ, ಕಡೆಗೆ ಮನೆಯ ದಿವಾನಖಾನೆಯಲ್ಲೂ ನಾವು ಮೊಬೈಲ್ ಹಿಡಿದು ಒಂದಲ್ಲ ಒಂದು ಸೋಶಿಯಲ್ ಮೀಡಿಯಾದೊಳಗೆ ಇಣುಕುತ್ತಿರುತ್ತೇವೆ. ಹೀಗೆ ಇಣುಕುತ್ತಲೇ ನಾವು ಎಷ್ಟು ಸಮಯ ವ್ಯರ್ಥಮಾಡುತ್ತಿದ್ದೇವೆ, ಅದೇ ಸಮಯವನ್ನು ಉಪಯುಕ್ತವಾಗಿ ಬಳಸಿಕೊಳ್ಳುವ ಅವಕಾಶವನ್ನು ಹೇಗೆ ಹಾಳುಮಾಡಿಕೊಳ್ಳುತ್ತಿದ್ದೇವೆ ಎನ್ನುವುದರ ಕುರಿತು ಇದೀಗ ಸಾಕಷ್ಟು ಚರ್ಚೆಯಾಗುತ್ತಿದೆ. ಸೋಶಿಯಲ್ ಮೀಡಿಯಾ ಬಳಕೆಯನ್ನು ಸ್ವಯಂ ನಿಯಂತ್ರಣದಲ್ಲಿಟ್ಟುಕೊಳ್ಳಲು ಹಲವು ಉಪಾಯಗಳೂ ತಂತ್ರಾಂಶ ಸವಲತ್ತುಗಳೂ ಈಗಾಗಲೇ ಪ್ರಚಾರ ಪಡೆದುಕೊಂಡಿವೆ. ಹೊರಗಿನವರು ಚರ್ಚಿಸುವುದು ಹಾಗಿರಲಿ, ಬಳಕೆದಾರರು ಪ್ರತಿದಿನ ಎಷ್ಟು ಹೊತ್ತು ತಮ್ಮ ತಾಣ ಅಥವಾ ಆಪ್‌ ಅನ್ನು ಬಳಸುತ್ತಿದ್ದಾರೆ ಎಂದು ಸ್ವತಃ ಸಮಾಜಜಾಲಗಳೇ ಅವರಿಗೆ ತೋರಿಸುವ ಯೋಚನೆಯಲ್ಲಿವೆಯಂತೆ.

ಅತಿಯಾದರೆ ಅಮೃತವೂ ವಿಷ ಎನ್ನುತ್ತಾರಲ್ಲ, ಇದು ಅಮೃತವೋ ವಿಷವೋ ಎಂದು ಪ್ರತ್ಯೇಕಿಸಿ ನೋಡಲೂ ಆಗದ ಮಟ್ಟಿಗೆ ಸೋಶಿಯಲ್ ಮೀಡಿಯಾ ನಮ್ಮನ್ನು ಆವರಿಸಿಕೊಂಡುಬಿಟ್ಟಿದೆ ಎನ್ನುವುದು ಆಶ್ಚರ್ಯ - ಗಾಬರಿಗಳೆರಡನ್ನೂ ಒಟ್ಟಿಗೆ ಉಂಟುಮಾಡುವ ಸಂಗತಿ. ಈ ಪರಿಸ್ಥಿತಿಯನ್ನು ಸರಿಪಡಿಸಲು ಅಗತ್ಯ ಕ್ರಮಗಳನ್ನು ನಾವೇ ಕೈಗೊಳ್ಳುತ್ತೇವೆಯೋ, ನಾನು ನಿನ್ನೆ ಇಷ್ಟು ಗಂಟೆಗಳ ಕಾಲ ಫೇಸ್‌ಬುಕ್‌ನಲ್ಲಿದ್ದೆ ಎಂದು ಖುಷಿಯಿಂದ ಪೋಸ್ಟ್ ಮಾಡುತ್ತಲೇ ಕುಳಿತಿರುತ್ತೇವೆಯೋ ಅದು ಮಾತ್ರ ನಾವೇ ತೀರ್ಮಾನಿಸಬೇಕಾದ ವಿಷಯ.

ಜೂನ್ ೨೭, ೨೦೧೮ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge