ಬುಧವಾರ, ಜುಲೈ 4, 2018

ವಿಸಿಆರ್ ನೆನಪಿದೆಯೇ?

ಟಿ. ಜಿ. ಶ್ರೀನಿಧಿ


ಇಂದಿನ ಸನ್ನಿವೇಶದಲ್ಲಿ ವಿಸಿಆರ್ ಎಂಬ ಹೆಸರೇ ಅನೇಕರಿಗೆ ಅಪರಿಚಿತ. ಆದರೆ ಒಂದೆರಡು ದಶಕಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಬೇಕೆಂದಾಗ ಸಿನಿಮಾ ಟಾಕೀಸುಗಳಿಗೆ ಹೋಗಲಾರದ ಅದೆಷ್ಟೋ ಮಂದಿಗೆ ಆಗ ಅವರ ಇಷ್ಟದ ಸಿನಿಮಾ ತೋರಿಸುತ್ತಿದ್ದದ್ದು ಇದೇ ಮಾಯಾಪೆಟ್ಟಿಗೆ.

ಅಂದಹಾಗೆ ವಿಸಿಆರ್ ಎನ್ನುವುದು 'ವೀಡಿಯೋ ಕ್ಯಾಸೆಟ್ ರೆಕಾರ್ಡರ್' ಎಂಬ ಹೆಸರಿನ ಹ್ರಸ್ವರೂಪ. ಇದನ್ನು ವಿಸಿಪಿ, ಅಂದರೆ 'ವೀಡಿಯೋ ಕ್ಯಾಸೆಟ್ ಪ್ಲೇಯರ್' ಎಂದೂ ಕರೆಯಲಾಗುತ್ತಿತ್ತು. ಧ್ವನಿಯನ್ನಷ್ಟೇ ಕೇಳಿಸುತ್ತಿದ್ದ ಆಡಿಯೋ ಕ್ಯಾಸೆಟ್ಟುಗಳಿಗಿಂತ ನಾಲ್ಕಾರು ಪಟ್ಟು ದೊಡ್ಡದಾದ ಕ್ಯಾಸೆಟ್ಟುಗಳನ್ನು ಬಳಸಿ ಚಲನಚಿತ್ರಗಳನ್ನು ತೋರಿಸುತ್ತಿದ್ದದ್ದು ಈ ಮಾಯಾಪೆಟ್ಟಿಗೆಯ ಹೆಚ್ಚುಗಾರಿಕೆ.

ಇಷ್ಟೇ ಹೇಳಿದರೆ ವಿಸಿಆರ್ ವೈಶಿಷ್ಟ್ಯವನ್ನು ಪೂರ್ತಿಯಾಗಿ ವಿವರಿಸಿದಂತೆ ಆಗುವುದಿಲ್ಲ.

ಇಂದಿನ ಹಾಗೆ ಆಗ ಟೀವಿಯಲ್ಲಿ ನೂರೆಂಟು ಚಾನೆಲ್ಲುಗಳು ಬರುತ್ತಿರಲಿಲ್ಲ. ಎಲ್ಲರ ಕೈಯಲ್ಲೂ ಸ್ಮಾರ್ಟ್‌ಫೋನ್ ಕೂಡ ಇರಲಿಲ್ಲ. ಬೇಕಾದ ಸಿನಿಮಾವನ್ನು ಬೇಕೆಂದಾಗ ತೋರಿಸುವ ಯೂಟ್ಯೂಬ್, ನೆಟ್‌ಫ್ಲಿಕ್ಸ್, ಪ್ರೈಮ್ ವೀಡಿಯೋ ಮುಂತಾದ ಯಾವ ಸೌಲಭ್ಯವೂ ಇಲ್ಲದ ಕಾಲದಲ್ಲಿ ವಿಸಿಆರ್ ಮತ್ತದರ ಕ್ಯಾಸೆಟ್ಟುಗಳು ಜನರ ಮನರಂಜನೆಯ ಅಗತ್ಯಗಳನ್ನು ಪೂರೈಸುವ ಪ್ರಮುಖ ಮಾರ್ಗವಾಗಿದ್ದವು. ಪುಸ್ತಕಗಳ ಲೈಬ್ರರಿಯಂತೆ ಆಗ ಪ್ರಪಂಚದ ಎಲ್ಲ ಕಡೆಯಲ್ಲೂ ವೀಡಿಯೋ ಕ್ಯಾಸೆಟ್ ಲೈಬ್ರರಿಗಳನ್ನು ನೋಡಬಹುದಿತ್ತು. ವೀಡಿಯೋ ಕ್ಯಾಸೆಟ್ ಮಾತ್ರವೇ ಅಲ್ಲ, ಅದನ್ನು ನೋಡಲು ಬೇಕಾದ ವಿಸಿಪಿ/ವಿಸಿಆರ್ ಕೂಡ ಈ ಲೈಬ್ರರಿಗಳಲ್ಲಿ ಬಾಡಿಗೆಗೆ ದೊರಕುತ್ತಿತ್ತು. ದಿನಕ್ಕಿಷ್ಟು ಬಾಡಿಗೆಗೆಂದು ವಿಸಿಆರನ್ನೂ ಒಂದಷ್ಟು ಕ್ಯಾಸೆಟ್ಟನ್ನೂ ತಂದು ನಮ್ಮ ಟೀವಿಗೆ ಸಂಪರ್ಕಿಸಿದರೆ ಆಯಿತು, ಆ ದಿನದ ಮಟ್ಟಿಗೆ ಮನೆಯೇ ಸಿನಿಮಾ ಥಿಯೇಟರು!

ವಿಸಿಆರ್ ಆವಿಷ್ಕಾರವಾದದ್ದು ೧೯೫೦ರ ದಶಕದಲ್ಲಿ. ಅದರ ಮೊದಲ ಮಾದರಿಯನ್ನು ೧೯೫೩ರಲ್ಲಿ ಜಪಾನಿನ ತಂತ್ರಜ್ಞರೊಬ್ಬರು ರೂಪಿಸಿದ್ದರಂತೆ. ತಮ್ಮ ದುಬಾರಿ ಬೆಲೆಯ ಕಾರಣದಿಂದ ಈ ಯಂತ್ರಗಳು ಮೊದಲಿಗೆ ಹೆಚ್ಚು ಜನರನ್ನು ತಲುಪಲಿಲ್ಲ. ಆದರೆ ಮುಂದಿನ ಒಂದೆರಡು ದಶಕಗಳ ಅವಧಿಯಲ್ಲಿ ನಡೆದ ಅಭಿವೃದ್ಧಿಯ ಪರಿಣಾಮವಾಗಿ ವಿಸಿಆರ್ ತಂತ್ರಜ್ಞಾನ ಬೆಳೆದುದರ ಜೊತೆಗೆ ಈ ಯಂತ್ರಗಳ ಬೆಲೆಯೂ ಕಡಿಮೆಯಾಯಿತು. ಹಿಂದೆ ರೇಡಿಯೋಗಳು, ಈಗ ಕಂಪ್ಯೂಟರುಗಳು ಮನೆಮನೆಯಲ್ಲೂ ಕಾಣಸಿಗುವಂತೆ ಆಗ ವಿಸಿಆರ್‌ಗಳೂ ಅನೇಕ ಮನೆಗಳನ್ನು ಪ್ರವೇಶಿಸಿದವು.

ಮೊದಲಿಗೆ ವಿಸಿಆರ್ ತಯಾರಿಸುತ್ತಿದ್ದ ಸಂಸ್ಥೆಗಳ ಪೈಕಿ ಎಲ್ಲವೂ ತಮಗೆ ಸೂಕ್ತವೆನಿಸಿದ ತಂತ್ರಜ್ಞಾನವನ್ನೇ ಬಳಸುತ್ತಿದ್ದವು. ಹೀಗಾಗಿ ಒಂದು ವಿಸಿಆರ್‌ನಲ್ಲಿ ಕೆಲಸಮಾಡಿದ ಕ್ಯಾಸೆಟ್ಟು ಇನ್ನೊಂದು ಸಂಸ್ಥೆಯ ವಿಸಿಆರ್‌ನಲ್ಲಿ ಕೆಲಸಮಾಡುತ್ತಿರಲಿಲ್ಲ. ಇಂತಹ ಗೊಂದಲಮಯ ಸನ್ನಿವೇಶವನ್ನು ಬದಲಿಸಿದ್ದು 'ವಿಎಚ್‌ಎಸ್' (ವೀಡಿಯೋ ಹೋಮ್ ಸಿಸ್ಟಂ) ತಂತ್ರಜ್ಞಾನ. ಜಪಾನಿನ ಜೆವಿಸಿ ಸಂಸ್ಥೆ ೧೯೭೬ರಲ್ಲಿ ಪರಿಚಯಿಸಿದ ಈ ತಂತ್ರಜ್ಞಾನವನ್ನು ಮುಂದಿನ ದಿನಗಳಲ್ಲಿ ಪ್ರಪಂಚದ ಬಹುತೇಕ ವಿಸಿಆರ್‌ಗಳೂ ವೀಡಿಯೋ ಕ್ಯಾಸೆಟ್ಟುಗಳೂ ಬಳಸಿದವು.

ಅಂದಹಾಗೆ ವಿಸಿಆರ್ ಕೆಲಸ ಬರಿಯ ಕ್ಯಾಸೆಟ್ಟಿನಲ್ಲಿರುವ ಚಿತ್ರವನ್ನು ತೋರಿಸುವುದಷ್ಟೇ ಆಗಿರಲಿಲ್ಲ. ಹೆಸರೇ ಹೇಳುವಂತೆ ಅವುಗಳಲ್ಲಿ ವೀಡಿಯೋ ರೆಕಾರ್ಡಿಂಗ್ ಸೌಲಭ್ಯ ಕೂಡ ಇತ್ತು. ಇಂದಿನ ಡಿಟಿಎಚ್ ವ್ಯವಸ್ಥೆಯಲ್ಲಿ ಕೆಲ ಸೆಟ್‌ಟಾಪ್ ಬಾಕ್ಸುಗಳು ಟೀವಿ ಕಾರ್ಯಕ್ರಮವನ್ನು ರೆಕಾರ್ಡ್ ಮಾಡಿಕೊಳ್ಳಲು ಶಕ್ತವಾಗಿರುತ್ತವಲ್ಲ, ಅದೇ ರೀತಿ ಅಂದಿನ ವಿಸಿಆರ್‌ಗಳ ಮೂಲಕವೂ ಕಾರ್ಯಕ್ರಮಗಳನ್ನು ಕ್ಯಾಸೆಟ್ಟಿನಲ್ಲಿ ಉಳಿಸಿಟ್ಟುಕೊಳ್ಳುವುದು ಸಾಧ್ಯವಿತ್ತು.

ನಮ್ಮ ಮುಂದಿನ ದೃಶ್ಯಗಳನ್ನು ಇಂಥ ಕ್ಯಾಸೆಟ್ಟಿನಲ್ಲಿ ಸೆರೆಹಿಡಿಯುವ ಕ್ಯಾಮೆರಾಗಳೂ ಇದ್ದವು. ವೃತ್ತಿಪರರು ದೊಡ್ಡ ಕ್ಯಾಸೆಟ್ಟಿನಲ್ಲೇ ನೇರವಾಗಿ ರೆಕಾರ್ಡ್ ಮಾಡಿದರೆ ಹವ್ಯಾಸಿಗಳ ಪುಟ್ಟ ಕ್ಯಾಮೆರಾಗಳಲ್ಲಿ ಸಣ್ಣ ಗಾತ್ರದ ಕ್ಯಾಸೆಟ್ಟುಗಳು ಬಳಕೆಯಾಗುತ್ತಿದ್ದವು. ಈ ಮಿನಿ ಕ್ಯಾಸೆಟ್ಟುಗಳನ್ನು ವಿಸಿಆರ್‌ಗೆ ತೂರಿಸಬೇಕಲ್ಲ, ಅದಕ್ಕೆ ಬೇಕಾದ - ಪೂರ್ಣಗಾತ್ರದ ಕ್ಯಾಸೆಟ್ಟಿನಂತೆಯೇ ಕಾಣುತ್ತಿದ್ದ - ಅಡಾಪ್ಟರುಗಳೂ ಸಿಗುತ್ತಿದ್ದವು!

ಹಲವು ದಶಕಗಳ ಕಾಲ ವಿಸಿಆರ್‌ಗೆ ವ್ಯಾಪಕ ಜನಪ್ರಿಯತೆ ದೊರಕಿತ್ತಾದರೂ ಅದರಲ್ಲಿ ಅನೇಕ ಕೊರತೆಗಳಿದ್ದವು. ವಾತಾವರಣದ ಬದಲಾವಣೆಗಳು ಯಂತ್ರ ಹಾಗೂ ಕ್ಯಾಸೆಟ್ಟಿನ ಕಾರ್ಯಾಚರಣೆ ಮೇಲೆ ಬೀರುತ್ತಿದ್ದ ಋಣಾತ್ಮಕ ಪರಿಣಾಮ, ಇಂತಹ ಕೊರತೆಗಳಿಗೊಂದು ಪ್ರಮುಖ ಉದಾಹರಣೆ. ಅಂದಿನ ಮಟ್ಟಿಗೆ ಕ್ರಾಂತಿಕಾರಕ ತಂತ್ರಜ್ಞಾನವೆನಿಸಿದ್ದ ಡಿವಿಡಿಗಳ ಆವಿಷ್ಕಾರವಾದ ನಂತರ ವಿಎಚ್‌ಎಸ್ ಕ್ಯಾಸೆಟ್ಟುಗಳ ಬಳಕೆ ನಿಧಾನಕ್ಕೆ ಕಡಿಮೆಯಾಗುತ್ತ ಬಂತು. ಕ್ಯಾಸೆಟ್ಟುಗಳಲ್ಲಿ ಉಳಿಸಿಡಬಹುದಾಗಿದ್ದ ಮಾಹಿತಿಗಿಂತ ಹೆಚ್ಚಿನ ಮಾಹಿತಿಯನ್ನು, ಅದಕ್ಕಿಂತ ಹೆಚ್ಚು ಗುಣಮಟ್ಟದಲ್ಲಿ ಶೇಖರಿಸಲು ಈ ಹೊಸ ಮಾಧ್ಯಮದಲ್ಲಿ ಸಾಧ್ಯವಿದ್ದದ್ದು ಈ ಬೆಳವಣಿಗೆಗೆ ಕಾರಣವಾದ ಪ್ರಮುಖ ಅಂಶ (ಮುಂದೆ ಡಿವಿಡಿ ಸ್ಥಾನದಲ್ಲಿ ಅಂತರಜಾಲ ಆಧರಿತ ಕ್ಲೌಡ್ ಸ್ಟೋರೇಜ್ ಕಾಣಿಸಿಕೊಳ್ಳಲು ಕಾರಣವಾದದ್ದೂ ಇದೇ ಅಂಶವೇ).

ಕ್ಯಾಸೆಟ್ಟುಗಳೇ ಇಲ್ಲದ ಮೇಲೆ ವಿಸಿಆರ್‌ಗೇನು ಕೆಲಸ? ಅದೂ ನಿಧಾನಕ್ಕೆ ಮೂಲೆಗುಂಪಾಯಿತು. ವಿಸಿಆರ್‌ಗಳನ್ನು ತಯಾರಿಸುತ್ತಿದ್ದ ಕೊನೆಯ ಸಂಸ್ಥೆ ೨೦೧೬ರಲ್ಲಿ ಉತ್ಪಾದನೆಯನ್ನು ನಿಲ್ಲಿಸಿತಾದರೂ ಆ ವೇಳೆಗೆ ಜನಸಾಮಾನ್ಯರು ಅದರ ಬಳಕೆ ನಿಲ್ಲಿಸಿ ಒಂದು ದಶಕಕ್ಕಿಂತ ಹೆಚ್ಚು ಸಮಯವೇ ಆಗಿತ್ತು.

ಬಳಕೆಯಿಂದ ದೂರಸರಿದರೂ ಮನದ ಮೂಲೆಯಲ್ಲಿನ ಬೆಚ್ಚಗಿನ ಜಾಗವನ್ನು ಮಾತ್ರ ವಿಸಿಆರ್ ಇನ್ನೂ ಯಾರಿಗೂ ಬಿಟ್ಟುಕೊಟ್ಟಿಲ್ಲ.

ಜೂನ್ ೬, ೨೦೧೮ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

1 ಕಾಮೆಂಟ್‌:

Unknown ಹೇಳಿದರು...

ಆದರೂ ಅವಾಗಿರುವ ವಿಸಿಆರ್ ನೋಡುವ ಮಜ ಬೇರೆನೇ ಇತ್ತು. ಅದು ಈ ಕಾಲಲ್ಲಿ ಬರಲ್ಲ ಸರ್.
ಪ್ರಶಾಂತ ಉಪಾಧ್ಯೆ.

badge