ಇಜ್ಞಾನ ವಿಶೇಷ
ರಿಲಯನ್ಸ್ ಜಿಯೋ ಸಂಸ್ಥೆ ಕಳೆದವರ್ಷ ಪರಿಚಯಿಸಿದ ಜಿಯೋಫೋನ್ ಅಪಾರ ಜನಪ್ರಿಯತೆ ಗಳಿಸಿರುವುದು ನಮಗೆಲ್ಲ ಗೊತ್ತೇ ಇದೆ. 1500 ರೂಪಾಯಿಗಳಿಗೆ ಫೋನು, ತಿಂಗಳಿಗೆ 49 ರೂಪಾಯಿಗೆ ಅಪರಿಮಿತ ಕರೆ ಸೌಲಭ್ಯ ನೀಡಿದ ಈ ಫೋನಿನ ಬಗ್ಗೆ ಇದೀಗ ಇನ್ನೂ ಒಂದು ಹೊಸ ಸುದ್ದಿ ಬಂದಿದೆ. ಇತರ ಫೀಚರ್ ಫೋನ್ ಬಳಕೆದಾರರು ಅತ್ಯಂತ ಕಡಿಮೆ ಬೆಲೆಗೆ ಜಿಯೋಫೋನ್ ಪಡೆಯುವ ಹಾಗೂ ಕೊಂಚವೇ ಹೆಚ್ಚಿನ ಬೆಲೆಗೆ ಹಲವು ಉನ್ನತ ಸೌಲಭ್ಯಗಳ 'ಜಿಯೋಫೋನ್ 2' ಕೊಳ್ಳಬಹುದಾದ ಸಾಧ್ಯತೆಯ ಬಗ್ಗೆ ಜುಲೈ 5, 2018ರಂದು ನಡೆದ ರಿಲಯನ್ಸ್ ವಾರ್ಷಿಕ ಮಹಾಸಭೆಯಲ್ಲಿ ಘೋಷಿಸಲಾಗಿದೆ. ಅಷ್ಟೇ ಅಲ್ಲ, ವಾಟ್ಸ್‌ಆಪ್ ಹಾಗೂ ಯೂಟ್ಯೂಬ್‌ನಂತಹ ಜನಪ್ರಿಯ ಆಪ್‌ಗಳೂ ಇನ್ನುಮುಂದೆ ಜಿಯೋಫೋನ್ ಗ್ರಾಹಕರಿಗೆ ದೊರಕಲಿವೆ.
ಈ ಕೊಡುಗೆಗಳ ವೈಶಿಷ್ಟ್ಯವೇನು, ಇವನ್ನು ನಾವು ಪಡೆದುಕೊಳ್ಳುವುದು ಹೇಗೆ? ವಿವರ ಇಲ್ಲಿದೆ!
ಜಿಯೋಫೋನ್ ಮಾನ್ಸೂನ್ ಹಂಗಾಮ
ಸದ್ಯ ಬೇರೆ ಯಾವುದೇ ಫೀಚರ್ ಫೋನ್ ಬಳಸುತ್ತಿರುವ ಗ್ರಾಹಕರು 'ಮಾನ್ಸೂನ್ ಹಂಗಾಮ' ಕೊಡುಗೆಯ ಮೂಲಕ ತಮ್ಮ ಮೊಬೈಲನ್ನು ಸದ್ಯದ ಮಾದರಿಯ ಜಿಯೋಫೋನ್ ಜೊತೆ ವಿನಿಮಯ ಮಾಡಿಕೊಳ್ಳಬಹುದು. ಹೀಗೆ ವಿನಿಮಯ ಮಾಡಿಕೊಳ್ಳಲು ವಾಸ್ತವಿಕ ಪ್ರಾರಂಭಿಕ ವೆಚ್ಚವಾಗಿ (ಎಫೆಕ್ಟಿವ್ ಎಂಟ್ರಿ ಕಾಸ್ಟ್) ಕೇವಲ ರೂ. 501 ಪಾವತಿಸಿದರೆ ಸಾಕು ಎಂದು ಜಿಯೋ ಮೂಲಗಳು ತಿಳಿಸಿವೆ.
ರೂ. 1500 ಪಾವತಿಸಿ ಚಂದಾದಾರರಾದವರಿಗೆ 3 ವರ್ಷಗಳ ನಂತರ ಸಂಪೂರ್ಣ ಹಣ ಹಿಂದಿರುಗಿಸುವ ಕೊಡುಗೆ ಇಂತಹ ಗ್ರಾಹಕರಿಗೆ ಅನ್ವಯಿಸುವುದಿಲ್ಲ ಎನ್ನುವುದು ಇಜ್ಞಾನದ ಅನಿಸಿಕೆ. ಇಂತಹ ಗ್ರಾಹಕರೂ ಮಾಸಿಕ ರೂ. 49ರ ಪ್ಲಾನ್ ಬಳಸುವುದು ಸಾಧ್ಯವೆಂದು ಇಜ್ಞಾನ ಭಾವಿಸುತ್ತದೆ. ಮಾನ್ಸೂನ್ ಹಂಗಾಮ ಕುರಿತ ಸಂಪೂರ್ಣ ವಿವರ ಸದ್ಯದಲ್ಲೇ ಲಭ್ಯವಾಗುವ ನಿರೀಕ್ಷೆಯಿದೆ.
ಜಿಯೋಫೋನ್ 2
ಜಿಯೋಫೋನ್ 2 ಎನ್ನುವುದು ಜಿಯೋಫೋನ್‌ನ ಹೊಸ ಮಾದರಿ. ನೋಡಲು ಬ್ಲ್ಯಾಕ್‌ಬೆರಿ ಮೊಬೈಲಿನಂತೆ ಕಾಣುವ ಈ ಮಾದರಿಯಲ್ಲಿ ಅಡ್ಡಡ್ಡಲಾದ (ಹಾರಿಜಾಂಟಲ್) ಪರದೆಯ ಡಿಸ್ಪ್ಲೇ, ಪೂರ್ಣಪ್ರಮಾಣದ QWERTY ಕೀಪ್ಯಾಡ್ ಸೇರಿದಂತೆ ಹಲವು ವೈಶಿಷ್ಟ್ಯಗಳಿವೆ. ಈ ಮಾದರಿಯನ್ನು ಬರುವ ಆಗಸ್ಟ್ 15, 2018ರಿಂದ ರೂ. 2999ರ ಪರಿಚಯಾತ್ಮಕ ಬೆಲೆಗೆ ಖರೀದಿಸಬಹುದಾಗಿದೆ ಎಂದು ಜಿಯೋ ಹೇಳಿದೆ. ವೀಡಿಯೋ ವೀಕ್ಷಣೆಗೆ ಸದ್ಯದ ಜಿಯೋಫೋನ್ ಪರದೆ ತೀರಾ ಸಣ್ಣದೆನ್ನುವ ದೂರು ಈ ಹೊಸ ಆವೃತ್ತಿಯ ಪರಿಚಯದೊಡನೆ ಕೊಂಚಮಟ್ಟಿಗಾದರೂ ದೂರವಾಗುವ ನಿರೀಕ್ಷೆಯಿದೆ.
ವಾಟ್ಸ್‌ಆಪ್, ಫೇಸ್‌ಬುಕ್ ಹಾಗೂ ಯೂಟ್ಯೂಬ್ ಲಭ್ಯತೆ
ಜನಪ್ರಿಯ ಆಪ್‌ಗಳಾದ ವಾಟ್ಸ್‌ಆಪ್, ಫೇಸ್‌ಬುಕ್ ಹಾಗೂ ಯೂಟ್ಯೂಬ್ ಆಗಸ್ಟ್ 15, 2018ರಿಂದ ಜಿಯೋಫೋನ್‌ನ ಎರಡೂ ಮಾದರಿಗಳಲ್ಲಿ ದೊರಕಲಿವೆ ಎಂದು ಜಿಯೋ ಪ್ರಕಟಣೆ ತಿಳಿಸಿದೆ. ಈ ಆಪ್‌ಗಳು ಲಭ್ಯವಾದಾಗ, ಈಗಾಗಲೇ ಜಿಯೋಫೋನ್ ಬಳಸುತ್ತಿರುವ ಗ್ರಾಹಕರು ಕೂಡ ಅವನ್ನು ಜಿಯೋಫೋನ್ ಆಪ್ ಸ್ಟೋರಿನಿಂದ ಡೌನ್‌ಲೋಡ್ ಮಾಡಿಕೊಂಡು ಬಳಸಬಹುದು.
ಜಿಯೋಫೋನ್‌ನ ಆಪ್ ಸ್ಟೋರ್ ಆದ ಜಿಯೋಸ್ಟೋರಿನಲ್ಲಿ ಫೇಸ್‌ಬುಕ್‌ನ ಸರಳ ಆವೃತ್ತಿ ಈಗಾಗಲೇ ಲಭ್ಯವಿದ್ದು ಈ ಹೊಸ ರೂಪ ಅದರಿಂದ ಹೇಗೆ ವಿಭಿನ್ನವಾಗಿರಬಹುದು ಎನ್ನುವ ಕುತೂಹಲ ಇದೆ. ವಾಟ್ಸ್‌ಆಪ್ ಹಾಗೂ ಯೂಟ್ಯೂಬ್ ಸದ್ಯ ಜಿಯೋಫೋನ್‌ನಲ್ಲಿ ಲಭ್ಯವಿಲ್ಲ. ವಾಟ್ಸ್‌ಆಪ್‌ನ ಅತಿದೊಡ್ಡ ಬಳಕೆದಾರ ಸಮುದಾಯವಾದ ನಮ್ಮ ದೇಶದ ಮಟ್ಟಿಗೆ ಜಿಯೋಫೋನ್‌ನಲ್ಲೂ ವಾಟ್ಸ್‌ಆಪ್ ದೊರಕುವಂತಾಗಿರುವುದು ವಿಶೇಷ ಸುದ್ದಿಯೇ ಎನ್ನಬೇಕು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ