ಮಂಗಳವಾರ, ಜುಲೈ 10, 2018

ಕತೆ ಹೆಣೆಯುವ 'ಸ್ಟೋರಿವೀವರ್'

ಇಜ್ಞಾನ ವಿಶೇಷ


ಮಕ್ಕಳಲ್ಲಿ ಓದುವ ಅಭಿರುಚಿ ಬೆಳೆಸುವ ಅತ್ಯಂತ ಸುಲಭದ ಮಾರ್ಗವೆಂದರೆ ಅವರಿಗೆ ಕತೆಪುಸ್ತಕಗಳ ರುಚಿ ತೋರಿಸುವುದು. ಅಪ್ಪ-ಅಮ್ಮ ಅಥವಾ ತಾತ-ಅಜ್ಜಿಯರಿಂದ ಕೇಳಿ ಕತೆಗಳ ಬಗ್ಗೆ ಚಿಕ್ಕಂದಿನಲ್ಲೇ ಕುತೂಹಲ ಬೆಳೆಸಿಕೊಂಡ ಮಕ್ಕಳು ಮುಂದೆ ಪುಸ್ತಕಗಳ ಬಗ್ಗೆ ಅಭಿರುಚಿ ಬೆಳೆಸಿಕೊಳ್ಳುವುದು ಬಹುತೇಕ ಖಚಿತವೇ ಎನ್ನಬಹುದು.

ಹೀಗೆಂದು ಮಕ್ಕಳಿಗೆ ಪುಸ್ತಕಗಳನ್ನು ಒದಗಿಸಲು ಹೊರಡುವ ಪೋಷಕರಿಗೆ ಎದುರಾಗುವ ಮುಖ್ಯ ಸಮಸ್ಯೆಗಳೆಂದರೆ ಪುಸ್ತಕಗಳಲ್ಲಿ ವೈವಿಧ್ಯದ ಕೊರತೆ ಹಾಗೂ ಹೆಚ್ಚು ಹೆಚ್ಚು ಪುಸ್ತಕಗಳನ್ನು ಕೊಳ್ಳಲು ಹಿಂಜರಿಯುವಂತೆ ಮಾಡುವ ದುಬಾರಿ ಬೆಲೆಗಳು.

ಬೆಂಗಳೂರಿನ ಸ್ವಯಂಸೇವಾ ಸಂಸ್ಥೆಯೊಂದು ಈ ಸಮಸ್ಯೆಗಳನ್ನು ದೂರಮಾಡುವ ನಿಟ್ಟಿನಲ್ಲಿ ವಿಶಿಷ್ಟ ಪ್ರಯತ್ನವೊಂದನ್ನು ಮಾಡಿದೆ. ಪ್ರಥಮ್ ಬುಕ್ಸ್ ಸಂಸ್ಥೆ ನಡೆಸುತ್ತಿರುವ ಸ್ಟೋರಿವೀವರ್ (storyweaver.org.in) ಎಂಬ ತಾಣದಲ್ಲಿ ಇತಿಹಾಸದಿಂದ ವಿಜ್ಞಾನದವರೆಗೆ ವಿವಿಧ ವಿಷಯಗಳಿಗೆ ಸಂಬಂಧಪಟ್ಟ ಸಚಿತ್ರ ಕತೆಗಳನ್ನು ಉಚಿತವಾಗಿ ಓದುವುದು, ಡೌನ್‌ಲೋಡ್ ಮಾಡಿಕೊಳ್ಳುವುದು ಸಾಧ್ಯ.

ಸ್ಟೋರಿವೀವರ್‌ನಲ್ಲಿರುವ ಕನ್ನಡ ಪುಸ್ತಕವೊಂದರ ಪುಟ

ಈ ತಾಣದಲ್ಲಿ ವಿಜ್ಞಾನ, ಗಣಿತ, ಇತಿಹಾಸ ಸೇರಿದಂತೆ ಅನೇಕ ವಿಷಯಗಳನ್ನು ಕುರಿತ ಸಾವಿರಾರು ಕತೆಗಳಿವೆ. ಇಂಗ್ಲಿಷ್, ಕನ್ನಡ ಮಾತ್ರವೇ ಅಲ್ಲದೆ ಪ್ರಪಂಚದ ಇನ್ನೂ ಹಲವಾರು ಭಾಷೆಗಳ ಕತೆಗಳನ್ನು ನಾವು ಇಲ್ಲಿ ಓದಬಹುದು. ಅಷ್ಟೂ ಕತೆಗಳು ಕ್ರಿಯೇಟಿವ್ ಕಾಮನ್ಸ್ ಮುಕ್ತ ಪರವಾನಗಿಯಡಿ ಲಭ್ಯವಿರುವುದು ವಿಶೇಷ. ಕಥೆ ಹೇಳಲು ಗೊತ್ತಿರುವವರು ಹೊಸ ಕತೆಗಳನ್ನು ಬರೆದು, ಒಪ್ಪುವ ಚಿತ್ರಗಳನ್ನು ಕೂಡಿಸಿ, ಈ ಜಾಲತಾಣದಲ್ಲಿ ಸ್ವತಃ ತಾವೇ ಪ್ರಕಟಿಸುವ ಸೌಲಭ್ಯವೂ ಇಲ್ಲಿದೆ.

ಇಲ್ಲಿ ಪ್ರಕಟವಾಗಿರುವ ಕತೆಗಳನ್ನು ಓದುವುದಷ್ಟೇ ಅಲ್ಲದೆ ನಮ್ಮ ಭಾಷೆಗೆ ಅನುವಾದಿಸಿ ಅಲ್ಲಿಯೇ ಮರುಪ್ರಕಟಿಸುವ ಅವಕಾಶ ಕೂಡ ಇದೆ. ಹೆಚ್ಚು ಮುದ್ರಿತ ಪುಸ್ತಕಗಳು ದೊರಕದ ಭಾಷೆಗಳಲ್ಲೂ ಮಕ್ಕಳಿಗೆ ಅಗತ್ಯ ಮಾಹಿತಿ ಒದಗಿಸಲು ಅನೇಕ ಆಸಕ್ತರು ಈ ಸೌಲಭ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ತಾಣದ ಕತೆಗಳನ್ನು ಈವರೆಗೆ ಒಂದು ದಶಲಕ್ಷಕ್ಕೂ ಹೆಚ್ಚು ಬಾರಿ ಓದಲಾಗಿರುವುದು ಅದರ ಯಶಸ್ಸಿನ ಪರಿಣಾಮಕಾರಿ ಸೂಚಿಯೆಂದೇ ಹೇಳಬಹುದು.

3 ಕಾಮೆಂಟ್‌ಗಳು:

Unknown ಹೇಳಿದರು...

ಲೇಖನ ಪ್ರಕಟಿಸಿದ್ದಕ್ಕಾಗಿ ಧನ್ಯವಾದಗಳು ಸರ್

Unknown ಹೇಳಿದರು...

ಲೇಖನ ಪ್ರಕಟಿಸಿದ್ದಕ್ಕಾಗಿ ಧನ್ಯವಾದಗಳು ಸರ್.

Karnataka Best ಹೇಳಿದರು...

Good Inforamtion. thank you

badge