ಶುಕ್ರವಾರ, ಜುಲೈ 27, 2018

ಬೆರಳ ತುದಿಯ ಜಗತ್ತು

ನಮ್ಮ ಬೆರಳುಗಳ ಫೋಟೋ ಪಡೆದ ದುಷ್ಕರ್ಮಿಗಳು ಅದನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಸೆಲ್ಫಿಗಳಲ್ಲಿ ನಿಮ್ಮ ಬೆರಳು ಕಾಣದಂತೆ ನೋಡಿಕೊಳ್ಳಿ ಎಂಬ ಸಲಹೆಯೂ ಕೇಳಸಿಗುತ್ತಿದೆ. ಈ ಸಂದರ್ಭದಲ್ಲಿ ಬೆರಳ ತುದಿಯ ಫಿಂಗರ್‌ಪ್ರಿಂಟ್ ಜಗತ್ತಿನಲ್ಲೊಂದು ಸುತ್ತು...   
ಟಿ. ಜಿ. ಶ್ರೀನಿಧಿ


ಶ್ರೀಕೃಷ್ಣ ಪರಮಾತ್ಮ ಒಂದೇ ಬೆರಳಿನಿಂದ ಗೋವರ್ಧನಗಿರಿಯನ್ನು ಎತ್ತಿದ್ದನಂತೆ. ಇಂತಹ ಸಾಧನೆಗಳೆಲ್ಲ ನಮ್ಮಂತಹ ಹುಲುಮಾನವರಿಗೆ ಸಾಧ್ಯವಾಗದಿದ್ದರೂ ಇಂದಿನ ತಂತ್ರಜ್ಞಾನ ನಮ್ಮ ಬೆರಳುಗಳಿಗೂ ಒಂದಷ್ಟು ವಿಶೇಷ ಶಕ್ತಿಗಳನ್ನು ತಂದುಕೊಟ್ಟಿದೆ.

ಇಂತಹ ಹಲವು ಶಕ್ತಿಗಳ ಹಿನ್ನೆಲೆಯಲ್ಲಿರುವುದು ನಮ್ಮ ಬೆರಳ ಗುರುತು, ಅರ್ಥಾತ್ ಫಿಂಗರ್ ಪ್ರಿಂಟ್.

ನಮ್ಮ ಬೆರಳುಗಳ ತುದಿಯ ಒಳಭಾಗದಲ್ಲಿರುವ ವಿಶಿಷ್ಟ ರಚನೆಯ ವಿನ್ಯಾಸಗಳನ್ನು ನಾವು ಬೆರಳ ಗುರುತು ಎಂದು ಕರೆಯುತ್ತೇವೆ. ವಸ್ತುಗಳ ಮೇಲೆ ನಮ್ಮ ಹಿಡಿತವನ್ನು (ಗ್ರಿಪ್) ಉತ್ತಮಗೊಳಿಸುವುದು ಈ ಗುರುತುಗಳ ಮೂಲ ಉದ್ದೇಶ; ಆದರೆ ಅವುಗಳಿಗೆ  ದೊರೆತಿರುವ ಪ್ರಾಮುಖ್ಯಕ್ಕೆ ಕಾರಣವೇ ಬೇರೆ.

ನಮ್ಮ ಬೆರಳ ಮೇಲಿನ ವಿನ್ಯಾಸ ಹೇಗಿರುತ್ತದೆ ಎನ್ನುವುದು ನಮ್ಮನಮ್ಮ ಡಿಎನ್‌ಎಯನ್ನು ಅವಲಂಬಿಸಿರುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಒಬ್ಬರ ಕೈಬೆರಳ ಗುರುತು ಇನ್ನೊಬ್ಬರ ಕೈಬೆರಳ ಗುರುತಿನಂತೆ ಇಲ್ಲದಿರುವುದಕ್ಕೆ ಇದೇ ಕಾರಣ.

ಪ್ರತಿಯೊಬ್ಬರ ಕೈಬೆರಳ ಗುರುತುಗಳೂ ವಿಶಿಷ್ಟವಾಗಿರುತ್ತವೆ ಎಂದಮೇಲೆ ಅವು ಆ ವ್ಯಕ್ತಿಯನ್ನು ಪ್ರತ್ಯೇಕವಾಗಿ ಗುರುತಿಸಲು ನೆರವಾಗಬಹುದು ತಾನೇ? ಬೆರಳ ಗುರುತನ್ನು ವ್ಯಕ್ತಿಯ ಗುರುತಿನ ಚಿಹ್ನೆಯಾಗಿ ಬಳಸಲು ಪ್ರಾರಂಭಿಸಿದ್ದರ ಹಿನ್ನೆಲೆಯಲ್ಲಿದ್ದದ್ದು ಈ ಉದ್ದೇಶವೇ. ಮಸಿಹಚ್ಚಿದ ಹೆಬ್ಬೆರಳನ್ನು ಕಾಗದದ ಮೇಲೆ ಒತ್ತಿ ಮೂಡಿಸಿದ ಬೆರಳೊತ್ತು ಸಹಿಯ ಸ್ಥಾನ ಪಡೆದ ಹಾಗೆಯೇ ಅಪರಾಧ ನಡೆದ ಸ್ಥಳದಲ್ಲಿ ಮೂಡಿದ ಬೆರಳ ಗುರುತು ಅಪರಾಧಿಯನ್ನು ಪತ್ತೆಮಾಡಲು ನೆರವಾಯಿತು.

ತಂತ್ರಜ್ಞಾನ ಬೆಳೆದ ಹಾಗೆ ಬೆರಳ ಗುರುತುಗಳ ಉಪಯೋಗಕ್ಕೆ ಇನ್ನೊಂದು ಆಯಾಮ ಸಿಕ್ಕಿತು. ಬೆರಳೊತ್ತಿನ ಸಂಗ್ರಹ, ಶೇಖರಣೆ ಹಾಗೂ ಪರಿಶೀಲನೆಯಲ್ಲಿ ತಂತ್ರಜ್ಞಾನದ ಸವಲತ್ತುಗಳ ಬಳಕೆ ಪ್ರಾರಂಭವಾದ ಮೇಲೆ ಅವನ್ನು ಹೊಸ ಕ್ಷೇತ್ರಗಳಲ್ಲಿ ಬಳಸುವುದೂ ಸಾಧ್ಯವಾಯಿತು.

ಪ್ರತಿಯೊಬ್ಬರಿಗೂ ವಿಶಿಷ್ಟವಾಗಿರುವ ಬೆರಳ ಗುರುತು, ಅಕ್ಷಿಪಟಲ, ಮುಖಚರ್ಯೆ ಮುಂತಾದ ವಿಷಯಗಳನ್ನು ಸುರಕ್ಷತಾ ಕ್ರಮಗಳಲ್ಲಿ ಬಳಸುವ 'ಬಯೋಮೆಟ್ರಿಕ್ಸ್' ಪರಿಕಲ್ಪನೆ ಬೆಳೆದದ್ದು ಹೀಗೆಯೇ.

ಕಚೇರಿಗಳಲ್ಲಿ ಹಾಜರಾತಿ ದಾಖಲಿಸಲು ಬೆರಳ ಗುರುತು ಪಡೆಯುವ ಯಂತ್ರಗಳಿರುತ್ತವಲ್ಲ, ಅವು ಇದೇ ಪರಿಕಲ್ಪನೆಯನ್ನು ಬಳಸುತ್ತವೆ. ಮೊಬೈಲ್ ಫೋನ್ ಸಂಪರ್ಕ ಪಡೆಯುವಾಗ ಬೆರಳ ಗುರುತನ್ನು ನಮ್ಮ ಆಧಾರ್ ಮಾಹಿತಿಯೊಡನೆ ಹೋಲಿಸುವ ವ್ಯವಸ್ಥೆಯಲ್ಲೂ ಬಯೋಮೆಟ್ರಿಕ್ಸ್ ಬಳಕೆಯಾಗುತ್ತದೆ. ವೀಸಾ ನೀಡುವಾಗ ಪ್ರವಾಸಿಯ ಬೆರಳ ಗುರುತುಗಳನ್ನು ಸಂಗ್ರಹಿಸುವ ಕೆಲ ದೇಶಗಳು ನಾವು ಅಲ್ಲಿಗೆ ಹೋದಾಗ ಗುರುತು ದೃಢೀಕರಿಸಲು ನಮ್ಮ ಬೆರಳೊತ್ತನ್ನು ಆ ಮಾಹಿತಿಯೊಡನೆ ಹೋಲಿಸಿ ನೋಡುವುದೂ ಉಂಟು.

ಮೊಬೈಲ್ ಫೋನು - ಲ್ಯಾಪ್‌ಟಾಪ್‌ಗಳಲ್ಲೆಲ್ಲ ಕಾಣಸಿಗುವ ಫಿಂಗರ್‌ಪ್ರಿಂಟ್ ಸೆನ್ಸರ್ ಹಿಂದಿರುವುದೂ ಇದೇ ಪರಿಕಲ್ಪನೆ. ಪಾಸ್‌ವರ್ಡ್ ಬದಲು ನಮ್ಮ ಬೆರಳೊತ್ತನ್ನು ಬಳಸಲು ಸಾಧ್ಯವಾಗಿಸಿದ್ದು ಈ ಸಾಧನದ ವೈಶಿಷ್ಟ್ಯ. ಮೊಬೈಲ್ ಪರದೆಯ ಕೆಳಗೋ, ಹಿಂಬದಿ ಕವಚದಲ್ಲೋ ಇರುತ್ತಿದ್ದ ಈ ಸಾಧನವನ್ನು ಇದೀಗ ಪರದೆಯ ಅಂಗವಾಗಿಯೇ ರೂಪಿಸುವ ಪ್ರಯತ್ನ ಕೂಡ ನಡೆದಿದೆ.

ತಂತ್ರಜ್ಞಾನ ಜಗತ್ತಿನಲ್ಲಿ ನಮ್ಮ ಬೆರಳೊತ್ತು ಎಲ್ಲಿ ಹೇಗೆಯೇ ಬಳಕೆಯಾಗಲಿ, ಅಲ್ಲೆಲ್ಲ ನಡೆಯುವುದು ಸರಿಸುಮಾರು ಒಂದೇ ರೀತಿಯ ಪ್ರಕ್ರಿಯೆ. ಬೆರಳೊತ್ತನ್ನು ಸ್ಕ್ಯಾನ್ ಮಾಡಿ ಉಳಿಸಿಟ್ಟುಕೊಳ್ಳುವುದು (ಎನ್‌ರೋಲ್‌ಮೆಂಟ್) ಈ ಪ್ರಕ್ರಿಯೆಯ ಮೊದಲ ಭಾಗವಾದರೆ ನಂತರ ಯಾವಾಗಲೋ ನಾವು ನೀಡುವ ಬೆರಳೊತ್ತನ್ನು ಹೀಗೆ ಉಳಿಸಿಟ್ಟ ವಿವರದೊಡನೆ ಹೋಲಿಸಿ ಇದು ಇಂಥವರದ್ದೇ ಎಂದು ದೃಢೀಕರಿಸುವುದು (ವೆರಿಫಿಕೇಶನ್) ಇನ್ನೊಂದು ಭಾಗ. ಇದನ್ನೆಲ್ಲ ಬಹಳ ಕ್ಷಿಪ್ರವಾಗಿ ಹಾಗೂ ಸಮರ್ಥವಾಗಿ ಮಾಡಬಲ್ಲ ತಾಂತ್ರಿಕ ಸವಲತ್ತುಗಳು ಇಂದು ಲಭ್ಯವಿರುವುದರಿಂದಲೇ ಫಿಂಗರ್‌ಪ್ರಿಂಟ್ ಇಂದು ಭೌತಿಕ ಸಹಿಗೆ, ಮೊಬೈಲು-ಕಂಪ್ಯೂಟರಿನ ಪಾಸ್‌ವರ್ಡ್‌ಗೆ ಪರ್ಯಾಯವಾಗಿ ಬೆಳೆಯುತ್ತಿದೆ.

ಹಾಗೆಂದು ಈ ತಂತ್ರಜ್ಞಾನ ನೂರಕ್ಕೆ ನೂರು ಪರಿಪೂರ್ಣ ಎಂದೇನೂ ಇಲ್ಲ. ಬೆರಳುಗಳಿಗೆ ಕೊಳೆಮೆತ್ತಿಕೊಂಡಾಗ, ಗಾಯವಾದಾಗಲೆಲ್ಲ ಬೆರಳೊತ್ತಿನ ಪರೀಕ್ಷೆ ಅಷ್ಟೇನೂ ಸಮರ್ಪಕವಾಗಿ ನಡೆಯುವುದಿಲ್ಲ. ಬೆರಳೊತ್ತನ್ನು ಉಳಿಸಿಡುವುದು, ಮತ್ತೆ ಸಂಗ್ರಹಿಸಿ ಹೋಲಿಸುವುದು ಎಲ್ಲವೂ ಡಿಜಿಟಲ್ ರೂಪದಲ್ಲೇ ಆದ್ದರಿಂದ ನಮ್ಮ ಬೆರಳೊತ್ತನ್ನು ನಕಲಿಸಿ ಬಳಸುವುದು ಅಸಾಧ್ಯ ಸಂಗತಿಯೇನಲ್ಲ (ಹಾಗೆಂದು ಅದು ಸುಲಭಸಾಧ್ಯವೂ ಅಲ್ಲ). ಹೀಗಾಗಿ ಡಿಜಿಟಲ್ ಜಗತ್ತಿನ ಉಳಿದೆಲ್ಲ ಮಾಹಿತಿಯಂತೆ ನಾವು ನಮ್ಮ ಬೆರಳೊತ್ತನ್ನೂ ಜೋಪಾನವಾಗಿ ನೋಡಿಕೊಳ್ಳುವುದು ಒಳ್ಳೆಯದು. ಭೌತಿಕ ರೂಪದಲ್ಲೂ, ಫೋಟೋ ರೂಪದಲ್ಲೂ!

ಜುಲೈ ೧೧, ೨೦೧೮ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge