ಮಂಗಳವಾರ, ಜುಲೈ 31, 2018

ನಿಮ್ಮ ಫೋನಿನಲ್ಲಿ ಎಷ್ಟು ಕ್ಯಾಮೆರಾ ಇದೆ?

ಟಿ. ಜಿ. ಶ್ರೀನಿಧಿ


ಫೋಟೋ ತೆಗೆಸಿಕೊಳ್ಳುವುದೇ ವಿಶೇಷ ಸಂಭ್ರಮವಾಗಿದ್ದ ಕಾಲವೂ ಒಂದಿತ್ತು. ನಾವೆಲ್ಲ ಶಾಲೆಗೆ ಹೋಗುತ್ತಿದ್ದಾಗ ಅದೊಂದು ವಿಶೇಷ ವಾರ್ಷಿಕ ಆಚರಣೆ. ಛಾಯಾಗ್ರಾಹಕರು ಶಾಲೆಗೆ ಬರುವುದು, ಅವರಿಂದ ಫೋಟೋ ತೆಗೆಸಿಕೊಳ್ಳಲು ನಾವೆಲ್ಲ ಸಿದ್ಧವಾಗಿರುವುದು - ಇದೆಲ್ಲ ಅಂದಿನ ಕಾಲಕ್ಕೆ ದೊಡ್ಡ ಸಂಗತಿಗಳು.

ಆಮೇಲೆ ಮನೆಗಳಿಗೂ ಕ್ಯಾಮೆರಾ ಬಂತು. ಅದು ಡಿಜಿಟಲ್ ಆದಮೇಲಂತೂ ಕ್ಯಾಮೆರಾಗಳ ಸಂಖ್ಯೆ ಇನ್ನಷ್ಟು ಜಾಸ್ತಿಯಾಯಿತು. ಫೋಟೋ ತೆಗೆಸಿಕೊಳ್ಳುವುದು ವಿಶೇಷ ಎನ್ನುವ ಭಾವನೆ ಹೋಗಿ ದಿನನಿತ್ಯದ ಅನುಭವಗಳ ಪೈಕಿ ಅದೂ ಒಂದು ಎನ್ನಿಸಲು ಶುರುವಾಯಿತು.

ಈ ಪರಿಸ್ಥಿತಿ ಇನ್ನಷ್ಟು ಬದಲಾಗಿ ಫೋಟೋ ತೆಗೆಯುವ ಅಭ್ಯಾಸ ವಿಪರೀತಕ್ಕೆ ಹೋಗಿದ್ದು ಕ್ಯಾಮೆರಾಗಳು ಮೊಬೈಲ್ ಫೋನಿನೊಳಗೆ ಸೇರಿಕೊಂಡಾಗ. ರಜೆಯಲ್ಲಿ ಭೇಟಿನೀಡಿದ ಪ್ರವಾಸಿ ತಾಣವಿರಲಿ, ಮನೆಯಲ್ಲಿ ಸುಮ್ಮನೆ ಕುಳಿತಿದ್ದಾಗಲೇ ಇರಲಿ - ಯಾರು ಯಾವಾಗ ಎಲ್ಲಿ ಬೇಕಾದರೂ ಫೋಟೋ ಕ್ಲಿಕ್ಕಿಸುವುದು, ಇತರರೊಡನೆ ಹಂಚಿಕೊಳ್ಳುವುದು ಕ್ಯಾಮೆರಾ ಫೋನುಗಳಿಂದಾಗಿ ಸಾಧ್ಯವಾಗಿದ್ದು ಈಗಾಗಲೇ ಹಳೆಯ ವಿಷಯ. ವ್ಯಕ್ತಿವಿಶೇಷಗಳನ್ನೂ ಸೆಲ್ಫಿಗಳನ್ನೂ ಸೆರೆಹಿಡಿಯುವ ಜೊತೆಗೆ ಕ್ಯಾಮ್‌ಸ್ಕ್ಯಾನರ್, ಗೂಗಲ್ ಟ್ರಾನ್ಸ್‌ಲೇಟ್ ಮುಂತಾದ ಆಪ್‌ಗಳನ್ನು ಬಳಸುವಲ್ಲೂ ಇವು ಸಹಾಯ ಮಾಡುತ್ತವೆ.

ಈ ವರ್ಷ ಒಟ್ಟಾರೆಯಾಗಿ ೧.೩ ಟ್ರಿಲಿಯನ್ (೧.೩ ಲಕ್ಷ ಕೋಟಿ) ಫೋಟೋಗಳನ್ನು ಸೆರೆಹಿಡಿಯಲಾಗುತ್ತದೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ಶೇ. ೮೭ರಷ್ಟು ಫೋಟೋಗಳನ್ನು ಮೊಬೈಲ್ ಕ್ಯಾಮೆರಾ ಬಳಸಿಯೇ ಕ್ಲಿಕ್ಕಿಸಲಾಗುತ್ತದಂತೆ!

ಮೊಬೈಲ್ ಕ್ಯಾಮೆರಾ ಪರಿಚಯವಾದ ನಂತರ ಈವರೆಗೆ ಕ್ಯಾಮೆರಾ ಗುಣಮಟ್ಟದಲ್ಲಿ, ತಾಂತ್ರಿಕತೆಯಲ್ಲಿ ಬೇಕಾದಷ್ಟು ಅಭಿವೃದ್ಧಿಯಾಗಿದೆ, ನಿಜ. ಆದರೆ ಮೊಬೈಲಿನೊಳಗೊಂದು ಕ್ಯಾಮೆರಾ ಹೀಗೆಯೇ ಇರುತ್ತದೆ ಎನ್ನುವ ಪರಿಕಲ್ಪನೆಯಲ್ಲಿ ಹೆಚ್ಚೇನೂ ಬದಲಾವಣೆ ಕಂಡಿಲ್ಲ. ಮೊಬೈಲ್ ಯಾವುದೇ ಆದರೂ ಪರದೆಯ ಹಿಂಬದಿ ಮಧ್ಯದಲ್ಲೋ ಮೂಲೆಯಲ್ಲೋ ಅದರ ಪ್ರಾಥಮಿಕ ಕ್ಯಾಮೆರಾ ಇರುವುದು ನಮಗೆಲ್ಲ ಗೊತ್ತು. ಸೆಲ್ಫಿ ಕ್ಯಾಮೆರಾದ್ದೂ ಇದೇ ಕತೆ, ಅದು ಪರದೆಯ ಮುಂಭಾಗದಲ್ಲೇ ಇರುತ್ತದೆ ಎನ್ನುವುದಷ್ಟೇ ವ್ಯತ್ಯಾಸ.

ಮೊದಲ ಬಾರಿಗೆ ಈ ಪರಿಸ್ಥಿತಿ ಬದಲಾಗಿದ್ದು, ಬಹುಶಃ, ಎರಡು ಲೆನ್ಸಿನ (ಡ್ಯುಯಲ್ ಲೆನ್ಸ್) ಕ್ಯಾಮೆರಾಗಳ ಪರಿಚಯವಾದಾಗ. ಸಾಮಾನ್ಯ ಮೊಬೈಲ್ ಕ್ಯಾಮೆರಾದಲ್ಲಿ ಒಂದೇ ಲೆನ್ಸ್ ಇರುತ್ತದಲ್ಲ, ಅದರ ಪಕ್ಕದಲ್ಲೋ ಕೆಳಬದಿಯಲ್ಲೋ ಇನ್ನೊಂದು ಲೆನ್ಸ್ ಇರುವುದನ್ನು ಡ್ಯುಯಲ್ ಲೆನ್ಸ್ ವ್ಯವಸ್ಥೆ ಬಳಸುವ ಮೊಬೈಲುಗಳಲ್ಲಿ ನಾವು ನೋಡಬಹುದು. ಒಂದು ಲೆನ್ಸಿನ ಕ್ಯಾಮೆರಾದಲ್ಲಿ ಸಾಧ್ಯವಾಗುವುದಕ್ಕಿಂತ ಹೆಚ್ಚು ಉತ್ಕೃಷ್ಟ ಚಿತ್ರಗಳನ್ನು ಕ್ಲಿಕ್ಕಿಸುವುದು ಈ ಹೆಚ್ಚುವರಿ ಲೆನ್ಸಿನಿಂದಾಗಿ ಸಾಧ್ಯವಾಗುತ್ತದೆ. ಛಾಯಾಚಿತ್ರದ ವಿಷಯದ (ಸಬ್ಜೆಕ್ಟ್) ಹಿನ್ನೆಲೆಯನ್ನು ಮಬ್ಬಾಗಿಸಲು (ಡೆಪ್ತ್ ಆಫ್ ಫೀಲ್ಡ್) ಕೂಡ ಇದು ನೆರವಾಗಬಲ್ಲದು. ಎರಡು ಲೆನ್ಸುಗಳ ಪೈಕಿ ಒಂದು ವೈಡ್ ಆಂಗಲ್ ಲೆನ್ಸ್ ಆಗಿದ್ದರಂತೂ ಸಾಮಾನ್ಯ ಕ್ಯಾಮೆರಾದಲ್ಲಿ ಕಾಣುವುದಕ್ಕಿಂತ ಹೆಚ್ಚಿನ ಪ್ರದೇಶವನ್ನು ನಮ್ಮ ಫೋಟೋ ವ್ಯಾಪ್ತಿಯೊಳಗೆ ತರಬಹುದು. ಕೆಲ ಮೊಬೈಲುಗಳಲ್ಲಿ ಸೆಲ್ಫಿಗೂ ಹೀಗೆಯೇ ಎರಡೆರಡು ಕ್ಯಾಮೆರಾಗಳಿವೆ. ಅಷ್ಟೇ ಅಲ್ಲ, ಕೆಲ ಮಾದರಿಯ ಡ್ಯುಯಲ್ ಲೆನ್ಸ್ ಮೊಬೈಲುಗಳಲ್ಲಿ ಥ್ರೀಡಿ ಛಾಯಾಗ್ರಹಣ ಹಾಗೂ ಆಪ್ಟಿಕಲ್ ಜ಼ೂಮ್‌ನಂತಹ ಸೌಲಭ್ಯಗಳಿರುವುದೂ ಉಂಟು.

ಒಂದು ಲೆನ್ಸ್ ಜಾಗದಲ್ಲಿ ಎರಡು ಲೆನ್ಸ್ ಬಂದಿದೆಯಲ್ಲ ಅಂದುಕೊಳ್ಳುವಷ್ಟರಲ್ಲೇ ಮೊಬೈಲ್ ಕ್ಯಾಮೆರಾ ಜಗತ್ತು ಇನ್ನಷ್ಟು ಬದಲಾವಣೆಗಳಿಗೆ ಸಿದ್ಧವಾಗಿದೆ. ಒಂದೆರಡಲ್ಲ, ಮೊಬೈಲ್ ಕ್ಯಾಮೆರಾದಲ್ಲಿ ನಾಲ್ಕಾರು ಲೆನ್ಸುಗಳನ್ನು ಅಳವಡಿಸುವುದು ಈ ಬದಲಾವಣೆಯ ಮುಖ್ಯಾಂಶ. ಅಂದಹಾಗೆ ಈ ಬದಲಾವಣೆ ಬರಿಯ ಹೇಳಿಕೆಗಷ್ಟೇ ಸೀಮಿತವಲ್ಲ, ಪ್ರಾಥಮಿಕ ಕ್ಯಾಮೆರಾದಲ್ಲಿ ಮೂರು ಲೆನ್ಸುಗಳನ್ನು ಬಳಸುವ ಮೊಬೈಲು (Huawei P20 Pro) ಈಗಾಗಲೇ ಮಾರುಕಟ್ಟೆಯನ್ನು ಪ್ರವೇಶಿಸಿದೆ! ಎಂದಿನಂತೆ ಫೋಟೋ ತೆಗೆಯುವ ಕೆಲಸಕ್ಕೆ ಇಲ್ಲಿನ ಪ್ರಮುಖ ಪ್ರಾಥಮಿಕ ಕ್ಯಾಮೆರಾ ಬಳಕೆಯಾದರೆ ಎರಡನೆಯ ಕ್ಯಾಮೆರಾ ಜ಼ೂಮ್ ಸೌಲಭ್ಯ ನೀಡುತ್ತದೆ. ಇನ್ನು ಚಿತ್ರವನ್ನು ಕಪ್ಪು-ಬಿಳುಪಿನಲ್ಲಿ ಸೆರೆಹಿಡಿದು ಅದರ ಬಗ್ಗೆ ಅಗತ್ಯ ಮಾಹಿತಿಯನ್ನೆಲ್ಲ ಸಂಗ್ರಹಿಸುವ ಕೆಲಸವನ್ನು ಮೂರನೇ ಕ್ಯಾಮೆರಾ ಮಾಡುತ್ತದಂತೆ.


ಎರಡು-ಮೂರು ಯಾವ ಮೂಲೆಗೆ ಎಂದಿರುವ ಕೆಲ ಸಂಸ್ಥೆಗಳು ಮೊಬೈಲ್ ಕ್ಯಾಮೆರಾಗೆ ಇನ್ನೂ ಹೆಚ್ಚಿನ ಲೆನ್ಸುಗಳನ್ನು ಜೋಡಿಸಲು ಹೊರಟಿವೆ. ಹದಿನಾರು ಲೆನ್ಸುಗಳುಳ್ಳ ವಿಶಿಷ್ಟ-ವಿಚಿತ್ರ ಕ್ಯಾಮೆರಾ (ಮೊಬೈಲ್ ಅಲ್ಲ) ತಯಾರಿಸಿ ಕಳೆದ ವರ್ಷ ಸುದ್ದಿಮಾಡಿದ್ದ 'ಲೈಟ್' ಎಂಬ ಸಂಸ್ಥೆ ಇದೀಗ ಐದರಿಂದ ಒಂಬತ್ತು ಲೆನ್ಸುಗಳುಳ್ಳ ಮೊಬೈಲ್ ಕ್ಯಾಮೆರಾಗಳನ್ನು ರೂಪಿಸಲು ಹೊರಟಿದೆಯಂತೆ. ಕಡಿಮೆ ಬೆಳಕಿನಲ್ಲಿ, ಅತಿದೊಡ್ಡ ಗಾತ್ರದಲ್ಲೆಲ್ಲ (೬೪ ಮೆಗಾಪಿಕ್ಸೆಲ್‌ವರೆಗೆ) ಅತ್ಯುತ್ತಮ ಫೋಟೋ ಕ್ಲಿಕ್ಕಿಸುವುದನ್ನು ಈ ವ್ಯವಸ್ಥೆಯುಳ್ಳ ಮೊಬೈಲುಗಳು ಸಾಧ್ಯವಾಗಿಸಲಿವೆ ಎಂದು ಹೇಳಲಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಆಗ್ಮೆಂಟೆಡ್ ರಿಯಾಲಿಟಿಯಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸುವಲ್ಲೂ ಹೆಚ್ಚಿನ ಸಂಖ್ಯೆಯ ಲೆನ್ಸುಗಳು ನೆರವಾಗುವ ನಿರೀಕ್ಷೆಯಿದೆ.

ಜುಲೈ ೨೫, ೨೦೧೮ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ
badge