ಬುಧವಾರ, ಜುಲೈ 25, 2018

ಸೈಬರ್ ಜಗತ್ತಿನ ಕರಾಳ ಮುಖ

ಉದಯ ಶಂಕರ ಪುರಾಣಿಕ


ಡಿಸೆಂಬರ್ 1984ರಲ್ಲಿ ನಡೆದ ಭೋಪಾಲ ಅನಿಲ ದುರಂತದ ಬಗ್ಗೆ ನೀವು ಕೇಳಿರಬಹುದು. ಆ ದುರಂತದಲ್ಲಿ ಸಾವಿರಾರು ಜನ ಸಾವಿಗೀಡಾದರೆ, ಐದು ಲಕ್ಷಕ್ಕೂ ಹೆಚ್ಚು ಜನ ಅದರ ಪರಿಣಾಮಗಳಿಂದಾಗಿ ಸಂಕಷ್ಟ ಅನುಭವಿಸಿದರು.

ಇಂತಹ ಘೋರ ದುರಂತವೊಂದು ಉಕ್ರೇನ್‍ ದೇಶದಲ್ಲಿ ಕೆಲವು ದಿನಗಳ ಹಿಂದೆ ನಡೆಯಲಿತ್ತು.
ಸುಮಾರು ಹತ್ತು ಲಕ್ಷ ಜನ ವಾಸಿಸುವ ಮಹಾನಗರ Dneperದಿಂದ ಒಂದು ಗಂಟೆ ದೂರದಲ್ಲಿರುವ, ಕ್ಲೋರಿನ್‍ ಉತ್ಪಾದಿಸುವ ಬೃಹತ್‍ ಘಟಕವೊಂದರ ಮೇಲೆ ಸೈಬರ್ ಅಪರಾಧಿಗಳು ದಾಳಿ ಮಾಡಿದರು.

ಈ ಘಟಕದ ನಿಯಂತ್ರಣವನ್ನು ತೆಗೆದುಕೊಂಡು, ಒತ್ತೆ ಹಣಕ್ಕಾಗಿ ಬೇಡಿಕೆ ಇಡುವುದು ಅಥವಾ ಈ ಘಟಕದಲ್ಲಿರುವ ಕ್ಲೋರಿನ್‍ ಅನಿಲ ದಾಸ್ತಾನು ಸ್ಫೋಟಿಸುವುದು ಅವರ ಉದ್ದೇಶವಾಗಿತ್ತು.

ಈ ಬೃಹತ್‍ ಕ್ಲೋರಿನ್‍ ಘಟಕದ ವಿಪತ್ತು ನಿಯಂತ್ರಣ ಕೇಂದ್ರವನ್ನು ವಶಕ್ಕೆ ತಗೆದುಕೊಂಡ ಸೈಬರ್ ಅಪರಾಧಿಗಳು, ಉತ್ಪಾದನಾ ಘಟಕದ ನಿಯಂತ್ರಣ ವ್ಯವಸ್ಥೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವಾಗ, ಅವರ ಪ್ರಯತ್ನವನ್ನು ಸೈಬರ್ ಅಪರಾಧ ತಡೆ ತಜ್ಞರು ವಿಫಲಗೊಳಿಸಿದರು.

VPNfilter ಎಂಬ ಮಾಲ್‍ವೇರ್, ಅರ್ಥಾತ್ ಕುತಂತ್ರಾಂಶವನ್ನು ಈ ಸೈಬರ್‍ ದಾಳಿಯಲ್ಲಿ ಬಳಸಲಾಗಿದೆ ಎಂದು ಹೇಳಲಾಯಿತು. ಆದರೆ, ಈ ಮೊದಲು ಉಕ್ರೇನ್‍ ದೇಶದ ವಿದ್ಯುತ್ ಉತ್ಪಾದನಾ ಘಟಕಗಳು ಮತ್ತು ದೇಶವ್ಯಾಪಿ ವಿದ್ಯುತ್‍ ವಿತರಣಾ ವ್ಯವಸ್ಥೆಯನ್ನು ನಿಯಂತ್ರಣಕ್ಕೆ ತಗೆದುಕೊಳ್ಳಲು ಸೈಬರ್ ಅಪರಾಧಿಗಳು ಬಳಸಿದ Blackenergy ಎಂಬ ಮಾಲ್‍ವೇರ್‍‌ನ ತಂತ್ರಾಂಶವನ್ನು ಕೂಡಾ ಈ ದಾಳಿಯ ಅಂಗವಾಗಿ ಬಳಸಿರುವುದು ಪರಿಶೀಲನೆ ನಡೆಸಿದಾಗ ತಿಳಿದು ಬಂದಿತು. ಈ ಆವೃತ್ತಿಯ ಮಾಲ್‍ವೇರ್‍ ಬಳಸಿದಾಗ ನೆಟ್‌ವರ್ಕ್, ಸ್ವಿಚ್‍ ಮೊದಲಾದ ಉಪಕರಣಗಳು ಮತ್ತೆ ಬಳಸಲಾಗದಂತೆ ಹಾಳಾಗುತ್ತವೆ. ಬೃಹತ್‍ ಉದ್ಯಮವೊಂದರಲ್ಲಿ ಇದ್ದಕ್ಕಿದಂತೆ ಇಂತಹ ಸಾವಿರಾರು ಉಪಕರಣಗಳು ಹಾಳಾದರೆ, ಅದರಿಂದ ಉದ್ಯಮದ ಸುರಕ್ಷತೆಯ ಮೇಲಾಗುವ ಪರಿಣಾಮವನ್ನು ಊಹಿಸಲೂ ಸಾಧ್ಯವಿಲ್ಲ.

ಸೈಬರ್ ಅಪರಾಧಿಗಳು ಬೃಹತ್‍ ಉದ್ಯಮಗಳ ಮೇಲೆ ದಾಳಿ ಮಾಡುವ ಮತ್ತು ವಿಧ್ವಂಸಕ ಕೃತ್ಯಗಳನ್ನು ನಡೆಸುವ ಘಟನೆಗಳು ಈ ಮೊದಲೂ ಆಗಿವೆ.

ನಾವು-ನೀವು ಬಳಸುವ ಮೊಬೈಲ್‍ ಫೋನ್‍ನಿಂದ ಹಿಡಿದು ಬೃಹತ್‍ ಉದ್ಯಮಗಳು, ದೂರವಾಣಿ ವ್ಯವಸ್ಥೆ, ಬ್ಯಾಂಕು, ವಿಮಾ ಸಂಸ್ಥೆ, ಆಸ್ಪತ್ರೆಗಳು, ಸಾರಿಗೆ, ಸರ್ಕಾರಿ ಕಚೇರಿಗಳು, ವಸತಿ ಗೃಹಗಳು, ರಕ್ಷಣಾ ಪಡೆಗಳು, ಹೀಗೆ ಅನೇಕ ಕಡೆ ವಿವಿಧ ಪ್ರಮಾಣದ ಸೈಬರ್ ದಾಳಿಗಳು ನಡೆಯುತ್ತಲೇ ಇರುತ್ತವೆ. ಒಂದು ದಿನಕ್ಕೆ ಎಷ್ಟು ಹೊಸ ಸೈಬರ್ ದಾಳಿಗಳು ನಡೆಯುತ್ತವೆ ಎಂದು ಊಹಿಸಬಲ್ಲಿರಾ?
ಈ ಕುರಿತು ನಿಮ್ಮ ಅನಿಸಿಕೆ - ಅಭಿಪ್ರಾಯಗಳನ್ನು, ನಿಮ್ಮಲ್ಲಿರಬಹುದಾದ ಪ್ರಶ್ನೆಗಳನ್ನು ಕಮೆಂಟ್ಸ್ ವಿಭಾಗದಲ್ಲಿ ಬರೆಯಿರಿ. ಮುಂದಿನ ಬರಹಗಳಲ್ಲಿ ಯಾವ ವಿಷಯಗಳ ಕುರಿತು ತಿಳಿದುಕೊಳ್ಳಲು ಬಯಸುತ್ತೀರಿ ಎನ್ನುವುದನ್ನೂ ತಿಳಿಸಿ.

ಕಾಮೆಂಟ್‌ಗಳಿಲ್ಲ:

badge