ಮಂಗಳವಾರ, ಫೆಬ್ರವರಿ 21, 2012

ಕಂಪ್ಯೂಟರ್ ಲೋಕದ ದುಷ್ಟಕೂಟ

ವೈರಸ್, ವರ್ಮ್, ಟ್ರೋಜನ್, ಬಾಟ್, ಸ್ಪೈವೇರ್ - ಕಂಪ್ಯೂಟರ್ ಪ್ರಪಂಚದ ಕುತಂತ್ರಾಂಶಗಳಿಗೆ ಅದೆಷ್ಟು ಹೆಸರುಗಳು! ಮಾಡುವುದು ಕೆಟ್ಟ ಕೆಲಸವೇ ಆದರೂ ಇವುಗಳಲ್ಲಿ ಪ್ರತಿಯೊಂದೂ ಕೆಲಸಮಾಡುವ ರೀತಿ ವಿಭಿನ್ನವಾದದ್ದು. ಈ ದುಷ್ಟಕೂಟದ ಸಣ್ಣದೊಂದು ಪರಿಚಯ ಇಲ್ಲಿದೆ.

ಟಿ. ಜಿ. ಶ್ರೀನಿಧಿ

ಈಗಂತೂ ಪ್ರತಿಯೊಂದು ಕೆಲಸಕ್ಕೂ ಕಂಪ್ಯೂಟರ್ ಬೇಕು. ಕಂಪ್ಯೂಟರ್‌ನಲ್ಲಿ ಬೇರೆಬೇರೆ ರೀತಿಯ ಕೆಲಸಮಾಡಲು ಬೇರೆಬೇರೆ ತಂತ್ರಾಂಶಗಳು (ಸಾಫ್ಟ್‌ವೇರ್) ಬೇಕು. ನಮ್ಮ ಕೆಲಸದಲ್ಲಿ ತಂತ್ರಾಂಶಗಳಿಂದ ಅದೆಷ್ಟು ಸಹಾಯವಾಗುತ್ತದೋ ಅಷ್ಟೇ ಪ್ರಮಾಣದ ತೊಂದರೆಯೂ ಆಗಬಲ್ಲದು. ಸದುದ್ದೇಶಗಳಿಗಾಗಿ ಬಳಕೆಯಾಗುವ ತಂತ್ರಾಂಶಗಳಂತೆ ಕೆಟ್ಟ ಕೆಲಸಗಳಿಗಾಗಿಯೂ ತಂತ್ರಾಂಶಗಳು ರೂಪಗೊಂಡಿರುವುದು ಇದಕ್ಕೆ ಕಾರಣ.

ಕೆಟ್ಟ ಉದ್ದೇಶದ ತಂತ್ರಾಂಶಗಳ ಹಾವಳಿ ಅಷ್ಟಿಷ್ಟಲ್ಲ. ಕಂಪ್ಯೂಟರುಗಳ ಕಾರ್ಯಾಚರಣೆಗೆ ತೊಂದರೆಮಾಡುವುದು, ಶೇಖರಿಸಿಟ್ಟ ಮಾಹಿತಿಯನ್ನು ಅಳಿಸಿಹಾಕುವುದು, ವೈಯಕ್ತಿಕ ಮಾಹಿತಿಯನ್ನು ಕದ್ದು ದುರ್ಬಳಕೆ ಮಾಡಿಕೊಳ್ಳುವುದು - ಹೀಗೆ ಇಂತಹ ತಂತ್ರಾಂಶಗಳು ಬೇಕಾದಷ್ಟು ಬಗೆಯಲ್ಲಿ ತೊಂದರೆಕೊಡುತ್ತವೆ. ಒಂದಲ್ಲ ಒಂದು ರೀತಿಯಲ್ಲಿ ಬೇರೊಬ್ಬರಿಗೆ ಕೇಡುಬಗೆಯುವುದೇ ಇಂತಹ ತಂತ್ರಾಂಶಗಳ ಉದ್ದೇಶವಾದ್ದರಿಂದ ಅವನ್ನು ಮಲೀಷಿಯಸ್ ಸಾಫ್ಟ್‌ವೇರ್ ಅಥವಾ ಮಾಲ್‌ವೇರ್ ಎಂದು ಕರೆಯುತ್ತಾರೆ. ಕನ್ನಡದಲ್ಲಿ ನಾವು ಅವನ್ನು ಕುತಂತ್ರಾಂಶಗಳೆಂದು ಕರೆಯೋಣ.

ವೈರಸ್, ವರ್ಮ್, ಟ್ರೋಜನ್, ಬಾಟ್, ಸ್ಪೈವೇರ್ ಇವೆಲ್ಲ ಕುತಂತ್ರಾಂಶಗಳಿಗೆ ಉದಾಹರಣೆಗಳು.


ವೈರಸ್
ಬೇರೊಂದು ಕಡತ ಅಥವಾ ತಂತ್ರಾಂಶಕ್ಕೆ ಅಂಟಿಕೊಂಡು ಅದರ ಸಹಾಯದಿಂದಲೇ ಹರಡುವ, ಹಾಗೂ ಹರಡಿದ ಕಂಪ್ಯೂಟರ್‌ಗಳಿಗೆಲ್ಲ ತೊಂದರೆಕೊಡುವ ಕುತಂತ್ರಾಂಶವೇ ವೈರಸ್. ಸಣ್ಣಪುಟ್ಟ ಕಿರಿಕಿರಿ ಉಂಟುಮಾಡುವುದರಿಂದ ಪ್ರಾರಂಭಿಸಿ ಕಂಪ್ಯೂಟರ್ ಕೆಲಸವೇ ಮಾಡದಂತೆ ಮಾಡುವವರೆಗೆ ವೈರಸ್ಸುಗಳು ಅನೇಕಬಗೆಯ ತೊಂದರೆ ಕೊಡಬಲ್ಲವು. ಆದರೆ ವೈರಸ್‌ನಿಂದ ಬಾಧಿತವಾಗಿರುವ ಕಡತ ಅಥವಾ ತಂತ್ರಾಂಶವನ್ನು ನಾವಾಗಿ ತೆರೆಯುವವರೆಗೂ ಅದರಿಂದ ಯಾವುದೇ ತೊಂದರೆ ಇರುವುದಿಲ್ಲ. ಒಂದೊಮ್ಮೆ ಅವನ್ನು ನಾವು ತೆರೆದೆವೆಂದರೆ ಆ ಕಡತವೋ ತಂತ್ರಾಂಶವೋ ತೆರೆದುಕೊಳ್ಳುವುದರ ಜೊತೆಗೆ (ಅಥವಾ ಅದರ ಬದಲಿಗೆ) ವೈರಸ್ ತನ್ನ ಕೈಚಳಕ ತೋರಿಸಿಬಿಡುತ್ತದೆ. ಅಂತಹ ಕಡತ ಅಥವಾ ತಂತ್ರಾಂಶವನ್ನು ಇಮೇಲ್‌ನಲ್ಲೋ ಪೆನ್‌ಡ್ರೈವ್ ಮೂಲಕವೋ ಬೇರೆ ಕಂಪ್ಯೂಟರ್‌ಗೆ ಕಳುಹಿಸಿದಾಗ ಅದರೊಡನೆ ವೈರಸ್ ಕೂಡ ಆ ಕಂಪ್ಯೂಟರನ್ನು ತಲುಪುತ್ತದೆ.

ವರ್ಮ್
ವರ್ಮ್‌ಗಳು ಕುತಂತ್ರಾಂಶಗಳ ಇನ್ನೊಂದು ಬಗೆ. ಇವು ಹರಡಲು ವೈರಸ್ಸುಗಳಂತೆ ಬೇರೆ ಕಡತ ಅಥವಾ ತಂತ್ರಾಂಶದ ನೆರವು ಬೇಡ. ಇವು ಹರಡಲು ಕಂಪ್ಯೂಟರ್‌ನಲ್ಲಿರಬಹುದಾದ ಭದ್ರತಾ ಲೋಪಗಳನ್ನು ಬಳಸಿಕೊಳ್ಳುತ್ತವೆ, ಇಲ್ಲವೇ ಬಳಕೆದಾರರನ್ನು ಮೋಸಗೊಳಿಸಿ ಅವರ ಸಹಾಯದಿಂದಲೇ ಹರಡುತ್ತವೆ (ಇದಕ್ಕೆ ಸೋಶಿಯಲ್ ಇಂಜಿನಿಯರಿಂಗ್ ಎಂದು ಹೆಸರು). ಯಾವುದೋ ಅಶ್ಲೀಲ ವೀಡಿಯೋ ತೋರಿಸುತ್ತೇನೆಂದು ಹೇಳುವ ಲಿಂಕುಗಳು ನಮ್ಮ ಫೇಸ್‌ಬುಕ್ ಗೆಳೆಯರ ಹೆಸರಿನಿಂದಲೇ ಬಂದುಬಿಟ್ಟಿರುತ್ತವಲ್ಲ, ಅವರೆಲ್ಲ ಇದೇ ಸೋಶಿಯಲ್ ಇಂಜಿನಿಯರಿಂಗ್ ತಂತ್ರದ ಬಲಿಪಶುಗಳಾಗಿರುತ್ತಾರೆ. ಬ್ರೌಸ್ ಮಾಡುತ್ತಿರುವಾಗ "ನಿಮ್ಮ ಕಂಪ್ಯೂಟರ್‌ಗೆ ವೈರಸ್ ಬಂದಿದೆ" ಎಂದೋ "ನಿಮಗೆ ಬಹುಮಾನ ಬಂದಿದೆ" ಎಂದೋ ಹೇಳುವ ಜಾಹೀರಾತುಗಳು ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುತ್ತವಲ್ಲ, ಅವುಗಳ ಮೇಲೆ ಕ್ಲಿಕ್ಕಿಸುವುದರಿಂದಲೂ ನಿಮ್ಮ ಕಂಪ್ಯೂಟರ್ ವರ್ಮಾಘಾತಕ್ಕೆ ತುತ್ತಾಗಬಹುದು.

ಟ್ರೋಜನ್
ಟ್ರೋಜನ್ ಯುದ್ಧದಲ್ಲಿ ಬಸವಳಿದಿದ್ದ ಗ್ರೀಕರು ದೊಡ್ಡದೊಂದು ಮರದ ಕುದುರೆಯ ಸಹಾಯದಿಂದ ಟ್ರಾಯ್ ನಗರವನ್ನು ಗೆದ್ದರು ಎನ್ನುವುದು ಇತಿಹಾಸ. ನೋಡಲು ನಿರುಪದ್ರವಿಯಾಗಿ ಕಾಣುತ್ತಿದ್ದ ಆ ಕುದುರೆಯೊಳಗೆ ('ಟ್ರೋಜನ್ ಹಾರ್ಸ್') ಸೈನಿಕರು ಅವಿತುಕೊಂಡು ಟ್ರಾಯ್ ನಗರದವರನ್ನು ಮೋಸಗೊಳಿಸಿದ್ದರಂತೆ. ಇದೇ ರೀತಿ ನಿರಪಾಯಕಾರಿ ತಂತ್ರಾಂಶದ ಸೋಗಿನಲ್ಲಿ ಬರುವ ಕುತಂತ್ರಾಂಶಗಳು ಕಂಪ್ಯೂಟರ್ ಪ್ರಪಂಚದಲ್ಲಿವೆ. ಹೀಗಾಗಿಯೇ ಅವನ್ನು ಟ್ರೋಜನ್ ಹಾರ್ಸ್ ಅಥವಾ 'ಟ್ರೋಜನ್'ಗಳೆಂದು ಕರೆಯುತ್ತಾರೆ. ಬಳಕೆದಾರರು ಸಾಮಾನ್ಯವಾಗಿ ಟ್ರೋಜನ್ ಬಲೆಗೆ ಬೀಳುವುದು ಖೊಟ್ಟಿ ಜಾಹೀರಾತುಗಳ ಮೇಲೆ ಕ್ಲಿಕ್ಕಿಸುವ ಅಥವಾ ಸಂಶಯಾಸ್ಪದ ಇಮೇಲ್ ಅಟ್ಯಾಚ್‌ಮೆಂಟ್‌ಗಳನ್ನು ತೆರೆಯುವ ಮೂಲಕ. ಯಾವುದೋ ಉಪಯುಕ್ತ ತಂತ್ರಾಂಶವನ್ನೋ ಕಡತವನ್ನೋ ಡೌನ್‌ಲೋಡ್ ಮಾಡುತ್ತಿದ್ದೇವೆ ಎಂದುಕೊಳ್ಳುವ ಅವರು ತಮಗೆ ತಿಳಿಯದಂತೆಯೇ ಕುತಂತ್ರಾಂಶವನ್ನು ಇನ್‌ಸ್ಟಾಲ್ ಮಾಡಿಕೊಳ್ಳುತ್ತಾರೆ.

ಸ್ಪೈವೇರ್
ಬಳಕೆದಾರರಿಗೆ ಗೊತ್ತಾಗದಂತೆ ಅವರ ಕಂಪ್ಯೂಟರ್‌ನಲ್ಲಿ ಅವಿತಿದ್ದು ಅವರ ಚಟುವಟಿಕೆಗಳನ್ನು ಗಮನಿಸುವ ಕುತಂತ್ರಾಂಶಗಳಿಗೆ ಸ್ಪೈವೇರ್ ಅಥವಾ ಗೂಢಚಾರಿ ತಂತ್ರಾಂಶಗಳೆಂದು ಹೆಸರು. ಬಳಕೆದಾರರು ಯಾವ ತಾಣಗಳಿಗೆ ಭೇಟಿಕೊಡುತ್ತಾರೆ ಎನ್ನುವ ಬಗೆಗೆ ಮಾಹಿತಿ ಸಂಗ್ರಹಿಸುವುದು, ಅವರು ಟೈಪ್ ಮಾಡಿದ್ದನ್ನೆಲ್ಲ ಒಂದೆಡೆ ದಾಖಲಿಸಿಕೊಂಡು ಅದರಲ್ಲಿರಬಹುದಾದ ಖಾಸಗಿ ಮಾಹಿತಿಯನ್ನು (ಉದಾ: ಬ್ಯಾಂಕ್ ಖಾತೆ ಅಥವಾ ಕ್ರೆಡಿಟ್ ಕಾರ್ಡ್ ವಿವರ) ದುರುಪಯೋಗಪಡಿಸಿಕೊಳ್ಳುವುದು, ಬ್ರೌಸರ್ ತಂತ್ರಾಂಶದ ಆಯ್ಕೆಗಳನ್ನು ಬದಲಿಸುವುದು - ಹೀಗೆ ಸ್ಪೈವೇರ್ ಹಾವಳಿ ಅನೇಕ ಬಗೆಯದಾಗಿರುತ್ತದೆ. ಜಾಹೀರಾತುಗಳನ್ನು ಪ್ರದರ್ಶಿಸುವ ಕೆಲ ತಂತ್ರಾಂಶಗಳೂ (ಆಡ್‌ವೇರ್) ಗೂಢಚರ್ಯೆ ಮಾಡುತ್ತವೆ. ಸ್ಪೈವೇರ್ ಹರಡುವಲ್ಲಿ ಟ್ರೋಜನ್‌ಗಳ ಪಾತ್ರ ಮಹತ್ವದ್ದು. ಇಂಟರ್‌ನೆಟ್ ಬ್ರೌಸಿಂಗ್ ವೇಗ ಹೆಚ್ಚಿಸುತ್ತೇವೆಂದೋ ಕುತಂತ್ರಾಂಶಗಳಿಂದ ರಕ್ಷಿಸುತ್ತೇವೆಂದೋ ಹೇಳಿಕೊಳ್ಳುವ ತಂತ್ರಾಂಶಗಳು ಸ್ವತಃ ಸ್ಪೈವೇರ್‌ಗಳಾಗಿರುವ ಸಾಧ್ಯತೆ ಇರುತ್ತದೆ.

ಬಾಟ್
ಯಾವುದೋ ಕೆಟ್ಟ ಕೆಲಸವನ್ನು ಸ್ವಯಂಚಾಲಿತವಾಗಿ ಮಾಡುವ 'ಬಾಟ್'ಗಳು ಕುತಂತ್ರಾಂಶಗಳ ಇನ್ನೊಂದು ವಿಧ. ಬಾಟ್ ಎನ್ನುವುದು ರೋಬಾಟ್ ಎಂಬ ಹೆಸರಿನ ಹ್ರಸ್ವರೂಪ. ಸ್ಪಾಮ್ ಸಂದೇಶಗಳನ್ನು ಕಳುಹಿಸಲು ಅಂತರಜಾಲ ತಾಣಗಳಿಂದ ಇಮೇಲ್ ವಿಳಾಸಗಳನ್ನು ಸಂಗ್ರಹಿಸುವುದು, ಬಳಕೆದಾರರ ಗಣಕಕ್ಕೆ ಅನಾವಶ್ಯಕ ತಂತ್ರಾಂಶಗಳನ್ನು ಡೌನ್‌ಲೋಡ್ ಮಾಡುವುದು, ಬ್ಲಾಗ್ ಪುಟಗಳಿಗೆ ದುರುದ್ದೇಶಪೂರಿತ ಲಿಂಕುಗಳಿರುವ ಕಮೆಂಟ್ ಸೇರಿಸುವುದು, ಇತರ ಕುತಂತ್ರಾಂಶಗಳನ್ನು ಹರಡುವುದು - ಮುಂತಾದ ಕೆಲಸಗಳಿಗೆ ದುರುದ್ದೇಶಪೂರಿತ ಬಾಟ್‌ಗಳು ಬಳಕೆಯಾಗುತ್ತವೆ. ಚಾಟಿಂಗ್ ಸೇವೆಗಳಲ್ಲೂ ಬಾಟ್‌ಗಳ ಹಾವಳಿ ಇದೆ. ಹುಡುಗಿಯ ಹೆಸರಲ್ಲಿ ಹುಡುಗರಿಗೆ, ಹುಡುಗರ ಹೆಸರಲ್ಲಿ ಹುಡುಗಿಯರಿಗೆ ಸ್ವಯಂಚಾಲಿತವಾಗಿ ಸಂದೇಶಗಳನ್ನು ಕಳುಹಿಸುತ್ತ ಅದಕ್ಕೆ ಪ್ರತಿಕ್ರಿಯೆ ನೀಡುವವರ ಖಾಸಗಿ ಮಾಹಿತಿಯನ್ನು ಕದಿಯಲು ಯತ್ನಿಸುವುದು ಈ ಬಾಟ್‌ಗಳ ಕೆಲಸ.

ಒಳ್ಳೆ ಬಾಟ್‌ಗಳೂ ಇವೆ!
ಎಲ್ಲ ಬಾಟ್‌ಗಳೂ ಕುತಂತ್ರಾಂಶಗಳೇನಲ್ಲ. ಅವುಗಳ ನೆರವಿನಿಂದ ಕಂಪ್ಯೂಟರ್ ಪ್ರಪಂಚದಲ್ಲಿ ಬೇಕಾದಷ್ಟು ಒಳ್ಳೆಯ ಕೆಲಸಗಳೂ ಆಗುತ್ತವೆ. ಬೇರೆಬೇರೆ ತಾಣಗಳಿಂದ ಮಾಹಿತಿ ಸಂಗ್ರಹಿಸಲು, ಚಾಟ್ ಮೂಲಕ ಗ್ರಾಹಕರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಅಥವಾ ಸ್ವಯಂಚಾಲಿತವಾಗಿ ಬೇರಾವುದೇ ಬಗೆಯ ಮಾಹಿತಿ ಸಂಸ್ಕರಣೆ ಮಾಡಲು ಬಾಟ್‌ಗಳು ಬಳಕೆಯಾಗುತ್ತವೆ.

ಇಷ್ಟೇ ಅಲ್ಲ!
ನಾವು ಈಗಾಗಲೇ ಪರಿಚಯಿಸಿಕೊಂಡವುಗಳ ಜೊತೆಗೆ ಇನ್ನೂ ಹಲವು ರೀತಿಯ ಕುತಂತ್ರಾಂಶಗಳಿವೆ. ಕಂಪ್ಯೂಟರ್‌ಗೆ ತಗುಲಿಕೊಂಡಿರುವ ಕುತಂತ್ರಾಂಶಗಳು ಪತ್ತೆಯಾಗದಂತೆ ಮುಚ್ಚಿಡುವ ಕ್ರಮವಿಧಿಗಳೂ ಇವೆ, ಅವನ್ನು ರೂಟ್‌ಕಿಟ್‌ಗಳೆಂದು ಕರೆಯುತ್ತಾರೆ. ಅಂತೆಯೇ ಕಂಪ್ಯೂಟರ್‌ನ ಸುರಕ್ಷತಾ ವ್ಯವಸ್ಥೆಯ ಕಾವಲನ್ನು ತಪ್ಪಿಸಿ ಒಳನುಸುಳಲು ಸಹಾಯಮಾಡುವ 'ಬ್ಯಾಕ್‌ಡೋರ್' ವಿಧಾನಗಳಿವೆ; ಕುತಂತ್ರಾಂಶಗಳ ನೆರವಿನಿಂದ ಕಡತಗಳನ್ನು ತೆರೆಯಲಾಗದಂತೆ ಮಾಡಿ ಅವನ್ನು ಸರಿಪಡಿಸಿಕೊಡಲು ದುಡ್ಡುಕೇಳುವ ಬ್ಲಾಕ್‌ಮೇಲರ್‌ಗಳೂ ಇದ್ದಾರೆ!

ಒಟ್ಟಿನಲ್ಲಿ ಹೇಳುವುದಾದರೆ ಕಂಪ್ಯೂಟರ್ ಪ್ರಪಂಚದ ರೋಚಕ ಮುಖದ ಇನ್ನೊಂದು ಬದಿಯಲ್ಲಿ ಕರಾಳವಾದ ಮುಖವೂ ಇದೆ. ವೈರಸ್ ವಿರೋಧಿ ತಂತ್ರಾಂಶಗಳನ್ನು ಬಳಸುವುದರಿಂದ (ಜನವರಿ ೧೦, ೨೦೧೨ರ ವಿಜ್ಞಾಪನೆ ನೋಡಿ) ಹಾಗೂ ಕಂಪ್ಯೂಟರಿನಲ್ಲಿ ಕೆಲಸಮಾಡುವಾಗ ಸೂಕ್ತ ಜಾಗರೂಕತೆ ವಹಿಸುವುದರಿಂದ ಮಾತ್ರವೇ ಈ ದುಷ್ಟಕೂಟದಿಂದ ದೂರವಿರುವುದು ಸಾಧ್ಯ.

ಫೆಬ್ರುವರಿ ೨೧, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ
badge