ಸೋಮವಾರ, ಸೆಪ್ಟೆಂಬರ್ 6, 2010

ಕಂಬಳಿಹುಳದ ಕಡಿತ: ಉರಿಗೆ ರಿಯಾಯ್ತಿ ಇಲ್ಲ!

ಬೇಳೂರು ಸುದರ್ಶನ

ಮೊನ್ನೆ ಯಾರನ್ನೋ ಭೇಟಿಯಾಗಲೆಂದು ಸರಸರ ಅಂಗಿ ಎಳೆದುಕೊಂಡು ಹೊರಬಂದೆ. ಸ್ವಲ್ಪ ದೂರ ಹೋಗುವಷ್ಟರಲ್ಲೇ ಬಲ ತೋಳಿನಲ್ಲಿ ಏನೋ ಮೃದುವಾದ ಹುಳ ಇದ್ದ ಹಾಗೆ ಅನ್ನಿಸಿ ಹೊರಗಿನಿಂದಲೇ ಮುಟ್ಟಿ ನೋಡಿದೆ.

ಯಾರೋ  ಜೇಮ್ಸ್‌ಬಾಂಡ್ ಬಳಸುವ ಅತಿಸೂಕ್ಷ್ಮ ಸೂಜಿಯನ್ನು ಚುಚ್ಚಿದ ಹಾಗೆ ಮೈಯೆಲ್ಲ ಜುಮ್ಮೆಂದಿತು. ತಕ್ಷಣ ದೇಹ ಸ್ವಯಂಚಾಲಿತವಾಗಿ, ನನ್ನನ್ನು ಕೇಳದೇ ಸ್ಪಂದಿಸಿತು. ನನ್ನ ಕೈಯಿಂದ ಕ್ಷಣಮಾತ್ರದಲ್ಲಿ ಆ ಹುಳವನ್ನು ಹಾಗೇ ಒತ್ತಿಬಿಟ್ಟೆ. ಆಮೇಲೆ ಅದನ್ನು ಕೊಡವಿದೆ. ಒಂದು ಕರಿಮುದ್ದೆಯಂಥ ಮೃತದೇಹ ರಸ್ತೆಯಲ್ಲಿ ಬಿದ್ದಿತ್ತು. ಅದನ್ನು ನೋಡೋದೇನು? ಅಷ್ಟುಹೊತ್ತಿಗೆ ನನ್ನ ತೋಳಿನ ಮೇಲ್ಭಾಗದಲ್ಲಿ ಸಾವಿರಾರು ಸೂಜಿಗಳು ಚುಚ್ಚಿದಂತಾಯಿತು. ಸರಸರನೆ ಮೈ ಕೆಂಪೇರಿತು. ಉಜ್ಜಿದ ಜಾಗದಲ್ಲಿ ಧಡಸಲುಗಳು ಮೇಲೆದ್ದವು. ಬಿಸಿ ಕಾವಲಿಯಿಂದ ಮೈಯನ್ನು ಉಜ್ಜಿಕೊಂಡಂತೆ ಉರಿ. ಜೊತೆಗೇ ವಿಪರೀತ ಎನ್ನಿಸುವಷ್ಟು ನೋವು.

ಒಂದು ಕಂಬಳಿ  ಹುಳ ನನ್ನನ್ನು ಇಷ್ಟೆಲ್ಲ ಗಾಸಿ  ಮಾಡಿ ಸತ್ತಿತ್ತು. ಅದೇನಾದರೂ ನನ್ನ  ಹ್ಯಾಂಗರಿಗೆ ನೇತಾಡಿಕೊಂಡು ಬಂದು, ಅಂಗಿಯ ಒಳಗೆ  ತೂರಿಕೊಳ್ಳದಿದ್ದರೆ.....

ಒಂದು ಸುಂದರ  ಚಿಟ್ಟೆಯಾಗಿ ಲಾಲ್‌ಬಾಗಿನಲ್ಲಿ ಹಾರಾಡುತ್ತಿತ್ತು. ಅಲ್ಲಿ ಅಕಸ್ಮಾತ್ ಕವಿಹೃದಯದವರು ವಾಕಿಂಗ್ ಹೋಗಿದ್ದರೆ ಆಹಾ, ಎಂಥ ಸುಂದರ ಚಿಟ್ಟೆ ಎಂದು ಒಂದು ಹಾಡನ್ನೇ ಬರೆಯುತ್ತಿದ್ದರು. ಪ್ರೇಮಿಗಳಾಗಿದ್ದರೆ, ಅರೆ, ಎಂಥ ಛಂದದ ಚಿಟ್ಟೆ, ಪ್ರೀತಿಯ ಸಂಕೇತ ಎಂದು ಮುದಗೊಳ್ಳುತ್ತಿದ್ದರು. ಸ್ವಾತಂತ್ರ್ಯೋತ್ಸದ ಪುಷ್ಟ ಪ್ರದರ್ಶನದಲ್ಲಿ ಹೂವಿಂದ ಹೂವಿಗೆ ಹಾರುವಂಥ ಚಿಟ್ಟೆಯಾಗಲು ಬಣ್ಣದ ರೆಕ್ಕೆಯನ್ನು ದಕ್ಕಿಸಿಕೊಳ್ಳಲಿದ್ದ ಆ ಕಂಬಳಿ ಹುಳ, ಈ ನರಮನುಷ್ಯನ ಕ್ರೌರ್ಯಕ್ಕೆ ಬಲಿಯಾಗಿ ರಸ್ತೆಯಲ್ಲಿ ನೆಣವಾಗಿ ಬಿದ್ದಿತ್ತು.

ಅದನ್ನು  ಮರೆಯೋಣ ಎಂದುಕೊಂಡರೆ ಸಾಧ್ಯವೆ? ಬರೋಬ್ಬರಿ ಒಂದು ವಾರ ನನ್ನ ತೋಳು ಉರಿಯಿಂದ  ನುಲಿಯಿತು; ನೋವಿನಿಂದ ನರಳಿತು. ಸುಂದರ  ಚಿಟ್ಟೆಯ ಬಾಲ್ಯಾವತಾರ ನನ್ನನ್ನು ಇಷ್ಟೆಲ್ಲ ಕಂಗೆಡಿಸಬಹುದೆ ಎಂದು ಮಾಹಿತಿಗಾಗಿ ಹುಡುಕಾಡಿದೆ. ನನ್ನ ನೋವನ್ನೂ ಮರೆಸುವ ಅಚ್ಚರಿಯ ಸಂಗತಿಗಳು ಸಿಕ್ಕಿದವು.

೭೦೦ಕ್ಕೂ ಕಡಿಮೆ  ಮಾಂಸಖಂಡಗಳಿರುವ ನನ್ನಂಥ ಮನುಷ್ಯನಿಗೆ ಇಷ್ಟೆಲ್ಲ ಕಿರೀಕ್ ಮಾಡಿದ ಆ ಕಂಬಳಿ ಹುಳದಲ್ಲಿ ೨೦೦೦ ಮಾಂಸಖಂಡಗಳು ಇರುತ್ತವಂತೆ! ನನಗೆ ಯಮ ಉರಿ ಕೊಟ್ಟ ಕಂಬಳಿ ಹುಳದಂಥ ಇಪ್ಪತ್ತು ಬಗೆಯ ಅಪಾಯಕಾರಿ ಕಂಬಳಿ ಹುಳಗಳು (ಚುಚ್ಚುವ ವಿಷಯದಲ್ಲಿ ಅಪಾಯಕಾರಿ, ಉಳಿದಂತೆ, ಈ ಅಪಾಯ ಅನ್ನೋದೆಲ್ಲ ಮನುಷ್ಯನ ದೃಷ್ಟಿಯಿಂದ ಬರೆದಿರೋ ಭಾವನೆಗಳು ಅಷ್ಟೆ) ಇವೆಯಂತೆ.

ಇಂಥ ಕಂಬಳಿ  ಹುಳ ಕಚ್ಚಿದರೆ ಅಥವಾ ಮೈಯನ್ನು ಚುಚ್ಚಿದರೆ ನನಗಾದ ಹಾಗೆ ಉರಿಯಾಗುವುದು ತೀರಾ ಅಲ್ಪ ಪರಿಣಾಮ. ಹಲವು ಪ್ರಕರಣಗಳಲ್ಲಿ ನೋವಿನ ಜೊತೆಗೆ ಊತವೂ ಆಗುತ್ತದೆ. ಚರ್ಮ ಮೃದುವಾಗಿದ್ದರೆ ಮಾತ್ರ ಈ ಉರಿ, ನೋವು, ಊತ ಎಲ್ಲವೂ ಹೆಚ್ಚಾಗುತ್ತದೆ. ಉಸಿರಾಡಲೂ ತೊಂದರೆಯಾಗುವಷ್ಟು ಪ್ರಭಾವ ಬೀರಬಲ್ಲ ಕಂಬಳಿ ಹುಳಗಳೂ ಇವೆ. ಅಕಸ್ಮಾತ್ ಕಂಬಳಿ ಹುಳಗಳು ಕಣ್ಣಿಗೆ ತಾಗಿದರೆ ನೀವು ತಕ್ಷಣ ಆಸ್ಪತ್ರೆಗೆ ಓಡಬೇಕು. ಇಲ್ಲಾಂದ್ರೆ ನಿಮ್ಮ ಕಣ್ಣಿನ ಕಾರ್ನಿಯಾಗೇ ಅಪಾಯವಿದೆ. ಈ ಕಂಬಳಿ ಹುಳಗಳ ಕೂದಲೇನಾದರೂ ಶ್ವಾಸಕೋಶಕ್ಕೆ ಸೇರಿದರೆ, ಉಸಿರಾಟಕ್ಕೂ ತೊಂದರೆ.

ಕಂಬಳಿಹುಳದ  ಮೈಯೆಲ್ಲ ಇರುವ ಇಂಥ ಮೊನಚು ಕೂದಲನ್ನು ಹೈಪೋಡರ್ಮಿಕ್ ನೀಡಲ್, ಅರ್ಥಾತ್ ಅತಿಸೂಕ್ಷ್ಮ ಸೂಜಿ ಎಂದೇ ಕರೆಯುತ್ತಾರೆ. ಇವು ಬರೀ ಕೂದಲಲ್ಲ. ವಿಷವನ್ನೇ ನಿಮ್ಮ ದೇಹಕ್ಕೆ ನುಗ್ಗಿಸುವ ವಿಷಪದಾರ್ಥವನ್ನು ದಾಸ್ತಾನು ಹೊಂದಿರುವ ಕೊಳವೆಗಳು; ಸೂಕ್ಷ್ಮಾಕಾರದ ಫಿರಂಗಿಗಳು ಎಂದರೂ ತಪ್ಪಿಲ್ಲ.

ಆಮೇಲೆ ಕಂಬಳಿ  ಹುಳಗಳು ತಾವಾಗೇ ಕಚ್ಚುವುದಿಲ್ಲ. ತಣ್ಣಗೆ ತಮಗೆ ಬಏಕಾದ ಗಿಡ, ಮರ, ಎಲೆ, ಹೂವುಗಳನ್ನು ತಿಂದುಕೊಂಡು ಹಾಯಾಗಿರುತ್ತವೆ. ಚಳಿಗಾಲ, ತೇವದ ವಾತಾವರಣದಲ್ಲಿ ಎಲ್ಲೆಲ್ಲೋ ಓಡಾಡುತ್ತ ಉಡುಗೆ-ತೊಡುಗೆಗಳನ್ನು ಸೇರಿಕೊಳ್ಳುವುದೂ ಇದೆ. ಅದನ್ನು ನಾವು ಉಜ್ಜಿದರೇ ಅಪಾಯವೇ ವಿನಃ, ಅವು ಚೇಳುಗಳ ಹಾಗೆ ನಮ್ಮನ್ನು ಕಚ್ಚಲೆಂದು ಬರುವುದಿಲ್ಲ.

ಹಾಗಾದರೆ ಕಂಬಳಿಹುಳ ಚುಚ್ಚಿ ಉರಿಯಾದರೆ ಏನು ಮಾಡಬೇಕು?

ಕಂಬಳಿಹುಳದ  ಕೂದಲುಗಳು ಚರ್ಮಕ್ಕೆ ಸಿಕ್ಕಿಕೊಂಡಿದ್ದರೆ:  ವೈದ್ಯಕೀಯ ಚಿಕಿತ್ಸೆಯಲ್ಲಿ ಬಳಸುವ ಟೇಪನ್ನು ಹಚ್ಚಿ ತೆಗೆಯಿರಿ. ಟೇಪಿನೊಂದಿಗೆ ಕೂದಲೂ ಹೊರಬರುತ್ತದೆ. ಉರಿಬಿದ್ದ ಜಾಗಕ್ಕೆ ಅಲೋವೀರಾ ಹಚ್ಚಿದರೆ ಕೊಂಚ ಸಮಾಧಾನವಾಗುತ್ತದೆ.

ಕಂಬಳಿಹುಳ  ಚುಚ್ಚಿದ ಜಾಗವನ್ನು ಸ್ನಾನದ ಬ್ರಶ್ಶಿನಿಂದ  ಉಜ್ಜಿದರೆ ಮತ್ತೆ ಅದೇ ನೋವು ಮರುಕಳಿಸುತ್ತದೆ.  ನಾನು ಯಾವುದೋ ಬಾತ್‌ರೂಮ್ ಹಾಡು ಗುನುಗುತ್ತ ಹೀಗೆ ಉಜ್ಜಿಕೊಂಡು ಮತ್ತೆ  ಮತ್ತೆ ಅಯ್ಯೋ ಎಂದು ಮೌನವಾಗಿ ಕಿರುಚಿದ್ದೇನೆ. ಆದ್ದರಿಂದ ಉರಿ ಇರುವ ಜಾಗವನ್ನು ಉಜ್ಜಬೇಡಿ; ಮುಟ್ಟಲೂ ಬೇಡಿ. ಮುಖ್ಯವಾಗಿ ಭುಜ ತಟ್ಟಿ ಮಾತನಾಡಿಸುವ ಸ್ನೇಹಿತರಿಂದ ದೂರ ಇರಿ. ಅವರಿಗೆ ನಿಮ್ಮ ಭುಜದಲ್ಲಿ ಇಂಥ ಉರಿ ಇದೆ ಎಂಬುದು ಮರೆತೇಹೋಗಿ ಮತ್ತೆ ಮತ್ತೆ ನಿಮ್ಮ ಭುಜ ತಟ್ಟುತ್ತಾರೆ. ಅದರಿಂದ ನಿಮಗೆ ನಗುನಗುತ್ತ ಮಾತನಾಡಲು ಆಗುವುದಿಲ್ಲ ಎಂಬುದನ್ನು ಗಮನದಲ್ಲಿಡಿ.

(ಈ ಥರ ಕಚ್ಚುವ / ಉರಿಯೂತ ಉಂಟು ಮಾಡುವ ಕಂಬಳಿ ಹುಳಗಳ ಕೆಲವೇ ಬಗೆಗಳನ್ನು ತಿಳಿಯಲು ಈ ಕೊಂಡಿಯನ್ನು ಹುಷಾರಾಗಿ, ಮೈಯೆಲ್ಲ ಕಣ್ಣಾಗಿಸಿಕೊಂಡು ಕ್ಲಿಕ್ ಮಾಡಿ!)

ಮಿತ್ರಮಾಧ್ಯಮದಲ್ಲಿ ಈ ಹಿಂದೆ ಪ್ರಕಟವಾದ ಲೇಖನ
badge