ಗುರುವಾರ, ಸೆಪ್ಟೆಂಬರ್ 23, 2010

ಆಟವಾಡಿ, ಅನ್ನ ನೀಡಿ!

ಟಿ ಜಿ ಶ್ರೀನಿಧಿ

ಫ್ರೀರೈಸ್ ತಾಣ ತಲುಪಲು ಚಿತ್ರದ ಮೇಲೆ ಕ್ಲಿಕ್ಕಿಸಿ
ಗಣಕದ ಮುಂದೆ ಕುಳಿತು ಆಟವಾಡುವುದು ಅತ್ಯಂತ ವ್ಯಾಪಕವಾದ ಹವ್ಯಾಸಗಳಲ್ಲೊಂದು. ಹವ್ಯಾಸವೇನು, ಅನೇಕರಿಗೆ ಇದೊಂದು ಚಟ ಅಂತಲೇ ಹೇಳಬಹುದು. ಸದಾಕಾಲವೂ ಒಂದಿಲ್ಲೊಂದು ಆಟ ಆಡಿಕೊಂಡು ಗಣಕದ ಮುಂದೆ ಕುಳಿತಿರುವವರೂ ಇಲ್ಲದಿಲ್ಲ.

ಈಚೆಗೆ ಬಹಳ ಸುದ್ದಿಮಾಡಿದ ಇಂಥ ಆಟಗಳಲ್ಲಿ ಫಾರ್ಮ್‌ವಿಲೆ ಪ್ರಮುಖವಾದದ್ದು. ಫೇಸ್‌ಬುಕ್ ಜಾಲತಾಣದಲ್ಲಿ ಲಭ್ಯವಿರುವ ಈ ಆಟ ಆಡುವವರು ಗಣಕದಲ್ಲೇ ಉತ್ತು ಬಿತ್ತು ಬೆಳೆತೆಗೆಯುವುದು ಸಾಧ್ಯ. ಪರಿಚಯವಾದ ಒಂದು-ಒಂದೂವರೆ ವರ್ಷಗಳ ಅವಧಿಯಲ್ಲೇ ಆರು ಕೋಟಿಗೂ ಹೆಚ್ಚು ಜನಕ್ಕೆ 'ಫಾರ್ಮಿಂಗ್' ಹುಚ್ಚು ಹತ್ತಿಸಿದ ಹಿರಿಮೆ ಈ ಆಟದ್ದು.

ಗಣಕದಲ್ಲಿ ಮಾತ್ರ ಕಾಣಿಸುವ ಬತ್ತವನ್ನು ಮೌಸ್ ಬಳಸಿ ನಾಟಿಮಾಡಿ ಬೆಳೆತೆಗೆಯುವ ಫಾರ್ಮ್‌ವಿಲೆ ಆಟಗಾರರ ವರ್ಚುಯಲ್ ಸಂಭ್ರಮದ ನಡುವೆ ಇಲ್ಲಿ ಇನ್ನೂ ಒಂದು ಆನ್‌ಲೈನ್ ಆಟ ಹೆಚ್ಚಿನ ಪ್ರಚಾರವಿಲ್ಲದೆ ಕುಳಿತಿದೆ, ಹಾಗೂ ಅದು ಹಸಿದ ಹೊಟ್ಟೆಗಳಿಗೆ ನಿಜಕ್ಕೂ ಅನ್ನ ನೀಡುತ್ತದೆ ಎಂದರೆ ನಂಬುತ್ತೀರಾ?

ಖಂಡಿತಾ ನಂಬಲೇ ಬೇಕು. 'ಫ್ರೀ ರೈಸ್' ಎಂಬ ಹೆಸರಿನ ಈ ಆಟ www.freerice.com ಜಾಲತಾಣದಲ್ಲಿ ಲಭ್ಯವಿದೆ. ಇದು ತುಂಬಾ ಸುಲಭ - ಕಲೆ, ಭಾಷೆ, ರಸಾಯನಶಾಸ್ತ್ರ, ಭೂಗೋಳ, ಗಣಿತ ಮುಂತಾದವುಗಳಲ್ಲಿ ಯಾವುದಾದರೂ ಒಂದು ವಿಷಯ ಆಯ್ದುಕೊಂಡು ಆ ವಿಷಯಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಉತ್ತರಿಸುತ್ತ ಹೋದರಾಯಿತು; ಸಾಮಾನ್ಯಜ್ಞಾನ ಹೆಚ್ಚಿಸಿಕೊಳ್ಳುವ ಜೊತೆಗೆ ಹಸಿದ ಹೊಟ್ಟೆಗೆ ಅನ್ನನೀಡಿದ ಪುಣ್ಯವೂ ನಿಮಗೆ ದೊರಕುತ್ತದೆ.

ಅದು ಹೇಗೆ ಅಂದಿರಾ? ಈ ಆಟದಲ್ಲಿ ನೀವು ನೀಡುವ ಪ್ರತಿಯೊಂದು ಸರಿಯುತ್ತರಕ್ಕೂ ಹತ್ತು ಕಾಳು ಅಕ್ಕಿ ಬಹುಮಾನ. ನೀವು ಎಷ್ಟು ಕಾಳು ಅಕ್ಕಿ ಗೆಲ್ಲುತ್ತೀರೋ ಅಷ್ಟು ಅಕ್ಕಿಯನ್ನು ವಿಶ್ವದ ವಿವಿಧೆಡೆಗಳಲ್ಲಿ ಆಹಾರದ ಕೊರತೆಯಿಂದ ಬಳಲುತ್ತಿರುವ ಜನತೆಗೆ ಕೊಡುಗೆಯಾಗಿ ನೀಡಲಾಗುತ್ತದೆ.

ಪ್ರತಿಯೊಂದು ಪ್ರಶ್ನೆಯ ಕೆಳಗೂ ಪ್ರದರ್ಶಿಸಲಾಗುವ ಜಾಹೀರಾತಿನಿಂದ ಬರುವ ಆದಾಯದಿಂದ ಈ ಅಕ್ಕಿಯನ್ನು ಕೊಳ್ಳಲಾಗುತ್ತದೆ. ಆಟವಾಡುವ ಜೊತೆಗೆ ಹಣದ ರೂಪದ ದೇಣಿಗೆಯನ್ನೂ ಕೊಡುತ್ತೇವೆ ಎನ್ನುವವರಿಗೂ ಸ್ವಾಗತವಿದೆ.

ಈ ವಿಶಿಷ್ಟ ಕಲ್ಪನೆಗೆ ಜೀವಕೊಟ್ಟವನು ಜಾನ್ ಬ್ರೀನ್ ಎಂಬ ವ್ಯಕ್ತಿ, ೨೦೦೭ರಲ್ಲಿ. ನಂತರ ಆತ ಅದರ ನಿರ್ವಹಣೆಯನ್ನು ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮಕ್ಕೆ (ವರ್ಲ್ಡ್ ಫುಡ್ ಪ್ರೋಗ್ರಾಂ) ಬಿಟ್ಟುಕೊಟ್ಟ. ಅಲ್ಲಿಂದೀಚೆಗೆ ಈ ಆಟ ಅಭೂತಪೂರ್ವ ಯಶಸ್ಸನ್ನು ಕಂಡಿದೆ, ಲಕ್ಷಾಂತರ ಬಡಜನರ ಅನ್ನದಾತನಾಗಿ ಬೆಳೆದಿದೆ.

ಒಂದು ಉತ್ತರಕ್ಕೆ ಹತ್ತು ಕಾಳು ಅಕ್ಕಿ ಬಹಳ ಕಡಿಮೆ ಅನ್ನಿಸಬಹುದು; ಆದರೆ ಸಾವಿರಾರು ಜನ ಈ ಆಟ ಆಡುತ್ತಿರುವಾಗ ದಿನಕ್ಕೆ ಕಡಿಮೆಯೆಂದರೂ ಒಂದು ಕೋಟಿ ಕಾಳುಗಳು ಸಂಗ್ರಹವಾಗುತ್ತವೆ - ಒಂದು ಗ್ರಾಮ್ ಅಕ್ಕಿಯಲ್ಲಿ ೫೦ ಕಾಳುಗಳಿವೆ ಎಂದುಕೊಂಡರೆ ಇನ್ನೂರು ಕೆಜಿ ಅಕ್ಕಿ!

ಈವರೆಗೆ ಈ ಆಟದ ಮೂಲಕ ಎಂಟುಸಾವಿರ ಕೋಟಿ ಅಕ್ಕಿಕಾಳುಗಳನ್ನು ಸಂಗ್ರಹಿಸಿ ವಿತರಿಸಲಾಗಿದೆ. ನೇಪಾಳ, ಕಾಂಬೋಡಿಯಾ, ಉಗಾಂಡಾ, ಬಾಂಗ್ಲಾದೇಶ, ಮ್ಯಾನ್ಮಾರ್ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಈ ಅಕ್ಕಿಯ ವಿತರಣೆ ನಡೆಯುತ್ತಿದೆ.

ಫ್ರೀರೈಸ್ ಡಾಟ್ ಕಾಮ್ ತಾಣವನ್ನು ನಡೆಸುತ್ತಿರುವ, ಹಾಗೂ ಈ ಮೂಲಕ ಸಂಗ್ರಹವಾಗುವ ಅಕ್ಕಿಯ ವಿತರಣೆಯ ಜವಾಬ್ದಾರಿ ಹೊತ್ತಿರುವ ವಿಶ್ವ ಆಹಾರ ಕಾರ್ಯಕ್ರಮದ ಬಗೆಗೆ ಹೆಚ್ಚಿನ ಮಾಹಿತಿಗಾಗಿ www.wfp.org ತಾಣಕ್ಕೆ ಭೇಟಿಕೊಡಬಹುದು.

ಸೆಪ್ಟೆಂಬರ್ ೩೦, ೨೦೧೦ರ ಸುಧಾದಲ್ಲಿ ಪ್ರಕಟವಾದ ಲೇಖನ

5 ಕಾಮೆಂಟ್‌ಗಳು:

ಶರಣು ಹಂಪಿ ಹೇಳಿದರು...

ತುಂಬ ಒಳ್ಳೆಯ ಕಾನ್ಸೆಪ್ಟ್. ಅದನ್ನ ಪರಿಚಯಿಸಿದ ತಮಗೆ ಒಂದು ಧನ್ಯವಾದಗಳು. ಬರೆವಣಿಗೆ ಚುಟುಕಾಗಿದ್ರೂ ಇಷ್ಟ ಆಗುತ್ತೆ. ಬಿಡುವಿದ್ದಾಗಲೆಲ್ಲಾ ಇಂಥ "ಚಿನ್ನ ಚಿನ್ನ" ಲೇಖನಗಳು ಬರಲಿ.

PrashanthKannadaBlog ಹೇಳಿದರು...

Thans for updating me on this. I will surely play when I find time. Thanks again

Shrinivas ಹೇಳಿದರು...

freerice.com ಒಂದು ಒಳ್ಳೆಯ ಜಾಲತಾಣ, ನಿಮ್ಮ ಬ್ಲಾಗಿನ ಮೂಲಕ ಎಲ್ಲರಿಗೂ ಹಂಚಿಕೊಂಡದ್ದಕ್ಕಾಗಿ ಧನ್ಯವಾದಗಳು. www.bhook.com ಕೂಡ ಇದೇ ರೀತಿಯ ಜಾಲತಾಣವಾಗಿದೆ.

ಶ್ರೀನಿವಾಸ
www.compuinkannada.co.cc

Rama Gopal ಹೇಳಿದರು...

congrats!
Ramagopal

Rama Gopal ಹೇಳಿದರು...

congrats
Ramagopal

badge